Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ 20,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಬಹುಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ 20,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಬಹುಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ದೇಶಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿಂದು 20,000 ಕೋಟಿ ರೂ. ವೊತ್ತದ ಬಹುಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬಹುಅಭಿವೃದ್ಧಿ ಯೋಜನೆಗಳು ತಮಿಳುನಾಡಿನಲ್ಲಿ ರೈಲು, ರಸ್ತೆ, ತೈಲ ಮತ್ತು ಅನಿಲ ಮತ್ತು ಹಡಗು ಕ್ಷೇತ್ರಗಳಂತಹ ಕ್ಷೇತ್ರಗಳನ್ನು ಒಳಗೊಂಡಿವೆ.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಹೊಸ ವರ್ಷ ಎಲ್ಲರಿಗೂ ಫಲಪ್ರದವಾಗಿರಲಿ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದರು. 2024ರಲ್ಲಿ ತಮ್ಮ ಮೊದಲ ಸಾರ್ವಜನಿಕ ಕಾರ್ಯಕ್ರಮ ತಮಿಳುನಾಡಿನಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಇಂದಿನ 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಬಹುಯೋಜನೆಗಳು ತಮಿಳುನಾಡಿನ ಪ್ರಗತಿಯನ್ನು ಬಲಪಡಿಸುತ್ತವೆ. ರಸ್ತೆ ಮಾರ್ಗಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಇಂಧನ ಮತ್ತು ಪೆಟ್ರೋಲಿಯಂ ಪೈಪ್‌ಲೈನ್‌ಗಳ ಕ್ಷೇತ್ರಗಳನ್ನು ವ್ಯಾಪಿಸಿರುವ ಯೋಜನೆಗಳಿಗಾಗಿ ಅವರು ರಾಜ್ಯದ ಜನರನ್ನು ಅಭಿನಂದಿಸಿದರು. ಈ ಯೋಜನೆಗಳಲ್ಲಿ ಹಲವು ಪ್ರಯಾಣವನ್ನು ಉತ್ತೇಜಿಸುತ್ತದೆ, ಜತೆಗೆ ರಾಜ್ಯದಲ್ಲಿ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.

ತಮಿಳುನಾಡು ಕಳೆದ 3 ಕಷ್ಟದ ವಾರಗಳನ್ನು ಎದುರಿಸಿದ್ದನ್ನು ಉಲ್ಲೇಖಿಸಿದ ಪ್ರಧಾನಿ, ಭಾರಿ ಮಳೆಯಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಂಡರು, ಗಮನಾರ್ಹ ಪ್ರಮಾಣದಲ್ಲಿ ಆಸ್ತಿ ನಷ್ಟ ಉಂಟಾಯಿತು. ಎಂದು ಪ್ರಧಾನಿ ಸಂತಾಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತಮಿಳುನಾಡು ಜನರೊಂದಿಗೆ ನಿಂತಿದೆ. “ನಾವು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದೇವೆ” ಎಂದರು.

ಇತ್ತೀಚೆಗಷ್ಟೇ ನಿಧನರಾದ ತಿರು ವಿಜಯಕಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, “ಅವರು ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ, ರಾಜಕೀಯದಲ್ಲೂ ‘ಕ್ಯಾಪ್ಟನ್’ ಆಗಿದ್ದರು. ಅವರು ತಮ್ಮ ಕೆಲಸ ಮತ್ತು ಚಲನಚಿತ್ರಗಳ ಮೂಲಕ ಜನರ ಹೃದಯವನ್ನು ಗೆದ್ದರು. ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿದರು. ದೇಶಕ್ಕೆ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ ಎಂ ಎಸ್ ಸ್ವಾಮಿನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿ, ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

ಮುಂದಿನ 25 ವರ್ಷಗಳ ಕಾಲ ಆಜಾದಿ ಕಾ ಅಮೃತ್ ಕಾಲದ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ವಿಕ್ಷಿತ್ ಭಾರತ್‌ ನಿಂದ ಆಗುವ ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ಉಲ್ಲೇಖಿಸಿದರು. ಏಕೆಂದರೆ ತಮಿಳುನಾಡು ಭಾರತದ ಸಮೃದ್ಧಿ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. “ತಮಿಳುನಾಡು ಪ್ರಾಚೀನ ತಮಿಳು ಭಾಷೆಯ ತವರು ಮತ್ತು ಇದು ಸಾಂಸ್ಕೃತಿಕ ಪರಂಪರೆಯ ನಿಧಿಯಾಗಿದೆ”. ಸಂತ ತಿರುವಳ್ಳುವರ್ ಮತ್ತು ಸುಬ್ರಮಣ್ಯ ಭಾರತಿ ಮತ್ತು ಇತರರನ್ನು ಅದ್ಭುತ ಸಾಹಿತ್ಯವನ್ನು  ಉಲ್ಲೇಖಿಸಿದ ಪ್ರಧಾನಿ, ತಮಿಳುನಾಡು ಸಿ ವಿ ರಾಮನ್ ಅವರಂತಹ ವೈಜ್ಞಾನಿಕ ಮತ್ತು ತಾಂತ್ರಿಕ ಮಿದುಳುಗಳಿಗೆ ನೆಲೆಯಾಗಿದೆ. ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲಾ ಅವರಲ್ಲಿ ಹೊಸ ಶಕ್ತಿ ತುಂಬುವ ಇತರೆ ವಿಜ್ಞಾನಿಗಳ ಹೆಸರನ್ನು ಪ್ರಧಾನಿ ಉಲ್ಲೇಖಿಸಿದರು.

ತಿರುಚಿರಾಪಳ್ಳಿಯ ಶ್ರೀಮಂತ ಪರಂಪರೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇಲ್ಲಿ ನಾವು ಪಲ್ಲವ, ಚೋಳ, ಪಾಂಡ್ಯರು ಮತ್ತು ನಾಯಕ್ ರಾಜವಂಶಗಳ ಉತ್ತಮ ಆಡಳಿತ ಮಾದರಿಗಳ ಅವಶೇಷಗಳನ್ನು ಕಾಣುತ್ತೇವೆ. ವಿದೇಶ ಪ್ರವಾಸ ಸಮಯದಲ್ಲಿ ಯಾವುದೇ ಅವಕಾಶ ಸಿಕ್ಕಾಗಲೂ ತಮಿಳು ಸಂಸ್ಕೃತಿಯನ್ನು ಉಲ್ಲೇಖಿಸುತ್ತೇನೆ. “ದೇಶದ ಅಭಿವೃದ್ಧಿ ಮತ್ತು ಪರಂಪರೆಯಲ್ಲಿ ತಮಿಳು ಸಾಂಸ್ಕೃತಿಕ ಸ್ಫೂರ್ತಿಯ ಕೊಡುಗೆಯ ನಿರಂತರ ವಿಸ್ತರಣೆಯನ್ನು ನಾನು ನಂಬುತ್ತೇನೆ”. ಹೊಸ ಸಂಸತ್ತಿನಲ್ಲಿ ಪವಿತ್ರ ಸೆಂಗೋಲ್ ಸ್ಥಾಪನೆ, ಕಾಶಿ ತಮಿಳು ಮತ್ತು ಕಾಶಿ ಸೌರಾಷ್ಟ್ರ ಸಂಗಮಂ ಪ್ರಯತ್ನಗಳು ಸೇರಿದಂತೆ ದೇಶಾದ್ಯಂತ ತಮಿಳು ಸಂಸ್ಕೃತಿಯ ಉತ್ಸಾಹವನ್ನು ಹೆಚ್ಚಿಸಿವೆ ಎಂದು ಉಲ್ಲೇಖಿಸಿದರು.

ಕಳೆದ 10 ವರ್ಷಗಳಲ್ಲಿ ರಸ್ತೆ ಮಾರ್ಗಗಳು, ರೈಲ್ವೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಬಡವರ ಮನೆಗಳು ಮತ್ತು ಆಸ್ಪತ್ರೆಗಳಂತಹ ಕ್ಷೇತ್ರಗಳಲ್ಲಿ ಭಾರತದ ಬೃಹತ್ ಹೂಡಿಕೆಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ವಿಶ್ವಕ್ಕೆ ಭರವಸೆಯ ಆಶಾಕಿರಣವಾಗಿ ಮಾರ್ಪಟ್ಟಿರುವ ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದೆ. ಜಗತ್ತಿನಾದ್ಯಂತ ಭಾರತಕ್ಕೆ ಬರುತ್ತಿರುವ ಬೃಹತ್ ಹೂಡಿಕೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಮೇಕ್ ಇನ್ ಇಂಡಿಯಾದ ಪ್ರಧಾನ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ, ಅದರ ನೇರ ಲಾಭವನ್ನು ತಮಿಳುನಾಡು ಮತ್ತು ಅದರ ಜನರು ಪಡೆಯುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಯು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರತಿಫಲಿಸುವ ಸರ್ಕಾರದ ಕಾರ್ಯವಿಧಾನವನ್ನು ಪ್ರಧಾನಿ ಪುನರುಚ್ಚರಿಸಿದರು. ಕಳೆದ ವರ್ಷ ಕೇಂದ್ರ ಸರ್ಕಾರದ 40ಕ್ಕೂ ಹೆಚ್ಚು ಸಚಿವರು ತಮಿಳುನಾಡಿಗೆ 400ಕ್ಕೂ ಹೆಚ್ಚು ಬಾರಿ ಪ್ರವಾಸ ಮಾಡಿದ್ದಾರೆ. “ತಮಿಳುನಾಡಿನ ಪ್ರಗತಿಯೊಂದಿಗೆ ಭಾರತವು ಸಹ ಪ್ರಗತಿ ಹೊಂದುತ್ತದೆ”. ಸಂಪರ್ಕವು ಅಭಿವೃದ್ಧಿಯ ಮಾಧ್ಯಮವಾಗಿದೆ, ಇದು ವ್ಯವಹಾರಗಳಿಗೆ ಉತ್ತೇಜನ ನೀಡುತ್ತದೆ, ಜನರ ಜೀವನವನ್ನು ಸುಲಭಗೊಳಿಸುತ್ತದೆ. ಇಂದಿನ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಪ್ರಸ್ತಾಪಿಸಿದರು, ಇದು ಸಾಮರ್ಥ್ಯವನ್ನು 3 ಪಟ್ಟು ಹೆಚ್ಚಿಸುತ್ತದೆ. ಪೂರ್ವ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಪ್ರಪಂಚದ ಇತರ ಭಾಗಗಳಿಗೆ ಸಂಪರ್ಕ ಬಲಪಡಿಸುತ್ತದೆ. ಹೊಸ ಟರ್ಮಿನಲ್ ಕಟ್ಟಡದ ಉದ್ಘಾಟನೆಯು ಹೂಡಿಕೆಗಳು, ವ್ಯವಹಾರಗಳು, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಎತ್ತರಿಸಿದ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಗಳಿಗೆ ವಿಮಾನ ನಿಲ್ದಾಣದ ಸಂಪರ್ಕ ಹೆಚ್ಚಿಸಿದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ತಿರುಚ್ಚಿ ವಿಮಾನ ನಿಲ್ದಾಣವು ತನ್ನ ಮೂಲಸೌಕರ್ಯದೊಂದಿಗೆ ತಮಿಳು ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

5 ಹೊಸ ರೈಲ್ವೆ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇವು ಉದ್ಯಮ ಮತ್ತು ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸಲಿವೆ. ಹೊಸ ರಸ್ತೆ ಯೋಜನೆಗಳು ಶ್ರೀರಂಗಂ, ಚಿದಂಬರಂ, ರಾಮೇಶ್ವರಂ ಮತ್ತು ವೆಲ್ಲೂರ್‌ನಂತಹ ಪ್ರಮುಖ ನಂಬಿಕೆ ಮತ್ತು ಪ್ರವಾಸೋದ್ಯಮ ಕೇಂದ್ರಗಳನ್ನು ಸಂಪರ್ಕಿಸುತ್ತವೆ.

ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಬಂದರು ನೇತೃತ್ವದ ಅಭಿವೃದ್ಧಿಗೆ ನೀಡಿರುವ ಗಮನ ಕೇಂದ್ರೀಕರಿಸಿದ ಪ್ರಧಾನಿ, ಕರಾವಳಿ ಪ್ರದೇಶಗಳು ಮತ್ತು ಮೀನುಗಾರರ ಜೀವನ ಪರಿವರ್ತಿಸುವ ಯೋಜನೆಗಳನ್ನು ಪ್ರಸ್ತಾಪಿಸಿದರು. ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ, ಬಜೆಟ್ ಹೆಚ್ಚಿಸಲಾಗಿದೆ. ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್, ಆಳ ಸಮುದ್ರ ಮೀನುಗಾರಿಕೆಗಾಗಿ ದೋಣಿ ಆಧುನೀಕರಣಕ್ಕೆ ನೆರವು ಮತ್ತು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಸಾಗರಮಾಲಾ ಯೋಜನೆ ಮೂಲಕ ದೇಶದ ಬಂದರುಗಳನ್ನು ಉತ್ತಮ ರಸ್ತೆಗಳೊಂದಿಗೆ ಸಂಪರ್ಕಿಸಲಾಗುತ್ತಿದೆ. ಕಾಮರಾಜರ್ ಬಂದರಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲಾಗಿದೆ. ಇದರಿಂದ ಬಂದರು ಸಾಮರ್ಥ್ಯ ಮತ್ತು ಹಡಗುಗಳ ಸಂಚಾರ ಸಮಯ ಗಮನಾರ್ಹವಾಗಿ ಸುಧಾರಿಸಿದೆ. ತಮಿಳುನಾಡಿನ ಆಮದು ಮತ್ತು ರಫ್ತು, ವಿಶೇಷವಾಗಿ ಆಟೋಮೊಬೈಲ್ ವಲಯ ಬಲಪಡಿಸುವ ಕಾಮರಾಜರ್ ಬಂದರಿನ ಜನರಲ್ ಕಾರ್ಗೋ ಬರ್ತ್-II ಉದ್ಘಾಟನೆ ನೆರವೇರಿದೆ. ಪರಮಾಣು ರಿಯಾಕ್ಟರ್ ಮತ್ತು ಅನಿಲ ಪೈಪ್‌ಲೈನ್‌ ಯೋಜನೆಗಳು ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿವೆ ಎಂದರು.

ತಮಿಳುನಾಡಿಗೆ ಕೇಂದ್ರ ಸರ್ಕಾರ ಮಾಡಿರುವ ದಾಖಲೆ ವೆಚ್ಚದ ಬಗ್ಗೆ ಪ್ರಧಾನಿ ಮಾಹಿತಿ ನೀಡಿದರು. 2014ರ ಹಿಂದಿನ ದಶಕದಲ್ಲಿ ರಾಜ್ಯಗಳಿಗೆ 30 ಲಕ್ಷ ಕೋಟಿ ರೂಪಾಯಿ ನೀಡಿದ್ದರೆ, ಕಳೆದ 10 ವರ್ಷಗಳಲ್ಲಿ ರಾಜ್ಯಗಳಿಗೆ 120 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ. 2014ರ ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ ತಮಿಳುನಾಡು ಕೂಡ ಈ ಅವಧಿಯಲ್ಲಿ ಎರಡೂವರೆ ಪಟ್ಟು ಹೆಚ್ಚು ಹಣ ಪಡೆದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ, ರಾಜ್ಯದಲ್ಲಿ 3 ಪಟ್ಟು ಹೆಚ್ಚು ವೆಚ್ಚ ಮಾಡಲಾಗಿದೆ. ರಾಜ್ಯದ ರೈಲ್ವೆ ವಲಯದಲ್ಲಿ ಎರಡೂವರೆ ಪಟ್ಟು ಹೆಚ್ಚು ಹಣ ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಉಚಿತ ಪಡಿತರ, ವೈದ್ಯಕೀಯ ಚಿಕಿತ್ಸೆ ಮತ್ತು ಪಕ್ಕಾ ಮನೆಗಳು, ಶೌಚಾಲಯಗಳು ಮತ್ತು ಕೊಳವೆ ನೀರಿನಂತಹ ಸೌಲಭ್ಯಗಳನ್ನು ಪಡೆಯುತ್ತಿವೆ ಎಂದರು.

ಸಬ್ಕಾ ಪ್ರಾಯಸ್ ಅಥವಾ ವಿಕ್ಷಿತ್ ಭಾರತ್‌ನ ಗುರಿಗಳನ್ನು ಸಾಧಿಸಲು ಪ್ರತಿಯೊಬ್ಬರ ಪ್ರಯತ್ನದ ಅಗತ್ಯವಿದೆ. ತಮಿಳುನಾಡಿನ ಯುವಕರು ಮತ್ತು ಜನರ ಸಾಮರ್ಥ್ಯದ ವಿಶ್ವಾಸ ವ್ಯಕ್ತಪಡಿಸಿದ ಅವರು, “ತಮಿಳುನಾಡಿನ ಯುವಕರಲ್ಲಿ ಹೊಸ ಭರವಸೆಯ ಉದಯಕ್ಕೆ ನಾನು ಸಾಕ್ಷಿಯಾಗಬಲ್ಲೆ. ಈ ಭರವಸೆಯು ವಿಕ್ಷಿತ್ ಭಾರತ್‌ನ ಶಕ್ತಿಯಾಗಲಿದೆ” ಎಂದು ಪ್ರಧಾನ ಮಂತ್ರಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್ ಎನ್ ರವಿ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ ಕೆ ಸ್ಟಾಲಿನ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಶ್ರೀ ಎಲ್ ಮುರುಗನ್ ಮತ್ತಿತರರು ಉಪಸ್ಥಿತರಿದ್ದರು.

 

ಹಿನ್ನೆಲೆ

ತಿರುಚಿರಾಪಳ್ಳಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು, ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡ ಉದ್ಘಾಟಿಸಿದರು. 1,100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 2 ಹಂತದ ಹೊಸ ಅಂತಾರಾಷ್ಟ್ರೀಯ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ 44 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಮತ್ತು ಪ್ರಯಾಣಿಕ ದಟ್ಟಣೆ ಅವಧಿಯಲ್ಲಿ ಸುಮಾರು 3,500 ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತದೆ. ಹೊಸ ಟರ್ಮಿನಲ್ ಅತ್ಯಾಧುನಿಕ ಸೌಲಭ್ಯಗಳನ್ನು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಧಾನ ಮಂತ್ರಿ ಅವರು ಬಹುರೈಲ್ವೆ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು. ಇವುಗಳಲ್ಲಿ 41.4 ಕಿಮೀ ಸೇಲಂ-ಮ್ಯಾಗ್ನೆಸೈಟ್ ಜಂಕ್ಷನ್-ಓಮಲೂರ್-ಮೆಟ್ಟೂರು ಅಣೆಕಟ್ಟು ವಿಭಾಗದಲ್ಲಿ ಜೋಡಿ ಮಾರ್ಗ ಯೋಜನೆ ಒಳಗೊಂಡಿದೆ; ಮಧುರೈ – ಟುಟಿಕೋರಿನ್‌ನಿಂದ 160 ಕಿಮೀ ಉದ್ದದ ರೈಲು ಮಾರ್ಗದ ಭಾಗವನ್ನು ಜೋಡಿ ಮಾರ್ಗ ಅಭಿವೃದ್ಧಿ ಯೋಜನೆ; ಮತ್ತು ರೈಲು ಮಾರ್ಗ ವಿದ್ಯುದೀಕರಣಕ್ಕಾಗಿ 3 ಯೋಜನೆಗಳು ತಿರುಚ್ಚಿರಾಪಳ್ಳಿ- ಮನಮದುರೈ- ವಿರುಧುನಗರ, ವಿರುಧುನಗರ – ತೆಂಕಶಿ ಜಂಕ್ಷನ್, ಸೆಂಗೊಟ್ಟೈ – ತೆಂಕಶಿ ಜಂಕ್ಷನ್ – ತಿರುನೆಲ್ವೇಲಿ- ತಿರುಚೆಂದೂರ್ ಸೇರಿವೆ. ರೈಲು ಯೋಜನೆಗಳು ಸರಕು ಮತ್ತು ಪ್ರಯಾಣಿಕರನ್ನು ಸಾಗಿಸಲು, ರೈಲು ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ, ತಮಿಳುನಾಡಿನ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತವೆ.

ಪ್ರಧಾನಿ ಅವರು 5 ರಸ್ತೆ ವಲಯದ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು. ಯೋಜನೆಗಳಲ್ಲಿ ತಿರುಚ್ಚಿ – ಎನ್ಎಚ್-81ರ ಕಲ್ಲಾಗಮ್ ವಿಭಾಗದಲ್ಲಿ 39 ಕಿಮೀ ಉದ್ದ ಚತುಷ್ಪಥ ರಸ್ತೆ ಸೇರಿವೆ. 60 ಕಿಮೀ ಉದ್ದದ 4/2-ಲೇನಿಂಗ್ ಆಫ್ ಕಲ್ಲಗಮ್ – ಎನ್ಎಚ್-81ರ ಮೀನ್ಸುರುಟ್ಟಿ ವಿಭಾಗ, ಚೆಟ್ಟಿಕುಲಂನ 29 ಕಿಮೀ ಚತುರ್ಪಥ ರಸ್ತೆ – ಎನ್ಎಚ್-785ರ ನಾಥಮ್ ವಿಭಾಗ, 80 ಕಿಮೀ ಉದ್ದದ ಕಾರೈಕುಡಿ  ಸುಸಜ್ಜಿತ ಎರಡು ಲೇನ್ -ಎನ್ಎಚ್-536ರ ರಾಮನಾಥಪುರಂ ವಿಭಾಗ ಮತ್ತು ಎನ್ಎಚ್-179ಎ ಸೇಲಂ – ತಿರುಪತ್ತೂರ್ – ವಾಣಿಯಂಬಾಡಿ ರಸ್ತೆಯ 44 ಕಿಮೀ ಉದ್ದದ 4 ಲೇನಿಂಗ್ ರಸ್ತೆ ಯೋಜನೆಗಳಾಗಿವೆ. ಈ ಪ್ರದೇಶದ ಜನರ ಸುರಕ್ಷಿತ ಮತ್ತು ವೇಗದ ಪ್ರಯಾಣವನ್ನು ಸುಗಮಗೊಳಿಸುತ್ತದೆ. ತಿರುಚ್ಚಿ, ಶ್ರೀರಂಗಂ, ಚಿದಂಬರಂ, ರಾಮೇಶ್ವರಂ, ಧನುಷ್ಕೋಡಿ, ಉತಿರಕೋಸಮಂಗೈ, ದೇವಿಪಟ್ಟಿನಂ, ಎರವಾಡಿ, ಮಧುರೈ ಮುಂತಾದ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರಗಳ ಸಂಪರ್ಕವನ್ನು ಸುಧಾರಿಸುತ್ತದೆ.

ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಪ್ರಮುಖ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಇವುಗಳಲ್ಲಿ ಎನ್ಎಚ್-332ಎ ಮುಗೈಯೂರಿನಿಂದ ಮರಕ್ಕನಂ ವರೆಗೆ 31 ಕಿಮೀ ಉದ್ದದ 4 ಪಥದ ರಸ್ತೆ ನಿರ್ಮಾಣವೂ ಸೇರಿದೆ. ರಸ್ತೆಯು ತಮಿಳುನಾಡಿನ ಪೂರ್ವ ಕರಾವಳಿಯಲ್ಲಿ ಬಂದರುಗಳನ್ನು ಸಂಪರ್ಕಿಸುತ್ತದೆ, ವಿಶ್ವ ಪರಂಪರೆಯ ತಾಣವಾದ ಮಾಮಲ್ಲಪುರಂಗೆ ರಸ್ತೆ ಸಂಪರ್ಕ ಹೆಚ್ಚಿಸುತ್ತದೆ ಮತ್ತು ಕಲ್ಪಾಕ್ಕಂ ಅಣು ವಿದ್ಯುತ್ ಸ್ಥಾವರಕ್ಕೆ ಉತ್ತಮ ಸಂಪರ್ಕ ಒದಗಿಸುತ್ತದೆ.

ಪ್ರಧಾನ ಮಂತ್ರಿ ಅವರು ಕಾಮರಾಜರ್ ಬಂದರಿನ ಜನರಲ್ ಕಾರ್ಗೋ ಬರ್ತ್-II (ಆಟೋಮೊಬೈಲ್ ರಫ್ತು, ಆಮದು ಟರ್ಮಿನಲ್-II ಮತ್ತು ಕ್ಯಾಪಿಟಲ್ ಡ್ರೆಡ್ಜಿಂಗ್ ಹಂತ-V) ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಜನರಲ್ ಕಾರ್ಗೋ ಬರ್ತ್-II ಉದ್ಘಾಟನೆಯು ದೇಶದ ವ್ಯಾಪಾರ ಬಲಪಡಿಸುವ ಒಂದು ದಿಟ್ಟ ಹೆಜ್ಜೆಯಾಗಲಿದೆ, ಇದು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು 9000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಪ್ರಮುಖ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಯೋಜನೆಗಳ ಶಂಕುಸ್ಥಾಪನೆ ಮಾಡಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರಕ್ಕೆ ಸಮರ್ಪಿತವಾದ 2 ಯೋಜನೆಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL)ನ 488 ಕಿಮೀ ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್ IP101 ಚೆಂಗಲ್‌ಪೇಟ್ ನಿಂದ IP 105 (ಸಾಯಲ್ಕುಡಿ) ಭಾಗದ ಎನ್ನೋರ್ – ತಿರುವಳ್ಳೂರು – ಬೆಂಗಳೂರು – ಪುದುಚೇರಿ – ನಾಗಪಟ್ಟಿಣಂ – ಮಧುರೈ – ಟುಟಿಕೋರಿನ್ ಪೈಪ್‌ಲೈನ್ ಸೇರಿವೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(HPCL)ನ 697 ಕಿಮೀ ಉದ್ದದ ವಿಜಯವಾಡ-ಧರ್ಮಪುರಿ ಬಹು ಉತ್ಪನ್ನ (POL) ಪೆಟ್ರೋಲಿಯಂ ಪೈಪ್‌ಲೈನ್ (VDPL).

ಇದಲ್ಲದೆ, ಶಂಕುಸ್ಥಾಪನೆಯಾದ ಯೋಜನೆಗಳು – ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್(GAIL)ನಿಂದ ಕೊಚ್ಚಿ-ಕೂಟ್ಟನಾಡ್-ಬೆಂಗಳೂರು-ಮಂಗಳೂರು ಗ್ಯಾಸ್ ಪೈಪ್‌ಲೈನ್ II (ಕೆಕೆಬಿಎಂಪಿಎಲ್ II)ರ ಕೃಷ್ಣಗಿರಿಯಿಂದ ಕೊಯಮತ್ತೂರು ಭಾಗಕ್ಕೆ 323 ಕಿಮೀ ನೈಸರ್ಗಿಕ ಅನಿಲ ಪೈಪ್‌ಲೈನ್‌ನ ಅಭಿವೃದ್ಧಿ ಮತ್ತು ಚೆನ್ನೈನ ವಲ್ಲೂರಿನಲ್ಲಿ ಉದ್ದೇಶಿತ ಗ್ರಾಸ್ ರೂಟ್ ಟರ್ಮಿನಲ್‌ಗಾಗಿ ಕಾಮನ್ ಕಾರಿಡಾರ್‌ನಲ್ಲಿ POL ಪೈಪ್‌ಲೈನ್‌ಗಳನ್ನು ಹಾಕುವುದು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದ ಈ ಯೋಜನೆಗಳು ಈ ಪ್ರದೇಶದಲ್ಲಿನ ಕೈಗಾರಿಕಾ, ದೇಶೀಯ ಮತ್ತು ವಾಣಿಜ್ಯ ಇಂಧನ ಅಗತ್ಯಗಳನ್ನು ಪೂರೈಸುವ ಒಂದು ಹೆಜ್ಜೆಯಾಗಿದೆ. ಇವುಗಳು ಈ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತವೆ ಮತ್ತು ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತವೆ.

ಪ್ರಧಾನ ಮಂತ್ರಿ ಅವರು ಕಲ್ಪಾಕ್ಕಂನ ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್(IGCAR)ನಲ್ಲಿರುವ ಡೆಮಾನ್‌ಸ್ಟ್ರೇಷನ್ ಫಾಸ್ಟ್ ರಿಯಾಕ್ಟರ್ ಫ್ಯೂಯಲ್ ರಿಪ್ರೊಸೆಸಿಂಗ್ ಪ್ಲಾಂಟ್(DFRP) ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಡಿಎಫ್‌ಆರ್‌ಪಿ 400 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಒಂದು ವಿಶಿಷ್ಟ ವಿನ್ಯಾಸ ಹೊಂದಿದೆ, ಇದು ವಿಶ್ವದಲ್ಲೇ ಈ ರೀತಿಯ ಏಕೈಕ ಮತ್ತು ವೇಗದ ರಿಯಾಕ್ಟರ್‌ಗಳಿಂದ ಬಿಡುಗಡೆಯಾದ ಕಾರ್ಬೈಡ್ ಮತ್ತು ಆಕ್ಸೈಡ್ ಇಂಧನಗಳನ್ನು ಮರುಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಸಂಪೂರ್ಣವಾಗಿ ಭಾರತೀಯ ವಿಜ್ಞಾನಿಗಳು ವಿನ್ಯಾಸಗೊಳಿಸಿದ್ದಾರೆ. ದೊಡ್ಡ ವಾಣಿಜ್ಯ-ಪ್ರಮಾಣದ ವೇಗದ ರಿಯಾಕ್ಟರ್ ಇಂಧನ ಮರುಸಂಸ್ಕರಣಾ ಘಟಕಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಇದು ನಿರ್ಣಾಯಕ ಹೆಜ್ಜೆಯನ್ನು ಸೂಚಿಸುತ್ತದೆ. ಇತರೆ ಯೋಜನೆಗಳ ಪೈಕಿ, ತಿರುಚಿರಾಪಳ್ಳಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎನ್‌ಐಟಿ)ಯ 500 ಹಾಸಿಗೆಗಳ ಬಾಲಕರ ಹಾಸ್ಟೆಲ್ ‘ಅಮೆಥಿಸ್ಟ್’ ಅನ್ನು ಪ್ರಧಾನಿ ಉದ್ಘಾಟಿಸಿದರು.

*****