Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ತಂತ್ರಜ್ಞಾನದ ಶಕ್ತಿಕೇಂದ್ರ ಇಸ್ರೇಲ್: ಪ್ರಧಾನಮಂತ್ರಿ ನರೇಂದ್ರ ಮೋದಿ

149906876372410583a_b

Israel Hayom Editor-in-Chief Boaz Bismuth with Prime Minister Narendra Modi


ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಇಸ್ರೇಲ್ ಭೇಟಿಗೂ ಮೊದಲು `ಎರಡೂ ದೇಶಗಳು ಸಹ ತಮ್ಮ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಿದ್ಧವಾಗಿವೆ,’ ಎಂದು ಹೇಳಿದ್ದರು. ಅಲ್ಲದೆ, `ತನಗೆದುರಾದ ಸಾಕಷ್ಟು ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿರುವ ಇಸ್ರೇಲ್‍, ಅದ್ಭುತವಾದ ಸಾಧನೆಗಳನ್ನು ಮಾಡಿದೆ,’ ಎಂದೂ ಅವರು ನುಡಿದಿದ್ದರು.

ದೇಶ-ವಿದೇಶಗಳಲ್ಲಿ ತಾರಾವರ್ಚಸ್ಸನ್ನು ಗಳಿಸಿಕೊಂಡಿರುವಂಥ ಮತ್ತು 120 ಕೋಟಿಗೂ ಹೆಚ್ಚು ಜನರನ್ನು ಪ್ರತಿನಿಧಿಸುತ್ತಿರುವಂಥ ಒಬ್ಬ ಪ್ರಧಾನಮಂತ್ರಿಯನ್ನು ಯಾರೇ ಆಗಲಿ, ಪ್ರತಿದಿನವೂ ಭೇಟಿ ಮಾಡುವುದು ಸಾಧ್ಯವಿಲ್ಲ. ಬಹುಶಃ ಹೀಗಾಗಿಯೇ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿ ವಿಶೇಷವೆನಿಸಬಹುದು.

ಮೋದಿಯವರು ಜುಲೈ 4ರಂದು ಇಸ್ರೇಲ್‍ಗೆ ಬಂದಿಳಿಯಲಿದ್ದು, ಇದೊಂದು ಚಾರಿತ್ರಿಕ ಭೇಟಿಯಾಗಿದೆ. ಏಕೆಂದರೆ, ಭಾರತದ ಅಧಿಕಾರಾರೂಢ ಪ್ರಧಾನಮಂತ್ರಿಯೊಬ್ಬರು ಇಸ್ರೇಲ್‍ಗೆ ಭೇಟಿ ಕೊಡುತ್ತಿರುವುದು ಇದೇ ಮೊದಲು! ವಿಸ್ತೀರ್ಣದ ದೃಷ್ಟಿಯಿಂದ ನೋಡಿದರೆ, ಎರಡೂ ದೇಶಗಳ ನಡುವೆ ತುಂಬಾ ವ್ಯತ್ಯಾಸವಿದೆ, ನಿಜ. ಆದರೆ, ಮೋದಿಯವರ ದೃಷ್ಟಿಯಲ್ಲಿ ಭಾರತ ಮತ್ತು ಇಸ್ರೇಲ್ ಹೊಂದಿರುವ ಸಂಬಂಧ ಸಮಾನವಾಗಿದೆ.

ಮೋದಿಯವರು ತುಂಬಾ ವಿಭಿನ್ನ ಬಗೆಯ ನಾಯಕ. ಭಾರತೀಯರಲ್ಲಿಯೇ ಅತ್ಯಂತ ಜನಪ್ರಿಯರಾಗಿರುವ ಇವರು, ತಮಗೇನು ಬೇಕು ಎಂಬುದನ್ನು ಹೇಳಬಲ್ಲರು ಮತ್ತು ತಮಗೆ ಬೇಕಾದ ಸುಧಾರಣೆಗಳನ್ನು ಹಠ ಹಿಡಿದು ತರಬಲ್ಲರು. ಭಾರತವು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವ ಇವರು, ತಮ್ಮ ದೇಶವನ್ನು ಜಾಗತಿಕ ಮಟ್ಟದಲ್ಲಿ ಅಗ್ರಗಣ್ಯ ರಾಷ್ಟ್ರವನ್ನಾಗಿಸಲು ತುಡಿಯುತ್ತಿದ್ದಾರೆ. ಭಾರತವು ಈ ಎರಡೂ ಗುರಿಗಳನ್ನು ಸಾಧಿಸಲು ಕ್ರಮಿಸಬೇಕಾದ ಹಾದಿಯು ಇಸ್ರೇಲನ್ನೂ ಒಳಗೊಂಡಿದೆ ಎನ್ನುವುದು ಅವರ ದೃಷ್ಟಿಯಾಗಿದೆ. ಇದು, ಎಲ್ಲ ಇಸ್ರೇಲಿಗಳ ಪಾಲಿಗೂ ಗೌರವದ ಹೆಗ್ಗುರುತಾಗಬೇಕು. ಭಾರತೀಯರು ತಮ್ಮನ್ನು ಪ್ರೀತಿಸುತ್ತಾರೆನ್ನುವುದು ಅವರಿಗೆ ಗೊತ್ತು. ಆದರೆ, ತಾವು ಯಾವ ಕಾರಣಕ್ಕೂ ಸೋಲಬಾರದು ಎನ್ನುವುದನ್ನು ಕೂಡ ಅವರು ಬಲ್ಲರು. ಇದೇ ಅವರ ಮುಂದಿರುವ ದೊಡ್ಡ ಸವಾಲು.

ಮೋದಿಯವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸುದ್ದಿ ಮಾಧ್ಯಮಗಳ ಕ್ಯಾಮರಾಗಳ ಮುಂದೆ ಸದಾ ಗಂಭೀರ ಮುಖಮುದ್ರೆಯಲ್ಲಿರುತ್ತಾರೆ. ಆದರೆ, ಅವರ ಅಧಿಕೃತ ನಿವಾಸಕ್ಕೆ ನಾನು ಕಾಲಿಟ್ಟಾಗ, ಮೋದಿಯವರು ನಗೆಯನ್ನು ಸೂಸುವ ಸ್ನೇಹಶೀಲ ವ್ಯಕ್ತಿ ಎನ್ನುವುದು ನನ್ನ ಅನುಭವಕ್ಕೆ ಬಂತು. ಬಡತನದ ಕುಟುಂಬದಲ್ಲಿ ಜನಿಸಿದ ತಾವು ಆ ಹಂತದಿಂದ ಹೊರಬಂದು ಬದುಕಿನಲ್ಲಿ ಸಾಧಿಸಿರುವ ಯಶಸ್ಸಿನ ಬಗ್ಗೆ ಅವರಿಗೆ ಅತೀವವಾದ ಹೆಮ್ಮೆಯ ಭಾವನೆ ಇದೆ.

ನಮ್ಮ ಮಾತುಕತೆಯುದ್ದಕ್ಕೂ ಅಪಾರವಾದ ವಿಶ್ವಾಸವನ್ನು ಹೊರಸೂಸುತ್ತಿದ್ದ ಅವರು `ಸರ್ವಜನ ಹಿತಾಯ, ಸರ್ವಜನ ಸುಖಾಯ; ಎಲ್ಲರೊಂದಿಗೆ, ಎಲ್ಲರ ವಿಕಾಸ’ ಎನ್ನುವ ಮಾತನ್ನು ತಮ್ಮ ಮಂತ್ರದಂತೆ ನನ್ನೊಂದಿಗೆ ಹಂಚಿಕೊಂಡರು.

ಸಂದರ್ಶನದುದ್ದಕ್ಕೂ ಅವರು, ಭಾರತ ಮತ್ತು ಇಸ್ರೇಲ್‍ನ ಜನತೆಯ ನಡುವೆ ಇರುವ ಗಾಢಸಂಬಂಧವನ್ನು ಬೊಟ್ಟು ಮಾಡಿ ತೋರಿಸಲು, ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿದ್ದರು. ಎರಡೂ ದೇಶಗಳು ಆತ್ಮಸಂಗಾತಿಗಳು ಎನ್ನುವುದು ಅವರ ನಂಬಿಕೆ. ಇವೆರಡೂ ದೇಶಗಳು ಉದ್ಯಮಶೀಲತೆ ಮತ್ತು ಅನ್ವೇಷಣೆಯ ಚೈತನ್ಯವನ್ನು ಸಮನಾಗಿ ಹೊಂದಿದ್ದು, ಇವೆರಡೂ ಸೇರಿಕೊಂಡು ದ್ವಿಪಕ್ಷೀಯ ಸಹಭಾಗಿತ್ವಕ್ಕೆ ತಮ್ಮದೇ ಆದ ಆಯಾಮವನ್ನು ನೀಡಿವೆ ಎನ್ನುವುದು ಅವರ ನಿಲುವು. ಇಸ್ರೇಲಿನಲ್ಲಿ ನೆಲೆಸಿರುವ ಭಾರತೀಯರ ಸಲುವಾಗಿ ಟೆಲ್‍ ಅವೀವ್ ನಲ್ಲಿ ಜುಲೈ 5ರಂದು ಸ್ವತಃ ತಮ್ಮ ನೇತೃತ್ವದಲ್ಲಿ ಒಂದು ಬೃಹತ್ ಪ್ರದರ್ಶನವನ್ನು (rally) ಏರ್ಪಡಿಸುವ ಮೂಲಕ ಮೋದಿಯವರು ಮತ್ತು ಭಾರತೀಯರು ಈ ಭಾವನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಪ್ರದರ್ಶನವನ್ನು ಅವರು ತಮ್ಮ ಇಸ್ರೇಲ್ ಪ್ರವಾಸದ ಬಹುಮುಖ್ಯವಾದ ಒಂದು ಅಂಗವೆಂದು ಪರಿಗಣಿಸಿದ್ದು, ಇದು ಈ ದೇಶದಲ್ಲಿ ನೆಲೆಸಿರುವ ಭಾರತೀಯ ಸಮುದಾಯವನ್ನು ತಾವು ಗೌರವಿಸುವ ರೀತಿ ಎಂದುಕೊಂಡಿದ್ದಾರೆ. ಅವರೊಂದಿಗಿನ ಪ್ರಶ್ನೋತ್ತರ ಇಲ್ಲಿದೆ:

 

ಪ್ರಶ್ನೆ: ಇಸ್ರೇಲಿನ ಬಗ್ಗೆ ನಿಮಗೇನು ಗೊತ್ತು? ನೀವು ಎಂದಾದರೂ ಇಸ್ರೇಲಿಗೆ ಭೇಟಿ ನೀಡಿದ್ದೀರ?

-ನಾನು ಗುಜರಾತಿನ ಮುಖ್ಯಮಂತ್ರಿಯಾಗಿ, 2006ರಲ್ಲಿ ಇಸ್ರೇಲಿನಲ್ಲಿ ನಡೆದ ಕೃಷಿ ತಂತ್ರಜ್ಞಾನ ಪ್ರದರ್ಶನಕ್ಕೆ ಬಂದಿದ್ದೆ. ಹೀಗಾಗಿ ನನಗೆ ಇಸ್ರೇಲ್ ಬಗ್ಗೆ ಅರಿವಿದೆ. ಅದಾದ ಒಂದು ದಶಕದ ಬಳಿಕ ಮತ್ತೆ ಇಸ್ರೇಲಿಗೆ ಭೇಟಿ ಕೊಡುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಇಷ್ಟು ವರ್ಷಗಳಲ್ಲಿ ಇಸ್ರೇಲ್ ಸಾಧಿಸಿರುವ ಅಭಿವೃದ್ಧಿ ಮತ್ತು ಔನ್ನತ್ಯವನ್ನು ನೋಡಲು ನಾನು ಕಾತರದಿಂದಿದ್ದೇನೆ.

ಇಸ್ರೇಲಿನ ಬಗ್ಗೆ ನಮ್ಮ ದೇಶದ ಅನೇಕ ಸಹನಾಗರಿಕರು ಹೊಂದಿರುವ ಭಾವನೆಯನ್ನು ನಾನಿಲ್ಲಿ ಹಂಚಿಕೊಳ್ಳುತ್ತೇನೆ. ಭಾರತೀಯರು ಇಸ್ರೇಲ್ ಎಂದರೆ `ತಂತ್ರಜ್ಞಾನದ ಶಕ್ತಿಕೇಂದ್ರ’ ಎಂದು ಭಾವಿಸಿದ್ದಾರೆ. ಜೊತೆಗೆ, ಇಸ್ರೇಲ್ ಎಂದರೆ ತನಗೆದುರಾದ ಅನೇಕ ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿದ ದೇಶ’ ಎನ್ನುವ ಭಾವನೆಯೂ ಅವರಿಗಿದೆ. ಮಹತ್ವದ ಅನೇಕ ಸಂಶೋಧನೆಗಳೆಲ್ಲ ಇಸ್ರೇಲಿನ ವಿಶ್ವವಿದ್ಯಾಲಯಗಳು ಮತ್ತು ಪ್ರಯೋಗಾಲಯಗಳಲ್ಲೇ ಸಂಭವಿಸಿದ್ದು, ಅವು ಮನುಕುಲಕ್ಕೆ ಉಪಕರಿಸಿವೆ. ಯುಎಸ್ ಬಿ ಫ್ಲ್ಯಾಶ್ ಡ್ರೈವ್‍ನಿಂದ ಹಿಡಿದು ಚೆರ್ರಿ ಟೊಮೆಟೊವರೆಗೆ ಇದಕ್ಕೆ ಅನೇಕ ಉದಾಹರಣೆಗಳನ್ನು ನೋಡಬಹುದು. ನೀರಿನ ಕೊರತೆಯಿಂದ ಬಳಲುತ್ತಿದ್ದ ನೀವೀಗ ನೀರಿನ ಸಮೃದ್ಧಿಯನ್ನು ಹೊಂದಿರುವ ದೇಶವಾಗಿದ್ದೀರಿ; ನಿಮ್ಮ ಮರುಭೂಮಿಗಳಲ್ಲಿ ಹಸಿರು ನಳನಳಿಸುವಂತೆ ಮಾಡಿದ್ದೀರಿ. ಇವೆಲ್ಲವೂ ನಿಜಕ್ಕೂ ವಿಸ್ಮಯವನ್ನು ಉಂಟುಮಾಡುವ ಸಾಧನೆಗಳೇ. ಇವೆಲ್ಲವೂ ನನ್ನ ಮನಸ್ಸಿನ ಮೇಲೆ ಅಚ್ಚಳಿಯದ ಮುದ್ರೆಯನ್ನೊತ್ತಿವೆ.

 

ಪ್ರಶ್ನೆ: ನೀವು, ಇಸ್ರೇಲಿಗೆ ಈ ಐತಿಹಾಸಿಕ ಭೇಟಿಯನ್ನು ಕೈಗೊಳ್ಳಬೇಕೆನ್ನುವ ನಿರ್ಧಾರವನ್ನೇಕೆ ಮಾಡಿದಿರಿ?

-ನಮ್ಮಿಬ್ಬರ ನಡುವಿನ ದ್ವಿಪಕ್ಷೀಯ ಸಂಬಂಧ ಯಾವಾಗಲೂ ಚೆನ್ನಾಗಿಯೇ ಇದೆ. ನಿಜ ಹೇಳಬೇಕೆಂದರೆ, ವರುಷಗಳು ಉರುಳಿದಂತೆ ಈ ಬಾಂಧವ್ಯ ಇನ್ನೂ ಹಿಗ್ಗುತ್ತಲೇ ಇದ್ದು, ಅನೇಕ ಕ್ಷೇತ್ರಗಳಿಗೆ ಚಾಚಿಕೊಂಡಿದೆ. ಇದು ಇತ್ತೀಚೆಗೆ ನಡೆಯುತ್ತಿರುವ ಉನ್ನತ ಮಟ್ಟದ ದ್ವಿಪಕ್ಷೀಯ ಭೇಟಿಗಳಲ್ಲಿ ಪ್ರತಿಫಲಿಸಲು ಆರಂಭಿಸಿದೆ. ಕಳೆದ ಮೂರು ವರ್ಷಗಳಲ್ಲಿ ನಮ್ಮ ಎರಡೂ ದೇಶಗಳ ನಡುವೆ ವಿಚಾರ ವಿನಿಮಯ ಹೆಚ್ಚಾಗಿರುವುದನ್ನು ನೀವು ಗಮನಿಸಿರಬಹುದು. ನಮ್ಮ ರಾಷ್ಟ್ರಪತಿಗಳು 2015ರಲ್ಲಿ ಮೊದಲ ಬಾರಿಗೆ ಇಸ್ರೇಲಿಗೆ ಭೇಟಿ ನೀಡಿದರು. ಅದಕ್ಕೂ ಮೊದಲು ಭಾರತದ ಯಾವುದೇ ರಾಷ್ಟ್ರಪತಿಯಾಗಲಿ, ಪ್ರಧಾನಮಂತ್ರಿಯಾಗಲಿ ನಿಮ್ಮಲ್ಲಿಗೆ ಭೇಟಿ ಕೊಟ್ಟಿರಲಿಲ್ಲ. ಹಾಗೆಯೇ, ನಿಮ್ಮ ದೇಶದ ಅಧ್ಯಕ್ಷರಾದ ರೂವೆನ್ ರಿವ್ಲಿನ್ 2016ರಲ್ಲಿ ಭಾರತಕ್ಕೆ ಬಂದಿದ್ದರು. ಅವರು, ನಮ್ಮಲ್ಲಿಗೆ ಭೇಟಿ ಕೊಟ್ಟ ನಿಮ್ಮ ಎರಡನೇ ಅಧ್ಯಕ್ಷರಷ್ಟೆ.

ಮುಂಬರಲಿರುವ ನನ್ನ ಇಸ್ರೇಲ್ ಭೇಟಿಯು ಎರಡೂ ಸಮಾಜಗಳ ನಡುವೆ ಇರುವ ಗಾಢವೂ ಶತಶತಮಾನಗಳಷ್ಟು ಪುರಾತನವೂ ಆದ ಸಂಬಂಧವನ್ನು ನಮಗೆ ನೆನಪಿಸಲಿದೆ. ಇದು ನಮ್ಮ ದ್ವಿಪಕ್ಷೀಯ ಬಾಂಧವ್ಯದ ಎಲ್ಲ ಸ್ತರಗಳಲ್ಲೂ ಪ್ರತಿಫಲಿಸಬೇಕು ಮತ್ತು ನಿಯಮಿತವಾಗಿ ಉನ್ನತ ಮಟ್ಟದ ಸಂಪರ್ಕವಿರಬೇಕು. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಈ ವರ್ಷವೇ 25 ವಸಂತಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ, ನಮ್ಮ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಇದು ಸದವಕಾಶವಾಗಿದೆ.

 

ಪ್ರಶ್ನೆ: ಹಾಗಾದರೆ, ನಿಮ್ಮ ಈ ನಿರ್ಧಾರವು ಭಾರತವು ವಿಶ್ವಸಂಸ್ಥೆಯಲ್ಲಿ ಇನ್ನೂ ಹೆಚ್ಚಿನ ಇಸ್ರೇಲ್ ಪರ ನಿಲುವು ತಾಳಲಿರುವ ಸೂಚನೆಯೇ?

– ವಿಶ್ವಸಂಸ್ಥೆಯಲ್ಲಿನ ನಮ್ಮ ನಿಲುವು ಆಯಾಯ ವಿಷಯವನ್ನು ಆಧರಿಸಿರಲಿದ್ದು, ಅದಕ್ಕೆ ನಾವು ಪ್ರತಿಪಾದಿಸಿಕೊಂಡು ಬಂದಿರುವ ಮೌಲ್ಯಗಳು ಮತ್ತು ತತ್ವಗಳು ಬುನಾದಿಯಾಗಿರಲಿವೆ. ಇಸ್ರೇಲ್ ಸೇರಿದಂತೆ ನಾವು ನಮ್ಮ ಎಲ್ಲ ಮಿತ್ರರಾಷ್ಟ್ರಗಳೊಂದಿಗೂ ಸಂಬಂಧ ಹೊಂದಿರಲಿದ್ದೇವೆ. ಈ ಮೂಲಕ ವಿಶ್ವಸಂಸ್ಥೆಯಲ್ಲೂ ಇನ್ನಿತರ ಮಹತ್ವದ ವೇದಿಕೆಗಳಲ್ಲೂ ಅತ್ಯುತ್ತಮ ಫಲಿತಾಂಶ ಹೊರಬರಬೇಕೆನ್ನುವುದು ನಮ್ಮ ಆಸೆ. ಇದು ನಮ್ಮ ಸಾಮಾನ್ಯ ಆದ್ಯತೆಗಳನ್ನೂ ನಾವು ಹೊಂದಿರುವ ಕಳಕಳಿಗಳನ್ನೂ ಪ್ರತಿಫಲಿಸಬೇಕು. ವಿಶ್ವಸಂಸ್ಥೆಯಲ್ಲಿ ಯಾವೊಂದು ದೇಶವನ್ನೂ ಏಕಾಂಗಿಯನ್ನಾಗಿಸುವುದನ್ನು ಭಾರತ ಒಪ್ಪುವುದಿಲ್ಲ.

 

ಪ್ರಶ್ನೆ: ಭಾರತವು ಈಗಲೂ ಹಿಂದಿನಂತೆಯೇ ಪಾಶ್ಚಾತ್ಯ ದೇಶಗಳೊಂದಿಗಾಗಲಿ, ಪೌರ್ವಾತ್ಯ ದೇಶಗಳೊಂದಿಗಾಗಲಿ ಸೇರದ ಅಲಿಪ್ತ ರಾಷ್ಟ್ರವಾಗಿಯೇ ಇದೆಯೇನು?

-ನಾವು `ಇಡೀ ಜಗತ್ತೇ ಒಂದು ಕುಟುಂಬ’ (ವಸುಧೈವ ಕುಟುಂಬಕಂ) ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ನಾವು ಪೂರ್ವ ಮತ್ತು ಪಶ್ಚಿಮ ಎರಡರೊಂದಿಗೂ ರಚನಾತ್ಮಕ ಸಂಬಂಧ ಹೊಂದಲು ಬಯಸುತ್ತೇವೆ.

 

ಪ್ರಶ್ನೆ: ಇಸ್ರೇಲ್ ಮತ್ತು ಭಾರತ ಎರಡೂ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುತ್ತಿವೆಯೇ?

-ಭಯೋತ್ಪಾದನೆಯು ಒಂದು ಜಾಗತಿಕ ಪಿಡುಗಾಗಿದೆ. ಭಾರತವಾಗಲಿ, ಇಸ್ರೇಲ್ ಆಗಲಿ ಇದರಿಂದ ಹೊರತಾಗಿಲ್ಲ. ಹೀಗಾಗಿ, ಮುಗ್ಧ ಜನರ ಮೇಲೆ ಹಿಂಸೆಯನ್ನು ಪ್ರಯೋಗಿಸುವ ಶಕ್ತಿಗಳ ಕೈ ಮೇಲಾಗಲು ಬಿಡಬಾರದು ಎನ್ನುವುದಕ್ಕೆ ಭಾರತ ಮತ್ತು ಇಸ್ರೇಲ್‍ನ ಸಂಪೂರ್ಣ ಸಹಮತವಿದೆ. ಗಡಿಯಾಚೆಗಿನ ಭಯೋತ್ಪಾದನೆಯು ನಮ್ಮೆದುರು ಇರುವ ಬಹುದೊಡ್ಡ ಸವಾಲಾಗಿದೆ. ನಮ್ಮ ಗಡಿಯಾಚೆ ಇರುವ ವಿಚ್ಛಿದ್ರಕಾರಿ ಶಕ್ತಿಗಳು ದೇಶದ ಐಕ್ಯತೆಯನ್ನು ಭಗ್ನಗೊಳಿಸಲು ಹವಣಿಸುತ್ತಿವೆ. ಈ ಶಕ್ತಿಗಳು ನಮ್ಮ ಯುವಜನರನ್ನು ದಾರಿ ತಪ್ಪಿಸಲು ಧರ್ಮವನ್ನು ಹತಾರವನ್ನಾಗಿ ಬಳಸಿಕೊಳ್ಳುತ್ತಿವೆ. ಭಯೋತ್ಪಾದನೆಯನ್ನು ಯಾವುದೇ ಒಂದು ನಿರ್ದಿಷ್ಟ ಧರ್ಮದೊಂದಿಗೆ ತಳುಕು ಹಾಕಬಾರದು. ಒಟ್ಟಿನಲ್ಲಿ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಇಸ್ರೇಲ್ ಇನ್ನೂ ಹೆಚ್ಚು ನಿಕಟವಾಗಿ ಕೆಲಸ ಮಾಡಬಹುದಲ್ಲದೆ, ಪರಸ್ಪರರ ಪ್ರಯತ್ನಗಳನ್ನು ಮೆಚ್ಚಿಕೊಂಡು ಮುಂದಡಿ ಇಡಬಹುದು.

 

ಪ್ರಶ್ನೆ: ಅಂದರೆ, ಇದು ಭಾರತ ಮತ್ತು ಇಸ್ರೇಲ್ ಸಂಬಂಧದ ಮರುಸಂಯೋಜನೆಯೋ ಅಥವಾ ಉನ್ನತೀಕರಣವೋ?

-ನನ್ನ ಭೇಟಿಗೆ ತನ್ನದೇ ಆದ ಪ್ರಾಮುಖ್ಯವಿದೆ. ಏಕೆಂದರೆ, ಭಾರತದ ಪ್ರಧಾನಮಂತ್ರಿಯೊಬ್ಬರು ಇದೇ ಮೊದಲ ಬಾರಿಗೆ ಇಸ್ರೇಲಿಗೆ ಭೇಟಿ ಕೊಡುತ್ತಿದ್ದಾರೆ. ನನ್ನ ಈ ಭೇಟಿಯು ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸಲಿದೆ ಮತ್ತು ಸಹಕಾರದ ಹೊಸ ಸಾಧ್ಯತೆಗಳನ್ನು ತೆರೆಯಲಿದೆ ಎನ್ನುವ ವಿಶ್ವಾಸ ನನಗಿದೆ.

 

ಪ್ರಶ್ನೆ: ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲಿಗೆ ಭೇಟಿ ನೀಡಿದ್ದಾಗ ಜೆರುಸಲೇಂ ಮತ್ತು ವೆಸ್ಟರ್ನ್ ವಾಲ್(ಪಶ್ಚಿಮ ಗೋಡೆ)ಗೆ ಕೂಡ ಹೋಗಿದ್ದರು. ನೀವೂ ಹಾಗೆಯೇ ಮಾಡುವಿರಾ?

-ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ನನ್ನ ಭೇಟಿಯ ಪ್ರಧಾನ ಗುರಿ. ಈ ಸಮಯದಲ್ಲಿ ನಾನು ಖಂಡಿತವಾಗಿಯೂ ಜೆರುಸಲೇಂಗೆ ಕೂಡ ಹೋಗಿಬರಲಿದ್ದೇನೆ. ತಂತ್ರಜ್ಞಾನ, ಅನ್ವೇಷಣೆ, ಕೃಷಿ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆ ಸೇರಿದಂತೆ ಎಲ್ಲ ರಂಗಗಳಲ್ಲೂ ದ್ವಿಪಕ್ಷೀಯ ಬಾಂಧವ್ಯದ ಬಲವರ್ಧನೆ ಆಗಬೇಕೆಂಬ ನಿಟ್ಟಿನಲ್ಲಿ ನಾವು ಸ್ಪಷ್ಟವಾಗಿ ಗಮನ ನೆಟ್ಟಿದ್ದೇವೆ.

ಪ್ರಶ್ನೆ: ಜೆರುಸಲೇಂನ ಸಾರ್ವಭೌಮತೆಯ ಬಗ್ಗೆ ಭಾರತದ ನಿಲುವೇನು? ಭಾರತವು ತನ್ನ ದೂತಾವಾಸವನ್ನು ಜೆರುಸಲೇಂಗೆ ಸ್ಥಳಾಂತರಿಸಲಿದೆಯೇ?

-ಈಗಿನ ಇಸ್ರೇಲ್ ಮತ್ತು ಭವಿಷ್ಯದ ಪ್ಯಾಲೆಸ್ತೀನ್ ಎರಡೂ ಶಾಂತಿಯುತವಾಗಿ ಸಹಅಸ್ತಿತ್ವವನ್ನು ಹೊಂದಿರುವಂಥ ದ್ವಿರಾಷ್ಟ್ರ ವ್ಯವಸ್ಥೆಯೇ ಇದಕ್ಕೆ ಪರಿಹಾರ ಎನ್ನುವುದು ನಮ್ಮ ನಂಬಿಕೆಯಾಗಿದೆ. ಈ ಸಂಬಂಧದ ಅಂತಿಮ ಸ್ಥಾನಮಾನ ಕುರಿತ ಒಪ್ಪಂದವು ಸಂತ್ರಸ್ತರೆಲ್ಲರ ಬೇಡಿಕೆಗಳು ಮತ್ತು ಭಾವನೆಗಳನ್ನು ಗೌರವಿಸಬೇಕು. ಈ ಸಂತ್ರಸ್ತರ ಬಳಿಯೇ ಈ ಸಮಸ್ಯೆಗೆ ಪರಿಹಾರವಿದೆ. ಜೆರುಸಲೇಂ ಬಿಕ್ಕಟ್ಟು ಸೇರಿದಂತೆ ಈಗಿರುವ ಎಲ್ಲ ಸಮಸ್ಯೆಗಳಿಗೂ ಸಾಧುವಾದ ೊಂದು ಪರಿಹಾರವನ್ನು ಕಂಡುಕೊಳ್ಳಲು ಮಾಡುವ ಎಲ್ಲ ಪ್ರಯತ್ನಗಳನ್ನೂ ಭಾರತವು ಬೆಂಬಲಿಸಿದೆ. ನೀವು ಕೇಳಿದ ಇನ್ನೊಂದು ಪ್ರಶ್ನೆಯು ಟೆಲ್ ಅವೀವ್‍ನಲ್ಲಿರುವ ನಮ್ಮ ದೂತಾವಾಸಕ್ಕೆ ಸಂಬಂಧಿಸಿದ್ದು ಎನಿಸುತ್ತದೆ. ಜೆರುಸಲೇಂ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ಒಂದು ಒಪ್ಪಂದಕ್ಕೆ ಬಂದಮೇಲೆ ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ.

 

ಪ್ರಶ್ನೆ: ಬಡತನದಲ್ಲಿ ಬೆಳೆದು ಬಂದ ನೀವೀಗ ಬಹಳ ಕಷ್ಟಪಟ್ಟು ಈ ದೇಶದ ಚುಕ್ಕಾಣಿ ಹಿಡಿದಿದ್ದೀರಿ. ಇದರ ಹಿಂದೆ ನಿಮ್ಮ ಶ್ರಮವಿದೆ. ಯಾವ ದೃಷ್ಟಿಯಿಂದ ನೋಡಿದರೂ ಇದು ಬಹಳ ಹೃದಯಸ್ಪರ್ಶಿಯಾಗಿದೆ. ಆದರೆ, ಇಂಥ ಹಿನ್ನೆಲೆಯನ್ನು ಹೊಂದಿದ್ದರೂ ನೀವು ಬಂಡವಾಳಶಾಹಿಯ ಕಟ್ಟಾ ಬೆಂಬಲಿಗರಾಗಿದ್ದೀರಿ. ಜತೆಗೆ, ದೇಶದ ಆರ್ಥಿಕ ವ್ಯವಸ್ಥೆಯನ್ನು ಇನ್ನಷ್ಟು ಉದಾರೀಕರಣಗೊಳಿಸಲು ಪಣ ತೊಟ್ಟಿದ್ದೀರಿ. ಹಾಗಾದರೆ, ನಿಮ್ಮ ಈ ದೃಷ್ಟಿಕೋನವನ್ನು ರೂಪಿಸಿದ್ದು ಯಾವುದು ಎಂಬುದನ್ನು ವಿವರಿಸುವಿರಾ?

-ನನಗೆ ಯಾವುದೇ `ಇಸಂ’ಗಳಲ್ಲಿ ನಂಬಿಕೆ ಇಲ್ಲ. ನಾನು ಮಾತ್ರವಲ್ಲ, ನನ್ನ ಸರಕಾರ ಕೂಡ `ಎಲ್ಲರೊಂದಿಗೆ, ಎಲ್ಲರ ವಿಕಾಸ’ ಎನ್ನುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದೆ. ನಮ್ಮ ಯುವಜನರು ಕೇವಲ ಉದ್ಯೋಗಾಕಾಂಕ್ಷಿಗಳಾಗಿ ಮಾತ್ರವೇ ಇರಬಾರದು, ಬದಲಿಗೆ ಅವರೆಲ್ಲರೂ ಉದ್ಯೋಗದಾತರಾಗಬೇಕು ಎನ್ನುವುದು ನಮ್ಮ ಬಯಕೆ. ನಮ್ಮ ಯುವಜನರಲ್ಲಿರುವ ಉದ್ಯಮಶೀಲತೆ ಮತ್ತು ಅನ್ವೇಷಕ ಬುದ್ಧಿಯನ್ನು ಸದುಪಯೋಗಪಡಿಸಿಕೊಳ್ಳಲು ಅಗತ್ಯವಿರುವ ಕ್ರಮಗಳನ್ನೆಲ್ಲ ನಾವು ಅಳವಡಿಸಿಕೊಳ್ಳುತ್ತೇವೆ. ಯಾವುದೇ ಕೆಲಸವಾಗಲಿ, ಅದು ಅಂತಿಮವಾಗಿ ನಮ್ಮ ಜನರಿಗೆ ಲಾಭವನ್ನು ಮಾಡುವಂತಿದ್ದರೆ ಮಾತ್ರ ನಾನು ಅದನ್ನು ಬೆಂಬಲಿಸುತ್ತೇನೆ ಅಥವಾ ಅದರ ಪರ ವಕಾಲತ್ತು ವಹಿಸುತ್ತೇನೆ. ಯಾವಾಗ ನಾವು ಈ ಅಂಶವನ್ನು ಮೊದಲನೆಯದಾಗಿ ಪರಿಗಣಿಸುತ್ತೇವೋ ಆಗ ಫಲಿತಾಂಶ ಕೂಡ ಚೆನ್ನಾಗಿಯೇ ಇರುತ್ತದೆ. ಗುಜರಾತಿನಲ್ಲಿ ನಾನು 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ಇದನ್ನೆಲ್ಲ ಕಣ್ಣಾರೆ ಕಂಡಿದ್ದೇನೆ. ಅದನ್ನೇ ನಾನೀಗ ದೇಶವ್ಯಾಪಿ ಕಾಣಬಯಸುತ್ತಿದ್ದೇನೆ.

 

ಪ್ರಶ್ನೆ: ಸರಿಯಾದ ನೈರ್ಮಲ್ಯ ವ್ಯವಸ್ಥೆಯಿಲ್ಲದ ದೂರದ ಗ್ರಾಮೀಣ ಭಾಗಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ನೀವು ಭಾರತೀಯ ಸಮಾಜವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೀರಿ. ಈ ವಿಷಯದಲ್ಲಿ ಇಸ್ರೇಲ್ ಏನಾದರೂ ಒಂದು ಪಾತ್ರವನ್ನು ನಿರ್ವಹಿಸಬಹುದೇ?

-ಖಂಡಿತವಾಗಿಯೂ ಇಸ್ರೇಲ್ ಈ ವಿಷಯದಲ್ಲಿ ಜವಾಬ್ಸಾರಿಯನ್ನು ನಿರ್ವಹಿಸಬಹುದು. ಪರಿವರ್ತನೆಯ ಈ ಪ್ರಕ್ರಿಯೆಯಲ್ಲಿ ಅದು ನಮಗೆ ತಂತ್ರಜ್ಞಾನದ ನೆರವನ್ನು ನೀಡಬಹುದು. ನಮ್ಮ ಮಹತ್ವಾಕಾಂಕ್ಷಿ ಯೋಜನೆಗಳಾದ `ಗಂಗಾ ಶುದ್ದೀಕರಣ’ ಮತ್ತು ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ನಿಮ್ಮ ದೇಶದ ತಂತ್ರಜ್ಞಾನ ಸಾಟಿಯಾಗಿದೆ. ಇಸ್ರೇಲಿ ತಂತ್ರಜ್ಞಾನ ಕೋವಿದರು ನಿಮ್ಮಲ್ಲಿನ ತಂತ್ರಜ್ಞಾನವನ್ನು ಭಾರತದ ಗ್ರಾಮೀಣ ಜನತೆಯ ಅಗತ್ಯಕ್ಕೆ ತಕ್ಕಂತೆ ಮರುವಿನ್ಯಾಸಗೊಳಿಸುವುದಾದರೆ ಅದರಿಂದ ನಮ್ಮ ಕೋಟ್ಯಂತರ ಜನರ ಬದುಕಿನ ಗುಣಮಟ್ಟ ಸುಧಾರಿಸುತ್ತದೆ. ಗ್ರಾಮೀಣ ಜನರಲ್ಲಿರುವ ಮಾರುಕಟ್ಟೆ ಪ್ರವೃತ್ತಿಗಳನ್ನು ಅರ್ಥ ಮಾಡಿಕೊಳ್ಳುವುದು ಇದಕ್ಕೆ ಬಹಳ ಮುಖ್ಯ.

ಪ್ರಶ್ನೆ: ವ್ಯಾಪಾರ ವಹಿವಾಟು, ಕೃಷಿ ಮತ್ತು ಇತರ ವಿಷಯಗಳಿಗೆ ಬಂದರೆ ಭಾರತೀಯರಿಗೂ ಇಸ್ರೇಲಿಗಳಿಗೂ ಇರುವ ವ್ಯತ್ಯಾಸವೇನು?

-ಸಮಾಜದ ದೃಷ್ಟಿಯಿಂದ ಹೇಳುವುದಾದರೆ, ಭಾರತ ಮತ್ತು ಇಸ್ರೇಲ್ ಎರಡೂ ಉದ್ಯಮಶೀಲ ಮನಃಸ್ಥಿತಿಯಿಂದಲೇ ಮುಂದಕ್ಕೆ ಸಾಗುತ್ತಿವೆ. ಎರಡೂ ದೇಶಗಳಲ್ಲಿರುವ ವಾಣಿಜ್ಯ ಸಂಸ್ಕೃತಿ ಕೂಡ ಅನನ್ಯವಾಗಿದ್ದು, ತಮ್ಮತಮ್ಮ ಪರಿಸ್ಥಿತಿಗೆ ಅನುಗುಣವಾಗಿ ಬೆಳೆದು ಬಂದಿವೆ. ವ್ಯಾಪಾರ-ವಹಿವಾಟಿನ ಬಗ್ಗೆ ಇರುವ ದೃಷ್ಟಿಕೋನದಲ್ಲಿ ಎರಡೂ ದೇಶಗಳಿಗೆ ವ್ಯತ್ಯಾಸವಿರಬಹುದು, ನಿಜ. ಾದರೆ, ಎರಡೂ ದೇಶಗಳಲ್ಲಿರುವ ವೈಜ್ಞಾನಿಕ ಮನೋಭಾವ ಒಂದೇ ತರಹ ಇದೆ ಎಂದು ನನಗೆ ಗೊತ್ತಿರುವ ಭಾರತೀಯ ಮತ್ತು ಇಸ್ರೇಲಿ ಉದ್ಯಮಿಗಳು ಹೇಳಿದ್ದಾರೆ.

ಪ್ರಶ್ನೆ: ಭಾರತ ಮತ್ತು ಇಸ್ರೇಲ್ ನಡುವೆ ಸಂಶೋಧನೆ/ಅನ್ವೇಷಣೆಗೆ ಸಂಬಂಧಿಸಿದಂತೆ ಯಾವ ರೀತಿಯ ಸಂಬಂಧವಿದೆ ಎನ್ನುವುದನ್ನು ಒಬ್ಬ ಸಾಮಾನ್ಯ ಮನುಷ್ಯನಿಗೆ ನಾವು ಹೇಗೆ ಹೇಳಬಹುದು?

-ನಾವು ಮಾಡಿಕೊಳ್ಳುವ ಒಡಂಬಡಿಕೆಗಳು ಜನಸಾಮಾನ್ಯರ ಬದುಕನ್ನು ನೇರವಾಗಿ ಸ್ಪರ್ಶಿಸುತ್ತವೆ. ಹೀಗಾಗಿ, ಒಬ್ಬ ಸಾಮಾನ್ಯ ಮನುಷ್ಯನಿಗೆ ಎರಡೂ ದೇಶಗಳು ಈ ರಂಗದಲ್ಲಿ ಹೊಂದಿರುವ ಸಂಬಂಧ ಎಂಥದೆಂಬುದು ಚೆನ್ನಾಗಿಯೇ ಗೊತ್ತಿರುತ್ತದೆ. ಅನ್ವೇಷಣೆಗೆ ಸಂಬಂಧಿಸಿದಂತೆ ನಮ್ಮ ವಿಚಾರಗಳಲ್ಲಿ ವ್ಯತ್ಯಾಸವಿರಬಹುದು. ಆದರೆ, ಅದು ಅಂತಿಮವಾಗಿ ನಮ್ಮ ಸಮಾಜಗಳಲ್ಲಿ ಸೃಷ್ಟಿಸುವ ಸಂಪತ್ತು ಮತ್ತು ತರಲಿರುವ ಹೊಸ ಮೌಲ್ಯದ ಬಗ್ಗೆ ನಮ್ಮಿಬ್ಬರಿಗೂ ನಂಬಿಕೆ ಇದೆ. ಭಾರತ ಮತ್ತು ಇಸ್ರೇಲ್ ಎರಡೂ ಅನನ್ಯವಾದ ಸಂಶೋಧನಾ ವ್ಯವಸ್ಥೆಯನ್ನು ಬೆಂಬಲಿಸುತ್ತವೆ. ಅನ್ವೇಷಣೆಯ ಈ ಪ್ರವೃತ್ತಿಯನ್ನು ಉದ್ಯಮಶೀಲತೆಯೊಂದಿಗೆ ಬೆಸೆಯಬೇಕೆನ್ನುವುದೇ ನಮ್ಮಿಬ್ಬರ ಪ್ರಯತ್ನವಾಗಿದೆ.

 

ಪ್ರಶ್ನೆ: ಭಾರತವು ಇಸ್ರೇಲಿನಿಂದ ಯಾವ ಬಗೆಯ ಆಮದು ವಹಿವಾಟನ್ನು ಬಯಸುತ್ತಿದೆ?

-ಇಸ್ರೇಲಿನೊಂದಿಗೆ ನಮಗೆ ಸಾಂಪ್ರದಾಯಿಕ ರೀತಿಯ ಆಮದು ಮತ್ತು ರಫ್ತು ನಮಗೆ ಬೇಕಾಗಿಲ್ಲ. ಈ ವಿಷಯದಲ್ಲಿ ನಮ್ಮದು ಗ್ರಾಹಕ-ವ್ಯಾಪಾರಿ ನೆಲೆಯ ಸಂಬಂಧವಲ್ಲ; ಬದಲಿಗೆ, ಅದಕ್ಕಿಂತ ಹೆಚ್ಚಿನದಾಗಿದೆ. `ಮೇಕ್ ಇನ್ ಇಂಡಿಯಾ’ಗೆ ಹೆಚ್ಚು ಒತ್ತಿರುವಂಥ ತಂತ್ರಜ್ಞಾನ ಆಧರಿತ ಸಹಭಾಗಿತ್ವದಲ್ಲಿ ನಾವು ಆಸಕ್ತಿ ಹೊಂದಿದ್ದೇವೆ. `ಗಂಗಾ ಶುದ್ಧೀಕರಣ’ದಂಥ ನಮ್ಮ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಇಸ್ರೇಲಿ ಉದ್ಯಮ ಸಾಕಷ್ಟು ಸಕಾರಾತ್ಮಕವಾಗಿಯೇ ಸ್ಪಂದಿಸಿದೆ. ಬಾರತದ ಇಂಥ ಮಹತ್ತ್ರರ ಯೋಜನೆಗಳೊಂದಿಗೆ ಕೈಗೂಡಿಸಲು ಇಸ್ರೇಲ್‍ಗೆ ಭಾರೀ ಅವಕಾಶಗಳಿವೆ.”

Source