Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜೈಸಲ್ಮೇರ್’ನಲ್ಲಿ ಭಾರತೀಯ ವಾಯುಪಡೆ ಸಿಬ್ಬಂದಿ ಜತೆ ಪ್ರಧಾನಮಂತ್ರಿ ದೀಪಾವಳಿ ಆಚರಣೆ; ಯೋಧರನ್ನು ಉದ್ದೇಶಿಸಿ ಶ್ರೀ ನರೇಂದ್ರ ಮೋದಿ ಭಾಷಣ


ಸ್ನೇಹಿತರೆ,

ಜೈಸಲ್ಮೇರ್ ವಾಯುನೆಲೆಗೆ ಹಲವು ಬಾರಿ ಭೇಟಿ ನೀಡುವ ಅವಕಾಶ ನನ್ನದಾಗಿದೆ. ಆದರೆ ಸರಣಿ ಕಾರ್ಯಕ್ರಮಗಳಿಂದಾಗಿ, ನಾನು ಇಲ್ಲಿ ತಂಗಲಾಗಲಿ ಅಥವಾ ಯಾರೊಬ್ಬರ ಜತೆ ಮಾತಾನಾಡಲಾಗಲಿ ಅವಕಾಶ ಸಿಕ್ಕಿರಿಲಿಲ್ಲ. ಆದರೆ, ಇಂದು ನಿಮ್ಮೆಲ್ಲರೊಂದಿಗೆ ವಿಶೇಷವಾಗಿ ದೀಪಾವಳಿ ಹಬ್ಬ ಆಚರಿಸುವ ಅವಕಾಶ ನನ್ನದಾಗಿದೆ. ನಿಮಗೆ ಮತ್ತು ನಿಮ್ಮ ಕುಟುಂಬದ ಪ್ರತಿ ಸದಸ್ಯರಿಗೂ ನಾನು ದೀಪಾವಳಿಯ ಹಾರ್ದಿಕ ಶುಭಾಶಯ ಕೋರುತ್ತೇನೆ.

ಸ್ನೇಹಿತರೆ,

ಪ್ರತಿ ಮನೆಯ ಬಾಗಿಲು ಅಥವಾ ದ್ವಾರದ ಮುಂದೆ ಶುಭ-ಲಾಭ ಅಥವಾ ರಿದ್ಧಿ-ಸಿದ್ಧಿಯ ಚಿತ್ತಾರದ ರಂಗೋಲಿ ಬಿಡಿಸುವುದು ನಮ್ಮ ಸಂಪ್ರದಾಯ. ದೀಪಾವಳಿಯಂದು ನಮ್ಮೆಲ್ಲರಿಗೆ ಸಮೃದ್ಧಿ ತರಲಿ ಎಂಬುದು ವರ್ಣರಂಜಿತ ರಂಗೋಲಿ ಬಿಡಿಸುವ ಹಿಂದಿರುವ ಪರಿಕಲ್ಪನೆ. ನಮ್ಮ ಗಡಿ ಭಾಗಗಳು ನಮ್ಮ ದೇಶದ ಪ್ರವೇಶ ದ್ವಾರಗಳಾಗಿವೆ. ಅವು ಮನೆಗಳಿಗೆ ಬಾಗಿಲುಗಳಿದ್ದಂತೆ. ಹಾಗಾಗಿ, ದೇಶದ ಸಮೃದ್ಧಿ ನಿಮ್ಮಿಂದಲೇ. ದೇಶಕ್ಕೆ ಶುಭ-ಲಾಭವು ನಿಮ್ಮಿಂದಲೇ. ರಿದ್ಧಿ-ಸಿದ್ಧಿಯೂ ನಿಮ್ಮಿಂದಲೇ, ನಿಮ್ಮ ಶೌರ್ಯ, ಪರಾಕ್ರಮದಿಂದಲೇ.  ಹಾಗಾಗಿಯೇ ದೇಶದ ಪ್ರತಿ ಮನೆಯಲ್ಲೂ ಜನರು, ನಿಮ್ಮ ಹೆಸರಿನಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮೆಲ್ಲರ ಪರಾಕ್ರಮದ ಬೆಳಕಲ್ಲಿ ದೀಪಾವಳಿಯ ದೀಪಗಳು ಮಿನುಗುತ್ತಿದೆ. ದೀಪಾವಳಿಯ ಈ ಹಣತೆಗಳು ಭಾರತದ ಪ್ರತಿ ಮೂಲೆಯಲ್ಲೂ ನಿಮ್ಮ ಗೌರವಕ್ಕೆ ಪ್ರಜ್ವಲ ಬೆಳಕು ಚೆಲ್ಲುತ್ತಿವೆ. ತ್ಯಾಗ, ಬಲಿದಾನದ ಮೂಲಕ ದೇಶ ರಕ್ಷಣೆಗಾಗಿ ನೀವೆಲ್ಲಾ ತೋರುತ್ತಿರುವ ದೇಶಭಕ್ತಿ, ಶಿಸ್ತು ಮತ್ತು ಆಸಕ್ತಿಗಾಗಿ ನಿಮ್ಮೆಲ್ಲರಿಗೆ ತಲೆಬಾಗಿ ವಂದಿಸಲು ನಾನಿಲ್ಲಿಗೆ ಬಂದಿದ್ದೇನೆ.

ಸ್ನೇಹಿತರೆ,

ಇಂದು, ಭಾರತ ಗಳಿಸಿರುವ ಜಾಗತಿಕ ಪ್ರಭಾವವನ್ನು ನೀವೆಲ್ಲಾ ನೋಡಿದರೆ, ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಬಲಗೊಳ್ಳುತ್ತಾ ಸಾಗಿದೆ. ಆರ್ಥಿಕತೆ, ಸಂಸ್ಕೃತಿ, ಸೇನೆ ಸೇರಿದಂತೆ ಹಲವು ರಂಗಗಳಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿದೆ. ಭಾರತ ಮೂಲದ ಜನರ ಪ್ರಾಬಲ್ಯ ವಿಶ್ವಾದ್ಯಂತ ಪಸರಿಸುತ್ತಿದೆ. ಭಾರತದ ಯುವ ಪ್ರತಿಭೆಗಳಿಗೆ ಜಗತ್ತಿನಾದ್ಯಂತ ಗೌರವ ಹೆಚ್ಚಾಗುತ್ತಿದೆ. ಅಂತೆಯೇ, ದೇಶದ ರಕ್ಷಣಾ ಕ್ಷೇತ್ರಕ್ಕೆ ಬಂದರೆ, ಸಮರ್ಥವಾಗಿರುವ ಮೂರು ಪಡೆಗಳನ್ನು ಗಡಿಗಳಲ್ಲಿ ಕಾಣಬಹುದು. ಕಳೆದ ಕೆಲವು ವರ್ಷಗಳಿಂದ ನಿಮ್ಮೆಲ್ಲರ ಆರ್ಥಿಕ ಸಬಲೀಕರಣಕ್ಕೆ ಕೆಲವೊಂದು ಮಹತ್ವದ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಗಳು ನಮ್ಮ ಆರ್ಥಿಕ ಬಲವನ್ನು ಪ್ರದರ್ಶಿಸುತ್ತಿವೆ. ನೀವು ವಿವಿಧ ರಾಜ್ಯಗಳ ಸಂಪ್ರದಾಯಗಳು ಮತ್ತು ವೈವಿಧ್ಯತೆಗಳನ್ನು ಅನುಭವಿಸಿ, ಹೆಮ್ಮೆಪಡುತ್ತೀರಿ. ನೀವೇ ಸೇರಿಕೊಂಡು ವಿಶ್ವದ ಬಲಿಷ್ಠ ಸೇನಾಬಲವನ್ನು ಕಟ್ಟಿದ್ದೀರಾ. ನಮ್ಮ ದೇಶದ ಮೇಲೆ ಯಾರೇ ಕೆಟ್ಟ ಕಣ್ಣು ನೆಟ್ಟರೂ, ನಮ್ಮ ಯೋಧರಿಗೆ, ಶೌರ್ಯದಿಂದ ತಕ್ಕ ಪ್ರತ್ಯುತ್ತರ ನೀಡುವ, ದಿಟ್ಟ ಹೋರಾಟ ನಡೆಸುವ  ತಾಕತ್ತು ಇದೆ. ಇಂತಹ ಗುಣ ಹೊಂದಿರುವ ಭಾರತೀಯ ಭೂಸೇನೆ ವಿಶ್ವಾಸಾರ್ಹತೆ ಸ್ಥಾಪಿಸಿದೆ. ಇದೀಗ, ದೇಶದ ಭೂಸೇನೆಯು ವಿಶ್ವದ ಬಲಿಷ್ಠ ರಾಷ್ಟ್ರಗಳ ಜತೆ ಸೇನಾ ತಾಲೀಮಿನಲ್ಲಿ ತೊಡಗಿಸಿಕೊಂಡಿದೆ. ಭಯೋತ್ಪಾದನೆ ನಿಗ್ರಹಕ್ಕೆ ಭಾರತವು, ಹಲವು ರಾಷ್ಟ್ರಗಳ ಜತೆ ಕಾರ್ಯತಂತ್ರ ಪಾಲುದಾರಿಕೆ ಹೊಂದಿದೆ. ಭಾರತೀಯ ಸಶಸ್ತ್ರ ಪಡೆಗಳು ಯಾವುದೇ ಭಾಗದಲ್ಲಿರುವ ಭಯೋತ್ಪಾದಕರ ಅಡಗುತಾಣಗಳ ಮೇಲೆ ಯಾವುದೇ ಸಮಯದಲ್ಲಿ ನೇರ ದಾಳಿ ನಡೆಸಿ, ಅವುಗಳನ್ನು ಧ್ವಂಸಗೊಳಿಸುವ ತಾಕತ್ತು ಹೊಂದಿವೆ ಎಂಬುದನ್ನು ಈಗಾಗಲೇ ಸಾಬೀತು ಮಾಡಿವೆ. ಅಲ್ಲದೆ, ವಿಶ್ವದ ಯಾವುದೇ ಭಾಗದಲ್ಲಾದರೂ ನಡೆಯುವ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು, ತಮ್ಮ ಸಾಮರ್ಥ್ಯ ಪ್ರದರ್ಶಿಸಿವೆ. ಭಾರತೀಯ ಸೇನೆಯು ಶತ್ರುಗಳನ್ನು ಸದೆಬಡಿಯಲು  ಸಮರ್ಥವಾಗಿದೆ. ಜತೆಗೆ, ಅದು, ಪ್ರಕೃತಿ ವಿಕೋಪಗಳು ಎದುರಾದಾಗ ಸಂಕಷ್ಟದಲ್ಲಿರುವ ಸಂತ್ರಸ್ತರ ಬದುಕಿನಲ್ಲಿ ಬೆಳಕು ತರುವ ಹಣತೆಯಂತೆ ನಮ್ಮ ಯೋಧರು ನಿಸ್ವಾರ್ಥ ದೇಶ ಸೇವೆ ಮಾಡುತ್ತಾ ಬಂದಿದ್ದಾರೆ.

ಸ್ನೇಹಿತರೆ,

ಕೊರೊನಾ ಸಾಂಕ್ರಾಮಿಕ ಸೋಂಕು ವಿಶ್ವವ್ಯಾಪಿಯಾದಾಗ, ಹೊರರಾಷ್ಟ್ರಗಳಲ್ಲಿ ನೆಲೆಸಿದ್ದ ಮತ್ತು ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆತರಲು ನಮ್ಮ ವಾಯುಪಡೆ ಮತ್ತು ನೌಕಾಪಡೆ ತೋರಿದ ಪಾತ್ರ ಮೆಚ್ಚುವಂಥದ್ದು. ಚೀನಾದ ಕೊರೊನಾಪೀಡಿತ ವುಹಾನ್’ಗೆ ಹೋಗಬೇಕಾದ ಸವಾಲು ಎದುರಾದಾಗ, ನಮ್ಮ ವಾಯುಪಡೆ ಯೋಧರು ಮುಂದೆ ಬಂದು ವುಹಾನ್’ನಲ್ಲಿದ್ದ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆತಂದರು. ಜತೆಗೆ, ಇತರೆ ರಾಷ್ಟ್ರಗಳ ಜನರನ್ನು ಅಲ್ಲಿಂದ ತೆರವುಗೊಳಿಸಲು ನೆರವಾದರು. ಸಮುದ್ರ ಸೇತು ಕಾರ್ಯಾಚರಣೆ ಅಡಿ, ಭಾರತೀಯ ನೌಕಾಪಡೆ ಸಿಬ್ಬಂದಿ ವಿದೇಶಗಳಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತಂದರು. ಭಾರತೀಯ ವಾಯುಪಡೆ ಸಿಬ್ಬಂದಿ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆ ತರುವ ಜತೆಗೆ, ಸ್ನೇಹಮಯಿ ದೇಶಗಳಾದ ಮಾಲ್ಡೀವ್ಸ್, ಮಾರಿಷಸ್, ಆಫ್ಘಾನಿಸ್ತಾನ, ಕುವೈತ್, ಕಾಂಗೊ ಮತ್ತು ದಕ್ಷಿಣ ಸೂಡನ್ ನಾಗರಿಕರನ್ನು ಅವರ ದೇಶಗಳಿಗೆ ಕಳಿಸಲು ಮುಂಚೂಣಿ ಸೇವೆ ಒದಗಿಸಿದರು. ಜತೆಗೆ, ನೂರಾರು ಟನ್ ಪರಿಹಾರ ಸಾಮಗ್ರಿಗಳು ನಮ್ಮ ಸಂತ್ರಸ್ತರಿಗೆ ಸಿಗುವಂತೆ ನೆರವಾದರು.

ಸ್ನೇಹಿತರೆ,

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ, ನೀವೆಲ್ಲಾ ನಡೆಸಿದ ಪ್ರಯತ್ನ ಮತ್ತು ಹೋರಾಟಗಳನ್ನು ದೇಶದ ಜನತೆಯ ಗಮನಕ್ಕೆ ತರಲಾಗಲಿಲ್ಲ. ಹಾಗಾಗಿ ನಾನೀಗ ದೇಶದ ಜನತೆಯ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ನಮ್ಮ ಡಿಆರ್’ಡಿಒ, ಬಿಎಸ್ಎಫ್, ಅರೆಸೇನಾಪಡೆಗಳು ಸೇರಿದಂತೆ ಮೂರು ಸಶಸ್ತ್ರ ಪಡೆಗಳು ಸಮರೋಪಾದಿಯಲ್ಲಿ ಕ್ವಾರಂಟೈನ್ ವೈದ್ಯಕೀಯ ಉಪಕರಣಗಳು, ಔಷಧ ಮತ್ತು ಚಿಕಿತ್ಸೆ ಒದಗಿಸಿದವು. ಆರಂಭದಲ್ಲಿ ಎದುರಾದ ಮುಖಗವುಸು, ಸ್ಯಾನಿಟೈಸರ್, ಪಿಪಿಇ ಕಿಟ್’ಗಳ  ಅಗತ್ಯಗಳನ್ನು ಪೂರೈಸಲು ನೀವು ನಡೆಸಿದ ಪ್ರಯತ್ನ ಮತ್ತು ಹೋರಾಟ ಹಾಗೂ ಸ್ಪಂದಿಸಿದ ರೀತಿ ಮರೆಯಲಾಗದು. ಪ್ರತಿ ಹಂತದ ನಿಮ್ಮ ಕೊಡುಗೆ ಅಪಾರ. ಸಂರಕ್ಷಣಾ ಕಿಟ್’ಗಳು,  ವೆಂಟಿಲೇಟರ್’ಗಳು, ಆಕ್ಸಿಜನ್ ಮತ್ತಿತರ ಸೌಲಭ್ಯ ಒದಗಿಸುವಲ್ಲಿ ನೀವೆಲ್ಲಾ ನೀಡಿರುವ ಸೇವೆ ಅನನ್ಯ. ದೇಶದ ಕರಾವಳಿ ಸೇರಿದಂತೆ ಹಲವೆಡೆ ಗಂಭೀರ ಚಂಡಮಾರುತಗಳು ಅಪ್ಪಳಿಸಿದಾಗ, ನೀವು ಮಾಡಿರುವ ಸಹಾಯ ಮತ್ತು ಬೆಂಬಲ ಅಭೂತಪೂರ್ವ. ನಿಮ್ಮೆಲ್ಲರ ತ್ಯಾಗ ಮತ್ತು ತಪಸ್ಸನ್ನು ಸ್ಫೂರ್ತಿಯಾಗಿ ಸ್ವೀಕರಿಸಿರುವ ಪ್ರತಿ ಭಾರತೀಯ ಇಂದು ದೀಪಾವಳಿಯ ದೀಪ ಬೆಳಗಿ, ಹೆಮ್ಮೆ ಪಡುವಂತೆ ಮಾಡಿದ್ದಾನೆ.

ಸ್ನೇಹಿತರೆ,

ಯಾವುದೇ ಸಂದರ್ಭದಲ್ಲೂ ನಮ್ಮ ಕಾರ್ಯಾಚರಣೆ ಘಟಕಗಳು ಮತ್ತು ನೆಲೆಗಳಿಗೆ ಕೊರೊನಾ ಸೋಂಕು ಕಾಡದಂತೆ ನೀವೆಲ್ಲಾ ಎಚ್ಚರಿಕೆ ವಹಿಸಿದ್ದೀರಿ. ಭೂಸೇನೆಯೇ ಇರಬಹುದು, ನೌಕಾಪಡೆ ಅಥವಾ ವಾಯಪಡೆಯೇ ಇರಬಹುದು. ಕೊರೊನಾ ಕಾರಣದಿಂದಲೇ ಸೇನಾ ಸಮರ ಸಿದ್ಥತೆಗೆ ಹಿನ್ನಡೆ ಆಗದಂತೆ ಮುಂಜಾಗ್ರತೆ ವಹಿಸಿದ್ದೀರಿ. ಜೈಸಲ್ಮೇರ್’ನಲ್ಲಿ ಸೇನಾ ಕಸರತ್ತು ಮುಂದುವರಿದಿದೆ ಮತ್ತು ಸಾಗರ ಭಾಗಗಳಲ್ಲೂ ಸೇನಾ ತಾಲೀಮು ನಡೆಯುತ್ತಿದೆ. ಕೋವಿಡ್-19 ಅವಧಿಯಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳ ಸೇನಾ ಚಟುವಟಿಕೆಗಳು ನಿಂತ ನೀರಾಗಿದ್ದಾಗ, ವೇಗವಾಗಿ ಮುಂದಡಿ ಇಡುವುದು ಸುಲಭದ ಮಾತಲ್ಲ. ಆದರೆ, ನೀವು ಅದನ್ನು ಮಾಡಿ ತೋರಿಸಿದ್ದೀರಾ. ಕೊರೊನಾ ಕಾಲಾವಧಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಲಕರಣೆಗಳು ಮತ್ತು ಉಪಕರಣಗಳ ನಿಯುಕ್ತಿ (ಸೇರ್ಪಡೆ) ಮತ್ತು ವಿತರಣೆ ಕಾರ್ಯಗಳು ತ್ವರಿತವಾಗಿ ನಡೆದವು. ಇದೇ ಅವಧಿಯಲ್ಲಿ ಭಾರತದ ಸೇನೆಗೆ 8 ಸುಧಾರಿತ ರಫೇಲ್ ಸಮರ ವಿಮಾನಗಳು ಸೇರ್ಪಡೆ ಆದವು. ತೇಜಸ್ ಸಮರ ನೌಕೆಯು ಇದೇ ಕಾಲಘಟ್ಟದಲ್ಲಿ ನಿಯುಕ್ತಿಗೊಂಡಿತು. ಅಲ್ಲದೆ, ಶಕ್ತಿಶಾಲಿ ಅಪಾಚೆ ಮತ್ತು ಚಿನೂಕ್ ಹೆಲಿಕಾಪ್ಟರ್’ಗಳು ನಮ್ಮ ಪಡೆಗಳಿಗೆ ಸೇರ್ಪಡೆ ಆದವು. ಭಾರತೀಯ ನೌಕಾಪಡೆಯು ಸ್ವದೇಶಿ ನಿರ್ಮಿತ 2 ಅತ್ಯಾಧುನಿಕ ಜಲಂತರ್ಗಾಮಿ ನೌಕೆಗಳನ್ನು ತನ್ನ ಕಾರ್ಯಾಚರಣೆಗೆ ಸೇರಿಸಿಕೊಂಡಿತು.

ಸ್ನೇಹಿತರೆ,

ಕೊರೊನಾ ಸೋಂಕು ಅವಧಿಯಲ್ಲೇ ನಮ್ಮ ವಿಜ್ಞಾನಿಗಳು ಲಸಿಕೆ ಕಂಡುಹಿಡಿಯಲು ಸಕಲ ಪ್ರಯತ್ನ ಮುಂದುವರಿಸಿದ್ದಾರೆ. ಜತೆಗೆ, ನಮ್ಮ ವಿಜ್ಞಾನಿಗಳು ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡು ದೇಶದ ಗಮನ ಸೆಳೆದಿದ್ದಾರೆ. ಕ್ಷಿಪಣಿ ಪರೀಕ್ಷೆಗಳ ನಿರಂತರ ವರದಿಗಳು ಪ್ರಕಟವಾಗುತ್ತಿದ್ದು, ಕ್ಷಿಪಣಿಗಳಿಗೆ ಆಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಯೂ ಇದೇ ಅವಧಿಯಲ್ಲಿ ನಡೆಯುತ್ತಿದೆ. ಕಳೆದ ಕೆಲವು ತಿಂಗಳಿಂದ ದೇಶದ ಕಾರ್ಯತಂತ್ರ ಸೇನಾ ಬಲ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂಬುದನ್ನು ನೀವೇ ಊಹಿಸಿ. ಪ್ರತಿ ಸೆಕೆಂಡ್’ಗೆ 2 ಕಿಲೋಮೀಟರ್ ಎತ್ತರಕ್ಕೆ ಚಿಮ್ಮುವ ಹೈಪರ್’ಸಾನಿಕ್ ಕ್ಞಿಪಣಿಯ ಯಶಸ್ವೀ ಪರೀಕ್ಷೆ ಕಳೆದ 2 ತಿಂಗಳಲ್ಲಿ ನಡೆದಿದೆ. ಈ ಯಶಸ್ವೀ ಪ್ರಯೋಗದಿಂದ ಭಾರತವೀಗ ವಿಶ್ವದ ಪ್ರಬಲ 3-4 ರಾಷ್ಟ್ರಗಳ ಸಾಲಿಗೆ ಬಂದು ನಿಂತಿದೆ. ಸಾಗರ, ಭೂಮಿ ಮತ್ತು ವಾಯು ನೆಲೆಯಿಂದ ಚಿಮ್ಮುವ ಕ್ಷಿಪಣಿಗಳ ಯಶಸ್ವೀ ಪರೀಕ್ಷೆಯೂ ನಡೆದಿದೆ.  ಇವು ದೇಶದ ಭದ್ರತೆಗೆ ಬಲಿಷ್ಠ ತಡೆಗೋಡೆಗಳಾಗಿವೆ.

ಸ್ನೇಹಿತರೆ,

ಈ ಎಲ್ಲಾ ಬೆಳವಣಿಗೆಗಳ ನಡುವೆ, ಬೃಹತ್ ಮೂಲಸೌಕರ್ಯ-ವಿದ್ಯುತ್ (ಇಂಧನ) ಯೋಜನೆಗಳ ಜತೆಗೆ ಆಧುನಿಕ ಸಮರ ಸಾಧನಗಳು ಮತ್ತು ಗಡಿ ಭಾಗಗಳಲ್ಲಿ ಸಾರಿಗೆ ಸಂಪರ್ಕ ಕಲ್ಪಿಸುವ ಕಾರ್ಯಗಳು ಪೂರ್ಣಗೊಂಡಿವೆ. ಅಟಲ್ ಸುರಂಗ ಮಾರ್ಗವು ಲಡಾಖ್’ಗೆ ಸಂಪರ್ಕ ಕಲ್ಪಿಸಿದೆ. ಉತ್ತರ ಮತ್ತು ಪಶ್ಚಿಮ ಗಡಿ ಭಾಗಗಳಲ್ಲಿ ಹಲವಾರು ಸೇತುವೆಗಳು ಮತ್ತು ದೀರ್ಘ ರಸ್ತೆಗಳು ನಿರ್ಮಾಣವಾಗಿವೆ. ಇವೆಲ್ಲವೂ ನಿಮ್ಮಿಂದಲೇ ಸಾಧ್ಯವಾಗಿ, ದೇಶದ ಜನರ ಹೃದಯ ಗೆದ್ದಿದ್ದೀರಿ.

ಸ್ನೇಹಿತರೆ,

ದೇಶದ ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ನಿಮ್ಮೆಲ್ಲರ ಬದ್ಧತೆಯಿಂದಾಗಿ, ದೇಶ ಮತ್ತಷ್ಟು ಬಲಿಷ್ಠವಾಗಿದೆ. ರಕ್ಷಣಾ ವಲಯಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಸಾಧನ, ಸಲಕರಣೆ ಸೇರ್ಪಡೆ ಮಾಡಲು ಮತ್ತು ಸುಧಾರಣೆ ತರಲು ಸರಕಾರ, ಗಂಭೀರವಾಗಿ ಕಾರ್ಯೋನ್ಮುಖವಾಗಿದೆ. ಸ್ವಾವಲಂಬನೆ ಸಾಧಿಸುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮೂರೂ ಸಶಸ್ತ್ರ ಪಡೆಗಳು 100ಕ್ಕಿಂತ ಹೆಚ್ಚಿನ ರಕ್ಷಣಾ ಉಪಕರಣಗಳನ್ನು ದೇಶೀಯವಾಗಿ ತಯಾರಿಸಲು ನಿರ್ಧರಿಸಿವೆ.

 

 

ಸ್ನೇಹಿತರೆ,

ರಕ್ಷಣಾ ವಲಯದ ವಿದೇಶಿ ನೇರ ಹೂಡಿಕೆಯನ್ನು 74%ಗೆ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚು ಹೆಚ್ಚು ವಿದೇಶಿ ಕಂಪನಿಗಳು ಭಾರತದಲ್ಲಿ ಶಸ್ತ್ರಾಸ್ತ್ರ ತಯಾರಿಸಲು ಸಾಧ್ಯವಾಗಲಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ 2 ಬೃಹತ್ ರಕ್ಷಣಾ ಕಾರಿಡಾರ್’ಗಳ ಕಾಮಗಾರಿ ಭರದಿಂದ ಸಾಗಿದ್ದು, ಭಾರತದಲ್ಲಿ ತಯಾರಿಕೆ ಆರಂಭಿಸಲು ಬಯಸುವ ವಿದೇಶಿ ಕಂಪನಿಗಳಿಗೆ ಸೌಲಭ್ಯ ಒದಗಿಸಲು ಇದರಿಂದ ಸಾಧ್ಯವಾಗಲಿದೆ. 

ಸ್ನೇಹಿತರೆ,

ಸೇನೆಯ ಆಧುನೀಕರಣ ಮತ್ತು ಸೇನಾ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ದೇಶದಲ್ಲಿರುವ ತೀರಾ ಹಳೆಯದಾದ ವಿಧಿವಿಧಾನಗಳು ಮತ್ತು ನಿಯಮಗಳೇ ಬಹುದೊಡ್ಡ ಅಡಚಣೆಯಾಗಿವೆ. ಓಬಿರಾಯನ ಕಾಲದ ಈ ಎಲ್ಲಾ ವಿಧಿವಿಧಾನಗಳನ್ನು ಸರಳೀಕರಿಸುವ ನಿರಂತರ ಪ್ರಯತ್ನಗಳು ಪ್ರಗತಿಯಲ್ಲಿವೆ. ಇತ್ತೀಚೆಗೆ, ಹಲವು ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಮೂರು ಸಶಸ್ತ್ರ ಪಡೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಲು ಮತ್ತು ತ್ವರಿತ ನಿರ್ಧಾರ ಕೈಗೊಳ್ಳಲು ನೆರವಾಗುವಂತೆ ಮೂರೂ ಪಡೆಗಳಿಗೂ ಒಬ್ಬ ಮುಖ್ಯಸ್ಥರನ್ನು ನೇಮಿಸಲಾಗಿದೆ.

ಸ್ನೇಹಿತರೆ,

ಗಡಿ ಪ್ರದೇಶಗಳಲ್ಲಿ ಎದುರಾಗುವ ಸವಾಲುಗಳು ಏನು ಎಂಬುದು ನಿಮಗಿಂತ ಬೇರೆ ಇನ್ಯಾರು ಅರ್ಥ ಮಾಡಿಕೊಳ್ಳಬಲ್ಲರು. ಹಲವಾರು ಸಮಸ್ಯೆಗಳು ಇಲ್ಲಿವೆ. ಗಡಿ ಪ್ರದೇಶಗಳ ಅಭಿವೃದ್ಧಿ ಜತೆಗೆ, ಯುವ ಸಮುದಾಯಕ್ಕೆ ವಿಶೇಷ ತರಬೇತಿ ನೀಡುವುದು ಸಹ ಅತಿಮುಖ್ಯ. ದೇಶದ 100ಕ್ಕಿಂತ ಹೆಚ್ಚಿನ ಗಡಿ ಜಿಲ್ಲೆಗಳಲ್ಲಿ ಎನ್’ಸಿಸಿ ಕೆಡೆಟ್’ಗಳಿಗೆ ವಿಶೇಷ ತರಬೇತಿ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ನಾನು ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಮಾಡಿದ್ದ ಭಾಷಣದಲ್ಲೇ ಹೇಳಿದ್ದೆ. ಸುಮಾರು 1 ಲಕ್ಷ ಯುವಕರಿಗೆ ಗಡಿ ಮತ್ತು ಸಾಗರ ಪ್ರದೇಶಗಳಲ್ಲಿ ವಿಶೇಷ ತರಬೇತಿ ನೀಡುವುದು ಸರಕಾರದ ಉದ್ದೇಶವಾಗಿದೆ. ಮಹತ್ವದ ವಿಷಯ ಎಂದರೆ, ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಯೋಧರು ಈ ಯುವಕರಿಗೆ ತರಬೇತಿ ನೀಡಲಿದ್ದಾರೆ.

 

ಸ್ನೇಹಿತರೆ,

ಬೃಹತ್ ಸಂಖ್ಯೆಯ ಮಹಿಳಾ ಕೆಡೆಟ್’ಗಳಿಗೆ ತರಬೇತಿ ನೀಡುವ ಉದ್ದೇಶ  ಸರಕಾರದ್ದಾಗಿದೆ. ದೇಶದ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಪಾತ್ರ ವಿಸ್ತರಿಸುವ ಪ್ರಯತ್ನಗಳ ಭಾಗ ಇದಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವಂತೆ, ದೇಶದ ರಕ್ಷಣಾ ಕ್ಷೇತ್ರದಲ್ಲೂ ಅವರು ತೊಡಗಿಸಿಕೊಳ್ಳಬೇಕು ಎಂಬುದು ಸರಕಾರದ ಆಶಯವಾಗಿದೆ. ನಾವೀಗ ವಾಯುಪಡೆ ಮತ್ತು ನೌಕಾಪಡೆಯಲ್ಲಿ ಹೆಣ್ಣು ಮಕ್ಕಳಿಗೆ ಸಮರ ರಂಗದ ಜವಾಬ್ದಾರಿಗಳನ್ನು ನೀಡುತ್ತಿದ್ದೇವೆ. ಮಿಲಿಟರಿ ಪೊಲೀಸ್ ಇಲಾಖೆಯಲ್ಲೂ ಅವರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ. ಗಡಿ ಭದ್ರತೆಯಲ್ಲಿ ಬಿಎಸ್ಎಫ್ ಮುಂಚೂಣಿ ಸಂಸ್ಥೆಯಾಗಿದ್ದು, ಅಲ್ಲೂ ಹೆಣ್ಣು ಮಕ್ಕಳಿಗೆ ನಿರಂತರವಾಗಿ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.

ಸ್ನೇಹಿತರೆ,

ದೀಪಾವಳಿ ಹಬ್ಬದ ದಿನದಂದು ನೀವೊಂದು ಪ್ರಮುಖ ವಿಚಾರವನ್ನು ಆಲಿಸಲೇಬೇಕು. ನಾವು ಒಂದು ದೀಪವನ್ನು ಹಚ್ಚಿದಾಗ, ಅದೇ ದೀಪದಿಂದ  ಇನ್ನುಳಿದ ದೀಪಗಳನ್ನು ಹಚ್ಚುತ್ತೇವೆ. ಒಂದು ದೀಪ ಮತ್ತೊಂದು ದೀಪವನ್ನು ಬೆಳಗಿಸುತ್ತದೆ. ನಂತರ ಸಾವಿರಾರು ದೀಪಗಳನ್ನು ಬೆಳಗುತ್ತದೆ. ಅಂತೆಯೇ, ನೀವು ಸಹ ಹಣತೆಯಂತೆ, ಇಡೀ ರಾಷ್ಟ್ರವನ್ನು ಬೆಳಗಿಸಿ, ದೇಶಕ್ಕೆ ಶಕ್ತಿ ತುಂಬಿ. ಗಡಿಯಲ್ಲಿ ಅಪ್ರತಿಮ ಶೌರ್ಯ ತೋರುವ ನಿಮ್ಮಂತ ಯೋಧರಿಂದ ದೇಶಭಕ್ತಿಯ ಸ್ಫೂರ್ತಿ ದೇಶವಾಸಿಗಳಲ್ಲಿ ಹೆಚ್ಚಾಗಿದೆ ಮತ್ತು ಅನುರಣನಗೊಂಡಿದೆ. ನಿಮ್ಮಿಂದ ಸ್ಫೂರ್ತಿ ಪಡೆದ ಪ್ರತಿ ದೇಶವಾಸಿ ತನ್ನದೇ ಹಾದಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಮುಂದಡಿ ಇಡುತ್ತಿದ್ದಾನೆ. ಕೆಲವರು ಸ್ವಚ್ಛತೆ ಕಾಪಾಡುವ ಸಂಕಲ್ಪ ಮಾಡಿದರೆ, ಮತ್ತೆ ಕೆಲವರು ಭ್ರಷ್ಟಾಚಾರ ನಿಗ್ರಹಿಸುವ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಪ್ರತಿ ಕುಟುಂಬಕ್ಕೆ ಕುಡಿಯುವ ನೀರು ಪೂರೈಸುವ ಆಂದೋಲನದಲ್ಲಿ ನಿರತರಾಗಿದ್ದಾರೆ. ಮತ್ತೆ ಕೆಲವರು ಕ್ಷಯ-ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಮತ್ತೊಂದು ವರ್ಗ ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿದೆ. ಬೇರೊಂದು ವರ್ಗ ಡಿಜಿಟಲ್ ವಹಿವಾಟಿನ ಅರಿವು ಮೂಡಿಸುತ್ತಿದೆ.

ಸ್ನೇಹಿತರೆ,

ಇದೀಗ, ದೇಶದಲ್ಲಿ ಪ್ರತಿಯೊಬ್ಬರೂ ಸ್ವಾವಲಂಬಿ ಭಾರತ ಆಂದೋಲನವನ್ನು ಒಪ್ಪಿಕೊಂಡು ಅಪ್ಪಿಕೊಳ್ಳುತ್ತಿದ್ದಾರೆ. ‘ಸ್ಥಳೀಯ ಉತ್ಪನ್ನಗಳಿಗೆ ದನಿ ಎತ್ತಿ (ವೋಕಲ್ ಫಾರ್ ಲೋಕಲ್)’ ಆಂದೋಲನ ಪ್ರತಿ ಭಾರತೀಯನ ಉಸಿರಾಗಬೇಕು. ‘ಭಾರತದ ಆತ್ಮವಿಶ್ವಾಸ ಮೊದಲು, ಭಾರತೀಯ ಮೊದಲು’ ಪರಿಕಲ್ಪನೆ ವ್ಯಾಪಕವಾಗಬೇಕು. ನಿಮ್ಮೆಲ್ಲಾ ಬಲ ಮತ್ತು ನಂಬಿಕೆಯಿಂದ ಇವೆಲ್ಲಾ ಸಾಧ್ಯವಾಗಿಸಲು ಸಾಧ್ಯವಿದೆ. ದೇಶದ ನಂಬಿಕೆ ಬೆಳೆದಾಗ, ಇಡೀ ವಿಶ್ವವೇ ದೇಶದ ಪ್ರಗತಿಯನ್ನು ಗಮನಿಸುತ್ತದೆ. ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಸಂಕಲ್ಪವನ್ನು ನಿಜ ಮಾಡಲು ನಾವೆಲ್ಲಾ ಮುಂದಡಿ ಇಡೋಣ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ನಾವೆಲ್ಲಾ ಹೊಸ ನಿರ್ಣಯ ಮತ್ತು ಹೊಸ ಆಸಕ್ತಿ ತೋರೋಣ. 130 ಕೋಟಿ ಜನರಿರುವ ಈ ದೇಶ ಒಟ್ಟಾಗಿ ಕೆಲಸ ಮಾಡಿ, ‘ಒಂದು ಜೀವನ – ಒಂದು ಕಾರ್ಯಕ್ರಮ’ದ ಕನಸನ್ನು ನನಸು ಮಾಡೋಣ. ಈ ಮೂಲಕ ನಾವು ಕನಸಿದ ‘ಶ್ರೀಮಂತ ಮತ್ತು ಸಮೃದ್ಧ ಭಾರತ ಮಾತೆ’ಯನ್ನು ಕಣ್ಣಾರೆ ಕಾಣೋಣ. ಇದೇ ಸ್ಫೂರ್ತಿಯಲ್ಲಿ ನೀವು ನನ್ನೊಂದಿಗೆ ಹೇಳಿ… ಭಾರತ್ ಮಾತಾ ಕಿ ಜೈ. ಭಾರತ್ ಮಾತಾ ಕಿ ಜೈ. ಮತ್ತೊಮ್ಮೆ ಹೇಳುತ್ತೇನೆ …. ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಧನ್ಯವಾದಗಳು.

****