ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಜುಲೈ 21 ರಂದು ಸಂಜೆ 7 ಗಂಟೆಗೆ ನವದೆಹಲಿಯ ಭಾರತ ಮಂಟಪಂನಲ್ಲಿ 46 ನೇ ವಿಶ್ವ ಪಾರಂಪರಿಕ ಸಮಿತಿಯ ಸಭೆಯನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನೆರೆದಿದ್ದವರನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಲಿದ್ದಾರೆ. ಯುನೆಸ್ಕೋದ ಮಹಾ ನಿರ್ದೇಶಕರಾದ ಶ್ರೀ ಆಡ್ರೆ ಅಜೌಲೆ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಭಾರತದಿಂದ ಮೊದಲ ಬಾರಿಗೆ ವಿಶ್ವ ಪಾರಂಪರಿಕ ಸಮಿತಿ ಸಭೆ ಆಯೋಜಿಸಲಾಗಿದೆ. ನವದೆಹಲಿಯ ಭಾರತ ಮಂಟಪಂನಲ್ಲಿ 2024 ರ ಜುಲೈ 21 ರಿಂದ 31 ರ ವರೆಗೆ ಈ ಸಭೆ ನಡೆಯಲಿದೆ. ವಿಶ್ವಪಾರಂಪರಿಕ ಸಮಿತಿ ವರ್ಷದಲ್ಲಿ ಒಮ್ಮೆ ಸಭೆ ಸೇರಲಿದೆ ಮತ್ತು ವಿಶ್ವಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತಾದ ಚರ್ಚೆ ಮತ್ತು ಪಾರಂಪರಿಕ ತಾಣಗಳ ಪಟ್ಟಿಯನ್ನು ಸಭೆಯಲ್ಲಿ ನಿಗದಿ ಮಾಡಲಾಗುತ್ತದೆ. ಈ ಸಭೆಯಲ್ಲಿ ವಿಶ್ವಪಾರಂಪರಿಕ ಪಟ್ಟಿಗೆ ಸೇರಲಿರುವ ಹೊಸ 124 ತಾಣಗಳು, ಹಾಲಿ ಇರುವ ಪಾರಂಪರಿಕ ಆಸ್ತಿ, ಅಂತಾರಾಷ್ಟ್ರೀಯ ನೆರವು, ವಿಶ್ವ ಪರಾಂಪರಿಕ ನಿಧಿಯ ಸದ್ಬಳಕೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಸಭೆಯಲ್ಲಿ 150 ಕ್ಕೂ ಅಧಿಕ ದೇಶಗಳಿಂದ 2000 ಹೆಚ್ಚಿನ ಸಂಖ್ಯೆಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
ಈ ಮಹತ್ವದ ಸಭೆ ಹಿನ್ನೆಲೆಯಲ್ಲಿ ವಿಶ್ವಪಾರಂಪರಿಕ ಯುವ ವೃತ್ತಿಪರರ ಒಕ್ಕೂಟ ಮತ್ತು ವಿಶ್ವ ಪಾರಂಪರಿಕ ತಾಣಗಳ ನಿರ್ವಾಹಕರ ಒಕ್ಕೂಟದ ಸಭೆಗಳನ್ನು ಸಹ ಆಯೋಜಿಸಲಾಗುತ್ತಿದೆ.
ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವಾರು ಪ್ರದರ್ಶನ ಮಳಿಗೆಗಳನ್ನು ಭಾರತ ಮಂಟಪಂನಲ್ಲಿ ತೆರೆಯಲಾಗಿದೆ. ರಿಟರ್ನ್ ಆಫ್ ಟ್ರೆಷರ್ಸ್ ಪ್ರದರ್ಶನದಲ್ಲಿ ದೇಶಕ್ಕೆ ಮರಳಿ ತರಲಾದ, ಕೆಲವು ಹಿಂಪಡೆದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. ಇಲ್ಲಿಯವರೆಗೆ, 350 ಕ್ಕೂ ಹೆಚ್ಚು ಕಲಾಕೃತಿಗಳನ್ನು ಸ್ವದೇಶಕ್ಕೆ ಮರಳಿ ತರಲಾಗಿದೆ. ಭಾರತದ 3 ಪ್ರಮುಖ ಪಾರಂಪರಿಕ ತಾಣಗಳಲ್ಲಿ ಇತ್ತೀಚಿನ ಎಆರ್ ಮತ್ತು ವಿಆರ್ ತಂತ್ರಜ್ಞಾನವನ್ನು ಬಳಸಿಕೊಂಡು ಇಲ್ಲಿ ಅಪರಿಮಿತ ಅನುಭವ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಗುಜರಾತ್ ನ ರಾಣಿ ಕಿ ವಾವ್, ಮಹಾರಾಷ್ಟ್ರದ ಕೈಲಾಸ ದೇವಾಲಯ, ಎಲ್ಲೋರ ಗುಹೆಗಳು, ಕರ್ನಾಟಕದ ಹೋಯ್ಸಳ ದೇವಾಲಯಗಳು, ಹಳೇಬೀಡು ತಾಣಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ “ವಿಸ್ಮಯ ಭಾರತ” ಪ್ರದರ್ಶನವನ್ನು ಸಹ ಆಯೋಜಿಸಿದ್ದು, ಭಾರತದ ಶ್ರೀಮಂತ ಪರಂಪರೆ, ಪ್ರಾಚೀನ ನಾಗರಿಕತೆ, ಭೂ ಭೌಗೋಳಿಕ ವೈವಿಧ್ಯತೆಗಳು, ತಂತ್ರಜ್ಞಾನ ಮತ್ತು ಮೂಲ ಸೌಕರ್ಯಗಳ ಮೂಲಕ ಆಧುನಿಕವಾಗಿ ಅಭಿವೃದ್ಧಿ ಪಡಿಸಿರುವ ಪ್ರವಾಸೋದ್ಯಮ ತಾಣಗಳ ಕುರಿತಾದ ಮಾಹಿತಿಯನ್ನು ಈ ಪ್ರದರ್ಶನ ಒಳಗೊಂಡಿದೆ.
*****