ಜೀನೋಮ್ ಇಂಡಿಯಾ ಯೋಜನೆ ಆರಂಭದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು, ಭಾರತ ಇಂದು ಸಂಶೋಧನಾ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಜೀನೋಮ್ ಇಂಡಿಯಾ ಯೋಜನೆಗೆ 5 ವರ್ಷಗಳ ಹಿಂದೆ ಅನುಮೋದನೆ ನೀಡಲಾಗಿತ್ತು, ಕೋವಿಡ್ ಸಾಂಕ್ರಾಮಿಕ ರೋಗವು ಒಡ್ಡಿದ ಸವಾಲುಗಳ ಹೊರತಾಗಿಯೂ ನಮ್ಮ ವಿಜ್ಞಾನಿಗಳು ಶ್ರದ್ಧೆಯಿಂದ ಕೆಲಸ ಮಾಡಿ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಐಐಎಸ್ಸಿ, ಐಐಟಿಗಳು, ಸಿಎಸ್ಐಆರ್ ಮತ್ತು ಡಿಬಿಟಿ-ಬ್ರಿಕ್ ನಂತಹ 20ಕ್ಕೂ ಹೆಚ್ಚು ಹೆಸರಾಂತ ಸಂಶೋಧನಾ ಸಂಸ್ಥೆಗಳು ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. 10,000 ಭಾರತೀಯರ ಜೀನೋಮ್ ಅನುಕ್ರಮಗಳನ್ನು ಒಳಗೊಂಡಿರುವ ದತ್ತಾಂಶವು ಈಗ ಭಾರತೀಯ ಜೈವಿಕ ದತ್ತಾಂಶ ಕೇಂದ್ರದಲ್ಲಿ ಲಭ್ಯವಿದೆ. ಈ ಯೋಜನೆಯು ಜೈವಿಕ ತಂತ್ರಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರನ್ನು ಅಭಿನಂದಿಸಿದರು.
“ಜೀನೋಮ್ ಇಂಡಿಯಾ ಯೋಜನೆಯು ಜೈವಿಕ ತಂತ್ರಜ್ಞಾನ ಕ್ರಾಂತಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲು”. ಈ ಯೋಜನೆಯು 10,000 ವ್ಯಕ್ತಿಗಳ ಜೀನೋಮ್‌ಗಳನ್ನು ಅನುಕ್ರಮಗೊಳಿಸುವ ಮೂಲಕ ವೈವಿಧ್ಯಮಯ ಆನುವಂಶಿಕ ಸಂಪನ್ಮೂಲವನ್ನು ಯಶಸ್ವಿಯಾಗಿ ಸೃಷ್ಟಿಸಿದೆ. ಈ ದತ್ತಾಂಶವು ಈಗ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಲಭ್ಯವಾಗಲಿದೆ, ಇದು ವಿದ್ವಾಂಸರಿಗೆ ಭಾರತದ ಆನುವಂಶಿಕ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಮಾಹಿತಿಯು ದೇಶದ ನೀತಿ ನಿರೂಪಣೆ ಮತ್ತು ಯೋಜನೆಯಲ್ಲಿ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ತಜ್ಞರು ಮತ್ತು ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಭಾರತದ ವಿಶಾಲತೆ ಮತ್ತು ವೈವಿಧ್ಯತೆಯನ್ನು ಆಹಾರ, ಭಾಷೆ ಮತ್ತು ಭೌಗೋಳಿಕತೆಯಲ್ಲಿ ಮಾತ್ರವಲ್ಲದೆ, ಅದರ ಜನರ ಆನುವಂಶಿಕ ರಚನೆಯಲ್ಲಿಯೂ ಗುರುತಿಸಬಹುದಾಗಿದೆ. ರೋಗಗಳ ಸ್ವರೂಪವು ಬಹಳ ವ್ಯತ್ಯಾಸಗೊಳ್ಳುತ್ತದೆ, ಇದು ಪರಿಣಾಮಕಾರಿ ಚಿಕಿತ್ಸೆಗಳನ್ನು ನಿರ್ಧರಿಸಲು ಜನರ ಆನುವಂಶಿಕ ಗುರುತು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಬುಡಕಟ್ಟು ಸಮುದಾಯಗಳಲ್ಲಿ ಕುಡಗೋಲು ಕಣ ರಕ್ತಹೀನತೆಯ ಗಮನಾರ್ಹ ಸವಾಲು ಮತ್ತು ಅದನ್ನು ಎದುರಿಸುವ ರಾಷ್ಟ್ರೀಯ ಧ್ಯೇಯ, ಉದ್ದೇಶವನ್ನು ಪ್ರಸ್ತಾಪಿಸಿದರು. ಈ ಸಮಸ್ಯೆಯು ವಿವಿಧ ಪ್ರದೇಶಗಳಲ್ಲಿ ಭಿನ್ನವಾಗಿರಬಹುದು ಮತ್ತು ಭಾರತೀಯ ಜನಸಂಖ್ಯೆಯ ವಿಶಿಷ್ಟ ಜೀನೋಮಿಕ್ ಮಾದರಿಗಳನ್ನು ಅರ್ಥ ಮಾಡಿಕೊಳ್ಳಲು ಸಂಪೂರ್ಣ ಆನುವಂಶಿಕ ಅಧ್ಯಯನ ಅಗತ್ಯವಿದೆ. ಈ ತಿಳಿವಳಿಕೆಯು ನಿರ್ದಿಷ್ಟ ಗುಂಪುಗಳಿಗೆ ನಿರ್ದಿಷ್ಟ ಪರಿಹಾರಗಳು ಮತ್ತು ಪರಿಣಾಮಕಾರಿ ಔಷಧಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ಯೋಜನೆಯ ವ್ಯಾಪ್ತಿ ಹೆಚ್ಚು ವಿಸ್ತಾರವಾಗಿದೆ, ಕುಡಗೋಲು ಕಣ ರಕ್ತಹೀನತೆ ಕೇವಲ ಒಂದು ಉದಾಹರಣೆಯಾಗಿದೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಡುವ ಅನೇಕ ಆನುವಂಶಿಕ ಕಾಯಿಲೆಗಳ ಬಗ್ಗೆ ಭಾರತದಲ್ಲಿ ಅರಿವಿನ ಕೊರತೆ ಇದೆ. ಜೀನೋಮ್ ಇಂಡಿಯಾ ಯೋಜನೆಯು ಭಾರತದಲ್ಲಿ ಅಂತಹ ಎಲ್ಲಾ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
“21ನೇ ಶತಮಾನದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೀವರಾಶಿಗಳ ಸಂಯೋಜನೆಯು ಜೈವಿಕ ಆರ್ಥಿಕತೆಯಾಗಿ ಅಭಿವೃದ್ಧಿ ಹೊಂದಿದ ಭಾರತಕ್ಕೆ ನಿರ್ಣಾಯಕ ಬುನಾದಿ ಹಾಕುತ್ತದೆ”. ಜೈವಿಕ ಆರ್ಥಿಕತೆಯ ಗುರಿ ನೈಸರ್ಗಿಕ ಸಂಪನ್ಮೂಲಗಳ ಅತ್ಯುತ್ತಮ ಬಳಕೆ, ಜೈವಿಕ ಆಧಾರಿತ ಉತ್ಪನ್ನಗಳು ಮತ್ತು ಸೇವೆಗಳ ಪ್ರಚಾರ ಮತ್ತು ಈ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿಯಾಗಿದೆ. ಜೈವಿಕ ಆರ್ಥಿಕತೆಯು ಸುಸ್ಥಿರ ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ವೇಗಗೊಳಿಸುತ್ತದೆ. ಕಳೆದ ದಶಕದಲ್ಲಿ ಭಾರತದ ಜೈವಿಕ ಆರ್ಥಿಕತೆಯು 2014ರಲ್ಲಿ ಇದ್ದ 10 ಶತಕೋಟಿ ಡಾಲರ್ ನಿಂದ ಇಂದು 150 ಶತಕೋಟಿ ಡಾಲರ್ ಗಿಂತ ಹೆಚ್ಚು ವೇಗವಾಗಿ ಬೆಳೆದಿದೆ. ಭಾರತವು ತನ್ನ ಜೈವಿಕ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಏರಿಸಲು ಶ್ರಮಿಸುತ್ತಿದೆ. ಇತ್ತೀಚೆಗೆ ಬಯೋ ಇ3 ನೀತಿ ಆರಂಭಿಸಲಾಗಿದೆ. ಈ ನೀತಿಯ ದೃಷ್ಟಿಕೋನ ಪ್ರಸ್ತಾಪಿಸಿದ ಶ್ರೀ ಮೋದಿ, ಐಟಿ ಕ್ರಾಂತಿಯಂತೆಯೇ ಜಾಗತಿಕ ಜೈವಿಕ ತಂತ್ರಜ್ಞಾನ ವಲಯದಲ್ಲಿ ಭಾರತವು ಸರದಾರನಾಗಿ ಹೊರಹೊಮ್ಮಲು ಇದು ಸಹಾಯ ಮಾಡುತ್ತದೆ. ಈ ಪ್ರಯತ್ನದಲ್ಲಿ ವಿಜ್ಞಾನಿಗಳ ಮಹತ್ವದ ಪಾತ್ರವನ್ನು ಅವರು ಗುರುತಿಸಿ, ಅವರಿಗೆ ಶುಭ ಹಾರೈಸಿದರು.
ಪ್ರಮುಖ ಔಷಧ ತಾಣವಾಗಿ ಭಾರತದ ವಿಕಸನಗೊಳ್ಳುತ್ತಿರುವ ಪಾತ್ರವನ್ನು ಎತ್ತಿ ತೋರಿಸಿದ ಪ್ರಧಾನಿ, ಕಳೆದ ದಶಕದಲ್ಲಿ ಭಾರತವು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ತೆಗೆದುಕೊಂಡಿದೆ, ಲಕ್ಷಾಂತರ ಭಾರತೀಯರಿಗೆ ಉಚಿತ ಚಿಕಿತ್ಸೆ ಒದಗಿಸಿದೆ, ಜನೌಷಧಿ ಕೇಂದ್ರಗಳ ಮೂಲಕ 80% ರಿಯಾಯಿತಿಯಲ್ಲಿ ಔಷಧಿಗಳನ್ನು ನೀಡಿದೆ, ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳನ್ನು ನಿರ್ಮಿಸಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತದ ಔಷಧ ಪರಿಸರ ವ್ಯವಸ್ಥೆಯು ತನ್ನ ಶಕ್ತಿಯನ್ನು ಇಡೀ ಜಗತ್ತಿಗೆ ಸಾಬೀತುಪಡಿಸಿದೆ. ಭಾರತದೊಳಗೆ ಔಷಧ ಉತ್ಪಾದನೆಗೆ ಬಲವಾದ ಪೂರೈಕೆ ಮತ್ತು ಮೌಲ್ಯ ಸರಪಳಿ ಸ್ಥಾಪಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜೀನೋಮ್ ಇಂಡಿಯಾ ಯೋಜನೆಯು ಈ ಪ್ರಯತ್ನಗಳನ್ನು ಮತ್ತಷ್ಟು ವೇಗಗೊಳಿಸುತ್ತದೆ ಮತ್ತು ಚೈತನ್ಯಗೊಳಿಸುತ್ತದೆ ಎಂದು ಅವರು ಹೇಳಿದರು.
“ಜಾಗತಿಕ ಸಮಸ್ಯೆಗಳ ಪರಿಹಾರಗಳಿಗಾಗಿ ಇಡೀಜಗತ್ತು ಭಾರತವನ್ನು ನೋಡುತ್ತಿದೆ, ಇದು ಭವಿಷ್ಯದ ಪೀಳಿಗೆಗೆ ಜವಾಬ್ದಾರಿ ಮತ್ತು ಅವಕಾಶ ಎರಡನ್ನೂ ನೀಡುತ್ತದೆ”. ಕಳೆದ ದಶಕದಲ್ಲಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಬಲವಾದ ಗಮನ ಹೊಂದಿರುವ ಭಾರತವು, ವಿಶಾಲವಾದ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ ಎಂದರು.
“10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ವಿದ್ಯಾರ್ಥಿಗಳಿಗೆ ಪ್ರತಿದಿನ ಹೊಸ ಪ್ರಯೋಗಗಳನ್ನು ನಡೆಸಲು ಅನುವು ಮಾಡಿಕೊಡುತ್ತಿವೆ”. ಯುವ ನಾವೀನ್ಯಕಾರರನ್ನು ಬೆಂಬಲಿಸಲು ದೇಶಾದ್ಯಂತ ನೂರಾರು ಅಟಲ್ ಇನ್ ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಿಎಚ್‌ಡಿ ಅಧ್ಯಯನ ಸಮಯದಲ್ಲಿ ಸಂಶೋಧನೆ ಬೆಂಬಲಿಸಲು ಪಿಎಂ ಸಂಶೋಧನಾ ಫೆಲೋಶಿಪ್ ಯೋಜನೆಯನ್ನು ಸಹ ಜಾರಿಗೆ ತರಲಾಗುತ್ತಿದೆ. ಬಹುಶಿಸ್ತೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನೆ ಉತ್ತೇಜಿಸಲು ರಾಷ್ಟ್ರೀಯ ಸಂಶೋಧನಾ ನಿಧಿ ಸ್ಥಾಪಿಸಲಾಗಿದೆ. ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವು ವಿಜ್ಞಾನ, ಎಂಜಿನಿಯರಿಂಗ್, ಪರಿಸರ ಮತ್ತು ಆರೋಗ್ಯದಂತಹ ಕ್ಷೇತ್ರಗಳನ್ನು ಬೆಂಬಲಿಸುತ್ತಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ಮಾಡುವ ಮತ್ತು ಯುವ ವಿಜ್ಞಾನಿಗಳನ್ನು ಬೆಂಬಲಿಸುವ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಹೂಡಿಕೆ ಹೆಚ್ಚಿಸಲು ಸರ್ಕಾರವು 1 ಲಕ್ಷ ಕೋಟಿ ರೂಪಾಯಿ ಮೊತ್ತದ ನಿಧಿ ಸ್ಥಾಪಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.
“ಒಂದು ರಾಷ್ಟ್ರ ಒಂದು ಚಂದಾದಾರಿಕೆ”ಯ ಸರ್ಕಾರದ ಇತ್ತೀಚಿನ ಮಹತ್ವದ ನಿರ್ಧಾರವನ್ನು ಉಲ್ಲೇಖಿಸಿದ ಪ್ರಧಾನಿ, ಈ ಉಪಕ್ರಮವು ಭಾರತೀಯ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಪ್ರತಿಷ್ಠಿತ ಜಾಗತಿಕ ನಿಯತಕಾಲಿಕೆಗಳಿಗೆ ಸುಲಭ ಮತ್ತು ವೆಚ್ಚ-ಮುಕ್ತ ಪ್ರವೇಶವನ್ನು ಖಚಿತಪಡಿಸುತ್ತದೆ. ಈ ಪ್ರಯತ್ನಗಳು ಭಾರತವನ್ನು 21ನೇ ಶತಮಾನದ ಜ್ಞಾನ ಮತ್ತು ನಾವೀನ್ಯತೆ ಕೇಂದ್ರವನ್ನಾಗಿ ಮಾಡಲು ಹೆಚ್ಚಿನ ಕೊಡುಗೆ ನೀಡುತ್ತವೆ ಎಂದು ಪ್ರಧಾನ ಮಂತ್ರಿ ಹೇಳಿದರು.
“ಭಾರತದ ಜನಪರ ಆಡಳಿತ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಗತ್ತಿಗೆ ಹೊಸ ಮಾದರಿಯನ್ನು ಸ್ಥಾಪಿಸಿದೆ”. ಜೀನೋಮ್ ಇಂಡಿಯಾ ಯೋಜನೆಯು ಜೆನೆಟಿಕ್ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ವರ್ಚಸ್ಸನ್ನು ಇದೇ ರೀತಿ ಬಲಪಡಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿ ಅವರು, ಜೀನೋಮ್ ಇಂಡಿಯಾ ಯೋಜನೆಯ ಯಶಸ್ಸಿಗೆ ಶುಭ ಹಾರೈಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
*****
The Genome India Project marks a defining moment in the country's biotechnology landscape. My best wishes to those associated with the project. https://t.co/7xN8U9y4Ds
— Narendra Modi (@narendramodi) January 9, 2025