ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2ನೇ ದಿನದ ಜಿ7 ಶೃಂಗಸಭೆಯ ಅಧಿವೇಶನದಲ್ಲಿಂದು 2 ವರ್ಚುವಲ್ ಕಲಾಪಗಳಲ್ಲಿ ಪಾಲ್ಗೊಂಡಿದ್ದರು. ‘ಒಟ್ಟಾಗಿ ಸೇರಿ ಮರುನಿರ್ಮಾಣ – ಮುಕ್ತ ಸಮಾಜ ಮತ್ತು ಆರ್ಥಿಕತೆಗಳು’ ಹಾಗೂ ‘ಹಸಿರು ಮರುನಿರ್ಮಾಣ: ಹವಾಮಾನ ಮತ್ತು ಪ್ರಕೃತಿ’ ಈ ಎರಡು ವಿಷಯಗಳ ಕುರಿತು 2 ಕಲಾಪಗಳು ಜರುಗಿದವು.
ಮುಕ್ತ ಸಮಾಜ ಮತ್ತು ಆರ್ಥಿಕತೆ ವಿಷಯಕ್ಕೆ ಮುಖ್ಯ ಭಾಷಣಕಾರರಾಗಿ ಆಹ್ವಾನಿತರಾಗಿದ್ದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರಜಾಸತ್ತೆ ಮತ್ತು ಸ್ವತಂತ್ರ್ಯ ಭಾರತದ ನಾಗರೀಕತೆಯ ವೈಶಿಷ್ಟ್ಯದ ಭಾಗವಾಗಿವೆ ಎಂದು ನೆನಪು ಮಾಡಿದರು. ಮುಕ್ತ ಅಥವಾ ತೆರೆದ ಸಮಾಜಗಳು ವಿಶೇಷವಾಗಿ ಸುಳ್ಳು ಮಾಹಿತಿ, ಅಪಪ್ರಚಾರ ಅಥವಾ ವದಂತಿ ಹಾಗೂ ಸೈಬರ್ ದಾಳಿಗಳಿಗೆ ಪದೇಪದೆ ತುತ್ತಾಗುತ್ತಿವೆ ಎಂದು ಹಲವು ನಾಯಕರು ವ್ಯಕ್ತಪಡಿಸಿದ ಕಳವಳಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ ಅವರು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಮುನ್ನಡೆಸಲು ಸೈಬರ್ ವೇದಿಕೆಯನ್ನು ಒಂದು ಮಾರ್ಗವಾಗಿ ಉಳಿಸಿಕೊಳ್ಳುವುದನ್ನು ನಾವು ಖಚಿತಪಡಿಸಬೇಕೆ ಹೊರತು, ಅದನ್ನು ಅಸ್ಥಿರಗೊಳಿಸಬಾರದು ಎಂದು ಅವರು ಒತ್ತಿ ಹೇಳಿದರು. ಪ್ರಜಾಸತ್ತಾತ್ಮಕವಲ್ಲದ ಮತ್ತು ಅಸಮಾನತೆಯ ಸ್ವರೂಪದ ಜಾಗತಿಕ ಆಡಳಿತ ಸಂಸ್ಥೆಗಳ ಕಾರ್ಯವೈಖರಿಯ ಮೇಲೆ ಬೆಳಕು ಚೆಲ್ಲಿದ ಅವರು, ಮುಕ್ತ ಸಮಾಜಗಳ ನಿರ್ಮಾಣಕ್ಕೆ ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆಯ ಬದ್ಧತೆಯು ಅತ್ಯುತ್ತಮ ಸಂಕೇತವಾಗಲಿದೆ ಎಂದರು.
ಶೃಂಗಸಭೆಯ ನಾಯಕರು ಸಭೆಯ ಅಂತ್ಯದಲ್ಲಿ ಮುಕ್ತ ಅಥವಾ ತೆರೆದ ಸಮಾಜ ಮತ್ತು ಆರ್ಥಿಕತೆ ಕುರಿತ ಪ್ರಧಾನಮಂತ್ರಿ ಮೋದಿ ಅವರ ಹೇಳಿಕೆಯನ್ನು ಅಂಗೀಕರಿಸಿದರು.
ಹವಾಮಾನ ಬದಲಾವಣೆ ಕುರಿತ ಕಲಾಪದಲ್ಲಿ ಪ್ರಧಾನ ಮಂತ್ರಿ ಅವರು, ಸಂಕುಚಿತ ಮನಸ್ಥಿತಿಯಿಂದ, ಭಾವನೆಗಳಿಂದ ನೋಡುತ್ತಿರುವ ಮತ್ತು ವರ್ತಿಸುತ್ತಿರುವ ರಾಷ್ಟ್ರಗಳಿಂದ ಪೃಥ್ವಿಯ ಪರಿಸರ, ಜೀವವೈವಿಧ್ಯ ಮತ್ತು ಸಾಗರಗಳನ್ನು ಸಂರಕ್ಷಿಸಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಹವಾಮಾನ ಬದಲಾವಣೆಗೆ ಸಂಘಟಿತ ಕ್ರಮಗಳು ಅತ್ಯಗತ್ಯ ಎಂದು ಅವರು ಕರೆ ನೀಡಿದರು.
ಹವಾಮಾನ ಬದಲಾವಣೆಗೆ ಭಾರತ ಹೊಂದಿರುವ ಅಚಲ ಬದ್ಧತೆ ಕುರಿತು ಪ್ರಸ್ತಾಪಿಸಿದ ಅವರು, 2030ರ ಹೊತ್ತಿಗೆ ಭಾರತೀಯ ರೈಲ್ವೆಯು ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧನೆಗೆ ಗುರಿ ಹಾಕಿಕೊಂಡಿದೆ. ಆ ಬದ್ಧತೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹವಾಮಾನ ಬದಲಾವಣೆಯ ಪ್ಯಾರಿಸ್ ಒಪ್ಪಂದದ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಜಿ–20 ರಾಷ್ಟ್ರಗಳ ಪೈಕಿ ಭಾರತವೊಂದೇ ಸಂಪೂರ್ಣ ಬದ್ಧತೆ ತೋರುವ ಹಳಿಯಲ್ಲಿದೆ. ಭಾರತ ಚಾಲನೆ ನೀಡಿರುವ 2 ಜಾಗತಿಕ ಉಪಕ್ರಮಗಳಿಗೆ ಹೆಚ್ಚುತ್ತಿರುವ ಪರಿಣಾಮಕಾರಿತ್ವ ಕುರಿತು ಬೆಳಕು ಚೆಲ್ಲಿದ ಅವರು, ಭಾರತ ಸ್ಥಾಪಿಸಿರುವ ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟ ಮತ್ತು ವಿಪತ್ತು ನಿರ್ವಹಣಾ ಮೂಲಸೌಕರ್ಯ ಮೈತ್ರಿಕೂಟ(ಸಿಡಿಆರ್|ಐ)ಕ್ಕೆ ಜಾಗತಿಕ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಒತ್ತಿ ಹೇಳಿದರು.
ಹವಾಮಾನ ಬದಲಾವಣೆಯ ಕ್ರಮಗಳು ಮತ್ತು ಉಪಕ್ರಮಗಳನ್ನು ಕೈಗೊಳ್ಳಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಣಕಾಸಿನ ಸುಗಮ ಲಭ್ಯತೆಗೆ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸಿದ ಮೋದಿ ಅವರು, ಹವಾಮಾನ ಬದಲಾವಣೆಯ ಎಲ್ಲಾ ಸಮಸ್ಯೆಗಳು ಅಂದರೆ ನಿರ್ಮೂಲನೆ, ಅಳವಡಿಕೆ, ತಂತ್ರಜ್ಞಾನ ವರ್ಗಾವಣೆ, ಹವಾಮಾನ ಹಣಕಾಸು, ಈಕ್ವಿಟಿ, ಹವಾಮಾನ ನ್ಯಾಯ ಮತ್ತು ಜೀವನಶೈಲಿ ಬದಲಾವಣೆಯಂತಹ ಪರಿಹಾರಗಳಿಗೆ ಸಮಗ್ರ ಕಾರ್ಯವಿಧಾನ ರೂಪಿಸಬೇಕು ಎಂದು ನರೇಂದ್ರ ಮೋದಿ ಕರೆ ನೀಡಿದರು.
ಮುಕ್ತ ಮತ್ತು ಪ್ರಜಾಸತ್ತಾತ್ಮಕ ಸಮಾಜ ಮತ್ತು ಆರ್ಥಿಕತೆಯಲ್ಲಿ ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಆರ್ಥಿಕ ಚೇತರಿಕೆಯಂತಹ ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಜಾಗತಿಕ ಒಗ್ಗಟ್ಟು ಮತ್ತು ಏಕತೆ ಕಾಪಾಡಬೇಕೆಂಬ ಪ್ರಧಾನ ಮಂತ್ರಿಗಳ ಸಂದೇಶವನ್ನು ಜಿ7 ಶೃಂಗಸಭೆಯ ನಾಯಕರು ಮುಕ್ತಕಂಠದಿಂದ ಸ್ವಾಗತಿಸಿ, ಸ್ವೀಕರಿಸಿದರು(ಅಂಗೀಕರಿಸಿದರು).
***
Was happy to address the @G7 Session on Open Societies as a Lead Speaker. Democracy and freedom are part of India's civilizational ethos, and find expression in the vibrancy and diversity of India's society. https://t.co/Tjw5vPcGxr
— Narendra Modi (@narendramodi) June 13, 2021
Also participated in the @G7 session on Climate and reiterated India's strong commitment to climate action. India is the only G20 country on track to meet its Paris Commitments. And Indian Railways is committed to "Net Zero" by 2030.
— Narendra Modi (@narendramodi) June 13, 2021