ಮುಂಬರುವ ಜಿ20 ಶೃಂಗ ಸಭೆ ಹಿನ್ನೆಲೆಯಲ್ಲಿ ದೆಹಲಿಯ ವಿವಿಧ ಸ್ಥಳಗಳಿಗೆ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರಾದ ಡಾ.ಪಿ.ಕೆ. ಮಿಶ್ರಾ ಅವರು ದೆಹಲಿಯ ಉಪ ರಾಜ್ಯಪಾಲರಾದ ಗೌರವಾನ್ವಿತ ಶ್ರೀ ವಿನಯ್ ಕುಮಾರ್ ಸೆಕ್ಸೇನಾ ಅವರೊಂದಿಗೆ ಭೇಟಿ ನೀಡಿ ಸನ್ನದ್ಧತೆ ಕುರಿತು ಪರಿಶೀಲನೆ ನಡೆಸಿದರು.
ಜಿ20 ಶೃಂಗ ಸಭೆಯ ಸಿದ್ಧತೆಗಾಗಿ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಾಮರ್ಥ್ಯದ ಮೇರೆಗೆ ಶೃಂಗಸಭೆಯನ್ನು ಸ್ಮರಣೀಯಗೊಳಿಸಲು ಎಲ್ಲಾ ಸಿದ್ಧತೆಗಳು ಸುಗಮವಾಗಿ ನಡೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಾ. ಪಿ.ಕೆ. ಮಿಶ್ರಾ ಅವರು ಪರಿಶೀಲನೆಯ ಕಸರತ್ತು ನಡೆಸಿದರು. ಎಲ್ಲಾ ದೇಶಗಳ ಮುಖ್ಯಸ್ಥರು ಮತ್ತು ಅಂತರರಾಷ್ಟ್ರೀಯ ಗಣ್ಯರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದು, ಭಾರತದ ಸಂಸ್ಕೃತಿ ಮತ್ತು ವಿಶ್ವಖ್ಯಾತಿಯ ಅನುಭವವನ್ನು ಖಚಿತಪಡಿಸಲು ಸ್ಥಳ ಪರಿಶೀಲನೆ ಕೈಗೊಂಡರು.
ಭಾರತ ಮಂಟಪ, ರಾಜಘಾಟ್, ಸಿ ಹೆಕ್ಸಗಾನ್, ಇಂಡಿಯಾ ಗೇಟ್, ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು ಗಣ್ಯರ ತಂಗುದಾಣ, ಏರೋಸಿಟಿ, ಪ್ರಮುಖ ರಸ್ತೆಗಳ ಪ್ರಮುಖ ಸ್ಥಳಗಳು ಒಳಗೊಂಡಂತೆ 20 ಸ್ಥಳಗಳಿಗೆ ಭೇಟಿ ನೀಡಿದರು.
ದೆಹಲಿ ಸುತ್ತಮುತ್ತ ಮತ್ತು ರಾಜಘಾಟ್ ಹೊರ ಭಾಗವನ್ನು ಸೌಂದರ್ಯೀಕರಣಗೊಳಿಸಲಾಗಿದೆ. ಭಾರತ ಮಂಟಪದಲ್ಲಿ ಶಿವ – ನಟರಾಜನ ಪುತ್ಥಳಿ ಅಳವಡಿಸಲಾಗುತ್ತಿದೆ. 27 ಅಡಿ ಉದ್ದದ ನಟರಾಜನ ಮೂರ್ತಿ 20 ಟನ್ ತೂಕವಿದೆ. ಅಷ್ಟ-ಧಾತು ಸಂಪ್ರದಾಯಿಕ ವಿನ್ಯಾಸದಲ್ಲಿ ಇದನ್ನು ನಿರ್ಮಿಸಲಾಗಿದೆ. ಶಿವ ನಟರಾಜ ನೃತ್ಯದ ದೇವತೆಯಾಗಿದ್ದು, ಜಿ20 ಶೃಂಗಸಭೆ ನಡೆಯಲಿರುವ ಸಂದರ್ಭದಲ್ಲಿ ಕಂಚಿನ ನಟರಾಜ ವಿಗ್ರಹವನ್ನು ಭಾರತ ಮಂಟಪದ ಎದುರುಗಡೆ ಅಳವಡಿಸಲಾಗುತ್ತಿದೆ.
ಪ್ರಧಾನ ಕಾರ್ಯದರ್ಶಿ ಅವರು ಸಂಚಾರದ ಪರಿಸ್ಥಿತಿ ಕುರಿತಂತೆಯೂ ಪರಿಶೀಲಿಸಿದರು ಮತ್ತು ಜನ ಸಮಾನ್ಯರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪರ್ಯಾಯ ವ್ಯವಸ್ಥೆಗಳ ಕುರಿತು ಮುಂದಾಗಿಯೇ ಮಾಹಿತಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಗಣ್ಯರನ್ನು ಸ್ವಾಗತಿಸುವಾಗ ತೊಂದರೆ ಎದುರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಸಿದ್ಧತೆಗಳ ಪರಿಶೀಲನೆ ಮಾಡಿದರು.
ಡಾ. ಮಿಶ್ರಾ ಅವರು ಪಾಲಂ ವಾಯು ಪಡೆಯ ವಾಯು ನೆಲೆಯ ತಾಂತ್ರಿಕ ಸ್ಥಳಕ್ಕೆ ಭೇಟಿ ನೀಡಿ, ವಿವಿಧ ದೇಶಗಳ ಮುಖಸ್ಥರು ಬಂದಿಳಿಯುವ ವಿಮಾನಗಳ ಇಳಿದಾಣದ ಸ್ಥಿತಿಗತಿ ಕುರಿತು ಪರಿಶೀಲಿಸಿದರು. ವಿದೇಶಿ ಗಣ್ಯರನ್ನು ಸ್ವಾಗತಿಸಲು, ವಿಮಾನಗಳನ್ನು ನಿಲ್ಲಿಸಲು ಮಾಡಿರುವ ವ್ಯವಸ್ಥೆ, ವಿಶ್ರಾಂತಿ ಪಡೆಯುವ ಸ್ಥಳ ಮತ್ತು ಇತರೆ ಸೌಲಭ್ಯಗಳ ಕುರಿತು ಹಿರಿಯ ವಾಯು ಪಡೆ ಅಧಿಕಾರಿಗಳು ಮಾಹಿತಿ ನೀಡಿದರು. ವಾಯು ಪಡೆಯ ತಾಂತ್ರಿಕ ಸ್ಥಳದಲ್ಲಿ ತುರ್ತು ವೈದ್ಯಕೀಯ ಸೌಲಭ್ಯ ಕೂಡ ಕಲ್ಪಿಸಲಾಗಿದೆ.
ಉಪ ರಾಜ್ಯಪಾಲರು ದೆಹಲಿಯಲ್ಲಿ ವ್ಯಾಪಕ ಸೌಂದರ್ಯೀಕರಣ ಚಟುವಟಿಕೆ ಆರಂಭಿಸಿದ್ದು, ಇದು ನಗರದ ವಾತಾವರಣಕ್ಕೆ ಪೂರಕವಾಗಿದೆ. ನಿರುಪಯುಕ್ತವಾದ ಕಟ್ಟಡಗಳನ್ನು ನವೀಕರಿಸಲಾಗಿದೆ. ಸ್ವಚ್ಚತಾ ಅಭಿಯಾನದ ಜೊತೆಗೆ ಕಣ್ಮನ ಸೆಳೆಯುವ ನೀರಿನ ಕಾರಂಜಿಗಳನ್ನು ಅಳವಡಿಸಲಾಗಿದೆ. ದೇಶದ ವೈವಿಧ್ಯತೆಯನ್ನು ಬಿಂಬಿಸುವ ಪ್ರತಿಮೆಗಳು, ಭಿತ್ತಿಚಿತ್ರಗಳನ್ನು ನಗರದಾದ್ಯಂತ ಅಳವಡಿಸಲಾಗಿದೆ. ಇದು ಪ್ರಯಾಣಿಕರು ಮತ್ತು ನಾಗರಿಕರ ಕಣ್ಣಿಗೆ ಹಬ್ಬವಾಗಿ ಪರಿಣಮಿಸಿದೆ. ಪ್ರಮುಖ ಸ್ಥಳಗಳಲ್ಲಿ ಜಿ20 ರಾಷ್ಟ್ರಗಳ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗಿದೆ ಮತ್ತು ಜಿ20 ದೇಶಗಳ ರಾಷ್ಟ್ರೀಯ ಪ್ರಾಣಿಗಳನ್ನು ಅಡಕಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜನ ಸಾಮಾನ್ಯರಿಗೆ ಎದುರಾಗುವ ಅನಾನುಕೂಲತೆಯನ್ನು ತಪ್ಪಿಸಲು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು ಮಿನಿ ಬಸ್ ನಲ್ಲಿ ಸಂಚರಿಸಿದರು. ಈ ನಗರ ಭೇಟಿ ಸಂಜೆ 5 ರಿಂದ 8:30 ಗಂಟೆ ನಡುವೆ ನಡೆಯಿತು.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಸಲಹೆಗಾರರಾದ ಶ್ರೀ ಅಮಿತ್ ಖರೆ, ಮುಖ್ಯ ಕಾರ್ಯದರ್ಶಿ ಶ್ರೀ ತರುನ್ ಕಪೂರ್, ಪೊಲೀಸ್ ಆಯುಕ್ತರು, ಇನ್ನಿತರೆ ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನೆಯಲ್ಲಿ ಭಾಗವಹಿಸಿದ್ದರು.
***