ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ವಿಶೇಷ ಪ್ರತಿನಿಧಿ ಶ್ರೀಮತಿ ಮಾಮಿ ಮಿಜುಟೋರಿ; ಶ್ರೀ ಅಮಿತಾಭ್ ಕಾಂತ್, ಭಾರತದ ಜಿ20 ಶೆರ್ಪಾ; ಜಿ20 ಸದಸ್ಯರು ಹಾಗೂ ಅತಿಥಿ ದೇಶಗಳ ಸಹೋದ್ಯೋಗಿಗಳು; ಅಂತರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು; ಕಾರ್ಯನಿರತ ಗುಂಪಿನ ಅಧ್ಯಕ್ಷರಾದ ಶ್ರೀ ಕಮಲ್ ಕಿಶೋರ್; ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸಹೋದ್ಯೋಗಿಗಳು, ಮಹಿಳೆಯರೇ ಮತ್ತು ಮಹನೀಯರೇ,
ವಿಪತ್ತು ಅಪಾಯ ಕಡಿತ ಕಾರ್ಯನಿರತ ಗುಂಪಿನ ಮೂರನೇ ಸಭೆಯಲ್ಲಿ ನಿಮ್ಮೊಂದಿಗೆ ಇರಲು ನನಗೆ ಸಂತೋಷವಾಗಿದೆ. ಈ ವರ್ಷದ ಮಾರ್ಚ್ನಲ್ಲಿ ನಾವು ಮೊದಲ ಬಾರಿಗೆ ಗಾಂಧಿನಗರದಲ್ಲಿ ಭೇಟಿಯಾಗಿದ್ದೆವು. ಅಂದಿನಿಂದ ಜಗತ್ತು ಕೆಲವು ಅಭೂತಪೂರ್ವ ವಿಪತ್ತುಗಳನ್ನು ಕಂಡಿದೆ. ಬಹುತೇಕ ಇಡೀ ಉತ್ತರ ಗೋಳಾರ್ಧದ ನಗರಗಳು ಬೃಹತ್ ಶಾಖದ ಅಲೆಗಳ ಹಿಡಿತದಲ್ಲಿವೆ. ಕೆನಡಾದಲ್ಲಿ ಕಾಡ್ಗಿಚ್ಚು ಮತ್ತು ಮಬ್ಬು , ಹಾಗೂ ಇದರಿಂದಾಗಿ ಉತ್ತರ ಅಮೆರಿಕಾದ ಅನೇಕ ಭಾಗಗಳಲ್ಲಿನ ನಗರಗಳಿಗೆ ವಿಪರೀತ ಪರಿಣಾಮ ಬೀರಿತು. ಇಲ್ಲಿ ಭಾರತದಲ್ಲಿ, ನಮ್ಮ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ನಾವು ಪ್ರಮುಖ ಚಂಡಮಾರುತ ರೀತಿಯ ಚಟುವಟಿಕೆಯನ್ನು ನೋಡಿದ್ದೇವೆ. ದೆಹಲಿಯು 45 ವರ್ಷಗಳಲ್ಲೇ ಅತ್ಯಂತ ಭೀಕರ ಜಲಪ್ರವಾಹವನ್ನು ಅನುಭವಿಸಿದೆ! ಮತ್ತು ನಾವು ಇನ್ನೂ ಮಾನ್ಸೂನ್ ಋತುವಿನ ಅರ್ಧದಾರಿಯನ್ನೂ ಕಳೆದೇ ಇಲ್ಲ!
ಸ್ನೇಹಿತರೇ,
ಹವಾಮಾನ ಬದಲಾವಣೆ ಸಂಬಂಧಿತ ವಿಪತ್ತುಗಳ ಪರಿಣಾಮಗಳು ಇಂದು ನಮ್ಮೆದುರಲ್ಲಿ ಇಲ್ಲೇ ಇರುವಾಗ ದೂರದ ಭವಿಷ್ಯದ ದಿನಗಳಿಗಾಗಿ ಕಾಯಬೇಕಾಗಿಲ್ಲ. ಅವುಗಳು ಈಗಾಗಲೇ ಇಲ್ಲಿವೆ. ಅವು ಅಗಾಧ ಗಾತ್ರಗಳಲ್ಲಿವೆ. ಅವು ಪರಸ್ಪರ ಸಂಬಂಧ ಹೊಂದಿವೆ. ಮತ್ತು ಅವು ಗ್ರಹದಾದ್ಯಂತ ಎಲ್ಲರ ಮೇಲೆ ಪರಿಣಾಮ ಬೀರುತ್ತವೆ. ಇಂದು ಜಗತ್ತು ಎದುರಿಸುತ್ತಿರುವ ಸವಾಲುಗಳು ಈ ಕಾರ್ಯನಿರತ ಗುಂಪಿನ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ. ಕಳೆದ ನಾಲ್ಕು ತಿಂಗಳ ಅಲ್ಪಾವಧಿಯಲ್ಲಿ, ಕಾರ್ಯನಿರತ ಗುಂಪು ಸಾಕಷ್ಟು ಪ್ರಗತಿ ಸಾಧಿಸಿದೆ ಮತ್ತು ಉತ್ತಮ ವೇಗವನ್ನು ಸೃಷ್ಟಿಸಿದೆ. ಆದಾಗ್ಯೂ, ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ಈ ಕಾರ್ಯನಿರತ ಗುಂಪಿನ ಮಹತ್ವಾಕಾಂಕ್ಷೆಯು ನಾವು ಎದುರಿಸುತ್ತಿರುವ ಸಮಸ್ಯೆಗಳ ಪ್ರಮಾಣಕ್ಕೆ ಹೊಂದಿಕೆಯಾಗಬೇಕು. ಹೆಚ್ಚುತ್ತಿರುವ ಬದಲಾವಣೆಯ ಸಮಯ ಕಳೆದಿದೆ. ಹೊಸ ವಿಪತ್ತು ಅಪಾಯಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅಸ್ತಿತ್ವದಲ್ಲಿರುವ ವಿಪತ್ತು ಅಪಾಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಮಗೆ ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ವ್ಯವಸ್ಥೆಗಳ ರೂಪಾಂತರದ ಅಗತ್ಯವಿದೆ. ವಿಭಿನ್ನ ರಾಷ್ಟ್ರೀಯ ಮತ್ತು ಜಾಗತಿಕ ಪ್ರಯತ್ನಗಳು ತಮ್ಮ ಸಾಮೂಹಿಕ ಪ್ರಭಾವವನ್ನು ಹೆಚ್ಚಿಸಲು ಸಕ್ರಿಯವಾಗಿ ಒಮ್ಮುಖವನ್ನು ಬಯಸುತ್ತವೆ ಎಂಬುದು ಸತ್ಯ. ಸಂಕುಚಿತ ಸಾಂಸ್ಥಿಕ ದೃಷ್ಟಿಕೋನಗಳಿಂದ ನಡೆಸಲ್ಪಡುವ ವಿಘಟಿತ ಪ್ರಯತ್ನಗಳನ್ನು ನಾವು ಪಡೆಯಲು ಸಾಧ್ಯವಿಲ್ಲ. ನಾವು ಸಮಸ್ಯೆಯನ್ನು ಪರಿಹರಿಸುವ ವಿಧಾನದಿಂದ ನಡೆಸಲ್ಪಡಬೇಕು.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ “ಎಲ್ಲರಿಗೂ ಆರಂಭಿಕ ಎಚ್ಚರಿಕೆ” ಉಪಕ್ರಮವು ಈ ವಿಧಾನದ ಒಂದು ಉದಾಹರಣೆಯಾಗಿದೆ. “ಮುಂಚಿನ ಎಚ್ಚರಿಕೆ ಮತ್ತು ಆರಂಭಿಕ ಕ್ರಿಯೆ” ಯನ್ನು ಜಿ20 ತನ್ನ ಐದು ಆದ್ಯತೆಗಳಲ್ಲಿ ಒಂದಾಗಿ ಗುರುತಿಸಿದೆ ಮತ್ತು ಅದರ ಹಿಂದೆ ಸಂಪೂರ್ಣ ಒತ್ತಡವನ್ನು ಹಾಕುತ್ತಿದೆ. ವಿಪತ್ತು ಅಪಾಯ ಕಡಿತದ ಹಣಕಾಸು ಕ್ಷೇತ್ರದಲ್ಲಿ, ಹಾಗೂ ವಿಪತ್ತು ಅಪಾಯ ಕಡಿತದ ಇತರ ಎಲ್ಲಾ ಅಂಶಗಳಿಗೆ ಹಣಕಾಸು ಒದಗಿಸಲು ನಾವು ಎಲ್ಲಾ ಹಂತಗಳಲ್ಲಿ ರಚನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ನಾವು ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಹಣಕಾಸು ಒದಗಿಸುವ ವಿಧಾನವನ್ನು ಸಂಪೂರ್ಣವಾಗಿ ಮಾರ್ಪಡಿಸಿದ್ದೇವೆ. ವಿಪತ್ತು ಪ್ರತಿಕ್ರಿಯೆಗೆ ಮಾತ್ರವಲ್ಲದೆ ವಿಪತ್ತು ತಗ್ಗಿಸುವಿಕೆ, ಸನ್ನದ್ಧತೆ ಮತ್ತು ಚೇತರಿಕೆಗೆ ಹಣಕಾಸು ಒದಗಿಸಲು ನಾವು ಈಗ ಊಹಿಸಬಹುದಾದ ಕಾರ್ಯವಿಧಾನವನ್ನು ಹೊಂದಿದ್ದೇವೆ. ಜಾಗತಿಕ ಮಟ್ಟದಲ್ಲಿ ನಾವು ಸಮಾನವಾದ ವ್ಯವಸ್ಥೆಗಳನ್ನು ಹೊಂದಬಹುದೇ? ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಲಭ್ಯವಿರುವ ಹಣಕಾಸಿನ ವಿವಿಧ ವಿಧಾನಗಳ ನಡುವೆ ನಾವು ಹೆಚ್ಚಿನ ಒಮ್ಮುಖವನ್ನು ಅನುಸರಿಸುವ ಅಗತ್ಯವಿದೆ. ಹವಾಮಾನ ಹಣಕಾಸು ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಹಣಕಾಸಿನ ಅವಿಭಾಜ್ಯ ಅಂಗವಾಗಿರಬೇಕು. ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಖಾಸಗಿ ಹಣಕಾಸು ಸಜ್ಜುಗೊಳಿಸುವುದು ಒಂದು ಸವಾಲಾಗಿದೆ, ಹಾಗೂ ಇದು ಇಲ್ಲದೆ ನಾವು ಎಲ್ಲಾ ವಿಪತ್ತು ಅಪಾಯ ಕಡಿತದ ಅಗತ್ಯಗಳನ್ನು ಪರಿಹರಿಸುವಲ್ಲಿ ಹೆಚ್ಚು ದೂರ ಹೋಗಲು ಸಾಧ್ಯವಾಗುವುದಿಲ್ಲ. ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಖಾಸಗಿ ಹಣಕಾಸುಗಳನ್ನು ಆಕರ್ಷಿಸಲು ಸರ್ಕಾರಗಳು ಯಾವ ರೀತಿಯ ಸಕ್ರಿಯಗೊಳಿಸುವ ವಾತಾವರಣವನ್ನು ಸೃಷ್ಟಿಸಬೇಕು? ಈ ಕ್ಷೇತ್ರಗಳಲ್ಲಿ ಜಿ20 ವೇಗಗತಿಯನ್ನು ಹೇಗೆ ಉಂಟುಮಾಡುತ್ತದೆ ಮತ್ತು ವಿಪತ್ತು ಅಪಾಯ ಕಡಿತದಲ್ಲಿ ಖಾಸಗಿ ಹೂಡಿಕೆಯು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಅಭಿವ್ಯಕ್ತಿ ಮಾತ್ರವಲ್ಲದೆ ಸಂಸ್ಥೆಗಳ ಪ್ರಮುಖ ವ್ಯವಹಾರದ ಭಾಗವಾಗಿದೆ ಎಂದು ನಾವು ಮೊದಲು ಖಚಿತಪಡಿಸಿಕೊಳ್ಳ ಬೇಕಾಗಿದೆ.
ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕ್ಷೇತ್ರದಲ್ಲಿ, ಕೆಲವು ವರ್ಷಗಳ ಹಿಂದೆ ಹಲವಾರು ಜಿ20 ರಾಷ್ಟ್ರಗಳು, ವಿಶ್ವಸಂಸ್ಥೆ ಮತ್ತು ಇತರರೊಂದಿಗೆ ಸಹಭಾಗಿತ್ವದಲ್ಲಿ ನಾವು ಸ್ಥಾಪಿಸಿದ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟದ ಪ್ರಯೋಜನಗಳನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಒಕ್ಕೂಟದ ಕೆಲಸವು ದೇಶಗಳು – ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳು ಸೇರಿದಂತೆ – ತಮ್ಮ ಗುಣಮಟ್ಟವನ್ನು ನವೀಕರಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೆಚ್ಚು ಅಪಾಯದ-ಮಾಹಿತಿ ಹೂಡಿಕೆಗಳನ್ನು ಮಾಡಲು ಅಪಾಯಗಳ ಉತ್ತಮ ಮೌಲ್ಯಮಾಪನಗಳು ಮತ್ತು ಮಾನದಂಡಗಳನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತದೆ. ಈ ಆಲೋಚನೆಗಳನ್ನು ಅಳೆಯುವ ಕಡೆಗೆ ನಾವು ಕೆಲಸ ಮಾಡುವುದು ಮುಖ್ಯ! ನಾವು ಪ್ರಾರಂಭಿಕ ಯೋಜನೆಗಳನ್ನು ಮೀರಿ ದೀರ್ಘಾವಧಿಯಲ್ಲಿ ಯೋಚಿಸಬೇಕು ಮತ್ತು ನಮ್ಮ ಉಪಕ್ರಮಗಳನ್ನು ಬೃಹತ್ ಪ್ರಮಾಣಕ್ಕಾಗಿ ವಿನ್ಯಾಸಗೊಳಿಸಬೇಕು. ಕಳೆದ ಕೆಲವು ವರ್ಷಗಳಿಂದ ನಮಗೆ, ವಿಪತ್ತುಗಳ ನಂತರ “ಬಿಲ್ಡಿಂಗ್ ಬ್ಯಾಕ್ ಬೆಟರ್” ನಲ್ಲಿ ಹೆಚ್ಚು ಪ್ರಾಯೋಗಿಕ ಅನುಭವವಿದೆ, ಆದರೆ ಕೆಲವು ಉತ್ತಮ ಅಭ್ಯಾಸಗಳನ್ನು ಸಾಂಸ್ಥಿಕಗೊಳಿಸಲು ನಾವು ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. “ಪ್ರತಿಕ್ರಿಯೆಗಾಗಿ ಸಿದ್ಧತೆ” ಯಂತೆ ನಾವು ಹಣಕಾಸಿನ ವ್ಯವಸ್ಥೆಗಳು, ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಸಾಮರ್ಥ್ಯಗಳಿಂದ ಆಧಾರವಾಗಿರುವ “ಚೇತರಿಕೆಗಾಗಿ ಸಿದ್ಧತೆ” ಗೆ ಒತ್ತು ನೀಡಬೇಕಾಗಿದೆ.
ಸ್ನೇಹಿತರೇ,
ಕಾರ್ಯನಿರತ ಗುಂಪು ಅನುಸರಿಸಿದ ಎಲ್ಲಾ ಐದು ಆದ್ಯತೆಗಳಲ್ಲಿ, ಎಲ್ಲಾ ವಿತರಣೆಗಳಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ ಎಂಬುದುನ್ನು ಅರಿತು ನನಗೆ ಸಂತೋಷವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ನೀವು ಚರ್ಚಿಸಲಿರುವ ಸಂವಹನದ ಶೂನ್ಯ ಕರಡನ್ನು ನಾನು ನೋಡಿದ್ದೇನೆ. ಇದು ಜಿ20 ರಾಷ್ಟ್ರಗಳಿಗೆ ವಿಪತ್ತು ಅಪಾಯ ಕಡಿತದ ಬಗ್ಗೆ ಸ್ಪಷ್ಟ ಮತ್ತು ಕಾರ್ಯತಂತ್ರದ ಕಾರ್ಯಸೂಚಿಯನ್ನು ನಿಮ್ಮ ಈ ಗುಂಪು ಮುಂದಿಡುತ್ತದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಈ ಕಾರ್ಯನಿರತ ಗುಂಪಿನ ಚರ್ಚೆಗಳಲ್ಲಿ ವ್ಯಾಪಿಸಿರುವ ಒಮ್ಮುಖ, ಒಮ್ಮತ ಮತ್ತು ಸಹ-ಸೃಷ್ಟಿಯ ಮನೋಭಾವವು ಮುಂದಿನ ಮೂರು ದಿನಗಳಲ್ಲಿ ಮತ್ತು ಅದಕ್ಕೂ ಮೀರಿ ಮೇಲುಗೈ ಸಾಧಿಸುತ್ತದೆ ಎಂದು ನಾನು ಭಾವಿಸುತ್ತೇನೆ.
ಈ ಪ್ರಯತ್ನದಲ್ಲಿ ನಮ್ಮ ಜ್ಞಾನ ಪಾಲುದಾರರಿಂದ ನಾವು ಪಡೆದ ನಿರಂತರ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಈ ಗುಂಪಿನ ಕೆಲಸವನ್ನು ಬೆಂಬಲಿಸುವಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ವಿಶೇಷ ಪ್ರತಿನಿಧಿ ಶ್ರೀಮತಿ ಮಾಮಿ ಮಿಜುಟೋರಿ ಅವರ ವೈಯಕ್ತಿಕ ಪಾಲ್ಗೊಳ್ಳುವಕೆಯನ್ನು ನಾನು ವಿಶೇಷವಾಗಿ ಪ್ರಶಂಸಿಸುತ್ತೇನೆ. ಈ ಕಾರ್ಯನಿರತ ಗುಂಪಿನ ಕಾರ್ಯಸೂಚಿಯನ್ನು ರೂಪಿಸುವಲ್ಲಿ ಮೂರೂ ತಂಡಗಳ ಪಾಲ್ಗೊಳ್ಳುವಿಕೆಯ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ. ಇಂಡೋನೇಷ್ಯಾ, ಜಪಾನ್ ಮತ್ತು ಮೆಕ್ಸಿಕೊ ಸೇರಿದಂತೆ ಹಿಂದಿನ ಅಧ್ಯಕ್ಷರ ಅಡಿಪಾಯದ ಮೇಲೆ ನಾವು ಉತ್ತಮ ರೀತಿಯಲ್ಲಿ ಎಲ್ಲವನ್ನೂ ನಿರ್ಮಿಸಿದ್ದೇವೆ ಮತ್ತು ಮುಂದೆ, ಬ್ರೆಜಿಲ್ ಇದನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ನಾವು ಸಂತೋಷಪಡುತ್ತೇವೆ. ಈ ಸಭೆಗೆ ಬ್ರೆಜಿಲ್ ನ ಕಾರ್ಯದರ್ಶಿ ಶ್ರೀ ವೊಲ್ನಿ ಅವರನ್ನು ಸ್ವಾಗತಿಸಲು ನಾವು ವಿಶೇಷವಾಗಿ ಸಂತೋಷಪಡುತ್ತೇವೆ. ಈ ಸಂದರ್ಭದಲ್ಲಿ, ಬ್ರೆಜಿಲ್ ನ ಕಾರ್ಯದರ್ಶಿ ಶ್ರೀ ವೊಲ್ನಿ ಮತ್ತು ಅವರ ತಂಡಕ್ಕೆ, ನೀವು ನಮ್ಮ ಸಂಪೂರ್ಣ ಬೆಂಬಲ ಮತ್ತು ಪಾಲ್ಗೊಳ್ಳುವಿಕೆಯನ್ನು ಸದಾ ಹೊಂದಿರುತ್ತೀರಿ ಎಂದು ನಾವು ಭರವಸೆ ನೀಡಲು ಬಯಸುತ್ತೇವೆ.
ಭಾರತದ ಜಿ20 ಅಧ್ಯಕ್ಷೀಯತೆಯ ಕಳೆದ ಎಂಟು ತಿಂಗಳ ಅವಧಿಯಲ್ಲಿ, ಇಡೀ ರಾಷ್ಟ್ರವು ಬಹಳ ಉತ್ಸಾಹದಿಂದ ಭಾಗವಹಿಸಿದೆ. ಇದುವರೆಗೆ ದೇಶಾದ್ಯಂತ 56 ಸ್ಥಳಗಳಲ್ಲಿ 177 ಸಭೆಗಳನ್ನು ನಡೆಸಲಾಗಿದೆ. ವಿವಿಧ ದೇಶಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅವರು ಭಾರತದ ಸಾಮಾಜಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ವೈವಿಧ್ಯತೆಯ ಒಂದು ನೋಟವನ್ನು ಹೊಂದಿದ್ದಾರೆ. ಜಿ20 ಕಾರ್ಯಸೂಚಿಯ ವಸ್ತುನಿಷ್ಠ ಅಂಶಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಮಾಡಲಾಗಿದೆ. ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ನಡೆಯಲಿರುವ ಶೃಂಗಸಭೆಯು ಅತ್ಯಂತ ಮಹತ್ವದ ಕಾರ್ಯಕ್ರಮವಾಗಲಿದೆ ಎಂದು ನನಗೆ ಖಾತ್ರಿಯಿದೆ. ಈ ಮಹತ್ವಪೂರ್ಣ ಫಲಿತಾಂಶದಲ್ಲಿ ನಿಮ್ಮೆಲ್ಲರ ಕೊಡುಗೆ ಮಹತ್ವದ್ದಾಗಿದೆ.
ವಿಶ್ವಕ್ಕೆ ವಿಪತ್ತು ಅಪಾಯವನ್ನು ಕಡಿಮೆ ಮಾಡಲು ಜಿ20 ಅರ್ಥಪೂರ್ಣ ಫಲಿತಾಂಶವನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ಮುಂಬರುವ ದಿನಗಳಲ್ಲಿ ನಿಮ್ಮ ಚರ್ಚೆಗಳಿಗೆ ನಾನು ನಿಮಗೆ ಶುಭ ಹಾರೈಸುತ್ತೇನೆ.
****