Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿ20 ಡಿಜಿಟಲ್ ಆರ್ಥಿಕತೆ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶದ ಪಠ್ಯ

ಜಿ20 ಡಿಜಿಟಲ್ ಆರ್ಥಿಕತೆ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶದ ಪಠ್ಯ


ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ, ನಮಸ್ಕಾರ!

ನಾನು ನಿಮ್ಮನ್ನು ‘ನಮ್ಮ ಬೆಂಗಳೂರು’ಗೆ ಸ್ವಾಗತಿಸುತ್ತೇನೆ. ಇದು ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಸ್ಫೂರ್ತಿಗೆ ನೆಲೆಯಾಗಿರುವ ನಗರವಾಗಿದೆ. ಡಿಜಿಟಲ್ ಆರ್ಥಿಕತೆಯ ಬಗ್ಗೆ ಚರ್ಚಿಸಲು ಬೆಂಗಳೂರಿಗಿಂತ ಉತ್ತಮ ಸ್ಥಳವಿಲ್ಲ!

ಸ್ನೇಹಿತರೇ,

ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ರೂಪಾಂತರವು ಅಭೂತಪೂರ್ವವಾಗಿದೆ. ಇದು 2015ರಲ್ಲಿ ನಮ್ಮ ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸುವುದರೊಂದಿಗೆ ಆರಂಭವಾಯಿತು. ನಾವೀನ್ಯತೆಯಲ್ಲಿ ನಮ್ಮ ಅಚಲ ನಂಬಿಕೆಯಿಂದ ಇದು ಶಕ್ತಿಯುತವಾಗಿದೆ. ತ್ವರಿತ ಅನುಷ್ಠಾನಕ್ಕೆ ನಮ್ಮ ಬದ್ಧತೆಯಿಂದ ಇದು ಚಾಲಿತವಾಗಿದೆ. ಮತ್ತು, ಇದು ಯಾರನ್ನೂ ಹಿಂದೆ ಬಿಡದೆ ನಮ್ಮ ಒಳಗೊಳ್ಳುವಿಕೆಯ ಮನೋಭಾವದಿಂದ ಪ್ರೇರೇಪಿಸಲ್ಪಟ್ಟಿದೆ. ಈ ರೂಪಾಂತರದ ಪ್ರಮಾಣ, ವೇಗ ಮತ್ತು ವ್ಯಾಪ್ತಿ ಕಲ್ಪನೆಗೂ ಮೀರಿದ್ದಾಗಿದೆ. ಇಂದು, ಭಾರತವು 850 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ, ಇದು ವಿಶ್ವದ ಅಗ್ಗದ ಡೇಟಾ ವೆಚ್ಚಗಳನ್ನು ಆನಂದಿಸುತ್ತಿದೆ. ಆಡಳಿತವನ್ನು ಹೆಚ್ಚು ದಕ್ಷ, ಅಂತರ್ಗತ, ವೇಗ ಮತ್ತು ಪಾರದರ್ಶಕವಾಗಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ನಮ್ಮ ವಿಶಿಷ್ಟ ಡಿಜಿಟಲ್ ಗುರುತಿನ ವೇದಿಕೆಯಾದ ಆಧಾರ್ ನಮ್ಮ ಒಂದು ಬಿಲಿಯನ್ ಗಿಂತಲೂ ಹೆಚ್ಚು ಜನರನ್ನು ಒಳಗೊಂಡಿದೆ. ಭಾರತದಲ್ಲಿ ಆರ್ಥಿಕ ಸೇರ್ಪಡೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಾವು ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಮತ್ತು ಮೊಬೈಲ್ ಎಂಬ JAM ತ್ರಿಮೂರ್ತಿಗಳ ಶಕ್ತಿಯನ್ನು ಬಳಸಿದ್ದೇವೆ. ಪ್ರತಿ ತಿಂಗಳು, ನಮ್ಮ ತ್ವರಿತ ಪಾವತಿ ವ್ಯವಸ್ಥೆಯಾದ ಯುಪಿಐನಲ್ಲಿ ಸುಮಾರು 10 ಶತಕೋಟಿ ರೂ. ವಹಿವಾಟುಗಳು ನಡೆಯುತ್ತವೆ. ಜಾಗತಿಕ ನೈಜ ಸಮಯದ ಪಾವತಿಗಳಲ್ಲಿ ಶೇ.45 ಕ್ಕಿಂತ ಹೆಚ್ಚು ಭಾರತದಲ್ಲಿ ನಡೆಯುತ್ತದೆ. ನೇರ ಪ್ರಯೋಜನಗಳು ಸರ್ಕಾರದ ಬೆಂಬಲದ ವರ್ಗಾವಣೆಯು ಸೋರಿಕೆಯನ್ನು ತಡೆಯುತ್ತಿದೆ ಮತ್ತು 33 ಶತಕೋಟಿ ಡಾಲರ್ ಗಳನ್ನು ಉಳಿಸಿದೆ. ಕೋವಿನ್ ಪೋರ್ಟಲ್

ಭಾರತದ ಕೋವಿಡ್ ಲಸಿಕಾ ಅಭಿಯಾನವನ್ನು ಬೆಂಬಲಿಸಿತು. ಇದು ಡಿಜಿಟಲ್ ಪರಿಶೀಲಿಸಬಹುದಾದ ಪ್ರಮಾಣಪತ್ರಗಳೊಂದಿಗೆ 2 ಶತಕೋಟಿ ಲಸಿಕೆ ಡೋಸ್ ಗಳನ್ನು ತಲುಪಿಸಲು ಸಹಾಯ ಮಾಡಿತು. ಗತಿ-ಶಕ್ತಿ ಪ್ಲಾಟ್ ಫಾರ್ಮ್ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಅನ್ನು ನಕ್ಷೆ ಮಾಡಲು ತಂತ್ರಜ್ಞಾನ ಮತ್ತು ಪ್ರಾದೇಶಿಕ ಯೋಜನೆಯನ್ನು ಬಳಸುತ್ತದೆ. ಇದು ಯೋಜಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ವಿತರಣೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ. ನಮ್ಮ ಆನ್ ಲೈನ್ ಸಾರ್ವಜನಿಕ ಖರೀದಿ ವೇದಿಕೆ – ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ – ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ತಂದಿದೆ. ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಇ-ಕಾಮರ್ಸ್ ಅನ್ನು ಪ್ರಜಾಪ್ರಭುತ್ವಗೊಳಿಸುತ್ತಿದೆ. ಸಂಪೂರ್ಣ ಡಿಜಿಟಲೀಕರಣಗೊಂಡ ತೆರಿಗೆ ವ್ಯವಸ್ಥೆಗಳು ಪಾರದರ್ಶಕತೆ ಮತ್ತು ಇ-ಆಡಳಿತವನ್ನು ಉತ್ತೇಜಿಸುತ್ತಿವೆ. ನಾವು ಭಾಶಿನಿ ಎಂಬ ಎಐ ಚಾಲಿತ ಭಾಷಾ ಅನುವಾದ ವೇದಿಕೆಯನ್ನು ನಿರ್ಮಿಸುತ್ತಿದ್ದೇವೆ. ಇದು ಭಾರತದ ಎಲ್ಲಾ ವೈವಿಧ್ಯಮಯ ಭಾಷೆಗಳಲ್ಲಿ ಡಿಜಿಟಲ್ ಸೇರ್ಪಡೆಯನ್ನು ಬೆಂಬಲಿಸುತ್ತದೆ.

ಗೌರವಾನ್ವಿತರೇ,

ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಾಗತಿಕ ಸವಾಲುಗಳಿಗೆ ಸ್ಕೇಲೆಬಲ್ (ಆರೋಹಣೀಯವಾಗಿದೆ), ಸುರಕ್ಷಿತ ಮತ್ತು ಅಂತರ್ಗತ ಪರಿಹಾರಗಳನ್ನು ನೀಡುತ್ತದೆ. ಭಾರತವು ನಂಬಲಾಗದಷ್ಟು ವೈವಿಧ್ಯಮಯ ದೇಶ. ನಮ್ಮಲ್ಲಿ ಡಜನ್ ಗಟ್ಟಲೆ ಭಾಷೆಗಳು ಮತ್ತು ನೂರಾರು ಉಪಭಾಷೆಗಳಿವೆ. ಇದು ವಿಶ್ವದ ಪ್ರತಿಯೊಂದು ಧರ್ಮ ಮತ್ತು ಅಸಂಖ್ಯಾತ ಸಾಂಸ್ಕೃತಿಕ ಆಚರಣೆಗಳಿಗೆ ನೆಲೆಯಾಗಿದೆ. ಪ್ರಾಚೀನ ಸಂಪ್ರದಾಯಗಳಿಂದ ಹಿಡಿದು, ಇತ್ತೀಚಿನ ತಂತ್ರಜ್ಞಾನಗಳವರೆಗೆ, ಭಾರತವು ಪ್ರತಿಯೊಬ್ಬರಿಗೂ ಏನನ್ನಾದರೂ ಹೊಂದಿದೆ. ಅಂತಹ ವೈವಿಧ್ಯತೆಯೊಂದಿಗೆ, ಭಾರತವು ಪರಿಹಾರಗಳಿಗೆ ಸೂಕ್ತ ಪರೀಕ್ಷಾ ಪ್ರಯೋಗಾಲಯವಾಗಿದೆ. ಭಾರತದಲ್ಲಿ ಯಶಸ್ವಿಯಾದ ಪರಿಹಾರವನ್ನು ವಿಶ್ವದ ಎಲ್ಲಿಯಾದರೂ ಸುಲಭವಾಗಿ ಅನ್ವಯಿಸಬಹುದು. ಭಾರತವು ತನ್ನ ಅನುಭವಗಳನ್ನು ವಿಶ್ವದೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜಾಗತಿಕ ಒಳಿತಿಗಾಗಿ ನಾವು ನಮ್ಮ ಕೋವಿನ್ ವೇದಿಕೆಯನ್ನು ನೀಡಿದ್ದೇವೆ. ನಾವು ಈಗ ಇಂಡಿಯಾ ಸ್ಟ್ಯಾಕ್ ಎಂಬ ಆನ್ ಲೈನ್ ಜಾಗತಿಕ ಸಾರ್ವಜನಿಕ ಡಿಜಿಟಲ್ ಸರಕುಗಳ ಭಂಡಾರವನ್ನು ರಚಿಸಿದ್ದೇವೆ. ಇದು ಯಾರೂ ಹಿಂದೆ ಉಳಿಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಲಿದೆ. ವಿಶೇಷವಾಗಿ ಜಾಗತಿಕ ದಕ್ಷಿಣದ ನಮ್ಮ ಸಹೋದರ ಸಹೋದರಿಯರು.

ಗೌರವಾನ್ವಿತರೇ,

ಜಿ20 ವರ್ಚುವಲ್ ಗ್ಲೋಬಲ್ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ರೆಪೊಸಿಟರಿಯನ್ನು ರಚಿಸಲು ನೀವು ಕೆಲಸ ಮಾಡುತ್ತಿದ್ದೀರಿ ಎಂದು ನನಗೆ ಸಂತೋಷವಾಗಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಸಾಮಾನ್ಯ ಚೌಕಟ್ಟಿನ ಪ್ರಗತಿಯು ಎಲ್ಲರಿಗೂ ಪಾರದರ್ಶಕ, ಉತ್ತರದಾಯಿತ್ವ ಮತ್ತು ನ್ಯಾಯಯುತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುತ್ತದೆ. ಡಿಜಿಟಲ್ ಕೌಶಲ್ಯಗಳ ಕ್ರಾಸ್ ಕಂಟ್ರಿ ಹೋಲಿಕೆಗೆ ಅನುಕೂಲವಾಗುವಂತೆ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವ ನಿಮ್ಮ ಪ್ರಯತ್ನಗಳನ್ನು ನಾನು ಸ್ವಾಗತಿಸುತ್ತೇನೆ. ಮತ್ತು, ಡಿಜಿಟಲ್ ಕೌಶಲ್ಯದ ಮೇಲೆ ವರ್ಚುವಲ್ ಸೆಂಟರ್ ಆಫ್ ಎಕ್ಸಲೆನ್ಸ್(ಶ್ರೇಷ್ಠತಾ ಕೇಂದ್ರ) ಸ್ಥಾಪಿಸುವುದು. ಭವಿಷ್ಯದಲ್ಲಿ ಸಿದ್ಧವಾಗಿರುವ ಕಾರ್ಯಪಡೆಯ ಅಗತ್ಯಗಳನ್ನು ಪೂರೈಸುವ ಪ್ರಮುಖ ಪ್ರಯತ್ನಗಳು ಇವು. ಡಿಜಿಟಲ್ ಆರ್ಥಿಕತೆಯು ಜಾಗತಿಕವಾಗಿ ಹರಡುತ್ತಿದ್ದಂತೆ, ಅದು ಭದ್ರತಾ ಬೆದರಿಕೆಗಳು ಮತ್ತು ಸವಾಲುಗಳನ್ನು ಎದುರಿಸುತ್ತದೆ. ಈ ಹಿನ್ನೆಲೆಯಲ್ಲಿ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಡಿಜಿಟಲ್ ಆರ್ಥಿಕತೆಗಾಗಿ ಜಿ20 ಉನ್ನತ ಮಟ್ಟದ ತತ್ವಗಳ ಬಗ್ಗೆ ಒಮ್ಮತವನ್ನು ನಿರ್ಮಿಸುವುದು ಮುಖ್ಯವಾಗಿದೆ.

ಸ್ನೇಹಿತರೇ,

ತಂತ್ರಜ್ಞಾನವು ಹಿಂದೆಂದಿಗಿಂತಲೂ ನಮ್ಮನ್ನು ಸಂಪರ್ಕಿಸಿದೆ. ಇದು ಎಲ್ಲರಿಗೂ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಯ ಭರವಸೆಯನ್ನು ಹೊಂದಿದೆ. ಅಂತರ್ಗತ, ಸಮೃದ್ಧ ಮತ್ತು ಸುರಕ್ಷಿತ ಜಾಗತಿಕ ಡಿಜಿಟಲ್ ಭವಿಷ್ಯಕ್ಕೆ ಅಡಿಪಾಯ ಹಾಕಲು ಜಿ20 ನಲ್ಲಿ ನಮಗೆ ಒಂದು ಅನನ್ಯ ಅವಕಾಶವಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ನಾವು ಆರ್ಥಿಕ ಸೇರ್ಪಡೆ ಮತ್ತು ಉತ್ಪಾದಕತೆಯನ್ನು ಮುನ್ನಡೆಸಬಹುದು. ರೈತರು ಮತ್ತು ಸಣ್ಣ ಉದ್ಯಮಗಳು ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ನಾವು ಉತ್ತೇಜಿಸಬಹುದು. ಜಾಗತಿಕ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವು ಚೌಕಟ್ಟನ್ನು ಸ್ಥಾಪಿಸಬಹುದು. ಕೃತಕ ಬುದ್ಧಿಮತ್ತೆಯ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಗಾಗಿ ನಾವು ಚೌಕಟ್ಟನ್ನು ಸಹ ಅಭಿವೃದ್ಧಿಪಡಿಸಬಹುದು. ವಾಸ್ತವವಾಗಿ, ಮಾನವಕುಲವು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಆಧಾರಿತ ಪರಿಹಾರಗಳ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ನಾವು ನಿರ್ಮಿಸಬಹುದು. ಇದಕ್ಕೆ ನಮ್ಮಿಂದ ಬೇಕಾಗಿರುವುದು ನಾಲ್ಕು ಸಿಗಳು – ದೃಢನಿಶ್ಚಯ, ಬದ್ಧತೆ, ಸಮನ್ವಯ ಮತ್ತು ಸಹಯೋಗ. ಮತ್ತು, ನಿಮ್ಮ ಗುಂಪು ನಮ್ಮನ್ನು ಆ ದಿಕ್ಕಿನಲ್ಲಿ ಮುಂದೆ ಕೊಂಡೊಯ್ಯುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ನಿಮ್ಮೆಲ್ಲರಿಗೂ ಬಹಳ ಫಲಪ್ರದ ಚರ್ಚೆಯನ್ನು ನಾನು ಬಯಸುತ್ತೇನೆ. ಧನ್ಯವಾದಗಳು! ತುಂಬ ಧನ್ಯವಾದಗಳು!

****