ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್, ದೇಶದ ವಿವಿಧೆಡೆಯಿಂದ ಇಲ್ಲಿಗೆ ಬಂದಿರುವ ಎಲ್ಲಾ ವಿಜ್ಞಾನಿಗಳೆ, ಇಲ್ಲಿರುವ ಗೌರವಾನ್ವಿತ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ!
ಇಂದು ಭಾರತವು ಸಂಶೋಧನಾ ಜಗತ್ತಿನಲ್ಲಿ ಐತಿಹಾಸಿಕ ಹೆಜ್ಜೆ ಇಟ್ಟಿದೆ. 5 ವರ್ಷಗಳ ಹಿಂದೆ, ಜೀನೋಮ್ಇಂಡಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಕೋವಿಡ್ ನಿಂದ ಉಂಟಾದ ಸವಾಲುಗಳ ಹೊರತಾಗಿಯೂ, ನಮ್ಮ ವಿಜ್ಞಾನಿಗಳು ಈ ಯೋಜನೆಯನ್ನು ಪೂರ್ಣಗೊಳಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಐಐಎಸ್ಸಿ, ಐಐಟಿಗಳು, ಸಿಎಸ್ಐಆರ್ ಮತ್ತು ಬ್ರಿಕ್ ನಂತಹ ದೇಶದ 20ಕ್ಕೂ ಹೆಚ್ಚು ಪ್ರಮುಖ ಸಂಶೋಧನಾ ಸಂಸ್ಥೆಗಳು ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ತಿಳಿದು ನನಗೆ ಅಪಾರ ಸಂತೋಷವಾಗಿದೆ. 10,000 ಭಾರತೀಯರ ಜಿನೋಮ್ ಅನುಕ್ರಮ ಕಲೆಹಾಕಿರುವ ಈ ಯೋಜನೆಯ ದತ್ತಾಂಶವು, ಈಗ ಭಾರತೀಯ ಜೈವಿಕ ದತ್ತಾಂಶ ಕೇಂದ್ರದಲ್ಲಿ ಲಭ್ಯವಿದೆ. ಈ ಯೋಜನೆಯು ಜೈವಿಕ ತಂತ್ರಜ್ಞಾನ ಸಂಶೋಧನಾ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ಯೋಜನೆಯೊಂದಿಗೆ ಸಂಬಂಧಿಸಿದ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಜಿನೋಮ್ಇಂಡಿಯಾ ಯೋಜನೆಯು ಭಾರತದ ಜೈವಿಕ ತಂತ್ರಜ್ಞಾನ ಕ್ರಾಂತಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಈ ಯೋಜನೆಯ ಸಹಾಯದಿಂದ, ನಾವು ದೇಶದಲ್ಲಿ ವೈವಿಧ್ಯಮಯ ಜೆನೆಟಿಕ್ ಸಂಪನ್ಮೂಲವನ್ನು ಯಶಸ್ವಿಯಾಗಿ ರೂಪಿಸಿದ್ದೇವೆ ಎಂಬುದು ನನಗೆ ತಿಳಿದುಬಂದಿದೆ. ಈ ಯೋಜನೆಯಡಿ, ದೇಶಾದ್ಯಂತ ವಿವಿಧ 10,000 ವ್ಯಕ್ತಿಗಳ ಜಿನೋಮ್ ಅನುಕ್ರಮವನ್ನು ಪೂರ್ಣಗೊಳಿಸಲಾಗಿದೆ. ಈಗ, ಈ ಡೇಟಾವನ್ನು ನಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಲಭ್ಯವಾಗುವಂತೆ ಮಾಡಲಾಗುವುದು. ಇದು ನಮ್ಮ ವಿದ್ವಾಂಸರು ಮತ್ತು ವಿಜ್ಞಾನಿಗಳಿಗೆ ಭಾರತದ ಜೆನೆಟಿಕ್ ವಲಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ. ಈ ಮಾಹಿತಿಯು ದೇಶದ ನೀತಿ ನಿರೂಪಣೆ ಮತ್ತು ಯೋಜನೆಯನ್ನು ಸಹ ಸುಲಭಗೊಳಿಸುತ್ತದೆ.
ನೀವೆಲ್ಲರೂ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಪರಿಣಿತರು, ಪ್ರತಿಷ್ಠಿತ ವಿಜ್ಞಾನಿಗಳಾಗಿದ್ದೀರಿ. ಭಾರತದ ವಿಶಾಲತೆ ಮತ್ತು ವೈವಿಧ್ಯತೆಯು ಕೇವಲ ಆಹಾರ, ಭಾಷೆ ಮತ್ತು ಭೌಗೋಳಿಕತೆಗೆ ಸೀಮಿತವಾಗಿಲ್ಲ ಎಂಬುದು ನಿಮಗೆ ತಿಳಿದಿದೆ. ಭಾರತದಲ್ಲಿ ವಾಸಿಸುವ ಜನರ ಜೀನ್‌ಗಳಲ್ಲಿಯೂ ಗಮನಾರ್ಹ ವೈವಿಧ್ಯತೆಯಿದೆ. ಸ್ವಾಭಾವಿಕವಾಗಿ, ರೋಗಗಳ ಸ್ವರೂಪವು ವೈವಿಧ್ಯತೆಯಿಂದ ತುಂಬಿದೆ. ಆದ್ದರಿಂದ, ಯಾವ ರೀತಿಯ ಔಷಧವು ಯಾವ ವ್ಯಕ್ತಿಗೆ ಪ್ರಯೋಜನ ನೀಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ದೇಶದ ನಾಗರಿಕರ ಜೆನೆಟಿಕ್ ಗುರುತು ತಿಳಿದುಕೊಳ್ಳುವುದು ಅತ್ಯಗತ್ಯ.
ಉದಾಹರಣೆಗೆ, ಕುಡಗೋಲು ಕೋಶ ರಕ್ತಹೀನತೆ ನಮ್ಮ ಬುಡಕಟ್ಟು ಸಮಾಜದಲ್ಲಿ ಒಂದು ಪ್ರಮುಖ ಅನಾರೋಗ್ಯ ಬಿಕ್ಕಟ್ಟಾಗಿದೆ. ಇದನ್ನು ಪರಿಹರಿಸಲು, ನಾವು ಒಂದು ರಾಷ್ಟ್ರೀಯ ಧ್ಯೇಯವನ್ನು ಪ್ರಾರಂಭಿಸಿದ್ದೇವೆ. ಆದಾಗ್ಯೂ, ಇಲ್ಲಿಯೂ ಸಹ ಹಲವು ಸವಾಲುಗಳಿವೆ. ನಮ್ಮ ಬುಡಕಟ್ಟು ಸಮಾಜದ ಒಂದು ಪ್ರದೇಶದಲ್ಲಿ ಕುಡಗೋಲು ಕಣ ರಕ್ತಹೀನತೆಯ ಸಮಸ್ಯೆ ಮತ್ತೊಂದು ಪ್ರದೇಶದಲ್ಲಿ ಇಲ್ಲದಿರಬಹುದು ಮತ್ತು ಅಲ್ಲಿ ಬೇರೆಯೇ ಸಮಸ್ಯೆ ಇರಬಹುದು. ನಾವು ಸಂಪೂರ್ಣ ಆನುವಂಶಿಕ ಅಧ್ಯಯನ ಮಾಡಿದಾಗ ಮಾತ್ರ ಈ ಎಲ್ಲಾ ವಿವರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದು ಭಾರತೀಯ ಜನರ ವಿಶಿಷ್ಟ ಜೀನೋಮಿಕ್ ಮಾದರಿಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಆಗ ಮಾತ್ರ ನಾವು ನಿರ್ದಿಷ್ಟ ಗುಂಪಿನ ನಿರ್ದಿಷ್ಟ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರಗಳನ್ನು ಅಥವಾ ಪರಿಣಾಮಕಾರಿ ಔಷಧಿಗಳನ್ನು ಸಿದ್ಧಪಡಿಸಬಹುದು.
ನಾನು ಕುಡಗೋಲು ಕಣ ರಕ್ತಹೀನತೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದೇನೆ, ಆದರೆ ಇದು ಅದಕ್ಕೆ ಸೀಮಿತವಾಗಿಲ್ಲ. ನಾನು ಅದನ್ನು ಕೇವಲ ವಿವರಣೆಯಾಗಿ ಬಳಸಿದ್ದೇನೆ. ಭಾರತವು ಇನ್ನೂ ಹೆಚ್ಚಿನ ಆನುವಂಶಿಕ ಕಾಯಿಲೆಗಳ ಬಗ್ಗೆ ತಿಳಿದಿಲ್ಲ, ಅಂದರೆ, ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವ ರೋಗಗಳು. ಜೀನೋಮ್ಇಂಡಿಯಾ ಯೋಜನೆಯು ಭಾರತದಲ್ಲಿ ಅಂತಹ ಎಲ್ಲಾ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತದೆ.
ಸ್ನೇಹಿತರೆ,
21ನೇ ಶತಮಾನದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೀವರಾಶಿಯ ಸಂಯೋಜನೆಯು ಭಾರತದ ಭದ್ರ ಬುನಾದಿಗೆ ನಿರ್ಣಾಯಕ ಭಾಗವಾಗಿದ್ದು, ಅದು ತನ್ನ ಜೈವಿಕ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುತ್ತಿದೆ. ಜೈವಿಕ ಆರ್ಥಿಕತೆಯ ಗುರಿ ನೈಸರ್ಗಿಕ ಸಂಪನ್ಮೂಲಗಳ ಸರಿಯಾದ ಬಳಕೆಯನ್ನು ಮಾಡುವುದು, ಜೈವಿಕ ಆಧಾರಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಉತ್ತೇಜಿಸುವುದು ಮತ್ತು ಈ ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿದೆ. ಜೈವಿಕ ಆರ್ಥಿಕತೆಯು ಸುಸ್ಥಿರ ಅಭಿವೃದ್ಧಿಯನ್ನು ನಡೆಸುತ್ತದೆ ಮತ್ತು ನಾವೀನ್ಯತೆಗೆ ಅವಕಾಶಗಳನ್ನು ನೀಡುತ್ತದೆ. ಕಳೆದ 10 ವರ್ಷಗಳಲ್ಲಿ, ದೇಶದ ಜೈವಿಕ ಆರ್ಥಿಕತೆಯು ವೇಗವಾಗಿ ಮುಂದುವರೆದಿದೆ ಎಂಬ ವಿಷಯ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. 2014ರಲ್ಲಿ ಇದ್ದ 10 ಶತಕೋಟಿ ಡಾಲರ್ ಮೌಲ್ಯದ ಜೈವಿಕ ಆರ್ಥಿಕತೆಯು ಈಗ 150 ಶತಕೋಟಿ ಡಾಲರ್‌ಗಿಂಚ ಹೆಚ್ಚಿಗೆ ಬೆಳೆದಿದೆ. ಭಾರತವು ತನ್ನ ಜೈವಿಕ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವತ್ತ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಭಾರತವು ಬಯೋ ಇ3 ನೀತಿಯನ್ನು ಜಾರಿ ಮಾಡಿದೆ. ಐಟಿ ಕ್ರಾಂತಿಯಂತೆಯೇ ಜಾಗತಿಕ ಜೈವಿಕ ತಂತ್ರಜ್ಞಾನ ವಲಯದಲ್ಲಿ ಭಾರತವು ಸರದಾರನಾಗಿ ಹೊರಹೊಮ್ಮುವುದು ಈ ನೀತಿಯ ದೃಷ್ಟಿಕೋನವಾಗಿದೆ. ವಿಜ್ಞಾನಿಗಳಾದ ನೀವೆಲ್ಲರೂ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತೀರಿ ಮತ್ತು ಈ ಪ್ರಯತ್ನದಲ್ಲಿ ನಿಮ್ಮೆಲ್ಲರಿಗೂ ನಾನು ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೆ,
ವಿಶ್ವದ ಪ್ರಮುಖ ಔಷಧೀಯ ತಾಣವಾಗಿ, ಭಾರತ ಈಗ ಗುರುತಿಸಿಕೊಂಡು, ಹೊಸ ಆಯಾಮ ನೀಡುತ್ತಿದೆ. ಕಳೆದ ದಶಕದಲ್ಲಿ, ಭಾರತವು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಲಕ್ಷಾಂತರ ಭಾರತೀಯರಿಗೆ ಉಚಿತ ಚಿಕಿತ್ಸೆ ಒದಗಿಸುವುದು, ಜನೌಷಧಿ ಕೇಂದ್ರಗಳಲ್ಲಿ 80% ರಿಯಾಯಿತಿಯಲ್ಲಿ ಔಷಧಿಗಳನ್ನು ನೀಡುವುದು ಮತ್ತು ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳನ್ನು ನಿರ್ಮಿಸಿದೆ. ಇವು ಕಳೆದ 10 ವರ್ಷಗಳ ಗಮನಾರ್ಹ ಸಾಧನೆಗಳಾಗಿವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಭಾರತವು ನಮ್ಮ ಔಷಧ ಪರಿಸರ ವ್ಯವಸ್ಥೆಯ ನೈಜ ಬಲವನ್ನು ಸಾಬೀತುಪಡಿಸಿತು. ಭಾರತದೊಳಗೆ ಔಷಧ ಉತ್ಪಾದನೆಗೆ ಬಲವಾದ ಪೂರೈಕೆ ಮತ್ತು ಮೌಲ್ಯ ಸರಪಳಿ ಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಜಿನೋಮ್‌ಇಂಡಿಯಾ ಯೋಜನೆಯು ಈಗ ಈ ದಿಕ್ಕಿನಲ್ಲಿ ಭಾರತದ ಪ್ರಯತ್ನಗಳಿಗೆ ಹೊಸ ಆವೇಗ ನೀಡುತ್ತದೆ, ಅವುಗಳಿಗೆ ಹೊಸ ಶಕ್ತಿ ತುಂಬುತ್ತದೆ.
ಸ್ನೇಹಿತರೆ,
ಇಂದು, ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ನಮ್ಮ ಭವಿಷ್ಯದ ಪೀಳಿಗೆಗೆ, ಇದು ಒಂದು ಜವಾಬ್ದಾರಿ ಮತ್ತು ಅವಕಾಶ ಎರಡೂ ಆಗಿದೆ. ಅದಕ್ಕಾಗಿಯೇ ಇಂದು ಭಾರತದಲ್ಲಿ ಬಹು ದೊಡ್ಡ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ, ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಸಂಶೋಧನೆ ಮತ್ತು ನಾವೀನ್ಯತೆ ಮೇಲೆ ಅಗಾಧ ಒತ್ತು ನೀಡಲಾಗಿದೆ. ಇಂದು, 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳಲ್ಲಿ, ನಮ್ಮ ವಿದ್ಯಾರ್ಥಿಗಳು ಪ್ರತಿದಿನ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಯುವಜನರ ನವೀನ ವಿಚಾರಗಳನ್ನು ಉತ್ತೇಜಿಸಲು, ದೇಶಾದ್ಯಂತ ನೂರಾರು ಅಟಲ್ ಇನ್ ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪಿಎಚ್‌ಡಿ ಅಧ್ಯಯನ ಸಮಯದಲ್ಲಿ ಸಂಶೋಧನೆ ಬೆಂಬಲಿಸಲು ಪ್ರಧಾನಮಂತ್ರಿ ಸಂಶೋಧನಾ ಫೆಲೋಶಿಪ್ ಯೋಜನೆಯನ್ನು ಸಹ ನಡೆಸಲಾಗುತ್ತಿದೆ. ಬಹು-ಶಿಸ್ತೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನೆ ಉತ್ತೇಜಿಸಲು, ರಾಷ್ಟ್ರೀಯ ಸಂಶೋಧನಾ ನಿಧಿ ಸ್ಥಾಪಿಸಲಾಗಿದೆ. ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ, ವಿಜ್ಞಾನ, ಎಂಜಿನಿಯರಿಂಗ್, ಪರಿಸರ ಮತ್ತು ಆರೋಗ್ಯದಂತಹ ಪ್ರತಿಯೊಂದು ವಲಯದಲ್ಲಿ ಹೊಸ ಪ್ರಗತಿಯನ್ನು ನಿರೀಕ್ಷಿಸಲಾಗಿದೆ. ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಹೂಡಿಕೆಗಾಗಿ, ಸರ್ಕಾರವು 1 ಲಕ್ಷ ಕೋಟಿ ರೂಪಾಯಿ ಮೊತ್ತದ ನಿಧಿ ಸ್ಥಾಪಿಸಲು ನಿರ್ಧರಿಸಿದೆ. ಇದು ಜೈವಿಕ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೂ ಸಹ ಕೊಡುಗೆ ನೀಡುತ್ತದೆ, ಜತೆಗೆ ಯುವ ವಿಜ್ಞಾನಿಗಳಿಗೆ ಹೆಚ್ಚಿನ ಸಹಾಯ ಮಾಡುತ್ತದೆ.
ಸ್ನೇಹಿತರೆ,
ಇತ್ತೀಚೆಗೆ, ಸರ್ಕಾರವು ಒಂದು ರಾಷ್ಟ್ರ, ಒಂದು ಚಂದಾದಾರಿಕೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಭಾರತದ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಯಾವುದೇ ವೆಚ್ಚ ಭರಿಸದೆ ವಿಶ್ವಪ್ರಸಿದ್ಧ ನಿಯತಕಾಲಿಕೆಗಳನ್ನು ಸುಲಭವಾಗಿ ಪ್ರವೇಶಿಸಬಹುದು ಎಂದು ಸರ್ಕಾರ ಖಚಿತಪಡಿಸುತ್ತದೆ. ಈ ಪ್ರಯತ್ನಗಳು ಭಾರತವನ್ನು 21ನೇ ಶತಮಾನದ ಜ್ಞಾನ ಮತ್ತು ನಾವೀನ್ಯತೆ ಕೇಂದ್ರವನ್ನಾಗಿ ಮಾಡಲು ಹೆಚ್ಚಿನ ಕೊಡುಗೆ ನೀಡುತ್ತವೆ.
ಸ್ನೇಹಿತರೆ,
ನಮ್ಮ ಜನಪರ ಆಡಳಿತ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಜಗತ್ತಿಗೆ ಹೊಸ ಮಾದರಿ ನೀಡಿದಂತೆಯೇ, ಜಿನೋಮ್‌ಇಂಡಿಯಾ ಯೋಜನೆಯು ಆನುವಂಶಿಕ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ವರ್ಚಸ್ಸನ್ನು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ಜಿನೋಮ್‌ಇಂಡಿಯಾ ಯೋಜನೆಯ ಯಶಸ್ಸಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳು, ನಮಸ್ಕಾರ.
The Genome India Project marks a defining moment in the country's biotechnology landscape. My best wishes to those associated with the project. https://t.co/7xN8U9y4Ds
— Narendra Modi (@narendramodi) January 9, 2025