Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಗತಿಕ ತೈಲ ಮತ್ತು ಅನಿಲ ಸಿಇಓ ಮತ್ತು ತಜ್ಞರೊಂದಿಗೆ ಪ್ರಧಾನಿ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಶ್ವಾದ್ಯಂತದಿಂದ ಆಗಮಿಸಿದ ತೈಲ ಮತ್ತು ಅನಿಲ ಸಿಇಓಗಳು ಮತ್ತು ತಜ್ಞರೊಂದಿಗೆ ಸಂವಾದ ನಡೆಸಿದರು.

ರಾಸ್ನೆಫ್ಟ್, ಬಿಪಿ, ರಿಲಯೆನ್ಸ್, ಸೌದಿ ಅರಾಮ್ಕೋ, ಎಕ್ಸಾನ್ ಮೊಬಿಲ್, ರಾಯಲ್ ಡಚ್ ಶೆಲ್, ವೇದಾಂತ, ವುಡ್ ಮೆಕೆನ್ಜಿ, ಐಎಚ್ಎಸ್ ಮಾರ್ಕಿಟ್, ಸ್ಕಲ್ಬರ್ಗರ್, ಹಾಲಿಬರ್ಟನ್, ಎಕ್ಸ್ಕೋಲ್, ಒಎನ್ಜಿಸಿ, ಇಂಡಿಯನ್ ಆಯಿಲ್, ಗೈಲ್, ಪೆಟ್ರೋನೆಟ್ ಎಲ್ಎನ್ಜಿ, ಆಯಿಲ್ ಇಂಡಿಯಾ, ಎಚ್ಪಿಎಲ್ಎಲ್, ಡೆಲೋನೆಕ್ಸ್ ಎನರ್ಜಿ, ಎನ್ಐಪಿಎಫ್ಪಿ, ಅಂತಾರಾಷ್ಟ್ರೀಯ ಅನಿಲ ಒಕ್ಕೂಟ, ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಉನ್ನತ ಸಿಇಓಗಳು ಮತ್ತು ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ಆರ್.ಕೆ. ಸಿಂಗ್ ಮತ್ತು ನೀತಿ ಆಯೋಗ, ಪಿ.ಎಂ.ಓ, ಪೆಟ್ರೋಲಿಯಂ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೂ ಹಾಜರಿದ್ದರು.

ಈ ಸಭೆಯನ್ನು ನೀತಿ ಆಯೋಗ ಸಂಘಟಿಸಿತ್ತು. ತಮ್ಮ ಪರಿಚಯ ಭಾಷಣದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ರಾಜೀವ್ ಕುಮಾರ್, ನೀತಿ ಆಯೋಗದ ಉಪಾಧ್ಯಕ್ಷರು ಈ ಕ್ಷೇತ್ರದಲ್ಲಿ ಆಗಿರುವ ಕಾರ್ಯದ ಸ್ತೂಲ ಪರಿಚಯ ಮಾಡಿಸಿದರು. ಭಾರತದಲ್ಲಿ ಇಂಧನ ಬೇಡಿಕೆಯಲ್ಲಿ ನಿರೀಕ್ಷಿತ ಬೆಳವಣಿಗೆ ಮತ್ತು ವಿದ್ಯುನ್ಮಾನೀಕರಣ ಮತ್ತು ಎಲ್ಪಿಜಿ ವಿಸ್ತರಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಬಗ್ಗೆ ಅವರು ಒತ್ತಿ ಹೇಳಿದರು. ತಮ್ಮ ಕಿರು ಪ್ರಾತ್ಯಕ್ಷಿಕೆಯಲ್ಲಿ ನೀತಿ ಆಯೋಗದ ಸಿಇಓ ಶ್ರೀ ಅಮಿತಾಬ್ ಕಾಂತ್ ಭಾರತದ ತೈಲ ಮತ್ತು ಅನಿಲ ವಲಯದಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆ ಮತ್ತು ಸವಾಲುಗಳ ಬಗ್ಗೆ ತಿಳಿಯಪಡಿಸಿದರು.

ಸಭೆಯಲ್ಲಿ ಪಾಲ್ಗೊಂಡ ಹಲವರು ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಸುಧಾರಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇಂಧನ ವಲಯದಲ್ಲಿ ಪ್ರಧಾನಿ ಮೋದಿ ಅವರುತಂದಿರುವ ಸುಧಾರಣೆಯಲ್ಲಿನ ವೇಗ ಮತ್ತು ಚಾಲನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಏಕೀಕೃತ ಇಂಧನ ನೀತಿ, ಒಪ್ಪಂದ ಚೌಕಟ್ಟುಗಳು ಮತ್ತು ವ್ಯವಸ್ಥೆಗಳು, ಭೂಕಂಪಗಳ ದತ್ತಾಂಶಗಳು, ಜೈವಿಕ ಇಂಧನ ಪ್ರೋತ್ಸಾಹ, ಅನಿಲ ಸರಬರಾಜು ಸುಧಾರಣೆ, ಅನಿಲ ಕೇಂದ್ರಗಳ ಸ್ಥಾಪನೆ ಮತ್ತು ನಿಯಂತ್ರಣ ಕುರಿತ ವಿಷಯಗಳು ಚರ್ಚೆಗೆ ಬಂದವು. ಸಭೆಯಲ್ಲಿ ಪಾಲ್ಗೊಂಡ ಅನೇಕರು ಅನಿಲ ಮತ್ತು ವಿದ್ಯುತ್ ಅನ್ನು ಜಿಎಸ್ಟಿಯ ಚೌಕಟ್ಟಿಗೆ ತರುವಂತೆ ಬಲವಾಗಿ ಶಿಫಾರಸು ಮಾಡಿದರು. ಕಂದಾಯ ಕಾರ್ಯದರ್ಶಿ ಶ್ರೀ ಹಸ್ಮುಖ್ ಅದಿಯಾ ಅವರು ತೈಲ ಮತ್ತು ಅನಿಲ ವಲಯಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ಮಂಡಳಿಯ ಇತ್ತೀಚಿನ ನಿರ್ಣಯಗಳ ಬಗ್ಗೆ ಬೆಳಕು ಚೆಲ್ಲಿದರು.

ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಸಭೆಯಲ್ಲಿ ಪಾಲ್ಗೊಂಡವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ, 2016ರಲ್ಲಿ ನಡೆದ ಸಭೆಯಲ್ಲಿ ಸ್ವೀಕರಿಸಲಾದ ಹಲವು ಸಲಹೆಗಳು ನೀತಿ ನಿರೂಪಣೆಯಲ್ಲಿ ಸಹಕಾರಿಯಾದವು ಎಂದರು. ಇನ್ನು ಹಲವು ಕ್ಷೇತ್ರಗಳಲ್ಲಿ ಸುಧಾರಣೆ ಮಾಡಲು ಇನ್ನೂ ಹೇರಳ ಅವಕಾಶವಿದೆ ಎಂದು ಹೇಳಿದರು. ಪಾಲ್ಗೊಂಡವರು ನೀಡಿದ ಗಮನಾರ್ಹ ಸಲಹೆಗಳನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು.

ತಮ್ಮ ಸಂಸ್ಥೆಗಳ ಕಾಳಜಿಗೆ ಮಾತ್ರವೇ ಸೀಮಿತವಾಗುವ ಬದಲಿಗೆ ತೈಲ ಮತ್ತು ಅನಿಲ ವಲಯದಲ್ಲಿ ಭಾರತದ ವಿಶಿಷ್ಟ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಭೆಯಲ್ಲಿ ಪಾಲ್ಗೊಂಡು ಸಮಗ್ರ ಸಲಹೆಗಳನ್ನು ಹಂಚಿಕೊಂಡ ಎಲ್ಲರಿಗೂ ಪ್ರಧಾನಿ ಧನ್ಯವಾದ ಅರ್ಪಿಸಿದರು.ಇಂದು ನೀಡಲಾದ ಸಲಹೆಗಳು, ನೀತಿ, ಆಡಳಿತ ಮತ್ತು ನಿಯಂತ್ರಕ ವಿಷಯಗಳನ್ನು ಒಳಗೊಂಡಿರುವುದನ್ನು ಪ್ರಧಾನಿ ಗಮನಿಸಿದರು.

ಪ್ರಧಾನಮಂತ್ರಿಯವರು ಭಾರತದ ಇಂಧನ ವಲಯಕ್ಕೆ ಬೆಂಬಲ ನೀಡುತ್ತಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ರಾನ್ ನೆಫ್ಟ್ ಅವರ ಬದ್ಧತೆಗೆ ಧನ್ಯವಾದ ಅರ್ಪಿಸಿದರು. ಅವರು ಸೌದಿ ಅರೇಬಿಯಾದ ಸಂಸ್ಥಾನದ 2030 ಮುನ್ನೋಟದ ದಸ್ತಾವೇಜನ್ನು ಪ್ರಶಂಸಿಸಿದರು. ಸೌದಿ ಅರೇಬಿಯಾಕ್ಕೆ ತಾವು ನೀಡಿದ್ದ ಭೇಟಿಯನ್ನು ಆಪ್ತವಾಗಿ ಸ್ಮರಿಸಿದ ಪ್ರಧಾನಿ, ಅಲ್ಲಿ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪ್ರಗತಿಪರ ನಿರ್ಧಾರ ಕೈಗೊಳ್ಳಲಾಯಿತು ಎಂದರು. ಹತ್ತಿರದ ಭವಿಷ್ಯದಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ವಿವಿಧ ಸಹಕಾರದ ವಿವಿಧ ಅವಕಾಶಗಳನ್ನು ಎದಿರು ನೋಡುತ್ತಿರುವುದಾಗಿ ತಿಳಿಸಿದರು.

ಭಾರತದಲ್ಲಿ ಇಂಧನ ಕ್ಷೇತ್ರದ ಸ್ಥಿತಿ ತೀರಾ ಅಸಮವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಮಗ್ರ ಇಂಧನ ನೀತಿಗೆ ನೀಡಲಾದ ಸಲಹೆಗಳನ್ನು ಅವರು ಸ್ವಾಗತಿಸಿದರು. ಪೂರ್ವ ಭಾರತದಲ್ಲಿ ಇಂಧನ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮತ್ತು ಇಂಧಕ್ಕೆ ಪ್ರವೇಶ ಒದಗಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಜೈವಿಕ ಇಂಧನದ ಸಾಮರ್ಥದ ಸಂಭಾವ್ಯತೆಯನ್ನು ಪ್ರಸ್ತಾಪ ಮಾಡಿದರು ಮತ್ತು ಕಲ್ಲಿದ್ದಲು ಅನಿಲೀಕರಣದಲ್ಲಿ ಸಹಭಾಗಿತ್ವಕ್ಕೆ ಮತ್ತು ಜಂಟಿ ಉದ್ಯಮಗಳಿಗೆ ಆಹ್ವಾನ ನೀಡಿದರು.

ಶುದ್ಧ ಮತ್ತು ಹೆಚ್ಚು ಇಂಧನ ಕ್ಷಮತೆಯ ಆರ್ಥಿಕತೆಯ ಭಾರತದ ನಡೆಯ ಬಗ್ಗೆ ಮಾತನಾಡಿದ ಪ್ರಧಾನಿಯವರು, ಇದರ ಲಾಭ ಸಮಾಜದ ಎಲ್ಲ ವರ್ಗದವರಿಗೂ ಅದರಲ್ಲೂ ಬಡಜನರಿಗೆ ವಿಸ್ತಾರವಾಗಿ ಲಭಿಸುವಂತಾಗಬೇಕು ಎಂದರು.

***