Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ ಗೆ ತೆರಳುವ ಮುನ್ನ ಪ್ರಧಾನಿಯರ ಹೇಳಿಕೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ ಗೆ ತೆರಳುವ ಮುನ್ನ ನೀಡಿದ ಅವರ ಹೇಳಿಕೆಯ ಪಠ್ಯ ಈ ಕೆಳಕಂಡಂತಿದೆ.

“ಜರ್ಮನಿಯ ಛಾನ್ಸಲರ್ ಆಂಗೆಲಾ ಮಾರ್ಕೆಲ್ ಅವರ ಆಹ್ವಾನದ ಮೇರೆಗೆ ನಾಲ್ಕನೇ ಭಾರತ-ಜರ್ಮನಿ ಅಂತರ ಸರ್ಕಾರೀಯ ಮಾತುಕತೆಗಾಗಿ (ಐಜಿಸಿ)ನಾನು 2017ರ ಮೇ 29-30ರವರೆಗೆ ಜರ್ಮನಿಗೆ ಭೇಟಿ ನೀಡುತ್ತಿದ್ದೇನೆ.

ಭಾರತ ಮತ್ತು ಜರ್ಮನಿ ಎರಡೂ ದೊಡ್ಡ ಪ್ರಜಾಪ್ರಭುತ್ವ, ಪ್ರಮುಖ ಆರ್ಥಿಕ ರಾಷ್ಟ್ರಗಳು ಮತ್ತು ಪ್ರಾದೇಶಿಕವಾಗಿ ಮತ್ತು ಜಾಗತಿಕ ವ್ಯವಹಾರದಲ್ಲಿ ಮಹತ್ವದ ಶಕ್ತಿಗಳಾಗಿವೆ. ನಮ್ಮ ವ್ಯೂಹಾತ್ಮಕ ಪಾಲುದಾರಿಕೆ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮುಕ್ತ, ಸಮಗ್ರ ಹಾಗೂ ಜಾಗತಿಕ ಮಟ್ಟದ ನಿಯಮಗಳ ಬದ್ಧತೆಯ ಆಧಾರದ ಮೇಲಿವೆ, ಜರ್ಮನಿಯು ನಮ್ಮ ಅಭಿವೃದ್ಧಿ ಉಪಕ್ರಮದಲ್ಲಿ ಮಹತ್ವದ ಪಾಲುದಾರ ಮತ್ತು ಜರ್ಮನಿಯ ಕಂಪನಿಗಳು ನನ್ನ ದೃಷ್ಟಿಕೋನದ ಭಾರತದ ಪರಿವರ್ತನೆಗೆ ಸರಿಯಾಗಿ ಹೊಂದುಕೊಳ್ಳುತ್ತವೆ.

ನಾನು ಜರ್ಮನಿಯ ಬರ್ಲಿನ್ ಬಳಿಯ ಮೆಸೆಬರ್ಗ್ ನಿಂದ ನನ್ನ ಭೇಟಿ ಆರಂಭಿಸಲಿದ್ದೇನೆ. ಅಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಮಹತ್ವದ ವಿಚಾರಗಳ ಚರ್ಚೆ ನಡೆಸಲು ಚಾನ್ಸಲರ್ ಮಾರ್ಕೆಲ್ ಅವರು ನನ್ನನ್ನು ತುಂಬಾ ಆದರದಿಂದ ಆಹ್ವಾನಿಸಿದ್ದಾರೆ.

ಮೇ 30ರಂದು, ಚಾನ್ಸಲರ್ ಮಾರ್ಕೆಲ್ ಮತ್ತು ನಾನು, ನಮ್ಮ ದ್ವಿಪಕ್ಷೀಯ ಬಾಂಧವ್ಯದ ಸ್ಥಿತಿಯ ಪರಾಮರ್ಶೆಗಾಗಿ 4ನೇ ಐಜಿಸಿ ನಡೆಸಲಿದ್ದೇವೆ. ನಾವು ವಾಣಿಜ್ಯ ಮತ್ತು ಹೂಡಿಕೆ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ, ನಾವಿನ್ಯತೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ, ಕೌಶಲ ಅಭಿವೃದ್ಧಿ, ನಗರ ಮೂಲಸೌಕರ್ಯ, ರೈಲ್ವೆ ಮತ್ತು ನಾಗರಿಕ ವಿಮಾನಯಾನ, ಶುದ್ಧ ಇಂಧನ, ಅಭಿವೃದ್ಧಿ ಸಹಕಾರ, ಆರೋಗ್ಯ ಮತ್ತು ಪರ್ಯಾಯ ವೈದ್ಯಕೀಯದ ಬಗ್ಗೆ ಗಮನ ಹರಿಸಿ ಭವಿಷ್ಯದ ಮಾರ್ಗಸೂಚಿಗಳನ್ನೂ ರೂಪಿಸಲಿದ್ದೇವೆ.

ನಾನು ಜರ್ಮನಿ ಒಕ್ಕೂಟ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಡಾ. ಫ್ರಾಂಕ್ – ವಾಲ್ಟರ್ ಸ್ಟೈನ್ಮಿಯರ್ ಅವರನ್ನೂ ಭೇಟಿ ಮಾಡಲಿದ್ದೇನೆ.

ಜರ್ಮನಿಯು ವಾಣಿಜ್ಯ, ತಂತ್ರಜ್ಞಾನ ಮತ್ತು ಹೂಡಿಕೆಯಲ್ಲಿ ನಮ್ಮ ಪ್ರಮುಖ ಪಾಲುದಾರ. ನಮ್ಮ ವಾಣಿಜ್ಯ ಹಾಗೂ ಹೂಡಿಕೆ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಬರ್ಲಿನ್ ನಲ್ಲಿ ನಾನು ಮತ್ತು ಚಾನ್ಸಲರ್ ಮಾರ್ಕೆಲ್ ಎರಡೂ ದೇಶಗಳ ಉನ್ನತ ವಾಣಿಜ್ಯ ನಾಯಕರೊಂದಿಗೆ ಸಂವಾದ ನಡೆಸಲಿದ್ದೇವೆ.

ಜರ್ಮನಿಯೊಂದಿಗಿನ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿ ಈ ಭೇಟಿ ಹೊಸ ಅಧ್ಯಾಯ ಬರೆಯಲಿದೆ ಮತ್ತು ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ.

ನಾನು 30-31ರಂದು ಸ್ಪೇನ್ ಗೆ ಅಧಿಕೃತ ಭೇಟಿ ನೀಡಲಿದ್ದೇನೆ. ಬಹುತೇಕ ಮೂರು ದಶಕಗಳ ಅವಧಿಯಲ್ಲಿ ಭಾರತದ ಪ್ರಧಾನಿಯೊಬ್ಬರು ಸ್ಪೇನ್ ಗೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ. ನಾನು ಅಲ್ಲಿ ಘನತೆವೆತ್ತ ದೊರೆ ಫೆಲಿಪ್ VI ಅವರನ್ನು ಭೇಟಿ ಮಾಡುವ ಗೌರವ ಪಡೆದಿದ್ದೇನೆ.

ನಾನು ಅಧ್ಯಕ್ಷ ಮೆರಿಯಾನೋ ರಾಜಾಯ್ ಅವರೊಂದಿಗೆ ಮೇ 31ರ ಭೇಟಿಯನ್ನು ಎದಿರುನೋಡುತ್ತಿದ್ದೇನೆ. ನಾವು ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಹೆಚ್ಚಿಸುವ ಮಾರ್ಗೋಪಾಯಗಳ ಬಗ್ಗೆ, ಅದರಲ್ಲೂ ಆರ್ಥಿಕ ಕ್ಷೇತ್ರ ಮತ್ತು ಸಮಾನ ಹಿತದ ಅಂತಾರಾಷ್ಟ್ರೀಯ ವಿಷಯಗಳು ಮುಖ್ಯವಾಗಿ ಭಯೋತ್ಪಾದನೆ ನಿಗ್ರಹದ ಕುರಿತು ಚರ್ಚಿಸಲಿದ್ದೇವೆ.

ನಮ್ಮ ದ್ವಿಪಕ್ಷೀಯ ವಾಣಿಜ್ಯ ಮತ್ತು ಹೂಡಿಕೆ ಬಾಂಧವ್ಯವನ್ನು ಮತ್ತಷ್ಟು ಆಳಗೊಳಿಸಲು ಗಣನೀಯ ಸಾಮರ್ಥ್ಯವಿದೆ. ನಾವು ಮೂಲಸೌಕರ್ಯ, ಸ್ಮಾರ್ಟ್ ಸಿಟಿಗಳು, ಡಿಜಿಟಲ್ ಆರ್ಥಿಕತೆ, ನವೀಕರಿಸಬಹುದಾದ ಇಂಧನ, ರಕ್ಷಣೆ ಹಾಗೂ ಪ್ರವಾಸೋದ್ಯಮ ಸೇರಿದಂತೆ ಹಲವು ಭಾರತೀಯ ಯೋಜನೆಗಳಲ್ಲಿ ಸ್ಪೇನ್ ನ ಕೈಗಾರಿಕೆಗಳ ಪಾಲುದಾರಿಕೆಯನ್ನು ಕೋರಲಿದ್ದೇವೆ.

ನಾನು ಸ್ಪೇನ್ ನ ಉನ್ನತ ಕೈಗಾರಿಕೆಗಳ ಸಿ.ಇ.ಓ.ಗಳನ್ನೂ ಭೇಟಿ ಮಾಡಲಿದ್ದು, ನಮ್ಮ ಮೇಕ್ ಇನ್ ಇಂಡಿಯಾ ಉಪಕ್ರಮದಲ್ಲಿ ಪಾಲುದಾರರಾಗುವಂತೆ ಉತ್ತೇಜಿಸುತ್ತೇನೆ.

ನನ್ನ ಭೇಟಿಯ ವೇಳೆ ಮೊದಲ ಭಾರತ-ಸ್ಪೇನ್ ಸಿಇಓಗಳ ವೇದಿಕೆಯ ಸಭೆಯೂ ನಡೆಯುತ್ತಿದೆ.ನಾವು ಭಾರತ –ಸ್ಪೇನ್ ಆರ್ಥಿಕ ಪಾಲುದಾರಿಕೆ ಬಲಪಡಿಸಲು ಅವರ ಮೌಲ್ಯಯುತ ಶಿಫಾರಸುಗಳಿಗೆ ಎದಿರು ನೋಡುತ್ತಿದ್ದೇನೆ.

18ನೇ ಭಾರತ- ರಷ್ಯಾ ವಾರ್ಷಿಕ ಶೃಂಗ ಸಭೆಯಲ್ಲಿ ಭಾಗವಹಿಸಲು ನಾನು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಗೆ ಮೇ 31ರಿಂದ ಜೂನ್ 2ರವರೆಗೆ ಭೇಟಿ ನೀಡುತ್ತಿದ್ದೇನೆ.

ಜೂನ್ 1ರಂದು, ಅಧ್ಯಕ್ಷ ಪುಟಿನ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದು, 2016ರ ಅಕ್ಟೋಬರ್ ನಲ್ಲಿ ಗೋವಾದಲ್ಲಿ ನಡೆದ ಶೃಂಗದ ಮಾತುಕತೆಗಳನ್ನು ಮುಂದೆ ತೆಗೆದುಕೊಂಡು ಹೋಗಲಿದ್ದೇವೆ. ಆರ್ಥಿಕ ಬಾಂಧವ್ಯದ ಮೇಲೆ ಬೆಳಕು ಚೆಲ್ಲಿ ನಾನು ಮತ್ತು ಪುಟಿನ್ ಅವರು ಎರಡೂ ದೇಶಗಳ ಸಿ.ಇ.ಓ.ಗಳೊಂದಿಗೆ ಸಂವಾದ ನಡೆಸಲಿದ್ದೇವೆ.

ಮಾರನೇ ದಿನ, ನಾನು ಸೇಂಟ್ ಪೀಟರ್ಸ್ ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ (ಎಸ್.ಪಿ.ಐ.ಇ.ಎಫ್.) ಉದ್ದೇಶಿಸಿ ಅಧ್ಯಕ್ಷ ಪುಟಿನ್ ರೊಂದಿಗೆ ಭಾಷಣ ಮಾಡಲಿದ್ದೇನೆ. ಈ ವರ್ಷದ ವೇದಿಕೆಯಲ್ಲಿ ನನಗೆ ಅತಿಥಿಯಾಗಿ ಆಹ್ವಾನ ನೀಡಿರುವುದನ್ನು ನಾನು ಪ್ರಶಂಸಿಸುತ್ತೇನೆ. ಭಾರತವು ಎಸ್.ಪಿ.ಐ.ಇ.ಎಫ್.ನಲ್ಲಿ ಈ ವರ್ಷ ಅತಿಥಿ ರಾಷ್ಟ್ರವಾಗಿದೆ.

ಮೊದಲ ಸಭೆಯಲ್ಲಿ, ರಷ್ಯಾದ ವಿವಿಧ ವಲಯಗಳ ಗೌರ್ನರ್ ಗಳೊಂದಿಗೆ ಅದರಲ್ಲೂ ರಾಜ್ಯಗಳು/ವಲಯಗಳು ಮತ್ತು ಇತರ ವೈವಿಧ್ಯಮಯ ಬಾಧ್ಯಸ್ಥರನ್ನೊಳಗೊಂಡಂತೆ ನಮ್ಮ ವಿಶಾಲ ದ್ವಿಪಕ್ಷೀಯ ಸಹಕಾರ ಕುರಿತು ಮಾತನಾಡುವ ಅವಕಾಶ ಸಿಕ್ಕಿದೆ.

ನನ್ನ ಭೇಟಿಯ ಆರಂಭದಲ್ಲಿ, ಪಿಸ್ಕೊರೊವ್ಸ್ಕೊಯ್ ಸ್ಮಶಾನಕ್ಕೆ ಭೇಟಿ ನೀಡಿ ಲೆನಿನ್ ಗ್ರಾಡ್ ಮುತ್ತಿಗೆಗೆ ಬಲಿಯಾದವರಿಗೆ ಗೌರವ ನಮನ ಸಲ್ಲಿಸಲಿದ್ದೇನೆ. ಪೌರಸ್ತ್ಯ ಹಸ್ತಪ್ರತಿಗಳ ಸಂಸ್ಥೆ ಮತ್ತು ವಿಶ್ವ ವಿಖ್ಯಾತ ಹೆರ್ಮಿಟ್ಗೆ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವ ಅವಕಾಶವೂ ದೊರೆತಿದೆ.

ಎರಡೂ ರಾಷ್ಟ್ರಗಳು ನಮ್ಮ ರಾಜತಾಂತ್ರಿಕ ಬಾಂಧವ್ಯದ 70ನೇ ವರ್ಷ ಆಚರಿಸುತ್ತಿರುವ ವಿಶೇಷ ವರ್ಷದಲ್ಲಿ ದ್ವಿಪಕ್ಷೀಯ ಬಾಂಧವ್ಯ ವರ್ಧನೆಗೆ ಸೇಂಟ್ ಪೀಟರ್ಸ್ ಬರ್ಗ್ ಗೆ ಭೇಟಿ ನೀಡುತ್ತಿರುವುದನ್ನು ನಾನು ಹೆಮ್ಮೆಯಿಂದ ಎದಿರು ನೋಡುತ್ತಿದ್ದೇನೆ.

ನಾನು ಫ್ರಾನ್ಸ್ ಗೆ 2017ರ ಜೂನ್ 2-3ರಂದು ಭೇಟಿ ನೀಡುತ್ತಿದ್ದೇನೆ, ಅಲ್ಲಿ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಘನತೆವೆತ್ತ ಶ್ರೀ. ಎಮ್ಯಾನ್ಯುಯಲ್ ಮಕ್ರಾನ್ ಅವರೊಂದಿಗೆ ಜೂನ್ 3ರಂದು ಅಧಿಕೃತ ಭೇಟಿ ಇದೆ.

ಫ್ರಾನ್ಸ್ ನಮ್ಮ ವ್ಯೂಹಾತ್ಮಕ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿದೆ.

ನಾನು ಅಧ್ಯಕ್ಷ ಮೆಕ್ರಾನ್ ಅವರನ್ನು ಭೇಟಿ ಮಾಡಿ, ಪರಸ್ಪರ ಹಿತದ ವಿಚಾರಗಳ ಬಗ್ಗೆ ಚರ್ಚಿಸಲು ಕಾತರನಾಗಿದ್ದೇನೆ. ನಾನು ಫ್ರೆಂಚ್ ಅಧ್ಯಕ್ಷರೊಂದಿಗೆ ಯು.ಎನ್. ಭದ್ರತಾ ಮಂಡಳಿಯ ಸುಧಾರಣೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವ, ವಿವಿಧ ಬಹುಪಕ್ಷೀಯ ರಫ್ತು ನಿಯಂತ್ರಣ ಆಡಳಿತಗಳಲ್ಲಿ ಭಾರತದ ಸದಸ್ಯತ್ವ, ಭಯೋತ್ಪಾದನೆ ನಿಗ್ರಹ ಸಹಕಾರ, ಹಮಾಮಾನ ಬದಲಾವಣೆ ಮತ್ತು ಅಂತಾರಾಷ್ಟ್ರೀಯ ಸೌರ ಸಹಯೋಗದಲ್ಲಿನ ಸಹಯೋಗ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಲಿದ್ದೇನೆ.

ಫ್ರಾನ್ಸ್ ನಮ್ಮ 9ನೇ ಅತಿ ದೊಡ್ಡ ಹೂಡಿಕೆಯ ಪಾಲುದಾರ ರಾಷ್ಟ್ರ ಮತ್ತು ನಮ್ಮ ರಕ್ಷಣೆ, ಬಾಹ್ಯಾಕಾಶ, ಪರಮಾಣು ಮತ್ತು ನವೀಕರಿಸಬಹುದಾದ ಇಂಧನ, ನಗರಾಭಿವೃದ್ಧಿ ಮತ್ತು ರೈಲ್ವೆ ಕ್ಷೇತ್ರಗಳಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಫ್ರಾನ್ಸ್ ನೊಂದಿಗೆ ನಮ್ಮ ಬಹು ಹಂತದ ಪಾಲುದಾರಿಕೆಯನ್ನು ಗಣನೀಯ ಪ್ರಮಾಣದಲ್ಲಿ ಬಲಪಡಿಸಲು ನಾನು ಬದ್ಧನಾಗಿದ್ದೇನೆ.”

****

AKT/NT