ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಕಾಯಿದೆ 2019ರ ಸೆಕ್ಷನ್ 96ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ (ರಾಜ್ಯ ಕಾನೂನುಗಳ ಬದಲಾವಣೆ) ಎರಡನೇ ಆದೇಶ 2020 ಹೊರಡಿಸಲು ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.
ಈ ಆದೇಶವು ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸೇವೆಗಳ (ವಿಕೇಂದ್ರೀಕರಣ ಮತ್ತು ನೇಮಕಾತಿ) ಕಾಯ್ದೆ (2010 ರ ಕಾಯ್ದೆ XVI) ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿನ ಎಲ್ಲಾ ಹಂತದ ಉದ್ಯೋಗಗಳಿಗೆ ಡೊಮಿಸೈಲ್ (ನಿವಾಸಿ) ಷರತ್ತುಗಳ ಆನ್ವಯಿಕತೆಯನ್ನು ಮತ್ತಷ್ಟು ಮಾರ್ಪಾಡು ಮಾಡಿದೆ.
ಈ ಆದೇಶವು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿನ ಎಲ್ಲಾ ಹುದ್ದೆಗಳಿಗೆ ಉದ್ಯೋಗಕ್ಕಾಗಿ ನಿಗದಿತ ನಿವಾಸಿ ಮಾನದಂಡವನ್ನು ಅನ್ವಯಿಸುತ್ತದೆ.