ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಜೀ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಶ್ರೀ ಒಮರ್ ಅಬ್ದುಲ್ಲಾ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ನಿತಿನ್ ಗಡ್ಕರಿ ಜೀ, ಶ್ರೀ ಜಿತೇಂದ್ರ ಸಿಂಗ್ ಜೀ, ಅಜಯ್ ಟಮ್ಟಾ ಜೀ, ಉಪ ಮುಖ್ಯಮಂತ್ರಿ ಸುರೇಂದರ್ ಕುಮಾರ್ ಚೌಧರಿ ಜೀ, ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ಜೀ, ಎಲ್ಲಾ ಸಂಸದರು, ಶಾಸಕರು ಮತ್ತು ಜಮ್ಮು ಮತ್ತು ಕಾಶ್ಮೀರದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ.
ಮೊದಲನೆಯದಾಗಿ, ದೇಶದ ಮತ್ತು ಜಮ್ಮು ಮತ್ತು ಕಾಶ್ಮೀರದ ಪ್ರಗತಿಗಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿಗಳಲ್ಲಿ ಕೆಲಸ ಮಾಡಿದ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಕಾರ್ಮಿಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಏಳು ಕಾರ್ಮಿಕ ಸ್ನೇಹಿತರು ಪ್ರಾಣ ಕಳೆದುಕೊಂಡರು, ಆದರೆ ಇದು ನಮ್ಮ ಸಂಕಲ್ಪದಿಂದ ನಮ್ಮನ್ನು ವಿಮುಖಗೊಳಿಸಲಿಲ್ಲ, ನನ್ನ ಕಾರ್ಮಿಕ ಸ್ನೇಹಿತರು ಧೃತಿಗೆಡಲಿಲ್ಲ. ಯಾವ ಕಾರ್ಮಿಕರೂ ಮನೆಗೆ ಹಿಂತಿರುಗಲಿಲ್ಲ, ಈ ನನ್ನ ಕಾರ್ಮಿಕ ಸಹೋದರರು ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಈ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಮತ್ತು ಇಂದು, ಮೊದಲನೆಯದಾಗಿ, ನಾವು ಕಳೆದುಕೊಂಡಿರುವ ನಮ್ಮ ಏಳು ಕಾರ್ಮಿಕರಿಗೆ ನಾನು ಶ್ರದ್ಧಾಂಜಲಿ ಅರ್ಪಿಸುತ್ತೇನೆ.
ಸ್ನೇಹಿತರೇ,
ಈ ಹವಾಮಾನ, ಹಿಮಪಾತ, ಮತ್ತು ಈ ಸುಂದರ ಹಿಮಾಚ್ಛಾದಿತ ಪರ್ವತಗಳು! ಇವೆಲ್ಲವೂ ನೋಡಲು ಎಂಥಾ ಆನಂದ! ಎರಡು ದಿನಗಳ ಹಿಂದೆ ನಮ್ಮ ಮುಖ್ಯಮಂತ್ರಿಗಳು ಈ ಪ್ರದೇಶದ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆ ಚಿತ್ರಗಳನ್ನು ನೋಡಿದ ಮೇಲೆ ಇಲ್ಲಿಗೆ ಬರಬೇಕೆಂಬ ನನ್ನ ಆಸಕ್ತಿ ಇನ್ನಷ್ಟು ಹೆಚ್ಚಾಯಿತು. ಮುಖ್ಯಮಂತ್ರಿಗಳು ಹೇಳಿದಂತೆ, ನಾನು ಬಹಳ ವರ್ಷಗಳಿಂದ ನಿಮ್ಮೆಲ್ಲರೊಂದಿಗೆ ಒಡನಾಟ ಹೊಂದಿದ್ದೇನೆ. ಇಲ್ಲಿಗೆ ಬಂದಾಗಲೆಲ್ಲಾ ಹಲವು ವರ್ಷಗಳ ಹಿಂದಿನ ನೆನಪುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ ನಾನು ಈ ಪ್ರದೇಶಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದೆ. ಸೋನಮಾರ್ಗ್, ಗುಲ್ಮಾರ್ಗ್, ಗಂಡೇರ್ಬಲ್, ಬಾರಾಮುಲ್ಲಾ ಹೀಗೆ ಎಲ್ಲೆಡೆ ಗಂಟೆಗಟ್ಟಲೆ, ಕಿಲೋಮೀಟರ್ಗಟ್ಟಲೆ ನಡೆದುಕೊಂಡು ಈ ಭಾಗದಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಆಗಲೂ ಹಿಮಪಾತ ತುಂಬಾ ಜೋರಾಗಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರದ ಜನರ ಪ್ರೀತಿ, ಆತ್ಮೀಯತೆ ಎಷ್ಟಿತ್ತು ಎಂದರೆ ನಮಗೆ ಚಳಿಯೇ ಅನಿಸುತ್ತಿರಲಿಲ್ಲ.
ಸ್ನೇಹಿತರೇ,
ಇಂದು ನಿಜಕ್ಕೂ ವಿಶೇಷವಾದ ದಿನ. ದೇಶದಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಯಾಗ್ರಾಜ್ನಲ್ಲಿ ಇಂದಿನಿಂದ ಮಹಾ ಕುಂಭ ಮೇಳ ಆರಂಭವಾಗುತ್ತಿದ್ದು, ಪವಿತ್ರ ಸ್ನಾನ ಮಾಡಲು ಕೋಟಿ ಕೋಟಿ ಜನರು ಅಲ್ಲಿಗೆ ಹರಿದು ಬರುತ್ತಿದ್ದಾರೆ. ಪಂಜಾಬ್ ಸೇರಿದಂತೆ ಉತ್ತರ ಭಾರತದಾದ್ಯಂತ ಲೋಹ್ರಿ ಹಬ್ಬದ ಸಡಗರ ಜೋರಾಗಿದೆ. ಉತ್ತರಾಯಣ, ಮಕರ ಸಂಕ್ರಾಂತಿ, ಪೊಂಗಲ್ ಹೀಗೆ ಹಲವಾರು ಹಬ್ಬಗಳು ಈ ಸಮಯದಲ್ಲಿ ಬರುತ್ತವೆ. ಈ ಹಬ್ಬಗಳನ್ನು ಆಚರಿಸುತ್ತಿರುವ ದೇಶದ ಮತ್ತು ಪ್ರಪಂಚದ ಎಲ್ಲ ಜನರಿಗೂ ನನ್ನ ಹಾರ್ದಿಕ ಶುಭಾಶಯಗಳು. ಈ ಸಮಯದಲ್ಲಿ ಕಣಿವೆಯಲ್ಲಿ ಚಿಲ್ಲೈ ಕಾಲನ್. ಈ 40 ದಿನಗಳ ಕಠಿಣ ಚಳಿಯನ್ನು ನೀವು ಧೈರ್ಯದಿಂದ ಎದುರಿಸುತ್ತೀರಿ. ಆದರೆ ಈ ಹವಾಮಾನವು ಸೋನಮಾರ್ಗ್ನಂತಹ ಪ್ರವಾಸಿ ತಾಣಗಳಿಗೆ ಹೊಸ ಅವಕಾಶಗಳನ್ನು ತೆರೆದಿಡುತ್ತದೆ. ದೇಶದ ಮೂಲೆ ಮೂಲೆಯಿಂದ ಪ್ರವಾಸಿಗರು ಇಲ್ಲಿಗೆ ಬಂದು, ಕಾಶ್ಮೀರದ ಕಣಿವೆಗಳ ಸೌಂದರ್ಯ ಸವಿಯುತ್ತಿದ್ದಾರೆ, ನಿಮ್ಮ ಆತಿಥ್ಯವನ್ನು ಮನದುಂಬಿ ಆನಂದಿಸುತ್ತಿದ್ದಾರೆ.
ಸ್ನೇಹಿತರೇ,
ಇಂದು ನಾನು ನಿಮ್ಮ ಸೇವಕನಾಗಿ ಒಂದು ಅದ್ಭುತ ಉಡುಗೊರೆಯೊಂದಿಗೆ ನಿಮ್ಮ ಬಳಿಗೆ ಬಂದಿದ್ದೇನೆ. ಕೆಲವು ದಿನಗಳ ಹಿಂದಷ್ಟೇ, ನಮ್ಮ ಮುಖ್ಯಮಂತ್ರಿಗಳು ಹೇಳಿದ ಹಾಗೆ, ಹದಿನೈದು ದಿನಗಳ ಹಿಂದೆ, ಜಮ್ಮುವಿನಲ್ಲಿ ನಿಮ್ಮದೇ ಆದ ರೈಲ್ವೆ ವಿಭಾಗಕ್ಕೆ ಶಂಕುಸ್ಥಾಪನೆ ನೆರವೇರಿಸುವ ಭಾಗ್ಯ ನನಗೆ ಲಭಿಸಿತ್ತು. ಇದು ನಿಮ್ಮ ಬಹುದಿನಗಳ ಬೇಡಿಕೆಯಾಗಿತ್ತು. ಇಂದು, ಸೋನಮಾರ್ಗ್ ಸುರಂಗವನ್ನು ದೇಶಕ್ಕೆ, ಮತ್ತು ನಿಮಗೆಲ್ಲರಿಗೂ ಸಮರ್ಪಿಸುವ ಸುಯೋಗ ನನಗೆ ದೊರೆತಿದೆ. ಅಂದರೆ, ಜಮ್ಮು ಕಾಶ್ಮೀರ ಮತ್ತು ಲಡಾಖ್ನ ಮತ್ತೊಂದು ಬಹುದಿನಗಳ ಬೇಡಿಕೆ ಇಂದು ಈಡೇರಿದೆ ಎಂದರ್ಥ. ಮತ್ತು ನೀವು ಖಂಡಿತವಾಗಿಯೂ ಒಂದು ವಿಷಯ ನೆನಪಿಟ್ಟುಕೊಳ್ಳಬಹುದು – ಇದು ಮೋದಿ; ಒಮ್ಮೆ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತಾನೆ. ಪ್ರತಿಯೊಂದು ಕೆಲಸಕ್ಕೂ ಒಂದು ಸೂಕ್ತ ಸಮಯ ಇರುತ್ತದೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ಕೆಲಸವನ್ನು ಮಾಡಲಾಗುತ್ತದೆ.
ಸ್ನೇಹಿತರೇ,
ಮತ್ತು ನಾನು ಸೋನಮಾರ್ಗ್ ಸುರಂಗದ ಬಗ್ಗೆ ಮಾತನಾಡುತ್ತಿದ್ದಾಗ, ಇದು ಸೋನಾಮಾರ್ಗ್ ಜನರಿಗೆ ಮತ್ತು ಕಾರ್ಗಿಲ್ ಮತ್ತು ಲೇಹ್ ಜನರಿಗೆ ಜೀವನವನ್ನು ಸುಲಭಗೊಳಿಸುತ್ತದೆ. ಈಗ ಹಿಮಪಾತದ ಸಮಯದಲ್ಲಿ ಹಿಮಕುಸಿತ ಅಥವಾ ಮಳೆಯ ಸಮಯದಲ್ಲಿ ಭೂಕುಸಿತದಿಂದಾಗಿ ರಸ್ತೆಗಳು ಮುಚ್ಚಿಹೋಗುವ ಸಮಸ್ಯೆ ಕಡಿಮೆಯಾಗುತ್ತದೆ. ರಸ್ತೆಗಳು ಮುಚ್ಚಿದಾಗ, ಇಲ್ಲಿಂದ ದೊಡ್ಡ ಆಸ್ಪತ್ರೆಗೆ ಹೋಗುವುದು ಕಷ್ಟವಾಗುತ್ತದೆ. ಇದರಿಂದಾಗಿ, ಇಲ್ಲಿ ಅಗತ್ಯ ವಸ್ತುಗಳನ್ನು ಪಡೆಯುವಲ್ಲಿ ತೊಂದರೆಗಳಿದ್ದವು, ಈಗ ಸೋನಮಾರ್ಗ್ ಸುರಂಗದ ನಿರ್ಮಾಣದಿಂದ ಈ ಸಮಸ್ಯೆಗಳು ಬಹಳಷ್ಟು ಕಡಿಮೆಯಾಗುತ್ತವೆ.
ಸ್ನೇಹಿತರೇ,
ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರವೇ 2015ರಲ್ಲಿ ಸೋನಾಮಾರ್ಗ್ ಸುರಂಗದ ನಿಜವಾದ ನಿರ್ಮಾಣ ಪ್ರಾರಂಭವಾಯಿತು. ಮುಖ್ಯಮಂತ್ರಿಗಳು ಆ ಅವಧಿಯನ್ನು ಬಹಳ ಒಳ್ಳೆಯ ಮಾತುಗಳಲ್ಲಿ ವಿವರಿಸಿದರು. ನಮ್ಮ ಸರ್ಕಾರದ ಅವಧಿಯಲ್ಲಿ ಈ ಸುರಂಗದ ಕಾಮಗಾರಿ ಪೂರ್ಣಗೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಮತ್ತು ನಾನು ಯಾವಾಗಲೂ ಒಂದು ತತ್ವ ಪಾಲಿಸುತ್ತೇನೆ – ನಾವು ಯಾವುದೇ ಕಾರ್ಯ ಆರಂಭಿಸಿದರೂ ಅದನ್ನು ನಾವೇ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುತ್ತೇವೆ. ಹಿಂದಿನ ಕಾಲದಲ್ಲಿ ಯೋಜನೆಗಳು ಕುಂಟುತ್ತಾ ಸಾಗುತ್ತಿದ್ದವು, ಯಾವಾಗ ಪೂರ್ಣಗೊಳ್ಳುತ್ತವೆಯೋ ಯಾರಿಗೂ ತಿಳಿದಿರುತ್ತಿರಲಿಲ್ಲ. ಆದರೆ ಈಗ ಆ ಕಾಲ ಹೋಗಿದೆ.
ಸ್ನೇಹಿತರೇ,
ಈ ಸುರಂಗವು ಈ ಚಳಿಗಾಲದಲ್ಲೂ ಸೋನಮಾರ್ಗ್ಗೆ ನಿರಂತರ ಸಂಪರ್ಕ ಕಲ್ಪಿಸುತ್ತದೆ. ಇದು ಸೋನಮಾರ್ಗ್ ಸೇರಿದಂತೆ ಈ ಇಡೀ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತುಂಬುತ್ತದೆ. ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆ ಮತ್ತು ರೈಲು ಸಂಪರ್ಕಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳು ಪೂರ್ಣಗೊಳ್ಳಲಿವೆ. ಇಲ್ಲಿ ಹತ್ತಿರದಲ್ಲೇ ಮತ್ತೊಂದು ದೊಡ್ಡ ಸಂಪರ್ಕ ಯೋಜನೆಯ ಕಾಮಗಾರಿಯೂ ನಡೆಯುತ್ತಿದೆ. ಈಗ ಕಾಶ್ಮೀರ ಕಣಿವೆಯನ್ನು ಕೂಡ ರೈಲು ಮಾರ್ಗದ ಮೂಲಕ ಸಂಪರ್ಕಿಸಲಾಗುತ್ತಿದೆ. ಇದರ ಬಗ್ಗೆ ಇಲ್ಲಿ ಎಲ್ಲರಲ್ಲೂ ಉತ್ಸಾಹ ತುಂಬಿರುವುದನ್ನು ನಾನು ಕಾಣುತ್ತಿದ್ದೇನೆ. ಹೊಸ ರಸ್ತೆಗಳು ನಿರ್ಮಾಣವಾಗುತ್ತಿವೆ, ಕಾಶ್ಮೀರಕ್ಕೆ ರೈಲುಗಳು ಬರಲಾರಂಭಿಸಿವೆ, ಹೊಸ ಕಾಲೇಜುಗಳು ತಲೆ ಎತ್ತುತ್ತಿವೆ – ಇದೇ ನವ ಜಮ್ಮು ಮತ್ತು ಕಾಶ್ಮೀರ. ಈ ಸುರಂಗಕ್ಕಾಗಿ ಮತ್ತು ಅಭಿವೃದ್ಧಿಯ ಈ ನವ ಯುಗಕ್ಕಾಗಿ ನಾನು ನಿಮ್ಮೆಲ್ಲರನ್ನೂ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಇಂದು ಭಾರತ ಪ್ರಗತಿಯ ಹೊಸ ಶಿಖರಗಳತ್ತ ಸಾಗುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ತೊಡಗಿಸಿಕೊಂಡಿದ್ದಾನೆ. ನಮ್ಮ ದೇಶದ ಯಾವುದೇ ಭಾಗ, ಯಾವುದೇ ಕುಟುಂಬ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿಯದಿದ್ದಾಗ ಮಾತ್ರ ಇದು ಸಾಧ್ಯ. ಇದಕ್ಕಾಗಿ, ನಮ್ಮ ಸರ್ಕಾರವು ಸಬ್ಕಾ ಸಾಥ್-ಸಬ್ಕಾ ವಿಕಾಸ್ ಎಂಬ ಮನೋಭಾವದಿಂದ ಪೂರ್ಣ ಸಮರ್ಪಣಾ ಭಾವದಿಂದ ಹಗಲಿರುಳು ಶ್ರಮಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇಡೀ ದೇಶದ 4 ಕೋಟಿಗೂ ಹೆಚ್ಚು ಬಡವರಿಗೆ ಕಾಂಕ್ರೀಟ್ ಮನೆಗಳು ದೊರೆತಿವೆ. ಮುಂಬರುವ ಸಮಯದಲ್ಲಿ, 3 ಕೋಟಿ ಹೊಸ ಮನೆಗಳನ್ನು ಬಡವರಿಗೆ ನೀಡಲಾಗುವುದು. ಇಂದು, ಭಾರತದಲ್ಲಿ ಕೋಟ್ಯಂತರ ಜನರು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಜಮ್ಮು ಮತ್ತು ಕಾಶ್ಮೀರದ ಜನರು ಸಹ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ಯುವಕರ ಶಿಕ್ಷಣಕ್ಕಾಗಿ ದೇಶಾದ್ಯಂತ ಹೊಸ ಐಐಟಿಗಳು, ಹೊಸ ಐಐಎಂಗಳು, ಹೊಸ ಏಮ್ಸ್, ಹೊಸ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜುಗಳನ್ನು ನಿರಂತರವಾಗಿ ನಿರ್ಮಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಕಳೆದ 10 ವರ್ಷಗಳಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ನಿರ್ಮಾಣವಾಗಿವೆ. ಇದರಿಂದ ನನ್ನ ಪುತ್ರರು ಮತ್ತು ಪುತ್ರಿಯರು, ಇಲ್ಲಿನ ನಮ್ಮ ಯುವಕರು ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ.
ಸ್ನೇಹಿತರೇ,
ಇಂದು, ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ, ಎಷ್ಟು ದೊಡ್ಡ ರಸ್ತೆಗಳು, ಸುರಂಗಗಳು, ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಮ್ಮ ಜಮ್ಮು ಮತ್ತು ಕಾಶ್ಮೀರ ಈಗ ಸುರಂಗಗಳು, ಎತ್ತರದ ಸೇತುವೆಗಳು, ರೋಪ್ ವೇಗಳ ಕೇಂದ್ರವಾಗುತ್ತಿದೆ. ವಿಶ್ವದ ಅತಿ ಎತ್ತರದ ಸುರಂಗಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ವಿಶ್ವದ ಅತಿ ಎತ್ತರದ ರೈಲು-ರಸ್ತೆ ಸೇತುವೆಗಳು, ಕೇಬಲ್ ಸೇತುವೆಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ವಿಶ್ವದ ಅತಿ ಎತ್ತರದ ರೈಲು ಮಾರ್ಗಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ನಮ್ಮ ಚೆನಾಬ್ ಸೇತುವೆಯ ಎಂಜಿನಿಯರಿಂಗ್ ಪ್ರಪಂಚದಾದ್ಯಂತದ ಜನರನ್ನು ಅಚ್ಚರಿಗೊಳಿಸಿದೆ. ಕಳೆದ ವಾರವಷ್ಟೇ, ಈ ಸೇತುವೆಯ ಮೇಲೆ ಪ್ರಯಾಣಿಕರ ರೈಲಿನ ಪ್ರಯೋಗವನ್ನು ಪೂರ್ಣಗೊಳಿಸಲಾಯಿತು. ಕಾಶ್ಮೀರದ ರೈಲ್ವೆ ಸಂಪರ್ಕವನ್ನು ಹೆಚ್ಚಿಸುವ ಕೇಬಲ್ ಸೇತುವೆ, ಜೋಜಿಲಾ, ಚೆನಾನಿ ನಾಶ್ರಿ ಮತ್ತು ಸೋನಮಾರ್ಗ್ ಸುರಂಗಗಳ ಯೋಜನೆಗಳು, ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆ, ಶಂಕರಾಚಾರ್ಯ ದೇವಾಲಯ, ಶಿವ ಖೋರಿ ಮತ್ತು ಬಾಲ್ತಾಲ್-ಅಮರನಾಥ ದೇವಾಲಯ ರೋಪ್ ವೇ ಯೋಜನೆ, ಕತ್ರಾದಿಂದ ದೆಹಲಿಗೆ ಎಕ್ಸ್ ಪ್ರೆಸ್ ವೇ ಯೋಜನೆ, ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆ ಸಂಪರ್ಕಕ್ಕೆ ಸಂಬಂಧಿಸಿದ 42 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯೋಜನೆಗಳ ಕಾಮಗಾರಿಗಳು ನಡೆಯುತ್ತಿವೆ. ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಎರಡು ವರ್ತುಲ ರಸ್ತೆಗಳ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಸೋನಮಾರ್ಗ್ ನಂತಹ 14ಕ್ಕೂ ಹೆಚ್ಚು ಸುರಂಗಗಳ ಕಾಮಗಾರಿ ಇಲ್ಲಿ ನಡೆಯುತ್ತಿದೆ. ಈ ಎಲ್ಲಾ ಯೋಜನೆಗಳು ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಅತ್ಯಂತ ಸಂಪರ್ಕಿತ ರಾಜ್ಯಗಳಲ್ಲಿ ಒಂದನ್ನಾಗಿ ಮಾಡಲಿವೆ.
ಸ್ನೇಹಿತರೇ,
ಅಭಿವೃದ್ಧಿ ಹೊಂದಿದ ಭಾರತದೆಡೆಗಿನ ನಮ್ಮ ಪಯಣದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಸುಧಾರಿತ ಸಂಪರ್ಕ ವ್ಯವಸ್ಥೆಯಿಂದಾಗಿ, ಜಮ್ಮು ಮತ್ತು ಕಾಶ್ಮೀರದ ದುರ್ಗಮ ಪ್ರದೇಶಗಳಿಗೂ ಪ್ರವಾಸಿಗರು ಈಗ ಸುಲಭವಾಗಿ ತಲುಪಬಹುದು. ಕಳೆದ ಹತ್ತು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಶಾಂತಿ ಮತ್ತು ಪ್ರಗತಿಯ ವಾತಾವರಣದ ಫಲವನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಾವು ಈಗಾಗಲೇ ಕಾಣುತ್ತಿದ್ದೇವೆ. 2024ರಲ್ಲಿ 2 ಕೋಟಿಗೂ ಹೆಚ್ಚು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ! ಇಲ್ಲಿ ಸೋನಮಾರ್ಗ್ನಲ್ಲಿ ಕೂಡ, ಕಳೆದ 10 ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ 6 ಪಟ್ಟು ಹೆಚ್ಚಾಗಿದೆ ಎಂದರೆ ನಿಮಗೆ ಅರ್ಥವಾಗುತ್ತದೆ ಅಲ್ಲವೇ, ಪ್ರವಾಸೋದ್ಯಮ ಎಷ್ಟು ಬೆಳೆದಿದೆ ಎಂದು. ಇದರಿಂದ ನೀವೆಲ್ಲರೂ ಲಾಭ ಪಡೆದಿದ್ದೀರಿ. ಸಾರ್ವಜನಿಕರು, ಹೋಟೆಲ್ ಮಾಲೀಕರು, ಹೋಮ್ ಸ್ಟೇ ನಡೆಸುವವರು, ಡಾಬಾ ಮಾಲೀಕರು, ಬಟ್ಟೆ ಅಂಗಡಿಗಳವರು, ಟ್ಯಾಕ್ಸಿ ಚಾಲಕರು ಹೀಗೆ ಎಲ್ಲರೂ ಇದರ ಪ್ರಯೋಜನ ಪಡೆದಿದ್ದಾರೆ.
ಸ್ನೇಹಿತರೇ,
ಇಪ್ಪತ್ತೊಂದನೇ ಶತಮಾನದ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಹೊಸ ಅಧ್ಯಾಯವನ್ನೇ ಬರೆಯುತ್ತಿದೆ. ಹಿಂದಿನ ಕಠಿಣ ದಿನಗಳನ್ನು ಮರೆತು, ನಮ್ಮ ಕಾಶ್ಮೀರ ಭೂಮಿಯ ಮೇಲಿನ ಸ್ವರ್ಗ ಎಂಬ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯುತ್ತಿದೆ. ಈಗ ಜನರು ರಾತ್ರಿಯ ವೇಳೆಯಲ್ಲಿ ಲಾಲ್ ಚೌಕ್ಗೆ ಹೋಗಿ ಐಸ್ ಕ್ರೀಮ್ ಸವಿಯುತ್ತಾರೆ, ರಾತ್ರಿಯಲ್ಲೂ ಅಲ್ಲಿ ಜನಜಂಗುಳಿ ಕಂಡುಬರುತ್ತದೆ. ನಮ್ಮ ಕಾಶ್ಮೀರಿ ಕಲಾವಿದರು ಪೋಲೋ ವ್ಯೂ ಮಾರುಕಟ್ಟೆಯನ್ನು ಒಂದು ಕಲಾ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಇಲ್ಲಿನ ಸಂಗೀತಗಾರರು, ಕಲಾವಿದರು, ಗಾಯಕರು ಅಲ್ಲಿ ಹೇಗೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ ಎಂಬುದನ್ನು ನಾನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೇನೆ. ಇಂದು ಶ್ರೀನಗರದಲ್ಲಿ ಜನರು ತಮ್ಮ ಮಕ್ಕಳೊಂದಿಗೆ ಸಿನಿಮಾ ಮಂದಿರಗಳಿಗೆ ಚಿತ್ರ ನೋಡಲು ಹೋಗುತ್ತಾರೆ, ನಿಶ್ಚಿಂತೆಯಿಂದ ಶಾಪಿಂಗ್ ಮಾಡುತ್ತಾರೆ. ಯಾವುದೇ ಸರ್ಕಾರ ಒಬ್ಬಂಟಿಯಾಗಿ ಇಷ್ಟೆಲ್ಲಾ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ರೀತಿಯ ಪರಿವರ್ತನೆ ತರಲು ಇಲ್ಲಿನ ಜನರ ಪಾತ್ರ ಅತ್ಯಂತ ಮಹತ್ವದ್ದು. ನೀವು ಪ್ರಜಾಪ್ರಭುತ್ವವನ್ನು ಬಲಪಡಿಸಿದ್ದೀರಿ, ನೀವು ಭವಿಷ್ಯವನ್ನು ಬಲಪಡಿಸಿದ್ದೀರಿ.
ಸ್ನೇಹಿತರೇ,
ಜಮ್ಮು ಮತ್ತು ಕಾಶ್ಮೀರದ ಯುವಜನತೆಯ ಭವಿಷ್ಯ ನಿಜಕ್ಕೂ ಉಜ್ವಲವಾಗಿದೆ ಎಂದು ನನಗೆ ಖಚಿತವಾಗಿ ಅನಿಸುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿರುವ ಅವಕಾಶಗಳನ್ನೇ ನೋಡಿ! ಕೆಲವು ತಿಂಗಳ ಹಿಂದಷ್ಟೇ ಶ್ರೀನಗರದಲ್ಲಿ ಮೊಟ್ಟಮೊದಲ ಬಾರಿಗೆ ಅಂತರರಾಷ್ಟ್ರೀಯ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು. ಅದರ ಚಿತ್ರಗಳನ್ನು ನೋಡಿದವರೆಲ್ಲರೂ ಮನಸಾರೆ ಖುಷಿಪಟ್ಟರು. ನನಗೂ ಚೆನ್ನಾಗಿ ನೆನಪಿದೆ, ನಮ್ಮ ಮುಖ್ಯಮಂತ್ರಿಗಳು ಸ್ವತಃ ಆ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು. ಅದರ ವಿಡಿಯೋ ಕೂಡ ವೈರಲ್ ಆಯಿತು. ದೆಹಲಿಯಲ್ಲಿ ಅವರನ್ನು ಭೇಟಿಯಾದಾಗ ನಾನು ಅವರನ್ನು ವಿಶೇಷವಾಗಿ ಶ್ಲಾಘಿಸಿದೆ. ಆ ಭೇಟಿಯ ಸಮಯದಲ್ಲಿ ಅವರ ಉತ್ಸಾಹ, ಹುರುಪು ನನ್ನ ಗಮನ ಸೆಳೆಯಿತು. ಅವರು ಆ ಮ್ಯಾರಥಾನ್ ಬಗ್ಗೆ ಬಹಳ ಆಸಕ್ತಿಯಿಂದ ವಿವರವಾಗಿ ಹೇಳುತ್ತಿದ್ದರು.
ಸ್ನೇಹಿತರೇ,
ನಿಜಕ್ಕೂ ಇದು ನವ ಜಮ್ಮು ಮತ್ತು ಕಾಶ್ಮೀರದ ನವ ಯುಗ ಅಂತಾನೆ ಹೇಳಬಹುದು. ಇತ್ತೀಚೆಗೆ, ನಲವತ್ತು ವರ್ಷಗಳ ಬಳಿಕ ಕಾಶ್ಮೀರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಲೀಗ್ ಯಶಸ್ವಿಯಾಗಿ ನಡೆದಿದೆ. ಅದಕ್ಕೂ ಮೊದಲು, ದಾಲ್ ಸರೋವರದ ಸುತ್ತ ಜರುಗಿದ ಕಾರು ಓಟದ ರೋಚಕ ದೃಶ್ಯಗಳನ್ನು ನಾವೆಲ್ಲರೂ ಕಣ್ತುಂಬಿಕೊಂಡಿದ್ದೇವೆ. ನಮ್ಮ ಗುಲ್ಮಾರ್ಗ್ ಈಗ ಭಾರತದ ಚಳಿಗಾಲದ ಕ್ರೀಡಾ ತಾಣವಾಗಿ ಮುಂಚೂಣಿಗೆ ಬರುತ್ತಿದೆ. ಗುಲ್ಮಾರ್ಗ್ನಲ್ಲಿ ಈಗಾಗಲೇ ನಾಲ್ಕು ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟಗಳು ಜರುಗಿವೆ. ಐದನೇ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟ ಕೂಡ ಮುಂದಿನ ತಿಂಗಳು ಆರಂಭವಾಗಲಿದೆ. ಕಳೆದ ಎರಡು ವರ್ಷಗಳಲ್ಲಿ ದೇಶದ ಮೂಲೆ ಮೂಲೆಯಿಂದ 2500 ಕ್ರೀಡಾಪಟುಗಳು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 90 ಕ್ಕೂ ಹೆಚ್ಚು ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಮ್ಮ ಭಾಗದ 4500 ಯುವಕರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಸ್ನೇಹಿತರೇ,
ಇಂದು, ಜಮ್ಮು ಮತ್ತು ಕಾಶ್ಮೀರದ ಯುವಜನತೆಗೆ ಹೊಸ ಹೊಸ ಅವಕಾಶಗಳು ಎಲ್ಲೆಡೆ ತೆರೆದುಕೊಳ್ಳುತ್ತಿವೆ. ಜಮ್ಮು ಮತ್ತು ಅವಂತಿಪೋರದಲ್ಲಿ ಏಮ್ಸ್ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಜೋರಾಗಿ ನಡೆಯುತ್ತಿದೆ. ಹೀಗಾಗಿ ಚಿಕಿತ್ಸೆಗಾಗಿ ದೇಶದ ಬೇರೆ ಬೇರೆ ಭಾಗಗಳಿಗೆ ಹೋಗಬೇಕಾದ ಅನಿವಾರ್ಯತೆ ಈಗ ಕಡಿಮೆಯಾಗುತ್ತದೆ. ಜಮ್ಮುವಿನಲ್ಲಿರುವ ಐಐಟಿ, ಐಐಎಂ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯದ ಅತ್ಯುತ್ತಮ ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ವಿಶ್ವಕರ್ಮ ಸ್ನೇಹಿತರು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಕರಕುಶಲ ಕಲೆಗಳನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅವರಿಗೆ ಪಿಎಂ ವಿಶ್ವಕರ್ಮ ಯೋಜನೆ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಇತರ ಯೋಜನೆಗಳ ಆಸರೆ ಲಭ್ಯವಿದೆ. ನಾವು ಈ ಭಾಗಕ್ಕೆ ಹೊಸ ಹೊಸ ಕೈಗಾರಿಕೆಗಳನ್ನು ತರಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ವಿವಿಧ ಕ್ಷೇತ್ರಗಳ ಉದ್ಯಮಿಗಳು ಇಲ್ಲಿ ಸುಮಾರು 13 ಸಾವಿರ ಕೋಟಿ ರೂಪಾಯಿಗಳನ್ನು ಹೂಡಲು ಮುಂದೆ ಬಂದಿದ್ದಾರೆ. ಇದರಿಂದ ಇಲ್ಲಿನ ಸಾವಿರಾರು ಯುವಕರಿಗೆ ಉದ್ಯೋಗಗಳು ಸೃಷ್ಟಿಯಾಗಲಿವೆ. ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಕೂಡ ಈಗ ಮತ್ತಷ್ಟು ಚೆನ್ನಾಗಿ ಕೆಲಸ ಮಾಡಲು ಆರಂಭಿಸಿದೆ. ಕಳೆದ 4 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿನ ವ್ಯವಹಾರ 1 ಲಕ್ಷ 60 ಸಾವಿರ ಕೋಟಿಗಳಿಂದ 2 ಲಕ್ಷ 30 ಸಾವಿರ ಕೋಟಿಗಳಿಗೆ ಹೆಚ್ಚಳವಾಗಿದೆ. ಇದರರ್ಥ ಈ ಬ್ಯಾಂಕಿನ ವ್ಯಾಪ್ತಿ ವಿಸ್ತಾರವಾಗುತ್ತಿದೆ, ಸಾಲ ನೀಡುವ ಸಾಮರ್ಥ್ಯವೂ ಹೆಚ್ಚಾಗುತ್ತಿದೆ. ಇದರಿಂದ ಇಲ್ಲಿನ ಯುವಕರು, ರೈತರು, ತೋಟಗಾರರು, ಅಂಗಡಿಯವರು, ವ್ಯಾಪಾರಿಗಳು ಹೀಗೆ ಎಲ್ಲರಿಗೂ ಪ್ರಯೋಜನವಾಗುತ್ತಿದೆ.
ಸ್ನೇಹಿತರೇ,
ಜಮ್ಮು ಮತ್ತು ಕಾಶ್ಮೀರದ ಭೂತಕಾಲವು ಈಗ ಅಭಿವೃದ್ಧಿಯ ವರ್ತಮಾನವಾಗಿ ಬದಲಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗಬೇಕಾದರೆ ಅದರ ಶಿಖರವು ಪ್ರಗತಿಯ ರತ್ನಗಳಿಂದ ಜ್ವಲಿಸಬೇಕು. ಕಾಶ್ಮೀರವು ದೇಶದ ಕಿರೀಟ, ಭಾರತದ ಮುಕುಟ. ಅದಕ್ಕಾಗಿಯೇ ಈ ಮುಕುಟವು ಇನ್ನಷ್ಟು ಚೆಂದನಾಗಿರಬೇಕು, ಇನ್ನಷ್ಟು ಶ್ರೀಮಂತವಾಗಿರಬೇಕು ಎಂದು ನಾನು ಹಾರೈಸುತ್ತೇನೆ. ಮತ್ತು ಈ ಮಹತ್ಕಾರ್ಯದಲ್ಲಿ ಇಲ್ಲಿನ ಯುವಕರು, ಹಿರಿಯರು, ನನ್ನ ಮಕ್ಕಳು ಎಲ್ಲರ ಸಹಕಾರ ನನಗೆ ಸಿಗುತ್ತಿರುವುದನ್ನು ಕಂಡು ನನಗೆ ಅತೀವ ಸಂತೋಷವಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಉನ್ನತಿಗಾಗಿ, ಭಾರತದ ಅಭ್ಯುದಯಕ್ಕಾಗಿ, ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ನೀವು ಅವಿರತವಾಗಿ ಶ್ರಮಿಸುತ್ತಿದ್ದೀರಿ. ಮತ್ತೊಮ್ಮೆ ನಾನು ನಿಮಗೆ ಭರವಸೆ ಮಾಡುತ್ತೇನೆ, ಮೋದಿ ಯಾವಾಗಲೂ ನಿಮ್ಮ ಜೊತೆಗಿರುತ್ತಾನೆ. ನಿಮ್ಮ ಕನಸುಗಳ ಮಾರ್ಗದಲ್ಲಿ ಎದುರಾಗುವ ಎಲ್ಲಾ ಅಡಚಣೆಗಳನ್ನು ಅವನು ನಿವಾರಿಸುತ್ತಾನೆ.
ಸ್ನೇಹಿತರೇ,
ಮತ್ತೊಮ್ಮೆ, ಇಂದಿನ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಕುಟುಂಬಕ್ಕೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ನಮ್ಮ ಸಹೋದ್ಯೋಗಿಗಳಾದ ನಿತಿನ್ ಜೀ, ಮನೋಜ್ ಸಿನ್ಹಾ ಜೀ ಮತ್ತು ಮುಖ್ಯಮಂತ್ರಿಗಳು ಪ್ರಗತಿಯ ವೇಗ, ಅಭಿವೃದ್ಧಿಯ ವೇಗ ಮತ್ತು ಪ್ರಾರಂಭಿಸಲಿರುವ ಹೊಸ ಯೋಜನೆಗಳನ್ನು ವಿವರವಾಗಿ ವಿವರಿಸಿದ್ದಾರೆ. ಆದ್ದರಿಂದ, ನಾನು ಅದನ್ನೇ ಮತ್ತೆ ಮತ್ತೆ ಹೇಳುವುದಿಲ್ಲ. ಈಗ ನಮ್ಮ ನಡುವಿನ ಅಂತರ ಕಡಿಮೆಯಾಗಿದೆ ಎಂದು ಮಾತ್ರ ನಿಮಗೆ ತಿಳಿಸುತ್ತೇನೆ. ಈಗ ನಾವೆಲ್ಲರೂ ಒಟ್ಟಾಗಿ ಕನಸು ಕಾಣಬೇಕು, ಸಂಕಲ್ಪಗಳನ್ನು ತೆಗೆದುಕೊಳ್ಳಬೇಕು ಮತ್ತು ಯಶಸ್ಸನ್ನು ಸಾಧಿಸಬೇಕು. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು.
ತುಂಬಾ ತುಂಬಾ ಧನ್ಯವಾದಗಳು.
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಯಿತು.
*****
Delighted to be amongst the wonderful people of Sonamarg. With the opening of the tunnel here, connectivity will significantly improve and tourism will see a major boost in Jammu and Kashmir. https://t.co/NQnu19ywpi
— Narendra Modi (@narendramodi) January 13, 2025
The Sonamarg Tunnel will give a significant boost to connectivity and tourism. pic.twitter.com/AuIw5Kqla3
— PMO India (@PMOIndia) January 13, 2025
Improved connectivity will open doors for tourists to explore lesser-known regions of Jammu and Kashmir. pic.twitter.com/QCd4aCcMRA
— PMO India (@PMOIndia) January 13, 2025
Jammu and Kashmir of the 21st century is scripting a new chapter of development. pic.twitter.com/WddTnuNAxv
— PMO India (@PMOIndia) January 13, 2025
कश्मीर तो देश का मुकुट है…भारत का ताज है। इसलिए मैं चाहता हूं कि ये ताज और सुंदर हो... और समृद्ध हो: PM @narendramodi pic.twitter.com/HwvBJXhUxb
— PMO India (@PMOIndia) January 13, 2025