Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಆರೋಗ್ಯ ರಕ್ಷಣೆ ನೀಡುವ ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಸೇಹತ್ ಗೆ ಚಾಲನೆ ಪ್ರಧಾನಮಂತ್ರಿ

ಜಮ್ಮು ಮತ್ತು ಕಾಶ್ಮೀರದಲ್ಲಿ  ಆರೋಗ್ಯ ರಕ್ಷಣೆ ನೀಡುವ ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಸೇಹತ್ ಗೆ ಚಾಲನೆ  ಪ್ರಧಾನಮಂತ್ರಿ

 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಎಲ್ಲ ನಿವಾಸಿಗಳಿಗೆ ಆರೋಗ್ಯ ರಕ್ಷಣೆ ವ್ಯಾಪ್ತಿ ವಿಸ್ತರಿಸುವ ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಸೇಹತ್ ಗೆ ವಿಡಿಯೋಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀ ಅಮಿತ್ ಷಾ, ಡಾ.ಹರ್ಷವರ್ಧನ್, ಡಾ.ಜಿತೇಂದ್ರ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಶ್ರೀ ಮನೋಜ್ ಸಿನ್ಹಾ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನಮಂತ್ರಿ ಅವರು ಇದೇ ವೇಳೆ ಆ ಪ್ರಾಂತ್ಯದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಜಮ್ಮು ಮತ್ತು ಕಾಶ್ಮೀರದ ಜೊತೆಗೆ ಹೊಂದಿದ್ದ ವಿಶೇಷ ಬಾಂಧವ್ಯವನ್ನು ಸ್ಮರಿಸಿದ ಅವರು, ಮಾಜಿ ಪ್ರಧಾನಮಂತ್ರಿಗಳ “ಇನ್ ಸಾನಿಯತ್, ಜಾಮ್ ಹುರಿಯತ್ ಮತ್ತು ಕಾಶ್ಮೀರಿಯತ್’ ಮಂತ್ರ ಸದಾ ನಮಗೆ ದಾರೀದೀಪವಾಗಿದೆ ಎಂದರು.

       ಜಮ್ಮು ಮತ್ತು ಕಾಶ್ಮೀರ ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಸೇಹತ್ ಯೋಜನೆ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ಯೋಜನೆ ಅಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ದೊರಕಲಿದೆ ಮತ್ತು ಇದು ಜೀವನವನ್ನು ಸುಗಮಗೊಳಿಸಲಿದೆ ಎಂದರು. ಸದ್ಯ ರಾಜ್ಯದ 6 ಲಕ್ಷ ಕುಟುಂಬಗಳು ಆಯುಷ್ಮಾನ್ ಭಾರತ್ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ಎಲ್ಲ 21 ಲಕ್ಷ ಕುಟುಂಬಗಳಿಗೆ ಸೇಹತ್ ಯೋಜನೆ ಅಡಿ ಆ ಪ್ರಯೋಜನಗಳು ಲಭ್ಯವಾಗಲಿವೆ. ಈ ಯೋಜನೆಯ ಮತ್ತೊಂದು ಪ್ರಯೋಜನವೆಂದರೆ ಚಿಕಿತ್ಸೆ ಪಡೆಯುವುದು ಕೇವಲ ಸರ್ಕಾರಿ ಆಸ್ಪತ್ರೆಗಳಿಗೆ ಸೀಮಿತವಾಗಿಲ್ಲ, ಜಮ್ಮು-ಕಾಶ್ಮೀರಕ್ಕೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ಹೇಳಿದರು. ಅಲ್ಲದೆ ದೇಶಾದ್ಯಂತ ಈ ಯೋಜನೆ ಅಡಿ ನೋಂದಣಿ ಮಾಡಿಕೊಂಡಿರುವ ಸಹಸ್ರಾರು ಆಸ್ಪತ್ರೆಗಳಲ್ಲೂ ಕೂಡ ಚಿಕಿತ್ಸಾ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

        ಆಯಷ್ಮಾನ್ ಯೋಜನೆಯ ವ್ಯಾಪ್ತಿಯನ್ನು ಎಲ್ಲ ನಿವಾಸಿಗಳಿಗೂ ವಿಸ್ತರಣೆ ಮಾಡಿರುವುದು ಐತಿಹಾಸಿಕ ಕ್ರಮವಾಗಿದೆ ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಜಮ್ಮು ಮತ್ತು ಕಾಶ್ಮೀರ ತನ್ನ ಜನರ ಅಭಿವೃದ್ಧಿಗಾಗಿ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಜಮ್ಮು ಮತ್ತು ಕಾಶ್ಮೀರದ ಜನರ ಅಭಿವೃದ್ಧಿ ತಮ್ಮ ಸರ್ಕಾರದ ದೊಡ್ಡ ಆದ್ಯತೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. “ಮಹಿಳಾ ಸಬಲೀಕರಣ, ಯುವ ಜನತೆಗೆ ಅವಕಾಶಗಳನ್ನು ಸೃಷ್ಟಿಸುವುದು, ದಲಿತರು, ಶೋಷಿತರು ಮತ್ತು ದುರ್ಬಲ ವರ್ಗದವರ ಏಳಿಗೆ ಆಗಿರಬಹುದು ಅಥವಾ ಜನರ ಸಾಂವಿಧಾನಿಕ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಯ ಪ್ರಶ್ನೆಯಾಗಿರಬಹುದು. ಅಂತಹ ಸಂದರ್ಭಗಳಲ್ಲಿ ನಮ್ಮ ಸರ್ಕಾರ ಜನರ ಕಲ್ಯಾಣಕ್ಕಾಗಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

        ಪ್ರಜಾಪ್ರಭುತ್ವವನ್ನು ಬಲಗೊಳಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಪ್ರಧಾನಮಂತ್ರಿ ಅಭಿನಂದನೆಗಳನ್ನು ಸಲ್ಲಿಸಿದರು. ಅವರು ಜಿಲ್ಲಾ ಅಭಿವೃದ್ಧಿ ಮಂಡಳಿಗಳ ಚುನಾವಣೆ ಹೊಸ ಅಧ್ಯಾಯವನ್ನು ಬರೆದಿದೆ ಎಂದರು. ಕೊರೊನಾ ಮತ್ತು ಶೀತದ ನಡುವೆಯೂ ಜನರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿರುವುದಕ್ಕಾಗಿ ಪ್ರಧಾನಿ ಅವರು ಜನತೆಯನ್ನು ಅಭಿನಂದಿಸಿದರು. ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಮತದಾರರ ಮುಖದಲ್ಲಿ ಅಭಿವೃದ್ಧಿಯ ನಿರೀಕ್ಷೆಗಳು ಕಂಡವು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಮತದಾರರ ಕಣ್ಣಲ್ಲೂ ಉತ್ತಮ ಭವಿಷ್ಯದ ವಿಶ್ವಾಸ ನೋಡಿದ್ದಾಗಿ ಪ್ರಧಾನಮಂತ್ರಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಈ ಚುನಾವಣೆಗಳು ನಮ್ಮ ದೇಶದ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿವೆ ಎಂದರು. ಮತ್ತೊಂದೆಡೆ ಸುಪ್ರೀಂಕೋರ್ಟ್ ನ ಆದೇಶದ ನಡುವೆಯೂ ಪುದುಚೆರಿಯಲ್ಲಿ ಪಂಚಾಯಿತಿ ಮತ್ತು ಮುನಿಸಿಪಲ್ ಚುನಾವಣೆಗಳು ನಡೆಯುತ್ತಿಲ್ಲ, ಚುನಾಯಿತ ಪ್ರತಿನಿಧಿಗಳ ಅವಧಿ 2011ಕ್ಕೆ ಮುಕ್ತಾಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

        ಸಾಂಕ್ರಾಮಿಕದ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 18 ಲಕ್ಷ ಎಲ್ ಪಿ ಜಿ ಸಿಲಿಂಡರ್ ಗಳನ್ನು ಮತ್ತೆ ಭರ್ತಿ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ವಚ್ಛ ಭಾರತ ಅಭಿಯಾನದಡಿ ಜಮ್ಮು ಮತ್ತು ಕಾಶ್ಮೀರದಲ್ಲಿ 10 ಲಕ್ಷಕ್ಕೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಭಿಯಾನದ ಉದ್ದೇಶ ಕೇವಲ ಶೌಚಾಲಯಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಜನರ ಆರೋಗ್ಯ ಸುಧಾರಣೆ ನಿಟ್ಟಿನ ಪ್ರಯತ್ನವಾಗಿದೆ. ಗ್ರಾಮೀಣ ರಸ್ತೆ ಸಂಪರ್ಕದ ಜೊತೆಗೆ ಮುಂದಿನ ಎರಡು-ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಮನೆಗೂ ಕೊಳವೆ ಮಾರ್ಗದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಪ್ರಯತ್ನಗಳು ನಡೆದಿವೆ ಎಂದು ಪ್ರಧಾನಮಂತ್ರಿ ಹೇಳಿದರು.  

        ಜಮ್ಮು ಮತ್ತು ಕಾಶ್ಮೀರದಲ್ಲಿ ಐಐಟಿ ಮತ್ತು ಐಐಎಂ ಸ್ಥಾಪನೆಯಿಂದಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲು ಸಹಾಯಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಏಮ್ಸ್ ಮತ್ತು ಎರಡು ಕ್ಯಾನ್ಸರ್ ಕೇಂದ್ರಗಳನ್ನೂ ಸಹ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು. ಅರೆ ವೈದ್ಯಕೀಯ ವಿದ್ಯಾರ್ಥಿಗಳು ಈ ಕೇಂದ್ರಗಳಲ್ಲಿ ತರಬೇತಿಗಳನ್ನು ಪಡೆಯಬಹುದಾಗಿದೆ ಎಂದರು.

        ಜಮ್ಮು ಮತ್ತು ಕಾಶ್ಮೀರದ ಯುವಕರು ಅತ್ಯಂತ ಸುಲಭವಾಗಿ ಸಾಲಗಳನ್ನು ಪಡೆಯುತ್ತಿದ್ದಾರೆ ಮತ್ತು ಅವರು ಶಾಂತಿ ಪಥದತ್ತ ಮುನ್ನಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಇದೀಗ ಸ್ಥಳೀಯ ನಿವಾಸಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ. ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಜನರು ಇದೀಗ ಮೀಸಲು ಸೌಲಭ್ಯವನ್ನು ಪಡೆಯುತ್ತಿದ್ದು, ಅವರೆಲ್ಲರೂ ಗಡಿ ಪ್ರದೇಶಗಳಲ್ಲಿ ಮತ್ತು ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು.  

***