Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಮ್ಮುವಿನ ಗಡಿ ಪ್ರದೇಶದ ಸರಪಂಚ್ ಅವರ ಬದ್ಧತೆಗೆ ಪ್ರಧಾನ ಮಂತ್ರಿ ಶ್ಲಾಘನೆ

ಜಮ್ಮುವಿನ ಗಡಿ ಪ್ರದೇಶದ ಸರಪಂಚ್ ಅವರ ಬದ್ಧತೆಗೆ ಪ್ರಧಾನ ಮಂತ್ರಿ ಶ್ಲಾಘನೆ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದ ವೇಳೆ, ಪ್ರಧಾನಮಂತ್ರಿಯವರು ದಿಯೋಘರ್‌ನ ಏಮ್ಸ್‌ನಲ್ಲಿ 10,000ನೇ ಜನೌಷಧಿ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದರು. 

ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10 ಸಾವಿರದಿಂದ 25 ಸಾವಿರಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿಸುವ ಕಾರ್ಯಕ್ರಮಕ್ಕೆ ಸಹ ಚಾಲನೆ ನೀಡಿದರು. ಈ ವರ್ಷ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿಯವರು ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವುದು ಮತ್ತು ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವುದು ಎರಡೂ ಉಪಕ್ರಮಗಳನ್ನು ಘೋಷಿಸಿದ್ದರು. ಈ ಕಾರ್ಯಕ್ರಮವು ಈ ಎರಡೂ ಭರವಸೆಗಳ ಈಡೇರಿಕೆಯನ್ನು ಸೂಚಿಸುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಫಾರ್ಮ್ ಮೆಷಿನರಿ ಬ್ಯಾಂಕ್ ಯೋಜನೆ ಮತ್ತು ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳಂತಹ ಅನೇಕ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದಿರುವುದಾಗಿ ರಂಗ್‌ಪುರ ಗ್ರಾಮದ ಸರಪಂಚ್ ಶ್ರೀಮತಿ ಬಲ್ವೀರ್ ಕೌರ್ ಮತ್ತು ಜಮ್ಮು ಜಿಲ್ಲೆಯ ಅರ್ನಿಯಾದ ರೈತರೊಬ್ಬರು ವಿಡಿಯೊ ಕಾನ್ಫರೆನ್ಸ್ ಸಂವಾದ ವೇಳೆ ಹೇಳಿದರು. ತನ್ನ ಗ್ರಾಮವು ಗಡಿಯ ಸಮೀಪದಲ್ಲಿದೆ ಎಂದು ಸರಪಂಚ್ ಹೇಳಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಿ ಟ್ರ್ಯಾಕ್ಟರ್ ಖರೀದಿಸಿದ ಅವರಿಗೆ ಪ್ರಧಾನಿ ಮೋದಿ ಧನ್ಯವಾದ ಹೇಳಿದರು.

ತಮ್ಮ ಬೆರಳ ತುದಿಯಲ್ಲಿ ತಮ್ಮ ಪ್ರದೇಶದ ಬಗ್ಗೆ ದಾಖಲೆಗಳ ಮಾಹಿತಿ ತಿಳಿದುಕೊಂಡಿರುವ ಸರಪಂಚ್ ಶ್ರೀಮತಿ ಕೌರ್ ಅವರನ್ನು ಪ್ರಧಾನಿ ಪ್ರಶಂಸಿಸಿದರು. ಅದಕ್ಕೆ ನಗುತ್ತಾ ಉತ್ತರಿಸಿದ ಶ್ರೀಮತಿ ಕೌರ್, ‘ಆಪ್ ಸೆ ಹೈ ಸೀಖಾ ಹೈ ಗ್ರಾಸ್ರೂಟ್ ಪಾರ್ ಕಾಮ್ ಕರ್ನಾ’ ಎಂದು ಉತ್ತರಿಸಿದರು. ಕಾಮ್ ಕಾರ್ತಿ ಹೂಂ ಔರ್ ಭೂಲ್ತಿ ನಹೀ ಹೂಂ.” (ನಾನು ತಳಮಟ್ಟದಲ್ಲಿ ಕೆಲಸ ಮಾಡಲು ನಿಮ್ಮಿಂದ ಕಲಿತಿದ್ದೇನೆ ಮತ್ತು ಮಾಡಿದ ಕೆಲಸದ ವಿವರಗಳನ್ನು ಮರೆಯಬಾರದು ಎಂಬುದನ್ನು ಕೂಡ ನಿಮ್ಮಿಂದ ಕಲಿತುಕೊಂಡೆ) ಎಂದು ಉತ್ತರಿಸಿದರು. 

ಸರ್ಕಾರದ ಯೋಜನೆಗಳನ್ನು ಪಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ಶ್ರೀಮತಿ ಕೌರ್ ಅಕ್ಕಪಕ್ಕದ ಹತ್ತು ಹಳ್ಳಿಗಳನ್ನು ತಲುಪಲು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುವಂತೆ ಸಲಹೆ ನೀಡಿದರು. ಸಮಾಜದ ಕೊನೆಯ ವ್ಯಕ್ತಿಯವರೆಗೆ ಎಲ್ಲಾ ಪ್ರಯೋಜನಗಳು ತಲುಪುತ್ತವೆ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಈಗಿರುವ ಫಲಾನುಭವಿಗಳ ಅನುಭವಗಳಿಂದ ಕಲಿಯಲು ಮತ್ತು ಇನ್ನೂ ಸರ್ಕಾರದ ಯೋಜನೆಗಳ ಫಲ ತಲುಪದವರಿಗೆ ತಲುಪಿಸಬೇಕಾದ ಗುರಿಯನ್ನು ವಿಕಸಿತ ಭಾರತ ಸಂಕಲ್ಪ ಯಾತ್ರೆ ಹೊಂದಿದೆ ಎಂದು ಹೇಳಿದರು.

****