ಜಪಾನ್ ನ ರಕ್ಷಣಾ ಸಚಿವ ಶ್ರೀ ಇಟ್ಸುನೋರಿ ಓನೋಡೆರಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಯವರು ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕಿಂತ ಮೊದಲಿನಿಂದಲೂ ಜಪಾನ್ ನೊಂದಿಗೆ ಹೊಂದಿರುವ ದೀರ್ಘಕಾಲೀನ ನಂಟನ್ನು ಸ್ಮರಿಸಿದರು ಮತ್ತು ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಜಪಾನ್ ನಡುವೆ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆ ವಿಸ್ತಾರ ಮತ್ತು ಆಳವಾಗಿರುವುದನ್ನು ಸ್ವಾಗತಿಸಿದರು.
ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯದಲ್ಲಿ ರಕ್ಷಣಾ ಸಹಕಾರ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀನರೇಂದ್ರ ಮೋದಿ ಹೇಳಿದರು.
ಎರಡೂ ರಾಷ್ಟ್ರಗಳ ನಡುವೆ ವಿವಿಧ ರಕ್ಷಣಾ ಮಾತುಕತೆಗಳ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿರುವುದನ್ನು ಮತ್ತು ಜಪಾನ್ ಮತ್ತು ಭಾರತದ ಸಶಸ್ತ್ರ ಪಡೆಗಳ ನಡುವಿನ ಬಾಂಧವ್ಯ ವರ್ಧನೆಯನ್ನು ಸ್ವಾಗತಿಸಿದರು. ಎರಡೂ ರಾಷ್ಟ್ರಗಳ ನಡುವೆ ರಕ್ಷಣಾ ತಾಂತ್ರಿಕತೆಯ ಸಹಕಾರದಲ್ಲಿನ ಪ್ರಗತಿಗೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ ವರ್ಷ ಜಪಾನ್ ಪ್ರಧಾನಮಂತ್ರಿ ಶ್ರೀ ಶಿಂಜೋ ಅಬೆ ಅವರು ಕೈಗೊಂಡ ಯಶಸ್ವೀ ಭಾರತ ಭೇಟಿನ್ನು ಸ್ಮರಿಸಿದರು ಮತ್ತು ಈ ವರ್ಷಾಂತ್ಯದಲ್ಲಿ ತಾವು ಜಪಾನ್ ಗೆ ಭೇಟಿ ನೀಡುವುದನ್ನು ಎದಿರು ನೋಡುತ್ತಿರುವುದಾಗಿ ತಿಳಿಸಿದರು.