ಘನತೆವೆತ್ತ ಪ್ರಧಾನಮಂತ್ರಿ ಅಬೆ ಅವರೇ,
ಸ್ನೇಹಿತರೆ,
ಮಿನ-ಸಮ, ಕೋಂಬನ್ ವಾ!
ಜಪಾನೀಸ್ ಭಾಷೆಯಲ್ಲಿರುವ ಜೆನ್ ಬೌದ್ಧ ಹೇಳಿಕೆ -“ಇಚಿಗೋ ಇಚೈ”, ಎಂದು ಹೇಳುತ್ತದೆ, ಇದರ ಅರ್ಥ ನಮ್ಮ ಪ್ರತಿಯೊಂದು ಭೇಟಿಯೂ ಅನನ್ಯ ಮತ್ತು ನಾವು ಆ ಪ್ರತಿಕ್ಷಣವನ್ನೂ ಕೂಡಿಸಿಡಬೇಕು.
ನಾನು ಜಪಾನ್ ಗೆ ಹಲವು ಬಾರಿ ಭೇಟಿ ನೀಡಿದ್ದೇನೆ, ಮತ್ತು ಇದು ಪ್ರಧಾನಮಂತ್ರಿಯಾಗಿ ನನ್ನ ಎರಡನೇ ಭೇಟಿ. ಮತ್ತು ಪ್ರತಿ ಭೇಟಿಯೂ ಅನನ್ಯ, ವಿಶಿಷ್ಟ, ಬೋಧಪ್ರದ ಮತ್ತು ತೀರಾ ಲಾಭದಾಯಕವಾಗಿದೆ.
ನಾನು ಹಲವು ಸಂದರ್ಭಗಳಲ್ಲಿ ಘನತೆವೆತ್ತ ಅಬೆ ಅವರನ್ನು ಜಪಾನ್, ಭಾರತ ಮತ್ತು ವಿಶ್ವದ ಹಲವೆಡೆ ಭೇಟಿ ಮಾಡಿದ್ದೇನೆ, ಕಳೆದ ಕೆಲವು ವರ್ಷಗಳಲ್ಲಿ ಜಪಾನ್ ನ ಹಲವು ಉನ್ನತಮಟ್ಟದ ರಾಜಕೀಯ ಮತ್ತು ವಾಣಿಜ್ಯ ನಾಯಕರನ್ನು ಭಾರತದಲ್ಲಿ ಬರಮಾಡಿಕೊಳ್ಳುವ ಗೌರವ ಪಡೆದಿದ್ದೇನೆ.
ನಮ್ಮ ಮಾತುಕತೆಯ ಆವರ್ತನಗಳು ನಮ್ಮ ಬಾಂಧವ್ಯದ ಉದ್ದೇಶ, ಚೈತನ್ಯ ಮತ್ತು ಆಳವನ್ನು ವಿವರಿಸುತ್ತದೆ. ಇದು ನಮ್ಮ ಜಾಗತಿಕ ಮತ್ತು ಕಾರ್ಯತಂತ್ರಾತ್ಮಕ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸುವ ಬದ್ಧತೆಯ ಮುಂದುವರಿಕೆಯನ್ನು ಪ್ರತಿಫಲಿಸುತ್ತದೆ.
ಸ್ನೇಹಿತರೆ, ನಮ್ಮ ಇಂದಿನ ಮಾತುಕತೆಯಲ್ಲಿ ನಾನು ಮತ್ತು ಪ್ರಧಾನಮಂತ್ರಿ ಅಬೆ ಅವರು ಕಳೆದ ಶೃಂಗದಿಂದ ಇಂದಿನವರೆಗಿನ ನಮ್ಮ ಬಾಂಧವ್ಯದ ಪ್ರಗತಿಯ ಬಗ್ಗೆ ಪರಿಶೀಲಿಸಿದ್ದೇವೆ. ನಮ್ಮ ಸಹಕಾರವು ಹಲವು ರಂಗಗಳಲ್ಲಿ ಪ್ರಗತಿಯಾಗಿದೆ ಎಂಬುದು ಇಬ್ಬರಿಗೂ ಸ್ಪಷ್ಟವಾಗಿದೆ.
ಆಳವಾದ ಆರ್ಥಿಕ ಕಾರ್ಯಕ್ರಮ, ವಾಣಿಜ್ಯದ ಪ್ರಗತಿ, ಉತ್ಪಾದನೆ ಮತ್ತು ಹೂಡಿಕೆಯ ಬಾಂಧವ್ಯ, ಶುದ್ಧ ಇಂಧನದ ಮೇಲಿನ ಗಮನ, ನಮ್ಮ ಪ್ರಜೆಗಳ ಸುರಕ್ಷತೆಯ ಪಾಲುದಾರಿಕೆ, ಮತ್ತು ಮೂಲಸೌಕರ್ಯದ ಮೇಲಿನ ಸಹಕಾರ ಮತ್ತು ಕೌಶಲ ಅಭಿವೃದ್ಧಿ ನಮ್ಮ ಆದ್ಯತೆಗಳಲ್ಲಿ ಮುಖ್ಯವಾದವುಗಳಾಗಿವೆ.
ಇಂದು, ಅಂಕಿತ ಹಾಕಲಾದ ಪರಮಾಣು ಇಂಧನದ ಶಾಂತಿಯುತ ಬಳಕೆಯ ಒಪ್ಪಂದವು ಶುದ್ಧ ಇಂಧನ ಪಾಲುದಾರಿಕೆ ನಿರ್ಮಾಣ ಮಾಡುವ ನಮ್ಮ ಕಾರ್ಯಕ್ರಮದ ಐತಿಹಾಸಿಕ ಹೆಜ್ಜೆಯಾಗಿದೆ.
ಈ ಕ್ಷೇತ್ರದಲ್ಲಿನ ನಮ್ಮ ಸಹಕಾರವು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ನೆರವಾಗಲಿದೆ. ಜಪಾನ್ ಗೆ ಸಹ ಇಂಥ ಒಪ್ಪಂದದ ಬಗ್ಗೆ ಇರುವ ವಿಶೇಷ ಮಹತ್ವವನ್ನು ನಾನು ಗುರುತಿಸುತ್ತೇನೆ.
ನಾನು ಈ ಒಬ್ಬಂದಕ್ಕೆ ತಮ್ಮ ಬೆಂಬಲ ಸೂಚಿಸಿದ ಜಪಾನ್ ಸರ್ಕಾರ ಮತ್ತು ಸಂಸತ್ತಿಗೆ ಹಾಗೂ ಅಬೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ಸ್ನೇಹಿತರೇ,
ಭಾರತ ಮತ್ತು ಅದರ ಆರ್ಥಿಕತೆ ಹಲವು ಪರಿವರ್ತನೆಗಳನ್ನು ಅನುಸರಿಸುತ್ತಿದೆ. ಉತ್ಪಾದನೆ, ಹೂಡಿಕೆ ಮತ್ತು 21ನೇ ಶತಮಾನದ ಜ್ಞಾನ ಕೈಗಾರಿಕೆಯ ಪ್ರಮುಖ ಕೇಂದ್ರವಾಗಬೇಕು ಎಂಬುದು ನಮ್ಮ ಗುರಿಯಾಗಿದೆ.
ಮತ್ತು, ಈ ಪಯಣದಲ್ಲಿ, ನಾವು ಜಪಾನ್ ಅನ್ನು ಸ್ವಾಭಾವಿಕ ಪಾಲುದಾರನಾಗಿ ನೋಡುತ್ತೇವೆ. ಪರಸ್ಪರ ಲಾಭಕ್ಕಾಗಿ ಶ್ರಮಿಸಲು ನಮ್ಮ ಸಂಬಂಧಿತ ಅವಕಾಶಗಳನ್ನು ಅದು ಬಂಡವಾಳ, ತಂತ್ರಜ್ಞಾನ ಅಥವಾ ಮಾನವ ಸಂಪನ್ಮೂಲಗಳನ್ನು ಒಗ್ಗೂಡಿಸಿದರೆ ವಿಸ್ತೃತ ಅವಕಾಶಗಳಿವೆ ಎಂದು ನಾವು ನಂಬಿದ್ದೇವೆ.
ವಿಶೇಷ ಯೋಜನೆಗಳ ವಿಚಾರದಲ್ಲಿ ನಾವು ಮುಂಬೈ-ಅಹಮದಾಬಾದ್ ಅತಿ ವೇಗದ ರೈಲು ಯೋಜನೆಯಲ್ಲಿ ಬಲವಾದ ಪ್ರಗತಿ ಸಾಧಿಸಲು ನಾವು ಗಮನ ಹರಿಸುತ್ತಿದ್ದೇವೆ. ಹಣಕಾಸು ವಲಯದಲ್ಲಿನ ಸಹಕಾರದ ಮೇಲಿನ ಒಪ್ಪಂದ ಮತ್ತು ನಮ್ಮ ಕಾರ್ಯಕ್ರಮಗಳು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಸಂಪನ್ಮೂಲ ನಿರ್ಧರಣೆಗೆ ನೆರವಾಗುತ್ತದೆ.
ತರಬೇತಿ ಮತ್ತು ಕೌಶಲ ಅಭಿವೃದ್ಧಿಗೆ ಸಂಬಂಧಿಸಿದಂತೆ ನಮ್ಮ ಮಾತುಕತೆ ಹೊಸ ಅವಕಾಶಗಳನ್ನು ತೆರೆದಿದೆ ಮತ್ತು ಇದು ನಮ್ಮ ಆರ್ಥಿಕ ಪಾಲುದಾರಿಕೆಯ ಮಹತ್ವದ ಅಂಶವಾಗಿದೆ. ನಾವು ಬಾಹ್ಯಾಕಾಶ ವಿಜ್ಞಾನ, ಸಾಗರ ಮತ್ತು ಭೂ ವಿಜ್ಞಾನ, ಜವಳಿ, ಕ್ರೀಡೆ, ಕೃಷಿ ಮತ್ತು ಅಂಚೆ ಬ್ಯಾಂಕಿಂಗ್ ವಲಯದಲ್ಲಿ ಹೊಸ ಪಾಲುದಾರಿಕೆಯನ್ನು ರೂಪಿಸುತ್ತಿದ್ದೇವೆ.
ಸ್ನೇಹಿತರೆ,
ನಮ್ಮ ಕಾರ್ಯತಂತ್ರಾತ್ಮಕ ಪಾಲುದಾರಿಕೆಯು ಕೇವಲ ನಮ್ಮ ಸಮಾಜದ ಒಳಿತು ಮತ್ತು ಭದ್ರತೆಗಾಗಿ ಅಷ್ಟೇ ಅಲ್ಲ, ಅದು ನಮ್ಮ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮತೋಲನೆಯನ್ನು ತರುತ್ತದೆ. ಅದು ಏಷ್ಯಾ ಪೆಸಿಫಿಕ್ ನಲ್ಲಿ ಹೊರಹೊಮ್ಮುವ ಅವಕಾಶಗಳು ಮತ್ತು ಸವಾಲುಗಳಿಗೆ ಸ್ಪಂದನಶೀಲ ಮತ್ತು ಜೀವಂತಿಕೆಯಿಂದ ಕೂಡಿದೆ.
ಸಮಗ್ರ ನೋಟವನ್ನು ಹೊಂದಿರುವ ದೇಶಗಳಾಗಿ, ನಾವು ಭಾರತ-ಪೆಸಿಫಿಕ್ ನ ನೀರಿನಲ್ಲಿ ಅಂತರ ಸಂಪರ್ಕಿತ ವಲಯದಲ್ಲಿ ಸಂಪರ್ಕ, ಮೂಲಸೌಕರ್ಯ ಮತ್ತು ಸಾಮರ್ಥ್ಯವರ್ಧನೆ ಉತ್ತೇಜನಕ್ಕೆ ಆಪ್ತವಾಗಿ ಸಹಕಾರ ನೀಡಲು ಸಮ್ಮತಿ ಸೂಚಿಸಿದ್ದೇವೆ.
ಯಶಸ್ವೀ ಮಲಬಾರ್ ನೌಕಾ ಅಭ್ಯಾಸವು ಭಾರತ-ಪೆಸಿಫಿಕ್ ಜಲದ ವಿಸ್ತೃತ ವಿಸ್ತರಣೆಯ ನಮ್ಮ ಒಮ್ಮತದ ಕಾರ್ಯತಂತ್ರಾತ್ಮಕ ಆಸಕ್ತಿಯನ್ನು ಒತ್ತಿ ಹೇಳುತ್ತದೆ.
ಪ್ರಜಾಪ್ರಭುತ್ವರಾಷ್ಟ್ರಗಳಾಗಿ ನಾವು, ಮುಕ್ತತೆ, ಪಾರದರ್ಶಕತೆ ಮತ್ತು ಕಾನೂನು ಆಡಳಿತವನ್ನು ಬೆಂಬಲಿಸುತ್ತೇವೆ. ನಾವು ಭಯೋತ್ಪಾದನೆಯ ಪಿಡುಗು ಎದುರಿಸಲು ಅದರಲ್ಲೂ ಗಡಿಯಾಚೆಗಿನ ಭಯೋತ್ಪಾದನೆ ಎದುರಿಸಲು ಒಗ್ಗೂಡುವ ಸಂಕಲ್ಪ ಮಾಡಿದ್ದೇವೆ.
ಸ್ನೇಹಿತರೆ,
ನಮ್ಮ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವು ಆಳವಾದ ಸಾಂಸ್ಕೃತಿಕ ಮತ್ತು ಜನರೊಂದಿಗಿನ ಸಂಪರ್ಕದಿಂದ ಹರಸಲ್ಪಟ್ಟಿದೆ. ಕಳೆದ ವರ್ಷ ಪ್ರಧಾನಮಂತ್ರಿ ಅಬೆ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ನಾನು, ಅವರ ಹೆಚ್ಚಿನ ವಿಸ್ತರಣೆಗೆ ಆಧಾರ ಸೃಷ್ಟಿಸಲು ಕ್ರಮ ಕೈಗೊಳ್ಳುವ ಬದ್ಧತೆ ವ್ಯಕ್ತಪಡಿಸಿದ್ದೆ.
ಮತ್ತು ಅದರ ಫಲವಾಗಿ, 2016ರ ಮಾರ್ಚಿಯಿಂದ ನಾವು ಬಂದಿಳಿದ ತರುವಾಯದ ವೀಸಾ ಸೌಲಭ್ಯವನ್ನು ಎಲ್ಲ ಜಪಾನ್ ರಾಷ್ಟ್ರೀಯರಿಗೂ ನೀಡಿದ್ದೇವೆ. ಅಲ್ಲದೆ ನಾವು ಅರ್ಹ ಜಪಾನ್ ವಾಣಿಜ್ಯ ವ್ಯಕ್ತಿಗಳಿಗೆ 10 ವರ್ಷಗಳ ದೀರ್ಘಾವಧಿ ವೀಸಾ ನೀಡಿಕೆಗೂ ಹೆಜ್ಜೆ ಇಟ್ಟಿದ್ದೇವೆ.
ಸ್ನೇಹಿತರೆ,
ನಾವು ಭಾರತ ಮತ್ತು ಜಪಾನ್ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಪ್ತವಾಗಿ ಸಹಕಾರ ಮತ್ತು ಸಮಾಲೋಚನೆ ಮಾಡಲಿದ್ದೇವೆ. ನಾವು ವಿಶ್ವಸಂಸ್ಥೆಯ ಸುಧಾರಣೆಗೆ ಒಗ್ಗೂಡಿ ದುಡಿಯಲಿದ್ದೇವೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮ್ಮ ಹಕ್ಕಿನ ಸ್ಥಾನಕ್ಕಾಗಿ ಒಗ್ಗೂಡಿ ಶ್ರಮಿಸುತ್ತೇವೆ.
ಪರಮಾಣು ಪೂರೈಕೆ ಗುಂಪಿನ ಸದಸ್ಯತ್ವಕ್ಕೆ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಅಬೆ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ.
ಘನತೆವೆತ್ತ ಅಬೆ ಅವರೇ,
ನಾವಿಬ್ಬರೂ ನಮ್ಮ ಪಾಲುದಾರಿಕೆಯ ಭವಿಷ್ಯವು ಉಜ್ವಲ ಮತ್ತು ಶ್ರೀಮಂತವಾದ್ದೆಂಬುದನ್ನು ಗುರುತಿಸಿದ್ದೇವೆ. ನಮಗೂ ಮತ್ತು ನಮ್ಮ ವಲಯಕ್ಕೂ ನಾವಿಬ್ಬರೂ ಒಗ್ಗೂಡಿ ಮಾಡುವ ಕಾರ್ಯಕ್ಕೆ ಸ್ವರೂಪ ಮತ್ತು ಅಳತೆಯ ಮಿತಿ ಇಲ್ಲ.
ಮತ್ತು, ಇದಕ್ಕೆ ಪ್ರಮುಖ ಕಾರಣ, ಇದಕ್ಕೆ ನಿಮ್ಮ ಬಲವಾದ ಮತ್ತು ಚಲನಶೀಲ ನಾಯಕತ್ವ. ನಿಮ್ಮ ಪಾಲುದಾರ ಮತ್ತು ಗೆಳೆಯನಾಗಿರುವುದು ನನಗೆ ಹೆಮ್ಮೆಯ ಸಂಗತಿ. ಈ ಶೃಂಗದಲ್ಲಿ ಮೌಲ್ಯಯುತ ಫಲಿತಾಂಶ ಹೊರಹೊಮ್ಮಿದ್ದಕ್ಕಾಗಿ ಮತ್ತು ನಿಮ್ಮ ಆತ್ಮೀಯ ಆಹ್ವಾನ ಮತ್ತು ಆತಿಥ್ಯಕ್ಕೆ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ.
ಅನತ ನೋ ಓ ಮೊತೆನಶಿ ಓ ಅರಿಗಟೋ ಗೊಜೈಮಶಿತ!
(ತಮ್ಮ ಸದೃದಯದ ಆತಿಥ್ಯಕ್ಕೆ ನನ್ನ ಧನ್ಯವಾದಗಳು)
ಧನ್ಯವಾದಗಳು.
******
AKT/NT