Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚೊಚ್ಚಲ ಅಂತಾರಾಷ್ಟ್ರೀಯ ಸೌರಶಕ್ತಿ ಉತ್ಸವ; ಪ್ರಧಾನಿ ನರೇಂದ್ರ ಮೋದಿ ಸಂದೇಶ

ಚೊಚ್ಚಲ ಅಂತಾರಾಷ್ಟ್ರೀಯ ಸೌರಶಕ್ತಿ ಉತ್ಸವ; ಪ್ರಧಾನಿ ನರೇಂದ್ರ ಮೋದಿ ಸಂದೇಶ


ಗೌರವಾನ್ವಿತ ಗಣ್ಯರೆ,

ನನ್ನ ಆತ್ಮೀಯ ಸ್ನೇಹಿತರೇ, ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಶುಭಾಶಯಗಳು. ಮೊದಲ ಅಂತಾರಾಷ್ಟ್ರೀಯ ಸೌರಶಕ್ತಿ ಉತ್ಸವಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ಈ ಅದ್ಭುತ ಉಪಕ್ರಮಕ್ಕಾಗಿ ನಾನು ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟವನ್ನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ವೇದಗಳು ಸಾವಿರಾರು ವರ್ಷಗಳ ಹಿಂದೆಯೇ ರಚಿತವಾದ ಗ್ರಂಥಗಳಾಗಿವೆ. ಸೂರ್ಯದೇವನ ಜಪ ವೇದಗಳ ಅತ್ಯಂತ ಜನಪ್ರಿಯ ಮಂತ್ರಗಳಲ್ಲಿ ಒಂದಾಗಿದೆ. ಇಂದಿಗೂ ಲಕ್ಷಾಂತರ ಭಾರತೀಯರು ಇದನ್ನು ಪ್ರತಿದಿನ ಜಪಿಸುತ್ತಾರೆ. ವಿಶ್ವಾದ್ಯಂತದ ಅನೇಕ ಸಂಸ್ಕೃತಿಗಳು ತಮ್ಮದೇ ಆದ ರೀತಿಯಲ್ಲಿ ಸೂರ್ಯನನ್ನು ಗೌರವಿಸುತ್ತಿವೆ. ಹೆಚ್ಚಿನ ಪ್ರದೇಶಗಳಲ್ಲಿ ಸೂರ್ಯನಿಗೆ ಸಂಬಂಧಿಸಿದ ಹಬ್ಬಗಳೂ ಇವೆ. ಈ ಅಂತಾರಾಷ್ಟ್ರೀಯ ಸೌರಶಕ್ತಿ ಉತ್ಸವವು ಸೂರ್ಯನ ಪ್ರಖರತೆಯ ಪ್ರಭಾವ ಆಚರಿಸಲು ಇಡೀ ಜಗತ್ತನ್ನು ಒಟ್ಟುಗೂಡಿಸುತ್ತಿದೆ. ಇದೊಂದು ಸುಂದರ ಪೃಥ್ವಿ ನಿರ್ಮಾಣಕ್ಕೆ ನೆರವಾಗುವ ಹಬ್ಬ.

ಸ್ನೇಹಿತರೆ,

2015ರಲ್ಲಿ ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟ(ಐಎಸ್ಎ) ಒಂದು ಸಣ್ಣ ಸಸಿಯಾಗಿ ಮೊಳಕೆ ಒಡೆಯಲು ಆರಂಭಿಸಿತು. ಅದು ಭರವಸೆ ಮತ್ತು ಆಕಾಂಕ್ಷೆಯ ಕ್ಷಣವಾಗಿತ್ತು. ಇಂದು ಅದು ದೈತ್ಯಾಕಾರದ ಹೆಮ್ಮರವಾಗಿ ಬೆಳೆಯುತ್ತಿದೆ, ನೀತಿ ಮತ್ತು ಕ್ರಿಯೆಗಳನ್ನು ಪ್ರೇರೇಪಿಸುತ್ತಿದೆ. ಇಷ್ಟು ಕಡಿಮೆ ಸಮಯದಲ್ಲಿ, ಐಎಸ್ಎ ಸದಸ್ಯತ್ವ 100 ದೇಶಗಳ ಮೈಲಿಗಲ್ಲು ತಲುಪಿದೆ. ಹೆಚ್ಚುವರಿಯಾಗಿ, ಇನ್ನೂ 19 ದೇಶಗಳು ಪೂರ್ಣ ಸದಸ್ಯತ್ವ ಪಡೆಯಲು ಮಾರ್ಗಸೂಚಿ ಒಪ್ಪಂದವನ್ನು ಅನುಮೋದಿಸುತ್ತಿವೆ. ‘ಒಂದು ಜಗತ್ತು, ಒಂದು ಸೂರ್ಯ, ಒಂದು ಗ್ರಿಡ್’ ದೃಷ್ಟಿಗೆ ಈ ಸಂಸ್ಥೆಯ ಬೆಳವಣಿಗೆ ಅತಿ ಮುಖ್ಯವಾಗಿದೆ.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ ಭಾರತವು ಹಸಿರು ಇಂಧನ ಉತ್ಪಾನೆಯಲ್ಲಿ ಅನೇಕ ಬೃಹತ್ ದಾಪುಗಾಲುಗಳನ್ನು ಹಾಕಿದೆ. ನವೀಕರಿಸಬಹುದಾದ ಇಂಧನದಲ್ಲಿ ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ಸಾಧಿಸಿದ ಮೊದಲ ಜಿ-20 ರಾಷ್ಟ್ರ ನಮ್ಮದು. ಸೌರಶಕ್ತಿಯ ಗಮನಾರ್ಹ ಬೆಳವಣಿಗೆಯು ಇದನ್ನು ಸಾಧ್ಯವಾಗಿಸುವಲ್ಲಿ ಪ್ರಮುಖ ಕಾರಣವಾಗಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಸೌರಶಕ್ತಿ ಉತ್ಪಾದನೆ ಸಾಮರ್ಥ್ಯ  32 ಪಟ್ಟು ಹೆಚ್ಚಾಗಿದೆ. ಈ ವೇಗ ಮತ್ತು ಪ್ರಮಾಣವು 2030ರ ವೇಳೆಗೆ 500 ಗಿಗಾವ್ಯಾಟ್ ಉರವಲುರಹಿತ(ನಾನ್-ಫಾಸಿಲ್) ಇಂಧನ ಸಾಮರ್ಥ್ಯ ಸಾಧಿಸಲು ನಮಗೆ ಸಹಾಯ ಮಾಡುತ್ತದೆ.

ಸ್ನೇಹಿತರೆ,

ಸೌರಶಕ್ತಿ ವಲಯದಲ್ಲಿ ಭಾರತದ ಬೆಳವಣಿಗೆಯು ಸ್ಪಷ್ಟ ಕಾರ್ಯವಿಧಾನದ ಫಲಿತಾಂಶವಾಗಿದೆ. ಭಾರತದಲ್ಲಿ ಅಥವಾ ಪ್ರಪಂಚದಲ್ಲಿ, ಸೌರಶಕ್ತಿ ಅಳವಡಿಕೆ ಹೆಚ್ಚಿಸುವ ಮಂತ್ರವೆಂದರೆ ಅರಿವು, ಲಭ್ಯತೆ ಮತ್ತು ಕೈಗೆಟುಕುವಿಕೆ. ಸೌರಶಕ್ತಿ ವಲಯದಲ್ಲಿ ದೇಶೀಯ ಉತ್ಪಾದನ್ನು ಉತ್ತೇಜಿಸುವ ಮೂಲಕ ಸುಸ್ಥಿರ ಇಂಧನ ಮೂಲಗಳ ಅಗತ್ಯತೆಯ ಬಗ್ಗೆ ಹೆಚ್ಚಿದ ಅರಿವು ನಾವು ಲಭ್ಯತೆಯನ್ನು ಹೆಚ್ಚಿಸುತ್ತವೆ. ನಿರ್ದಿಷ್ಟ ಯೋಜನೆಗಳು ಮತ್ತು ಪ್ರೋತ್ಸಾಹಗಳ ಮೂಲಕ, ನಾವು ಸೌರಶಕ್ತಿ ಇಂಧನ ಮೂಲಗಳ ಆಯ್ಕೆಯನ್ನು ಜನರಿಗೆ ಕೈಗೆಟುಕುವಂತೆ ಮಾಡಿದ್ದೇವೆ.

ಸ್ನೇಹಿತರೆ,

ಸೌರಶಕ್ತಿ ಅಳವಡಿಕೆಗೆ ವಿಚಾರಗಳನ್ನು ಮತ್ತು ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಐಎಸ್ಎ ಸೂಕ್ತ ವೇದಿಕೆಯಾಗಿದೆ. ಭಾರತವು ಸಹ ಅನೇಕ ವಿಷಯಗಳನ್ನು ಹಂಚಿಕೊಳ್ಳಲು ಬಹಳಷ್ಟಿದೆ. ಇತ್ತೀಚಿನ ನೀತಿ ಮಧ್ಯಸ್ಥಿಕೆಗೆ ಸಂಬಂಧಿಸಿ ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಕೆಲವು ತಿಂಗಳ ಹಿಂದೆ, ನಾವು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಪ್ರಾರಂಭಿಸಿದ್ದೇವೆ. ಈ ಯೋಜನೆಯಲ್ಲಿ ನಾವು 750 ಶತಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದೇವೆ. 10 ದಶಲಕ್ಷ ಕುಟುಂಬಗಳು ತಮ್ಮ ಸ್ವಂತ ಚಾವಣಿಯ ಮೇಲೆ ಸೌರಫಲಕಗಳನ್ನು ಸ್ಥಾಪಿಸಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. ನಾವು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ಆರ್ಥಿಕ ಸಹಾಯ ವರ್ಗಾಯಿಸುತ್ತಿದ್ದೇವೆ. ಹೆಚ್ಚುವರಿ ಹಣಕಾಸು ಅಗತ್ಯವಿದ್ದಲ್ಲಿ ಕಡಿಮೆ ಬಡ್ಡಿ, ಮೇಲಾಧಾರ-ಮುಕ್ತ ಸಾಲಗಳನ್ನು ಸಹ ಸಕ್ರಿಯಗೊಳಿಸಲಾಗುತ್ತಿದೆ. ಈಗ, ಈ ಮನೆಗಳು ತಮ್ಮ ಅಗತ್ಯಗಳಿಗಾಗಿ ಶುದ್ಧ ವಿದ್ಯುತ್ ಉತ್ಪಾದಿಸುತ್ತಿವೆ. ಇದಲ್ಲದೆ, ಅವರು ಹೆಚ್ಚುವರಿ ಶಕ್ತಿಯನ್ನು ಗ್ರಿಡ್‌ಗೆ ಮಾರಾಟ ಮಾಡಲು ಮತ್ತು ಹಣ ಗಳಿಸಲು ಸಾಧ್ಯವಾಗುತ್ತಿದೆ. ಪ್ರೋತ್ಸಾಹ ಮತ್ತು ಸಂಭಾವ್ಯ ಗಳಿಕೆಗಳ ಕಾರಣದಿಂದಾಗಿ, ಈ ಯೋಜನೆಯು ಜನಪ್ರಿಯವಾಗುತ್ತಿದೆ. ಸೌರಶಕ್ತಿಯನ್ನು ಕೈಗೆಟುಕುವ ಮತ್ತು ಆಕರ್ಷಕ ಆಯ್ಕೆಯಾಗಿ ನೋಡಲಾಗುತ್ತಿದೆ. ಅನೇಕ ರಾಷ್ಟ್ರಗಳು ತಮ್ಮ ಇಂಧನ ಪರಿವರ್ತನೆಯ ಕೆಲಸದಿಂದ ಪಡೆದ ಇದೇ ಮೌಲ್ಯಯುತ ಒಳನೋಟಗಳನ್ನು ಹೊಂದಿವೆ ಎಂಬುದು ನನಗೆ ಖಾತ್ರಿಯಿದೆ.

ಸ್ನೇಹಿತರೆ,

ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟವು ಅಲ್ಪಾವಧಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. 44 ದೇಶಗಳಲ್ಲಿ, ಇದು ಸುಮಾರು 10 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡಿದೆ. ಸೋಲಾರ್ ಪಂಪ್‌ಗಳ ಜಾಗತಿಕ ಬೆಲೆ ತಗ್ಗಿಸುವಲ್ಲಿ ಮೈತ್ರಿಕೂಟ ನಿರ್ಣಾಯಕ ಪಾತ್ರ ವಹಿಸಿದೆ. ವಿಶೇಷವಾಗಿ ಆಫ್ರಿಕಾ ಸದಸ್ಯ ರಾಷ್ಟ್ರಗಳಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಸಕ್ರಿಯಗೊಳಿಸಲಾಗುತ್ತಿದೆ. ಆಫ್ರಿಕಾ, ಏಷ್ಯಾ-ಪೆಸಿಫಿಕ್ ಮತ್ತು ಭಾರತದಿಂದ ಹಲವಾರು ಭರವಸೆಯ ಸೌರಶಕ್ತಿ ವಲಯದ ಸ್ಟಾರ್ಟಪ್‌ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಉಪಕ್ರಮವನ್ನು ಶೀಘ್ರದಲ್ಲೇ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ ರಾಷ್ಟ್ರಗಳಿಗೂ ವಿಸ್ತರಿಸಲಾಗುವುದು. ಇವು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುವ ಗಮನಾರ್ಹ ಹೆಜ್ಜೆಗಳಾಗಿವೆ.

ಸ್ನೇಹಿತರೆ,

ಇಂಧನ ಪರಿವರ್ತನೆ ಖಚಿತಪಡಿಸಿಕೊಳ್ಳಲು, ಪ್ರಪಂಚವು ಕೆಲವು ಪ್ರಮುಖ ವಿಷಯಗಳನ್ನು ಒಟ್ಟಾಗಿ ಚರ್ಚಿಸಬೇಕು. ಹಸಿರು ಇಂಧನ ಹೂಡಿಕೆಯ ಕೇಂದ್ರೀಕರಣದ ಅಸಮತೋಲನಗಳನ್ನು ಪರಿಹರಿಸಬೇಕಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಾಯ ಮಾಡಲು ಉತ್ಪಾದನೆ ಮತ್ತು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಬೇಕಾಗಿದೆ. ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಣ್ಣ ದ್ವೀಪ ರಾಷ್ಟ್ರಗಳ ಸಬಲೀಕರಣವು ಪ್ರಮುಖ ಆದ್ಯತೆಯಾಗಬೇಕು. ನಿರ್ಲಕ್ಷಿತ ಸಮುದಾಯಗಳು, ಮಹಿಳೆಯರು ಮತ್ತು ಯುವಕರನ್ನು ಇದರಲ್ಲಿ ಸೇರಿಸುವುದು ಸಹ ನಿರ್ಣಾಯಕವಾಗಿದೆ. ಅಂತಾರಾಷ್ಟ್ರೀಯ ಸೋಲಾರ್ ಫೆಸ್ಟಿವಲ್ ಅಂತಹ ಚರ್ಚೆಗಳನ್ನು ಸಕ್ರಿಯಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಹಸಿರು ಇಂಧನ ಭವಿಷ್ಯಕ್ಕಾಗಿ ಜಗತ್ತಿನೊಂದಿಗೆ ಕೆಲಸ ಮಾಡಲು ಭಾರತ ಬದ್ಧವಾಗಿದೆ.

ಕಳೆದ ವರ್ಷ ಜಿ-20 ಸಮಯದಲ್ಲಿ, ನಾವು ಜಾಗತಿಕ ಜೈವಿಕ ಇಂಧನ ಒಕ್ಕೂಟ ರಚನೆಯನ್ನು ಮುನ್ನಡೆಸಿದ್ದೇವೆ. ಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟದ ಸ್ಥಾಪಕ ಸದಸ್ಯರಲ್ಲಿ ನಾವೂ ಸಹ ಒಬ್ಬರು. ಎಲ್ಲರನ್ನೂ ಒಳಗೊಂಡ, ಸ್ವಚ್ಛ ಮತ್ತು ಹಸಿರು ಪೃಥ್ವಿಯನ್ನು ನಿರ್ಮಿಸುವ ಪ್ರತಿಯೊಂದು ಪ್ರಯತ್ನಕ್ಕೆ ಭಾರತದ ಬೆಂಬಲ ಇರಲಿದೆ.

ಮತ್ತೊಮ್ಮೆ, ಅಂತಾರಾಷ್ಟ್ರೀಯ ಸೌರಶಕ್ತಿ ಉತ್ಸವಕ್ಕೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಸೂರ್ಯನ ಪ್ರಖರತೆಯು ಜಗತ್ತನ್ನು ಸುಸ್ಥಿರ ಭವಿಷ್ಯದತ್ತ ಮುನ್ನಡೆಸಲಿ. ಧನ್ಯವಾದಗಳು, ತುಂಬು ಧನ್ಯವಾದಗಳು.

 

*****