Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಂದ್ರಯಾನ 3  ಚಂದ್ರನ ಮೇಲಿಳಿಯುವುದನ್ನು ವೀಕ್ಷಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಸ್ರೋ ತಂಡವನ್ನು ಸೇರಿದ ಪ್ರಧಾನಮಂತ್ರಿ

ಚಂದ್ರಯಾನ 3  ಚಂದ್ರನ ಮೇಲಿಳಿಯುವುದನ್ನು ವೀಕ್ಷಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಸ್ರೋ ತಂಡವನ್ನು ಸೇರಿದ ಪ್ರಧಾನಮಂತ್ರಿ


ಇಂದು ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ 3 ಇಳಿಯುವುದನ್ನು ವೀಕ್ಷಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಸ್ರೋ ತಂಡವನ್ನು ಸೇರಿಕೊಂಡರು. ಯಶಸ್ವಿ ಲ್ಯಾಂಡಿಂಗ್ ಆದ ತಕ್ಷಣವೇ ಪ್ರಧಾನಮಂತ್ರಿಯವರು ತಂಡವನ್ನು ಉದ್ದೇಶಿಸಿ ಮಾತನಾಡಿ ಐತಿಹಾಸಿಕ ಸಾಧನೆಗಾಗಿ ಅಭಿನಂದಿಸಿದರು.

ತಂಡವನ್ನು ಕುಟುಂಬ ಸದಸ್ಯರಂತೆ ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಇಂತಹ ಐತಿಹಾಸಿಕ ಘಟನೆಗಳು ರಾಷ್ಟ್ರದ ಶಾಶ್ವತ ಚೇತನವಾಗುತ್ತವೆ ಎಂದು ಹೇಳಿದರು. “ಈ ಕ್ಷಣ ಅವಿಸ್ಮರಣೀಯವಾದುದು, ಅಭೂತಪೂರ್ವವಾದುದು. ಇದು ಭಾರತಕ್ಕೆ ವಿಜಯದ ಕರೆಯಾದ ‘ವಿಕಸಿತ ಭಾರತ’ದ ಘೋಷಣೆಯ ಕ್ಷಣ, ಇದು ಕಷ್ಟಗಳ ಸಾಗರವನ್ನು ದಾಟಿ ವಿಜಯದ ‘ಚಂದ್ರಪಥʼದಲ್ಲಿ ನಡೆಯುವ ಕ್ಷಣ. ಇದು 140 ಕೋಟಿ ಹೃದಯ ಬಡಿತಗಳ ಸಾಮರ್ಥ್ಯ ಮತ್ತು ಭಾರತದ ಹೊಸ ಶಕ್ತಿಯ ಆತ್ಮವಿಶ್ವಾಸದ ಕ್ಷಣವಾಗಿದೆ. ಇದು ಭಾರತದ ಅದೃಷ್ಟವನ್ನು ಆಹ್ವಾನಿಸುವ ಕ್ಷಣವಾಗಿದೆ” ಎಂದು ಪ್ರಧಾನಮಂತ್ರಿ ಆನಂದತುಂದಿಲವಾದ ರಾಷ್ಟ್ರಕ್ಕೆ ಹೇಳಿದರು. “ಅಮೃತ ಕಾಲ’ದ ಮೊದಲ ಬೆಳಕಿನಲ್ಲಿ ಇದು ಯಶಸ್ಸಿನ ‘ಅಮೃತ ವರ್ಷ'”ಎಂದು ಹರ್ಷಚಿತ್ತರಾದ ಪ್ರಧಾನಿ ಹೇಳಿದರು. ವಿಜ್ಞಾನಿಗಳನ್ನು ಉಲ್ಲೇಖಿಸಿದ ಪ್ರಧಾನಿ, “ಭಾರತ ಈಗ ಚಂದ್ರನ ಮೇಲಿದೆ!” ಎಂದರು. ನವ ಭಾರತದ ಮೊದಲ ಹಾರಾಟಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಅವರು ಹೇಳಿದರು.

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಸ್ತುತ ಜೋಹಾನ್ಸ್ಬರ್ಗ್ನಲ್ಲಿದ್ದೇನೆ, ಆದರೆ ತಮ್ಮ ಮನಸ್ಸು ಇತರ ನಾಗರಿಕರಂತೆ ಚಂದ್ರಯಾನ 3 ರ ಮೇಲೆ ಕೇಂದ್ರೀಕೃತವಾಗಿದೆ ಎಂದು ಪ್ರಧಾನಿ ತಿಳಿಸಿದರು. ಪ್ರತಿಯೊಬ್ಬ ಭಾರತೀಯನೂ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು, ಈ ವಿಶೇಷ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರೀಕರೊಂದಿಗೆ ಉತ್ಸಾಹದಿಂದ ಸಂಪರ್ಕ ಹೊಂದಿರುವುದರಿಂದ ಪ್ರತಿ ಕುಟುಂಬಕ್ಕೂ ಇದು ಹಬ್ಬದ ದಿನವಾಗಿದೆ ಎಂದರು. ಪ್ರಧಾನಿಯವರು ವರ್ಷಗಳಿಂದ ದಣಿವರಿಯದೆ ಕೆಲಸ ಮಾಡಿದ ಚಂದ್ರಯಾನ ತಂಡ, ಇಸ್ರೋ ಮತ್ತು ದೇಶದ ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸಿದರು ಮತ್ತು ಉತ್ಸಾಹ, ಸಂತೋಷ ಮತ್ತು ಭಾವನೆಗಳಿಂದ ತುಂಬಿದ ಈ ಅದ್ಭುತ ಕ್ಷಣಕ್ಕಾಗಿ 140 ಕೋಟಿ ದೇಶವಾಸಿಗಳನ್ನು ಅಭಿನಂದಿಸಿದರು.

“ನಮ್ಮ ವಿಜ್ಞಾನಿಗಳ ಸಮರ್ಪಣೆ ಮತ್ತು ಪ್ರತಿಭೆಯಿಂದ ವಿಶ್ವದ ಯಾವುದೇ ದೇಶವು ಇದುವರೆಗೆ ತಲುಪಲು ಸಾಧ್ಯವಾಗದ ಚಂದ್ರನ ದಕ್ಷಿಣ ಧ್ರುವವನ್ನು ಭಾರತ ತಲುಪಿದೆ” ಎಂದು ಪ್ರಧಾನಿ ಹೇಳಿದರು. ಚಂದ್ರನಿಗೆ ಸಂಬಂಧಿಸಿದ ಎಲ್ಲಾ ಕಟ್ಟುಕಥೆಗಳು ಮತ್ತು ಕಥೆಗಳು ಈಗ ಬದಲಾಗುತ್ತವೆ ಮತ್ತು ಹೊಸ ಪೀಳಿಗೆಗೆ ನಾಣ್ಣುಡಿಗಳು ಹೊಸ ಅರ್ಥವನ್ನು ನೀಡುತ್ತವೆ ಎಂದು ಅವರು ಒತ್ತಿ ಹೇಳಿದರು. ಭೂಮಿಯನ್ನು ‘ಮಾ’ ಮತ್ತು ಚಂದ್ರನನ್ನು ‘ಮಾಮಾ’ ಎಂದು ಪರಿಗಣಿಸುವ ಭಾರತೀಯ ಜಾನಪದವನ್ನು ಉಲ್ಲೇಖಿಸಿದ ಪ್ರಧಾನಿ, ಚಂದ್ರನನ್ನು ಸಹ ಬಹಳ ದೂರದಲ್ಲಿದೆ ಪರಿಗಣಿಸಲಾಗುತ್ತದೆ ಮತ್ತು ಅದನ್ನು ‘ಚಂದ ಮಾಮಾ ದೂರ್ ಕೆ’ ಎಂದು ಕರೆಯಲಾಗುತ್ತದೆ, ಆದರೆ ಮಕ್ಕಳು ‘ಚಂದ ಮಾಮಾ ಏಕ್ ಟೂರ್ ಕೆ’ ಅಂದರೆ, ಚಂದ್ರನು ಕೇವಲ ಒಂದು ಪ್ರವಾಸದ ದೂರದಲ್ಲಿದೆ ಎಂದು ಹೇಳುವ ಕಾಲ ದೂರವಿಲ್ಲ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು, ವಿಶ್ವದ ಜನರನ್ನು, ಪ್ರತಿಯೊಂದು ದೇಶ ಮತ್ತು ಪ್ರದೇಶವನ್ನು ಉದ್ದೇಶಿಸಿ, “ಭಾರತದ ಯಶಸ್ವಿ ಚಂದ್ರಯಾನ ಭಾರತದ್ದು ಮಾತ್ರವಲ್ಲ. ಭಾರತದ ಜಿ-20 ಅಧ್ಯಕ್ಷ ಸ್ಥಾನಕ್ಕೆ ಜಗತ್ತು ಸಾಕ್ಷಿಯಾಗುತ್ತಿರುವ ವರ್ಷವಿದು. ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ಎಂಬ ನಮ್ಮ ವಿಧಾನವು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ನಾವು ಪ್ರತಿನಿಧಿಸುವ ಈ ಮಾನವ ಕೇಂದ್ರಿತ ವಿಧಾನವನ್ನು ಸಾರ್ವತ್ರಿಕವಾಗಿ ಸ್ವಾಗತಿಸಲಾಗಿದೆ. ನಮ್ಮ ಚಂದ್ರನ ಮಿಷನ್ ಕೂಡ ಅದೇ ಮಾನವ-ಕೇಂದ್ರಿತ ವಿಧಾನವನ್ನು ಆಧರಿಸಿದೆ. ಆದ್ದರಿಂದ, ಈ ಯಶಸ್ಸು ಇಡೀ ಮನುಕುಲಕ್ಕೆ ಸೇರಿದೆ. ಇದು ಭವಿಷ್ಯದಲ್ಲಿ ಇತರ ದೇಶಗಳ ಚಂದ್ರನ ಮಿಷನ್ ಗಳಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. “ಗ್ಲೋಬಲ್ ಸೌತ್ ಸೇರಿದಂತೆ ವಿಶ್ವದ ಎಲ್ಲಾ ದೇಶಗಳು ಅಂತಹ ಸಾಧನೆಗಳನ್ನು ಸಾಧಿಸಲು ಸಮರ್ಥವಾಗಿವೆ ಎಂದು ನನಗೆ ವಿಶ್ವಾಸವಿದೆ. ನಾವೆಲ್ಲರೂ ಚಂದ್ರ ಮತ್ತು ಅದರಾಚೆಗೂ ಹೆಗ್ಗುರಿ ಇಟ್ಟುಕೊಳ್ಳಬಹುದು” ಎಂದು ಅವರು ಹೇಳಿದರು.

ಚಂದ್ರಯಾನ ಮಹಾ ಅಭಿಯಾನದ ಸಾಧನೆಗಳು ಭಾರತವನ್ನು ಚಂದ್ರನ ಕಕ್ಷೆಯಿಂದ ಆಚೆಗೆ ಕೊಂಡೊಯ್ಯಲಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. “ನಾವು ನಮ್ಮ ಸೌರವ್ಯೂಹದ ಮಿತಿಗಳನ್ನು ಪರೀಕ್ಷಿಸುತ್ತೇವೆ ಮತ್ತು ಮನುಷ್ಯರಿಗೆ ಬ್ರಹ್ಮಾಂಡದ ಅನಂತ ಸಾಧ್ಯತೆಗಳನ್ನು ಸಾಕಾರಗೊಳಿಸಲು ಕೆಲಸ ಮಾಡುತ್ತೇವೆ” ಎಂದು ಶ್ರೀ ಮೋದಿ ಹೇಳಿದರು. ಭವಿಷ್ಯಕ್ಕಾಗಿ ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸುವ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು ಮತ್ತು ಇಸ್ರೋ ಶೀಘ್ರದಲ್ಲೇ ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ‘ಆದಿತ್ಯ L-1’ ಮಿಷನ್ ಅನ್ನು ಪ್ರಾರಂಭಿಸಲಿದೆ ಎಂದು ತಿಳಿಸಿದರು. ಶುಕ್ರಗ್ರಹವು ಇಸ್ರೋದ ಗುರಿಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. “ಆಕಾಶವು ಮಿತಿಯಲ್ಲ ಎಂದು ಭಾರತವು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ” ಎಂದ ಪ್ರಧಾನಿಯವರು, ಭಾರತವು ಮಿಷನ್ ಗಗನಯಾನ್ ಮೂಲಕ ತನ್ನ ಮೊದಲ ಮಾನವ ಬಾಹ್ಯಾಕಾಶ ಪಯಣಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನವು ದೇಶದ ಉಜ್ವಲ ಭವಿಷ್ಯದ ಆಧಾರವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಉಜ್ವಲ ಭವಿಷ್ಯದತ್ತ ಸಾಗಲು ಈ ದಿನ ನಮ್ಮೆಲ್ಲರಿಗೂ ಪ್ರೇರಣೆ ನೀಡುತ್ತದೆ ಹಾಗೂ ಸಂಕಲ್ಪಗಳ ಸಾಕಾರಕ್ಕೆ ದಾರಿ ತೋರಿಸಲಿದೆ ಎಂದರು. “ಸೋಲಿನ ಪಾಠಗಳಿಂದ ಗೆಲುವು ಸಾಧಿಸುವುದು ಹೇಗೆ ಎಂಬುದನ್ನು ಈ ದಿನ ಸೂಚಿಸುತ್ತದೆ” ಎಂದು ಅವರು ಹೇಳಿದರು. ವಿಜ್ಞಾನಿಗಳು ತಮ್ಮ ಮುಂದಿನ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸಲಿ ಎಂದು ಆಶಿಸಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಕ್ತಾಯಗೊಳಿಸಿದರು.

 

***