Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಗ್ಲೋಬಲ್ ಸಿಟಿಜನ್ ಲೈವ್’ ಕಾರ್ಯಕ್ರಮ ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 25 ಮತ್ತು 26ರಂದು ಹಮ್ಮಿಕೊಳ್ಳಲಾದ 24 ಗಂಟೆಗಳ ‘ಗ್ಲೋಬಲ್ ಸಿಟಿಜನ್ ಲೈವ್’ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಿದರು. ಮುಂಬೈ, ನ್ಯೂಯಾರ್ಕ್, ಪ್ಯಾರಿಸ್, ರಿಯೋ ಡಿ ಜನೈರೊ, ಸಿಡ್ನಿ, ಲಾಸ್ ಏಂಜಲೀಸ್, ಲಾಗೋಸ್ ಮತ್ತು ಸಿಯೋಲ್ ಸೇರಿದಂತೆ ಪ್ರಮುಖ ನಗರಗಳಲ್ಲಿ ನೇರ ಪ್ರಸಾರ ಕಾರ್ಯಕ್ರಮಗಳನ್ನು ಇದರ ಭಾಗವಾಗಿ ಹಮ್ಮಿಕೊಳ್ಳಲಾಗಿತ್ತು.

ಒಟ್ಟಿಗೆ ಇದ್ದರೆ ನಾವು ಬಲಿಷ್ಠರು ಮತ್ತು ಉತ್ತಮವಾಗಿ ಇರಲು ಸಾಧ್ಯ ಎಂಬುದನ್ನು ವಿವರಿಸಲು ವಿಶ್ವ ಎದುರಿಸಿದ ಕೋವಿಡ್‌ ಸಾಂಕ್ರಾಮಿಕದ ಸವಾಲಿನ ಬಗ್ಗೆ ಪ್ರಧಾನಿ ಮಾತನಾಡಿದರು. “ನಮ್ಮ ಕೋವಿಡ್-19 ಯೋಧರು, ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಸಾಂಕ್ರಾಮಿಕದ ವಿರುದ್ಧ ಹೋರಾಡಲು ತಮ್ಮ ಕೈಲಾದ ಗರಿಷ್ಠ ಸಹಾಯ ಮಾಡಿದ್ದನ್ನು ನೋಡಿದಾಗ ನಮಗೆ ಈ ಸಾಮೂಹಿಕ ಸ್ಫೂರ್ತಿ ಅನುಭವಕ್ಕೆ ಬಂದಿದೆ. ದಾಖಲೆ ಸಮಯದಲ್ಲಿ ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ನಮ್ಮ ವಿಜ್ಞಾನಿಗಳು ಮತ್ತು ನವೋದ್ಯಮಿಗಳಲ್ಲಿ ನಾವು ಈ ಮನೋಭಾವವನ್ನು ನೋಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನವನ ದೃಢ ಮನಸ್ಥಿತಿ ಮತ್ತು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆಯು ಹೇಗೆ ಮೇಲುಗೈ ಸಾಧಿಸಿತು ಎಂಬುದನ್ನು ತಲೆತಲೆಮಾರುಗಳು ನೆನೆಸಿಕೊಳ್ಳಲಿವೆ,ʼʼ ಎಂದು ಪ್ರಧಾನಿ ಹೇಳಿದರು.

ಕೋವಿಡ್ ಜೊತೆಗೆ ಬಡತನ ಸಹ ನಿರಂತರ ಸವಾಲುಗಳಲ್ಲಿ ಒಂದೆನಿಸಿದೆ ಎಂದು ಪ್ರಧಾನಿ ಹೇಳಿದರು. ಬಡವರನ್ನು ಸರಕಾರಗಳ ಮೇಲೆ ಹೆಚ್ಚು ಅವಲಂಬಿತರನ್ನಾಗಿ ಮಾಡುವ ಮೂಲಕ ಬಡತನದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಬಡವರು ಸರಕಾರಗಳನ್ನು ವಿಶ್ವಾಸಾರ್ಹ ಪಾಲುದಾರರಾಗಿ ನೋಡಲು ಪ್ರಾರಂಭಿಸಿದಾಗ ಬಡತನದ ವಿರುದ್ಧ ಹೋರಾಡಬಹುದು. “ಸರಕಾರಗಳೆಂದರೆ ಬಡತನದ ವಿಷವರ್ತುಲದಿಂದ ಶಾಶ್ವತವಾಗಿ ಹೊರಬರಲು ಅವರಿಗೆ ಮೂಲಸೌಕರ್ಯವನ್ನು ನೀಡುವ ವಿಶ್ವಾಸಾರ್ಹ ಪಾಲುದಾರರು”, ಎಂದು ಪ್ರಧಾನಿ ಹೇಳಿದರು.

ಬಡವರ ಸಬಲೀಕರಣಕ್ಕೆ ಅಧಿಕಾರವನ್ನು ಬಳಸಿದಾಗ, ಬಡತನದ ವಿರುದ್ಧ ಹೋರಾಡುವ ಶಕ್ತಿ ಅವರಿಗೆ ಸಿಗುತ್ತದೆ ಎಂದು ಪ್ರಧಾನಿ ವಿವರಿಸಿದರು. ಬ್ಯಾಂಕ್ ರಹಿತ ಬ್ಯಾಂಕಿಂಗ್, ಲಕ್ಷಾಂತರ ಜನರಿಗೆ ಸಾಮಾಜಿಕ ಭದ್ರತೆ ಒದಗಿಸುವುದು, 500 ದಶಲಕ್ಷ ಭಾರತೀಯರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಮುಂತಾದ ಕ್ರಮಗಳನ್ನು ಅವರು ಬಡವರ ಸಬಲೀಕರಣಕ್ಕೆ ಉದಾಹರಣೆಗಳಾಗಿ ವಿವರಿಸಿದರು.

ನಗರಗಳು ಮತ್ತು ಹಳ್ಳಿಗಳಲ್ಲಿ ವಸತಿರಹಿತರಿಗಾಗಿ ನಿರ್ಮಿಸಲಾದ 30 ದಶಲಕ್ಷ ಮನೆಗಳ ಬಗ್ಗೆ ಮಾತನಾಡಿದ ಶ್ರೀ ಮೋದಿ, ಮನೆ ಎಂದರೆ ಆಶ್ರಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಂದು ಒತ್ತಿ ಹೇಳಿದರು. ‘ತಲೆಯ ಮೇಲಿನ ಛಾವಣಿ ಜನರಿಗೆ ಘನತೆಯನ್ನು ನೀಡುತ್ತದೆ’ ಎಂದು ಅವರು ಹೇಳಿದರು. ಇದರ ಜೊತೆಗೆ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು, ಮುಂದಿನ ಪೀಳಿಗೆಯ ಮೂಲಸೌಕರ್ಯಕ್ಕಾಗಿ ಟ್ರಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆ,  800 ದಶಲಕ್ಷ ನಾಗರಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವುದು ಮತ್ತು ಇತರ ಹಲವಾರು ಪ್ರಯತ್ನಗಳು ಬಡತನದ ವಿರುದ್ಧದ ಹೋರಾಟಕ್ಕೆ ಬಲ ನೀಡಲಿವೆ ಎಂದು ಪ್ರಧಾನಿ ವಿವರಿಸಿದರು.

ಹವಾಮಾನ ಬದಲಾವಣೆಯ ಅಪಾಯದ ಬಗ್ಗೆಯೂ ಚರ್ಚಿಸಿದ ಪ್ರಧಾನಿ, “ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡಲು ಅತ್ಯಂತ ಸರಳ ಮತ್ತು ಯಶಸ್ವಿ ಮಾರ್ಗವೆಂದರೆ ಪ್ರಕೃತಿಗೆ ಹೊಂದಿಕೆಯಾಗುವ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು. ಮಹಾತ್ಮಾ ಗಾಂಧಿ ಅವರನ್ನು “ವಿಶ್ವದ ಶ್ರೇಷ್ಠ ಪರಿಸರವಾದಿಗಳಲ್ಲಿ ಒಬ್ಬರು” ಎಂದು ಕರೆದ ಪ್ರಧಾನಮಂತ್ರಿಯವರು ಶೂನ್ಯ ಇಂಗಾಲದ ಹೆಜ್ಜೆಗುರುತುಗಳ ಜೀವನಶೈಲಿಯನ್ನು ಅವರು ಹೇಗೆ ಮುನ್ನಡೆಸಿದರು ಎಂಬುದನ್ನು ವಿವರಿಸಿದರು. ಗಾಂಧೀಜಿ ಅವರು ಏನೇ ಮಾಡಿದರೂ, ನಮ್ಮ ಭೂಗ್ರಹದ ಕಲ್ಯಾಣವನ್ನು ಎಲ್ಲಕ್ಕಿಂತ ಮಿಗಿಲಾಗಿ ನೋಡಿದರು. ‘ನಾವೆಲ್ಲರೂ ಭೂಗ್ರಹದ ಧರ್ಮದರ್ಶಿಗಳಾಗಿ, ಅದನ್ನು ಸಂರಕ್ಷಿಸುವ ಕರ್ತವ್ಯವನ್ನು ಹೊಂದಿದ್ದೇವೆ’ ಎಂದು ಪ್ರತಿಪಾದಿಸುವ ಮಹಾತ್ಮಾ ಗಾಂಧಿ ಅವರ ಧರ್ಮದರ್ಶಿತ್ವದ ಸಿದ್ಧಾಂತವನ್ನು ಪ್ರಧಾನ ಮಂತ್ರಿಯವರು ಎತ್ತಿ ಹಿಡಿದರು.  ಪ್ಯಾರಿಸ್ ಬದ್ಧತೆಗಳಿಗೆ ಬದ್ಧವಾಗಿ ಸರಿಹಾದಿಯಲ್ಲಿರುವ ಏಕೈಕ ಜಿ-20 ರಾಷ್ಟ್ರ ಭಾರತ ಎಂದು ಪ್ರಧಾನಿ ಮಾಹಿತಿ ನೀಡಿದರು. ʻಅಂತಾರಾಷ್ಟ್ರೀಯ ಸೌರ ಒಕ್ಕೂಟʼ ಮತ್ತು ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟʼ ಎಂಬ ಹೆಸರಿನಡಿ ಅಡಿಯಲ್ಲಿ ಜಗತ್ತನ್ನು ಒಗ್ಗೂಡಿಸಿದ ಹೆಮ್ಮೆಯೂ ಭಾರತದ್ದಾಗಿದೆ ಎಂದು ಪ್ರಧಾನಿ ಹೇಳಿದರು.

***