ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಮಾರಿಷಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆಯನ್ನು ನೀಡಿದೆ.
ಈ ಎಂ.ಓ.ಯು. ಗ್ರಾಮೀಣಾಭಿವೃದ್ಧಿ ರಂಗದಲ್ಲಿ ಮಾರಿಷಸ್ ಗಣರಾಜ್ಯದ ಪ್ರಧಾನಮಂತ್ರಿಯವರ ಕಾರ್ಯಾಲಯದ ರಾಷ್ಟ್ರೀಯ ಅಭಿವೃದ್ಧಿ ಘಟಕ ಮತ್ತು ಭಾರತ ಗಣರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಡುವೆ ಸಹಕಾರದ ಚೌಕಟ್ಟು ರೂಪಿಸಲು ನೆರವಾಗಲಿದೆ. ಈ ಎಂ.ಓ.ಯು. ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಸಹಕಾರವನ್ನು ಉತ್ತೇಜಿಸುತ್ತದೆ ಮತ್ತು ಎರಡೂ ರಾಷ್ಟ್ರಗಳ ನಡುವೆ ಪರಸ್ಪರ ಲಾಭ ಮತ್ತು ಸಮಾನತೆಯ ಆಧಾರದ ಮೇಲೆ ಸಾಮರ್ಥ್ಯ ವರ್ಧನೆ ಮಾಡುತ್ತದೆ.
ಈ ಎಂ.ಓ.ಯು. ಅಡಿ, ಗ್ರಾಮೀಣಾಭಿವೃದ್ಧಿ ಕುರಿತ ಜಂಟಿ ಸಮಿತಿಯನ್ನು ಸ್ಥಾಪಿಸಲಾಗುತ್ತದೆ, ಇದು ಎರಡೂ ರಾಷ್ಟ್ರಗಳು ಒಪ್ಪುವ ದಿನಾಂಕದಲ್ಲಿ ಪರ್ಯಾಯವಾಗಿ ಎರಡೂ ರಾಷ್ಟ್ರಗಳಲ್ಲಿ ಸಭೆ ಸೇರಲಿದೆ. ಈ ಎಂ.ಓ.ಯು. ಅಂಕಿತ ಹಾಕುವ ದಿನದಿಂದ ಜಾರಿಗೆ ಬರಲಿದೆ.
ತಿಳಿವಳಿಕೆ ಒಪ್ಪಂದದ ಉದ್ದೇಶ ಈಡೇರಿಸುವಲ್ಲಿ ನೆರವಾಗಬಲ್ಲ ಭಾರತೀಯ ತಜ್ಞ ಸಂಸ್ಥೆಗಳ ಪ್ರವೇಶ, ಸೂಕ್ತ ಮಾಹಿತಿಯ ವಿನಿಮಯ ಮತ್ತು ವೈಜ್ಞಾನಿಕ ಮತ್ತು ತಾಂತ್ರಿಕ ಮಾಹಿತಿ ಹಾಗೂ ನೀತಿಗಳು ಹಾಗೂ ತ್ವರಿತ ಗ್ರಾಮೀಣಾಭಿವೃದ್ಧಿಗೆ ಅಳವಡಿಸಿಕೊಂಡಿರುವ ಬೆಂಬಲಿತ ಕ್ರಮಗಳು ಸೇರಿದಂತೆ ಗ್ರಾಮೀಣಾಭಿವೃದ್ಧಿ ರಂಗದ ದಸ್ತಾವೇಜುಗಳು, ಪರಸ್ಪರರ ಹಿತಕ್ಕೆ ಸಂಬಂಧಿಸಿದ ಸೂಕ್ತ ಮಾಹಿತಿಗಳ ವಿನಿಮಯದ ಮೂಲಕ ಸಹಕಾರ, ಅನುಭವದ ತ್ವರಿತ ವಿನಿಮಯಕ್ಕಾಗಿ ಪರಸ್ಪರರ ಭೇಟಿ ವಿನಿಮಯ ಕಾರ್ಯಕ್ರಮ, ವಲಯ ನಿರ್ಧಿಷ್ಟವಾಗಿ ಮಾರಿಷಸ್ ನಲ್ಲಿ ತರಬೇತಿ ಮತ್ತು ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಸ್ಟಮೈಸ್ ಯೋಜನೆಗಳ ಮೂಲಕ ತರಬೇತಿ ಮತ್ತು ಇತ್ತೀಚಿನ ತಂತ್ರಜ್ಞಾನದ ವರ್ಗಾವಣೆ, ಅತ್ಯಾಧುನಿಕ ಸಾಧನ ಮತ್ತು ಸಲಕರಣೆ ಹಾಗೂ ಉತ್ತಮ ಪದ್ಧತಿಗಳ ವಿನಿಮಯದ ಮೂಲಕ ಅವರ ಮಾನವ ಸಂಪನ್ಮೂಲ ಸಾಮರ್ಥ್ಯ ಬಲವರ್ಧನೆಗೆ ಸಹಯೋಗ ಮತ್ತು ಸೂಕ್ತ ತಾಂತ್ರಿಕ ಸಹಕಾರ ಒದಗಿಸಲು ಎರಡೂ ದೇಶಗಳು ಒಪ್ಪಿವೆ,
ಹಿನ್ನೆಲೆ: ಭಾರತ ಮತ್ತು ಮಾರಿಷಸ್ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ರಂಗದಲ್ಲಿ ದ್ವಿಪಕ್ಷೀಯ ಸಹಕಾರದ ಸಾಂಸ್ಥಿಕ ವ್ಯವಸ್ಥೆ ಕೆಲ ಕಾಲದಿಂದ ಪರಿಗಣನೆಯಲ್ಲಿತ್ತು. ಎರಡೂ ರಾಷ್ಟ್ರಗಳು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ದೊಡ್ಡ ಸಮುದಾಯವನ್ನೇ ಹೊಂದಿವೆ ಮತ್ತು ಅವರು ಜೀವನೋಪಾಯಕ್ಕಾಗಿ ಕೃಷಿ ಮತ್ತು ಅದಕ್ಕೆ ಪೂರಕವಾದ ಚಟುವಟಿಕೆಯನ್ನೇ ಅವಲಂಬಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯ ದೇಶದ ಗ್ರಾಮೀಣ ಪ್ರದೇಶಗಳ ಒಟ್ಟಾರೆ ಅಭಿವೃದ್ಧಿಯ ಕಾರ್ಯತಂತ್ರದಲ್ಲಿ ಮಹತ್ವದ ಪಾತ್ರ ವಹಿಸಿವೆ.