Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗೋವಾದ ತುವಾಮ್-ನಲ್ಲಿ ಮೋಪ ಗ್ರೀನ್ ಫೀಲ್ಡ್ ಅಂತರ ರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿ ಇವುಗಳ ಶಿಲಾನ್ಯಾಸ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿ ಭಾಷಣದ ಮೂಲ ಪಾಠ

ಗೋವಾದ ತುವಾಮ್-ನಲ್ಲಿ ಮೋಪ ಗ್ರೀನ್  ಫೀಲ್ಡ್ ಅಂತರ ರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿ ಇವುಗಳ ಶಿಲಾನ್ಯಾಸ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿ  ಭಾಷಣದ ಮೂಲ ಪಾಠ


 ನಾನು ತಡರಾತ್ರಿ ಜಪಾನಿನಿಂದ ಬಂದೆ ಮತ್ತು ಬೆಳಿಗ್ಗೆ ನಿಮ್ಮ ಸೇವೆಯಲ್ಲಿ ಹಾಜರಾದೆ ಎಂದು [ನನ್ನ ವಿಷಯವಾಗಿ] ಶ್ರೀ ಲಕ್ಷ್ಮೀಕಾಂತ ಜೀ ಇವರು ಹೇಳುತ್ತಿದ್ದರು. ನಾನು ಇಲ್ಲಿಂದ ಕರ್ನಾಟಕಕ್ಕೆ ಹೋಗುತ್ತೇನೆ, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗುವೆ ಮತ್ತು ತಡರಾತ್ರಿ ದೆಹಲಿಗೆ ಹೋಗಿ ಮೀಟಿಂಗ್ ಮಾಡುತ್ತೇನೆ. ಪ್ರಧಾನ ಮಂತ್ರಿಯಾದ ಮೇಲೆ ಭಾರತದ ಯಾವುದೇ ರಾಜ್ಯದಲ್ಲಿ ಒಂದು ರಾತ್ರಿಗಿಂತ ಹೆಚ್ಚು ನಾನು ಎಲ್ಲಿಯಾದರೂ ಉಳಿದಿದ್ದರೆ ಅದು ಗೋವಾದಲ್ಲಿ ಮಾತ್ರ. ನಾನು ಈ ದಿನ ವೈಯಕ್ತಿಕವಾಗಿ ಗೋವಾದ ಲಕ್ಷಾಂತರ ನಾಗರೀಕರನ್ನು ಅಭಿನಂದಿಸ ಬಯಸುತ್ತೇನೆ, ಕೃತಜ್ಞತೆಗಳನ್ನು ತಿಳಿಸ ಬಯಸುತ್ತೇನೆ , ಗೋವಾ ಸರಕಾರವನ್ನು ಅಭಿನಂದಿಸ ಬಯಸುತ್ತೇನೆ. ಮನೋಹರಜೀ ಇವರಿಗೆ ಮತ್ತು ಲಕ್ಷ್ಮೀ ಕಾಂತಜೀ ಇವರಿಗೆ  ಮತ್ತು ಅವರ ಇಡೀ ತಂಡಕ್ಕೆ ನನ್ನ ಕೃತಜ್ಷತೆಗಳನ್ನು ಹೇಳ ಬಯಸುತ್ತೇನೆ.  
 
ಹಲವು ವರ್ಷಗಳ ನಂತರ ಒಂದು ಬಹುದೊಡ್ಡ ಘಟನೆ ಬ್ರಿಕ್ಸ್ ಶೃಂಗ  ವನ್ನು ನಡೆಸಲಾಯಿತು; ಇದು ಎಷ್ಟು ಸಂಭ್ರಮದಿಂದ ಮತ್ತು ವೈಭವಯುತವಾಗಿ  ನಡೆಯಿತೆಂದರೆ, ವಿಶ್ವದ ಯಾರಯಾರನ್ನು ದೊಡ್ಡ ನಾಯಕರೆಂದು ನೀವು ಒಪ್ಪುತ್ತೀರೋ ಮತ್ತು ಅಲ್ಲಿಗೆ ಬಂದಿದ್ದರೋ ಅಂತಹವರ ಬಾಯಲ್ಲೆಲ್ಲ ಗೋವಾ ಗೋವಾ ಗೋವಾ. ಆದ್ದರಿಂದ ನಾನು ಎಲ್ಲ ಗೋವಾ ನಿವಾಸಿಗಳನ್ನು ಗೋವಾ ಸರಕಾರವನ್ನು , ಮುಖ್ಯ ಮಂತ್ರಿಗಳನ್ನು, ಮನೋಹರ ಪಾರಿಕ್ಕರ್ ಅವರನ್ನು, ಅವರ ಎಲ್ಲ ಸಹೋದ್ಯೋಗಿಗಳನ್ನು ಮನದುಂಬಿ ಪ್ರಶಂಸಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ; ಇದು ಗೋವಾದ ಮಾತ್ರವಲ್ಲ ಇಡೀ ಹಿಂದೂಸ್ತಾನದ ಗೌರವವನ್ನು ಹೆಚ್ಚಿಸಿದೆ, ವಿಶ್ವದಲ್ಲಿ ಭಾರತದ ಘನತೆಯನ್ನು ಮೇಲೇರಿಸಿದೆ ಮತ್ತು ಇವೆಲ್ಲ ನಿಮ್ಮಿಂದಾಗಿ ಆಗಿದೆ. ನೀವು ನಮ್ಮಗೌರವವನ್ನು ಹೆಚ್ಚಿಸಿರುವಿರಿ ಆದ್ದರಿಂದ ನಿಮಗೆ ಅಭಿ ನಂದನೆಗಳನ್ನು  ಹೇಳಲೇ ಬೇಕು; ನೀವು ಅದಕ್ಕೆ ಪಾತ್ರರು. 
 
ಸೋದರ-ಸೋದರಿಯರೇ, ಇದು ನನಗೆ ಸಂತೋಷದ ಮಾತು: ಗೋವಾದಲ್ಲಿ ರಾಜಕೀಯ ಅಸ್ಥಿರತೆಯ ರೋಗದಿಂದಾಗಿ ಈ ತರಹದ ಸಂಭ್ರಮಗಳೆಲ್ಲ ನಿಂತು ಹೋಗಿದ್ದವು; ಗೋವಾಕ್ಕೆ ಉಸಿರು ಕಟ್ಟಿ ಹೋಗಿತ್ತು. ಏನೇನಾಗುತ್ತಿತ್ತು ಎಂಬುದು ನನಗೆ ಗೊತ್ತಿಲ್ಲ, ನಿಮಗೆ ಗೊತ್ತು. ಒಮ್ಮೆ ಅಲ್ಲಾದರೆ ಇನ್ನೊಮ್ಮೆ ಇಲ್ಲಿ; ಒಮ್ಮೆ ಇಲ್ಲಾದರೆ ಇನ್ನೊಮ್ಮೆ ಅಲ್ಲಿ. ಈ ರಾಜಕೀಯ ಅಸ್ಥಿರತೆ ಗೋವಾಕ್ಕಿರುವ ಸಾಮರ್ಥ್ಯಕ್ಕೆ ಮತ್ತು ಗೋವಾದ ಜನರಿಗಿರುವ ಶಕ್ತಿಗೆ ಹೂವಾಗಿ ಹಣ್ಣಾಗಲು ಅವಕಾಶವನ್ನೇ ಕೊಡಲಿಲ್ಲ. ನಾನು ಮನೋಹರ್ ಪರಿಕ್ಕರ್ ಅವರಿಗೆ ಅವರು ಬೆಳೆಸಿರುವ ವಿಶಿಷ್ಟ ರಾಜಕೀಯ ಸಂಸ್ಕೃತಿಗಾಗಿ ವಿಶೇಷವಾದ ಅಭಿನಂದನೆಗಳನ್ನು ಹೇಳುತ್ತೇನೆ. ಇದಕ್ಕಾಗಿ ಅವರು ಎಷ್ಟೋ ಸಹಿಸಬೇಕಾಯಿತು; ಒಳ್ಳೊಳ್ಳೆಯ ಸ್ನೇಹಿತರನ್ನು ಕಳೆದು ಕೊಳ್ಳಲೂ ಬೇಕಾಯಿತು. ಒಂದೇ ಉದ್ದೇಶ ಅವರದಾಗಿತ್ತು – ಗೋವಾವನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯ ಬೇಕೆಂಬುದು. ಆದ್ದರಿಂದ ಗೋವಾದಲ್ಲಿ ಸ್ಥಿರತೆ ಉಂಟಾಗಿ ಸರಕಾರ ಐದು ವರ್ಷಗಳವರೆಗೆ ನಡೆಯಿತು, ನೀತಿಗಳ ಆಧಾರದಲ್ಲಿ ನಡೆಯಿತು, ಗೋವಾದ ಅಭಿವೃದ್ಧಿಗಾಗಿ ನಡೆಯಿತು, ಜನರ ಒಳಿತಿಗಾಗಿ ನಡೆಯಿತು, ಅವರು ಇದನ್ನು ಮಾಡಿ ತೋರಿಸಿದರು; 2012 ರಿಂದ 2017ರ ವರೆಗೆ ಈ ಸ್ಥಿರತೆಯ ಲಾಭ ವಿಪುಲವಾಗಿ ಗೋವಾಕ್ಕೆ ಸಿಕ್ಕಿದೆ. ಇಂದು ಎರಡೂ ಪಕ್ಷಗಳು ಸೇರಿ ನಡೆಸುತ್ತಿರುವ ಸರಕಾರ ಅಂತಹುದೇ ರಾಜಕೀಯ ಸ್ಥಿರತೆಯನ್ನು ನೀಡಿದೆ. ಸ್ಥಿರ ಸರಕಾರವನ್ನು ನೀಡುವುದು ಜನತೆಯ ಕೈಯಲ್ಲಿದೆ. ಗೋವಾದ ಜನರು ಸ್ಥಿರ ಸರಕಾರದ ಸಾಮರ್ಥ್ಯವನ್ನು ತಿಳಿದಿದ್ದಾರೆ. ಆದ್ದರಿಂದಲೇ ನಾನವರಿಗೆ ತುಂಬು ಧನ್ಯವಾದಗಳನ್ನು ಹೇಳುತ್ತೇನೆ; ವಂದಿಸುತ್ತೇನೆ. 
 
ಇದರಿಂದಾಗಿ ಇಂದು ನನಗೆ ಇಷ್ಟೊಂದು ಸಂತೋಷವಾಗುತ್ತಿದೆ. ನಾನು ಪ್ರಧಾನ ಮಂತ್ರಿಯಾಗಿದ್ದೇನೆ ನಿಜ. ಆದರೆ ನಾನು ಯಾವ ಪಕ್ಷದವನೆಂಬುದು ಎಲ್ಲರಿಗೂ ಗೊತ್ತು. ಲಕ್ಷ್ಮೀಕಾಂತ ಜೀ ಅವರು ಮುಖ್ಯ ಮಂತ್ರಿಯಾಗಿದ್ದಾರೆ ಎಲ್ಲರಿಗೂ ಗೊತ್ತು ಅವರು ಯಾವ ಪಕ್ಷದವರೆಂದು ಹಾಗೆಯೇ ಮನೋಹರಜೀ ಅವರು ನನ್ನ ಸಹೋದ್ಯೋಗಿಯಾಗಿದ್ದರೂ ಅವರೂ ಯಾವ ಪಕ್ಷದವರೆಂದು ಎಲ್ಲರಿಗೂ ಗೊತ್ತು  . ನಾವು ಒಬ್ಬರನ್ನೊಬ್ಬರು ಹೊಗಳಿಕೊಂಡರೆ ಜನರಿಗೆನಿಸುತ್ತದೆ ಅವರನ್ನವರು ಹೊಗಳಿಕೊಳ್ಳುತ್ತಿದ್ದಾರೆ, ಹಾಗೆ ಮಾಡಲೇಬೇಕಲ್ಲ, ಎಂದು. ಆದರೆ ಈಗ್ಗೆ ಒಂದು ವಾರದ ಹಿಂದೆ ಸ್ವತಂತ್ರ ಸಂಸ್ಥೆಯೊಂದು, ಅದೊಂದು ದೊಡ್ಡ ಮೀಡಿಯಾ ಹೌಸ್,  ರಾಷ್ಟ್ರದ ಸಣ್ಣ ರಾಜ್ಯಗಳ ಸ್ಥಿತಿ ಗತಿಗಳನ್ನು ಪರಿಶೀಲಿಸಿತು, ವಿಭಿನ್ನ ಮಾನದಂಡಗಳನ್ನು ಬಳಸಿ ಸಮೀಕ್ಷೆ ನಡೆಸಿತು; ಅವರು ಸಣ್ಣ ರಾಜ್ಯಗಳಲ್ಲಿ ಗೋವಾವನ್ನು ಒಂದು ಮಿನುಗುತ್ತಿರುವ ನಕ್ಷತ್ರದಂತೆ ಬಿಂಬಿಸಿದರು ಎಂಬುದು ನನಗೆ ಇವತ್ತು ತುಂಬ ಸಂತೋಷದ ವಿಷಯ. ದೇಶದ ಎಲ್ಲ ಸಣ್ಣ ರಾಜ್ಯಗಳಲ್ಲಿ ಸಾಮಾಜಿಕ ಭದ್ರತೆ, ಆರೋಗ್ಯ, ಮೂಲ ಸೌಲಭ್ಯಗಳು – ಇಂತಹ ಎಲ್ಲ ಕ್ಷೇತ್ರಗಳಲ್ಲಿ ಗೋವಾ ಶೀಘ್ರ ಗತಿಯಲ್ಲಿ ಹೊಸ ಎತ್ತರಗಳನ್ನು ತಲುಪುತ್ತಾ ನಂಬರ್ ಒನ್ ಆಗಿಬಿಟ್ಟಿದೆ. ಇದರಲ್ಲಿ ಗೋವಾ ನಿವಾಸಿಗಳ ಬಹುದೊಡ್ಡ ಕೊಡುಗೆ ಇದೆ. ಅವರ ಹೊರತಾಗಿ ಖಂಡಿತ ಇದು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಈ ಸಂದರ್ಭದಲ್ಲಿ ಅವರನ್ನು ಎಷ್ಟು ಅಭಿನಂದಿಸಿದರೂ, ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. 
 
ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮನೋಹರ ಪರಿಕ್ಕರ್ ಅವರು ಇಲ್ಲಿ ಮುಖ್ಯಮಂತ್ರಿಯಾಗಿದ್ದರು. ಹಾಗಿದ್ದಾಗ, ನಾನು ನಿಮಗೊಂದು ರಹಸ್ಯವನ್ನು ಹೇಳುತ್ತೇನೆ, ಹತ್ತು ವಾಕ್ಯಗಳಲ್ಲಿ ಹೇಳುವಂತಹ ವಿಷಯವನ್ನು ಮನೋಹರಜೀಯವರು ಒಂದೇ ವಾಕ್ಯದಲ್ಲಿ ಹೇಳಿಬಿಡುತ್ತಿದ್ದರು. ಆದ್ದರಿಂದ ಆಗಾಗ ಅರ್ಥಮಾಡಿಕೊಳ್ಳುವುದರಲ್ಲಿ ಕ್ಲಿಷ್ಟತೆಯೂ ಉಂಟಾಗುತ್ತಿತ್ತು. ಅವರು ಮಾತ್ರ ಎಲ್ಲರಿಗೂ ಅರ್ಥವಾಯಿತು ಎಂದುಕೊಂಡು ಬಿಡುತ್ತಿದ್ದರು. ಅವರು ಐಐಟಿಯಿಂದ ಬಂದವರು; ನಾನೋ ತುಂಬ ಸಾಮಾನ್ಯ ಮನುಷ್ಯ.  ಆದರೆ ನಾನು ಗುಜರಾತಿನಲ್ಲಿದ್ದಾಗ ಅವರ ಯೋಜನೆಗಳನ್ನು ಅಧ್ಯಯನ ಮಾಡುತ್ತಿದ್ದೆ. ಮುಖ್ಯಮಂತ್ರಿಯಾಗಿದ್ದುಕೊಂಡು ಇಲ್ಲಿನ ಬಡವರಲ್ಲಿ-ಬಡ-ಜನರ ಸಂಕಷ್ಟಗಳನ್ನು ಇವರು ಹೇಗೆ ಅರ್ಥಮಾಡಿಕೊಳ್ಳುತ್ತಿದ್ದರು ಮತ್ತು ಹೇಗೆ ಅವುಗಳ ಪರಿಹಾರದ ದಾರಿಯನ್ನು ಕಂಡು ಹಿಡಿಯುತ್ತಿದ್ದರು ಹೇಗೆ ಪ್ರತಿಯೊಂದು ಯೋಜನೆಯನ್ನು ಈ ನಿಟ್ಟಿನಲ್ಲಿ ರೂಪಿಸುತ್ತಿದ್ದರು ಎಂಬುದನ್ನು ನಾನು ನೋಡುತ್ತಿದ್ದೆ.  ಅನಂತರ ಲಕ್ಷ್ಮೀಕಾಂತಜೀ ಅವರೂ ಕೂಡ ಇದೇ ಕ್ರಮವನ್ನು ಮುಂದುವರೆಸಿದರು. ನಾನು ನೋಡುತ್ತಿದ್ದಂತೆಯೇ ಗೃಹ ಆಧಾರ ಯೋಜನಾ, ವಾರ್ಷಿಕ 3 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಇರುವ ಮಹಿಳೆಯರಿಗಾಗಿ 1500 ರೂಪಾಯಿ ಸಹಾಯ ನೀಡುವ ಯೋಜನೆಯ ಪ್ರಾರಂಭವಾಯಿತು, ದೇಶದ ಹಲವು ರಾಜ್ಯಗಳಿಗೆ ಗೋವಾದಲ್ಲಿ ಇಂತಹ ಯೋಜನೆಯೊಂದನ್ನು ಶುರು ಮಾಡಿದ್ದರು ಎಂಬುದು ಗೊತ್ತೇ ಇರಲಾರದು; ಹಿರಿಯ ನಾಗರೀಕರಿಗಾಗಿ ದಯಾನಂದ ಸರಸ್ವತಿ ಸುರಕ್ಷಾ ಯೋಜನಾ – ಇದರಲ್ಲಿ ಹಿರಿಯನಾಗರೀಕರಿಗೆ ಮಾಹೆಯಾನ 2000ರೂಪಾಯಿಗಳು ಸಿಗುತ್ತವೆ ಮತ್ತು ಇದರಿಂದ 2 ಲಕ್ಷ ಹಿರಿಯ ನಾಗರೀಕರಿಗೆ ಲಾಭವಾಗುತ್ತಿದೆ. ಈ ಎಲ್ಲವೂ ಹಿಂದೂಸ್ತಾನದಲ್ಲಿ ಎಲ್ಲೂ ಇಲ್ಲ  . ಸೋದರರೇ, ಗೋವಾದಲ್ಲಿದೆ. ಸೋದರ-ಸೋದರಿಯರೇ ಲಾಡ್ಲೀ-ಲಕ್ಷ್ಮೀ-ಯೋಜನಾ, ಗೋವಾ ಮತ್ತು ಮಧ್ಯ ಪ್ರದೇಶಗಳಲ್ಲಿ ಇದನ್ನು ಪ್ರಾರಂಭಿಸಿದರು; ಇದರಲ್ಲಿ 18 ವರ್ಷದ ಹೆಣ್ಣುಮಕ್ಕಳಿಗೆ [ತಲಾ] ಒಂದು ಲಕ್ಷ ರೂಪಾಯಿ ಸಿಗುತ್ತದೆ, ಇಂದಿಗೆ ಗೋವಾದಲ್ಲಿ 45 ಸಾವಿರ ನಮ್ಮ ಹೆಣ್ಣುಮಕ್ಕಳು ಈ ಯೋಜನೆಯ ಹಕ್ಕುದಾರರಾಗಿದ್ದಾರೆ. 
 
ಗೋವಾ ಬಹುದೊಡ್ಡ ಕೆಲಸ ಮಾಡಿದೆ. ಮನೊಹರಜೀ ಮತ್ತು ಲಕ್ಷ್ಮೀಕಾಂತಜೀ ಇವರ ದೂರದೃಷ್ಟಿಯನ್ನು ನೋಡಿ. ಇವತ್ತು ಇಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಶಿಲಾನ್ಯಾಸವಾಗುತ್ತಿದೆ. ಆದರೆ ಈ ದಿನಕ್ಕೂ ಮೊದಲೇ, ಈ ಕಾರ್ಯವನ್ನು ಯಶಸ್ವಿ   ಗೊಳಿಸುವುದಕ್ಕೆ  ಬೇಕಾದ ಯುವಧನವನ್ನು, ಬೇಕಾದ ಯುವ ಜನಾಂಗದ ತರುಣರನ್ನು, ಗಮನದಲ್ಲಿಟ್ಟುಕೊಂಡು ಸೈಬರ್ ಸ್ಟೂಡೆಂಟ್ ಯೋಜನೆಯ ಮೂಲಕ ಈ ಇಬ್ಬರು ಮಹನೀಯರು ನಮ್ಮ ನವತರುಣರನ್ನು ಡಿಜಿಟಲ್ ಲೋಕದೊಂದಿಗೆ ಸಂಬಂಧ ಹೊಂದಲು ಅನುವಾಗುವಂತಹ ಒಂದು ಚಳವಳಿಯನ್ನು ನಡೆಸಿದರು.  ಈ ದೂರದೃಷ್ಟಿಗಾಗಿ ಅವರಿಗೆ ನಾನು ಶುಭಾಶಯಗಳನ್ನರ್ಪಿಸುತ್ತೇನೆ. ರೋಗಿಯಾಗುವುದು ಎಷ್ಟು ದುಬಾರಿ ಎಂಬುದು ನಮಗೆಲ್ಲರಿಗು ಗೊತ್ತು ಬಡವರಿಗೆ ರೋಗ ಬಂದರೆ ಸಂಕಷ್ಟಗಳೇ ಮುತ್ತಿಕೊಂಡಂತೆ. ನಮ್ಮ ಗೋವಾ ಸರಕಾರದ ಒಂದು ವಿಶೇಷತೆ ದೀನದಯಾಳ್ ಸ್ವಾಸ್ಥ್ಯ ಸೇವಾ ಎಂಬ ಯೋಜನೆಯನ್ನು ಪ್ರಾರಂಭಿಸಿ ಅದರ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳನ್ನು ಸುಮಾರು ಎರಡು-ಕಾಲು ಲಕ್ಷ ಕುಟುಂಬಗಳಿಗೆ, ಎಂದರೆ ಸ್ವಲ್ಪ ಹೆಚ್ಚು ಕಡಿಮೆ ಗೋವಾದ ಎಲ್ಲ ಕುಟುಂಬಗಳು ಅದರಲ್ಲಿ ಬಂದವು, ಸುರಕ್ಷಾ ಕವಚವೊಂದನ್ನು ನಿರ್ಮಿಸಿದ್ದಾರೆ; ಅವರೆಲ್ಲರ ಆರೋಗ್ಯದ ಬಗ್ಗೆ ಯೋಚಿಸಿದ್ದಾರೆ. ರೈತರಿರಲಿ, ಮೀನುಗಾರರಿರಲಿ ಎಲ್ಲರಿಗೂ ಒಂದು ರೀತಿಯಲ್ಲಿ   ಯೋಜನೆಗಳ ಕಣಜವೇ ಇದೆ; ಈ ಎಲ್ಲವೂ ಜನ ಸಾಮಾನ್ಯರ ಒಳಿತಿಗಾಗಿಯೇ ಇವೆ. ಹೀಗೆ ಗೋವಾಕ್ಕೆ ಬಂದು ಅದು ಅಭಿವೃದ್ಧಿಯ ಪಥದಲ್ಲಿ ಮುಂದಡಿ ಇಡುತ್ತಿರುದನ್ನು ನೋಡಿ ದೇಶದ ಪ್ರಧಾನ ಮಂತ್ರಿಗೆ ಕೂಡ ತನ್ನ ತಲೆ ಬಾಗಿಸುವುದರಲ್ಲಿ  ಆನಂದ ಉಂಟಾಗುತ್ತದೆ, ಹೆಮ್ಮೆ ಎನಿಸುತ್ತದೆ.
 
ಈ ದಿನ ಇಲ್ಲಿ ಮೂರು ಪ್ರಾಜೆಕ್ಟ್  ಗಳ ಆರಂಭವಾಗುತ್ತಿದೆ.   ಮೊಪೆ ನ್ಯೂ ಗ್ರೀನ್ ಫೀಲ್ಡ್  ಏರ್ ಪೋರ್ಟ್ .  ಗೋವಾದಲ್ಲಿ ಇವತ್ತಿಗೆ ಯಾರಿಗೆಲ್ಲ 50 ವರ್ಷಗಳಾಗಿದೆಯೋ ಅವರೂ ಕೂಡ ಯಾವಾಗಿನಿಂದ ಬುದ್ಧಿ ತಿಳಿದವರಾಗಿದ್ದಾರೋ ಆಗಿನಿಂದ, ಗೋವಾದಲ್ಲೊಂದು ವಿಮಾನ ನಿಲ್ದಾಣವಾಗುತ್ತದೆ, ವಿಮಾನಗಳು ಬರುತ್ತವೆ, ಜನ ಇಳಿಯುತ್ತಾರೆ, ಪ್ರವಾಸೋದ್ಯಮ ಬೆಳೆಯುತ್ತದೆ ಎಂಬುದನ್ನು ಬಹುಶಃ ಕೇಳುತ್ತಾ ಬಂದಿದ್ದಾರೆ; ಕೇಳಿದ್ದೀರೋ ಕೇಳಿಲ್ಲವೋ  ಹೇಳಿ. ಎಲ್ಲ ಸರಕಾರಗಳು ಅದನ್ನೇ ಹೇಳಿದ್ದಾರೋ ಇಲ್ಲವೋ ಹೇಳಿ. ಎಲ್ಲ ರಾಜಕೀಯ ಪಕ್ಷಗಳು ಅದನ್ನೇ ಹೇಳಿದ್ದಾರೋ ಇಲ್ಲವೋ? ಆದರೆ ಚುನಾವಣೆ ಮುಗಿಯಿತು; ವಿಮಾನ ಅದು ಇದ್ದಲ್ಲೇ ಗೋವಾ ತಾನಿದ್ದಲ್ಲೇ. ಹೀಗಾಗಿದೆಯೋ  ಇಲ್ಲವೋ,  ಸೋದರರೇ, ನನಗೆ ಹೇಳಿ. ಅಟಲ್ ಬಿಹಾರೀ ವಾಜಪೇಯಿಯವರು ಏನು ಆಶ್ವಾಸನೆ ನೀಡಿದ್ದರೋ ಅದನ್ನು ಪೂರ್ಣಗೊಳಿಸುವ ಅವಕಾಶ ನನಗೆ ಸಿಕ್ಕಿದೆ. ಇದು ಕೇವಲ ವಿಮಾನಗಳು ಆಕಾಶಕ್ಕೆ ಜಿಗಿಯುತ್ತವೆ ಮತ್ತು ನಿಮ್ಮ ಈ ನಿಲ್ದಾಣಕ್ಕೆ ಬರುತ್ತವೆ ಅಷ್ಟೇ ಅಲ್ಲ; ಗೋವಾದ ಜನಸಂಖ್ಯೆ ಹದಿನೈದು ಲಕ್ಷ, ಈ ವ್ಯವಸ್ಥೆ ವಿಕಾಸಗೊಂಡಾಗ ಇಲ್ಲಿಗೆ ಹದಿನೈದರ ಮೂರು ಪಟ್ಟಿಗೂ ಜಾಸ್ತಿ ಸುಮಾರು 50 ಲಕ್ಷ ಜನರು ಗೋವಾಕ್ಕೆ ಬರಲು ಪ್ರಾರಂಭಿಸುತ್ತಾರೆ. ಪ್ರವಾಸೋದ್ಯಮ ಎಷ್ಟು ಬೆಳೆಯ ಬಹುದೆಂಬುದನ್ನು ನೀವು ಕಲ್ಪಿಸಿಕೊಳ್ಳಹುದು. ಮತ್ತೆ ಗೋವಾದಲ್ಲಿ ಪ್ರವಾಸೋದ್ಯಮ ಬೆಳೆಯುವುದು ಎಂಬುದರ ಅರ್ಥ, ಹಿಂದೂಸ್ತಾನದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವುದು; ಇದಕ್ಕೆ ಇದೇ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಗೋವಾದಲ್ಲಿ   ಸೌಲಭ್ಯಗಳು  ಹೆಚ್ಚಾಗೇ ಆಗುವುವು ಸಂಶಯವಿಲ್ಲ. ಗೋವಾ ನಿವಾಸಿಗಳಿಗೂ ಉತ್ತಮ ಸೌಲಭ್ಯಗಳು ನಿಲುಕುವುವು ಮತ್ತು ನನಗೆ ವಿಶ್ವಾಸವಿದೆ:  ಇಲ್ಲಿಯ ಸಾವಿರಾರು ನವಯುವಕರಿಗೂ ಇದರ ನಿರ್ಮಾಣ ಕಾರ್ಯದಲ್ಲಿ ಕೆಲಸಗಳು ದೊರಕುತ್ತವೆ ಮತ್ತು ನಿರ್ಮಾಣದ ನಂತರ ಗೋವಾದ ಆರ್ಥಿಕತೆಗೆ ಮತ್ತು ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಬಲವರ್ಧನೆ  ಸಿಗುವಂತಹದ್ದಿದೆ; ಇದನ್ನು ನಾನು ನಿಚ್ಚಳವಾಗಿ ಕಾಣುತ್ತಿದ್ದೇನೆ. 
 
ಸೋದರ-ಸೋದರಿಯರೇ, ಇವತ್ತು ಇಲ್ಲಿ ಇಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್  ಸಿಟಿ ಯ ಶಿಲಾನ್ಯಾಸವನ್ನು ಕೂಡ ಮಾಡಲಾಗಿದೆ.ಇಲ್ಲೊಂದು ಕೈಗಾರಿಕಾ ಕ್ಷೇತ್ರವನ್ನಷ್ಟೆ ರೂಪಿಸಲಾಗುತ್ತದೆ ಎಂದು ಯಾರೂ ತಿಳಿಯ ಬಾರದು. ಇಲೆಕ್ಟ್ರಾನಿಕ್  ಮ್ಯಾನುಫ್ಯಾಕ್ಚರಿಂಗ್  ಸಿಟಿ ಯ ನಿರ್ಮಾಣ ಎಂಬುದರ ಅರ್ಥವೇನೆಂಬುದು ಬಹಳ ಕಡಿಮೆ ಜನರ  ಅರಿವಿಗೆ ಬಂದಿರುತ್ತದೆ. ಮತ್ತು ನನ್ನ ಮಾತನ್ನು ಬರೆದಿಟ್ಟುಕೊಳ್ಳಿ  . ಸೋದರ-ಸೋದರಿಯರೇ, ಒಂದು ದೃಷ್ಟಿಯಿಂದ ನಾನು 21ನೆಯ ಶತಮಾನದ ಗೋವಾವನ್ನು ನೋಡುತ್ತಿದ್ದೇನೆ ಇಲ್ಲಿ;  ಡಿಜಿಟಲ್ಲಿ ತರಬೇತಾದ  ಯುವಶಕ್ತಿ  ಆಧಾರಿತ 
 ಆಧುನಿಕ  ಗೋವಾದ ಶಿಲಾನ್ಯಾಸವಾಗುತ್ತಿದೆ  .  ಸ್ನೇಹಿತರೇ; ಇದರಿಂದ ಆಧುನಿಕ ಗೋವಾ ನಿರ್ಮಾಣವಾಗುತ್ತದೆ; ತಂತ್ರಜ್ಞಾನದಿಂದ ಸಮರ್ಥ ಗೋವಾ ರೂಪುಗೊಳ್ಳುತ್ತದೆ; ಗೋವಾದ ಆರ್ಥಿಕ ವ್ಯವಸ್ಥೆಯಲ್ಲಿ ಕೇವಲ ಇಲ್ಲಿಯ ನವತರುಣರಿಗೆ ಉದ್ಯೋಗ ಸಿಕ್ಕುವುದಲ್ಲ, ಗೋವಾ ಭಾರತದ ಈಗಿನ ರೂಪವನ್ನೆ ಬದಲಿಸುವ ಒಂದು ಶಕ್ತಿ ಕೇಂದ್ರವಾಗಿ ಬೆಳೆಯುತ್ತದೆ  . ಸ್ನೇಹಿತರೇ, ಇದನ್ನು ನಾನು ನೋಡುತ್ತಿದ್ದೇನೆ. ಇಡೀ ಇಪ್ಪತ್ತೊಂದನೆಯ ಶತಮಾನದಲ್ಲಿ ಈ ಕಾರ್ಯದ   ಪ್ರಭಾವವಿರಲಿದೆ. 
 
ಸೋದರ-ಸೋದರಿಯರೇ, ಈ ದಿನ ನಾವು ಇನ್ನೊಂದು ಮೂರನೆಯ ಮಹತ್ವ ಪೂರ್ಣ ಕಾರ್ಯವನ್ನು ಮುನ್ನಡೆಸುವವರಿದ್ದೇವೆ. ರಕ್ಷಣೆಯ ಕ್ಷೇತ್ರದಲ್ಲಿ ಭಾರತ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕು ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ. ಈ ದೇಶ ಸ್ವತಂತ್ರವಾಗಿ ಎಪ್ಪತ್ತು ವರ್ಷಗಳಾಗಿ ಹೋದುವು. ನಾವು ಯಾರದೇ ದಾಕ್ಷಿಣ್ಯಕ್ಕೆ ಒಳಗಾಗಿ ನಡೆಯಲು ಇಷ್ಟಪಡುವುದಿಲ್ಲ. ನಾವು ಬದುಕುವುದಾದರೆ ನಮ್ಮಷ್ಟಕ್ಕೇ ನಾವು ನಮ್ಮ ಬಲದ ಮೇಲೆ, ಸಾಯುವುದಾದರೂ ನಮ್ಮವರಿಗಾಗಿ ಅಥವಾ  ಆತ್ಮ ಗೌರವಕ್ಕಾಗಿ. ಯಾವ ದೇಶದಲ್ಲಿ 1800 ಮಿಲಿಯ   ಯುವಕರಿದ್ದಾರೋ   18  ಮಿಲಿಯ ಜನ 35ಕ್ಕಿಂತ ಕಡಿಮೆ ವಯಸ್ಸಿನ ತರುಣರಾಗಿದ್ದಾರೋ,ತೇಜಸ್ವಿಗಳಾಗಿದ್ದಾರೋ, ತೇಜಗೋಲಗಳಾಗಿದ್ದಾರೋ, ಪ್ರತಿಭಾವಂತರಾಗಿದ್ದಾರೋ  ಯಾರು ಆವಿಷ್ಕರಿಸುವವರೋ, ತಂತ್ರಜ್ಞರೋ ಇಂತಹ ಉತ್ತಮಿಕೆ ಎಲ್ಲವೂ ಇದೆ; ಆದರೆ ರಕ್ಷಣಾಕ್ಷೇತ್ರದಲ್ಲಿ ಎಲ್ಲವನ್ನೂ ಹೊರಗಿನಿಂದ ತರಿಸಬೇಕಾಗಿದೆ. ಈ ದಿನ ಗೋವಾದ ನೆಲದಿಂದ ಸಮುದ್ರ ರಕ್ಷಣಾ ಕ್ಷೇತ್ರದಲ್ಲಿ ಮೇಕ್-ಇನ್-ಇಂಡಿಯಾ ಕಾರ್ಯಕ್ರಮದಡಿಯಲ್ಲಿಒಂದು ಮಹತ್ವದ ಹೆಜ್ಜೆಯನ್ನು ಇಡಲಿದ್ದೇವೆ. 
 
ಸೋದರ-ಸೋದರಿಯರೇ, ನಾನಿಂದು ಗೋವಾಕ್ಕೆ ಒಂದು ವಿಶೇಷ ಕೃತಜ್ಞತೆಯನ್ನು ಅರ್ಪಿಸಬೇಕಾಗಿದೆ. ಅಕ್ಬರನ ವಿಷಯದಲ್ಲಿ ಹೇಳುತ್ತಾರೆ, ಅವನ ದರ್ಬಾರಿನಲ್ಲಿ ನವರತ್ನಗಳಿದ್ದರೆಂದು  ಮತ್ತು ಆ ನವರತ್ನಗಳ ಬಗ್ಗೆ ಅವರ ವಿಶೇಷತೆಗಳ ಬಗ್ಗೆ ಅಕ್ಬರನ ಕಾಲದಲ್ಲಿ ಚರ್ಚೆಗಳಾಗುತ್ತಿದ್ದವು ಎಂದು. ನನ್ನ ತಂಡದಲ್ಲಿಯೂ ಅನೇಕ ರತ್ನಗಳಿವೆಯಾಗಿ ನಾನು ಭಾಗ್ಯಶಾಲಿ; ಆ ರತ್ನಗಳಲ್ಲಿ ಒಂದು ಹೊಳೆಯುವ ರತ್ನವನ್ನು ಗೋವಾ ಜನರು ಕೊಟ್ಟಿದ್ದಾರೆ. ಆ ರತ್ನದ ಹೆಸರೇ ಮನೋಹರ ಪರಿಕ್ಕರ್. ಎಷ್ಟೋ ವರ್ಷಗಳ ನಂತರ ದೇಶಕ್ಕೆ ಇಂತಹ ರಕ್ಷಣಾ ಮಂತ್ರಿ ಸಿಕ್ಕಿದ್ದಾರೆ, ಇವರು 40 ವರ್ಷಗಳಿಂದ ನಮ್ಮ ಸೇನೆಯಲ್ಲಿದ್ದ ಸಮಸ್ಯೆಗಳನ್ನು ಬಿಡಿಸಲು ದಿನ ರಾತ್ರಿಗಳನ್ನು ಒಂದಾಗಿಸಿದ್ದಾರೆ. ಮನೋಹರ ಪರಿಕ್ಕರ್ ಅವರ ಈ ಪುರುಷಾರ್ಥವಲ್ಲದಿದ್ದರೆ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಒನ್-ರೇಂಕ್-ಒನ್-ಪೆನ್ಶನ್ ಯೋಜನೆ, ನಮ್ಮ ದೇಶದ ರಕ್ಷಣೆಗಾಗಿ ಮಾಡು-ಮಡಿ ಹೋರಾಟದಲ್ಲಿ ತೊಡಗಿರುವ ಸೈನಿಕರ ಕಾರ್ಯ ಪೂರ್ಣವಾಗದೆ ಉಳಿಯುತ್ತಿತ್ತು. ನಾನು ಮನೊಹರಜೀ ಅವರಿಗೆ ಶುಭಾಶಯಗಳನ್ನ ಅರ್ಪಿಸುತ್ತೇನೆ; ನಿಮಗೆ ಮನೋಹರಜೀಯವರನ್ನು ದೇಶಕ್ಕೆ ಕೊಟ್ಟುದಕ್ಕಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಇಂತಹ ಸಮರ್ಥ ರಕ್ಷಣಾ ಮಂತ್ರಿ, ತನ್ನ ಮೇಲೆ ಯಾರೂ ಬೆರಳು ತೋರಿಸಲಾರದ ವ್ಯಕ್ತಿತ್ವದವರು, ಸದ್ಯೋ ಭೂತಕಾಲದಲ್ಲಿ ಯಾರೂ ಆಗಿರುವುದಿಲ್ಲ. ಈಗ ನಾವು ಶೀಘ್ರ ಗತಿಯಲ್ಲಿ ನಿರ್ಣಯಗಳನ್ನು ಮಾಡುತ್ತಿದ್ದೇವೆ. ವಿಶ್ವದ ಜೊತೆಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದೇವೆ. ದೇಶದ ರಕ್ಷಣೆಯನ್ನು ಹೆಚ್ಚಿಸಲು ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದೇವೆ. 28 ತಿಂಗಳುಗಳು ಕಳೆದಿವೆ; ರಕ್ಷಣಾ ಮಂತ್ರಾಲಯದ ಮೇಲೆ ಯಾರೂ ಎಲ್ಲಿಯೂ ಬೆರಳನ್ನು ಕೂಡ ತೋರಿಸುವುದು ಸಾಧ್ಯವಾಗಿಲ್ಲ. ನಾನು ಮನೋಹರಜೀಯವರನ್ನು ಅಭಿನಂದಿಸುವುದಂತೂ ಸರಿಯೇ, ನನ್ನ ಸಹೋದ್ಯೋಗಿಯ ನೆಲೆಯಲ್ಲಿ, ನನಗೊಬ್ಬ ಉತ್ತಮ ಜೊತೆಗಾರ ಸಿಕ್ಕಿದ್ದಾರೆ. ಆದರೆ ಗೋವಾ ನಿವಾಸಿಗಳೇ ನಿಮ್ಮನ್ನು ಅಭಿನಂದಿಸುತ್ತೇನೆ, ನೀವು ಮನೋಹರಜೀಯವರನ್ನು ಹುಟ್ಟಿ ಬೆಳೆಸಿದಿರಿ, ಮತ್ತು ದೇಶಕ್ಕೆ ತಮ್ಮವರಾದ ಮನೋಹರರನ್ನು ಕೊಟ್ಟಿದ್ದೀರಿ . ನಾನು ಮತ್ತೊಮ್ಮೆ ತಮ್ಮನ್ನು ಅಭಿನಂದಿಸುತ್ತೇನೆ.
 
ಸೋದರ-ಸೋದರಿಯರೇ, ಈ  ” mine counter measure vessels ಪ್ರೋಗ್ರಾಮ್ ” –  ಕಾರ್ಯಕ್ರಮವು, ಎಮ್ ಸಿ ಎಮ್ ಪಿ, ಇದು ಭಾರತದ ಸಮುದ್ರ ರಕ್ಷಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸುವಂತಹ ಕಾರ್ಯವಾಗಿದೆ. ಇದರಿಂದ ಜನರಿಗೆ ಉದ್ಯೋಗವಂತೂ ಸಿಕ್ಕೇ ಸಿಗುತ್ತದೆ, ಈ ಕ್ಷೇತ್ರದ  ಅಭಿವೃದ್ಧಿಗಾಗಿಯೂ ನಾವು ಕೆಲಸ ಮಾಡುತ್ತಿದ್ದೇವೆ. 
 
ನನ್ನ ಪ್ರೀತಿಯ ಗೋವಾದ ಸೋದರ-ಸೋದರಿಯರೇ, ನಾನು ಗೋವಾ ನಿವಾಸಿಗಳ ಜೊತೆಗೆ  ಸ್ವಲ್ಪ  ಬೇರೆ ಮಾತನಾಡಲು ಇಚ್ಛಿಸುತ್ತೇನೆ. 
 
08ನೆಯ ದಿನಾಂಕ (8ನೆಯ ನವೆಂಬರ್2016), ರಾತ್ರಿ 8 ಗಂಟೆಗೆ ದೇಶದ ಕೋಟಿ ಕೋಟಿ ಜನರು ಸುಖ ನಿದ್ರೆಯಲ್ಲಿ ಮುಳುಗಿದರು ಮತ್ತು ದೇಶದ ಲಕ್ಷೋಪಲಕ್ಷ ಜನರು ನಿದ್ದೆ ಮಾತ್ರೆಗಳನ್ನು ಖರೀದಿಸಲು ಹೊರಟಿದ್ದಾರೆ. ನಿದ್ದೆಯ ಮಾತ್ರೆಗಳು ಮಾತ್ರ ಸಿಕ್ಕಿಲ್ಲ.
 
ನನ್ನ ಪ್ರೀತಿಯ ದೇಶವಾಸಿಗಳೇ, 8ನೆಯ ದಿನಾಂಕ ರಾತ್ರಿ 8 ಗಂಟೆಗೆ ಕಪ್ಪು ಹಣದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ನಾನು ಪ್ರಾರಂಭಿಸಿದೆ, ಇವುಗಳ ವಿರುದ್ಧ ನಾನು ಪ್ರಾರಂಭಿಸಿದ ಹೋರಾಟ, ದೇಶವು ಇವುಗಳ  ಕಪ್ಪು ಹಣ ಮತ್ತು ಭ್ರಷ್ಟಾಚಾರದ  ವಿರುದ್ಧ ನಡೆಸಿರುವ ಹೋರಾಟ; ಹಿಂದೂಸ್ತಾನದ ಪ್ರಾಮಾಣಿಕ ಜನರು ನಡೆಸಿರುವ ಹೋರಾಟ; ನಾವು ತೆಗೆದುಕೊಂಡ ಕ್ರಮ ಈ ದಿಕ್ಕಿನಲ್ಲಿ ಹೊಸದೊಂದು ಮಹತ್ವದ ಕ್ರಮ. ಆದರೆ ಕೆಲವರು ತಮ್ಮದೇ ಯೋಚನೆಗಳಲ್ಲಿ ಕಳೆದು ಹೋಗಿರುತ್ತಾರೆ. ಅವರು ತಮ್ಮಲ್ಲಿರುವ ಅಳತೆ-ಪಟ್ಟಿಯನ್ನು ತೆಗೆದುಕೊಂಡು ಯಾರನ್ನೋ/ಯಾವುದನ್ನೋ ಅಳೆಯುತ್ತಿರುತ್ತಾರೆ. ಆದರೆ ಅಲ್ಲಿಗೆ ಅದು ಸರಿಯಾಗಿ ಹಿಡಿಯುವುದಿಲ್ಲ ; ಆಗ ಅವರು ಚಿಂತಿಸುತ್ತಾರೆ ಇಲ್ಲೇನೋ ಗಡಿಬಿಡಿಯಾಗಿದೆ ಎಂದು. 
 
ಈ ದೇಶದ ಅರ್ಥಶಾಸ್ತ್ರಜ್ಞರು, ಈ ದೇಶದ ನೀತಿಗಳನ್ನು ಅರ್ಥಮಾಡಿಕೊಂಡು ವಿಶ್ಲೇಷಿಸುವವರು. ಈ ಹಿಂದಿನ ಸರಕಾರ ಮತ್ತು ಹಿಂದಿನ ನಾಯಕರುಗಳನ್ನು ಮಾಪನ ಮಾಡಲು ಮತ್ತು   ಸಾಧನೆಗಳನ್ನು   ಹೋಲಿಸಲು ಅವರು ಬಳಸುತ್ತಿದ್ದ ಅಳತೆಪಟ್ಟಿಯನ್ನು ನಾನು ಬಂದ ಮೇಲೆ ಅವರು ಬದಲಾಯಿಸಿಕೊಂಡಿದ್ದರೆ ಈ ಕಷ್ಟವೇ ಬರುತ್ತಿರಲಿಲ್ಲ. ಜನ ಅಂತಹ ಸರಕಾರವನ್ನು ಚುನಾಯಿಸಿದ್ದಾರೆ ಅವರಿಗೆ ಸರಕಾರದಿಂದ ಬಹಳ ನಿರೀಕ್ಷೆಗಳಿವೆ ಎಂಬುದು ಅವರ ತಿಳಿವಿಗೆ ಬರಬೇಕಾಗಿತ್ತು. ನೀವು ನನಗೆ ಹೇಳಿ ಸೋದರ-ಸೋದರಿಯರೇ, 2014ರಲ್ಲಿ  ನೀವು ನನಗೆ  ವೋಟು ಕೊಟ್ಟಿದ್ದೀರಿ, ಭ್ರಷ್ಟಾಚಾರದ ವಿರುದ್ಧ ಕೊಟ್ಟಿದ್ದೀರಿ, ಕೊಟ್ಟಿದ್ದೀರೋ ಇಲ್ಲವೊ, ನೀವು ಹೇಳಿರಿ ನೀವು ಕೆಲಸ ಮಾಡಲು ನನಗೆ ಹೇಳಿದ್ದಿರೋ ಇಲ್ಲವೋ. ಕಪ್ಪು ಹಣದ ವಿರುದ್ಧ ಕೆಲಸ ಮಾಡಲು ನೀವು ನನಗೆ ಹೇಳಿದ್ದಿರೋ ಇಲ್ಲವೋ. ನೀವು ನನಗೆ ಹೇಳಿದ್ದಿರಿ ಎಂದಾದ ಮೇಲೆ ನಾನು ಅದನ್ನು ಮಾಡಬೇಕೋ ಇಲ್ಲವೋ!  ನೀವು ನನಗೆ ಹೇಳಿ: ನೀವು ನನಗೆ ಇಂತಹ ಕೆಲಸಗಳನ್ನು ಮಾಡಲು ಹೇಳಿದಾಗ ನಿಮಗೂ ಗೊತ್ತಿತ್ತು ಈ ಕಾರ್ಯ ಪ್ರಾರಂಭವಾದಾಗ ಸ್ವಲ್ಪ ಕಷ್ಟಗಳುಂಟಾಗುವುವು ಎಂದು, ಗೊತ್ತಿತ್ತೋ ಇಲ್ಲವೋ. ಹೀಗೆಯೇ ಇದೇ ಮಾತುಗಳಲ್ಲಿ ನೀವು ಅಂದುಕೊಂಡಿದ್ದಿರಿ ಎಂದಲ್ಲ; ಆದರೆ ಇದರ ಒಂದು ಹೊಳಹು ಎಲ್ಲರಿಗೂ ಇತ್ತು.
 
ನಮ್ಮ ಸರಕಾರ ರಚನೆಯಾದ ಸ್ವಲ್ಪವೇ ಸಮಯದಲ್ಲಿ ಸುಪ್ರೀಮ್ ಕೋರ್ಟಿನ ಒಬ್ಬ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ  ವಿಶೇಷ  ತನಿಖಾ ತಂಡ   ರಚಿಸಿದೆವು. ಪ್ರಪಂಚದಲ್ಲಿ ಎಲ್ಲೆಲ್ಲಿ ಈ ಕೆಲಸ  ಕಪ್ಪು ಹಣ ಇಡಲ್ಪಟ್ಟಿದೆ, ನಡೆಯುತ್ತಿದೆ ಎಂಬುದನ್ನು ಹೊರತರಲು. ಆರು  ತಿಂಗಳಿನಲ್ಲಿ ಇದು ಸರ್ವೋಚ್ಛ ನ್ಯಾಯಾಲಯ ಕ್ಕೆ  ತನ್ನ ವರದಿಯನ್ನು ನೀಡಬೇಕಾಗಿದೆ. ಈ ಕೆಲಸಕ್ಕೆ ಮೊದಲಿನ ಸರಕಾರಗಳು ಅಡ್ಡಗಾಲಿಕ್ಕುತ್ತಿದ್ದವು. ನಮ್ಮಲ್ಲೊಂದು ಗಾದೆ ಇದೆ ಪುತ್ರನ ಲಕ್ಷಣ ಪೋಷಣೆಯಲ್ಲಿ. ನನ್ನ ಮೊತ್ತಮೊದಲ ಸಂಪುಟ ಸಭೆಯಲ್ಲಿ ಮೊದಲನೆಯ ದಿನವೇ ಇಂತಹ ದೊಡ್ಡ ನಿರ್ಣಯವನ್ನು ಮಾಡಿದೆನೆಂದರೆ ಮುಂದೆ ನಾನು ಯಾವ ತರಹ  ಕೆಲಸ  ಮಾಡುವವನೆಂಬುದು ಗೊತ್ತಾಗಿರಲಿಲ್ಲವೆ? ನಾನು ಏನಾದರೂ ಮುಚ್ಚಿಟ್ಟೆನೆ, ಏನನ್ನೂ ಮುಚ್ಚಿಡಲಿಲ್ಲವಲ್ಲ. ಪ್ರತಿಸಲ ನಾನೀ ಮಾತನ್ನು ಹೇಳಿದ್ದೇನೆ ಮತ್ತವುಗಳ ವಿವರವನ್ನು ನೀಡುತ್ತಿದ್ದೇನೆ. ದೇಶ ನನ್ನ ಮಾತುಗಳನ್ನು ಕೇಳುತ್ತಿದೆ. ನಾನು ದೇಶವನ್ನು ಎಂದೂ ಕತ್ತಲೆಯಲ್ಲಿಟ್ಟಿಲ್ಲ. ದೇಶಕ್ಕೆ ಎಂದೂ ತಪ್ಪು ಗ್ರಹಿಕೆಯಾಗುವಂತೆ ಮಾಡಿಲ್ಲ. ಬಿಚ್ಚಿಬಿಚ್ಚಿ ಪ್ರಾಮಾಣಿಕತೆಯಿಂದ ಎಲ್ಲವನ್ನೂ ಹೇಳಿದ್ದೇನೆ. 
 
ಸೋದರ-ಸೋದರಿಯರೇ, ಎರಡನೆಯ ಅಗತ್ಯ ಕ್ರಮವೊಂದನ್ನು ನಾವು ಕೈಗೊಳ್ಳ ಬೇಕಾಯಿತು. ವಿಶ್ವದ ದೇಶಗಳ ಜೊತೆಗೆ ಹಿಂದಿನ 50-60 ವರ್ಷಗಳಲ್ಲಿ ಕೆಲವು ಒಪ್ಪಂದಗಳಾಗಿದ್ದವು ಮತ್ತು ಅವುಗಳ ಕಾರಣದಿಂದಲೇ ನಮ್ಮ ಕೈಗಳು ಕಟ್ಟಿದ್ದವು ಮತ್ತು ನಾವು ನಮಗೆ ಬೇಕಾದ ಮಾಹಿತಿಗಳನ್ನು ಪಡೆಯುವುದೇ ಸಾಧ್ಯವಾಗುತ್ತಿರಲಿಲ್ಲ. ವಿಶ್ವದ ದೇಶಗಳೊಡನೆ ಮಾಡಿಕೊಂಡಿದ್ದ ಇಂತಹ ಒಪ್ಪಂದಗಳಲ್ಲಿ ಬದಲಾವಣೆಗಳನ್ನು ಮಾಡುವುದು ಅಗತ್ಯವಾಗಿತ್ತು. ಕೆಲವು ದೇಶಗಳೊಡನೆ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಗಿತ್ತು. ಅಲ್ಲಿನ ಬ್ಯಾಂಕುಗಳಲ್ಲಿ ಯಾರೇ ಭಾರತೀಯರ ಖಾತೆಗಳಿಗೆ ಹಣ ಬರುವುದು ಮತ್ತು ಹೋಗುವುದು ನಮಗೆ ಕೂಡಲೇ ತಿಳಿಯುವಂತೆ ನಮ್ಮೊಡನೆ ಒಪ್ಪಂದ ಮಾಡಿಕೊಳ್ಳುವಂತೆ ಅಮೆರಿಕಾದಂತಹ ರಾಷ್ಟ್ರಕ್ಕೆ ಮನವರಿಕೆ ಮಾಡಿಕೊಡಲು ನಾವು ಸಮರ್ಥರಾದೆವು. ಈ ಕೆಲಸವನ್ನು ನಾನು ವಿಶ್ವದ ಹಲವು ದೇಶಗಳೊಡನೆ ಮಾಡಿದೆ; ಕೆಲವು ದೇಶಗಳೊಡನೆ ಮಾತುಕತೆ   ಈಗಲೂ ನಡೆಯುತ್ತಿದೆ. ಆದರೆ ನಾವು ಕಳವು-ಲೂಟಿಗಳಿಂದಾಗಿ ಭಾರತದ ಸಂಪತ್ತು ಎಲ್ಲಿಯಾದರು ಹೋಗಿದೆಯೆಂದಾದರೆ ನಮಗೆ ಕೂಡಲೇ ಮಾಹಿತಿ ಸಿಗಬೇಕು; ಇದರ ವ್ಯವಸ್ಥೆಯನ್ನು ತುಂಬ ಒತ್ತು ಕೊಟ್ಟು ನಾವು ಮಾಡುತ್ತಿದ್ದೇವೆ. 
 
ನಮಗೂ ಗೊತ್ತಿದೆ ನಿಮಗೂ ಗೊತ್ತಿದೆ ದೆಹಲಿಯಲ್ಲಿರುವ ಒಬ್ಬ ಸರಕಾರೀ ಅಧಿಕಾರಿ ಗೋವಾದಲ್ಲಿ ಫ್ಲ್ಯಾಟ್ ಮಾಡಿರುತ್ತಾರೆ ಅಲ್ಲವೆ . ಗೋವಾದ ಬಿಲ್ಡರುಗಳ ಬಗ್ಗೆ ನನ್ನ ಅಕ್ಷೇಪವಿಲ್ಲ; ಅವರ ಕೆಲಸವೇ ಅಷ್ಟು – ಮನೆಗಳನ್ನು ಕಟ್ಟುವುದು ಮಾರುವುದು. ಆದರೆ ಯಾರ ಸ್ವಲ್ಪ ಸಂಬಂಧವೂ ಗೋವಾದೊಡನಿಲ್ಲವೋ, ಅವರ ಪೈಕಿ ಯಾರೂ ಗೋವಾದಲ್ಲಿ ವಾಸಿಸುತ್ತಿಲ್ಲವೋ, ಅವರು ಹುಟ್ಟಿದ್ದು ಎಲ್ಲೋ,  ಕೆಲಸಮಾಡುವುದು ದೆಹಲಿಯಲ್ಲಿ;  ಅಂತಹವರು ಗೋವಾದಲ್ಲಿ ಮನೆ ಮಾಡಿದರೆಂದರೆ? ಅದೂ ಯಾರ ಹೆಸರಿಗೆ? ತನ್ನ ಹೆಸರಿಗೇ ಮಾಡುವುದಾದರೆ ಸರಿ ಯಾರದೋ ಹೆಸರಿನಲ್ಲಿ ಖರೀದಿಸಿಡುತ್ತಾರೋ ಇಲ್ಲವೋ? ನಾವು ಕಾನೂನು ಮಾಡಿದೆವು ಇನ್ನೊಬ್ಬರ ಹೆಸರಿನಲ್ಲಿ ಮಾಡಿದ ಸಂಪತ್ತು ಏನಿದೆ ಬೇನಾಮಿ ಸಂಪತ್ತು ನಾವಿನ್ನು ಅದರ ಮೇಲೆ ದಂಡ ಬೀಸುವವರು. ಈ ಸಂಪತ್ತು ದೇಶದ್ದು, ದೇಶದ ಬಡವರದ್ದು ಮತ್ತು ನಮ್ಮ ಸರಕಾರ ಬಡವರಿಗೆ ಮಾತ್ರವೇ ಸಹಾಯ ಮಾಡುವುದು ತನ್ನ ಕರ್ತವ್ಯವೆಂದು ಭಾವಿಸುತ್ತದೆ. ನಾನು ಅದನ್ನು ಮಾಡಿಯೇ ತೀರುತ್ತೇನೆ. 
 
ಮನೆಯಲ್ಲಿ ಮದುವೆಯಾಗಲಿ, ಮುಂಜಿಯಾಗಲಿ, ಬೇರೇನೆ ಶುಭಕಾರ್ಯಗಳಾಗಲೀ ನಾವು ಆಭರಣಗಳನ್ನು ಕೊಳ್ಳುತ್ತೇವೆ ಎಂಬುದು ನಮ್ಮೆಲ್ಲರಿಗೂ ಗೊತ್ತು. ಹೆಂಡತಿಯ ಹುಟ್ಟುಹಬ್ಬಕ್ಕೂ ಆಭರಣ ಖರೀದಿಸುತ್ತೇವೆ. ಕೆಲವೊಮ್ಮೆ ಚಿನ್ನ ಖರೀದಿಸುತ್ತೇವೆ ಮತ್ತು ಇತರ ಆಭರಣಗಳನ್ನೂ. ‘ಪರವಾಗಿಲ್ಲ ತೆಗೆದುಕೊಂಡು ಹೋಗಿ ಸ್ವಾಮಿ, ಬನ್ನಿ, ಚೀಲ ತುಂಬಿಸಿಕೊಂಡು ಹೋಗಿ. ಬಿಲ್ಲು ಕೊಡುವುದಿಲ್ಲ, ಏನನ್ನೂ ತೆಗೆದುಕೊಳ್ಳುವುದೂ ಇಲ್ಲ ಯಾವುದೇ ತರಹದ ಲೆಕ್ಕಾಚಾರವಿಲ್ಲ ಏನೂ ಇಲ್ಲ ಸ್ವಾಮಿಗಳೇ’. ಈ ತರಹ ನಡೆಯುತ್ತಿತ್ತೋ ಇಲ್ಲವೋ?  ಎಲ್ಲ ಕಡೆ ನಗದೇ ನಡೆಯುತ್ತಿತ್ತೋ ಇಲ್ಲವೋ? ಇದನ್ನು ಯಾರಾದರೂ ಬಡಜನರು ಮಾಡುತ್ತಿದ್ದರೇನು? ಇದು ನಿಲ್ಲಬೇಕೋ ಬೇಡವೋ? ನಾವು ಕಾನೂನನ್ನು ಮಾಡಿದೆವು ಎರಡು ಲಕ್ಷ ರೂಪಾಯಿಗಳಿಗೆ ಮಿಕ್ಕು ಯಾರಾದರೂ ಆಭರಣ ಖರೀದಿಸುವುದಾದರೆ ಅವರ ಪ್ಯಾನ್ ನಂಬರ್ ನೀಡಬೇಕು ಎಂದು. ಇದಕ್ಕೂ ವಿರೋಧ ಬಂತು. ಪಾರ್ಲಿಮೆಂಟಿನ ಅರ್ಧಕ್ಕಿಂತ ಹೆಚ್ಚಿನ ಸದಸ್ಯರು ಮೋದಿಜೀ ಈ ನಿಯಮವನ್ನು ತರಬೇಡಿ ಎಂದು ನನಗೆ ಹೇಳಲು ಬಂದಿದ್ದರು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಮತ್ತೆ ಕೆಲವರು ನನಗೆ ಈ ಬಗ್ಗೆ ಪತ್ರ ಬರೆಯುವ ಧೈರ್ಯವನ್ನೂ ಮಾಡಿದರು. ನಾನು ಇವರ ಹೆಸರುಗಳನ್ನೇನಾದರೂ ಸಾರ್ವಜನಿಕಗೊಳಿಸಿದರೆ ಅವರೇನು ತಮ್ಮ ಕ್ಷೇತ್ರಗಳಲ್ಲಿ ಹೋಗಬಲ್ಲರೋ ಹೋಗಲಾರರೋ ತಿಳಿಯದು. ನಿಮ್ಮ ಬಳಿ ದುಡ್ಡಿದ್ದರೆ ನೀವು ಚಿನ್ನವನ್ನು ಖಂಡಿತ ಕೊಳ್ಳಬಹುದು. ನಾವು ಹೇಳುವುದು ಇಷ್ಟೆ ನಿಮ್ಮ ಆದಾಯ ತೆರಿಗೆಯ ಪ್ಯಾನ್ ನಂಬರ್ ಇದೆಯಲ್ಲಾ ಅದನ್ನು ಬರೆಸಿ ಬಿಡಿ. ಆಭರಣವನ್ನು  ಯಾರು ತೆಗೆದುಕೊಳ್ಳುತ್ತಾರೆ, ಅವರಿಗೆ ದುಡ್ಡು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದಾದರೂ ಗೊತ್ತಾಗಲಿ.  ಸೋದರ-ಸೋದರಿಯರೇ, 70 ವರ್ಷಗಳ ರೋಗವನ್ನು 17 ತಿಂಗಳುಗಳಲ್ಲಿ ಹೋಗಲಾಡಿಸಬೇಕೆಂದಿದ್ದೇನೆ ನಾನು. 
 
ಸೋದರ-ಸೊದರಿಯರೇ, ನಾವು ಇನ್ನೊಂದು ಕೆಲಸವನ್ನು ಮಾಡಿದ್ದೇವೆ. ಈ ಮೊದಲಿನ ಸರಕಾರಗಳು ಕೂಡ ಮಾಡಿದ್ದವು. ಈ ಆಭರಣ ಅಂಗಡಿಕಾರರಿಗೆ, ಇವರನ್ನೇ ಏಕೆ ಹೇಳುತ್ತಿದ್ದೇನೆಂದರೆ ಇಲ್ಲಿ ನಾವು ಚಿನ್ನ ಬೆಳ್ಳಿ ವಿಷಯ ಮಾತನಾಡುತ್ತಿದ್ದೇವೆ, ಎಕ್ಸೈಜ್ ಡ್ಯೂಟಿ ಬೀಳುತ್ತಿರಲಿಲ್ಲ. ಈ ಮೊದಲಿನ ಸರಕಾರ ಅದನ್ನು ಹಾಕುವ ಪ್ರಯತ್ನವನ್ನು ಮಾಡಿತ್ತು, ಬಹಳ ಕಡಿಮೆ ಹಾಕಿತ್ತು ಆದರೆ ಆಭರಣಕಾರರು, ಅವರ ಸಂಖ್ಯೆ ಹೆಚ್ಚಿಲ್ಲ ಅವರು ಒಂದೂರಿನಲ್ಲಿ ಒಬ್ಬರೋ ಇಬ್ಬರೋ ಇರುತ್ತಾರೆ; ದೊಡ್ಡ ನಗರಗಳಲ್ಲಿ 50ರಿಂದ 100 ಇರುತ್ತಾರೆ; ಆದರೆ ಅವರ ಸಾಮರ್ಥ್ಯ ಭಾರಿ ಮಾಯದ್ದು ಸ್ವಾಮಿ, ಒಳ್ಳೊಳ್ಳೇ  ಎಂ ಪಿ ಗಳೆಲ್ಲ ಅವರ ಜೇಬಿನಲ್ಲಿ ಮತ್ತು ಅವರ ಮೇಲೆ ಎಕ್ಸೈಜ್ ಹಾಕಿದರೆ? ನನ್ನ ಮೇಲೆ ಇಷ್ಟೊಂದು ಒತ್ತಡ ಬಂತು ಇಷ್ಟೊಂದು ಒತ್ತಡ ಬಂತು, ಎಂ ಪಿ ಗಳ ಒತ್ತಡ, ಡೆಲಿಗೇಶನ್ನುಗಳ ಒತ್ತಡ, ನಮ್ಮಪರಿಚಿತರಿಂದ ಹೇಳಿಸುವುದು, ‘ಸ್ವಾಮಿ ಇದನ್ನೆಲ್ಲ ಇನ್-ಕಮ್-ಟ್ಯಾಕ್ಸಿನವರು ಬಾಚಿ ಬಿಡುತ್ತಾರೆ, ಎಲ್ಲ ನಾಶ ಮಾಡಿಬಿಡುತ್ತಾರೆ’; ಎಂತೆಂಥ ಮಾತುಗಳು ಬಂದವು ಎಂದರೆ ಇದನ್ನು ಮಾಡಿದರೆ ಏನಾಗಿಬಿಡುತ್ತದೋ ಎಂದು ನಾನೂ ಹೆದರಿ ಹೋಗಿದ್ದೆ. ನಾನು ಹೇಳಿದೆ ಎರಡು ಸಮಿತಿಗಳನ್ನು ಮಾಡೋಣ ಅಲ್ಲಿ ಸಂವಾದ ಮಾಡೋಣ ಚರ್ಚೆ ಮಾಡೋಣ ಎಂದು. ಸರಕಾರದ ಕಡೆಯಿಂದ ಅವರುಗಳಿಗೆ ಯಾರಲ್ಲಿ ಭರವಸೆ ಇತ್ತೋ ಅಂತಹ ತಜ್ಞರುಗಳನ್ನು ಸೇರಿಸಿ ಸಮಿತಿ ಮಾಡಿದೆವು. ಈ ಮೊದಲಿನ ಸರಕಾರಗಳು ಈ ಕಾರ್ಯದಿಂದ ಹಿಂದೆ ಸರಿಯಬೇಕಾಗಿ ಬಂದಿತ್ತು. ನಾನು ಹಿಂದೆ ಹೋಗಲಿಲ್ಲ. ನಾನು ಆಭರಣಕಾರರಿಗೆ ತಮ್ಮ ಮೇಲೆ ಯಾರೂ ಬಲಾತ್ಕಾರ ಮಾಡುವುದಿಲ್ಲ; ಇನ್-ಕಮ್-ಟ್ಯಾಕ್ಸಿನವರೇನಾದರೂ ಹಾಗೆ ಮಾಡಿದರೆ ಅವರ ಮಾತುಗಳನ್ನು ರೆಕಾರ್ಡ್ ಮಾಡಿ ನನಗೆ ಕಳುಹಿಸಿ; ಅವರ ವಿರುದ್ಧ ನಾನು ಕ್ರಮ ಕೈಗೊಳ್ಳುತ್ತೇನೆ, ಎಂದು ಅವರಿಗೆ ಭರವಸೆ ಕೊಟ್ಟೆ. ಈ ಕ್ರಮವನ್ನು ನಾವು ಕೈಗೊಂಡೆವು. ಇದನ್ನೆಲ್ಲ ನೋಡಿ ಯಾರಿಗೆ ತಿಳಿಯುವುದಿಲ್ಲ ಮೋದಿ ಮುಂದೇನು ಮಾಡುವನೆಂದು. ಆದರೆ ನೀವು ನಿಮ್ಮ ಲೋಕದಲ್ಲಿ ಮುಳುಗಿ ಹೋಗಿದ್ದಿರಿ. ಬೇರೆ ರಾಜಕೀಯ ಪಕ್ಷಗಳ ರಿತಿಯಲ್ಲೇ ಇದೂ ಬಂದು ಹೋಗುತ್ತದೆ ಎಂದುಕೊಂಡಿದ್ದಿರಿ. ಸೋದರ-ಸೊದರಿಯರೇ, ನಾನು ಕುರ್ಚಿಗಾಗಿ ಹುಟ್ಟಿಯೇ ಇಲ್ಲ. ನನ್ನ ದೇಶ ಬಾಂಧವರೇ ನಾನು ಮನೆಮಠ, ಕುಟುಂಬ ಎಲ್ಲವನ್ನೂ ದೇಶಕ್ಕಾಗಿ ಬಿಟ್ಟು ಬಂದಿದ್ದೇನೆ.
 
ನಾವು ಇನ್ನೊಂದು ಕಡೆಯಿಂದ ಇನ್ನೊಂದು ತರಹದ ಒತ್ತಾಯವನ್ನ ತಂದೆವು. ಕೆಲವರು  ಒಳ್ಳೆಯ ಜನರಿದ್ದಾರೆ, ಏನೋ ಸನ್ನಿವೇಶಕ್ಕೆ ಸಿಕ್ಕು ತಪ್ಪು ಕೆಲಸ ಮಾಡಬೇಕಾಗಿ ಬರುತ್ತದೆ. ಎಲ್ಲ ಜನರೂ ಅಪ್ರಾಮಾಣಿಕರಾಗಿರುವುದಿಲ್ಲ. ಎಲ್ಲ ಜನರೂ ಕಳ್ಳ ಮನೋಭಾವದವರೂ ಆಗಿರುವುದಿಲ್ಲ. ಒತ್ತಡಕ್ಕೆ ಸಿಕ್ಕು ಏನೋ ಮಾಡುತ್ತಾರೆ. ಅವರಿಗೆ ಅವಕಾಶ ದೊರೆತರೆ ಸರಿದಾರಿಗೆ ಬರಲು ಅವರು ಸಿದ್ಧರಿರುತ್ತಾರೆ. ಇಂತಹವರ ಸಂಖ್ಯೆಯೇ ದೊಡ್ಡದು. ನಾವು ಜನರೆದುರು ಒಂದು ಯೊಜನೆಯನ್ನು ಇಟ್ಟೆವು, ಏನೆಂದರೆ: ತಮ್ಮ ಬಳಿ ಇಂತಹ ಅಪ್ರಾಮಾಣಿಕ ಪೈಸೆ ಏನಾದರೂ ಇದ್ದರೆ ತಾವು
” ECS  ” ಕಾನೂನಿನಡಿಯಲ್ಲಿ ಜಮಾ ಮಾಡಿ, ಸ್ವಲ್ಪ ದಂಡವನ್ನು ಕಟ್ಟಿ ಬಿಡಿ, ಅದರಲ್ಲಿಯೂ ನಾನು ಯಾವುದೇ ರಿಯಾಯಿತಿ ಬಿಟ್ಟಿರಲಿಲ್ಲ ಅದರೆ ವ್ಯಾಪಾರಿಗಳು ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ತುಂಬ ಬುದ್ಧಿವಂತರಿರುತ್ತಾರೆ. ಅವರ ಅರಿವಿಗೆ ಬಂತು ಇದು ಮೋದಿಯ ಕೆಲಸ ಏನಾದರೂ ಗಡಿಬಿಡಿಯಾಗಿಬಿಡುತ್ತದೆ ಎಂದು.  
 
ನಿಮಗೆ ತಿಳಿದು ಖುಶಿ ಎನಿಸಬಹುದು ಇಂತಹ ಯೋಜನೆಗಳು ಕಳೆದ 70 ವರ್ಷಗಳಲ್ಲಿ ಎಷ್ಟೋ ಸಲ ಬಂದಿವೆ; ಆದರೆ ಈ ಸಲ ಪ್ರಥಮ ಬಾರಿಗೆ 67000 ಕೋಟಿ ರೂಪಾಯಿಗಳು ದಂಡ ಸಮೇತ ಜನರು ಮುಂದೆ ಬಂದು ಜಮಾ ಮಾಡಿದರು. ಎರಡು ವರ್ಷಗಳಲ್ಲಿ ಸರ್ವೆಗಳ ಮುಖಾಂತರ, ರೈಡುಗಳ ಮೂಲಕ, ಡಿಕ್ಲರೇಶನ್ನುಗಳ ಮುಖಾಂತರ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳು ಜಮೆಯಾದವು. ಮೊದಲೆಲ್ಲೂ ಕಾಣದ ಈ ದುಡ್ಡು ಸರಕಾರೀ ಖಜಾನೆಗಳಲ್ಲಿ ಬಂದು ಬಿದ್ದವು, ಸೋದರರೇ. ಒಂದೂ ಕಾಲು ಲಕ್ಷ ಕೋಟಿಗಳ ಲೆಕ್ಕಾಚಾರ ಈಗ ಲಭ್ಯವಾಗಿದೆ. ಈ ಎರಡು ವರ್ಷಗಳಲ್ಲಿ ಮಾಡಿದ ಕೆಲಸದ ಲೆಕ್ಕಾಚಾರವನ್ನು ನಾನು ಇಂದು ಗೋವಾದ ನೆಲದಿಂದ ಇಡೀ ದೇಶದ ಮುಂದೆ ಇಡುತ್ತಿದ್ದೇನೆ.
 
 ಸೋದರ-ಸೋದರಿಯರೇ.    ಇದರನಂತರ ಏನು ಮಾಡಬೇಕೆಂಬುದು ನಮಗೆ ಗೊತ್ತಿತ್ತು. ನಾವು ಜನಧನ ಖಾತೆಗಳನ್ನು ತೆರೆಸಿದೆವು. ನಾನು ಈ ಯೋಜನೆಯನ್ನು ಮೊದಲು ಘೋಷಿಸಿದಾಗ ಪಾರ್ಲಿಮೆಂಟಿನಲ್ಲಿ ನನ್ನನ್ನು ಹೇಗೆಲ್ಲ ತಮಾಶೆ ಮಾಡಲಾಯಿತು, ಭಾಷಣಗಳು ಹೇಗಾದವು, ನಿಮಗೆ ನೆನಪಿರಬಹುದು. ಏನೇನೆಲ್ಲ ಹೇಳಿದರೋ ನನಗಂತೂ ಗೊತ್ತಾಗುತ್ತಿಲ್ಲ.  ಮೋದಿಯ ಜುಟ್ಟು ಹಿಡಿದು ಎಳೆದರೆ ಅವನು ಹೆದರಿ ಹೋಗುತ್ತಾನೆಂದು ಅವರಿಗೆಲ್ಲ ಕಾಣಿಸುತ್ತಿತ್ತು. ಎಳೆದರಷ್ಟೇ ಅಲ್ಲ, ಮೋದಿಯನ್ನು ಜೀವಂತ ಸುಟ್ಟು ಬಿಟ್ಟರೂ ಅವನು ಹೆದರುವುದಿಲ್ಲ. ಮೊದಲಲ್ಲೇ ನಾವೊಂದು ಕೆಲಸ ಮಾಡಿದೆವು, ಪ್ರಧಾನ ಮಂತ್ರಿ ಜನಧನ ಯೋಜನೆಯ ಮೂಲಕ, ಬಡವರಲ್ಲಿ-ಬಡವರ ಬ್ಯಾಂಕ್ ಖಾತೆ ತೆರೆಸುವುದು, ಆಗ ಜನರಿಗೆ ಮೋದಿ ಬ್ಯಾಂಕ್ ಖಾತೆ ಏಕೆ ತೆರೆಸುತ್ತಿದ್ದಾನೆ ಎಂಬುದು ಗೊತ್ತಾಗಲಿಲ್ಲ. ಈಗ ಎಲ್ಲರಿಗೆ ಗೊತ್ತಾಗುತ್ತಿದೆ ಈ ಬ್ಯಾಂಕ್ ಖಾತೆಗಳಿಂದ ಏನೇನು ಲಾಭವಿದೆ ಎಂಬುದು. 20 ಕೋಟಿಗಿಂತ ಹೆಚ್ಚು ಜನರು ಬ್ಯಾಂಕು ಖಾತೆಗಳನ್ನು ತೆರೆದರು ಮತ್ತು ಹಿಂದೂಸ್ತಾನದ ಶ್ರೀಮಂತ ಜನರು ತಮ್ಮ ಜೇಬಿನಲ್ಲಿ ಸುಲಭವಾಗಿ ಇಟ್ಟುಕೊಳ್ಳುವ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ತರಹ ಇವರೂ ಕಾರ್ಡುಗಳನ್ನು ಪಡೆದರು  , ಮೊದಲು ಈ ತರಹದ ಕಾರ್ಡುಗಳನ್ನು ಇಟ್ಟುಕೊಳ್ಳುವ ಬಗ್ಗೆ ಬಡವರು ಯೋಚಿಸಲು ಸಾಧ್ಯವೇ ಇರಲಿಲ್ಲ,ಅದರಿಂದೇನು ಸಿಕ್ಕುತ್ತದೆ ಎಂಬುದೂ ತಿಳಿದಿರಲಿಲ್ಲ,  ಸೋದರ-ಸೋದರಿಯರೇ, ಜನಧನ ಯೋಜನೆಗಾಗಿ ಬ್ಯಾಂಕ್ ಖಾತೆ ತೆರೆದಿದ್ದಾರೆ ಅಂತೇನೂ ಅಲ್ಲ. 
 
ಈ ದೇಶದ 20 ಕೋಟಿ ಜನರಿಗೆ ರೂಪೆ ಕಾರ್ಡುಗಳನ್ನು ಕೊಟ್ಟಿದ್ದೇವೆ, ಡೆಬಿಟ್ ಕಾರ್ಡ್ ಕೊಟ್ಟಿದ್ದೇವೆ ಮತ್ತು ಇದೆಲ್ಲ ಒಂದು ವರ್ಷ ಮೊದಲೇ ಆಗಿರುವಂತಹದು.ಈ ಡೆಬಿಟ್ ಕಾರ್ಡಿನಿಂದ ನಿಮ್ಮ ಖಾತೆಯಲ್ಲಿರುವ ಹಣವನ್ನು ಖರ್ಚು ಮಾಡಿ ಅಂಗಡಿಗಳಿಂದ ಯಾವುದೇ ವಸ್ತುವನ್ನು ಕೊಳ್ಳಬಹುದು, ಅಂತಹ ವ್ಯವಸ್ಥೆ ಇದರಲ್ಲಿ ಲಭ್ಯವಿದೆ ಸೋದರ-ಸೋದರಿಯರೇ. ಆದರೆ  ಕೆಲ  ಜನರಿಗೆ ಎನಿಸಿತು, ‘ಹಾಗಲ್ಲ ಹಾಗಲ್ಲ; ಬೇರೆ ಯಾವುದೇ ರಾಜಕೀಯ ಕೆಲಸದ ಹಾಗೆ ಇದೂ’ ಎನಿಸಿತು. ಆದರ ಇದು ರಾಜಕೀಯ ಕೆಲಸವಾಗಿರಲಿಲ್ಲ. ದೇಶದ ಆರ್ಥಿಕ ಸ್ಥಿತಿ ಸುಧಾರಿಸುವುದಕ್ಕೋಸ್ಕರ ಬೇರೆಬೇರೆ ಔಷಧಿಗಳನ್ನು ಕೊಡುತ್ತಿದ್ದೆ.ಮತ್ತು ನಿಧಾನವಾಗಿ ಡೋಸ್ ಹೆಚ್ಚು ಮಾಡುತ್ತಿದ್ದೆ.  
 
ಈಗ ಸೋದರ-ಸೋದರಿಯರೇ, ನಮ್ಮ ದೇಶದ ಬಡವರ ಶ್ರೀಮಂತಿಕೆ ನೋಡಿರಿ ಸ್ನೇಹಿತರೇ. ನಾನಂತೂ ಅವರಿಗೆ ಹೇಳಿದ್ದೆ ಶೂನ್ಯ ಮೊತ್ತದಿಂದ ಖಾತೆ ತೆರೆಯಲು ಸಾಧ್ಯ, ನೀವೊಂದು ಸಲ ಬ್ಯಾಂಕಿನೊಳಗೆ ಕಾಲಿಡಬೇಕು ಅಷ್ಟೆ ಎಂದು; ಈ ಆರ್ಥಿಕ ವ್ಯವಸ್ಥೆಯಲ್ಲಿ ನೀವೆಲ್ಲಾದರೂ ಇರಬೇಕು ಎಂದು. ಆದರೆ ದೇಶದ ಬಡವರ ಶ್ರೀಮಂತಿಕೆ ನೋಡಿರಿ,ಇಲ್ಲಿರುವ ಶ್ರೀಮಂತ ಜನರು ರಾತ್ರಿಯಲ್ಲಿ ಸರಿಯಾಗಿ ನಿದ್ದೆ ಮಾಡಲಾರರು ಅಲ್ಲವೇ, ಬಡಜನರ ಸಂಪತ್ತನ್ನು ನೋಡಿರಿ ನಾನೇನೋ ಹೇಳಿದ್ದೆ ಸೊನ್ನೆ ಮೊತ್ತದಿಂದ ಖಾತೆ ತೆರೆಯುವುದು ಎಂದು. ಆದರೆ ಈ ಬಡವರು ತಮ್ಮ ಠೇವಣಿ ಇಟ್ಟು ಖಾತೆ ತೆರೆದುದರಿಂದ ಬ್ಯಾಂಕುಗಳಲ್ಲಿ 45,000 ಕೋಟಿ ರೂಪಾಯಿಗಳ ಜಮೆ ಮಾಡಿದರು ಸ್ನೇಹಿತರೇ. ಈ ದೇಶದ ಸಾಮಾನ್ಯ ಜನರ ಸಾಮರ್ಥ್ಯವನ್ನು ನಾವು ಗುರುತಿಸಬೇಕು.  20 ಕೋಟಿ ಕುಟುಂಬಗಳಿಗೆ ನಾವು ರುಪೆ ಕಾರ್ಡುಗಳನ್ನು ಕೊಟ್ಟಿದ್ದೇವೆ. ಆದರೂ ಕೆಲಜನರು ಒಪ್ಪುವುದೇ ಇಲ್ಲ. ಅವರಿಗೆನಿಸುತ್ತಿದೆ  ರಾಜಕೀಯ ಸಭೆಯೊಂದನ್ನು ಸೇರಿಸಿ  ಈ ಪ್ರಕರಣಗಳನ್ನು ಪರಿಹರಿಸಬೇಕಾಗಿತ್ತು ಎಂದು. ನಾವು ಬಹಳ ದೊಡ್ಡದೊಂದು ರಹಸ್ಯ ಕಾರ್ಯಾಚರಣೆಯನ್ನು ನಡೆಸಿದೆವು. ಮನೋಹರಜೀಯವರು ಮಾಡಿದಂತೆ ಕೆಲಸವನ್ನು ನಾನು ಮಾಡಲಾಗುವುದಿಲ್ಲ. ಹತ್ತು ತಿಂಗಳಿನಿಂದ ಕೆಲಸದಲ್ಲಿ ತೊಡಗಿದ್ದೇವೆ; ಒಂದು ನಂಬಿಕಸ್ಥರ ತಂಡ ಕಟ್ಟಿಕೊಂಡೆವು. ಏಕೆಂದರೆ ಇಷ್ಟೊಂದು ಹೊಸ ನೋಟುಗಳನ್ನು ಮುದ್ರಿಸುವುದು, ತಲುಪಿಸುವುದು, ಇವು ತುಂಬ ಕಠಿಣ ವಾದುವು, ವಸ್ತುಗಳನ್ನು ಅಡಗಿಸುವುದು, ರಹಸ್ಯವಾಗಿಡುವುದು  ಇವೆಲ್ಲ ಅಗತ್ಯಗಳು ,   ಇಲ್ಲವಾದರೆ ಸ್ವಾಮಿ ಇವರುಗಳಿಗೆ ಸುಳಿವು ಸಿಕ್ಕಿ ಬಿಟ್ಟರೆ ಎಲ್ಲವನ್ನೂ ತಮ್ಮದಾಗಿಸಿಕೊಂಡು ಬಿಡುತ್ತಾರೆ. 
 
ಮತ್ತು 8ನೆಯ ದಿನಾಂಕ ರಾತ್ರಿ 8 ಗಂಟೆಗೆ ದೇಶದ ತಾರೆಗಳನ್ನು ಮಿನುಗಿಸಲು ಒಂದು ಹೊಸ ಉಪಕ್ರಮವನ್ನು ನಾವು ಕೈಗೊಂಡೆವು, ಸ್ನೇಹಿತರೇ. ನಾನು ಆ ರಾತ್ರಿ ಕೂಡ ಹೇಳಿದ್ದೆ ಈ ನಿರ್ಣಯದಿಂದ ಸ್ವಲ್ಪ ಕಷ್ಟವಾಗುತ್ತದೆ, ಅನನುಕೂಲವಾಗುತ್ತದೆ, ತೊಂದರೆಗಳಾಗುತ್ತವೆ ಎಂದು; ನಾನು ಮೊದಲನೆಯ ದಿನವೇ ಹೇಳಿದ್ದೆ. ಆದರೆ, ಸೋದರ-ಸೋದರಿಯರೇ ನಾನು ಇವತ್ತು ದೇಶದ ಕೋಟಿ ಕೋಟಿ ಜನಗಳ ಮುಂದೆ ತಲೆ ತಗ್ಗಿಸುತ್ತಿದ್ದೇನೆ ಏಕೆಂದರೆ ಸಿನೆಮಾ ಥಿಯೇಟರುಗಳ ಮಂದೆ ಸಾಲುಕಟ್ಟುತ್ತಾರಲ್ಲ ಅಲ್ಲಿ ಜಗಳಗಳಾಗುತ್ತವೆ; ಆದರೆ ಈ ನಾಲ್ಕು ದಿನಗಳಿಂದ ನಾನು ನೋಡುತ್ತಿದ್ದೇನೆ: ನಾಲ್ಕೂ ಕಡೆಗಳಲ್ಲಿ ದುಡ್ಡಿಗಾಗಿ ಸಾಲಿನಲ್ಲಿ ಜನ ನಿಂತಿದ್ದಾರೆ, ಕಾಲಿಡಲು ಜಾಗವಿಲ್ಲ, ಆದರೆ ಪ್ರತಿಯೊಬ್ಬರ ಮುಖದಿಂದ ಹೊರಡುವ ಮಾತುಗಳು ಒಂದೇ; ಸರಿ ಕಷ್ಟವಾಗುತ್ತಿದೆ, ಕಾಲು ನೋಯುತ್ತಿವೆ, ಆದರೆ ದೇಶಕ್ಕೆ ಒಳ್ಳೆಯದಾಗಲಿ. 
 
ಈ ದಿನ ನಾನು ಬ್ಯಾಂಕಿನ ಎಲ್ಲ ನೌಕರರನ್ನು ಸಾರ್ವಜನಿಕವಾಗಿ ಅಭಿನಂದಿಸುತ್ತೇನೆ. ಒಂದು ವರ್ಷದಲ್ಲಿ, ನನ್ನ ಮಾತನ್ನು ಬರೆದುಕೊಳ್ಳಿ ಬ್ಯಾಂಕಿನವರು ಸಾಮಾನ್ಯವಾಗಿ ಒಂದು ವರ್ಷದಲ್ಲಿ ಎಷ್ಟು ಕೆಲಸ ಮಾಡಬೇಕಾಗಿ ಬರುತ್ತದೋ ಅದಕ್ಕಿಂತ ಹೆಚ್ಚು ಕೆಲಸವನ್ನು ಕಳೆದ ಒಂದು ವಾರದಲ್ಲಿ ಮಾಡಿದ್ದಾರೆ. ನನಗೆ ಇದು ಸಂತೋಷ ತಂದಿದೆ. ನಾನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದೆ: ಬ್ಯಾಂಕಿನ ನಿವೃತ್ತ ನೌಕರರು, ಒಬ್ಬರದು 70 ವರ್ಷ,ಇನ್ನೊಬ್ಬರದು 75 ಇಂತಹವರೆಲ್ಲ ಬ್ಯಾಂಕಿಗೆ ಹೋದರು. ಸ್ವಾಮಿ, ನಾವು ನಿವೃತ್ತರು, ಆದರೆ ಈ ಪವಿತ್ರ ಕಾರ್ಯದಲ್ಲಿ ನಾವು ಕೆಲಸ ಮಾಡಬಹುದಾದರೆ, ನೀವು ನಮ್ಮನ್ನು ಕುಳ್ಳಿರಿಸಿ ಕೆಲಸದಲ್ಲಿ  ತೊಡಗಿಸಿ; ನಮ್ಮ ಸೇವೆಯಿಂದ ಕೆಲಸ ಸುಗಮವಾಗುವುದಾದರೆ ನಾವು ನಮ್ಮ ಸೇವೆಯನ್ನು ನೀಡಲು ಸಿದ್ಧ ಎಂದು ಹೇಳುತ್ತಿದ್ದರು. ತಾವು ಕೆಲಸ ಮಾಡಿದ ಹಿಂದಿನ ಶಾಖೆಗಳಿಗೆ ಹೋಗಿ ಸಹಾಯ ಮಾಡುವುದಾಗಿ ತಮ್ಮನ್ನು ಮುಂದಿಟ್ಟ ಈ ನಿವೃತ್ತ ಸಿಬ್ಬಂದಿಗಳನ್ನೂ ಕೂಡ ಇಂದು ನಾನು ಅಭಿನಂದಿಸ ಬಯಸುತ್ತೇನೆ. 
 
ಕೆಲ ನವಯುವಕರು ಸಾಲಿನಿಂದ ಹೊರಗಿದ್ದೂ ಬಿಸಿಲಿನಲ್ಲಿ ನಿಂತವರಿಗೆ ತಮ್ಮ ಖರ್ಚಿನಲ್ಲಿ ಕುಡಿಯುವ ನೀರು ಒದಗಿಸಿದ್ದಾರೆ; ಕೆಲವರು ಹಿರಿಯ ನಾಗರೀಕರಿಗಾಗಿ ಕುಳಿತು ಕೊಳ್ಳಲು ಓಡೋಡಿ ಕುರ್ಚಿಗಳನ್ನು ತಂದರು; ಅವರನ್ನೂ ಅಭಿನಂದಿಸುತ್ತೇನೆ. ನಾಲ್ಕೂ ದಿಕ್ಕುಗಳಲ್ಲಿ ಯುವ ತಲೆಮಾರು ಈ ಕಾರ್ಯವನ್ನು ಯಶಸ್ವಿಗೊಳಿಸುವುದಕ್ಕಾಗಿ ಇನ್ನಿಲ್ಲದಂತೆ ತೊಡಗಿಸಿಕೊಂಡಿದ್ದಾರೆ. ಸಫಲತೆಯ ಕಾರಣ 8ನೆಯ ತಾರೀಖಿನ ರಾತ್ರಿ 8 ಗಂಟೆಗೆ ಮೋದಿ ತೆಗೆದುಕೊಂಡ ನಿರ್ಣಯವಲ್ಲ. ಈ ಕಾರ್ಯದ ಸಫಲತೆಯ ಕಾರಣ  ನೂರ ಇಪ್ಪತ್ತೈದು ಕೋಟಿ ದೇಶವಾಸಿಗಳು, ಅವರಲ್ಲಿ ಕೆಲವರನ್ನು ಬಿಟ್ಟುಬಿಡಿ, ಉಳಿದವರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಯೋಜನೆ ಸಫಲವಾಗುವುದು ಸುನಿಶ್ಚಿತವಾದುದು .
 
ಸೋದರ-ಸೋದರಿಯರೇ.  , ನಾನು ಇನ್ನೊಂದು ಮಾತನ್ನು ಹೇಳ ಬಯಸುತ್ತೇನೆ. ನನಗೆ ಹೇಳಿ: ನಮ್ಮ ದೇಶದಲ್ಲಿ ಮತದಾರರ ಪಟ್ಟಿ, ಎಲ್ಲ ಪಕ್ಷಗಳೂ ಮತದಾರರ ಪಟ್ಟಿಯನ್ನು ತಯಾರಿಸಲು ಸಹಕರಿಸುತ್ತವೆ. ಸರಕಾರದ ಎಲ್ಲ ಜನರು ಕೆಲಸ ಮಾಡುತ್ತಾರೋ ಇಲ್ಲವೋ. ಎಲ್ಲ ಅಧ್ಯಾಪಕರು ಕೆಲಸ ಮಾಡುತ್ತಾರೋ ಇಲ್ಲವೋ. ಇದೆಲ್ಲದರ ಹೊರತಾಗಿಯೂ ಮತದಾನದ ದಿನ ದೂರುಗಳು ಬರುತ್ತವೆ, ಬರುತ್ತವೋ ಇಲ್ಲವೋ? ನನ್ನ ಹೆಸರು ಪಟ್ಟಿಯಲ್ಲಿಲ್ಲ, ನಮ್ಮ ಸೊಸೈಟಿಯ ಹೆಸರೇ ಬಿಟ್ಟು ಹೋಗಿದೆ, ನನಗೆ ವೋಟು ಕೊಡಲು ಬಿಡುತ್ತಿಲ್ಲ. ಇಂತಹ ಸಂಕಷ್ಟಗಳು ಬರುತ್ತವೋ ಇಲ್ಲವೋ. ಇಷ್ಟೆಲ್ಲ ಮುಕ್ತವಾಗಿ ಕೆಲಸ ಮಾಡಿಯೂ ಅನಂತರ ತೊಂದರೆಗಳು ಬರುತ್ತವೋ ಇಲ್ಲವೋ .
 
ಸೋದರ-ಸೋದರಿಯರೇ ನಮ್ಮ ದೇಶದಲ್ಲಿ ಚುನಾವಣೆಗಳು ನಡೆಯುತ್ತವೆ, ಚುನಾವಣೆ ಎಂದರೆ ಏನು ಮಾಡಬೇಕಾಗಿದೆ, ಹೋಗುವುದು-ಗುಂಡಿ-ಒತ್ತುವುದು-ವಾಪಸಾಗುವುದು, ಇಷ್ಟೇ ಮಾಡಬೇಕಾಗಿರುವುದು ತಾನೆ.  ಆದರೂ ಈ ದೇಶದಲ್ಲಿ ಮೂರು ತಿಂಗಳು, ಅಂದರೆ 90 ದಿನಗಳು ಇದಕ್ಕಾಗಿ ಕೆಲಸ ನಡೆಯುತ್ತದೆ. ಮತ್ತು ಅದರಲ್ಲಿ ಎಲ್ಲ ಪೋಲೀಸರು, ಸಿ ಆರ್ ಪಿ ಎಫ್, ಎಸ್ಸಾರ್ಪಿ, ಬಿಎಸ್ಸೆಫ್, ಸರಕಾರದ ಪ್ರತಿಯೊಂದು ಇಲಾಖೆ, ರಾಜಕೀಯ ಪಕ್ಷಗಳ ಲಕ್ಷಾಂತರ ಕಾರ್ಯಕರ್ತರು, ಈ ಎಲ್ಲರೂ 90 ದಿನಗಳ  ತನಕ ತೊಡಗಿರುತ್ತಾರೆ. 
 
ಸೋದರ-ಸೋದರಿಯರೇ ನಾನು ಕೇವಲ ಐವತ್ತು ದಿನಗಳ ಅವಕಾಶ ಕೇಳಿದ್ದೇನೆ; 30 ದಿಸೆಂಬರದವರೆಗೆ ನನಗೆ ಅವಕಾಶ ಕೊಡಿ ಸೋದರ-ಸೋದರಿಯರೇ. 30 ದಿಸೆಂಬರದನಂತರ ನನ್ನ ಕೆಲಸದಲ್ಲಿ ಕೊರತೆ ಏನಾದರೂ ಉಳಿದರೆ, ನನ್ನಲ್ಲಿ ಏನಾದರೂ ತಪ್ಪು ಕಂಡು ಬಂದರೆ , ನನ್ನ ಉದ್ದೇಶದಲ್ಲಿ ಏನಾದರೂ ಖೊಟ್ಟಿತನ ಕಂಡು ಬಂದರೆ ನೀವು ಯಾವ ವೃತ್ತದಲ್ಲಿ(चौराहे में) ನಿಲ್ಲಿಸುವಿರಿ ಅಲ್ಲಿ ನಿಂತುಕೊಂಡು ದೇಶ ಯಾವ ಶಿಕ್ಷೆ ವಿಧಿಸುತ್ತದೋ ಅದನ್ನು ಅನುಭವಿಸಲು ಸಿದ್ಧನಿದ್ದೇನೆ. 
  
ಆದರೆ ನನ್ನ ದೇಶವಾಸಿಗಳೇ , ಪ್ರಪಂಚ ಮುಂದೆ ಓಡುತ್ತಿದೆ, ಭಾರತದ ಈ ರೋಗ ವಿನಾಶವನ್ನುಂಟು ಮಾಡುತ್ತಿದೆ. ದೇಶದ ಜನಸಂಖ್ಯೆಯ 65ಶೇಕಡ ಅಂದರೆ ಸುಮಾರು 800 ಮಿಲಿಯ ಜನರು 35ವರ್ಷಕ್ಕಿಂತ ಕಡಿಮೆ ವಯಸ್ಸಿನ ನವತರುಣರಿದ್ದು ಅವರ ಭವಿಷ್ಯ ಅಪಾಯದಲ್ಲಿದೆ. ಆದ್ದರಿಂದ ಸೋದರ-ಸೋದರಿಯರೇ ಯಾರಿಗೆ ರಾಜಕೀಯ ಮಾಡುವುದಿದೆಯೋ ಅವರು ಮಾಡಲಿ, ಯಾರ   ಕಪ್ಪು ಸಂಪತ್ತು   ಲೂಟಿಯಾಗಿ ಹೋಗಿದೆಯೋ ಅವರು ಅಳುತ್ತಿರಲಿ, ಕೆಟ್ಟ ಆರೋಪಗಳನ್ನು ಮಾಡುತ್ತಿರಲಿ; ಆದರೆ ನನ್ನ ಪ್ರಾಮಾಣೀಕ ದೇಶವಾಸಿಗಳೇ ನನ್ನ ಜೊತೆ ಬನ್ನಿ ಕೇವಲ ಐವತ್ತು ದಿನಗಳು 30 ದಿಸೆಂಬರದವರೆಗೆ. 30 ದಿಸೆಂಬರದನಂತರ   ನೀವು ಹಿಂದೂಸ್ತಾನ ಹೇಗಿರಬೇಕೆಂದು ಬಯಸುತ್ತೀರೋ ಅದನ್ನು ಕೊಡುವ ಆಶ್ವಾಸನೆ ನೀಡುತ್ತೇನೆ. 
 
ಯಾರಿಗೆ ತೊಂದರೆಯಾದರೂ ನನಗೂ ಕಷ್ಟವಾಗುತ್ತದೆ. ಇದು ನನ್ನ ಅಹಂಕಾರದಿಂದಾಗಿ ಅಲ್ಲ. ಸೋದರ-ಸೋದರಿಯರೇ, ನಾನು ಕೆಡುಕುಗಳನ್ನು ಹತ್ತಿರದಿಂದ ನೋಡಿದ್ದೇನೆ. ದೇಶವಾಸಿಗಳ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತೇನೆ, ಅವರಿಗಾಗುವ ತೊಂದರೆಗಳು ನನಗೆ ಗೊತ್ತಿವೆ. ಆದರೆ ಈ ಕಷ್ಟ ಕೇವಲ 50 ದಿನಗಳವರೆಗೆ ಮಾತ್ರ. 50ದಿನಗಳ ನಂತರ ನಾವು ಶುದ್ಧೀಕರಣ ಕಾರ್ಯದಲ್ಲಿ ಸಫಲರಾಗಿರುತ್ತೇವೆ. ಒಂದುಸಲ ವಾತಾವರಣ ಶುದ್ಧವಾದರೆ ಸಣ್ಣ ಪುಟ್ಟ ಸೊಳ್ಳೆ ಕೂಡ ಅತ್ತ ಸುಳಿಯುವುದಿಲ್ಲ. ಇದು ನನ್ನ ವಿಶ್ವಾಸ. ನಾನು ಈ ಹೋರಾಟವನ್ನು ಪ್ರಾಮಾಣಿಕ ಜನರ ಭರವಸೆಯಿಂದ ಶುರು ಮಾಡಿರುವೆ.  ಮತ್ತು ಪ್ರಾಮಾಣಿಕ ಜನರ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ, ಸಂಪೂರ್ಣ ನಂಬಿಕೆ ಇದೆ, ಪೂರಾ ಭರವಸೆ ಇದೆ. ಎಂತೆಂಥ ಜನರ ಹೂಡಿಕೆಗಳು ಮುಳುಗುತ್ತಿವೆ ಎಂಬುದನ್ನು ನೀವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಗಂಗಾ ಮಾತೆಗೂ ಆಶ್ಚರ್ಯವಾಗುತ್ತಿದೆ : ಯಾರು ನಾಲ್ಕಾಣೆಯನ್ನೂ ಹಾಕುತ್ತಿರಲಿಲ್ಲವೋ ಅವರಿಂದು ನೋಟಿನ ಕಾರಣದಿಂದ ಬರುತ್ತಿದ್ದಾರೆ; ಆ ಬಡವಿ ವಿಧವಾ ತಾಯಿ ಮೋದಿಗೆ ಆಶೀರ್ವಾದ ನೀಡುತ್ತಾಳೆ ಮತ್ತು ಹೇಳುತ್ತಾಳೆ: ಬೇಟಾ ಮಗ ಮತ್ತು  ನನ್ನ  ಸೊಸೆ ಬಂದು ನನ್ನನ್ನು ನೋಡುತ್ತಿರಲಿಲ್ಲ ಆದರೆ ನಿನ್ನೆ ಬಂದಿದ್ದರು. ಅವರಿಗೆ ನನ್ನ ಬ್ಯಾಂಕ್ ಖಾತೆಗೆ ಎರಡೂವರೆ ಲಕ್ಷ ಜಮಾ ಮಾಡುವುದಿತ್ತು. ಇಂತಹ ಬಡವಿಧವಾ ಮಾತೆಯರ ಆಶೀರ್ವಾದ ದೇಶದ ಸಫಲತೆಯ ಯಜ್ಞವನ್ನು ಮುಂದುವರೆಸುತ್ತದೆ.  ನೀವು  ಎಂತೆಂಥ ಜನರನ್ನು ನೋಡಿದ್ದೀರಿ, 2ಜಿ ಸ್ಕ್ಯಾಮ್, ಇಂಧನ ಘೋಟಾಲೆ, ಕೋಟ್ಯಂತರ ರೂಪಾಯಿಗಳು, ಎಲ್ಲ ನಿಮಗೆ ಗೊತ್ತಲ್ಲ, ಅಂತಹವರು ಇಂದು ನಾಲ್ಕು ಸಾವಿರ ರುಪಾಯಿಗಳಿಗಾಗಿ ಸಾಲಿನಲ್ಲಿ ನಿಲ್ಲಬೇಕಾಗಿ ಬಂದಿದೆ ಸ್ವಾಮಿ. 
 
ಸ್ವಾಮಿ,  ನೂರ ಇಪ್ಪತ್ತೈದು ಕೋಟಿ ದೇಶವಾಸಿಗಳ ಪ್ರೀತಿಯಲ್ಲದಿದ್ದರೆ, ಅವರ ವಿಶ್ವಾಸ ವಿಲ್ಲದಿದ್ದರೆ, ಸರಕಾರಗಳು ಬರುತ್ತವೆ ಮತ್ತು ಹೋಗುತ್ತವೆ ಸೋದರ-ಸೋದರಿಯರೇ, ಈ ದೇಶ ಅಮರವಾದುದು, ಈ ದೇಶದ ಭವಿಷ್ಯ ಉಜ್ವಲವಾದುದು.  ಈ ಉಜ್ವಲ ಭವಿಷ್ಯಕ್ಕಾಗಿ ಕಷ್ಟ ಸಹಿಸಬೇಕಾಗಿದೆ. ಕೆಲವು ಸಲ ನಾನು ಆಶ್ಚರ್ಯ ಚಕಿತನಾಗುತ್ತೇನೆ. ನಿನ್ನೆ ಒಬ್ಬಪತ್ರಕರ್ತ  ಬಂಧುವಿನೊಡನೆ ಮಾತಾಯಿತು. ನಾನು ಹೇಳಿದೆ ನೀವು ದಿನ ರಾತ್ರಿಯೆಲ್ಲ ಪದೇಪದೇ ಹೇಳುತ್ತೀರಿ ಒಂದು ಸಲ ಯುದ್ಧವಾಗಿ ಬಿಡಲಿ ಎಂದು. ಮತ್ತೆ ಆಗ ಕಷ್ಟಗಳು ಬಂದೆರಗಿದರೆ ಏನು ಮಾಡುವುದು. ವಿದ್ಯುತ್ ನಿಂತು ಹೋಗಬಹದು, ವಸ್ತುಗಳು ಮಾರುಕಟ್ಟೆಗೆ ಬರುವುದು ನಿಲ್ಲಬಹುದು, ರೈಲುಗಳು ರದ್ದಾಗಬಹುದು, ರೈಲಿನಲ್ಲಿ ಸೈನಿಕರು ಪ್ರಯಾಣಿಸಬಹದು ನಿಮಗೆ ಆಗಲಿಕ್ಕಿಲ್ಲ ಏನು ಮಾಡುವಿರಿ. ಒಳ್ಳೆಯದನ್ನು ಹೇಳಿ, ಹಾಗೆಯೇ ಆಗುತ್ತದೆ. ಹೇಳುವುದು ಸುಲಭವಯ್ಯಾ ಉಪದೇಶ ಸುಲಭ ನಿರ್ಣಯ ಮಾಡಿದಾಗ ಅದರಂತೆ ನಡೆಯುವುದು ಸಾಮಾನ್ಯ ಮಾನವರಿಗೆಲ್ಲರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವುದು ಸುಲಭವೇನಲ್ಲ.
ನಾನು ದೇಶವಾಸಿಗಳಿಗೆ ಇನ್ನೊಂದು ಮಾತು ಹೇಳಬಯಸುತ್ತೇನೆ. 
 
ಈ ದಿನಗಳಲ್ಲಿ ಬಹಳ ಜನರಿಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ  ಮಾತನಾಡಲು ಧೈರ್ಯವಿಲ್ಲ ಏಕೆಂದರೆ ಯಾರು ಹೇಳುತ್ತಾರೋ ಅವರು ಸಿಕ್ಕಿ ಬೀಳುತ್ತಾರೆ. ಮಾರಾಯ ಇದರಲ್ಲೇನೋ ಕಸರು ಇದೆ , ಇದು ಪ್ರತಿಯೊಬ್ಬರು ನಗುನಗುತ್ತಾ ಹೇಳುವ ಮಾತು, ಇಲ್ಲ ಇಲ್ಲ ಮೋದಿಯವರು ಒಳ್ಳೆಯದನ್ನೇ ಮಾಡಿದರು ಆಮೇಲೆ ಒಬ್ಬ ಸ್ನೇಹಿತನಿಗೆ ಫೋನು ಮಾಡುತ್ತಾರೆ, ಗೆಳೆಯಾ ಏನಾದರೂ ದಾರಿ ಇದೆಯೇ ಮತ್ತೆ ಇವನು ಹೇಳುತ್ತಾನೆ ಮೋದಿಯವರು ಎಲ್ಲ ದಾರಿಗಳನ್ನು ಮುಚ್ಚಿಬಿಟ್ಟಿದ್ದಾರೆ.  ಆದ್ದರಿಂದ   ಅವರು ವದಂತಿಗಳನ್ನು ಹರಡಲು ಪ್ರಾರಂಭಿಸುತ್ತಾರೆ. ಒಂದು ದಿನ ಇಂತಹವರು ಉಪ್ಪಿನ ಬೆಲೆ ಏರಿತೆಂದು ವದಂತಿ ಹಬ್ಬಿಸಿದರು. ನೀವೇ ಹೇಳಿ 500 ಮತ್ತು 1000ದ ನೋಟುಗಳ ಅಮಾನ್ಯೀಕರಣದನಂತರ  ಯಾರಾದರೂ ಸಾವಿರದ ನೋಟು ಹಿಡಿದು ಉಪ್ಪು ಕೊಳ್ಳಲು ಹೋಗುವರೆ? ಆದರೂ ಹೀಗೆಲ್ಲ ಮಾಡುತ್ತಾರೆ ಏಕೆಂದರೆ ಅವರಿಗೆ ಗೊತ್ತು ಅವರ ಇಂತಹ ನೋಟುಗಳನ್ನು ತೆಗೆದುಕೊಳ್ಳುವವರಿಲ್ಲ. 70 ವರ್ಷಗಳಿಂದ ಜಮೆ ಮಾಡಿದ ಹಣ, ಬೀಗದ ಮೇಲೆ ಬೀಗ ಹಾಕಿಟ್ಟಿದ್ದರು, ದೇಣಿಗೆ ತೆಗೆದುಕೊಳ್ಳುವವರೂ ಯಾರೂ ಇಲ್ಲ, ಭಿಕ್ಷುಕನಿಗೆ ಕೊಟ್ಟರೂ ಹೇಳುತ್ತಾನೆ 1000ದ ನೋಟು ನಡೆಯುವುದಿಲ್ಲ ಎಂದು. 
 
ಸೋದರ-ಸೋದರಿಯರೇ, ಪ್ರಾಮಾಣಿಕರಿಗೆ ಯಾವುದೇ ತೊಂದರೆ ಇಲ್ಲ. ಕೆಲವರು ಹೇಳುತ್ತಿದ್ದಾರೆ, ನನಗೆ ನಿಜವೇನೆಂಬುದು ಗೊತ್ತಿಲ್ಲ, ಆದರೆ ಚರ್ಚೆ ನಡೆಯುತ್ತಿದೆ, ಕೆಲವರು ಹೇಳುತ್ತಾರೆ 500ರ   ನೋಟು  450ಕ್ಕೆ ಮಾರಾಟವಾಗುತ್ತಿದೆ ಎಂದು; ಬೇರೊಬ್ಬರು ಹೇಳತ್ತಾರೆ 500ರ ನೊಟು 300ಕ್ಕೆ ಮಾರಾಟವಾಗುತ್ತಿದೆ ಎಂದು. ನನ್ನ ದೇಶವಾಸಿಗಳಿಗೆ ಹೇಳ ಬಯಸುತ್ತೇನೆ ನಿಮ್ಮ 500ರ ನೋಟು ಎಂದರೆ ನಾನೂರ ತೊಂಬತ್ತೊಂಬತ್ತು ರೂಪಾಯಿ ಮತ್ತು ನೂರು ಪೈಸೆ   ” four hundred ninety nine and hundred paisa  ” ನಿಖರವಾಗಿ. ನೀವು ಈ ಹೆಚ್ಚುಕಡಮೆ ವ್ಯವಹಾರದಲ್ಲಿ ಸಿಕ್ಕಿಹಾಕಿಕೊಳ್ಳ ಬೇಡಿ. ಅಪ್ರಾಮಾಣಿಕ ವ್ಯಕ್ತಿಗಳು ತಮ್ಮ ಜನರಿಗೆ ಹೇಳುವರು 
 – ಹೋಗಯ್ಯಾ ಸಾಲಿನಲ್ಲಿ ನಿಂತುಕೋ ಎರಡೆರಡು ಸಾವಿರ ಜನರ ಕೈಯಲ್ಲಿಟ್ಟು ಬದಲಿಸಿಕೋ ಒಂದಷ್ಟು ನಿನಗೂ ಉಳಿಯುತ್ತದೆ.
 
ಸೋದರ-ಸೋದರಿಯರೇ ನಿಮ್ಮೆಲ್ಲರಲ್ಲಿ ನನ್ನ ಆಗ್ರಹವಿದು. ಬಹುಶಃ ನಿಮಗೆ ಗೊತ್ತೇ ಇಲ್ಲದಿರಬಹುದು ನಿಮ್ಮ ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅಣ್ಣ, ತಮ್ಮ ಇವರಲ್ಲಿ ಯಾರೋ ಏನೋ ಮಾಡಿರಬಹುದು; ಸ್ವಗಸ್ಥ ರಾಗಿರಬಹುದಾದ ಪಿತ ಏನೋ ಮಾಡಿ ಹೋಗಿರಬಹುದು. ನಿಮ್ಮದೇನೂ ತಪ್ಪಿಲ್ಲದಿರಬಹುದು,  ಆದರೂ ನಿಮ್ಮ ಬಳಿ ದುಡ್ಡಿರಬಹುದು . ಸರಿ ನೀವು ಬ್ಯಾಂಕಿಗೆ ಹೋಗಿ ಖಾತೆಯಲ್ಲಿ ಜಮಾಮಾಡಿ; ಅದಕ್ಕೇನು ದಂಡವಾಗುತ್ತದೆಯೋ ಅದನ್ನು ಸಲ್ಲಿಸಿ, ನೀವು ಮುಖ್ಯ ವಾಹಿನಿಯಲ್ಲಿ ಬನ್ನಿ. ಇದರಲ್ಲಿ ಎಲ್ಲರ ಒಳ್ಳೆಯದಿದೆ. ಇನ್ನೊಂದು ಮಾತನ್ನೂ ಇಲ್ಲಿ ಹೇಳುತ್ತೇನೆ. ಮುಂದೆ ನೋಡಿಕೊಳ್ಳೋಣ,  ಕನಿಷ್ಠ ಪಕ್ಷ ಅವರಿಗೆ ನನ್ನ ಗುರುತಿರಬಹದು ಎಂದು ಕೆಲವರು ಭಾವಿಸಬಹುದು; ಸ್ವಾತಂತ್ರ ಸಂಗ್ರಾಮದಿಂದ ಹಿಡಿದು ಇಲ್ಲಿಯ ವರೆಗಿನ ಹಸಿರು ನೆನಪುಗಳ ಚೀಲವನ್ನು ತೆರೆದಿಡುತ್ತೇನೆ ಎಂದುಕೊಳ್ಳಬಹುದು. ಈ ರೀತಿಯ ಅಪ್ರಾಮಾಣಿಕತೆಯ ಯೋಚನೆಗಳನ್ನು ನೀವೇನಾದರೂ ಮಾಡುತ್ತಿದ್ದರೆ ನಿಮ್ಮ ಬಳಿ ಇರುವುದು ಒಂದು ಕಾಗದದ ಚೂರು ಎಂಬುದನ್ನು ತಿಳಿದು ಹೆಚ್ಚು ಪ್ರಯತ್ನ ಮಾಡದಿರಿ. ಇಲ್ಲದಿದ್ದರೆ ಸರಕಾರದಲ್ಲಿ ನಾನು ಇದಕ್ಕಾಗಿ ಲಕ್ಷ ಹೊಸ ಹುಡುಗರನ್ನು ನೇಮಿಸಿಕೊಳ್ಳಬೇಕಾದರೂ ಸರಿ, ನೇಮಿಸಿಕೊಳ್ಳುತ್ತೇನೆ ಮತ್ತು ಅವರನ್ನು ಈ ಕೆಲಸದಲ್ಲಿ ತೊಡಗಿಸುತ್ತೇನೆ. ಆದರೆ ದೇಶದಲ್ಲಿ ಈ ಎಲ್ಲ  ಕಪ್ಪು  ವ್ಯವಹಾರಗಳೇನು ನಡೆಯುತ್ತವೆ ಅವನ್ನು ಪೂರ್ಣವಾಗಿ ನಿಲ್ಲಿಸಿಯೇ ನಿಲ್ಲಿಸುತ್ತೇನೆ.  ನನ್ನನ್ನು ಜನರು ತಿಳಿದಿದ್ದಾರಾದರೆ ಇದನ್ನು ಒಪ್ಪುತ್ತಾರೆ. ಇಷ್ಟು ದಿನ ಇದು ಅವರಿಗೆ ತಿಳಿದಿರಲಿಲ್ಲ.  ಆದರೆ ಈಗೊಂದು ಡೋಸ್ ಹೆಚ್ಚಾಗಿ ಕೊಟ್ಟದ್ದರಿಂದ ಅರಿವಿಗೆ ಬಂತು. ಆದರೆ ಇದು ಪೂರ್ಣ  ವಿರಾಮವಲ್ಲ. ನಾನು ಮುಕ್ತವಾಗಿ ಹೇಳುತ್ತೇನೆ ಇದು ಪೂರ್ಣವಿರಾಮವಲ್ಲವೆಂದು. ದೇಶದಲ್ಲಿ ಭ್ರಷ್ಟಾಚಾರ, ಅಪ್ರಾಮಾಣಿಕತೆಗಳನ್ನು ನಿಲ್ಲಿಸುವುದಕ್ಕಾಗಿ ನನ್ನ ಮೆದುಳಿನಲ್ಲಿಇನ್ನೂ ಕೆಲವು ಪ್ರಾಜಕ್ಟುಗಳು ನಡೆಯುತ್ತಿವೆ.ಇವು ಇನ್ನು ಬರುವಂತಹವು. ಇದನ್ನೆಲ್ಲ ನಾನು ಪ್ರಾಮಾಣಿಕ ಜನರಿಗಾಗಿ ಮಾಡುತ್ತಿದ್ದೇನೆ ಸ್ವಾಮಿ. ದೇಶದ ಬಡಜನರಿಗಾಗಿ ಮಾಡುತ್ತಿದ್ದೇನೆ. ಪರಿಶ್ರಮದಿಮದ ಸಂಸಾರ ನಡೆಸುತ್ತಿದ್ದಾರೆ, ಅವರಿಗೆ ತಮ್ಮ ಮನೆ ಇರಬೇಕು, ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು, ಅವರ ಮನೆಯಲ್ಲಿರುವ ಹಿರಿಯರಿಗೆ ಒಳ್ಳೆಯ ಔಷಧಿ ಸಿಗಬೇಕು ಇವೆಲ್ಲಕ್ಕಾಗಿ ನಾನು ಮಾಡುತ್ತಿದ್ದೇನೆ.
 
ನನಗೆ ಗೋವಾ ನಿವಾಸಿಗಳ ಆಶೀರ್ವಾದ ಬೇಕು. ತಾವೆಲ್ಲ ನಿಂತು ಚಪ್ಪಾಳೆ ತಟ್ಟುವ ಮೂಲಕ ನನ್ನನ್ನು ಆಶೀರ್ವಾದಿಸಿ. ದೇಶ ನೋಡುತ್ತದೆ. ಪ್ರಾಮಾಣಿಕ ಜನರಿಗೆ ಸಂತೋಷವಾಗುತ್ತದೆ. ಈ ದೇಶದಲ್ಲಿ ಪ್ರಾಮಾಣಿಕ ಜನರಿಗೆ ಕಡಿಮೆ ಇಲ್ಲ  . ಬನ್ನಿ ಪ್ರಾಮಾಣಿಕ ಜನರಿಗಾಗಿ ಈ ಕೆಲಸವನ್ನು ಮಾಡಲು ನನ್ನ ಜೊತೆ ಸೇರಿ.  ಶಹಬ್ಬಾಸ್!! ನನ್ನ ಗೋವಾದ ಸೋದರ ಸೋದರಿಯರೇ,  ನಾನು ತಲೆತಗ್ಗಿಸಿ ನಿಮಗೆ ನಮಸ್ಕಾರ ಮಾಡುತ್ತೇನೆ. ಇದು ಕೇವಲ ಗೋವಾದ ದನಿಯಲ್ಲ; ಇದು ಪ್ರತಿ ಪ್ರಾಮಾಣಿಕ ಹಿಂದುಸ್ತಾನಿಯ ಧ್ವನಿ.
 
ಸೋದರ-ಸೋದರಿಯರೇ, ನಾನು ಯಾವ ಯಾವ ತರಹದ ಸಮರ್ಥರ ಜೊತೆ ಹೋರಾಟವನ್ನು ಹೇಗೆ ಎದುರಿಸಿದ್ದೇನೆ ಎಂಬುದು ನನಗೆ ಗೊತ್ತು. ಯಾವ ಯಾವ ತರಹದ ಜನರು ನನ್ನ ವಿರುದ್ಧವಾಗುತ್ತಾರೆ ಎಂಬುದೂ ನನಗೆ ಗೊತ್ತು. ‘70 ವರ್ಷಗಳ ಕಾಲ ನಾವು ಲೂಟಿ ಮಾಡಿದ್ದೇವೆ ನನ್ನನ್ನು ಜೀವ ಸಹಿತ ಬಿಡುವುದಿಲ್ಲ, ನನ್ನನ್ನು ಮುಗಿಸಿಯೇ ಬಿಡುವರು’ ಎಂದು ಅವರು ಯೋಚಿಸುವರು. ಅವರು ಮಾಡುವುದನ್ನು ಮಾಡಲಿ. ಸೋದರ-ಸೊದರಿಯರೇ 50 ದಿನಗಳ ಕಾಲ ನನಗೆ ಸಹಾಯ ಮಾಡಿ. ದೇಶ 50 ದಿನ ನಗೆ ಸಹಾಯ ಮಾಡಲಿ. ಗಟ್ಟಿಯಾದ ಚಪ್ಪಾಳೆಯಿಂದ ನನ್ನ ಈ ಮಾತನ್ನು ಸ್ವೀಕರಿಸಿರಿ. 
 
ತಮಗೆಲ್ಲ ತುಂಬು ಧನ್ಯವಾದಗಳು.
***