Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುವಾಹತಿಯಲ್ಲಿ ಉನ್ನತ ಮಟ್ಟದ ಸರಣಿ ಸಭೆಗಳಲ್ಲಿ ಈಶಾನ್ಯ ರಾಜ್ಯಗಳ ಪ್ರವಾಹ ಪರಿಸ್ಥಿತಿ ಕುರಿತಂತೆ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ, 2000 ಕೋಟಿ ರೂಪಾಯಿಗೂ ಹೆಚ್ಚು ನೆರವು ಘೋಷಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರವಾಹ ಪೀಡಿತ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ನಿಯಂತ್ರಣ, ಪರಿಹಾರ, ಪುನರ್ವಸತಿ, ಪುನರ್ನಿರ್ಮಾಣಕ್ಕಾಗಿ 2000 ಕೋಟಿ ರೂಪಾಯಿಗಳಿಗೂ ಹೆಚ್ಚು ಪರಿಹಾರದ ಪ್ಯಾಕೇಜ್ ಘೋಷಿಸಿದ್ದಾರೆ. ಈ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕ್ರಮಗಳ ಕುರಿತಂತೆ ಪ್ರಧಾನಮಂತ್ರಿಯವರು ಇಂದು ಸರಣಿ ಉನ್ನತ ಮಟ್ಟದ ಸಭೆಗಳಲ್ಲಿ ಪರಾಮರ್ಶೆ ನಡೆಸಿದ ಬಳಿಕ ಈ ಪ್ರಕಟಣೆ ಮಾಡಿದರು.

ಇಂದು ಪ್ರಧಾನಮಂತ್ರಿಯವರು ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ಪರಿಸ್ಥಿತಿಯ ಕುರಿತಂತೆ ಪ್ರತ್ಯೇಕವಾಗಿ ಮತ್ತು ಸವಿವರವಾದ ಪರಾಮರ್ಶೆ ನಡೆಸಿದರು. ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಗೆ ಖುದ್ದಾಗಿ ಹಾಜರಾಗದ ಮಿಜೋರಾಂ ಮುಖ್ಯಮಂತ್ರಿಯವರ ಮನವಿಯನ್ನು ಪ್ರಧಾನಿ ಸ್ವೀಕರಿಸಿದರು.

ಮೂಲಸೌಕರ್ಯ ವಲಯವೊಂದಕ್ಕೇ ಕೇಂದ್ರ ಸರ್ಕಾರದಿಂದ 1200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ನೀಡಲಾಗಿದೆ. ಈ ಹಣವನ್ನು ಹಾನಿಗೊಳಗಾಗಿರುವ ರಸ್ತೆಗಳು, ಹೆದ್ದಾರಿಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯ ದುರಸ್ತಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ.

400 ಕೋಟಿ ರೂಪಾಯಿಗಳನ್ನು ಬ್ರಹ್ಮಪುತ್ರ ನದಿಯ ಜಲ ಸಂಗ್ರಹ ಸಾಮರ್ಥ್ಯವನ್ನು ಸುಧಾರಣೆ ಮಾಡಲು ಒದಗಿಸಲಾಗುತ್ತಿದೆ, ಇದು ಪ್ರವಾಹ ನಿಯಂತ್ರಣಕ್ಕೆ ನೆರವಾಗುತ್ತದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಎಸ್.ಡಿ.ಆರ್.ಎಫ್.ನಲ್ಲಿ ಕೇಂದ್ರದ ಪಾಲು 600 ಕೋಟಿ ರೂಪಾಯಿಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ 345 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ಕೆ ನೆರವಾಗಲು ಉಳಿಕೆ ಹಣವನ್ನು ತತ್ ಕ್ಷಣವೇ ಬಿಡುಗಡೆ ಮಾಡಲಾಗುತ್ತದೆ.
ಈ ಪ್ರದೇಶದಲ್ಲಿ ಪುನರಾವರ್ತನೆಯಾಗುತ್ತಿರುವ ಪ್ರವಾಹಕ್ಕೆ ಕಾಲಮಿತಿಯೊಳಗೆ ದೀರ್ಘ ಕಾಲೀನ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ 100 ಕೋಟಿ ರೂಪಾಯಿಗಳನ್ನು ಒದಗಿಸಿದೆ.

ಭಾರತದ ಶೇಕಡ 8ರಷ್ಟು ಭೂಭಾಗ ಹೊಂದಿರುವ ಈಶಾನ್ಯ ವಲಯವು ದೇಶದ ಮೂರನೇ ಒಂದು ಭಾಗದಷ್ಟು ಜಲ ಸಂಪನ್ಮೂಲವನ್ನು ಹೊಂದಿದೆ. ಪ್ರದೇಶದ ವಿಶಆಲ ಜಲ ಸಂಪನ್ಮೂಲದ ಸೂಕ್ತ ನಿರ್ವಹಣೆಗಾಗಿ ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಿದೆ.
ಪ್ರವಾಹದಿಂದ ಮೃತಪಟ್ಟವರ ಕುಟುಂಬದ ಹತ್ತಿರದ ಬಂಧುಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳ ಪರಿಹಾರವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್.ಎಫ್) ಅಡಿಯಲ್ಲಿ ಮಂಜೂರು ಮಾಡಲಾಗಿದೆ.

****

AKT/HS