Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುವಾಹಟಿಯಲ್ಲಿ ನಡೆದ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ

ಗುವಾಹಟಿಯಲ್ಲಿ ನಡೆದ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಷಣ


ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜೀ, ಕ್ರಿಯಾಶೀಲ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಜೀ, ಉದ್ಯಮ ನಾಯಕರೇ, ಗಣ್ಯ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ!

ಪೂರ್ವ ಭಾರತ ಮತ್ತು ಈಶಾನ್ಯ ಭಾರತದ ಭೂಮಿ ಇಂದು ಒಂದು ಹೊಸ ಭವಿಷ್ಯದತ್ತ ಹೊರಟಿದೆ. ‘ಅಡ್ವಾಂಟೇಜ್ ಅಸ್ಸಾಂ’ ಎಂಬುದು ಅಸ್ಸಾಂನ ಸಾಮರ್ಥ್ಯ ಮತ್ತು ಪ್ರಗತಿಯನ್ನು ಇಡೀ ಜಗತ್ತಿಗೆ ಸಂಪರ್ಕಿಸುವ ಒಂದು ಭವ್ಯ ಉಪಕ್ರಮವಾಗಿದೆ. ಭಾರತದ ಸಮೃದ್ಧಿಯಲ್ಲಿ ಪೂರ್ವ ಭಾರತವು ಹಿಂದೆ ಮಹತ್ವದ ಪಾತ್ರವನ್ನು ವಹಿಸಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಇಂದು, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿರುವಾಗ, ಪೂರ್ವ ಭಾರತ ಮತ್ತು ನಮ್ಮ ಈಶಾನ್ಯ ಪ್ರದೇಶಗಳು ಮತ್ತೊಮ್ಮೆ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಸಜ್ಜಾಗಿವೆ. ‘ಅಡ್ವಾಂಟೇಜ್ ಅಸ್ಸಾಂ’ ಈ ಉತ್ಸಾಹದ ಪ್ರತಿಬಿಂಬವೆಂದು ನಾನು ಭಾವಿಸುತ್ತೇನೆ. ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅಸ್ಸಾಂ ಸರ್ಕಾರ ಮತ್ತು ಹಿಮಂತ ಜೀ ಅವರ ಸಂಪೂರ್ಣ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 2013 ರಲ್ಲಿ ಚುನಾವಣಾ ಪ್ರಚಾರಕ್ಕಾಗಿ ನಾನು ಅಸ್ಸಾಂಗೆ ಭೇಟಿ ನೀಡಿದ್ದಾಗ, ಒಂದು ಸಭೆಯಲ್ಲಿ ನಾನು ಸ್ವಾಭಾವಿಕವಾಗಿ ಒಂದು ಮಾತನ್ನು ಹೇಳಿದ್ದೆ – “ವರ್ಣಮಾಲೆಯನ್ನು ಕಲಿಯುವಾಗ ಜನರು ‘ಅ’ ಅಂದರೆ ಅಸ್ಸಾಂ ಎಂದು ಹೇಳುವ ದಿನ ದೂರವಿಲ್ಲ”.

ಸ್ನೇಹಿತರೇ,

ಇಂದು, ನಾವೆಲ್ಲರೂ ಜಾಗತಿಕ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಅರ್ಥಮಾಡಿಕೊಳ್ಳುತ್ತಿದ್ದೇವೆ. ಈ ಜಾಗತಿಕ ಅನಿಶ್ಚಿತತೆಯ ನಡುವೆಯೂ, ಪ್ರಪಂಚದಾದ್ಯಂತದ ತಜ್ಞರಿಗೆ ಒಂದು ಖಚಿತತೆಯಿದೆ – ಮತ್ತು ಆ ಖಚಿತತೆಯೆಂದರೆ ಭಾರತದ ಕ್ಷಿಪ್ರ ಬೆಳವಣಿಗೆ. ಭಾರತದ ಮೇಲಿನ ಈ ವಿಶ್ವಾಸಕ್ಕೆ ಬಲವಾದ ಕಾರಣವಿದೆ. ಇಂದಿನ ಭಾರತವು 21 ನೇ ಶತಮಾನದ ಮುಂದಿನ 25 ವರ್ಷಗಳ ದೀರ್ಘಾವಧಿಯ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟುಕೊಂಡು ಒಂದೊಂದೇ ಹೆಜ್ಜೆಯಿಡುತ್ತಿದೆ, ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂದು ಜಗತ್ತು ಭಾರತದ ಯುವ ಜನಸಂಖ್ಯೆಯ ಮೇಲೆ ನಂಬಿಕೆ ಇಟ್ಟಿದೆ, ಅವರು ಬಹಳ ವೇಗವಾಗಿ ಕೌಶಲ್ಯ ಮತ್ತು ನಾವೀನ್ಯತೆ ಪಡೆಯುತ್ತಿದ್ದಾರೆ. ಬಡತನದಿಂದ ಹೊರಬಂದು ಹೊಸ ಆಕಾಂಕ್ಷೆಗಳೊಂದಿಗೆ ಮುನ್ನಡೆಯುತ್ತಿರುವ ಭಾರತದ ನವ-ಮಧ್ಯಮ ವರ್ಗದ ಮೇಲೆ ಜಗತ್ತು ವಿಶ್ವಾಸವಿಟ್ಟಿದೆ. ರಾಜಕೀಯ ಸ್ಥಿರತೆ ಮತ್ತು ನೀತಿ ನಿರಂತರತೆಯನ್ನು ಬೆಂಬಲಿಸುವ 140 ಕೋಟಿ ಭಾರತೀಯರ ಮೇಲೆ ಜಗತ್ತಿಗೆ ಭರವಸೆಯಿದೆ. ನಿರಂತರ ಸುಧಾರಣೆಗಳನ್ನು ಜಾರಿಗೊಳಿಸುತ್ತಿರುವ ಭಾರತದ ಆಡಳಿತದ ಮೇಲೂ ಜಗತ್ತು ನಂಬಿಕೆ ಇಟ್ಟಿದೆ. ಇಂದು ಭಾರತವು ತನ್ನ ಸ್ಥಳೀಯ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತಿದೆ. ಜಗತ್ತಿನ ವಿವಿಧ ಭಾಗಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಪೂರ್ವ ಏಷ್ಯಾದೊಂದಿಗಿನ ನಮ್ಮ ಸಂಪರ್ಕವು ನಿರಂತರವಾಗಿ ಬೆಳೆಯುತ್ತಿದೆ. ಇದರ ಜೊತೆಗೆ, ಹೊಸದಾಗಿ ನಿರ್ಮಿಸಲಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನೇಕ ಹೊಸ  ಅವಕಾಶಗಳನ್ನು ತೆರೆಯುತ್ತಿದೆ.

ಸ್ನೇಹಿತರೇ,

ಭಾರತದ ಮೇಲೆ ಜಾಗತಿಕವಾಗಿ ಹೆಚ್ಚುತ್ತಿರುವ ನಂಬಿಕೆಯ ಮಧ್ಯೆ, ನಾವೆಲ್ಲರೂ ಇಂದು ಅಸ್ಸಾಂನಲ್ಲಿ, ಮಾತೆ ಕಾಮಾಕ್ಯಳ ಪವಿತ್ರ ಭೂಮಿಯಲ್ಲಿ ಒಟ್ಟುಗೂಡಿದ್ದೇವೆ. ಭಾರತದ ಬೆಳವಣಿಗೆಗೆ ಅಸ್ಸಾಂನ ಕೊಡುಗೆ ಸ್ಥಿರವಾಗಿ ಹೆಚ್ಚುತ್ತಿದೆ. ಭಾರತದ ಬೆಳವಣಿಗೆಗೆ ಅಸ್ಸಾಂನ ಕೊಡುಗೆ ಸ್ಥಿರವಾಗಿ ಹೆಚ್ಚುತ್ತಿದೆ. ಅಡ್ವಾಂಟೇಜ್ ಅಸ್ಸಾಂ ಶೃಂಗಸಭೆಯ ಮೊದಲ ಆವೃತ್ತಿಯು 2018 ರಲ್ಲಿ ನಡೆಯಿತು. ಆಗ, ಅಸ್ಸಾಂನ ಆರ್ಥಿಕತೆಯು 2.75 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ್ದಾಗಿತ್ತು. ಇಂದು, ಅಸ್ಸಾಂ 6 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕತೆಯಾಗಿದೆ. ಇದರರ್ಥ ಬಿಜೆಪಿ ಸರ್ಕಾರದ ಅಡಿಯಲ್ಲಿ ಕೇವಲ ಆರು ವರ್ಷಗಳಲ್ಲಿ, ಅಸ್ಸಾಂನ ಆರ್ಥಿಕತೆಯು ಮೌಲ್ಯದಲ್ಲಿ ದ್ವಿಗುಣಗೊಂಡಿದೆ. ಇದು ಡಬಲ್-ಎಂಜಿನ್ ಸರ್ಕಾರದ ಡಬಲ್ ಪರಿಣಾಮವಾಗಿದೆ. ನೀವೆಲ್ಲರೂ ಮಾಡಿದ ಹೂಡಿಕೆಗಳನ್ನು ಒಳಗೊಂಡಂತೆ ಅಸ್ಸಾಂನಲ್ಲಿನ ದೊಡ್ಡ ಪ್ರಮಾಣದ ಹೂಡಿಕೆಗಳು ಅಸ್ಸಾಂ ಅನ್ನು ಅಪರಿಮಿತ ಸಾಧ್ಯತೆಗಳ ರಾಜ್ಯವಾಗಿ ಪರಿವರ್ತಿಸಿವೆ. ಅಸ್ಸಾಂ ಸರ್ಕಾರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ವಿವಿಧ ಮೂಲಸೌಕರ್ಯ ಯೋಜನೆಗಳು ಮತ್ತು ಉತ್ತಮ ಹೂಡಿಕೆ ವಾತಾವರಣವನ್ನು ಸೃಷ್ಟಿಸುವತ್ತ ಗಮನಹರಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ, ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಸಂಪರ್ಕ ಸಂಬಂಧಿತ ಮೂಲಸೌಕರ್ಯಗಳ ಕುರಿತು ವ್ಯಾಪಕವಾಗಿ ಕೆಲಸ ಮಾಡಿದೆ. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. 2014 ಕ್ಕಿಂತ ಮೊದಲು, ಬ್ರಹ್ಮಪುತ್ರ ನದಿಗೆ ಕೇವಲ ಮೂರು ಸೇತುವೆಗಳು ಇದ್ದವು, ಅಂದರೆ 70 ವರ್ಷಗಳಲ್ಲಿ ಕೇವಲ ಮೂರು ಸೇತುವೆಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ, ಕಳೆದ 10 ವರ್ಷಗಳಲ್ಲಿ, ನಾವು ನಾಲ್ಕು ಹೊಸ ಸೇತುವೆಗಳನ್ನು ನಿರ್ಮಿಸಿದ್ದೇವೆ. ಈ ಸೇತುವೆಗಳಲ್ಲಿ ಒಂದಕ್ಕೆ ಭಾರತ ರತ್ನ ಭೂಪೇನ್ ಹಜಾರಿಕಾ ಜಿ ಅವರ ಹೆಸರನ್ನು ಇಡಲಾಗಿದೆ. 2009 ಮತ್ತು 2014 ರ ನಡುವೆ, ಅಸ್ಸಾಂ ರೈಲ್ವೆ ಬಜೆಟ್ ನಲ್ಲಿ ಸರಾಸರಿ 2,100 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ. ನಮ್ಮ ಸರ್ಕಾರವು ಅಸ್ಸಾಂನ ರೈಲ್ವೆ ಬಜೆಟ್ ಅನ್ನು ನಾಲ್ಕು ಪಟ್ಟು ಹೆಚ್ಚು ಹೆಚ್ಚಿಸಿದೆ, ಇದನ್ನು 10,000 ಕೋಟಿ ರೂಪಾಯಿಗಳಿಗೆ ತಲುಪಿಸಿದೆ. ಹೆಚ್ಚುವರಿಯಾಗಿ, ಅಸ್ಸಾಂನಲ್ಲಿ 60 ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ಇಂದು, ಈಶಾನ್ಯದ ಮೊದಲ ಸೆಮಿ-ಹೈ-ಸ್ಪೀಡ್ ರೈಲು ಗುವಾಹಟಿ ಮತ್ತು ನ್ಯೂ ಜಲ್ಪೈಗುರಿ ನಡುವೆ ಓಡಾಟವನ್ನು ಪ್ರಾರಂಭಿಸಿದೆ.

ಸ್ನೇಹಿತರೇ,

ಅಸ್ಸಾಂನ ವಾಯು ಸಂಪರ್ಕವು ವೇಗವಾಗಿ ವಿಸ್ತರಿಸುತ್ತಿದೆ. 2014 ರವರೆಗೆ, ಇಲ್ಲಿ ಕೇವಲ ಏಳು ಮಾರ್ಗಗಳಲ್ಲಿ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದವು. ಇಂದು, ಸುಮಾರು 30 ಮಾರ್ಗಗಳಲ್ಲಿ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಇದು ಸ್ಥಳೀಯ ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡಿದೆ ಮತ್ತು ಅಸ್ಸಾಂನ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಸ್ನೇಹಿತರೇ,

ಈ ಪರಿವರ್ತನೆ ಕೇವಲ ಮೂಲಸೌಕರ್ಯಕ್ಕೆ ಸೀಮಿತವಾಗಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅಭೂತಪೂರ್ವ ಸುಧಾರಣೆ ಕಂಡುಬಂದಿದೆ. ಕಳೆದ ದಶಕದಲ್ಲಿ, ಹಲವಾರು ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಮತ್ತು ದೀರ್ಘಕಾಲದಿಂದ ಬಾಕಿ ಉಳಿದಿದ್ದ ಗಡಿ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇಂದು, ಅಸ್ಸಾಂನ ಪ್ರತಿಯೊಂದು ಪ್ರದೇಶ, ಪ್ರತಿಯೊಬ್ಬ ನಾಗರಿಕ ಮತ್ತು ಪ್ರತಿಯೊಬ್ಬ ಯುವಕರು ಈ ರಾಜ್ಯದ ಅಭಿವೃದ್ಧಿಗಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ.

ಸ್ನೇಹಿತರೇ,

ಇಂದು, ಭಾರತದ ಆರ್ಥಿಕತೆಯ ಪ್ರತಿಯೊಂದು ವಲಯ ಮತ್ತು ಹಂತದಲ್ಲಿ ಮಹತ್ವದ ಸುಧಾರಣೆಗಳು ನಡೆಯುತ್ತಿವೆ. ನಾವು ವ್ಯಾಪಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ್ದೇವೆ. ಕೈಗಾರಿಕೆ ಮತ್ತು ನಾವೀನ್ಯತೆ ಸಂಸ್ಕೃತಿಯನ್ನು ಬೆಳೆಸಲು ಸಮಗ್ರ ಪರಿಸರ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಸ್ಟಾರ್ಟ್ಅಪ್ ಗಳಿಗೆ ನೀತಿಗಳಿರಲಿ, ಉತ್ಪಾದನೆಗೆ PLI ಯೋಜನೆಗಳಿರಲಿ ಅಥವಾ ಉತ್ಪಾದನಾ ಕಂಪನಿಗಳು ಮತ್ತು MSMEಗಳಿಗೆ ತೆರಿಗೆ ವಿನಾಯಿತಿಗಳಿರಲಿ, ಎಲ್ಲರಿಗೂ ಅತ್ಯುತ್ತಮ ನೀತಿಗಳನ್ನು ಜಾರಿಗೊಳಿಸಿದ್ದೇವೆ. ಸರ್ಕಾರವು ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. ಸಾಂಸ್ಥಿಕ ಸುಧಾರಣೆಗಳು, ಕೈಗಾರಿಕೆ, ಮೂಲಸೌಕರ್ಯ ಮತ್ತು ನಾವೀನ್ಯತೆಯ ಈ ಸಮ್ಮಿಲನವು ಭಾರತದ ಪ್ರಗತಿಯ ಅಡಿಪಾಯವಾಗಿದೆ. ಹಾಗಾಗಿಯೇ ಹೂಡಿಕೆದಾರರು ಭಾರತದ ಸಾಮರ್ಥ್ಯ ಮತ್ತು ಪರಿವರ್ತನಾತ್ಮಕ ಬೆಳವಣಿಗೆಯ ಸಾಧ್ಯತೆಗಳನ್ನು ಗುರುತಿಸುತ್ತಿದ್ದಾರೆ. ಈ ಪ್ರಗತಿಯಲ್ಲಿ ಅಸ್ಸಾಂ ಕೂಡಾ ದ್ವಿಗುಣ ವೇಗದಲ್ಲಿ ಮುನ್ನಡೆಯುತ್ತಿದೆ. 2030ರ ವೇಳೆಗೆ ಅಸ್ಸಾಂ ತನ್ನ ಆರ್ಥಿಕತೆಯನ್ನು 150 ಬಿಲಿಯನ್ ಡಾಲರ್ ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಸ್ಸಾಂ ಈ ಗುರಿಯನ್ನು ಸಾಧಿಸಬಲ್ಲದು ಎಂದು ನಾನು ದೃಢವಾಗಿ ನಂಬುತ್ತೇನೆ. ಅಸ್ಸಾಂನ ಸಮರ್ಥ ಮತ್ತು ಪ್ರತಿಭಾವಂತ ಜನರ ಸಾಮರ್ಥ್ಯ ಮತ್ತು ಇಲ್ಲಿನ ಬಿಜೆಪಿ ಸರ್ಕಾರದ ಬದ್ಧತೆಯಿಂದ ನನ್ನ ಈ ನಂಬಿಕೆ ಮೂಡಿದೆ. ಇಂದು, ಅಸ್ಸಾಂ ಆಗ್ನೇಯ ಏಷ್ಯಾ ಮತ್ತು ಭಾರತದ ನಡುವಿನ ಪ್ರಮುಖ ಹೆಬ್ಬಾಗಿಲಾಗಿ ಹೊರಹೊಮ್ಮುತ್ತಿದೆ. ಈ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು, ಸರ್ಕಾರವು “ಉನ್ನತಿ” ಎಂಬ ಈಶಾನ್ಯ ಪರಿವರ್ತನಾತ್ಮಕ ಕೈಗಾರಿಕೀಕರಣ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಅಸ್ಸಾಂ ಸೇರಿದಂತೆ ಈಶಾನ್ಯದಲ್ಲಿ ಕೈಗಾರಿಕೆ, ಹೂಡಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಇಲ್ಲಿರುವ ಎಲ್ಲಾ ಕೈಗಾರಿಕಾ ನಾಯಕರು ಈ ಯೋಜನೆಯ ಮತ್ತು ಅಸ್ಸಾಂನ ಅಪರಿಮಿತ ಅವಕಾಶಗಳ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ನಾನು ವಿನಂತಿಸುತ್ತೇನೆ. ಅಸ್ಸಾಂನ ನೈಸರ್ಗಿಕ ಸಂಪನ್ಮೂಲಗಳು ಮತ್ತು ಕಾರ್ಯತಂತ್ರದ ಸ್ಥಳವು ಇದನ್ನು ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡಿದೆ. ಅಸ್ಸಾಂನ ಬಲಕ್ಕೆ ಒಂದು ಉದಾಹರಣೆ ಅಸ್ಸಾಂ ಚಹಾ. ಅಸ್ಸಾಂ ಚಹಾವು ಜಾಗತಿಕ ಬ್ರ್ಯಾಂಡ್, ವಿಶ್ವದಾದ್ಯಂತದ ಚಹಾ ಪ್ರಿಯರ ಬದುಕಿನ ಅವಿಭಾಜ್ಯ ಅಂಗ. ಅಸ್ಸಾಂ ಚಹಾ ಈಗ 200 ವರ್ಷಗಳನ್ನು ಪೂರೈಸಿದೆ. ಈ ಪರಂಪರೆಯು ಇತರ ಕ್ಷೇತ್ರಗಳಲ್ಲಿಯೂ ಶ್ರೇಷ್ಠ ಸಾಧನೆ ಮಾಡಲು ಅಸ್ಸಾಂಗೆ ಪ್ರೇರಣೆ ನೀಡುತ್ತದೆ.

ಸ್ನೇಹಿತರೇ,

ಇಂದು, ಜಾಗತಿಕ ಆರ್ಥಿಕತೆಯಲ್ಲಿ ಮಹತ್ತರವಾದ ಪರಿವರ್ತನೆ ನಡೆಯುತ್ತಿದೆ. ಜಗತ್ತು ಸ್ಥಿತಿಸ್ಥಾಪಕತ್ವವುಳ್ಳ ಪೂರೈಕೆ ಸರಪಳಿಯನ್ನು ಬಯಸುತ್ತಿದೆ. ಈ ನಿರ್ಣಾಯಕ ಸಮಯದಲ್ಲಿ, ಭಾರತವು ತನ್ನ ಉತ್ಪಾದನಾ ವಲಯವನ್ನು ಮಿಷನ್ ಮಾದರಿಯಲ್ಲಿ ಬಲಪಡಿಸುವ ಉಪಕ್ರಮವನ್ನು ಪ್ರಾರಂಭಿಸಿದೆ. “ಮೇಕ್ ಇನ್ ಇಂಡಿಯಾ” ಅಡಿಯಲ್ಲಿ, ನಾವು ಕಡಿಮೆ ವೆಚ್ಚದ ಉತ್ಪಾದನೆಯನ್ನು ಉತ್ತೇಜಿಸುತ್ತಿದ್ದೇವೆ. ನಮ್ಮ ಕೈಗಾರಿಕೆಗಳು – ಔಷಧಗಳು, ಎಲೆಕ್ಟ್ರಾನಿಕ್ಸ್ ಮತ್ತು ವಾಹನಗಳು – ದೇಶೀಯ ಬೇಡಿಕೆಯನ್ನು ಪೂರೈಸುವುದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ಪಾದನಾ ಶ್ರೇಷ್ಠತೆಯ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿವೆ. ಈ ಉತ್ಪಾದನಾ ಕ್ರಾಂತಿಯಲ್ಲಿ ಅಸ್ಸಾಂ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ಸ್ನೇಹಿತರೇ,

ಜಾಗತಿಕ ವ್ಯಾಪಾರದಲ್ಲಿ ಅಸ್ಸಾಂ ಯಾವಾಗಲೂ ಗಮನಾರ್ಹ ಪಾಲನ್ನು ಹೊಂದಿದೆ. ಇಂದು, ಭಾರತದ ನೆಲದ ಮೇಲಿನ ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಅಸ್ಸಾಂ ಪಾಲು ಶೇಕಡಾ 50ಕ್ಕೂ ಹೆಚ್ಚು. ಕಳೆದ ಕೆಲವು ವರ್ಷಗಳಲ್ಲಿ, ಅಸ್ಸಾಂನ ತೈಲ ಸಂಸ್ಕರಣಾಗಾರಗಳ ಸಾಮರ್ಥ್ಯ ಗಮನಾರ್ಹವಾಗಿ ವೃದ್ಧಿಸಿದೆ. ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಗಳು ಮತ್ತು ಹಸಿರು ಶಕ್ತಿಯಂತಹ ನವೀನ ಕ್ಷೇತ್ರಗಳಲ್ಲಿಯೂ ಅಸ್ಸಾಂ ಕ್ಷಿಪ್ರವಾಗಿ ಮುಂಚೂಣಿಗೆ ಬರುತ್ತಿದೆ. ಸರ್ಕಾರದ ನೀತಿಗಳಿಂದಾಗಿ, ಅಸ್ಸಾಂ ಉನ್ನತ ತಂತ್ರಜ್ಞಾನದ ಕೈಗಾರಿಕೆಗಳಷ್ಟೇ ಅಲ್ಲದೆ, ಸ್ಟಾರ್ಟ್-ಅಪ್ಗಳ ಕೇಂದ್ರವಾಗಿಯೂ ರೂಪುಗೊಳ್ಳುತ್ತಿದೆ.

ಸ್ನೇಹಿತರೇ,

ಕೆಲವೇ ದಿನಗಳ ಹಿಂದೆ, ಕೇಂದ್ರ ಸರ್ಕಾರವು ಕೇಂದ್ರ ಬಜೆಟ್ನಲ್ಲಿ ನಮ್ರಪ್-IV ಸ್ಥಾವರವನ್ನು ಅನುಮೋದಿಸಿತು. ಮುಂಬರುವ ವರ್ಷಗಳಲ್ಲಿ, ಈ ಯೂರಿಯಾ ಉತ್ಪಾದನಾ ಘಟಕವು ಈಶಾನ್ಯ ಮಾತ್ರವಲ್ಲದೆ ಇಡೀ ದೇಶದ ರಸಗೊಬ್ಬರ ಬೇಡಿಕೆಯನ್ನು ಪೂರೈಸುತ್ತದೆ. ಅಸ್ಸಾಂ ಪೂರ್ವ ಭಾರತದ ಪ್ರಮುಖ ಉತ್ಪಾದನಾ ಕೇಂದ್ರವಾಗುವ ದಿನ ದೂರವಿಲ್ಲ. ಈ ಗುರಿಯನ್ನು ಸಾಧಿಸುವಲ್ಲಿ ಕೇಂದ್ರ ಸರ್ಕಾರವು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ.

ಸ್ನೇಹಿತರೇ,

21ನೇ ಶತಮಾನದಲ್ಲಿ, ಜಗತ್ತಿನ ಪ್ರಗತಿಯು ಡಿಜಿಟಲ್ ಕ್ರಾಂತಿ, ನಾವೀನ್ಯತೆ ಹಾಗೂ ತಾಂತ್ರಿಕ ಬೆಳವಣಿಗೆಗಳ ಮೇಲೆ ನಿಂತಿದೆ. ಇದಕ್ಕೆ ನಾವು ಎಷ್ಟು ಸನ್ನದ್ಧರಾಗುತ್ತೇವೆಯೋ, ಅಷ್ಟೇ ಜಾಗತಿಕ ಮಟ್ಟದಲ್ಲಿ ಬಲಿಷ್ಠರಾಗುತ್ತೇವೆ. ಅದಕ್ಕಾಗಿಯೇ ನಮ್ಮ ಸರ್ಕಾರ 21ನೇ ಶತಮಾನದ ನೀತಿ-ನಿರೂಪಣೆಗಳು ಮತ್ತು ಕಾರ್ಯತಂತ್ರಗಳೊಂದಿಗೆ ಭರದಿಂದ ಸಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತವು ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನೆಯಲ್ಲಿ ಹೇಗೆ ಭಾರಿ ಮುನ್ನಡೆ ಸಾಧಿಸಿದೆ ಎಂದು ನಮಗೆಲ್ಲ ತಿಳಿದಿದೆ. ಈಗ, ಇದೇ ಯಶಸ್ಸನ್ನು ಸೆಮಿಕಂಡಕ್ಟರ್ ಗಳು ಉತ್ಪಾದನೆಯಲ್ಲಿಯೂ ಸಾಧಿಸಲು ಭಾರತ ಗುರಿಯಿರಿಸಿಕೊಂಡಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ಅಸ್ಸಾಂ ಹೊರಹೊಮ್ಮುತ್ತಿರುವುದು ನನಗೆ ಹೆಮ್ಮೆಯ ಸಂಗತಿ. ಕೆಲವೇ ತಿಂಗಳ ಹಿಂದೆ, ಅಸ್ಸಾಂನ ಜಾಗಿರೋಡ್ ನಲ್ಲಿ ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಘಟಕವನ್ನು ಉದ್ಘಾಟಿಸಲಾಯಿತು. ಮುಂಬರುವ ವರ್ಷಗಳಲ್ಲಿ, ಈ ಘಟಕವು ಇಡೀ ಈಶಾನ್ಯ ಪ್ರದೇಶದ ತಾಂತ್ರಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಸ್ನೇಹಿತರೇ,

ಸೆಮಿಕಂಡಕ್ಟರ್ ವಲಯದಲ್ಲಿ ನಾವೀನ್ಯತೆಯನ್ನು ಹೆಚ್ಚಿಸಲು ನಾವು ಐಐಟಿಗಳೊಂದಿಗೆ ಸಹಭಾಗಿತ್ವ ಹೊಂದಿದ್ದೇವೆ. ದೇಶದಲ್ಲಿ ಸೆಮಿಕಂಡಕ್ಟರ್ ಸಂಶೋಧನಾ ಕೇಂದ್ರವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಈ ದಶಕದ ಅಂತ್ಯದ ವೇಳೆಗೆ, ಎಲೆಕ್ಟ್ರಾನಿಕ್ಸ್ ವಲಯವು 500 ಬಿಲಿಯನ್ ಡಾಲರ್ ಮೌಲ್ಯವನ್ನು ತಲುಪುವ ನಿರೀಕ್ಷೆಯಿದೆ. ನಮ್ಮ ವೇಗ ಮತ್ತು ಪ್ರಮಾಣವನ್ನು ಗಮನಿಸಿದರೆ, ಭಾರತವು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಜಾಗತಿಕ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವುದು ಖಚಿತ. ಇದು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಅಸ್ಸಾಂನ ಆರ್ಥಿಕತೆಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ, ಭಾರತವು ಪರಿಸರದ ಜವಾಬ್ದಾರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ನೀತಿ ನಿರ್ಧಾರಗಳನ್ನು ಕೈಗೊಂಡಿದೆ. ಇಂದು, ನಮ್ಮ ನವೀಕರಿಸಬಹುದಾದ ಇಂಧನ ಅಭಿಯಾನವನ್ನು ಜಗತ್ತು ಮಾದರಿಯಾಗಿ ಪರಿಗಣಿಸುತ್ತಿದೆ ಮತ್ತು ನಮ್ಮ ಹಾದಿಯನ್ನೇ ಅನುಸರಿಸುತ್ತಿದೆ. ಕಳೆದ 10 ವರ್ಷಗಳಲ್ಲಿ, ಸೌರಶಕ್ತಿ, ಪವನಶಕ್ತಿ ಮತ್ತು ಸುಸ್ಥಿರ ಇಂಧನ ಸಂಪನ್ಮೂಲಗಳಲ್ಲಿ ದೇಶವು ಭಾರಿ ಹೂಡಿಕೆ ಮಾಡಿದೆ. ಇದು ನಮ್ಮ ಪರಿಸರ ಬದ್ಧತೆಗಳನ್ನು ಪೂರೈಸುವುದರ ಜೊತೆಗೆ ನಮ್ಮ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ. 2030ರ ವೇಳೆಗೆ ದೇಶದ ಇಂಧನ ಮೂಲಸೌಕರ್ಯಕ್ಕೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರಿಸುವ ಗುರಿಯನ್ನು ನಾವು ಹೊಂದಿದ್ದೇವೆ. 2030ರ ವೇಳೆಗೆ ವಾರ್ಷಿಕ 50 ಲಕ್ಷ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದಿಸುವ ಗುರಿಯತ್ತಲೂ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಅನಿಲ ಮೂಲಸೌಕರ್ಯ ವಿಸ್ತರಣೆಯೊಂದಿಗೆ, ದೇಶದಲ್ಲಿ ಅನಿಲದ ಬೇಡಿಕೆಯೂ ಕ್ಷಿಪ್ರವಾಗಿ ಏರಿಕೆಯಾಗಿದೆ. ಅನಿಲ ಆಧಾರಿತ ಆರ್ಥಿಕತೆಯು ತ್ವರಿತಗತಿಯಲ್ಲಿ ವಿಸ್ತರಿಸುತ್ತಿದ್ದು, ಈ ಪ್ರಯಾಣದಲ್ಲಿ ಅಸ್ಸಾಂ ಭಾರಿ ಅನುಕೂಲ ಹೊಂದಿದೆ. ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆಗಳಿಂದ ಹಿಡಿದು ಹಸಿರು ಉಪಕ್ರಮಗಳವರೆಗೆ, ಕೈಗಾರಿಕೆಗಳಿಗೆ ಸರ್ಕಾರವು ಹಲವಾರು ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ನೀತಿಗಳೂ ನಿಮ್ಮ ಪರವಾಗಿಯೇ ರೂಪಿತವಾಗಿವೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಸ್ಸಾಂ ಮುಂಚೂಣಿಯಲ್ಲಿರಬೇಕೆಂದು ನಾನು ಬಯಸುತ್ತೇನೆ. ಆದರೆ, ನಿಮ್ಮಂತಹ ಕೈಗಾರಿಕಾ ನಾಯಕರು ಮುಂದೆ ಬಂದು ಅಸ್ಸಾಂನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡಾಗ ಮಾತ್ರ ಇದು ಸಾಧ್ಯ.

ಸ್ನೇಹಿತರೇ,

2047ರ ಹೊತ್ತಿಗೆ, ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ರೂಪಿಸುವಲ್ಲಿ ಪೂರ್ವ ಭಾರತವು ಪ್ರಮುಖ ಪಾತ್ರ ವಹಿಸಲಿದೆ. ಇಂದು, ಈಶಾನ್ಯ ಮತ್ತು ಪೂರ್ವ ಭಾರತವು ಮೂಲಸೌಕರ್ಯ, ಸಾಗಾಣಿಕೆ, ಕೃಷಿ, ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳಲ್ಲಿ ಶೀಘ್ರಗತಿಯಲ್ಲಿ ಮುನ್ನಡೆಯುತ್ತಿದೆ. ಭಾರತದ ಅಭಿವೃದ್ಧಿ ಪಥದಲ್ಲಿ ಈ ಪ್ರದೇಶವು ಮುಂಚೂಣಿಯಲ್ಲಿ ನಿಲ್ಲುವುದನ್ನು ಜಗತ್ತು ಕಾಣುವ ದಿನಗಳು ದೂರವಿಲ್ಲ. ಈ ಪ್ರಯಾಣದಲ್ಲಿ ನೀವೆಲ್ಲರೂ ಪಾಲುದಾರರಾಗಿ, ಅಸ್ಸಾಂನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವಿರೆಂದು ನಾನು ದೃಢವಾಗಿ ನಂಬುತ್ತೇನೆ. ಜಾಗತಿಕ ದಕ್ಷಿಣದಲ್ಲಿ ಭಾರತದ ಸಾಮರ್ಥ್ಯಗಳನ್ನು ಹೊಸ ಉತ್ತುಂಗಕ್ಕೇರಿಸುವ ರಾಜ್ಯವಾಗಿ ಅಸ್ಸಾಂ ರೂಪುಗೊಳ್ಳಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ. ಈ ಶೃಂಗಸಭೆಗಾಗಿ ನಾನು ಮತ್ತೊಮ್ಮೆ ನಿಮಗೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಹಾಗೆಯೇ, ‘ವಿಕಸಿತ ಭಾರತ’ದ ನಿರ್ಮಾಣದಲ್ಲಿ ನಿಮ್ಮ ಕೊಡುಗೆಗಳಿಗೆ ನಾನು ಸದಾ ನಿಮ್ಮೊಂದಿಗಿದ್ದೇನೆ, ಸಂಪೂರ್ಣ ಬೆಂಬಲ ನೀಡುತ್ತೇನೆ ಎಂಬ ಭರವಸೆಯನ್ನೂ ನೀಡುತ್ತೇನೆ.
ಧನ್ಯವಾದಗಳು.

 

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಭಾವಾನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.
 

*****