Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ರೋಜ್ಗಾರ್ ಮೇಳದಲ್ಲಿ ಪ್ರಧಾನಮಂತ್ರಿಯವರ ವಿಡಿಯೋ ಸಂದೇಶದ  ಅವತರಣಿಕೆ

ಗುಜರಾತ್ ರೋಜ್ಗಾರ್ ಮೇಳದಲ್ಲಿ ಪ್ರಧಾನಮಂತ್ರಿಯವರ ವಿಡಿಯೋ ಸಂದೇಶದ  ಅವತರಣಿಕೆ


ನಮಸ್ತೆ!

ಲಾಭ ಪಂಚಮಿಯಂದು ಗುಜರಾತಿನ ಯುವಜನರಿಗಾಗಿ ಇಂತಹ ಬೃಹತ್ ‘ರೋಜ್ಗಾರ್ ಮೇಳ’ ಅಥವಾ ಉದ್ಯೋಗ ಮೇಳವನ್ನು ಆಯೋಜಿಸಿರುವುದು ಕೇಕ್ ಮೇಲಿನ ಐಸಿಂಗ್ ನಂತೆ ಬಹಳ ಆಕರ್ಷಕ ಮತ್ತು ಅವಶ್ಯವೂ ಆಗಿದೆ. ಇಂದು ಗುಜರಾತ್ ನ ಸಾವಿರಾರು ಪುತ್ರರು ಮತ್ತು ಪುತ್ರಿಯರನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕೇಡರ್ ಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿ ಪತ್ರಗಳು ಮತ್ತು ಆಯ್ಕೆ ಪತ್ರಗಳನ್ನು ವಿತರಿಸಲಾಗುತ್ತಿದೆ. ನಾನು ಎಲ್ಲ ಯುವಜನತೆ, ಪುತ್ರರು ಮತ್ತು ಪುತ್ರಿಯರಿಗೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಧಂತೇರಾಸ್  ದಿನದಂದು, ನಾನು ದಿಲ್ಲಿಯಿಂದ ರಾಷ್ಟ್ರಮಟ್ಟದಲ್ಲಿ ‘ರೋಜ್ಗಾರ್ ಮೇಳ’ವನ್ನು ಪ್ರಾರಂಭಿಸಿದ್ದೆ. ಭಾರತ ಸರ್ಕಾರವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ನಾನು ಹೇಳಿದ್ದೆ. ಆದರೆ ಕೇಂದ್ರದ ಉಪಕ್ರಮದ ಬಗ್ಗೆ ತಿಳಿದುಕೊಂಡು, ವಿವಿಧ ರಾಜ್ಯ ಸರ್ಕಾರಗಳು ಸಹ ಇದನ್ನು ಅನುಸರಿಸಿವೆ. ಮತ್ತು ಕೇಂದ್ರ ಸರ್ಕಾರದ ಈ ಉಪಕ್ರಮವನ್ನು ದುಪ್ಪಟ್ಟು ಉತ್ಸಾಹದಿಂದ ಮುಂದುವರಿಸಿದ ಮೊದಲ ರಾಜ್ಯಗಳಲ್ಲಿ ಗುಜರಾತ್ ಒಂದಾಗಿದೆ ಎಂದು ನನಗೆ ಸಂತೋಷವಾಗಿದೆ! ಆದ್ದರಿಂದ, ನಾನು ಗುಜರಾತ್ ಸರ್ಕಾರವನ್ನು ಅಭಿನಂದಿಸುತ್ತೇನೆ!

ಇಂದು 5000 ಕ್ಕೂ ಹೆಚ್ಚು ಸ್ನೇಹಿತರು ಗುಜರಾತಿನ ಪಂಚಾಯತ್ ಸೇವಾ ಆಯ್ಕೆ ಮಂಡಳಿಯಿಂದ ನೇಮಕಾತಿ ಪತ್ರಗಳನ್ನು ಪಡೆಯುತ್ತಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಅಂತೆಯೇ, 8000 ಕ್ಕೂ ಹೆಚ್ಚು ಅಭ್ಯರ್ಥಿಗಳು ಇಂದು ಗುಜರಾತಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಮಂಡಳಿ ಮತ್ತು ಲೋಕರಕ್ಷಕ ನೇಮಕಾತಿ ಮಂಡಳಿಯಿಂದ ನೇಮಕಾತಿ ಪತ್ರಗಳನ್ನು ಪಡೆಯಲಿದ್ದಾರೆ. ಈ ಕ್ಷಿಪ್ರ ಹೆಜ್ಜೆಗಾಗಿ ಮತ್ತು ಅಂತಹ ದೊಡ್ಡ ಕಾರ್ಯಕ್ರಮಕ್ಕಾಗಿ ನಾನು ಭೂಪೇಂದ್ರಭಾಯಿ ಮತ್ತು ಅವರ ಸರ್ಕಾರವನ್ನು ಅಭಿನಂದಿಸುತ್ತೇನೆ. ಇದಲ್ಲದೆ, ಕೆಲವು ದಿನಗಳ ಹಿಂದೆ, ಸುಮಾರು 10 ಸಾವಿರ ಯುವಕರಿಗೆ ವಿವಿಧ ನೇಮಕಾತಿ ಮಂಡಳಿಗಳು ನೇಮಕಾತಿ ಪತ್ರಗಳನ್ನು ನೀಡಿವೆ ಎಂದು ನಾನು ಕೇಳಿದ್ದೇನೆ. ಇದರರ್ಥ ಅವರು 35,000 ಜನರನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ಸಾಧಿಸುವತ್ತ ದೊಡ್ಡ ಜಿಗಿತವನ್ನು ಮಾಡಿದ್ದಾರೆ.

ಸ್ನೇಹಿತರೇ,

ಅಭಿವೃದ್ಧಿಯ ಉತ್ತುಂಗವನ್ನು ಮುಟ್ಟಲು ಗುಜರಾತ್ ವೇಗವಾಗಿ ಮುನ್ನುಗ್ಗುತ್ತಿದೆ. ಭೂಪೇಂದ್ರಭಾಯಿ ಅವರ ನೇತೃತ್ವದಲ್ಲಿ ಗುಜರಾತ್ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದ್ದು, ಅದಕ್ಕೆ ಉತ್ತಮ ಸ್ಪಂದನೆ ದೊರೆತಿದೆ! ಗುಜರಾತ್ ನ ಕೈಗಾರಿಕಾ ನೀತಿಯು ದೇಶಾದ್ಯಂತ ಪ್ರಶಂಸೆಗಳನ್ನು ಪಡೆಯುತ್ತಿದೆ. ಅಲ್ಲದೆ, ಕೈಗಾರಿಕಾ ನೀತಿಯಿಂದಾಗಿ, ಕೈಗಾರಿಕೆಗಳು ಇಲ್ಲಿ ಬೆಳೆಯುತ್ತವೆ ಮತ್ತು ಹೂಡಿಕೆಗಳು ದೇಶ ಮತ್ತು ವಿದೇಶಗಳಿಂದ ಬರುತ್ತವೆ, ಮಾತ್ರವಲ್ಲ ಉದ್ಯೋಗಾವಕಾಶಗಳು ಕೂಡಾ  ತೀವ್ರವಾಗಿ ಹೆಚ್ಚಾಗುತ್ತವೆ. ಮತ್ತು ಉದ್ಯೋಗದ ವಿವಿಧ ಕ್ಷೇತ್ರಗಳು ತೆರೆದುಕೊಳ್ಳುತ್ತವೆ. ಇದಲ್ಲದೆ,  ಸ್ವಯಂ ಉದ್ಯೋಗಕ್ಕೆ ದೊಡ್ಡ ಅವಕಾಶವಿರುತ್ತದೆ. ಮತ್ತು ಗುಜರಾತ್ ಸರ್ಕಾರವು ‘ಓಜಸ್’ ಎಂಬ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ. ಗ್ರೇಡ್ 3 ಮತ್ತು ಗ್ರೇಡ್ 4 ಹುದ್ದೆಗಳಿಗೆ ‘ಸಂದರ್ಶನ ಪ್ರಕ್ರಿಯೆ’ಯನ್ನು ತೆಗೆದುಹಾಕಲಾಗಿದೆ ಮತ್ತು ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಸರಳ ಮತ್ತು ಪಾರದರ್ಶಕವಾಗಿದೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿ, ಗುಜರಾತ್ ಸರ್ಕಾರವು ಮೊಬೈಲ್ ಅಪ್ಲಿಕೇಶನ್ ಮತ್ತು ‘ಅನುಬಂಧಂ’ ಎಂಬ ವೆಬ್ ಪೋರ್ಟಲ್ ಅನ್ನು ಸಹ ಅಭಿವೃದ್ಧಿಪಡಿಸಿದೆ. ಇದು ಪಾರದರ್ಶಕತೆಯನ್ನು ಹೆಚ್ಚಿಸಿದೆ ಮತ್ತು ಉತ್ತಮ ಪ್ರವೇಶ ಲಭ್ಯತೆಯನ್ನು  ಒದಗಿಸಿದೆ, ಇದು ಗುಜರಾತ್ ನ ಯುವಜನರಿಗೆ ದೊಡ್ಡ ಅವಕಾಶವಾಗಿದೆ. ಹಾಗು ಇದು ಹೊಸ ಕೌಶಲ್ಯಗಳು ಮತ್ತು ಯುವ ಪ್ರತಿಭೆಗಳನ್ನು ಹುಡುಕುವ ನೇಮಕಾತಿದಾರರಿಗೆ ಮತ್ತು ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ –ಹೀಗೆ ಇಬ್ಬರಿಗೂ ಸಹಾಯ ಮಾಡುತ್ತಿದೆ. ಇದು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗ ಪೂರೈಕೆದಾರರಿಬ್ಬರಿಗೂ ಒಂದು ವೇದಿಕೆಯಾಗಿದೆ. ಗುಜರಾತ್ ಲೋಕ ಸೇವಾ ಆಯೋಗವು ಯೋಜಿತ ಮತ್ತು ತಕ್ಷಣದ ನೇಮಕಾತಿಗಾಗಿ ಅಭಿವೃದ್ಧಿಪಡಿಸಿರುವ ಮಾದರಿ ನೇಮಕಾತಿ ಪ್ರಕ್ರಿಯೆಯನ್ನು, ಎಲ್ಲ ರಾಜ್ಯಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡುಗಳೊಂದಿಗೆ ಪುನರಾವರ್ತಿಸುತ್ತವೆ ಮತ್ತು ಅಂತಿಮವಾಗಿ ದೇಶಕ್ಕಾಗಿ ಬಲವಾದ ವ್ಯವಸ್ಥೆಯನ್ನು ರೂಪಿಸುತ್ತವೆ ಎಂಬ ಬಗ್ಗೆ  ನನಗೆ ಶೇ.100ರಷ್ಟು ವಿಶ್ವಾಸವಿದೆ. ಆದ್ದರಿಂದ, ಇದಕ್ಕಾಗಿ ನಾನು ಗುಜರಾತ್ ಸರ್ಕಾರ ಮತ್ತು ಭೂಪೇಂದ್ರಭಾಯಿ ಅವರ ಇಡೀ ತಂಡವನ್ನು ಶ್ಲಾಘಿಸಲು ಬಯಸುತ್ತೇನೆ.

ಸ್ನೇಹಿತರೇ,

ಮುಂದಿನ ದಿನಗಳಲ್ಲಿ, ಇತರ ರಾಜ್ಯಗಳು ಕೂಡಾ ಕೇಂದ್ರ ಸರ್ಕಾರದ ಹೆಜ್ಜೆಗುರುತುಗಳನ್ನು ಅನುಸರಿಸಿ ಗುಜರಾತ್ ನಂತೆ ‘ರೋಜ್ಗಾರ್ ಮೇಳ’ವನ್ನು ಆಯೋಜಿಸಲಿವೆ. ಬಹುತೇಕ ಎಲ್ಲ ರಾಜ್ಯಗಳು ಮುಂದೆ ಬರುತ್ತಿವೆ ಎಂದು ನನಗೆ ತಿಳಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಸಹ ಈ ಉಪಕ್ರಮಕ್ಕೆ ಕೈಜೋಡಿಸುತ್ತಿವೆ. ಕೇಂದ್ರ ಸರ್ಕಾರವು ಒಂದು ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗ  ಗುರಿಯನ್ನು ನಿಗದಿಪಡಿಸಿದೆ. ಆದರೆ ರಾಜ್ಯಗಳು ಸೇರುತ್ತಿರುವ, ಕೈಜೋಡಿಸುತ್ತಿರುವ  ರೀತಿ, ಈ ಸಂಖ್ಯೆಯು ಗುರಿಯನ್ನು ಮೀರುತ್ತದೆ ಎಂದು ನಾನು ನಂಬುತ್ತೇನೆ. ಇದರರ್ಥ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು ಆಡಳಿತದಲ್ಲಿ ಯುವಜನರ ಪೀಳಿಗೆಯನ್ನು ಒಳಗೊಳ್ಳುತ್ತಿವೆ, ಇದರಿಂದಾಗಿ 100% ಅನುಷ್ಠಾನವನ್ನು ಸಾಧಿಸುವ ಕೇಂದ್ರದ ಗುರಿ ಈಡೇರುತ್ತಿದೆ. ಇದು ಕೊನೆಯ ಮೈಲಿವರೆಗಿನ ವಿತರಣೆಯಲ್ಲಿ ಸಹ ಸಹಾಯ ಮಾಡುತ್ತಿದೆ. ಅತ್ಯಂತ ಉತ್ಸಾಹದಿಂದ ಕಾರ್ಯಪಡೆಯನ್ನು ಸೇರುತ್ತಿರುವ ಈ ಯುವ ಪುತ್ರರು ಮತ್ತು ಹೆಣ್ಣುಮಕ್ಕಳು ಕೆಲಸವನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತಾರೆ. ಮತ್ತು ಆ ಹೊಸ ಉದ್ಯೋಗಾಕಾಂಕ್ಷಿಗಳು, ಈ ಯುವಕರು, ಈ ಯುವ ಪುತ್ರರು ಮತ್ತು ಹೆಣ್ಣುಮಕ್ಕಳು ತಮ್ಮ ಉತ್ಸಾಹ ಮತ್ತು ಸಮಾಜ, ರಾಜ್ಯ, ಹಳ್ಳಿ ಮತ್ತು ಪ್ರದೇಶಕ್ಕೆ ಸೇವೆ ಸಲ್ಲಿಸುವ ಬದ್ಧತೆಯಿಂದ, ಇಡೀ ಸರ್ಕಾರದ ವ್ಯವಸ್ಥೆಯ ಹೊಸ ಜೀವನ ಶಕ್ತಿಯಾಗಿ ಬದಲಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ, ಸ್ನೇಹಿತರೇ, ಇಂದು ಭಾರತವು ‘ಅಮೃತಕಾಲ’ವನ್ನು ಪ್ರವೇಶಿಸಿದೆ. ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದ್ದೇವೆ. ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047 ರ ವೇಳೆಗೆ, ನಾವು ನಮ್ಮ ದೇಶವನ್ನು 25 ವರ್ಷಗಳಲ್ಲಿ ಸಾಕಷ್ಟು ಮುಂದಕ್ಕೆ ಕೊಂಡೊಯ್ಯಬೇಕು ಎಂದು ನಾವು ಪ್ರತಿಜ್ಞೆ ಮಾಡಬೇಕು. ಮತ್ತು ಆಸಕ್ತಿದಾಯಕ ಭಾಗವೆಂದರೆ ಈ ಅವಧಿಯು ನಿಮ್ಮ ಸ್ವಂತ ಜೀವನದ ‘ಅಮೃತಕಾಲ’ವೂ ಆಗಿದೆ. ಕನಸುಗಳು, ಸಂಕಲ್ಪಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ನೀವು ಹೊಂದಿರುವುದರಿಂದ ಮುಂಬರುವ 25 ವರ್ಷಗಳು ನಿಮ್ಮ ವೈಯಕ್ತಿಕ ಜೀವನದಲ್ಲಿಯೂ ಮುಖ್ಯವಾಗುತ್ತವೆ. ಇದು 2047 ರಲ್ಲಿ ಭಾರತವನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರೆ ನೀವು ಅದರ ಅತ್ಯುತ್ತಮ ಭಾಗೀದಾರರು ಮತ್ತು ಫಲಾನುಭವಿಯೂ ಆಗುತ್ತೀರಿ. 
ಇದೊಂದು ಸುವರ್ಣಾವಕಾಶ! ಮತ್ತು ಈ ಶುಭ ಸಂದರ್ಭದಲ್ಲಿ, ಈ ಅವಕಾಶಕ್ಕಾಗಿ ನಾನು ಎಲ್ಲಾ ಯುವಜನರನ್ನು ಅಭಿನಂದಿಸುತ್ತೇನೆ. ಆದರೆ ಸ್ನೇಹಿತರೇ, ಈ ಅವಕಾಶದ ನಂತರ ಬೆಳೆಯುವುದನ್ನು ನಿಲ್ಲಿಸಬೇಡಿ. ಹಲವಾರು ಆನ್ ಲೈನ್ ಕೋರ್ಸ್ ಗಳಿವೆ. ನಿಮ್ಮ ಕೌಶಲ್ಯಗಳನ್ನು ಉತ್ತಮಪಡಿಸುತ್ತಲೇ ಇರಿ ಮತ್ತು ಬೆಳೆಯುತ್ತಲೇ ಇರಿ. ನಿಲ್ಲಿಸಬೇಡಿ. ಕಾಲೇಜಿನಲ್ಲಿ ಜವಾನನಾಗಿ ಕೆಲಸ ಮಾಡಲು ಪ್ರಾರಂಭಿಸಿದ ಸಾಕಷ್ಟು ಜನರನ್ನು ನಾನು ನೋಡಿದ್ದೇನೆ. ಕೆಲಸವನ್ನು ಮಾಡುವಾಗ, ಅವರು ಕಷ್ಟಪಟ್ಟು ಅಧ್ಯಯನ ಮಾಡಿದರು ಮತ್ತು ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಬೆಳೆಯುವುದನ್ನು ನಿಲ್ಲಿಸಬೇಡಿ. ಹೊಸ ವಿಷಯಗಳನ್ನು ಕಲಿಯುತ್ತಲೇ ಇರಿ. ನಿಮ್ಮೊಳಗಿನ ವಿದ್ಯಾರ್ಥಿ ಎಂದಿಗೂ ಸಾಯಬಾರದು. ನೀವು ಆಡಳಿತ ವ್ಯವಸ್ಥೆಯನ್ನು ಪ್ರವೇಶಿಸುತ್ತಿದ್ದೀರಿ, ಆದರೆ ಇದು ನಿಮ್ಮ ಸಂಕಲ್ಪಗಳು ಮತ್ತು ಕನಸುಗಳನ್ನು ಈಡೇರಿಸುವ ಬಾಗಿಲು. ನೀವು ಮುಂದೆ ಸಾಗಬೇಕು. ನಾವೆಲ್ಲರೂ ಮುಂದೆ ಸಾಗಬೇಕು ಮತ್ತು ಇತರರನ್ನು ಮುಂದಕ್ಕೆ ಕೊಂಡೊಯ್ಯಬೇಕು. ಸಮಾಜದ ಬಡವರು ಮತ್ತು ಹಿಂದುಳಿದ ವರ್ಗಗಳ ಜೀವನದಲ್ಲಿ ಸಂತೋಷ ಮತ್ತು ಆನಂದವನ್ನು ತರಲು ನಾವು ಶ್ರಮಿಸಿದಾಗ, ನಾವು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯುತ್ತೇವೆ. ನಾವು ಶ್ರದ್ಧೆಯಿಂದ ಒಂದು ಕಾರ್ಯವನ್ನು ಕೈಗೆತ್ತಿಕೊಂಡಾಗ, ಅದರ ಸಂತೋಷವು ಪ್ರಗತಿಯ ಬಾಗಿಲುಗಳನ್ನು ತೆರೆಯುತ್ತದೆ. ಮತ್ತು ಗುಜರಾತ್ ನ ನಮ್ಮ ಪುತ್ರರು ಮತ್ತು ಹೆಣ್ಣುಮಕ್ಕಳು ಮುಂಬರುವ 25 ವರ್ಷಗಳಲ್ಲಿ ವಿಶ್ವದ ಕಲ್ಯಾಣವನ್ನು ಖಾತ್ರಿಪಡಿಸುವ ಮಾರ್ಗದರ್ಶಕರಾಗಲಿದ್ದಾರೆ ಎಂದು ನಾನು ನಂಬುತ್ತೇನೆ, ಇದು ಭಾರತದ ‘ಅಮೃತಕಾಲ’ವನ್ನು ಗುರುತಿಸುತ್ತದೆ, ದಾಖಲು ಮಾಡುತ್ತದೆ. ಎಂತಹ ಅದ್ಭುತ ಕಾಕತಾಳೀಯ! ಎಂತಹ ಅದ್ಭುತವಾದ ಸಂದರ್ಭ! ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತೇನೆ! ಮುಂದುವರಿಯಿರಿ ಮತ್ತು ನಿಮ್ಮ ಪೋಷಕರ ಕನಸುಗಳನ್ನು ನನಸು ಮಾಡಿ!

ಧನ್ಯವಾದಗಳು ಸ್ನೇಹಿತರೇ!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

*****