Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನ ರಾಜ್ ಕೋಟ್‌ ನಲ್ಲಿ 48,100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ 

ಗುಜರಾತ್ ನ ರಾಜ್ ಕೋಟ್‌ ನಲ್ಲಿ 48,100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ರಾಜ್ ಕೋಟ್‌ ನಲ್ಲಿ ಇಂದು 48,100 ಕೋಟಿ ರೂ.ಗೂ ಅಧಿಕ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಪ್ರಮುಖ ವಲಯಗಳಾದ ಆರೋಗ್ಯ, ರಸ್ತೆ, ರೈಲು, ಇಂಧನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಮತ್ತಿತರ ವಲಯಗಳ ಯೋಜನೆಗಳು ಒಳಗೊಂಡಿವೆ.  

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ವರ್ಚುವಲ್ ರೂಪದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಲವು ರಾಜ್ಯಗಳ ಗೌರವಾನ್ವಿತ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಹಾಗೂ ಕೇಂದ್ರ ಸಚಿವರುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಪ್ರಧಾನಮಂತ್ರಿ ಅವರು, ಒಂದು ಕಾಲದಲ್ಲಿ ದೆಹಲಿಯಲ್ಲಿ ಮಾತ್ರ ಪ್ರಮುಖ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದುದ್ದನ್ನು ಸ್ಮರಿಸಿಕೊಂಡರು ಮತ್ತು ಪ್ರಸಕ್ತ ಸರ್ಕಾರ ಆ ಪ್ರವೃತ್ತಿಯನ್ನು ಬದಲಿಸಿ, ರಾಷ್ಟ್ರದ ಪ್ರತಿಯೊಂದು ಮೂಲೆಗೂ ಭಾರತ ಸರ್ಕಾರವನ್ನು ಕೊಂಡೊಯ್ಯುತ್ತಿರುವುದನ್ನು ಪ್ರಮುಖವಾಗಿ ಉಲ್ಲೇಖಿಸಿದರು. “ಇಂದಿನ ರಾಜ್ ಕೋಟ್ ನಲ್ಲಿ ಕಾರ್ಯಕ್ರಮ ಯೋಜನೆ ಅದಕ್ಕೆ ಸಾಕ್ಷಿಯಾಗಿದೆ’’ ಎಂದರು. ದೇಶದ ಹಲವು ಕಡೆ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಗಳು ನಡೆಯುತ್ತಿರುವುದು ಹೊಸ ಪರಂಪರೆಯನ್ನು ಮುನ್ನಡೆಸುವಂತಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. ಐಐಟಿ ಭಿಲಾಯ್, ಐಐಟಿ ತಿರುಪತಿ, ಐಐಐಟಿ ಕರ್ನೂಲ್, ಐಐಎಂ ಬೋಧ್ ಗಯಾ, ಐಐಎಂ ಜಮ್ಮು, ಐಐಎಂ ವಿಶಾಖಪಟ್ಟಣಂ ಮತ್ತು ಐಐಎಸ್ ಕಾನ್ಪುರ್ ಗಳನ್ನು ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದ್ದನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಏಮ್ಸ್ ರಾಜ್ ಕೋಟ್, ಏಮ್ಸ್ ರಾಯ್ ಬರೇಲಿ, ಏಮ್ಸ್ ಮಂಗಳಗಿರಿ, ಏಮ್ಸ್ ಬಟಿಂಡ ಮತ್ತು ಏಮ್ಸ್ ಕಲ್ಯಾಣಿ ಅವುಗಳ ಉದ್ಘಾಟನೆ ನಡೆಯುತ್ತಿದೆ ಎಂದು ಹೇಳಿದರು. “ಅಭಿವೃದ್ದಿ ಹೊಂದುತ್ತಿರುವ ಭಾರತ ಅತ್ಯಂತ ಕ್ಷಿಪ್ರಗತಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಿದೆ. ವಿಶೇಷವಾಗಿ ನೀವು ಈ 5 ಏಮ್ಸ್ ಗಳನ್ನು ಗಮನಿಸಿದರೆ ತಿಳಿಯುತ್ತದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ಅವರು ರಾಜ್ ಕೋಟ್ ಜತೆಗಿನ ಸುದೀರ್ಘ ಬಾಂಧವ್ಯವನ್ನು ಸ್ಮರಿಸಿಕೊಂಡು 22 ವರ್ಷಗಳ ಹಿಂದೆ ತಾವು ಇದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದೆ ಎಂದು ಹೇಳಿದರು. 22 ವರ್ಷದ ಹಿಂದೆ ಫೆಬ್ರವರಿ 25ರಂದು ನಾನು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ್ದೆ, ನಾನು ರಾಜ್ ಕೋಟ್ ಜನರ ವಿಶ್ವಾಸಗಳಿಸಿದ್ದೇನೆ ಎಂದು ಅವರು ಹೇಳಿದರು. “ಹಲವು ಪೀಳಿಗೆಗಳು ಬದಲಾದರೂ ಯಾವುದೇ ವಯಸ್ಸಿನ ಮಿತಿಯಿಲ್ಲದೆ, ಎಲ್ಲ ಜನರಲ್ಲಿ ಮೋದಿ ಮೇಲಿನ ಪ್ರೀತಿ ಬದಲಾಗಿಲ್ಲ” ಅದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು. 

ಇಂದಿನ ಕಾರ್ಯಕ್ರಮ ವಿಳಂಬವಾಗಿದ್ದಕ್ಕೆ ಕ್ಷಮೆ ಕೋರಿದ ಪ್ರಧಾನಮಂತ್ರಿ ಅವರು, ಸುದರ್ಶನ ಸೇತು ಸೇರಿದಂತೆ ಇಂದು ಬೆಳಗ್ಗೆ ದ್ವಾರಕಾದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಸಭಿಕರಿಗೆ  ತಿಳಿಸಿದರು. ದ್ವಾರಕದ ಪವಿತ್ರ ನಗರದಲ್ಲಿ ಮಿಂದು, ಪ್ರಾರ್ಥನೆಗೈದ ತಮ್ಮ ದಿವ್ಯ ಅನುಭವವನ್ನು ಅವರು ಹಂಚಿಕೊಂಡರು. “ಪ್ರಾಚೀನ ಹಾಗೂ ಧಾರ್ಮಿಕ ಪಠ್ಯವನ್ನು ಓದಿದರೆ ನಮಗೆ ದ್ವಾರಕಾದ ಅಚ್ಚರಿಗಳು ತಿಳಿಯುತ್ತವೆ, ಇಂದು ನನಗೆ ಪವಿತ್ರ ದೃಶ್ಯವನ್ನು ನನ್ನ ಕಣ್ಣಾರೆ ನೋಡುವ ಅವಕಾಶ ಲಭ್ಯವಾಗಿತ್ತು. ನಾನು ಆ ಪವಿತ್ರ ಕ್ಷಣವನ್ನು ಮರೆಯಲಾರೆ, ನಾನು ಪ್ರಾರ್ಥನೆ ಸಲ್ಲಿಸಿದೆ ಮತ್ತು ‘ಮೋರ್ ಪಂಕ್’ ಅರ್ಪಿಸಿದೆ. ಆ ದಿವ್ಯ ಅನುಭವವನ್ನು ವರ್ಣಿಸುವುದು ಕಷ್ಟ ಎಂದು ಪ್ರಧಾನಮಂತ್ರಿ ಹೇಳಿದರು. ಆದರೂ ಆ ಅನುಭವದ ಭಾವನೆಯಿಂದ ಹೊರಬಂದಿದ್ದೇನೆ ಎಂದರು. “ಆ ಕ್ಷಣಗಳಲ್ಲಿ ನಾನು ಭಾರತದ ಗತವೈಭವದ ಬಗ್ಗೆ ಅಚ್ಚರಿಪಟ್ಟಿದ್ದೆ. ನಾನು ಹೊರಬಂದ ಮೇಲೆ ಭಗವಾನ್ ಶ್ರೀಕೃಷ್ಣನ ಆಶೀರ್ವಾದ ಪಡೆದೆ ಮತ್ತು ದ್ವಾರಕೆಯಿಂದ ಪ್ರೇರೇಪಿತನಾದೆ” ಎಂದು ಪ್ರಧಾನಮಂತ್ರಿ ಹೇಳಿದರು. “ಇದು ನನ್ನ ‘ವಿಕಾಸದಿಂದ ವಿರಾಸತ್’ ಸಂಕಲ್ಪಕ್ಕೆ ಹೊಸ ಸಾಮರ್ಥ್ಯ ಮತ್ತು ಶಕ್ತಿ ತಂದುಕೊಟ್ಟಿದೆ. ನನ್ನ ವಿಕಸಿತ ಭಾರತದ ಗುರಿಗೆ ದೈವ ನಂಬಿಕೆ ಬೆಸೆದುಕೊಂಡಿದೆ” ಎಂದು ಅವರು ಹೇಳಿದರು.

48,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಹೊಸದಾಗಿ ಉದ್ಘಾಟಿಸಲಾದ ಹೊಸ ಮುನ್ದ್ರಾ-ಪಾಣಿಪಟ್ ಕೊಳವೆ ಮಾರ್ಗ ಕಾರ್ಯಾರಂಭ ಮಾಡಿರುವುದು, ಹರಿಯಾಣದ ಪಾಣಿಪಟ್ ನಲ್ಲಿರುವ ಭಾರತೀಯ ತೈಲ ಸಂಸ್ಕರಣಾಗಾರಕ್ಕೆ ಗುಜರಾತ್ ನ ಕರಾವಳಿಯಿಂದ ಕಚ್ಚಾತೈಲ ಸಾಗಾಣೆ ಮಾಡುವುದು ಸುಲಭವಾಗಿದೆ ಎಂದರು. ಅಲ್ಲದೆ ಅವರು ರಸ್ತೆ, ರೈಲು, ವಿದ್ಯುತ್, ಆರೋಗ್ಯ ಮತ್ತು ಶಿಕ್ಷಣದ ಹಲವು ಯೋಜನೆಗಳನ್ನು ಉಲ್ಲೇಖಿಸಿದರು. “ ರಾಜ್ ಕೋಟ್ ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ನಂತರ ಇದೀಗ ಏಮ್ಸ್ ರಾಜ್ ಕೋಟ್ ಈಗಷ್ಟೇ ರಾಷ್ಟ್ರಕ್ಕೆ ಸರ್ಮಪಿಸಲಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಅದಕ್ಕಾಗಿ ರಾಜ್ ಕೋಟ್ ಮತ್ತು ಸೌರಾಷ್ಟ್ರದ ಜನರನ್ನು ಪ್ರಧಾನಿ ಅಭಿನಂದಿಸಿದರು. ಇಂದು ಎಲ್ಲೆಲ್ಲಿ ಏಮ್ಸ್ ಉದ್ಘಾಟನೆ ಗೊಂಡಿತೋ, ಆಯಾ ನಗರಗಳ ಜನರಿಗೆ ಪ್ರಧಾನಮಂತ್ರಿ ಅವರು ತಮ್ಮ ಶುಭಾಶಯಗಳನ್ನು ಕೋರಿದರು.

“ಇಂದು ರಾಜ್ ಕೋಟ್ ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಐತಿಹಾಸಿಕ ಸಂದರ್ಭವಾಗಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಇಂದು ರಾಜ್ ಕೋಟ್ ನ ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು, ವಿಕಸಿತ ಭಾರತದ ಆರೋಗ್ಯ ಸೌಕರ್ಯಗಳು ನಿರೀಕ್ಷೆಗಿಂತ ಅಧಿಕ ಮಟ್ಟದಲ್ಲಿವೆ. ಸ್ವಾತಂತ್ರ್ಯಾ ನಂತರ 50 ವರ್ಷಗಳಲ್ಲಿ ಕೇವಲ ಒಂದೇ ಒಂದು ಏಮ್ಸ್ ಅದು ದೆಹಲಿಯಲ್ಲಿ ಮಾತ್ರ ಇತ್ತು. ಸ್ವಾತಂತ್ರ್ಯಾ ನಂತರ 7 ದಶಕಗಳಲ್ಲಿ ಕೇವಲ 7 ಏಮ್ಸ್ ಗಳನ್ನು ಸ್ಥಾಪಿಸಲಾಗಿತ್ತು. ಅವುಗಳಲ್ಲಿ ಕೆಲವು ಪೂರ್ಣಗೊಂಡಿರಲಿಲ್ಲ ಎಂದು ಹೇಳಿದರು. “ಕಳೆದ 10 ದಿನಗಳಲ್ಲಿ ದೇಶ 7 ಹೊಸ ಏಮ್ಸ್ ಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಸಾಕ್ಷಿಯಾಗಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ 70 ವರ್ಷಗಳಲ್ಲಿ ಆಗದೇ ಇದ್ದ ಕೆಲಸಗಳನ್ನು ಪ್ರಸಕ್ತ ಸರ್ಕಾರ ಅತ್ಯಂತ ತ್ವರಿತ ವೇಗದಲ್ಲಿ ಪೂರ್ಣಗೊಳಿಸುತ್ತಿದೆ. ಆ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದ ಎಂದು ಹೇಳಿದರು. ಅಲ್ಲದೆ ಅವರು ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಪಕೇಂದ್ರಗಳ ಸ್ಥಾಪನೆ, ಆತಂಕಕಾರಿ ಕಾಯಿಲೆಗಳ ಚಿಕಿತ್ಸೆಗೆ ಘಟಕಗಳ ಸ್ಥಾಪನೆ ಸೇರಿದಂತೆ 200ಕ್ಕೂ ಅಧಿಕ ಆರೋಗ್ಯ ಮೂಲಸೌಕರ್ಯ ವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು ಹಾಗೂ ಉದ್ಘಾಟಿಸಲಾಯಿತು.

ಪ್ರಧಾನಮಂತ್ರಿ ಅವರು, ‘ಮೋದಿ ಅವರ ಗ್ಯಾರಂಟಿ ಎಂದರೆ ಗ್ಯಾರಂಟಿಗಳ ಈಡೇರಿಕೆಯೇ ಅರ್ಥ’’ ಎಂಬ ಭರವಸೆಯನ್ನು ಪುನರುಚ್ಛರಿಸಿದ ಪ್ರಧಾನಮಂತ್ರಿ ಅವರು, ಮೂರು ವರ್ಷಗಳ ಹಿಂದೆ ಏಮ್ಸ್ ರಾಜಕೋಟ್ ಗೆ ಶಂಕುಸ್ಥಾಪನೆ ನೆರವೇರಿಸಿದ್ದೆ, ಇಂದು ಆ ಗ್ಯಾರಂಟಿ ಈಡೇರಿದೆ ಎಂದರು. ಅಂತೆಯೇ ಪಂಜಾಬ್ ಗೆ ಏಮ್ಸ್ ಗ್ಯಾರಂಟಿಯನ್ನು ನೀಡಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದರ ಸ್ಥಾಪನೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಅದೇ ರೀತಿ ರಾಯ್ ಬರೇಲಿ, ಮಂಗಳಗಿರಿ, ಕಲ್ಯಾಣಿ ಮತ್ತು ರೆವಾರಿ ಏಮ್ಸ್ ಗಳಿಗೂ ಚಾಲನೆ ನೀಡಲಾಗಿದೆ. ಕಳೆದ 10 ವರ್ಷಗಳಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಹತ್ತು ಹೊಸ ಏಮ್ಸ್ ಗಳನ್ನು ಮಂಜೂರು ಮಾಡಲಾಗಿದೆ. “ಮೋದಿ ಅವರ ಗ್ಯಾರಂಟಿ ಜನರ ನಿರೀಕ್ಷೆಗಳ ಮೇಲೆ ಆರಂಭವಾಗುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು.

ಕಳೆದ 10 ವರ್ಷಗಳಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆ ಮತ್ತು ಮೂಲಸೌಕರ್ಯ ವೃದ್ಧಿಯಲ್ಲಿ ಕೈಗೊಂಡಿರುವ ಸುಧಾರಣೆಗಳ ಪರಿಣಾಮ ಸಾಂಕ್ರಾಮಿಕಗಳನ್ನು ವಿಶ್ವಾಸಾರ್ಹ ರೀತಿಯಲ್ಲಿ ನಿಭಾಯಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಏಮ್ಸ್, ವೈದ್ಯಕೀಯ ಕಾಲೇಜು ಮತ್ತು ನಿರ್ಣಾಯಕ ಆರೋಗ್ಯ ರಕ್ಷಣಾ ಮೂಲಸೌಕರ್ಯ ವೃದ್ಧಿಯಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಸಣ್ಣ ಕಾಯಿಲೆಗಳಿಗೆ ಗ್ರಾಮಗಳಲ್ಲಿ 1.5 ಲಕ್ಷಕ್ಕೂ ಅಧಿಕ ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಆರಂಭಿಸಲಾಗಿದೆ. ಇಂದು ವೈದ್ಯಕೀಯ ಕಾಲೇಜುಗಳ ಸಂಖ್ಯೆ 2014ರಲ್ಲಿ 387 ಇದ್ದದ್ದು, ಇದೀಗ 706 ತಲುಪಿದೆ. 10 ವರ್ಷದ ಹಿಂದೆ 50 ಸಾವಿರ ಇದ್ದ ಎಂಬಿಬಿಎಸ್ ಸೀಟುಗಳ ಈಗ ಒಂದು ಲಕ್ಷಕ್ಕೂ ಅಧಿಕವಾಗಿದೆ. 2014ರಲ್ಲಿ 30 ಸಾವಿರ ಇದ್ದ ಸ್ನಾತಕೋತ್ತರ, ವೈದ್ಯಕೀಯ ಸೀಟುಗಳ ಸಂಖ್ಯೆ 70 ಸಾವಿರಕ್ಕೆ ಏರಿದೆ. ಸ್ವಾತಂತ್ರ್ಯಾ ನಂತರ ಕಳೆದ 70 ವರ್ಷಗಳಲ್ಲಿ ಬಂದಿರಬಹುದಾದ ವೈದ್ಯರ ಸಂಖ್ಯೆಗೆ ಹೋಲಿಸಿದರೆ, ಮುಂದಿನ ಕೆಲವೇ ವರ್ಷಗಳಲ್ಲಿ ಅಷ್ಟು ಸಂಖ್ಯೆಯ ವೈದ್ಯರು ಹೊರಬರಲಿದ್ದಾರೆ. ದೇಶಾದ್ಯಂತ ಸುಮಾರು 64 ಸಾವಿರ ಕೋಟಿ ರೂ. ಮೌಲ್ಯದ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್ ಕಾಮಗಾರಿಗಳು ನಡೆಯುತ್ತಿವೆ. ಇಂದಿನ ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜು, ಟಿಬಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಪಿಜಿಐ ಉಪಗ್ರಹ ಕೇಂದ್ರ, ನಿರ್ಣಾಯಕ ಆರೈಕೆ ಬ್ಲಾಕ್ ಗಳು ಮತ್ತು ಒಂದು ಡಜನ್ ಗೂ ಅಧಿಕ ಇಎಸ್ಐಸಿ ಆಸ್ಪತ್ರೆಗಳ ಸ್ಥಾಪನೆ ಇಂದಿನ ಯೋಜನೆಗಳಲ್ಲಿ ಸೇರಿದೆ.

”ಸರ್ಕಾರವು ರೋಗ ತಡೆಗಟ್ಟುವುದು ಮತ್ತು ಅದರ ವಿರುದ್ಧ ಹೋರಾಡುವ ಸಾಮರ್ಥ್ಯಕ್ಕೆ ಆದ್ಯತೆ ನೀಡುತ್ತದೆ’’ ಎಂದ ಪ್ರಧಾನಿ, ಪೌಷ್ಟಿಕಾಂಶ, ಯೋಗ, ಆಯುಷ್ ಮತ್ತು ಶುಚಿತ್ವಕ್ಕೆ ಒತ್ತು ನೀಡುವುದನ್ನು ಒತ್ತಿ ಹೇಳಿದರು. ಅವರು ಸಾಂಪ್ರದಾಯಿಕ ಭಾರತೀಯ ಔಷಧ ಮತ್ತು ಆಧುನಿಕ ಔಷಧ ಎರಡನ್ನೂ ಉತ್ತೇಜಿಸುವ ಬದ್ಧತೆಯನ್ನು ಬಲವಾಗಿ ಪ್ರತಿಪಾದಿಸಿದರು. ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಸಂಬಂಧಿಸಿದ ಎರಡು ದೊಡ್ಡ ಆಸ್ಪತ್ರೆಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಇಂದು ಉದ್ಘಾಟಿಸಿದ ಉದಾಹರಣೆಗಳನ್ನು ನೀಡಿದರು. ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಕೇಂದ್ರವನ್ನು ಗುಜರಾತ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಬಡವರು ಮತ್ತು ಮಧ್ಯಮ ವರ್ಗದವರಿಗೆ ಹಣ ಉಳಿಸುವ ನಿಟ್ಟಿನಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಪ್ರಧಾನಿ, ಆಯುಷ್ಮಾನ್ ಭಾರತ್ ಯೋಜನೆ 1 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯಕವಾಗಿದೆ ಮತ್ತು ಮತ್ತು ಶೇ.80ರ ರಿಯಾಯತಿಯಲ್ಲಿ ಔಷಧಗಳನ್ನು ಒದಗಿಸುವ ಜನೌಷಧಿ ಕೇಂದ್ರಗಳ ಮೂಲಕ 30 ಸಾವಿರ ಕೋಟಿ ಉಳಿತಾಯವಾಗಿದೆ ಎಂದರು. ಉಜ್ವಲ ಯೋಜನೆಯಡಿ ಬಡವರು 70,000 ಕೋಟಿ ರೂಪಾಯಿಗೂ ಅಧಿಕ ಉಳಿತಾಯ ಮಾಡಿದ್ದಾರೆ, ಕಡಿಮೆ ಮೊಬೈಲ್ ಡೇಟಾದ ಕಾರಣ ನಾಗರಿಕರು ಪ್ರತಿ ತಿಂಗಳು 4,000 ರೂಪಾಯಿಗಳನ್ನು ಉಳಿಸಿದ್ದಾರೆ ಮತ್ತು ತೆರಿಗೆ ಸಂಬಂಧಿತ ಸುಧಾರಣೆಗಳಿಂದ ತೆರಿಗೆದಾರರು ಸುಮಾರು 2.5 ಲಕ್ಷ ಕೋಟಿ ರೂ.ಉಳಿತಾಯ ಮಾಡಿದ್ದಾರೆಂದರು.

ವಿದ್ಯುತ್ ಬಿಲ್ ಅನ್ನು ಶೂನ್ಯಕ್ಕೆ ತರುವ ಮತ್ತು ಕುಟುಂಬಗಳಿಗೆ ಆದಾಯ ಸೃಷ್ಟಿಸುವ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಬಗ್ಗೆಯೂ ಪ್ರಧಾನಿ ವಿವರಿಸಿದರು. ಫಲಾನುಭವಿಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಸಿಗಲಿದ್ದು, ಉಳಿದ ವಿದ್ಯುತ್ ಅನ್ನು ಸರ್ಕಾರವೇ ಖರೀದಿಸಲಿದೆ. ಅವರು ಕಚ್‌ನಲ್ಲಿ ಬೃಹತ್ ಪವನ ಶಕ್ತಿ ಮತ್ತು ಸೌರಶಕ್ತಿ ಯೋಜನೆಗಳಾದ ಎರಡು ಘಟಕ ಸ್ಥಾಪನಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.

ರಾಜ್‌ಕೋಟ್ ಕಾರ್ಮಿಕರು, ಉದ್ಯಮಿಗಳು ಮತ್ತು ಕುಶಲಕರ್ಮಿಗಳ ನಗರವಾಗಿದೆ ಎಂದ ಪ್ರಧಾನಿ 13,000 ಕೋಟಿ ರೂಪಾಯಿ ಮೌಲ್ಯದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಬಗ್ಗೆ ಮಾತನಾಡಿದರು. ಗುಜರಾತೊಂದರಲ್ಲೇ ಈಗಾಗಲೇ 20,000 ವಿಶ್ವಕರ್ಮರಿಗೆ ತರಬೇತಿ ನೀಡಲಾಗಿದ್ದು, ಪ್ರತಿಯೊಬ್ಬ ವಿಶ್ವಕರ್ಮನಿಗೆ 15,000 ರೂ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 10,000 ಕೋಟಿ ರೂ.ಗಳ ಸಹಾಯಧನ ವಿತರಿಸಲಾಗಿದೆ ಎಂದು ತಿಳಿಸಿದರು. ಗುಜರಾತಿನ ಬೀದಿ ವ್ಯಾಪಾರಿಗಳು ಸುಮಾರು 800 ಕೋಟಿ ರೂ.ಗಳ ನೆರವು ಪಡೆದಿದ್ದಾರೆ. ರಾಜ್‌ಕೋಟ್‌ನಲ್ಲಿಯೇ 30,000 ಕ್ಕೂ ಅಧಿಕ ಸಾಲಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ಭಾರತದ ನಾಗರಿಕರು ಸಬಲೀಕರಣಗೊಂಡಾಗ ವಿಕಸಿತ ಭಾರತದ ಸಂಕಲ್ಪವು ಬಲಗೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ”ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಮಹಾಶಕ್ತಿಯನ್ನಾಗಿ ಮಾಡಲು ಮೋದಿ ಭರವಸೆ ನೀಡಿದಾಗ, ಅದರ ಗುರಿ ಸರ್ವರಿಗೂ ಆರೋಗ್ಯ ಮತ್ತು ಎಲ್ಲರಿಗೂ ಸಮೃದ್ಧಿ ದೊರಕಲಿದೆ” ಎಂದು ಪ್ರಧಾನಮಂತ್ರಿ ತಮ್ಮ ಮಾತು ಮುಗಿಸಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು ಸಂಸದ ಶ್ರೀ ಸಿ.ಆರ್. ಪಾಟೀಲ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶದಲ್ಲಿ ತೃತೀಯ ಹಂತದ ಆರೋಗ್ಯ ರಕ್ಷಣಾ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಪ್ರಧಾನಮಂತ್ರಿ ಅವರು ರಾಜ್‌ಕೋಟ್ (ಗುಜರಾತ್), ಬಟಿಂಡಾ (ಪಂಜಾಬ್), ರಾಯ್ ಬರೇಲಿ (ಉತ್ತರ ಪ್ರದೇಶ), ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಮಂಗಳಗಿರಿ (ಆಂಧ್ರ ಪ್ರದೇಶ)ಯಲ್ಲಿ ಐದು ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ಗಳನ್ನು) ರಾಷ್ಟ್ರಕ್ಕೆ ಸಮರ್ಪಿಸಿದರು.

23 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ  11,500 ಕೋಟಿ ರೂ.ಗೂ ಅಧಿಕ ಮೌಲ್ಯದ 200ಕ್ಕೂ ಅಧಿಕ ಆರೋಗ್ಯ ರಕ್ಷಣೆಯ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.

 

ಪುದುಚೇರಿಯ ಕಾರೈಕಲ್‌ನಲ್ಲಿರುವ ಜಿಪ್‌ಮರ್‌ನ ವೈದ್ಯಕೀಯ ಕಾಲೇಜು ಮತ್ತು ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ಮತ್ತಯ ಶೈಕ್ಷಣಿಕ ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್) ನ 300 ಹಾಸಿಗೆಗಳ ಉಪಗ್ರಹ ಕೇಂದ್ರವನ್ನು ಪ್ರಧಾನಮಂತ್ರಿ ಲೋಕಾರ್ಪಣೆ ಮಾಡಿದರು. ಅವರು ಪುದುಚೇರಿಯ ಯಾನಂನಲ್ಲಿ ಜಿಪ್ ಮರ್‌ನ 90 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಕನ್ಸಲ್ಟಿಂಗ್ ಘಟಕವನ್ನು ಉದ್ಘಾಟಿಸಿದರು; ಚೆನ್ನೈನಲ್ಲಿ ವಯಸ್ಸಾದವರ ರಾಷ್ಟ್ರೀಯ ಕೇಂದ್ರ; ಬಿಹಾರದ ಪುರ್ನಿಯಾದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು; ಐಸಿಎಂಆರ್ ನ 2 ಕ್ಷೇತ್ರ ಘಟಕಗಳು ಅಂದರೆ ಕೇರಳದ ಅಲಪ್ಪುಜ್ಜದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಕೇರಳ ಘಟಕ, ಮತ್ತು ಕ್ಷಯರೋಗದಲ್ಲಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎನ್ ಐಆರ್ ಟಿ): ತಮಿಳುನಾಡಿನ ತಿರುವಳ್ಳೂರ್ ನಲ್ಲಿ ಹೊಸ ಸಂಯೋಜಿತ ಟಿಬಿ ಸಂಶೋಧನಾ ಸೌಲಭ್ಯ ಇತರು ಯೋಜನೆಗಳು ಇದರಲ್ಲಿ ಸೇರಿವೆ. ಪಂಜಾಬ್‌ನ ಫಿರೋಜ್‌ಪುರದಲ್ಲಿ ಪಿಜಿಐಎಂಇಆರ್ ನ 100 ಹಾಸಿಗೆಗಳ ಉಪಗ್ರಹ ಕೇಂದ್ರ ಸೇರಿದಂತೆ ವಿವಿಧ ಆರೋಗ್ಯ ಯೋಜನೆಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು; ದೆಹಲಿಯ ಆರ್ ಎಂಎಲ್  ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟಡ;  ಇಂಫಾಲ್‌ದ ರಿಮ್ಸ್ ನಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್; ಜಾರ್ಖಂಡ್‌ನ ಕೊಡೆರ್ಮಾ ಮತ್ತು ದುಮ್ಕಾದಲ್ಲಿ ನರ್ಸಿಂಗ್ ಕಾಲೇಜುಗಳು ಈ ಯೋಜನೆಗಳಲ್ಲಿ ಸೇರಿವೆ.

ಇದೀಷ್ಟೇ ಅಲ್ಲದೆ, ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಪ್ರಧಾನಮಂತ್ರಿ- ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಯೋಜನೆ (ಪಿಎಂ-ಎಬಿಎಚ್ ಐಎಂ) ಅಡಿಯಲ್ಲಿ 115 ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಪ್ರಧಾನಮಂತ್ರಿ ನೆರವೇರಿಸಿದರು. ಅದಲ್ಲಿ ಪಿಎಂ-ಎಬಿಎಚ್ ಐಎಂ ಅಡಿಯಲ್ಲಿ 78 ಯೋಜನೆಗಳು ಸೇರಿವೆ (ಗಂಭೀರ ಆರೈಕೆ ಬ್ಲಾಕ್‌ಗಳ 50 ಘಟಕಗಳು, ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳ 15 ಘಟಕಗಳು, ಬ್ಲಾಕ್ ಸಾರ್ವಜನಿಕ ಆರೋಗ್ಯ ಘಟಕಗಳ 13 ಘಟಕಗಳು); ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಾದರಿ ಆಸ್ಪತ್ರೆ, ಟ್ರಾನ್ಸಿಟ್ ಹಾಸ್ಟೆಲ್ ಮುಂತಾದ ವಿವಿಧ ಯೋಜನೆಗಳ 30 ಘಟಕಗಳು ಸೇರಿವೆ.

ಪುಣೆಯಲ್ಲಿ ‘ನಿಸರ್ಗ ಗ್ರಾಮ’ ಹೆಸರಿನ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಪ್ರಧಾನಿ ಉದ್ಘಾಟಿಸಿದರು. ಇದು ಬಹು-ಶಿಸ್ತಿನ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದೊಂದಿಗೆ 250 ಹಾಸಿಗೆಗಳ ಆಸ್ಪತ್ರೆಯೊಂದಿಗೆ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜನ್ನು ಒಳಗೊಂಡಿದೆ. ಅಲದೆ, ಅವರು ಹರಿಯಾಣದ ಜಜ್ಜರ್‌ನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದರು, ಇದು ಉನ್ನತ ಮಟ್ಟದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸೌಲಭ್ಯ ಹೊಂದಿರುತ್ತದೆ.

ಕಾರ್ಯಕ್ರಮದಲ್ಲಿ ಪ್ರಧಾನಿ ನೌಕರರ ರಾಜ್ಯ ವಿಮಾ ನಿಗಮದ (ಇಎಸ್ ಐಸಿ) ಸುಮಾರು 2280 ಕೋಟಿ ರೂ.ಗಳ 21 ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು. ಲೋಕಾರ್ಪಣೆಗೊಂಡಿರುವ ಯೋಜನೆಗಳಲ್ಲಿ 2 ವೈದ್ಯಕೀಯ ಕಾಲೇಜುಗಳು ಮತ್ತು ಪಾಟ್ನಾ (ಬಿಹಾರ) ಮತ್ತು ಅಲ್ವಾರ್ (ರಾಜಸ್ಥಾನ) ಆಸ್ಪತ್ರೆಗಳು ಸೇರಿವೆ; 8 ಆಸ್ಪತ್ರೆಗಳು ಕೊರ್ಬಾ (ಛತ್ತೀಸ್‌ಗಢ), ಉದಯಪುರ (ರಾಜಸ್ಥಾನ), ಆದಿತ್ಯಪುರ (ಜಾರ್ಖಂಡ್), ಫುಲ್ವಾರಿ ಷರೀಫ್ (ಬಿಹಾರ), ತಿರುಪ್ಪೂರ್ (ತಮಿಳುನಾಡು), ಕಾಕಿನಾಡ (ಆಂಧ್ರಪ್ರದೇಶ) ಮತ್ತು ಛತ್ತೀಸ್‌ಗಢದ ರಾಯ್‌ಗಢ್ & ಭಿಲೈ; ಮತ್ತು ರಾಜಸ್ಥಾನದ ನೀಮ್ರಾನಾ, ಅಬು ರೋಡ್ ಮತ್ತು ಭಿಲ್ವಾರಾದಲ್ಲಿ 3 ಔಷಧಾಲಯಗಳು. ರಾಜಸ್ಥಾನದ ಅಲ್ವಾರ್, ಬೆಹ್ರೋರ್ ಮತ್ತು ಸೀತಾಪುರ, ಸೆಲಾಕಿ (ಉತ್ತರಾಖಂಡ), ಗೋರಖ್‌ಪುರ (ಉತ್ತರ ಪ್ರದೇಶ), ಕೊರಟ್ಟಿ ಮತ್ತು ಕೇರಳದ ನವೈಕುಲಂ ಮತ್ತು ಪೈಡಿಭೀಮವರಂ (ಆಂಧ್ರಪ್ರದೇಶ) 8 ಸ್ಥಳಗಳಲ್ಲಿ ಇಎಸ್‌ಐ ಔಷಧಾಲಯಗಳನ್ನು ಉದ್ಘಾಟಿಸಲಾಗಿದೆ.

ಗುಜರಾತ್ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಉತ್ತೇಜಿಸುವ ಒಂದು ಹೆಜ್ಜೆಯಾಗಿ, 300 ಮೆಗಾವ್ಯಾಟ್ ಸಾಮರ್ಥ್ಯದ ಭುಜ್-II ಸೌರ ವಿದ್ಯುತ್ ಯೋಜನೆ, ಗ್ರಿಡ್ ಸಂಪರ್ಕಿತ 600 ಮೆಗಾವ್ಯಾಟ್ ಸೌರ ಪಿವಿ ವಿದ್ಯುತ್ ಯೋಜನೆ; ಖಾವ್ಡಾ ಸೌರ ವಿದ್ಯುತ್ ಯೋಜನೆ; 200 ಮೆಗಾವ್ಯಾಟ್ ದಯಾಪುರ್-II ಪವನ ಶಕ್ತಿ ಯೋಜನೆ ಸೇರಿದಂತೆ ವಿವಿಧ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು.

ಅಲ್ಲದೆ, ಪ್ರಧಾನಿ ಅವರು 9000 ಕೋಟಿ ರೂ. ಮೌಲ್ಯದ ಹೊಸ ಮುಂದ್ರಾ-ಪಾಣಿಪತ್ ಕೊಳವೆಮಾರ್ಗ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. 8.4 ಎಂಎಂಟಿಪಿಎ ಸ್ಥಾಪಿತ ಸಾಮರ್ಥ್ಯದ 1194 ಕಿಮೀ ಉದ್ದದ ಮುಂದ್ರಾ-ಪಾಣಿಪತ್ ಪೈಪ್‌ಲೈನ್ ಅನ್ನು ಗುಜರಾತ್ ಕರಾವಳಿಯ ಮುಂದ್ರಾದಿಂದ ಹರಿಯಾಣದ ಪಾಣಿಪತ್‌ನಲ್ಲಿರುವ ಇಂಡಿಯನ್ ಆಯಿಲ್‌ನ ಸಂಸ್ಕರಣಾಗಾರಕ್ಕೆ ಕಚ್ಚಾ ತೈಲವನ್ನು ಸಾಗಾಣೆ ಮಾಡಲು ನಿಯೋಜಿಸಲಾಗಿದೆ.

ರಾಜ್ ಕೋಟ್‌ ಪ್ರದೇಶದಲ್ಲಿ ರಸ್ತೆ ಮತ್ತು ರೈಲು ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದ ಸುರೇಂದ್ರ ನಗರ-ರಾಜ್‌ಕೋಟ್ ರೈಲು ಮಾರ್ಗದ ಜೋಡಿಪಥ; ಹಳೆಯ ಎನ್ ಎಚ್-8ಇ ನ ಭಾವನಗರ ತಲಾಜಾ ನಾಲ್ಕು ಪಥದ ಮಾರ್ಗ (ಪ್ಯಾಕೇಜ್-I); ಎನ್ ಎಚ್‌-751 ರ ಪಿಪ್ಲಿ-ಭಾವನಗರ (ಪ್ಯಾಕೇಜ್-I) ಕಾರ್ಯಗಳನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು. ಅವರು ಎನ್ ಎಚ್-27 ರ ಸಂತಾಲ್‌ಪುರ ಭಾಗಕ್ಕೆ ಸಮಖಿಯಲಿಯ ಸುಸಜ್ಜಿತ ಭುಜದೊಂದಿಗೆ ಆರು ಪಥದ ಸಂಪರ್ಕ ಕಲ್ಪಿಸುವ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದರು.

*****