Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನ ಭರೂಚ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾರ್ಚ್ 07, 2017 ರಂದು ಪ್ರಧಾನಮಂತ್ರಿ ಅವರ ಭಾಷಣ.

ಗುಜರಾತ್ ನ  ಭರೂಚ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ  ಮಾರ್ಚ್ 07, 2017 ರಂದು   ಪ್ರಧಾನಮಂತ್ರಿ ಅವರ ಭಾಷಣ.

ಗುಜರಾತ್ ನ  ಭರೂಚ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ  ಮಾರ್ಚ್ 07, 2017 ರಂದು   ಪ್ರಧಾನಮಂತ್ರಿ ಅವರ ಭಾಷಣ.

ಗುಜರಾತ್ ನ  ಭರೂಚ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಸಮರ್ಪಣಾ ಕಾರ್ಯಕ್ರಮದಲ್ಲಿ  ಮಾರ್ಚ್ 07, 2017 ರಂದು   ಪ್ರಧಾನಮಂತ್ರಿ ಅವರ ಭಾಷಣ.


ನಿನ್ನೆ ನಾನು ಗಂಗಾ ಮಾತೆಯ ಸನ್ನಿಧಿಯಲ್ಲಿದ್ದೆ, ಇಂದು ತಾಯಿ ನರ್ಮದೆಯ ಸನ್ನಿಧಿಯಲ್ಲಿದ್ದೇನೆ. ನೆನ್ನೆ ಬನಾರಸ್ ನಲ್ಲಿ, ಇಂದು ಭರೂಚ್ ನಲ್ಲಿ, ಹಿಂದೂಸ್ತಾನದ ಇತಿಹಾಸದಲ್ಲಿ ಬನಾರಸ್ ಅತ್ಯಂತ ಪುರಾತನ ನಗರ. ಹಾಗೆಯೇ ಭರೂಚ್, ಗುಜರಾತ್ ನ ಅತ್ಯಂತ ಪುರಾತನ ನಗರ.

ಸಹೋದರ, ಸಹೋದರಿಯರೆ, ಮೊಟ್ಟ ಮೊದಲಿಗೆ ನಾನು ಶ್ರೀ ನಿತಿನ್ ಗಡ್ಕರಿ ಅವರಿಗೂ, ಅವರ ಸಂಪೂರ್ಣ ತಂಡಕ್ಕೂ ಹಾಗೂ ಗುಜರಾತ್ ಸರ್ಕಾರಕ್ಕೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಸೇತುವೆ ನಿರ್ಮಾಣಕ್ಕಿರಬಹುದಾದ ಮಹತ್ವವನ್ನು ವಿಶ್ವ ಅರಿಯದೇ ಇರಬಹುದು, ಆದರೆ ಸೇತುವೆ ಇಲ್ಲದಿದ್ದರೆ ಎಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ಭರೂಚ್ ಜನತೆ ಅರಿತಿದ್ದಾರೆ. ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದೀರ, ತುರ್ತು ಚಿಕಿತ್ಸಾ ವಾಹನಗಳೂ ಕೂಡಾ ಗಂಟೆಗಟ್ಟಲೆ ಕಾಯುತ್ತಿದ್ದಂತಹ ಪರಿಸ್ಥಿತಿಯಲ್ಲಿ ಇಂತಹ ಸೇತುವೆ ನಿರ್ಮಾಣ ಎಷ್ಟು ಮಹತ್ವ ಪಡೆಯುತ್ತದೆ ಎಂಬುದನ್ನು ಗುಜರಾತ್ ಜನತೆ ಅತ್ಯಂತ ಚೆನ್ನಾಗಿ ಅರಿತಿದ್ದಾರೆ. ಸಹೋದರ ಸಹೋದರಿಯರೇ, ಈ ಸೇತುವೆ ನಿರ್ಮಾಣ ಕೇವಲ ಭರೂಚ್ ಅಂಕಲೇಶ್ವರ ನಡುವಿನ ಸಮಸ್ಯೆಯ ವಿಷಯವಲ್ಲ. ಇದು ಹಿಂದೂಸ್ತಾನದ ಪಶ್ಚಿಮ ಭಾಗದ ಪ್ರತಿಯೊಬ್ಬರಿಗೂ ಸಮಸ್ಯೆ ತಂದೊಡ್ಡುವ ವಿಷಯವಾಗಿತ್ತು.

ನಾನು ಎಷ್ಟು ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೆನೋ, ಈ ವಿಷಯವಾಗಿ ಹೋರಾಡುತ್ತಾ ಬಂದಿದ್ದೆ. ಆದರೆ ನನಗೆ ಒಂದು ನಿಗದಿತ ಅವಧಿಯಲ್ಲಿ ಸೇವೆ ಸಲ್ಲಿಸುವ ಅವಕಾಶ ಲಭಿಸಿತ್ತು, ಆಧುನಿಕ ತಂತ್ರಜ್ಞಾನದ ಮೂಲಕ ಹಿಂದೂಸ್ತಾನದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಸೇತುವೆ ನಿರ್ಮಾಣಗೊಂಡಿದೆ, ಅದೂ ತಾಯಿ ನರ್ಮದೆಯ ತೀರದಲ್ಲಿ ನಿರ್ಮಾಣಗೊಂಡಿದೆ.

ನಿತಿನ್ ಜೀ ಅವರು ಈ ಕಾರ್ಯವನ್ನು ಸಂಪೂರ್ಣ ಶ್ರದ್ಧೆಯಿಂದ ಕೈಗೆತ್ತಿಕೊಂಡು ನಿರ್ವಹಿಸಿದ್ದಾರೆ, ನಿರಂತರ ಗಮನ ಹರಿಸಿ ಕಾರ್ಯ ಪೂರ್ಣಗೊಳಿಸಿದ್ದಾರೆ. ಅವರ ವಿಭಾಗದ ಸಂಪೂರ್ಣ ತಂಡ ಈ ಕಾರ್ಯದ ಯಶಸ್ಸಿಗೆ ಪ್ರಯತ್ನಪಟ್ಟಿದ್ದಾರೆ. ಇದರ ಪರಿಣಾಮವೇ ಇಂದು ನಾನು ಈ ಸೇತುವೆಯನ್ನು ಉದ್ಘಾಟನೆ ಮಾಡುತ್ತಿದ್ದೇನೆ.

ಇತ್ತೀಚೆಗೆ ನಾನು ಉತ್ತರ ಪ್ರದೇಶ ಪ್ರವಾಸದಲ್ಲಿದ್ದೆ. ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಬೇರೆ ಬೇರೆ ಪ್ರಾಂತಗಳಿಗೆ ಭೇಟಿ ನೀಡುತ್ತಿದ್ದೆ. ಅಲ್ಲಿನ ಜನತೆ ನನಗೆ ಕೆಲವು ಸ್ಮಾರಕಗಳನ್ನು ತೋರಿಸುತ್ತಿದ್ದರು. ಎಂತಹ ಸ್ಮಾರಕಗಳು? ಅದೋ ಅಲ್ಲಿ ದೂರ ಕಾಣುತ್ತಿದೆಯಲ್ಲ, ಕಂಬ, ಪಿಲ್ಲರ್ ಗಳು, ಅವು 15 vವರ್ಷದ ಮೊದಲು ಶಿಲಾನ್ಯಾಸಗೊಂಡ ಸೇತುವೆಯ ಪಿಲ್ಲರ್ ಗಳು. ಇಲ್ಲಿಯವರೆಗೆ ಎರಡು ಕಂಬಗಳ ನಿರ್ಮಾಣವಾಗಿದೆ, ಮುಂದುವರೆದಿಲ್ಲ. ಕಾಶಿಯಲ್ಲೂ ಕೂಡಾ 13 ವರ್ಷಗಳ ಹಿಂದಿನ ಒಂದು ರಚನೆ ಹಾಗೆಯೇ ತೂಗುಯ್ಯಾಲೆಯಲ್ಲಿದೆ. ಇದನ್ನು ಭಾರತ ಸರ್ಕಾರಕ್ಕೆ ವಹಿಸಿದ್ದರೆ ಒಳ್ಳೆಯದಾಗುತ್ತಿತ್ತು, ನಾನು ಬಂದು ಇದನ್ನು ಪೂರ್ಣಗೊಳಿಸುತ್ತಿದ್ದೆ. ದೇಶದಲ್ಲಿ ಈ ಮೊದಲು ಇಂತಹ ಕಾರ್ಯಗಳು ಪೂರ್ಣಗೊಳ್ಳಲು 10 ವರ್ಷಗಳು, 12 ವರ್ಷಗಳು, 15 ವರ್ಷಗಳು ಹಿಡಿಯುವುದು ಸಾಮಾನ್ಯವಾಗಿತ್ತು. ನಿಗದಿತ ಸಮಯದಲ್ಲಿ ಕಾರ್ಯ ಪೂರ್ಣಗೊಳಿಸುವ ಸಂಸ್ಕೃತಿಯನ್ನು ನಾವು ಗುಜರಾತ್ ನಲ್ಲಿ ಪ್ರಾರಂಭಿಸಿದೆವು, ಇಂದು ಸಂಪೂರ್ಣ ಹಿಂದೂಸ್ತಾನದಲ್ಲಿ ಇದನ್ನು ಜಾರಿಗೊಳಿಸುವುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ.

ಸಹೋದರ, ಸಹೋದರಿಯರೇ, ಇಂದು ನನಗೆ ದಹೇಜ್ ಗೆ ಭೇಟಿ ನೀಡುವ ಸೌಭಾಗ್ಯ ಲಭಿಸಿದೆ. ದಹೇಜ್ ಅನ್ನು ಯಾರೂ ಕಲ್ಪನೆ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಅದು ಕೇವಲ ಭರೂಚ್ ನ ಆಭರಣವಲ್ಲ, ಸಂಪೂರ್ಣ ಹಿಂದೂಸ್ತಾನದ ಆಭರಣ. ಇದು ಈಗ ಬೆಳೆಯುತ್ತಿರುವ ವೇಗದಲ್ಲಿ ಸಂಪೂರ್ಣ ಅಭಿವೃದ್ಧಿ ಹೊಂದಿದರೆ ಸರಿ ಸುಮಾರು 8 ಲಕ್ಷ ಜನರಿಗೆ ಉದ್ಯೋಗಾವಕಾಶಗಳು ಲಭಿಸಬಹುದು. ಈ ಪ್ರದೇಶದಲ್ಲಿ ಇಷ್ಟು ದೊಡ್ಡ ಉದ್ಯೋಗಾವಕಾಶಗಳು, ತಾವು ಕಲ್ಪನೆ ಮಾಡಿಕೊಳ್ಳಿ. ಮುಂಬರುವ ದಿನಗಳಲ್ಲಿ ಈ ಪ್ರದೇಶದ ಸ್ಥಿತಿ ಹೇಗಿರುತ್ತದೆ ಎಂದು. ನಾನು ಆಗ್ಗಿಂದಾಗ್ಗೆ ದಹೇಜ್ ಗೆ ಭೇಟಿ ನೀಡುತ್ತಿದ್ದೆ, ಇದು ತಮಗೆಲ್ಲರಿಗೂ ಗೊತ್ತಿದೆ. ಅದರ ಪ್ರತಿ ಕಣಕಣವನ್ನು ನಾನು ಬಲ್ಲೆ. ನನ್ನ ಕಣ್ಣುಗಳಿಂದ ಅದರ ಅಭಿವೃದ್ದಿಯನ್ನು ನೋಡಿದ್ದೇನೆ. ಇಂದು ಪರಿಪೂರ್ಣತೆಯೆಡೆಗೆ ಹೆಜ್ಜೆ ಇಡುತ್ತಿದೆ. ಪಿಸಿಪಿಆರ್, ಧೇಜ್, ಓಪಲ್.. ಸಹೋದರ, ಸಹೋದರಿಯರೇ ದೇಶದ ಆರ್ಥಿಕತೆಗೆ ಒಂದು ಹೊಸ ಶಕ್ತಿ ಲಭಿಸಲಿದೆ. ಇದು ಭರೂಚ್ ನ ನೆಲದಿಂದ ಲಭಿಸಲಿದೆ. ನಾನು ತಮಗೆಲ್ಲರಿಗೂ ತುಂಬು ಹೃದಯದ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ.

ಈ ಬಸ್ ಬಂದರಿನ ಕಲ್ಪನೆಯ ಸಾಕಾರಕ್ಕಾಗಿ ನಾನು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಮನಸ್ಸಿನಲ್ಲಿ ಒಂದು ವಿಚಾರ ಹೊಳೆಯುತ್ತಿತ್ತು. ಒಬ್ಬ ಹಣವಂತ ವಿಮಾನ ನಿಲ್ದಾಣಕ್ಕೆ ಹೋಗುತ್ತಾನೆ, ವಿಮಾನದಲ್ಲಿ ಪ್ರಯಾಣಿಸಲು ಹೊರಡುವ ಅವನಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ತಂಪು ಹವಾ, ತಂಪನೆಯ ನೀರು, ಅವನು ಏನನ್ನು ತಿನ್ನಲು ಬಯಸುತ್ತಾನೋ , ತಿನ್ನಲು ದೊರಕುತ್ತದೆ. ಹಾಗಾದರೆ ನನ್ನ ದೇಶದ ಬಡವರಿಗೆ ಈ ಸೌಲಭ್ಯ ದೊರಕಬಾರದೆ. ವಿಮಾನದಲ್ಲಿ ಪ್ರಯಾಣಿಸುವವರಿಗೆ ಮಾತ್ರ ಈ ಎಲ್ಲ ಸೌಲಭ್ಯಗಳು ದೊರಕಬೇಕೆ? ಈ ವಿಷಯ ನನ್ನ ಮನಸನ್ನು ಸದಾ ಕೊರೆಯುತ್ತಿತ್ತು.

ಇವೆಲ್ಲವುಗಳ ಪರಿಣಾಮವಾಗಿ ಇಂದು ವಡೋದರದ ಬರೋಡ ನಲ್ಲಿ ಮೊಟ್ಟ ಮೊದಲ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಒಂದು ಬಸ್ ನಿಲ್ದಾಣದ ನಿರ್ಮಾಣವಾಗಿದೆ. ಇದರ ವಿಡಿಯೋವನ್ನು ವಿಶ್ವಾದ್ಯಂತ ಲಕ್ಷಾಂತರ ಮಂದಿ ಯೂ ಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. ಬಸ್ ನಿಲ್ದಾಣಗಳು ಈ ರೀತಿಯಾಗಿಯೂ ಇರಬಲ್ಲದಾ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಸ್ಸುಗಳಲ್ಲಿ ಕಡು ಬಡವರು ಪ್ರಯಾಣಿಸುತ್ತಾರೆ. ಕಡುಬಡವ ವ್ಯಕ್ತಿಗಳು ತಮ್ಮ ಕೈಯಲ್ಲಿ ಚೀಲ ಹಿಡಿದುಕೊಂಡು ಪ್ರಯಾಣ ಮಾಡುತ್ತಾರೆ. ಬೀಡಿ ಸೇದುತ್ತಾರೆ, ಎಲ್ಲೆಂದರಲ್ಲಿ ಬೀಡಿಯನ್ನು ಬಿಸಾಡುತ್ತಾರೆ. ಇಂದು ತಾವು ಬರೋಡಾಗೆ ಹೋಗಿ ನೋಡಿ, ಸಂಪೂರ್ಣ ಸ್ವಚ್ಚ ಬಸ್ ನಿಲ್ದಾಣ, ಅದೇ ರೀತಿಯಲ್ಲಿ ಅಹಮದಾಬಾದ್ ನಲ್ಲಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಬಹುಶ: ನಾಲ್ಕು ನಿಲ್ದಾಣಗಳ ನಿರ್ಮಾಣವಾಗಿದೆ. ಇದೇ ರೀತಿಯ ಬಸ್ ನಿಲ್ದಾಣವನ್ನು ಭರೂಚ್ ನಲ್ಲಿ ನಿರ್ಮಿಸಲು ಸರ್ಕಾರ ಮುಂದಾಗಿರುವುದು ನನಗೆ ಸಂತೋಷವನ್ನುಂಟುಮಾಡಿದೆ.

ಭರೊಚ್ ನಿಂದ ಸರ್ದಾರ್ ಸರೋವರ್ ಡ್ಯಾಮ್ ತನಕ ಸರಿಸುಮಾರು ೧೨೫ ರಿಂದ 150 ಕಿಲೋಮೀಟರ್ ತನಕ ಸಂಪೂರ್ಣ ನೀರಿನಿಂದ ತುಂಬಿದ್ದರೆ ಎಷ್ಟು ಆನಂದವಾಗುತ್ತದೆ ಎಂಬುದನ್ನು ತಾವೊಮ್ಮೆ ಕಲ್ಪನೆ ಮಾಡಿಕೊಳ್ಳಿ. ಆ ಸಂಪೂರ್ಣ ನೀರು ಹೊಲ ಗದ್ದೆಗಳಿಗೆ ಹರಿದು ಸುಮಾರು 150 ಕಿಲೋಮೀಟರ್ ಪ್ರದೇಶದ ಎರಡೂ ಕಡೆ 20-20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಜಲ ಮೇಲೆ ಬರುತ್ತದೆ.

ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭರೂಚ್ ನಲ್ಲಿ ಈ ಮಾತು ಕೇಳಿ ಬರುತ್ತಿತ್ತು. ಆಗ ರಮೇಶ್ ಎಂಬುವವರು ಇಲ್ಲಿನ ಶಾಸಕರಾಗಿದ್ದರು. ಆ ಸಮಯದಲ್ಲೂ ಇಲ್ಲಿ ಕೇಳಿಬರುತ್ತಿದ್ದ ಮಾತು ಕುಡಿಯಲು ನೀರು. ನಾನು ನನ್ನ ಕಣ್ಣ ಮುಂದಿನ ಚಿತ್ರವನ್ನು ನೋಡುತ್ತಿದ್ದೇನೆ. ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ಪ್ರತಿಮೆ ತಯಾರಾಗುತ್ತಿದೆ. ಏಕತೆಯ ಪ್ರತಿಮೆ. ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರು ಬರುತ್ತಾರೆ. ಕೆವಡಿಯಾ ಕೊರಿನ್ ತನಕ ಅತ್ಯಂತ ಉತ್ತಮವಾದ ರಸ್ತೆಯನ್ನು ನಮ್ಮ ನಿತಿನ್ ಗಡ್ಕರಿ ಅವರ ತಂಡ ಸಿದ್ಧ ಮಾಡುತ್ತಿದೆ. ನಾನು ಮತ್ತೊಂದು ಸಂಭನೀಯತೆಯ ಬಗ್ಗೆಯೂ ನಿತಿನ್ ಜೀ ಅವರಿಗೆ ತಿಳಿಸಿದ್ದೇನೆ, ನರ್ಮದೆಯಲ್ಲಿ ನೀರಿನ ಹರಿವಿದ್ದರೆ ನಾವುಗಳು ಪ್ರವಾಸಿಗರನ್ನು ಚಿಕ್ಕ ಚಿಕ್ಕ ಸ್ಟೀಮರ್ ಗಳ ಮೂಲಕ ಸರ್ದಾರ್ ಸರೋವರ್ ಡ್ಯಾಮ್ ತನಕ ಕರೆದುಕೊಂಡು ಹೋಗಬಹುದಲ್ಲವೇ? ಇದಕ್ಕಾಗಿ ಈಗಿನಿಂದಲೇ ಸಿದ್ಧತೆಗಳನ್ನು ಪ್ರಾರಂಭ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ.

ಗೋವಾದಲ್ಲಿ ಜನ್ಮದಿನ ಆಚರಿಸಿಕೊಳ್ಳಬಯಸುವ ಜನ ಚಿಕ್ಕ ಚಿಕ್ಕ ಸ್ಟೀಮರ್ ಗಳ ಮೂಲಕ ಸಮುದ್ರದ ಮಧ್ಯ ಹೊರಟುಹೋಗುತ್ತಾರೆ. ಈ ಪ್ರದೇಶದ ಜನತೆ ಕೂಡಾ ಜನ್ಮದಿನ ಆಚರಿಸಿಕೊಳ್ಳುವುದಿದ್ದರೆ ಇಲ್ಲಿಗೆ ಬರುತ್ತಾರೆ, ಭರೂಚ್ ಜನರಂತೂ ಬಂದೇ ಬರುತ್ತಾರೆ.

ಸಹೋದರ, ಸಹೋದರಿಯರೆ, ಒಂದು ವ್ಯವಸ್ಥೆಯ ಮೂಲಕ ಎಷ್ಟೊಂದು ಬದಲಾವಣೆಗಳನ್ನು ತರಬಹುದು. ದೃಷ್ಟಿ ಸ್ಪಷ್ಟವಾಗಿದ್ದರೆ, ಮಾರ್ಗ ಸರಿಯಾಗಿದ್ದರೆ, ನಿಯಮಗಳು ಪಾರದರ್ಶಕವಾಗಿದ್ದರೆ, ಯಶಸ್ಸಿಗೆ ಯಾವುದೇ ಅಡೆ ತಡೆಗಳು ಇರುವುದಿಲ್ಲ ಯಶಸ್ಸು ಸಿಕ್ಕೆ ಸಿಗುತ್ತದೆ.

ಸಹೋದರ, ಸಹೋದರಿಯರೆ.
ನಾನಿಂದು ಗುಜರಾತಿಗೆ ಆಗಮಿಸಿದ್ದೇನೆ, ನಿತಿನ್ ಜೀ ಅವರು ಇಲ್ಲಿಗೆ ಬಂದಿದ್ದಾರೆ. ಅವರ ವಿಭಾಗದ ಘೋಷಣೆಯನ್ನು ನಾನು ಮಾಡಬೇಕೆಂದು ನಿತಿನ್ ಜೀ ಅವರ ಇಚ್ಚೆಯಾಗಿದೆ. ಘೋಷಣೆಯನ್ನು ನಾನು ಮಾಡುತ್ತೇನೆ, ಆದರೆ ಅದರ ಶ್ರೇಯಸ್ಸು ನಿತಿನ್ ಜೀ ಅವರಿಗೆ ಸಲ್ಲುತ್ತದೆ. ಇದು ಅವರ ಕಲ್ಪನೆಯ ಕೂಸು. ಅವರ ಸಾಹಸಪೂರ್ಣ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯದ ಪರಿಣಾಮವಿದು. ಅವರ ವಿಭಾಗ ನಿರ್ಣಯ ತೆಗೆದುಕೊಂಡಿದೆ, ನನಗೆ ಸಂತೋಷವಾಗುವುದು ಸ್ವಾಭಾವಿಕ. ಅವರು ಗುಜರಾತ್ ನ ಎಂಟು ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತನೆ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ.

ಇದನ್ನು ಮಾಡಲು ಸುಮಾರು 12 ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಬೇಕಾಗುತ್ತದೆ. 12 ಸಾವಿರ ಕೋಟಿ ರೂಪಾಯಿ. ಕೇವಲ ನಿತಿನ್ ಜೀ ಅವರ ವಿಭಾಗ ಈ 8 ರಸ್ತೆಗಳ ಮೇಲೆ 12 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ. ಇದು ಗುಜರಾತ್ ನ ಮೂಲಭೂತ ಸೌಕರ್ಯಗಳಿಗೆ ಮೆರುಗು ನೀಡಲಿದೆ. ಸಹೋದರ ಸಹೋದರಿಯರೆ. ಈ 8 ರಸ್ತೆಗಳ ಉದ್ದ ಸರಿ ಸುಮಾರು 1200 ಕಿಲೋಮೀಟರ್ ಗಳು. ಇದರಲ್ಲಿ ರಾಜ್ಯ ಹೆದ್ದಾರಿಯಲ್ಲಿದ್ದ ಊನ್, ಧಾರಿ, ಬಗ್ಸರಾ, ಅಮ್ರೆಲಿ, ಬಾಬ್ರಾ, ಜಸ್ದನ್, ಚೋಟಿಲಾಗಳು ರಾಷ್ಟ್ರೀಯ ಹೆದ್ದಾರಿಗಳಾಗಲಿವೆ. ರಾಜ್ಯ ಹೆದ್ದಾರಿಗಳಾದ ನಾಗೆಸರಿ, ಖಾಂಬಾ, ಚಲಾಲಾ. ಅಮರೆಲಿ ಮಾರ್ಗಗಳು ರಾಷ್ಟ್ರೀಯ ಹೆದ್ದಾರಿಗಳಾಗಲಿವೆ. ಪೋರ್ ಬಂದರ್, ಬಾನ್ ವಡ್, ಜಾಮ್-ಜೋಧಪುರ್, ತಾಲಾವಾಡ ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಲಿವೆ. ಆಣಂದ್, ಕಟ್ವಾಲ್, ಕಪರ್ವಂಚ್, ಪಾಯಡ್, ಧನ್ಸುರಾ, ಮೋಡಾಸಾ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳಾಗಲಿವೆ. ಸಂಪೂರ್ಣ ಬುಡಕಟ್ಟು ಪ್ರದೇಶಗಳಿಗೆ ಇದರಿಂದ ಹೆಚ್ಚು ಲಾಭ ದೊರಕಲಿದೆ. ಲಖ್ಪತ್, ಕಛ್ ಪ್ರದೇಶಗಳ ಅಭಿವೃದ್ದಿಯಾಗಲಿದೆ. ದೌಲಾವಿರಾದ ಅಭಿವೃದ್ಧಿ ಮಾಡಬೇಕಿದೆ, ಪ್ರವಾಸೋದ್ಯಮವನ್ನು ಹೆಚ್ಚಿಸಬೇಕಿದೆ.

ಲಖ್ಪತ್, ಗಢೂಲಿ, ಹಾಜಿಪುರ್, ಖಾವಡಾ, ಮೌವಾನ, ಸಾಂಕಲಪುರ್, ನೀವು ಇದನ್ನು ಹಿಂದೂಸ್ತಾನದ ಗಡಿಯ ರಕ್ಷಣೆಯೆನ್ನಿ, ಕಛ್ ನ ಪ್ರವಾಸೋದ್ಯಮದ ಅಭಿವೃದ್ಧಿಯೆನ್ನಿ, ಮಾನಸ ಸಂಸ್ಕೃತಿಯ 5 ಸಾವಿರ ವರ್ಷಗಳಷ್ಟು ಪುರಾತನ ಹಾಗೂ ಹೆಸರಾಂತ ನಗರ ದೌಲಾವಿರಾ ಒಂದು ಮೂಲೆಯಲ್ಲಿದೆ. ಅದು ಕೇಂದ್ರಬಿಂದುವಾದಾಗ, ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತದೆ, ಇದರಿಂದ ಗುಜರಾತಿಗೆ ಲಾಭವಾಗುತ್ತದೆ.

ಖಂಬಾಲಿಯ, ಅಡ್ವಾನಾ, ಪೋರ್ ಬಂದರ್, ಚಿತೌಢಾ, ರಾಪರ್, ದೌಲಾವಿರಾ, ಖಂಬಾಲಿಯಾ, ವಾಣ್ವಡ್, ರಾಣ್ವಾ ಮುಂತಾದ ನಗರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಇಲ್ಲಿನ ಜನತೆಗೆ ಉದ್ಯೋಗಾವಕಾಶ ಲಭಿಸುತ್ತದೆ. ಉದ್ಯೋಗ ಲಭಿಸುತ್ತದೆ, ಇದು ಆಗಲೇಬೇಕಾಗಿದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಯಾವುದೋ ಕಾರಣದಿಂದ ನಾವು ನಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದೇವೆ. ಯುವಕರು ಬಹಳ ಉತ್ಸಾಹದಿಂದ ವೇಗವಾಗಿ ವಾಹನವನ್ನು ಚಲಾಯಿಸುತ್ತಾರೆ, ಮೋಟರ್ ಸೈಕಲ್ ಗಳನ್ನು ವೇಗವಾಗಿ ಚಲಾಯಿಸುತ್ತಾರೆ, ಈ ಕಾರಣದಿಂದ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿರ್ಮಾಣದಿಂದ ಅಪಘಾತಗಳನ್ನು ಬಹಳ ಮಟ್ಟಿಗೆ ನಿಯಂತ್ರಿಸಬಹುದಾಗಿದೆ, ಯಾಕೆಂದರೆ ಈ ರಸ್ತೆಯ ರಚನೆ ಆ ರೀತಿ ಇರುತ್ತದೆ. ಇದು ಒಂದು ರೀತಿಯ ಮಾನವತೆಯ ಕಾರ್ಯವೂ ಆಗಿದೆ.

ತಮಗೆ ನೆನಪಿರಬಹುದು, ದಿನಂಪ್ರತಿ ಅಹಮದಾಬಾದ್, ರಾಜ್ ಕೋಟ್, ಬಗೋದರಾಗಳಲ್ಲಿ ಅಪಘಾತಗಳಿಲ್ಲದ ದಿನಗಳಿರುತ್ತಿರಲಿಲ್ಲ, ಪ್ರತಿದಿನ ಅಪಘಾತಗಳಿಂದ ಹಲವು ಜನ ಪ್ರಾಣ ಕಳೆದುಕೊಳ್ಳುತ್ತಿದ್ದರು. ಪ್ರತಿದಿನ ರಾಜ್ ಕೋಟ್ ನಿಂದ ಪ್ರಯಾಣಿಸುವಾಗ ಇಂತಹ ಅನೇಕ ದೃಶ್ಯಗಳನ್ನು ಕೇಶುಭಾಯಿ ಪಟೇಲ್ ಅವರು ನೋಡಿದ್ದರು. ನಮ್ಮ ಪಕ್ಷದ ಅನೇಕ ವರಿಷ್ಠ ನಾಯಕರು ಅಹಮದಾಬಾದ್ – ರಾಜ್ ಕೋಟ್ ಹೆದ್ದಾರಿಯಲ್ಲಿ ನಡೆದ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ನಾನು ರಾಜಕಾರಣಕ್ಕೆ ಬರುವ ಮೊದಲು, ಅಹಮದಾಬಾದ್ ನಲ್ಲಿದ್ದ ವೇಳೆ ನನಗೆ ರಾತ್ರಿಯ ಸಮಯದಲ್ಲಿ ಈ ರೀತಿಯ ಅಪಘಾತಗಳಾದ ಬಗ್ಗೆ ಬಹಳಷ್ಟು ದೂರವಾಣಿ ಕರೆಗಳು ಬರುತ್ತಿದ್ದವು. ಅಹಮದಾಬಾದ್ – ರಾಜ್ ಕೋಟ್ ನಡುವಣ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾರ್ಪಡಿಸಿದ ನಂತರ ಅಪಘಾತಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ.

ಈ ರೀತಿಯ ಸುರಕ್ಷತೆಯ ದೃಷ್ಟಿಯಿಂದ, ಮಾನವೀಯತೆಯ ದೃಷ್ಟಿಯಿಂದ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತಿದೆ. ರಸ್ತೆಗಳ ಮಾದರಿಯನ್ನು ಕೂಡಾ ನಾವು ಬದಲಿಸಿದ್ದೇವೆ. ರಸ್ತೆಗಳಲ್ಲಿ ಅಭಿವೃದ್ಧಿಯ ಜತೆಜತೆಗೆ, ರಸ್ತೆಗಳ ಸಮೀಪ ಹೆಲಿಪ್ಯಾಡ್ ಗಳ ನಿರ್ಮಾಣ, ರಸ್ತೆಗಳ ಸಮೀಪ ಹೋಟೆಲ್ ಗಳು, ಶೌಚಾಲಯಗಳು ಈ ಎಲ್ಲ ಸೌಲಭ್ಯಗಳಿರಬೇಕಾಗಿದೆ. ಜನತೆ ನಿತ್ಯ ಪ್ರಯಾಣಿಸುತ್ತಿರುತ್ತಾರೆ, ಅವರಿಗೆ ಈ ಸೌಲಭ್ಯಗಳ ಅವಶ್ಯಕತೆ ಇರುತ್ತದೆ, ಶೌಚಾಲಯದ ಅವಶ್ಯಕತೆ ಇರುತ್ತದೆ. ಈ ಎಲ್ಲ ಸೌಲಭ್ಯಗಳನ್ನು ಒಳಗೊಂಡ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ದಿಶೆಯಲ್ಲಿ ನಿತಿನ್ ಜೀ ಹೊಸ ಕನಸುಗಳನ್ನು ಹೊತ್ತು ಕಾರ್ಯಪ್ರವೃತ್ತರಾಗಿದ್ದಾರೆ.

ಸಾಗರ ಮಾಲಾ ಯೋಜನೆ, ದೆಹಲಿಯಲ್ಲಿ ಕುಳಿತಿರುವ ಸರ್ಕಾರ ಪ್ರತಿಯೊಂದನ್ನು ಬೇರೆ ಬೇರೆಯಾಗಿ ಯೋಚಿಸುವುದಿಲ್ಲ. ನಾವು ಸಮಸ್ಯೆಗಳ ಪರಿಹಾರದ ಬಗ್ಗೆ ಚಿಂತಿಸುತ್ತೇವೆ. ನಾವೊಂದು ಸಾಗರಮಾಲಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ, ಈ ಸಾಗರಮಾಲಾ ಯೋಜನೆಯನ್ವಯ ಸಂಪೂರ್ಣ ಭಾರತ ನಕ್ಷೆಯನ್ನು ರಚಿಸಿ ತಾವು ಎಲ್ಲಿಂದ ಪ್ರಾರಂಭ ಮಾಡುತ್ತೀರೋ, ಅದು ಸಂಪೂರ್ಣ ಮೂಲಸೌಕರ್ಯಗಳಿಂದ ಕೂಡಿರಬೇಕು. ರಸ್ತೆಗಳು ಎಲ್ಲಿಯೂ ಕೂಡಾ ಸಂಪರ್ಕ ಕಳೆದುಕೊಳ್ಳಬಾರದು, ಯಾವ ರಸ್ತೆಯಿಂದ ಹೊರಡುತ್ತೇವೆಯೋ ಅದೇ ರಸ್ತೆಯಲ್ಲಿ ತಾವು ಸಂಪೂರ್ಣ ಭಾರತದ ಪರಿಭ್ರಮಣ ಮಾಡಿ ಹಿಂತಿರುಗುತ್ತೀರಿ. ಈ ರೀತಿಯ ಒಂದು ಯೋಜನೆ ಸಾಗರ ಮಾಲಾ ಯೋಜನೆ, “ಭಾರತ ಮಾಲಾ” ಯೋಜನೆಯನ್ನು ನಾವು ಸಿದ್ಧ ಮಾಡುತ್ತಿದ್ದೇವೆ. ಈ ಭಾರತ ಮಾಲಾ ಯೋಜನೆಯಲ್ಲಿ ರಸ್ತೆಯ ಜಾಲವಿರುತ್ತದೆ. ಸಾಗರಮಾಲಾ ಯೋಜನೆಯಲ್ಲಿ ಸಮುದ್ರ ತೀರದ ಮೂಲಸೌಕರ್ಯಗಳ ಕಾರ್ಯ ನಡೆಯುತ್ತದೆ. ಈ ಭಾರತ್ ಮಾಲಾ ಮತ್ತು ಸಾಗರ್ ಮಾಲಾ ಯೋಜನೆಗಳು ಬಂದರು – ರಸ್ತೆ ಅಭಿವೃದ್ಧಿಗೆ ಒಂದು ಹೊಸ ಬಲ ನೀಡುತ್ತದೆ. ಸಾಗರ್ ಮಾಲಾ ಯೋಜನೆಯಡಿ ಮುಂಬರುವ ವರ್ಷಗಳಲ್ಲಿ ಬಂದರು ಉದ್ಯಮಕ್ಕೆ 8 ಲಕ್ಷ ಕೋಟಿ ರೂಪಾಯಿ ಹೊಸ ಬಂಡವಾಳ ಬರುವ ನಿರೀಕ್ಷೆ ಇದೆ. ಈ ದಿಶೆಯಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಇದರ ಪರಿಣಾಮವಾಗಿ ಗುಜರಾತಿಗೆ ಹೆಚ್ಚಿನ ಲಾಭ ದೊರಕಲಿದೆ. ಇಲ್ಲಿನ ಬಂದರಿಗೆ ಹೊಂದಿಕೊಂಡಿರುವ ರೈಲು, ರಸ್ತೆ ಸಂಪರ್ಕಗಳಿಗೆ ಹೆಚ್ಚಿನ ಲಾಭ ದೊರಕಲಿದೆ.

ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆಯನ್ನು ನಾವು ಪ್ರಾರಂಭಿಸಿದ್ದೇವೆ. ನಮ್ಮ ಸರ್ಕಾರಗಳ ಕಾರ್ಯ ವೈಖರಿಯನ್ನು ನೋಡಿದರೆ ತಾವು ಆಶ್ಚರ್ಯಚಕಿತರಾಗುತ್ತೀರಿ. ಅಣೆಕಟ್ಟುಗಳ ನಿರ್ಮಾಣವಾಗಿದೆ. ಆದರೆ ಅಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರನ್ನು ಎಲ್ಲಿಗೆ ತೆಗೆದುಕೊಂಡು ಹೋಗುವುದು, ಹೇಗೆ ತೆಗೆದುಕೊಂಡು ಹೋಗುವುದು ಎಂಬ ಬಗ್ಗೆ ಯಾವುದೇ ಯೋಜನೆಯೂ ಸಿದ್ಧವಾಗಿಲ್ಲ. 20 – 20 ವರ್ಷಗಳ ಹಿಂದೆ ಅಣೆಕಟ್ಟುಗಳ ನಿರ್ಮಾಣವಾಗಿದೆ. ನೀರು ಸಂಗ್ರಹವಾಗಿದೆ. ಕಾಲುವೆಗಳೇ ಇಲ್ಲ. ನಾನು ಇವೆಲ್ಲವುಗಳ ಅವಲೋಕನ ಮಾಡಿದ್ದೇನೆ. ಸುಮಾರು 90 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿ ಕೃಷಿ ನೀರಾವರಿ ಯೋಜನೆಯಡಿ ಅಣೆಕಟ್ಟೆಯಿಂದ ಜಮೀನಿನವರೆಗೆ ಸಂಪೂರ್ಣ ನೀರಾವರಿ ಸಂಪರ್ಕವನ್ನು ನಿರ್ಮಿಸುವುದು, 90 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ರೈತ ಜಮೀನುಗಳಿ ನೀರು ಹರಿಸುವ ಹಾಗೂ ಸಂಪೂರ್ಣ ದೇಶದಲ್ಲಿ ಈ ರೀತಿ ನಿಂತುಹೋಗಿರುವ ಯೋಜನೆಗಳನ್ನು ಪೂರ್ಣ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ.

ದೇಶ ಆಧುನಿಕವಾಗಬೇಕಿದೆ. ನಾವು ಸಂಪ್ರದಾಯವಾದಿ ಜೀವನ ಸಾಗಿಸಲು ಸಾಧ್ಯವಿಲ್ಲ. 20ನೇ ಶತಮಾನದಲ್ಲಿದ್ದು ನಾವು 21ನೇ ಶತಮಾನವನ್ನು ಎದುರಿಸಲು ಸಾಧ್ಯವಿಲ್ಲ. ನಾವು 21ನೇ ಶತಮಾನದಲ್ಲಿ ಜಾಗತಿಕ ಸವಾಲನ್ನು ಎದುರಿಸಬೇಕಾದರೆ ನಮ್ಮನ್ನು ನಾವು 21ನೇ ಶತಮಾನಕ್ಕೆ ಕೊಂಡೊಯ್ಯಬೇಕಾಗಿದೆ. ಸಹೋದರ, ಸಹೋದರಿಯರೆ, ಭಾರತ ಇಂದು ಜಗತ್ತಿಗೆ ಸರಿಸಮಾನವಾಗಿ ಸ್ಪರ್ಧಿಸುವುದಕ್ಕೆ ಸಜ್ಜಾಗಿದೆ. ಇಂದು ನಾವು ನಮ್ಮ ಮನೆಗಳಲ್ಲಿ, ನಾನು, ನೀನು, ಅವನು, ಇವನು ಎಂದು ಕಾಲಹರಣ ಮಾಡುವವರಾಗಿಲ್ಲ, ನಾವು ಜಗತ್ತಿನ ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ ಗಳಿಸಿಕೊಡುವಲ್ಲಿ ಕಾರ್ಯತತ್ಪರರಾಗಿದ್ದೇವೆ. ಇದಕ್ಕಾಗಿ 21ನೇ ಶತಮಾನದ ಆವಶ್ಯಕತೆಗೆ ಅನುಗುಣವಾಗಿ ಹಿಂದೂಸ್ತಾನವನ್ನು ಸಿದ್ಧ ಮಾಡಬೇಕಿದೆ. ನಮಗೆ ಯಾವ ರೀತಿಯ ಹೆದ್ದಾರಿ ಬೇಕಿದೆಯೋ ಅದೇ ರೀತಿ “ಐ ವೇ” ಕೂಡಾ ಬೇಕಿದೆ. “ಐ ವೇ” ಅಂದರೆ ನನ್ನ ಅರ್ಥದಲ್ಲಿ ಮಾಹಿತಿ ಹೆದ್ದಾರಿ. ಸಂಪೂರ್ಣ ದೇಶದಲ್ಲಿ ಆಪ್ಟಿಕಲ್ ಫೈಬರ್ ನೆಟ್ ವರ್ಕ, ಈಗ ದೇಶದಲ್ಲಿ ಯಾವ ರೀತಿ ಸೇತುವೆ ನಿರ್ಮಾಣ ಪ್ರಾರಂಭವಾಗುತ್ತಿದ್ದಂತೆ, ಕೆಲವರು ಇದರ ಶ್ರೇಯಸ್ಸನ್ನು ಪಡೆಯಲು ತುದಿಗಾಲಲ್ಲಿ ನಿಂತಿರುತ್ತಾರೆ, ಇದರ ಲಾಭವನ್ನು ಪಡೆಯಿರಿ, ಏನಾದರೂ ಮಾತನಾಡಿ, ಲಾಭ ಪಡೆಯಿರಿ, ಮಾಡುವುದಕ್ಕೇನು ಇಲ್ಲ.

ಸಹೋದರ ಸಹೋದರಿಯರೆ, ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಆಪ್ಟಿಕಲ್ ಫೈಬರ್ ನೆಟ್ ವರ್ಕ್ ಯೋಜನೆ ಸಿದ್ಧವಾಗಿತ್ತು. ನಾನು ಪ್ರಧಾನಮಂತ್ರಿಯಾದ ಸಂದರ್ಭದವರೆಗೆ ಅವರಿಗೆ 1.25 ಲಕ್ಷ ಹಳ್ಳಿಗಳಲ್ಲಿ ಈ ಯೋಜನೆ ಪೂರ್ಣಮಾಡಬೇಕೆಂದು ಅವರ ದಾಖಲೆಗಳಲ್ಲಿ ನಮೂದಾಗಿತ್ತು. 2014 ರ ಮಾರ್ಚ್ ತನಕ 1.25 ಲಕ್ಷ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ನೆಟ್ ವರ್ಕ್ ಹಾಕಬೇಕು ಎಂಬುದು ಹಿಂದಿನ ಸರ್ಕಾರದ ನಿರ್ಣಯವಾಗಿತ್ತು. ಇದಕ್ಕಾಗಿ ಯೋಜನೆ ಸಿದ್ಧವಾಗಿತ್ತು. ನಾನು ಪ್ರಧಾನಮಂತ್ರಿಯಾದ ನಂತರ 1.25 ಲಕ್ಷ ಹಳ್ಳಿಗಳ ಪೈಕಿ ಎಷ್ಟು ಹಳ್ಳಿಗಳಲ್ಲಿ ಯೋಜನೆ ಜಾರಿಯಾಗಿದೆ ಎಂಬುದರ ಬಗ್ಗೆ ವಿಚಾರಿಸಿದಾಗ 1.25 ಲಕ್ಷ ಹಳ್ಳಿಗಳ ಪೈಕಿ ಎಷ್ಟು ಹಳ್ಳಿಗಳಲ್ಲಿ ಆಗಿರಬಹುದೆಂದು ತಾವು ಅಂದಾಜು ಮಾಡುವಿರಿ? ಎಷ್ಟಾಗಿರಬಹುದು? ಕೆಲವರು ಒಂದು ಲಕ್ಷವಾಗಿರಬಹುದೆಂದು ಯೋಚಿಸಿರುತ್ತಾರೆ, ಕೆಲವರು 50 ಸಾವಿರ ಎನ್ನಬಹುದು. ನಾನು ಈ ಬಗ್ಗೆ ಅಂಕಿ ಅಂಶ ಪರಿಶೀಲಿಸಿದಾಗ ಕೇವಲ 59 ಹಳ್ಳಿಗಳು, 50 ಮತ್ತು 9 ಹಳ್ಳಿಗಳು, 60 ಕೂಡಾ ಅಲ್ಲ. ಇಷ್ಟು ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಹಾಕಲಾಗಿತ್ತು.

ಇದು ಅವರು ಕಾರ್ಯ ನಿರ್ವಹಿಸುವ ವೈಖರಿ. ನಾವು ಈ ಕಾರ್ಯವನ್ನು ಕೈಗೆತ್ತಿಕೊಂಡೆವು. ನಮ್ಮ ದೇಶದಲ್ಲಿ ಎರಡೂವರೆ ಲಕ್ಷ ಪಂಚಾಯತಿಗಳಿವೆ. ಈ ಎರಡೂವರೆ ಲಕ್ಷ ಪಂಚಾಯತಿಗಳಿಗೆ ಆಪ್ಟಿಕಲ್ ಫೈಬರ್ ನೆಟ್ ವರ್ಕ್ ಹಾಕಬೇಕಾಗಿದೆ. ಇಲ್ಲಿಯವರೆಗೆ 68 ಸಾವಿರ ಹಳ್ಳಿಗಳಿಗಲ್ಲಿ ಕಾರ್ಯ ಪೂರ್ಣಗೊಂಡಿದೆ. ಎಲ್ಲಿಯ 59 ಹಾಗೂ ಎಲ್ಲಿಯ 60 ಸಾವಿರ. ಇದೇ ವ್ಯತ್ಯಾಸ ಸಹೋದರ ಸಹೋದರಿಯರೆ. ಜನತಾ ಜನಾರ್ಧನ ಒಳಿತನ್ನು ಮಾಡುವ ಉದ್ದೇಶವಿದ್ದರೆ, ಕಾರ್ಯದಲ್ಲಿ ಎಂದಿಗೂ ಯಾವುದೇ ಅಡೆತಡೆ ಬರುವುದಿಲ್ಲ. ಜನತೆಯ ಸಹಯೋಗವೂ ಇದ್ದರೆ ಕಾರ್ಯ ಸುಗಮವಾಗುತ್ತದೆ, ದೇಶ ಮುನ್ನಡೆಯುತ್ತದೆ.

ಅನಿಲ ಪೈಪ್ ಲೈನ್, ಆಪ್ಟಿಕಲ್ ಫೈಬರ್ ನೆಟ್ ವರ್ಕ್, ನೀರಿನ ವ್ಯವಸ್ಥೆ. 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುತ್ತದೆ. 2022ರ ವೇಳೆಗೆ ದೇಶದ ಕಡುಬಡವನಿಗೂ ವಾಸಿಸಲು ತನ್ನದೇ ಆದ ಒಂದು ಸೂರು ಇರಬೇಕೆಂಬ ಕನಸನ್ನು ನಾವು ಕಂಡಿದ್ದೇವೆ, ಈ ಬಗ್ಗೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಜಗತ್ತಿನ ಚಿಕ್ಕ ಚಿಕ್ಕ ರಾಷ್ಟ್ರಗಳೂ ಕೂಡಾ ಈ ಬಗ್ಗೆ ಮಾತನಾಡುತ್ತಿವೆ. ಒಂದು ರೀತಿಯಲ್ಲಿ ಭಾರತದಲ್ಲಿ ಒಂದು ಪುಟ್ಟ ರಾಷ್ಟ್ರವನ್ನು ನಿರ್ಮಿಸುವ ರೀತಿಯಲ್ಲಿ ಮನೆಗಳನ್ನು ನಿರ್ಮಿಸಬೇಕಾಗಿದೆ. ಸಹೋದರ ಸಹೋದರಿಯರೆ, ಈ ಕನಸನ್ನೂ ಕೂಡಾ ನನಸು ಮಾಡುವ ನಿಟ್ಟಿನಲ್ಲಿ ನಾವು ಪ್ರಯತ್ನಶೀಲರಾಗಿದ್ದೇವೆ.

ದೇಶ ಹೇಗಿರಬಹುದೆಂದು ನೀವು ಕಲ್ಪನೆ ಮಾಡಿಕೊಳ್ಳಬಲ್ಲಿರಾ. ಯಾವುದೇ ದೇಶದ ಬಳಿ ತನ್ನದೇ ಆದ ಲೆಕ್ಕ ಪತ್ರವಿರಬೇಕು ಹೌದೋ ಅಲ್ಲವೋ? ದೇಶದಲ್ಲಿ ಏನಿದೆ? ಏನಿಲ್ಲ? ಎಂಬುದನ್ನು ಅರಿತಿರಬೇಕೋ, ಬೇಡವೋ? ನಾನು ಪ್ರಧಾನಮಂತ್ರಿಯಾದ ನಂತರ ಅಧಿಕಾರಿಗಳ ಸಭೆಯಲ್ಲಿ ನಾನು ಮೊದ ಮೊದಲು ಕೇಳುತ್ತಿದ್ದ ಪ್ರಶ್ನೆ, ನಮ್ಮ ದೇಶದಲ್ಲಿ ಎಷ್ಟು ದ್ವೀಪಗಳಿವೆ. ನಮ್ಮಲ್ಲಿನ ಅಲಿಯಾ ಬೆಟ್, ಬೆಟ್ ದ್ವಾರಕಾದಂತಹ ಎಷ್ಟು ದ್ವೀಪಗಳಿವೆ? ಈ ಪ್ರಶ್ನೆಯನ್ನು ನಾನು ಕೇಳುತ್ತಿದ್ದೆ. ಬೇರೆ ಬೇರೆ ವಿಭಾಗಗಳು, ಕೆಲವರು 900 ಎಂದು ಹೇಳುತ್ತಿದ್ದರು, ಮತ್ತೆ ಕೆಲವರು 800 ಎಂದು ಹೇಳುತ್ತಿದ್ದರು, ಮತ್ಯಾರೋ 600 ಎಂದರೆ, ಇನ್ನೂ ಕೆಲವರು 1000 ಎಂದು ಹೇಳುತ್ತಿದ್ದರು. ಇದೆಂತಹ ಸರ್ಕಾರ, ಒಬ್ಬೊಬ್ಬರು ಒಂದೊಂದು ಅಂಕಿಅಂಶ ನೀಡುತ್ತಿದ್ದಾರೆ, ಇದರಲ್ಲಿ ಏನೋ ಅನುಮಾನವಿದೆ. ಇವರೂ ಯಾರೂ ವೈಜ್ಞಾನಿಕವಾಗಿ ಅಧ್ಯಯನ ಮಾಡಿಯೇ ಇಲ್ಲವೆಂಬುದು ನನಗೆ ನಂತರ ತಿಳಿದುಬಂತು. ಈಗ ಭಾರತದ ಬಳಿ ಎಷ್ಟೂ ದ್ವೀಪಗಳಿವೆ. ಅವುಗಳ ವಿಶೇಷತೆ ಏನು? ಭಾರತವನ್ನು ಮುನ್ನಡೆಸಲು ಈ ದ್ವೀಪಗಳು ಏನಾದರೂ ಕೊಡುಗೆಯನ್ನು ನೀಡಲು ಸಾಧ್ಯವೇ? ಅವರುಗಳ ಬಳಿ ಯಾವುದೇ ಮಾಹಿತಿ ಇಲ್ಲ ಎಂಬುದನ್ನು ತಿಳಿದು ನನಗೆ ಆಶ್ಚರ್ಯವಾಯಿತು. ನಾವು ಸಭೆ ಕರೆದೆವು, ಉಪಗ್ರಹ ತಂತ್ರಜ್ಞಾನದ ಸಹಾಯ ಪಡೆದೆವು. ಎಲ್ಲ ಮಾಹಿತಿಗಳನ್ನು ಹುಡುಕಿ ತೆಗೆದೆವು. ಭಾರತದ ಬಳಿ 1300 ಕ್ಕೂ ಅಧಿಕ ದ್ವೀಪಗಳಿವೆ. 1300ಕ್ಕೂ ಅಧಿಕ, ಅವುಗಳಲ್ಲಿ ಕೆಲವು ದ್ವೀಪಗಳು ಸಿಂಗಾಪುರದಲ್ಲಿರುವ ದ್ವೀಪಗಳಿಗಿಂತ ದೊಡ್ದದಾಗಿವೆ. ಅಂದರೆ ನಾವು ನಮ್ಮ ದ್ವೀಪ ಗಳನ್ನು ಹೇಗೆ ಅಭಿವೃದ್ಧಿ ಮಾಡಬಹುದು, ಎಷ್ಟು ವೈವಿಧ್ಯತೆಗಳಿಂದ ಅದಕ್ಕೆ ಜೀವ ತುಂಬಬಲ್ಲೆವು, ಪ್ರವಾಸೋದ್ಯಮದ ಅಭಿವೃದ್ಧಿಗೆ ಏನು ಮಾಡಲು ಸಾಧ್ಯ ಎಂಬ ಬಗ್ಗೆ ವಿಚಾರ ಮಾಡಿದೆವು. ಭಾರತ ಸರ್ಕಾರ ಒಂದು ವ್ಯವಸ್ಥೆಯನ್ನು ಮಾಡಿಕೊಂಡಿದೆ, ಮುಂಬರುವ ದಿನಗಳಲ್ಲಿ ಭಾರತದ ಸಮುದ್ರ ತೀರದಲ್ಲಿ ಇರುವ ದ್ವೀಪಗಳ ಪೈಕಿ 200 ದ್ವೀಪಗಳನ್ನು ಆರಿಸಿದ್ದೇವೆ.
ಮೊದಲ ಹಂತದಲ್ಲಿ ಈ 200 ದ್ವೀಪಗಳ ಅಭಿವೃದ್ಧಿಗೆ ಒಂದು ಯೋಜನೆ ಸಿದ್ಧವಾಗುತ್ತಿದೆ.

ಸಹೋದರ ಸಹೋದರಿಯರೆ ನಮ್ಮಲ್ಲಿಯೇ ಈ ರೀತಿಯ ವ್ಯವಸ್ಥೆಯಾದರೆ, ಸಿಂಗಾಪುರಕ್ಕೆ ಪ್ರವಾಸ ಹೋಗುವ ಅವಶ್ಯಕತೆಯಾದರೂ ಏನು? ಎಲ್ಲವೂ ನಮ್ಮ ದೇಶದಲ್ಲೇ ಆಗುತ್ತದೆ. ಸಹೋದರರೆ. ನಮ್ಮ ದೇಶ ಸಮರ್ಥವಾಗಿದೆ, ಶಕ್ತಿಶಾಲಿಯಾಗಿದೆ. ನಾವು ಕೂಡಾ ಅಭಿವೃದ್ಧಿಯ ಹೊಸ ಶಿಖರವನ್ನು ಮುಟ್ಟುವೆವು. ಆದುದರಿಂದ ಸಹೋದರ ಸಹೋದರಿಯರೆ, ನಿತಿನ್ ಜೀ ಅವರು ಹೇಳಿರುವ ಹಾಗೆ ಮೊದಲು ನಮ್ಮ ದೇಶದ ಮೂಲೆ ಮೂಲೆಯ ಲೆಕ್ಕ ಹಾಕಿ ದಿನಕ್ಕೆ ಸರಾಸರಿ ಎರಡು ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡುತ್ತಿದ್ದರು. ನಮ್ಮ ಸರ್ಕಾರ ಆಡಳಿತಕ್ಕೆ ಬರುವ ಮೊದಲು ದಿನಕ್ಕೆ ಎರಡು ಕಿಲೋಮೀಟರ್ ರಸ್ತೆ ನಿರ್ಮಾಣ. ನಿತಿನ್ ಜೀ ಅವರು ಬಂದ ನಂತರ ಇದು ವೇಗ ಪಡೆಯಿತು. ಅವರೇ ಹೇಳಿದ ಹಾಗೆ ಇಂದು ದಿನಕ್ಕೆ 22 ಕಿಲೋಮೀಟರ್ ರಸ್ತೆ ನಿರ್ಮಾಣವಾಗುತ್ತಿದೆ. ಅಂದರೆ 11 ಪಟ್ಟು ಹೆಚ್ಚು. ಸಹೋದರ ಸಹೋದರಿಯರೆ, ಈ ಮೊದಲು ನಮ್ಮ ದೇಶದಲ್ಲಿ ರೈಲ್ವೆಯ ಗೇಜ್ ಪರಿವರ್ತನೆ ಎನ್ನುತ್ತೀರೋ ಅಥವಾ ಹಳಿ ಜೋಡಣೆ ಎನ್ನುತ್ತಿರೋ, ಒಂದು ವರ್ಷದಲ್ಲಿ 1500 ಕಿಲೋಮೀಟರ್ ತನಕ ಕೆಲಸ ಆಗುತ್ತಿತ್ತು.

ಇಷ್ಟು ದೊಡ್ಡ ದೇಶ, ರೈಲ್ವೆಗಾಗಿ ಬೇಡಿಕೆ, ಆದರೂ ಇದಕ್ಕಿಂತ ಹೆಚ್ಚು ಕೆಲಸ ಮುಂದೆ ಸಾಗುತ್ತಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಇದನ್ನು ಹೆಚ್ಚಿಸಬೇಕೆಂಬ ಮನಸ್ಸು ಮಾಡಿದೆವು. ಹಿಂದಿನ ಕಾರ್ಯಕ್ಕೆ ಹೋಲಿಸಿದರೆ ಇಂದು ಕಾರ್ಯ ದ್ವಿಗುಣಗೊಂಡಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ರೈಲ್ವೆ ಹಳಿಯ ಜೋಡಣೆ ದ್ವಿಗುಣಗೊಂಡಿದೆ, ಅಂದರೆ 3000 ಕಿಲೋಮೀಟರ್. ತಾವುಗಳು ಬಸ್ ನಿಲ್ದಾಣದ ಕಾರ್ಯ ನೋಡಿದ್ದೀರಿ. ಕೆಲಸ ಮಾಡುವ ಮನಸ್ಸಿದ್ದರೆ ಎಲ್ಲವೂ ಸಾಧ್ಯ. ಈ ವಿಷಯವನ್ನು ಕುರಿತು ನಾನು ರೈಲ್ವೆ ಅಧಿಕಾರಿಗಳ ಸಭೆ ನಡೆಸಿದೆ. ನಮ್ಮ ರೈಲ್ವೆ ನಿಲ್ದಾಣಗಳು ಮರಣಾವಸ್ಥೆಯಲ್ಲಿವೆ, 19 ನೇ ಶತಮಾನದ ನಿಲ್ದಾಣಗಳಿವು, ಇವುಗಳಲ್ಲಿ ಬದಲಾವಣೆ ಬೇಕೋ, ಬೇಡವೋ ? ಬದಲಾವಣೆ ಬೇಕಾಗಿದೆ ಎಂಬುದನ್ನು ಅವರಿಗೆ ತಿಳಿಸಿದ್ದೇನೆ. ’

ಈಗ ರೈಲ್ವೆ ಅಭಿವೃದ್ದಿಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ಹಿಂದೂಸ್ತಾನದಲ್ಲಿ 1500 ರೈಲ್ವೆ ನಿಲ್ದಾಣಗಳ ನಿರ್ಮಾಣವಾಗಬೇಕಿದೆ. ಪ್ರಾರಂಭದಲ್ಲಿ, ಸೂರತ್, ಗಾಂಧಿನಗರ.. ಗುಜರಾತ್ ನ ಎರಡು ಯೋಜನೆಗಳು ನಿರ್ಧಾರವಾಗಿವೆ. ಮುಂಬರುವ ದಿನಗಳಲ್ಲಿ ಎಲ್ಲ ರೈಲು ನಿಲ್ದಾಣಗಳು ಬಹು ಮಹಡಿಯದ್ದು ಯಾಕೆ ಆಗಿರಬಾರದು? ರೈಲ್ವೆ ನಿಲ್ದಾಣದಲ್ಲಿ ಸಿನೆಮಾ ಮಂದಿರಗಳನ್ನು ನಿರ್ಮಾಣ ಮಾಡಬಹುದು. ರೈಲ್ವೆ ನಿಲ್ದಾಣದಲ್ಲಿ ಮಾಲ್ ಗಳ ನಿರ್ಮಾಣ ಕೂಡಾ ಆಗಬಹುದು, ರೈಲ್ವೆ ನಿಲ್ದಾಣಗಳಲ್ಲಿ ಮನರಂಜನಾ ಕೇಂದ್ರಗಳನ್ನೂ ನಿರ್ಮಾಣ ಮಾಡಬಹುದು. ತಿಂಡಿ ತಿನಿಸುಗಳ ಅಂಗಡಿಗಳನ್ನು ಕೂಡಾ ತೆರೆಯಬಹುದು. ಹಳಿಗಳ ಮೇಲೆ ರೈಲು ಚಲಿಸುತ್ತಿರುತ್ತದೆ, ಉಳಿದ ಸ್ಥಳಗಳ ಅಭಿವೃದ್ಧಿಯಾಗಬೇಕು. ಸಹೋದರ ಸಹೋದರಿಯರೇ, ಅಭಿವೃದ್ಧಿಗಾಗಿ ಒಳ್ಳೆಯ ದೃಷ್ಟಿಕೋನವಿರಬೇಕು. ಕನಸುಗಳೂ ಇರಬೇಕು, ಸಾಮರ್ಥ್ಯ ಕೂಡ ಇರಬೇಕು, ಅಂದಾಗ ಕಾರ್ಯ ತನ್ನಂತಾನೆ ನಡೆಯುತ್ತದೆ. ಈ ಕಾರ್ಯವನ್ನು ಕೈಗೆತ್ತಿಗೊಂಡು ನಾವು ಮುನ್ನಡೆದಿದ್ದೇವೆ.

ಭರೂಚ್ ನ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ತಾಯಿ ನರ್ಮದೆಯ ತೀರದಲ್ಲಿ ಇಂದು ಒಂದು ಮಹಾನ್ ಕಾರ್ಯ ನೆರವೇರಿದೆ. ನನ್ನ ಸಂಗಡ ಸಂಪೂರ್ಣ ಶಕ್ತಿಯನ್ನು ಒಗ್ಗೂಡಿಸಿಕೊಂಡು ಹೇಳಿ,
ನಾನು ನರ್ಮದೆ ಎನ್ನುತ್ತೇನೆ, ತಾವುಗಳೆಲ್ಲರೂ ಎರಡೂ ಕೈ ಮುಷ್ಟಿಕಟ್ಟಿಕೊಂಡು ಮೇಲೆತ್ತಿ ಸರ್ವದೇ ಎಂದು ಹೇಳಿ,
ನರ್ಮದೇ – ಸರ್ವದೇ
ನರ್ಮದೇ – ಸರ್ವದೇ
ನರ್ಮದೇ – ಸರ್ವದೇ
ನರ್ಮದೇ – ಸರ್ವದೇ
ನರ್ಮದೇ – ಸರ್ವದೇ..
ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.