Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ 

ಗುಜರಾತ್ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ಸರ್ಕಾರದ ಉದ್ಯೋಗಮೇಳವನ್ನು ಉದ್ದೇಶಿಸಿ ವೀಡಿಯೊ ಸಂದೇಶದ ಮೂಲಕ ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೋಳಿ ಹಬ್ಬವು ಹತ್ತಿರದಲ್ಲಿದೆ ಮತ್ತು ಗುಜರಾತ್ ಉದ್ಯೋಗ ಮೇಳದ ಆಯೋಜನೆಯು ನೇಮಕಾತಿ ಪತ್ರಗಳನ್ನು ಪಡೆದವರಿಗೆ ಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸುತ್ತದೆ ಎಂದು ಹೇಳಿದರು. ಗುಜರಾತಿನಲ್ಲಿ ಎರಡನೇ ಬಾರಿಗೆ ಉದ್ಯೋಗ ಮೇಳ ನಡೆಯುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, ಯುವಜನರಿಗೆ ನಿರಂತರ ಅವಕಾಶಗಳನ್ನು ಒದಗಿಸುವ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಿದರು. ಗರಿಷ್ಠ ಸಂಖ್ಯೆಯ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಸರ್ಕಾರ ಮತ್ತು ಎನ್‌ಡಿಎ ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳು ನಿರಂತರವಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವನ್ನು ಹೊರತುಪಡಿಸಿ, ಎನ್‌ಡಿಎ ಆಡಳಿತದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಯುವಜನತೆ ಅಮೃತ ಕಾಲದ ಸಂಕಲ್ಪಗಳನ್ನು ಈಡೇರಿಸಲು ಸಂಪೂರ್ಣ ಸಮರ್ಪಣಾ ಭಾವದಿಂದ ಮತ್ತು ಶ್ರದ್ಧೆಯಿಂದ ಸಹಕರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯೋಗ ವಿನಿಮಯ ಕಚೇರಿಗಳ ಮೂಲಕ ಕಳೆದ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದ 18 ಲಕ್ಷ ಯುವಜನರನ್ನು ಹೊರತುಪಡಿಸಿ ಕಳೆದ 5 ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಯುವಜನತೆ ರಾಜ್ಯ ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಗುಜರಾತ್ ಸರ್ಕಾರ ನೇಮಕಾತಿ ಕ್ಯಾಲೆಂಡರ್ ಅನ್ನು ರಚಿಸುವ ಮೂಲಕ ನಿಗದಿತ ಸಮಯದೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದೆ ಎಂದು ಅವರು ಹೇಳಿದರು. ಈ ವರ್ಷ ರಾಜ್ಯ ಸರ್ಕಾರದಲ್ಲಿ 25 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದ ಪ್ರಧಾನಿ, ತಂತ್ರಜ್ಞಾನದ ಸಹಾಯದಿಂದ ಅಭಿವೃದ್ಧಿಪಡಿಸಲಾದ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವೆಬ್ ಪೋರ್ಟಲ್‌ಗಳನ್ನು ಹೊಂದಿರುವ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲಾಗಿದೆ ಎಂದು ತಿಳಿಸಿದರು. 

ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಪ್ರಸ್ತುತ ಸರ್ಕಾರದ ಪ್ರಯತ್ನಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳ ಮೂಲಕ ಉದ್ಯೋಗಗಳನ್ನು ಹೆಚ್ಚಿಸುವ, ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಸ್ವಯಂ ಉದ್ಯೋಗಕ್ಕಾಗಿ ದೇಶದಲ್ಲಿ ಸೂಕ್ತ ವಾತಾವರಣವನ್ನು ಸೃಷ್ಟಿಸುವ ಮೂಲಕ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಗೆ ಮಾಡಿರುವ ದೃಢವಾದ ಕಾರ್ಯತಂತ್ರವನ್ನು ಒತ್ತಿ ಹೇಳಿದರು. ಬದಲಾಗುತ್ತಿರುವ ಉದ್ಯೋಗಗಳ ಸ್ವರೂಪಕ್ಕೆ ಅನುಗುಣವಾಗಿ ಯುವಕರಿಗೆ ಖಾತರಿಯ ಆರ್ಥಿಕ ನೆರವು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸುವತ್ತ ಸರ್ಕಾರ ಗಮನಹರಿಸಿದೆ ಎಂದು ಅವರು ಹೇಳಿದರು.

ಅಭಿವೃದ್ಧಿಯ ಚಕ್ರಗಳು ಚಲಿಸುತ್ತಿರುವಾಗ, ಪ್ರತಿಯೊಂದು ಕ್ಷೇತ್ರದಲ್ಲೂ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ದೇಶದ ಇತರ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಪ್ರಸ್ತುತ ಗುಜರಾತ್‌ನಲ್ಲಿಯೇ 1.25 ಲಕ್ಷ ಕೋಟಿ ರೂ.ಗಳ ಯೋಜನೆಗಳು ನಡೆಯುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ 10 ಲಕ್ಷ ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಮುಂಬರುವ ವರ್ಷಗಳಲ್ಲಿ ಭಾರತವು ಅತಿದೊಡ್ಡ ಉತ್ಪಾದನಾ ಕೇಂದ್ರವಾಗಲಿದೆ ಎಂದು ಪ್ರಪಂಚದಾದ್ಯಂತದ ತಜ್ಞರು ಹೇಳುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ಈ ಕ್ರಾಂತಿಯನ್ನು ಯುವಜನರೇ ಮುನ್ನಡೆಸುತ್ತಾರೆ ಎಂದು ಅವರು ಒತ್ತಿ ಹೇಳಿದರು. 20 ಸಾವಿರ ಕೋಟಿ ರೂ. ಬಂಡವಾಳದಲ್ಲಿ ಗುಜರಾತ್‌ನ ದಾಹೋದ್‌ನಲ್ಲಿ ರೈಲು ಇಂಜಿನ್ ಕಾರ್ಖಾನೆಯನ್ನು ನಿರ್ಮಿಸಲಾಗುತ್ತಿದೆ ಮತ್ತು ಇದು ಮುಂದಿನ ದಿನಗಳಲ್ಲಿ ಸೆಮಿಕಂಡಕ್ಷರ್‌ ಗಳ ಬೃಹತ್ ಹಬ್ ಆಗಲಿದೆ ಎಂದು ಅವರು ಹೇಳಿದರು.

ಸರ್ಕಾರದ ಸಮಗ್ರ ಅಭಿವೃದ್ಧಿಯ ವಿಧಾನವು ದೊಡ್ಡ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಪರಿಸರ ವ್ಯವಸ್ಥೆಗಾಗಿ ನೀತಿ ಮಟ್ಟದಲ್ಲಿ ಮಾಡಿರುವ ಪ್ರಮುಖ ಬದಲಾವಣೆಗಳನ್ನು ಅವರು ಪ್ರಸ್ಥಾಪಿಸಿದರು. ಇಂದು ದೇಶದಲ್ಲಿ 90 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರ ಪರಿಣಾಮವಾಗಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಮತ್ತು ಲಕ್ಷಾಂತರ ಯುವಜನರನ್ನು ಸ್ವಯಂ ಉದ್ಯೋಗದತ್ತ ಪ್ರೇರೇಪಿಸುತ್ತಿವೆ ಎಂದು ಅವರು ಹೇಳಿದರು. ಮುದ್ರಾ ಯೋಜನೆ ಮತ್ತು ಸ್ಟ್ಯಾಂಡಪ್ ಇಂಡಿಯಾ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬ್ಯಾಂಕ್ ಖಾತರಿ ಇಲ್ಲದೆಯೇ ಸರ್ಕಾರ ಹಣಕಾಸಿನ ನೆರವು ನೀಡುತ್ತಿದೆ ಎಂದು ಹೇಳಿದರು. ಲಕ್ಷಾಂತರ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರ್ಪಡೆಗೊಳ್ಳುವ ಮೂಲಕ ತಮ್ಮ ಕಾಲಿನ ಮೇಲೆ ಗಟ್ಟಿಯಾಗಿ ನಿಂತಿದ್ದಾರೆ ಮತ್ತು ಸರ್ಕಾರವು ನೂರಾರು ಕೋಟಿ ರೂ. ಆರ್ಥಿಕ ನೆರವು ನೀಡುತ್ತಿದೆ ಎಂದು ಅವರು ಹೇಳಿದರು.

ದೇಶದಲ್ಲಿನ ಹೊಸ ಸಾಧ್ಯತೆಗಳಿಗಾಗಿ ದೊಡ್ಡ ಪ್ರಮಾಣದ ಕೌಶಲ್ಯಪೂರ್ಣ ಮಾನವಶಕ್ತಿಯನ್ನು ಸಿದ್ಧಪಡಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಭಾರತವು ವಿಶ್ವದ ಮೂರನೇ ಪ್ರಮುಖ ಆರ್ಥಿಕತೆಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು. ಕೌಶಲ್ಯಾಭಿವೃದ್ಧಿಯಿಂದ ಸಮಾಜದ ಪ್ರತಿಯೊಂದು ವರ್ಗವೂ ಪ್ರಯೋಜನ ಪಡೆಯಬೇಕೆಂಬ ಸರ್ಕಾರದ ಪ್ರಯತ್ನವನ್ನು ಒತ್ತಿ ಹೇಳಿದ ಅವರು, ಇದು ಪ್ರತಿಯೊಂದು ಪ್ರದೇಶದ ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು. ಯುವಜನರ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ, ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಅಡಿಯಲ್ಲಿ 30 ಸ್ಕಿಲ್ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು, ಅಲ್ಲಿ ಯುವಕರಿಗೆ ಹೊಸ ತಲೆಮಾರಿನ ತಂತ್ರಜ್ಞಾನದ ಮೂಲಕ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಸಣ್ಣ ಕುಶಲಕರ್ಮಿಗಳಿಗೆ ತರಬೇತಿ ನೀಡಲಾಗುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಬಗ್ಗೆ ಅವರು ಪ್ರಸ್ತಾಪಿಸಿದರು, ಇದು ವಿಶ್ವ ಮಾರುಕಟ್ಟೆಯನ್ನು ಪ್ರವೇಶಿಸಲು ಸಣ್ಣ ಉದ್ಯಮಗಳಿಗೆ ಸಂಬಂಧಿಸಿದ ಜನರಿಗೆ ಗೇಟ್‌ವೇ ಒದಗಿಸುತ್ತದೆ ಎಂದರು. ಬದಲಾಗುತ್ತಿರುವ ಉದ್ಯೋಗಗಳಿಗೆ ಯುವಕರನ್ನು ನಿರಂತರವಾಗಿ ಸಿದ್ಧಪಡಿಸುವಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪಾತ್ರವನ್ನು ಒತ್ತಿಹೇಳಿದ ಪ್ರಧಾನಿಯವರು, ಗುಜರಾತ್‌ನಲ್ಲಿ ಐಟಿಐಗಳು ಮತ್ತು ಅವುಗಳ ಸೀಟುಗಳ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ ಎಂದು ತಿಳಿಸಿದರು. ಗುಜರಾತ್‌ನಲ್ಲಿ ಸುಮಾರು 600 ಐಟಿಐಗಳ ಸುಮಾರು 2 ಲಕ್ಷ ಸೀಟುಗಳಲ್ಲಿ ವಿವಿಧ ಕೌಶಲ್ಯಗಳಿಗಾಗಿ ತರಬೇತಿಯನ್ನು ನೀಡಲಾಗುತ್ತಿದೆ ಎಂದ ಶ್ರೀ ಮೋದಿ, ಗುಜರಾತ್‌ನಲ್ಲಿ ಐಟಿಐಗಳಿಂದ ಹೊರಬಂದು ಉದ್ಯೋಗ ಪಡೆಯುವವರ ಸಂಖ್ಯೆಯು ತುಂಬಾ ಉತ್ತಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ನಿರ್ಲಕ್ಷಿಸಲಾಗಿದ್ದ ಉದ್ಯೋಗ ಸೃಷ್ಟಿಗೆ ಪ್ರತಿಯೊಂದು ಅವಕಾಶವನ್ನು ಅಭಿವೃದ್ಧಿಪಡಿಸಲು ಸರ್ಕಾರವು ಗಮನಹರಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಕೆವಾಡಿಯಾ-ಆಟಾ ನಗರದಲ್ಲಿನ ಯೂನಿಟಿ ಮಾಲ್ ಮಾದರಿಯಲ್ಲಿ ಪ್ರತಿ ರಾಜ್ಯದಲ್ಲೂ 50 ಹೊಸ ಪ್ರವಾಸಿ ಕೇಂದ್ರಗಳು ಮತ್ತು ಯೂನಿಟಿ ಮಾಲ್ ಅನ್ನು ಅಭಿವೃದ್ಧಿಪಡಿಸಲು ಬಜೆಟ್ ನಲ್ಲಿ ಘೋಷಿಸಲಾಗಿದೆ, ಅಲ್ಲಿ ದೇಶಾದ್ಯಂತ ವಿಶಿಷ್ಟ ಉತ್ಪನ್ನಗಳನ್ನು ಉತ್ತೇಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಏಕಲವ್ಯ ಶಾಲೆಯಲ್ಲಿ ಸುಮಾರು 40 ಸಾವಿರ ಶಿಕ್ಷಕರ ನೇಮಕಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರಿ ಪಡೆಯುವುದೊಂದೇ ಯುವಜನರ ಗುರಿಯಾಗಿದ್ದರೆ ಅವರ ವೈಯಕ್ತಿಕ ಬೆಳವಣಿಗೆ ಅಲ್ಲಿಯೇ ನಿಲ್ಲುತ್ತದೆ ಎಂದು ಅವರು ಎಚ್ಚರಿಸಿದರು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೇ ಅವರನ್ನು ಇಲ್ಲಿಗೆ ಕರೆತಂದಿದ್ದು, ಹೊಸದನ್ನು ಕಲಿಯುವ ಉತ್ಸಾಹ ಅವರು ಜೀವನದುದ್ದಕ್ಕೂ ಮುಂದುವರಿಯಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ಕರ್ಮಯೋಗಿ ಭಾರತ್ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ವಿವಿಧ ಆನ್‌ಲೈನ್ ಕೋರ್ಸ್‌ಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವಂತೆ ಯುವಜನತೆಗೆ ಕರೆನೀಡಿದ ಪ್ರಧಾನಿ, ನಿಮ್ಮ ಕೆಲಸದ ಸ್ಥಳ ಎಲ್ಲೇ ಇದ್ದರೂ, ನಿಮ್ಮ ಕೌಶಲ್ಯ ಸುಧಾರಣೆಗೆ ವಿಶೇಷ ಗಮನ ಕೊಡಿ. ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ ಉತ್ತಮ ತರಬೇತಿ ನೀಡುವುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

***