Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್‌ನ ಗಾಂಧಿನಗರದಲ್ಲಿ ಸ್ಪಂದನಾಶೀಲ(ವೈಬ್ರೆಂಟ್) ಗುಜರಾತ್ ಶೃಂಗಸಭೆ 2024 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

ಗುಜರಾತ್‌ನ ಗಾಂಧಿನಗರದಲ್ಲಿ ಸ್ಪಂದನಾಶೀಲ(ವೈಬ್ರೆಂಟ್) ಗುಜರಾತ್ ಶೃಂಗಸಭೆ 2024 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಮೊಜಾಂಬಿಕ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಫಿಲಿಪ್ ನ್ಯುಸಿ ಅವರೆ, ಟಿಮೋರ್-ಲೆಸ್ಟೆ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ರಾಮೋಸ್-ಹೋರ್ಟಾ, ಜೆಕ್ ಗಣರಾಜ್ಯದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಪೆಟ್ರ್ ಫಿಯಾಲಾ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜಿ; ಜನಪ್ರಿಯ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್; ಭಾರತ ಮತ್ತು ವಿದೇಶದಿಂದ ಆಗಮಿಸಿರುವ ವಿಶೇಷ ಅತಿಥಿಗಳೆ, ಇಲ್ಲಿರುವ ಇತರೆ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೆ,

2024ರ ಹೊಸ ವರ್ಷಕ್ಕೆ ನಾನು ನಿಮಗೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಭಾರತವು ಇತ್ತೀಚೆಗೆ ತನ್ನ 75ನೇ ಸ್ವಾತಂತ್ರ್ಯ ಅಮೃತ ವರ್ಷವನ್ನು ಆಚರಿಸಿದೆ. ನಮ್ಮ ರಾಷ್ಟ್ರದ ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮಾಚರಣೆಯ ಮೂಲಕ ಅಭಿವೃದ್ಧಿ ಹೊಂದಿದ ಸ್ಥಾನಮಾನ ಸಾಧಿಸುವ ಗುರಿಯೊಂದಿಗೆ ಮುಂದಿನ 25 ವರ್ಷಗಳ ಗುರಿಗಳತ್ತ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಈ 25 ವರ್ಷಗಳ ಅಧಿಕಾರಾವಧಿಯು ಭಾರತಕ್ಕೆ ‘ಅಮೃತ ಕಾಲ’ದ ಅವಧಿಯಾಗಿದೆ. ಇದು ತಾಜಾ ಆಕಾಂಕ್ಷೆಗಳು, ಹೊಸ ನಿರ್ಣಯಗಳು ಮತ್ತು ನಿರಂತರ ಸಾಧನೆಗಳ ಅವಧಿಯನ್ನು ಸೂಚಿಸುತ್ತದೆ. ಈ ಮೊದಲ ರೋಮಾಂಚಕ ಅಥವಾ ಸ್ಪಂದನಾಶೀಲ ಗುಜರಾತ್ ಜಾಗತಿಕ ಶೃಂಗಸಭೆಯು ‘ಅಮೃತ ಕಾಲ’ದ ಸಮಯದಲ್ಲಿ ನಡೆದಿರುವುದು ಅಪಾರ ಮಹತ್ವ ಹೊಂದಿದೆ. ಈ ಶೃಂಗಸಭೆಯಲ್ಲಿ ನಮ್ಮೊಂದಿಗೆ ಸೇರಿಕೊಂಡಿರುವ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾರತದ ಅಭಿವೃದ್ಧಿ ಪಯಣದಲ್ಲಿ ಅಮೂಲ್ಯ ಮಿತ್ರರಾಗಿದ್ದಾರೆ. ನಾನು ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಈ ಸಮಾರಂಭದಲ್ಲಿ ಯುಎಇ ಅಧ್ಯಕ್ಷರಾದ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರ ವಿಶಿಷ್ಟ ಉಪಸ್ಥಿತಿ ಇರುವುದು ನಮಗೆ ತುಂಬಾ ಸಂತೋಷವಾಗಿದೆ. ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರ ಹಾಜರಾತಿಯು ಭಾರತ ಮತ್ತು ಯುಎಇ ನಡುವಿನ ಗಾಢ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದನ್ನು ಸಂಕೇತಿಸುತ್ತದೆ. ನಾವು ಸ್ವಲ್ಪ ಸಮಯದ ಹಿಂದೆ ಅವರ ಅಭಿಪ್ರಾಯಗಳನ್ನು ಕೇಳಿದ್ದೇವೆ. ಭಾರತದ ಮೇಲೆ ಅವರ ಅಚಲ ನಂಬಿಕೆ ಮತ್ತು ಅವರ ದೃಢವಾದ ಬೆಂಬಲವನ್ನು ನಾವು ಗೌರವಿಸುತ್ತೇವೆ. ಅವರು ಹೇಳಿದಂತೆ – ವೈಬ್ರಂಟ್ ಗುಜರಾತ್ ಶೃಂಗಸಭೆಯು ಆರ್ಥಿಕ ಅಭಿವೃದ್ಧಿ ಮತ್ತು ಹೂಡಿಕೆಗೆ ಸಂಬಂಧಿಸಿದ ಮಾಹಿತಿ ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಜಾಗತಿಕ ವೇದಿಕೆಯಾಗಿದೆ. ಈ ಶೃಂಗಸಭೆಯಲ್ಲಿ, ಭಾರತ ಮತ್ತು ಯುಎಇ ಫುಡ್ ಪಾರ್ಕ್‌ಗಳ ಅಭಿವೃದ್ಧಿಗೆ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸಲು ಮತ್ತು ನವೀನ ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಲು ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಭಾರತದ ಬಂದರು ಮೂಲಸೌಕರ್ಯದಲ್ಲಿ ಯುಎಇ ಕಂಪನಿಗಳಿಂದ ಹಲವಾರು ಶತಕೋಟಿ ಡಾಲರ್‌ಗಳ ಹೊಸ ಹೂಡಿಕೆಗೆ ಒಪ್ಪಿಗೆ ನೀಡಲಾಗಿದೆ. ಗಿಫ್ಟ್  ಸಿಟಿಯಲ್ಲಿನ ಕಾರ್ಯಾಚರಣೆಗಳನ್ನು ಯುಎಇಯ ಸಾರ್ವಭೌಮ ಸಂಪತ್ತು ನಿಧಿಯಿಂದ ಪ್ರಾರಂಭಿಸಲಾಗುವುದು. ಟ್ರಾನ್ಸ್‌ವರ್ಲ್ಡ್ ಕಂಪನಿಯು ಇಲ್ಲಿ ವಿಮಾನ ಮತ್ತು ಹಡಗು ಗುತ್ತಿಗೆ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ. ಭಾರತ್ ಮತ್ತು ಯುಎಇ ನಡುವಿನ ಸಂಬಂಧವನ್ನು ಉನ್ನತೀಕರಿಸಿದ ನನ್ನ ಸಹೋದರ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೆ ನಾನು ಪ್ರಾಮಾಣಿಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.

ಸ್ನೇಹಿತರೆ,

ನಿನ್ನೆ ಮೊಜಾಂಬಿಕ್‌ ಅಧ್ಯಕ್ಷರಾದ ಗೌರವಾನ್ವಿತ ನ್ಯುಸಿ ಅವರೊಂದಿಗೆ ನಾನು ವಿವರವಾದ ಚರ್ಚೆಯಲ್ಲಿ ತೊಡಗಿದ್ದೆ. ಅವರಿಗೆ ಗುಜರಾತ್‌ಗೆ ಬರುವುದು ನಾಸ್ಟಾಲ್ಜಿಕ್ ನೆನಪುಗಳನ್ನು ಹುಟ್ಟುಹಾಕುತ್ತದೆ. ಅಧ್ಯಕ್ಷ ನ್ಯುಸಿ ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿ. ನಮ್ಮ ಜಿ-20 ಅಧ್ಯಕ್ಷತೆಯ ಅಡಿ, ಆಫ್ರಿಕಾ ಒಕ್ಕೂಟವು ಜಿ-20ರಲ್ಲಿ ಶಾಶ್ವತ ಸದಸ್ಯತ್ವ ಪಡೆದುಕೊಂಡಿರುವುದು ಭಾರತಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ. ಅಧ್ಯಕ್ಷ ನ್ಯುಸಿ ಅವರ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿತು ಮಾತ್ರವಲ್ಲದೆ, ಭಾರತ ಮತ್ತು ಆಫ್ರಿಕಾ ನಡುವೆ ನಿಕಟ ಸಂಬಂಧಗಳನ್ನು ಬೆಳೆಸಿತು.

ಸ್ನೇಹಿತರೆ,

ಜೆಕ್ ಗಣರಾಜ್ಯದ ಪ್ರಧಾನ ಮಂತ್ರಿ ಗೌರವಾನ್ವಿತ ಪೆಟ್ರ್ ಫಿಯಾಲಾ ಅವರು ಭಾರತಕ್ಕೆ ಅವರ ಮೊದಲ ಅಧಿಕೃತ ಭೇಟಿಯನ್ನು ಈ ಸದರ್ಭದಲ್ಲಿ ಸ್ವಾಗತಿಸುತ್ತೇವೆ. ಆದರೂ ಅವರು ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದರು. ಜೆಕ್ ಮತ್ತು ವೈಬ್ರೆಂಟ್ ಗುಜರಾತ್ ಶೃಂಗಸಭೆಯ ನಡುವಿನ ನಿರಂತರ ಸಂಬಂಧವು ಸಹಕಾರದಲ್ಲಿ ನಿರಂತರ ಬೆಳವಣಿಗೆಯನ್ನು ಕಂಡಿದೆ. ವಿಶೇಷವಾಗಿ ತಂತ್ರಜ್ಞಾನ ಮತ್ತು ಆಟೋಮೊಬೈಲ್ ಉತ್ಪಾದನೆಯಲ್ಲಿ. ಗೌರವಾನ್ವಿತ ಪೀಟರ್ ಫಿಯಾಲಾ, ನಿಮ್ಮ ಭೇಟಿಯು ನಮ್ಮ 2  ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ನನಗೆ ವಿಶ್ವಾಸವಿದೆ. ಇಲ್ಲಿ ಒಂದು ಮಾತು ಇದೆ – “ಅತಿಥಿ ದೇವೋ ಭವ” ಎಂಬುದು. ಇದು ಪ್ರಧಾನಿಯಾಗಿ ಭಾರತಕ್ಕೆ ನಿಮ್ಮ ಮೊದಲ ಭೇಟಿಯಾಗಿದೆ, ನೀವು ಅಚ್ಚುಮೆಚ್ಚಿನ ನೆನಪುಗಳೊಂದಿಗೆ ಹಿಂದಿರುಗುತ್ತೀರಿ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೆ,

ನಾನು ಗೌರವಾನ್ವಿತ ರಾಮೋಸ್-ಹೊರ್ಟಾ, ನೊಬೆಲ್ ಪ್ರಶಸ್ತಿ ವಿಜೇತ ಟಿಮೋರ್-ಲೆಸ್ಟೆ ಅಧ್ಯಕ್ಷರಿಗೆ ಭಾರತಕ್ಕೆ ಆತ್ಮೀಯ ಸ್ವಾಗತ ನೀಡುತ್ತೇನೆ. ಮಹಾತ್ಮ ಗಾಂಧಿ ಅವರ ಅಹಿಂಸೆಯ ತತ್ವವನ್ನು ಅವರು ತಮ್ಮ ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ಜೋಡಿಸಿದ ಕಾರಣ ಗಾಂಧಿನಗರಕ್ಕೆ ಅವರ ಭೇಟಿ ವಿಶೇಷ ಮಹತ್ವ ಹೊಂದಿದೆ. ಆಸಿಯಾನ್ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಟಿಮೋರ್-ಲೆಸ್ಟೆ ಜತೆಗಿನ ನಮ್ಮ ಸಹಕಾರ ಪ್ರಮುಖವಾಗಿದೆ.

ಸ್ನೇಹಿತರೆ,

ಇತ್ತೀಚೆಗೆ ವೈಬ್ರಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 20 ವರ್ಷಗಳನ್ನು ಪೂರೈಸಿದೆ. ಕಳೆದ 20 ವರ್ಷಗಳಲ್ಲಿ, ಈ ಶೃಂಗಸಭೆಯು ಹೊಸ ಆಲೋಚನೆಗಳಿಗೆ ಸೂಕ್ತ ವೇದಿಕೆ ಒದಗಿಸಿದೆ. ಇದು ಹೂಡಿಕೆ ಮತ್ತು ಆದಾಯಕ್ಕೆ ಹೊಸ ಪ್ರವೇಶ ದ್ವಾರಗಳನ್ನು  ಸೃಷ್ಟಿಸಿದೆ. ಈ ಬಾರಿ, ಶೃಂಗಸಭೆಯ ವಿಷಯವು ‘ಭವಿಷ್ಯದ ಗೇಟ್‌ವೇ.’ 21ನೇ ಶತಮಾನದ ಪ್ರಪಂಚದ ಉಜ್ವಲ ಭವಿಷ್ಯವು ನಮ್ಮ ಸಾಮೂಹಿಕ ಪ್ರಯತ್ನಗಳ ಮೇಲೆ ನಿಂತಿದೆ. ಭಾರತವು ತನ್ನ ಜಿ-20 ಅಧ್ಯಕ್ಷತೆಯಲ್ಲಿ, ಜಾಗತಿಕ ಭವಿಷ್ಯಕ್ಕಾಗಿ ಮಾರ್ಗಸೂಚಿ ವಿವರಿಸಿದೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ ಈ ಆವೃತ್ತಿಯಲ್ಲಿ ನಾವು ಅದನ್ನು ಮುಂದುವರಿಸುತ್ತಿದ್ದೇವೆ. ಭಾರತ್ ನಿರಂತರವಾಗಿ ‘ಐ2ಯು2’ ಮತ್ತು ಇತರ ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಬಲಪಡಿಸುತ್ತಿದೆ. ‘ಒಂದು ಪ್ರಪಂಚ, ಒಂದು ಕುಟುಂಬ, ಒಂದು ಭವಿಷ್ಯ’ ತತ್ವವು ಜಾಗತಿಕ ಕಲ್ಯಾಣಕ್ಕೆ ಅತ್ಯಗತ್ಯವಾಗಿದೆ.

ಸ್ನೇಹಿತರೆ,

ವೇಗವಾಗಿ ಬದಲಾಗುತ್ತಿರುವ ಇಂದಿನ ವಿಶ್ವ ಕ್ರಮದಲ್ಲಿ, ಭಾರತವು ‘ಜಾಗತಿಕ-ಮಿತ್ರ’ ಪಾತ್ರದಲ್ಲಿ ಮುನ್ನಡೆಯುತ್ತಿದೆ. ನಾವು ಸಾಮಾನ್ಯ ಗುರಿಗಳನ್ನು ಹೊಂದಿಸಬಹುದು, ನಮ್ಮ ಗುರಿಗಳನ್ನು ಸಾಧಿಸಬಹುದು ಎಂಬ ವಿಶ್ವಾಸವನ್ನು ಇಂದು ಭಾರತವು ಜಗತ್ತಿಗೆ ನೀಡಿದೆ. ಜಾಗತಿಕ ಕಲ್ಯಾಣಕ್ಕೆ ಭಾರತದ ಬದ್ಧತೆ, ಭಾರತದ ನಿಷ್ಠೆ, ಭಾರತದ ಪ್ರಯತ್ನಗಳು ಮತ್ತು ಭಾರತದ ಕಠಿಣ ಪರಿಶ್ರಮವು ಇಂದಿನ ಜಗತ್ತನ್ನು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧಗೊಳಿಸುತ್ತಿದೆ. ಜಗತ್ತು ಭಾರತವನ್ನು ಹೀಗೆ ನೋಡುತ್ತದೆ- ಸ್ಥಿರತೆಯ ಪ್ರಮುಖ ಆಧಾಸ್ತಂಭ, ನಂಬಬಹುದಾದ ಸ್ನೇಹಿತ; ಜನಕೇಂದ್ರಿತ ಅಭಿವೃದ್ಧಿಯಲ್ಲಿ ನಂಬಿಕೆಯಿರುವ ಪಾಲುದಾರ, ಜಾಗತಿಕ ಒಳಿತನ್ನು ನಂಬುವ ಧ್ವನಿ, ಜಾಗತಿಕ ದಕ್ಷಿಣದ ಧ್ವನಿ, ಜಾಗತಿಕ ಆರ್ಥಿಕತೆಯ ಬೆಳವಣಿಗೆಯ ಎಂಜಿನ್, ಪರಿಹಾರಗಳನ್ನು ಹುಡುಕುವ ತಂತ್ರಜ್ಞಾನದ ಕೇಂದ್ರ, ಪ್ರತಿಭಾವಂತ ಯುವಕರ ಶಕ್ತಿಕೇಂದ್ರ ಮತ್ತು ಪ್ರಜಾಪ್ರಭುತ್ವ.

ಸ್ನೇಹಿತರೆ,

ಭಾರತದ 1.4 ಶತಕೋಟಿ ಜನರ ಆದ್ಯತೆಗಳು ಮತ್ತು ಆಕಾಂಕ್ಷೆಗಳು, ಮಾನವ-ಕೇಂದ್ರಿತ ಅಭಿವೃದ್ಧಿಗೆ ಅವರ ಬದ್ಧತೆ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮತ್ತು ಸಮಾನತೆಗೆ ನಮ್ಮ ಸಮರ್ಪಣೆಗಳು ಜಾಗತಿಕ ಸಮೃದ್ಧಿ ಮತ್ತು ಅಭಿವೃದ್ಧಿಯ ಅಡಿಪಾಯಗಳಾಗಿವೆ. ಇಂದು ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ನಿಂತಿದೆ. ಒಂದು ದಶಕದ ಹಿಂದೆ ಇದ್ದ 11ನೇ ಸ್ಥಾನದಿಂದ ಗಮನಾರ್ಹವಾಗಿ  ಏರಿಕೆ ಕಂಡಿದೆ. ಪ್ರಮುಖ ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಸರ್ವಾನುಮತದಿಂದ ಭಾರತವು ಶೀಘ್ರದಲ್ಲೇ ಅಗ್ರ 3 ಜಾಗತಿಕ ಆರ್ಥಿಕತೆಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಜಾಗತಿಕ ವಿಶ್ಲೇಷಣೆಗಳ ಹೊರತಾಗಿಯೂ, ಈ ಗುರಿ ಸಾಧಿಸಲಾಗುವುದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ನನ್ನ ಗ್ಯಾರಂಟಿ. ಜಾಗತಿಕ ಅನಿಶ್ಚಿಯದ ಸಮಯದಲ್ಲಿ, ಭಾರತವು ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ. ಭಾರತದ ಆದ್ಯತೆಗಳು ಬಹಳ ಸ್ಪಷ್ಟವಾಗಿವೆ. ಇಂದು ಭಾರತದ ಆದ್ಯತೆ – ಸುಸ್ಥಿರ ಕೈಗಾರಿಕೆ, ಮೂಲಸೌಕರ್ಯ ಮತ್ತು ಉತ್ಪಾದನೆ. ಇಂದು ಭಾರತದ ಆದ್ಯತೆ – ಹೊಸ ಯುಗದ ಕೌಶಲ್ಯಗಳು, ಭವಿಷ್ಯದ(ಫ್ಯೂಚರಿಸ್ಟಿಕ್) ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ನಾವೀನ್ಯತೆ. ಇಂದು ಭಾರತದ ಆದ್ಯತೆ – ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ, ಸೆಮಿಕಂಡಕ್ಟರ್ ಗಳು,  ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋನಲ್ಲಿ ನಾವು ಈ ಸಂಪೂರ್ಣ ಪರಿಸರ ವ್ಯವಸ್ಥೆಯ ಒಂದು ನೋಟವನ್ನು ಸಹ ಪಡೆಯಬಹುದು. ಅದನ್ನು ಅನ್ವೇಷಿಸಲು ನಾನು ನಿಮ್ಮನ್ನು ಬಲವಾಗಿ ಪ್ರೋತ್ಸಾಹಿಸುತ್ತೇನೆ. ಗುಜರಾತ್‌ನ ಶಾಲಾ ಕಾಲೇಜು ವಿದ್ಯಾರ್ಥಿಗಳೂ ಈ ಅವಕಾಶ ಬಳಸಿಕೊಳ್ಳಬೇಕು. ಗೌರವಾನ್ವಿತ ನ್ಯುಸಿ ಮತ್ತು ರಾಮೋಸ್-ಹೋರ್ಟಾ ಅವರೊಂದಿಗೆ ವ್ಯಾಪಾರ ಪ್ರದರ್ಶನದಲ್ಲಿ ನಿನ್ನೆ ಸಾಕಷ್ಟು ಸಮಯ ಕಳೆದದ್ದು ನನಗೆ ಸಂತೋಷ ತಂದಿತು. ಈ ವ್ಯಾಪಾರ ಪ್ರದರ್ಶನದಲ್ಲಿ ಕಂಪನಿಗಳು ವಿಶ್ವದರ್ಜೆಯ ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸಿವೆ. ಇ-ಮೊಬಿಲಿಟಿ, ಸ್ಟಾರ್ಟಪ್‌ಗಳು, ನೀಲಿ ಆರ್ಥಿಕತೆ, ಹಸಿರು ಇಂಧನ ಮತ್ತು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಟ್ರೇಡ್ ಶೋನ ಪ್ರಮುಖ ಆಕರ್ಷಣೆಯಾಗಿವೆ. ಟ್ರೇಡ್ ಶೋ ಈ ವಲಯಗಳಲ್ಲಿ ಅಸಂಖ್ಯಾತ ಹೂಡಿಕೆ ಅವಕಾಶಗಳನ್ನು ಒದಗಿಸುತ್ತದೆ.

ಸ್ನೇಹಿತರೆ,

ಜಾಗತಿಕ ಪರಿಸ್ಥಿತಿಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಈ ಸವಾಲುಗಳ ಮುಖಾಂತರ, ಭಾರತದ ಆರ್ಥಿಕತೆಯು ಹೊಂದಾಣಿಕೆ, ಸುಸ್ಥಿರತೆ ಮತ್ತು ಆವೇಗವನ್ನು ಪ್ರದರ್ಶಿಸುತ್ತದೆ. ಕಳೆದ ದಶಕದಲ್ಲಿ ರಚನಾತ್ಮಕ ಸುಧಾರಣೆಗಳ ಮೇಲೆ ನಾವು ಗಮನ ಹರಿಸಿದ್ದೇವೆ. ಈ ಸುಧಾರಣೆಗಳು ಭಾರತದ ಆರ್ಥಿಕತೆಯ ಸಾಮರ್ಥ್ಯ, ಸದೃಢತೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವಲ್ಲಿ ಮಹತ್ತರವಾದ ಕೆಲಸ ಮಾಡಿದೆ.

ಮರುಬಂಡವಾಳೀಕರಣ ಮತ್ತು ಐಬಿಸಿಯೊಂದಿಗೆ, ನಾವು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಶ್ವದಲ್ಲೇ ಪ್ರಬಲವಾಗಿಸಿದೆವು. ವ್ಯವಹಾರವನ್ನು ಸುಲಭಗೊಳಿಸಲು ಒತ್ತು ನೀಡುವುದರೊಂದಿಗೆ, ನಾವು 40 ಸಾವಿರಕ್ಕೂ ಹೆಚ್ಚು ನಿಯಮಗಳ ಅನುಸರಣೆಗಳನ್ನು ತೆಗೆದುಹಾಕಿದ್ದೇವೆ. ಜಿಎಸ್‌ಟಿಯು ಭಾರತದಲ್ಲಿನ ಅನಗತ್ಯ ತೆರಿಗೆ ಸಂಕೋಲೆಗಳನ್ನು ತೆಗೆದುಹಾಕಿದೆ. ಭಾರತದಲ್ಲಿ ಜಾಗತಿಕ ಪೂರೈಕೆ ಸರಪಳಿಯ ವೈವಿಧ್ಯೀಕರಣಕ್ಕಾಗಿ ನಾವು ಉತ್ತಮ ವಾತಾವರಣ ಸೃಷ್ಟಿಸಿದ್ದೇವೆ. ಇತ್ತೀಚೆಗೆ ನಾವು 3 ಎಫ್ ಟಿ ಎಗಳಿಗೆ ಸಹಿ ಹಾಕಿದ್ದೇವೆ. ಇದರಿಂದ ಭಾರತವು ಜಾಗತಿಕ ವ್ಯಾಪಾರಕ್ಕೆ ಹೆಚ್ಚು ಆಕರ್ಷಕ ತಾಣವಾಗಿದೆ. ಈ ಎಫ್ ಟಿ ಎಗಳಲ್ಲಿ ಒಂದನ್ನು ಯುಎಇ ಜತೆ ಸಹಿ ಮಾಡಲಾಗಿದೆ. ನಾವು ಸ್ವಯಂಚಾಲಿತ ಮಾರ್ಗದ ಮೂಲಕ ಎಫ್‌ಡಿಐಗಾಗಿ ಹಲವು ಕ್ಷೇತ್ರಗಳನ್ನು ತೆರೆದಿದ್ದೇವೆ. ಇಂದು ಭಾರತದ ಮೂಲಸೌಕರ್ಯಗಳ ಮೇಲೆ ದಾಖಲೆಯ ಹೂಡಿಕೆ ಹರಿದು ಬರುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತದ ಬಂಡವಾಳ ವೆಚ್ಚ 5 ಪಟ್ಟು ಹೆಚ್ಚಾಗಿದೆ.

ಸ್ನೇಹಿತರೆ,

ಭಾರತವು ಹಸಿರು ಮತ್ತು ಪರ್ಯಾಯ ಇಂಧನ ಮೂಲಗಳ ಕಡೆಗೆ ತನ್ನ ಪ್ರಯತ್ನಗಳನ್ನು ವೇಗವಾಗಿ ಮುನ್ನಡೆಸುತ್ತಿದೆ. ದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 3 ಪಟ್ಟು ಹೆಚ್ಚಾಗಿದೆ, ಜತೆಗೆ ಸೌರಶಕ್ತಿ ಸಾಮರ್ಥ್ಯವು 20 ಪಟ್ಟು ಹೆಚ್ಚಾಗಿದೆ. ಡಿಜಿಟಲ್ ಇಂಡಿಯಾ ಮಿಷನ್ ಜೀವನ ಮತ್ತು ವ್ಯವಹಾರಗಳನ್ನು ಪರಿವರ್ತಿಸಿದೆ. ಕಳೆದ 10 ವರ್ಷಗಳಲ್ಲಿ, ಅಗ್ಗದ ಫೋನ್‌ಗಳು ಮತ್ತು ಅಗ್ಗದ ಡೇಟಾದ ಲಭ್ಯತೆಯೊಂದಿಗೆ ಹೊಸ ಡಿಜಿಟಲ್ ಸೇರ್ಪಡೆ ಕ್ರಾಂತಿಕಾರಿಯಾಗಿದೆ. ಪ್ರತಿ ಹಳ್ಳಿಗೆ ಆಪ್ಟಿಕಲ್ ಫೈಬರ್ ಒದಗಿಸುವ ಅಭಿಯಾನ, 5-ಜಿಯ ತ್ವರಿತ ವಿಸ್ತರಣೆ ಭಾರತೀಯರ ಜೀವನವನ್ನು ಬದಲಾಯಿಸುತ್ತಿದೆ. ಇಂದು ನಾವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್  ಪರಿಸರ ವ್ಯವಸ್ಥೆ ಹೊಂದಿದ್ದೇವೆ. 10 ವರ್ಷಗಳ ಹಿಂದೆ ಭಾರತದಲ್ಲಿ ಸುಮಾರು 100 ಸ್ಟಾರ್ಟಪ್‌ಗಳಿದ್ದವು. ಇಂದು ಭಾರತದಲ್ಲಿ 1 ಲಕ್ಷ 15 ಸಾವಿರ ನೋಂದಾಯಿತ ಸ್ಟಾರ್ಟಪ್‌ಗಳಿವೆ. ಭಾರತದ ಒಟ್ಟಾರೆ ರಫ್ತಿನಲ್ಲೂ ದಾಖಲೆಯ ಏರಿಕೆಯಾಗಿದೆ.

ಸ್ನೇಹಿತರೆ,

ಭಾರತವನ್ನು ವ್ಯಾಪಿಸುತ್ತಿರುವ ಪರಿವರ್ತಕ ಬದಲಾವಣೆಗಳು ನಾಗರಿಕರ ಜೀವನ ಸೌಕರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅವರನ್ನು ಸಬಲೀಕರಣಗೊಳಿಸುತ್ತವೆ. ನಮ್ಮ ಸರ್ಕಾರದ ಪ್ರಯತ್ನಗಳ ಫಲವಾಗಿ ಕಳೆದ 5 ವರ್ಷಗಳಲ್ಲಿ, 13.5 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ, ಮಧ್ಯಮ ವರ್ಗದ ಸರಾಸರಿ ಆದಾಯವು ಸ್ಥಿರವಾಗಿ ಹೆಚ್ಚುತ್ತಿದೆ. ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆ ದಾಖಲೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಇದು ಭಾರತದ ಭವಿಷ್ಯಕ್ಕಾಗಿ ಸಕಾರಾತ್ಮಕ ಸಂಕೇತಗಳನ್ನು ಸೂಚಿಸುತ್ತದೆ. ನೀವೆಲ್ಲರೂ ಭಾರತದ ಅಭಿವೃದ್ಧಿ ಪಯಣಕ್ಕೆ ಕೈಜೋಡಿಸಿ ನಮ್ಮೊಂದಿಗೆ ನಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ.

ಸ್ನೇಹಿತರೆ,

ಸಾರಿಗೆ ಸುಲಭಗೊಳಿಸಲು ಭಾರತದಲ್ಲಿ ಸರಕು ಸಾಗಣೆ ನೀತಿಗಳನ್ನು ಆಧುನೀಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಕಳೆದ ದಶಕದಲ್ಲಿ, ಭಾರತದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 74ರಿಂದ 149ಕ್ಕೆ ಏರಿಕೆಯಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲವು ಸುಮಾರು ದ್ವಿಗುಣಗೊಂಡಿದೆ. ನಮ್ಮ ಮೆಟ್ರೋ ರೈಲು ಜಾಲವು 10 ವರ್ಷಗಳಲ್ಲಿ 3 ಪಟ್ಟು ಹೆಚ್ಚು ವಿಸ್ತರಿಸಿದೆ. ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳು ಗುಜರಾತ್, ಮಹಾರಾಷ್ಟ್ರ ಮತ್ತು ಪೂರ್ವ ಕರಾವಳಿಯಂತಹ ಪ್ರದೇಶಗಳನ್ನು ಸಂಪರ್ಕಿಸುತ್ತಿವೆ. ಏಕಕಾಲದಲ್ಲಿ, ಭಾರತದಲ್ಲಿ ಹಲವಾರು ರಾಷ್ಟ್ರೀಯ ಜಲಮಾರ್ಗಗಳ ಕೆಲಸ ಪ್ರಗತಿಯಲ್ಲಿದೆ. ಭಾರತೀಯ ಬಂದರುಗಳ ಪುನಶ್ಚೇತನ ಸಮಯ ಇಂದು ಬಹಳ ಸ್ಪರ್ಧಾತ್ಮಕವಾಗಿದೆ. ಜಿ-20 ಸಮಯದಲ್ಲಿ ಘೋಷಿಸಲಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್, ನಿಮ್ಮಂತಹ ಹೂಡಿಕೆದಾರರಿಗೆ ಗಮನಾರ್ಹ ವ್ಯಾಪಾರ ಅವಕಾಶಗಳನ್ನು ಒದಗಿಸುತ್ತದೆ.

ಸ್ನೇಹಿತರೆ,

ಭಾರತದ ಪ್ರತಿಯೊಂದು ಮೂಲೆಯೂ ನಿಮಗಾಗಿ ಹೊಸ ಸಾಧ್ಯತೆಗಳನ್ನು ನೀಡುತ್ತದೆ. ವೈಬ್ರೆಂಟ್ ಗುಜರಾತ್ ಶೃಂಗಸಭೆಯು ‘ಭವಿಷ್ಯದ ಹೆಬ್ಬಾಗಿಲು’ ಆಗಿ ಕಾರ್ಯ ನಿರ್ವಹಿಸುತ್ತದೆ. ನೀವು ಕೇವಲ ಭಾರತದಲ್ಲಿ ಹೂಡಿಕೆ ಮಾಡುತ್ತಿಲ್ಲ, ಆದರೆ ಹೊಸ ಪೀಳಿಗೆಯ ಯುವ ಸೃಷ್ಟಿಕರ್ತರು ಮತ್ತು ಗ್ರಾಹಕರನ್ನು ರೂಪಿಸುತ್ತಿದ್ದೀರಿ. ಭಾರತದ ಮಹತ್ವಾಕಾಂಕ್ಷೆಯ ಯುವ ಪೀಳಿಗೆಯೊಂದಿಗಿನ ನಿಮ್ಮ ಪಾಲುದಾರಿಕೆಯು ನಿಮಗೆ ಊಹಿಸಲಾಗದ ಫಲಿತಾಂಶಗಳನ್ನು ತರಬಹುದು. ಈ ನಂಬಿಕೆಯೊಂದಿಗೆ, ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಸೇರಿದ್ದಕ್ಕಾಗಿ ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಾನು ನಿಮಗೆ ಭರವಸೆ ನೀಡುತ್ತೇನೆ – ನಿಮ್ಮ ಕನಸುಗಳು ನನ್ನ ನಿರ್ಣಯಗಳೊಂದಿಗೆ ಹೊಂದಿಕೆಯಾಗುತ್ತವೆ. ನಿಮ್ಮ ಕನಸುಗಳು ದೊಡ್ಡದಾಗಿದ್ದರೆ, ನನ್ನ ನಿರ್ಣಯವು ಬಲವಾಗಿರುತ್ತದೆ. ಬಾ, ದೊಡ್ಡ ಕನಸು – ಈ ಕನಸುಗಳನ್ನು ವಾಸ್ತವಕ್ಕೆ ತಿರುಗಿಸಲು ಸಾಕಷ್ಟು ಅವಕಾಶಗಳು ಮತ್ತು ಸಾಕಷ್ಟು ಸಾಮರ್ಥ್ಯಗಳಿವೆ.

ತುಂಬು ಧನ್ಯವಾದಗಳು!

 

*****