ನೆಚ್ಚಿನ ಯುವಜನರೇ, ನೀವು IITಯವರು. ಆದರೆ ನಾನು ಎರಡು I ಸೇರಿಸಿಕೊಂಡ ವ್ಯಕ್ತಿಯಲ್ಲ. ನೀವೆಲ್ಲರೂ ಐಐಟಿಯವರಾದರೆ ನಾನು ಬಾಲ್ಯದಿಂದ ಕೇವಲ ಟಿಎನ್ ಆಗಿದ್ದೇನೆ. T E A ಯವನು ಅಂದರೆ ಚಾಯ್ ವಾಲಾ ಆಗಿದ್ದವನು. ಕಾಲೇಜಿನ ಯುವಜನರು ಬಹಳ ತೀಕ್ಷ್ಣಮತಿಗಳಾಗಿರುತ್ತಾರೆ. ಅವರಿಗೆ ಗ್ರಹಿಸಲು ಹೆಚ್ಚು ಸಮಯ ತಗಲುವುದಿಲ್ಲ ಎಂದು ನಾನು ಯೋಚಿಸುತ್ತಿದ್ದೆ. ಕೊನೆಗೆ ಅದೇ ಆಯಿತು. ಇಂದು ಅಕ್ಟೋಬರ್ 7ನೇ ತಾರೀಖು. 2001ರಲ್ಲಿ ಜನವರಿ 26ರಂದು ಭಯಂಕರ ಭೂಕಂಪವಾಗಿತ್ತು. ಆ ನಂತರದ ಸ್ಥಿತಿ ಹೇಗಿತ್ತೆಂದರೆ ನನ್ನ ಜೀವನದಲ್ಲಿ ಯಾವುದೇ ಮಾರ್ಗವೂ ಉಳಿದಿರಲಿಲ್ಲ. 2001ರ ಅಕ್ಟೋಬರ್ 7ರಂದು ನಾನು ಆಕಸ್ಮಿಕವಾಗಿ ಈ ಗಾಂಧಿನಗರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಜವಾಬ್ದಾರಿಯನ್ನು ನಿರ್ವಹಿಸಲು ಆರಂಭಿಸಿದೆ. ಆಡಳಿತ ವ್ಯವಸ್ಥೆಯ ಅರಿವಿರಲಿಲ್ಲ, ಎಂದೂ ವಿಧಾನಸಭೆಯನ್ನು ಕಂಡವನಾಗಿರಲಿಲ್ಲ. ಆದರೆ ಒಂದು ಹೊಸ ಜವಾಬ್ದಾರಿ ಹೆಗಲಿಗೇರಿತ್ತು. ಆದರೆ ಶ್ರಮ ವಹಿಸಿ ಕರ್ತವ್ಯ ನಿಭಾಯಿಸುವುದರಲ್ಲಿ ಎಂದಿಗೂ ಕೊರತೆ ಮಾಡುವುದಿಲ್ಲ ಎಂದು ಮನಸ್ಸಿನಲ್ಲಿ ನಿರ್ಧರಿಸಿದ್ದೆ. ಇಂದು ದೇಶವು ಪದೇಪದೇ ನನಗೆ ಹೊಸ ಜವಾಬ್ದಾರಿ ನೀಡಿದೆ. ಈ ಹೊಸ ಜವಾಬ್ದಾರಿಯಿಂದಾಗಿ ನಾನು ಇಂದು ನಿಮ್ಮ ನಡುವೆ ಇದ್ದೇನೆ.
ಈ ದಿನ ಇಲ್ಲಿ ಭಾರತದ ಬೇರೆಬೇರೆ ಭೂಭಾಗಗಳಿಂದ ಬಂದಿರುವ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ಬಂದಿದ್ದಾರೆ, ಜೊತೆಗೆ ಕೆಲವು ಹಿರಿಯರೂ ಇದ್ದಾರೆ. ಅವರಿಗೆ ನಾನು ಎಲ್ಲಕ್ಕಿಂತ ಮೊದಲು ಪ್ರಮಾಣಪತ್ರ ನೀಡಿದೆ. ನಾನು ಅವರಿಂದ ಎಲ್ಲ ವಿಷಯಗಳನ್ನು ಕೇಳಿ ತಿಳಿದುಕೊಂಡು ಅಚ್ಚರಿಗೊಂಡೆ. ತಾವು ಹಳ್ಳಿಯಲ್ಲಿ ಏನು ಮಾಡುತ್ತಿದ್ದೇವೆ, ಜನರಿಗೆ ಹೇಗೆ ನೆರವಾಗುತ್ತಿದ್ದೇವೆ, ತಾವು ಯಾವ ಯಾವ ತರಬೇತಿ ಪಡೆದುಕೊಂಡಿದ್ದೇವೆ ಎಂದು ಅವರಿಗೆ ಎಲ್ಲವೂ ಗೊತ್ತಿದೆ. ಆ ತರಬೇತಿಯ ಪ್ರಯೋಜನವನ್ನು ಹೇಗೆ ಪಡೆಯುತ್ತೇವೆ ಎಂದು ನನ್ನ ಎಲ್ಲ ಪ್ರಶ್ನೆಗಳಿಗೆ ಅವರು ಸೂಕ್ತ ಉತ್ತರ ನೀಡುತ್ತಿದ್ದರು. ಇದನ್ನೇ ಕ್ರಾಂತಿ ಎಂದು ನಾನು ಭಾವಿಸುತ್ತೇನೆ. ಈ ಪ್ರಪಂಚ ಮತ್ತು ನಮ್ಮ ದೇಶದಲ್ಲಿ ಕಳೆದ ಮುನ್ನೂರು ವರ್ಷಗಳಲ್ಲಿ ಆಗಿರದಷ್ಟು ತಂತ್ರಜ್ಞಾನದ ಕ್ರಾಂತಿಯು ಕೇವಲ ಇತ್ತೀಚಿನ 50 ವರ್ಷಗಳಲ್ಲಿ ವೇಗವಾಗಿ ಆಗಿದೆ. ತಂತ್ರಜ್ಞಾನವು ತನಗೆ ತಾನೇ driving force ಆಗಿದೆ. ಇಂತಹ ಸಮಯದಲ್ಲಿ ಯಾವುದೇ ದೇಶವು ಪ್ರಗತಿ ಹೊಂದಬೇಕಾದರೆ ಭಾರತದ ಎಲ್ಲ ಸ್ತರದ ಜನರಿಗೆ ಅವರು ಪಟ್ಟಣದವರಾಗಲಿ, ಹಳ್ಳಿಯವರಾಗಲಿ, ಶಿಕ್ಷಿತರಾಗಲಿ ಅಥವಾ ಅಶಿಕ್ಷಿತರಾಗಲಿ, ಹಿರಿಯರಾಗಲಿ ಅಥವಾ ಯುವಜನರಾಗಲಿ, ಈ ತಂತ್ರಜ್ಞಾನದ ಜೊತೆಗೆ ಸಾಗುವುದು ಒಂದು ಉಜ್ವಲ ಭವಿಷ್ಯಕ್ಕೆ ಅನಿವಾರ್ಯವಾಗಿದೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಸಾಕ್ಷರತೆಗೆ ಯಾವ ರೀತಿ ಒತ್ತು ನೀಡುತ್ತಿದ್ದರೆಂದರೆ ಸ್ವರಾಜ್ಯ ಗಳಿಸುವುದಕ್ಕಾಗಿ ಸಾಕ್ಷರತೆಯೇ ಒಂದು ಶಕ್ತಿಯಾಗಿತ್ತು. ಉತ್ತಮ ದೇಶದ ನಿರ್ಮಾಣದಲ್ಲಿ ಡಿಜಿಟಲ್ ಸಾಕ್ಷರತೆ ಎನ್ನುವುದು ಒಂದು ಬಹು ದೊಡ್ಡ ಶಕ್ತಿಯಾಗಿದೆ. ಆದ್ದರಿಂದ ಭಾರತ ಸರ್ಕಾರವು ಭಾರತದ ಪ್ರತಿ ಹಳ್ಳಿ, ಆ ಹಳ್ಳಿಯ ಪ್ರತಿಯೊಂದು ಪೀಳಿಗೆಯನ್ನೂ ಡಿಜಿಟಲ್ ಸಾಕ್ಷರರನ್ನಾಗಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಇದು ಇಂದಿನ ಕಾರ್ಯಕ್ರಮದ ಒಂದು ಭಾಗವಾಗಿದೆ. ಗ್ರಾಮೀಣ ಭಾರತದಲ್ಲಿ ಆರು ಕೋಟಿ ಕುಟುಂಬಗಳಿವೆ. ಈ ಆರು ಕೋಟಿ ಕುಟುಂಬಗಳಲ್ಲಿ ಪ್ರತಿ ಕುಟುಂಬದಿಂದ ಕನಿಷ್ಠ ಒಬ್ಬ ವ್ಯಕ್ತಿಯನ್ನಾದರೂ ಡಿಜಿಟಲ್ ಸಾಕ್ಷರರನ್ನಾಗಿಸುವ ಅಭಿಯಾನ ಕೈಗೊಳ್ಳಲಾಗಿದೆ. ಇದು ಇಪ್ಪತ್ತು ಗಂಟೆಗಳ ತರಬೇತಿಯಾಗಿದ್ದು ಅದನ್ನು ಕಲಿಸಲಾಗುತ್ತದೆ. ಆನ್ ಲೈನ್ ಪರೀಕ್ಷೆ ತೆಗೆದುಕೊಳ್ಳಬೇಕು. ವೀಡಿಯೊ ಕ್ಯಾಮರಾದ ಮುಂದೆ ಕುಳಿತು ಆನ್ ಲೈನ್ ಪರೀಕ್ಷೆ ತೆಗೆದುಕೊಳ್ಳಬೇಕು. ಆ ಮೂಲಕ ಅವರನ್ನು ಸರ್ಟಿಫೈ ಮಾಡಲಾಗುತ್ತದೆ. ಡಿಜಿಟಲ್ ಸಾಕ್ಷರತೆ ಹೊಂದಲು ನೀವು ಎಷ್ಟೇ ಶಿಕ್ಷಿತರಾಗಿದ್ದರೂ, ನಿಮ್ಮ ವಯಸ್ಸು ಎಷ್ಟೇ ಆಗಿದ್ದರೂ ಅದೆಲ್ಲ ಗೌಣವಾಗುತ್ತದೆ.
ಒಂದು ಕಾಲದಲ್ಲಿ ಕಾರ್ಲ್ ಮಾರ್ಕ್ಸ್ ನ ತತ್ವಶಾಸ್ತ್ರ ನಡೆಯುತ್ತಿತ್ತು. ಪ್ರಪಂಚದಲ್ಲಿ ಜನರು ಅದನ್ನೇ ಉದ್ಧರಿಸುತ್ತಿದ್ದರು. ಕಾರ್ಲ್ ಮಾರ್ಕ್ಸ್ ನ ವಿಚಾರಗಳನ್ನು ಒಪ್ಪಿದವರು ಮತ್ತು ಒಪ್ಪದವರು ಎಂದು ಎರಡೂ ತರಹದ ಜನರಿದ್ದರು. ಈ ವಿಭಜನೆಯ ಆಧಾರದ ಮೇಲೆ ಅವರು ತಮ್ಮ ರಾಜಕೀಯ ವಿಚಾರಧಾರೆಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಅದು ಯಶಸ್ವಿಯಾಯಿತೊ ಇಲ್ಲವೊ? ಆದರೆ ವಿದ್ವಾಂಸರು ಅದನ್ನು ಕುರಿತು ಚರ್ಚಿಸುತ್ತಿದ್ದರು. ಕ್ರಮೇಣ ವಿಚಾರಗಳು ಮುರುಟುತ್ತಾ ಮುರುಟುತ್ತಾ ಅದು ಈಗ ಎಲ್ಲೂ ಕಂಡುಬರುತ್ತಿಲ್ಲ. ದೊಡ್ಡ ಜನರಷ್ಟೇ ಅದನ್ನು ಓದಿಕೊಂಡಿದ್ದಾರೆ. ಆದರೆ ತಂತ್ರಜ್ಞಾನದ ವಿಷಯದಲ್ಲಿ ಭಾರತದ ಉಜ್ವಲ ಭವಿಷ್ಯಕ್ಕಾಗಿ ದೇಶದಲ್ಲಿ ಡಿಜಿಟಲ್ ವಿಭಜನೆಯಾಗದಂತೆ ನಾವು ಜನರನ್ನು ಜಾಗೃತಗೊಳಿಸುವ ಪ್ರಯತ್ನ ಪಡಬೇಕು. ಕೆಲವರು ಡಿಜಿಟಲ್ ತಂತ್ರಜ್ಞಾನದಲ್ಲಿ ನಿಪುಣರಾಗಿದ್ದು, ಕೆಲವರು ಅದರಿಂದ ಸಂಪೂರ್ಣ ದೂರ ಉಳಿಯುವುದರಿಂದ ಮುಂಬರುವ ಕಾಲಘಟ್ಟದಲ್ಲಿ ಯಾವ ರೀತಿ ಬದಲಾವಣೆ ಉಂಟಾಗಬಹುದು ಎನ್ನುವುದು ಕಂಡುಬರುತ್ತಿದೆ. ಈ ರೀತಿಯ ಡಿಜಿಟಲ್ ವಿಭಜನೆಯು ಸಮಾಜದ ನಿರ್ಮಾಣಕ್ಕೆ ಬಹು ದೊಡ್ಡ ಸಂಕಷ್ಟವನ್ನು ತಂದೊಡ್ಡುತ್ತದೆ. ಆದ್ದರಿಂದ ಸಾಮಾಜಿಕ ಸಾಮರಸ್ಯಕ್ಕಾಗಿ ಪ್ರಗತಿಯ ಮೂಲಭೂತ ಅಂಶಗಳನ್ನು ಸೇರಿಸಿಕೊಂಡು ಈ ಡಿಜಿಟಲ್ ವಿಭಜನೆಯಿಂದ ಮುಕ್ತಿ ಪಡೆಯುವ ದಿಸೆಯಲ್ಲಿ ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾಕ್ಷರತೆಯ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮನೆಯಲ್ಲಿ ಎಂತೆಂತಹ ಉತ್ತಮ ಟಿವಿಗಳು ಬಂದಿವೆ ಎಂದು ನಮಗೆ ಗೊತ್ತು. ರಿಮೊಟ್ ನಿಂದ ನಡೆಯುತ್ತವೆ. ಪ್ರಾರಂಭದಲ್ಲಿ ಏನಿದು ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ ಮನೆಯಲ್ಲಿ ಎರಡು ಮೂರು ವರ್ಷದ ಮಗು ತನಗೆ ಬೇಕಾದ ಚಾನೆಲ್ ಬದಲಿಸಿಕೊಳ್ಳುತ್ತದೆ. ವಿಸಿಆರ್ ಚಾಲೂ ಮಾಡುತ್ತದೆ. ಯಾವಾಗ ಹಾಕಬೇಕು, ಆರಿಸಬೇಕು ಎಂದು ಕಲಿತುಕೊಳ್ಳುತ್ತದೆ. ಆಗ ಮನೆಯ ಹಿರಿಯರಿಗೆ ನಾವು ಸಹ ಕಲಿತುಕೊಳ್ಳಬೇಕು ಎಂದು ಅನಿಸುತ್ತದೆ. ನಂತರ ಅವರು ಸಹ ಸ್ವಿಚ್ ಆನ್ ಸ್ವಿಚ್ ಆಫ್ ಮಾಡುವುದನ್ನು ಕಲಿಯುತ್ತಾರೆ. ವಾಟ್ಸಪ್ ಫಾರ್ವರ್ಡ್ ಮಾಡುವುದನ್ನು ಹೇಳಿಕೊಡಲು ಭಾರತದಲ್ಲಿ ಯಾವುದಾದರೂ ಸಂಸ್ಥೆ ಇದೆಯೆ? ಆದರೆ ವಾಟ್ಸಪ್ ಫಾರ್ವರ್ಡ್ ಮಾಡಲು ಬರುತ್ತದೋ, ಇಲ್ಲವೊ? ಮಾಡಲು ಬರುವುದನ್ನು ನೀವೆಲ್ಲರೂ ನೋಡಿದ್ದೀರಿ. ನನ್ನ ಮಾತಿನ ಅರ್ಥ ಬಳಕೆದಾರ ಸ್ನೇಹಿ ತಂತ್ರಜ್ಞಾನದ ಮಾರ್ಗದಲ್ಲಿ ಹೋದರೆ ನಾವು ಸುಲಭವಾಗಿ ಡಿಜಿಟಲ್ ಸಾಕ್ಷರರನ್ನಾಗಿಸುವ ದಿಸೆಯಲ್ಲಿ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಡಿಜಿಟಲ್ ಸಾಕ್ಷರತೆ, ಡಿಜಿಟಲ್ ತಂತ್ರಜ್ಞಾನ, ಡಿಜಿಟಲ್ ಭಾರತವು ಒಂದು ಉತ್ತಮ ಆಡಳಿತದ ಲಕ್ಷಣವಾಗಿದೆ. ಪಾರದರ್ಶಕತೆಗೆ ಖಾತ್ರಿಯಾಗಿದೆ.
ಭಾರತ ಸರ್ಕಾರವು ಒಂದು JAM trinity ಯ ಮೂಲಕ ಪ್ರಗತಿಯ ಒಂದು ಪರಿಕಲ್ಪನೆಯನ್ನು ಮಾಡಿದೆ. JAM ಅಂದರೆ J-ಜನಾಧನ್ ಅಕೌಂಟ್, A-ಆಧಾರ್, M-ಮೊಬೈಲ್ ಫೋನ್, ಈ ಮೂರನ್ನೂ ಸೇರಿಸಿ ಜನಸಾಮಾನ್ಯರ ಅವಶ್ಯಕತೆಗೆ ಅನುಗುಣವಾಗಿ ಆತನ ಮೊಬೈಲ್ ಫೋನ್ ನಲ್ಲಿ ಇರುವಂತೆ ನೋಡಿಕೊಂಡು ಪ್ರಗತಿಯ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ನಮ್ಮ ದೇಶದಲ್ಲಿ ಒಂದು ಬಹು ದೊಡ್ಡ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ನೆಟ್ ವರ್ಕ್ ಅಳವಡಿಸುವ ದಿಸೆಯಲ್ಲಿ ಪ್ರಯತ್ನಗಳಾಗಿವೆ. ಈಗ ದೂರದೂರದ ಪ್ರದೇಶಗಳಲ್ಲಿ ನಮ್ಮ ಭಾವೀ ಪ್ರಜೆಗಳಿಗೆ ನಮ್ಮ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ದೂರಶಿಕ್ಷಣ ಸಾಕ್ಷರತೆಯ ಮೂಲಕ ನೀಡಲು ಸಾಧ್ಯವಾಗಿದೆ. ಈ ಆಪ್ಟಿಕಲ್ ಫೈಬರ್ ನೆಟ್ ವರ್ಕ್ ಭಾರತದ ಪ್ರತಿಯೊಂದು ಹಳ್ಳಿಯನ್ನು ತಲಪುತ್ತದೆ. ಆ ಹಳ್ಳಿಯ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ, ಆ ಹಳ್ಳಿಗೆ ಸರ್ಕಾರೀ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಆಮೂಲಾಗ್ರ ಬದಲಾವಣೆ ಉಂಟಾಗಲಿದೆ. ಇದೇ ಪರಿಕಲ್ಪನೆಯೊಂದಿಗೆ ನಾವು ಮುಂದೆ ಸಾಗುತ್ತಿದ್ದೇವೆ. ಅದರ ಅಂಗವಾಗಿ ಇಂದು ದೇಶದ ಬೇರೆಬೇರೆ ಮೂಲೆಗಳ ಸಮುದಾಯ ಸೇವಾ ಕೇಂದ್ರಗಳಲ್ಲಿ (Community Service Centre) ತರಬೇತಿ ಪಡೆದು ಬಂದವರು ಇಲ್ಲಿದ್ದಾರೆ. ಕೆಲವರು ಈ ಕೋರ್ಸ್ ಗೆ ಸೇರುವವರಿದ್ದಾರೆ. ಮುಂದಿನ ದಿನಗಳಲ್ಲಿ ಆರು ಕೋಟಿ ಕುಟುಂಬಗಳಲ್ಲಿ ಒಬ್ಬೊಬ್ಬ ವ್ಯಕ್ತಿಗೆ ತರಬೇತಿ ನೀಡಲಾಗುತ್ತದೆ. ಅದು ಅವರಿಗೆ ಜೀವನೋಪಾಯದ ಮಾರ್ಗವೂ ಆಗುತ್ತದೆ. ಏಕೆಂದರೆ ಅವರು ಸೇವೆಗಳನ್ನು ಒದಗಿಸುತ್ತಾರೆ. ಈ ದಿಸೆಯಲ್ಲಿ ನಾವು ಪ್ರಯತ್ನಿಸಬೇಕು. ಕೆಲವೊಮ್ಮೆ ಇದು ಸಹ ಅನುಭವಕ್ಕೆ ಬರುತ್ತದೆ. ಅತ್ಯುತ್ತಮ ಮೊಬೈಲ್ ಮಾರುಕಟ್ಟೆಗೆ ಬಂದರೆ ಟಿವಿಯಲ್ಲಿ ಅದರ ಜಾಹಿರಾತು ನೋಡಿ, ಪತ್ರಿಕೆಯಲ್ಲಿ ಅಥವಾ ಮ್ಯಾಗಝೈನ್ ನಲ್ಲಿ ಓದಿ ಅಥವಾ ಗೂಗಲ್ ಗುರುವಿನ ಮೂಲಕ ತಿಳಿದುಕೊಂಡಾಗ ಆತ ಮೊದಲು ಮಾಡುವ ಕೆಲಸವೆಂದರೆ ಅದನ್ನು ಖರೀದಿಸುವುದು ಎಂಬುದನ್ನು ನಿಮ್ಮಲ್ಲಿ ಬಹಳಷ್ಟು ಜನರು ನೋಡಿರುತ್ತೀರಿ. ಮೊಬೈಲ್ ನಲ್ಲಿ ಬಳಕೆಗೆ ಬರುವಂತಹುದು ಬಹಳಷ್ಷಿದ್ದರೂ ಅದರ ಬಗ್ಗೆ ಏನೂ ಗೊತ್ತಿರದ, ಅದನ್ನು ಉಪಯೋಗಿಸುವ ಅಭ್ಯಾಸ ಬೆಳೆಸಿಕೊಳ್ಳದ ಇಂತಹ ಸುಮಾರು ಶೇ.80 ಜನರು ಸಿಗುತ್ತಾರೆ. ಇಲ್ಲಿ ಐಐಟಿಯಲ್ಲಿ ಸಂಪೂರ್ಣವಾಗಿ ಮೊಬೈಲ್ ಉಪಯೋಗಿಸುವ ಅಭ್ಯಾಸ ಇಟ್ಟುಕೊಳ್ಳದ ಕೆಲವು ಜನರು ಸಿಗಬಹುದು. ಅತ್ಯುತ್ತಮ ಮಾದರಿಯ ಮೊಬೈಲ್ ಖರೀದಿಸಿಟ್ಟು ಕೊಂಡಿರಬಹುದು. ಆದ್ದರಿಂದ ಡಿಜಿಟಲ್ ಸಾಕ್ಷರತೆಗಾಗಿ ನಾವು ಖರ್ಚು ಮಾಡಿದ್ದೇವೆ, ಇದರ ಅತ್ಯಧಿಕ ಉಪಯೋಗವನ್ನು ಸಹ ಪಡೆಯಬಹುದು. ಅಂದರೆ ಒಂದು ರೀತಿಯಲ್ಲಿ ಮೌಲ್ಯವರ್ಧನೆ ಮಾಡಬಹುದು. ಆದ್ದರಿಂದ ಈ ಡಿಜಿಟಲ್ ಸಾಕ್ಷರತೆಯ, ಡಿಜಿಟಲ್ ಇಂಡಿಯಾದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಮಾಜವು ಕಡಿಮೆ ನಗದು ಬಳಸುವಂತೆ ಮಾಡುವುದರಲ್ಲೂ ಈ ಡಿಜಿಟಲ್ ಸಾಕ್ಷರತೆಯು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಭಾರತ ಸರ್ಕಾರವು ರೂಪಿಸಿರುವ Bheem app ವಿಶ್ವಸದ ಇತರ ದೇಶಗಳ ಅಚ್ಚರಿಗೆ ಕಾರಣವಾಗಿದೆ. ಭಾರತದ ಬಳಿ ಇರುವ ಆಧಾರ್ ಡಿಜಿಟಲ್ ಬಯೋಮೆಟ್ರಿಕ್ ಸಿಸ್ಟಮ್ ನಲ್ಲಿ ಸಂಗ್ರಹಿಸಲಾಗಿರುವ ಡೇಟಾ ಬ್ಯಾಂಕ್ ವಿಶ್ವದ ಪಾಲಿಗೆ ಅಚ್ಚರಿಯ ಸಂಗತಿಯಾಗಿದೆ. ಇದನ್ನು ಜೋಡಿಸುತ್ತಾ ನಾವು ಪ್ರಗತಿಯನ್ನು ಉದ್ಯಮಶೀಲತೆಗೆ ಜೋಡಿಸುವ ದಿಸೆಯಲ್ಲಿ ಮುಂದೆ ಸಾಗುತ್ತಿದ್ದೇವೆ. ಅದರಿಂದ ಬಹಳ ಉಪಯೋಗವಾಗಲಿದೆ ಎಂದು ನಾನು ಭಾವಿಸುತ್ತೇನೆ. ಇಂದು ಈ ಐಐಟಿಯ ಹೊಸ ಕ್ಯಾಂಪಸ್ ಉದ್ಘಾಟಿಸುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವಾಗಿದೆ. ಇದಕ್ಕಾಗಿ ಜಮೀನು ನೀಡುವ ನಿರ್ಧಾರ ಕೈಗೊಂಡಾಗ ಚುನಾವಣೆಯ ದಿನಗಳಾಗಿದ್ದರೆ ಅದು ಚುನಾವಣೆಯ ವಿಷಯವಾಗಿರುತ್ತಿತ್ತು. ಸುಮಾರು 400 ಎಕರೆ ಜಮೀನು ಅದೂ ಗಾಂಧೀನಗರದಲ್ಲಿ ಅದೂ ಸಾಬರಮತಿ ನದಿ ತೀರದಲ್ಲಿ ಇದರ ಬೆಲೆ ಎಷ್ಟು ದುಬಾರಿಯಾಗಿದೆ ಎಂದು ನೀವು ಅಂದಾಜು ಮಾಡಬಹುದು. ಚುನಾವಣೆ ಹತ್ತಿರವಿರುವಾಗ ಈ ರೀತಿ ಜಮೀನು ನೀಡಿದ್ದರೆ ಕೆಲವು ಜನರು ಈ ವಿಷಯವನ್ನು ಬಳಸಿಕೊಳ್ಳುತ್ತಿದ್ದರು. ಬುಲೆಟ್ ರೈಲಿನ ವಿರುದ್ಧವಾಗಿಯೂ ಈಗ ಮಾತನಾಡುತ್ತಿರುತ್ತಾರೆ. ಆ ಸಮಯದಲ್ಲಿ ಗುಜರಾತಿನ ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣದ ಬುನಾದಿಯೇ ಸಡಿಲವಾಗಿದೆ, ನೀವು ಐಐಟಿ ಸ್ಥಾಪನೆಗೆ ಹಣ ಖರ್ಚು ಮಾಡುತ್ತಿದ್ದೀರಿ ಎಂದು ಟೀಕಿಸಿರುತ್ತಿದ್ದರು. ಆದರೆ ನಾನು ಜಮೀನು ಕೊಡುವ ನಿರ್ಧಾರ ಮಾಡಿದ ಸಮಯದಲ್ಲಿ ಚುನಾವಣೆಯ ವಾತಾವರಣ ಇರದಿದ್ದುದೇ ಒಳ್ಳೆಯದಾಯಿತು. ಆದರೆ ಇದು ಎಂತಹ ದೂರದೃಷ್ಟಿಯ ತೀರ್ಮಾನ ಎಂದು ನಿಮಗೆ ಇಂದು ಗೊತ್ತಾಗಿರಬಹುದು. ನಾನು ಆ ದಿನ ಸುಧೀರ್ ಜೈನ್ ಮತ್ತು ನಮ್ಮ ಇಲಾಖೆಯ ಜನರಿಗೆ ಐಐಟಿ ಎನ್ನುವುದು ಒಂದು ಬ್ರ್ಯಾಂಡ್ (brand) ಎಂದು ಹೇಳಿದ್ದು ನೆನಪಿರಬಹುದು. ಭಾರತದಲ್ಲೀಗ ಐಐಟಿ ಒಂದು ಬ್ರ್ಯಾಂಡ್ ಆಗಿಬಿಟ್ಟಿದೆ. ಆದರೆ ಐಐಟಿಯ ಒಳಗೆ ಕ್ಯಾಂಪಸ್ ಬ್ರ್ಯಾಂಡ್ ಹೆಚ್ಚು ಶಕ್ತಿದಾಯಕವಾಗಬಲ್ಲದು. ಯಾವ ಐಐಟಿಯ ಕ್ಯಾಂಪಸ್ ಹೇಗಿದೆ? ಮುಂದಿನ ದಿನಗಳಲ್ಲಿ ಇದು ಚರ್ಚೆಯ ವಿಷಯವಾಗುತ್ತದೆ. ಆದ್ದರಿಂದ ಭಾರತದ ಅತ್ಯಂತ ಶ್ರೇಷ್ಠ ಐಐಟಿ ಕ್ಯಾಂಪಸ್ ನ ಕಿರೀಟದಂತೆ ನನ್ನ ಗುಜರಾತ್ ನಲ್ಲಿ ಇಂತಹ ಕ್ಯಾಂಪಸ್ ಇರಬೇಕು ಎಂದು ಹೇಳಿದ್ದೆ. ಇಂದು ಈ ಕ್ಯಾಂಪಸ್ ಭಾರತದ ಪ್ರಮುಖ ಐಐಟಿ ಯಾಗಿ ನಿಲ್ಲುವಷ್ಟರ ಮಟ್ಟಿಗೆ ಎದ್ದು ನಿಂತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಇಲ್ಲಿನ ಮತ್ತೊಂದು ಶಕ್ತಿಯೆಂದರೆ ಅಧ್ಯಾಪಕ ವರ್ಗದ್ದು. ಪ್ರಸ್ತುತ ಗಾಂಧಿನಗರದ ಐಐಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಾಪಕ ವರ್ಗದಲ್ಲಿ ಶೇ.75ರಷ್ಟು ಮಂದಿ ವಿದೇಶಗಳಲ್ಲಿ ತರಬೇತಿ ಪಡೆದು ಬಂದವರಾಗಿದ್ದಾರೆ, ವಿಶೇಷ ತಜ್ಞರಾಗಿ ಬಂದಿದ್ದಾರೆ. ಅವರು ತಮ್ಮ ಸಮಯ, ಶ್ರ ಮವನ್ನು ಈ ಐಐಟಿಯ ವಿದ್ಯಾರ್ಥಿಗಳಿಗೆ ಸಮರ್ಪಿಸಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ನಾನು ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಆದರೆ ಭಾರತ ಸರ್ಕಾರವು ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳೂ ಹೀಗಿರಬೇಕೆಂಬ ಸವಾಲನ್ನು ತೆಗೆದುಕೊಂಡಿದೆ. ಗಾಂಧಿನಗರದ ಐಐಟಿಯು ಈ ಸವಾಲನ್ನು ಸ್ವೀಕರಿಸಬೇಕು ಎಂದು ನಾನು ಬಯಸುತ್ತೇನೆ. ಧ್ವನಿಯೇನೋ ಅಲ್ಲಿಂದ ಬರುತ್ತಿದೆ, ಆದರೆ ಎಲ್ಲ ಐಐಟಿಯವರಿಗೆ ಏನಾಯಿತು? ಮೊದಲ ಬಾರಿಗೆ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಸುಧಾರಣೆಯಾಗಿದೆ. ಹಲವು ವರ್ಷಗಳಿಂದ ಇಂತಹ ಅಪೇಕ್ಷೆ ಇದ್ದರೂ ಯಾರಿಗೂ ಧೈರ್ಯ ಸಾಲುತ್ತಿರಲಿಲ್ಲ.
ಪ್ರಸ್ತುತ ವಿಶ್ವಾದ್ಯಂತ 500 ಶ್ರೇಷ್ಠ ವಿಶ್ಯವಿದ್ಯಾಲಯಗಳಿವೆ. ಆದರೆ ಸ್ವಾತಂತ್ರ್ಯ ಗಳಿಸಿ 70 ವರ್ಷಗಳಾದ ನಂತರವೂ ಈ 500 ಶ್ರೇಷ್ಠ ವಿಶ್ವಿವಿದ್ಯಾಲಯಗಳಲ್ಲಿ ನಾವು ಸ್ಥಾನ ಗಳಿಸಿಲ್ಲ. ಈ ಕಳಂಕವನ್ನು ತೊಡೆದು ಹಾಕಬೇಕೊ, ಬೇಡವೊ? 2022ರಲ್ಲಿ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ. ಅಷ್ಟರಲ್ಲಿ ನಮ್ಮ ವಿಶ್ವವಿದ್ಯಾಲಯಗಳನ್ನು ಎತ್ತರಕ್ಕೇರಿಸುವ ಕಾರ್ಯ ನೀವು ಮಾಡಿದರೆ ಜಗತ್ತಿನ ಮುಂದೆ ನಾವು ಯಾರಿಗೇನು ಕಡಿಮೆಯಿಲ್ಲ ಎಂದು ಸಾರಿ ಹೇಳಬಹುದು. ನಮ್ಮಿಂದ ಇದನ್ನು ಮಾಡಲು ಸಾಧ್ಯ ಇಲ್ಲವೇ? ಹತ್ತು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರೀ ವಿಶ್ವವಿದ್ಯಾಲಯಗಳನ್ನು ಈ ಸವಾಲಿನ ಹಾದಿಯಲ್ಲಿ ಮುನ್ನಡೆಸಲು ಆಯ್ಕೆ ಮಾಡುವ ನಿರ್ಧಾರವನ್ನು ಭಾರತ ಸರ್ಕಾರವು ಮೊದಲ ಬಾರಿಗೆ ತೆಗೆದುಕೊಂಡಿದೆ. ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ತೊಡಗಿಸಲಾಗುವುದು. ಈ ಹತ್ತು ಖಾಸಗಿ ಮತ್ತು ಸರ್ಕಾರೀ ವಿಶ್ವವಿದ್ಯಾಲಯಗಳು ಈ ಸವಾಲಿನ ದಾರಿಯಲ್ಲಿ ಗೆಲ್ಲುತ್ತಾ ಮೇಲೆ ಬಂದು ವಿಶ್ವದರ್ಜೆಯನ್ನು ಸ್ಥಾಪಿಸುತ್ತವೆ. ಇಂದು ಭಾರತ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳಲ್ಲಿರುವ ಎಲ್ಲ ನಿಯಮಗಳಿಂದ ಅವುಗಳನ್ನು ಮುಕ್ತಗೊಳಿಸಿ ಅವೇ ಪ್ರಪಂಚದ ಮುಂದೆ ದೇಶದ ಶಕ್ತಿಯನ್ನು ತೋರಿಸುವುದಕ್ಕಾಗಿ ಅವುಗಳಿಗೆ ಎಲ್ಲ ಸ್ವಾತಂತ್ರ್ಯ ನೀಡಲಾಗುವುದು. ಸಿಲಬಸ್ ನಲ್ಲಾಗಲೀ ಕ್ಯಾಂಪಸ್ ನಲ್ಲಾಗಲಿ, ಅಧ್ಯಾಪಕ ವರ್ಗದಲ್ಲಾಗಲಿ, ಖರ್ಚು ಮಾಡುವುದರಲ್ಲಾಗಲಿ ಯಾವುದರಲ್ಲೂ ಸರ್ಕಾರ ಮಧ್ಯೆ ಪ್ರವೇಶಿಸುವುದಿಲ್ಲ, ಆದರೆ ನೀವು ಫಲಿತಾಂಶ ತಂದು ಕೊಡಲೇಬೇಕು. ಈ 20 ವಿಶ್ವವಿದ್ಯಾಲಯಗಳಿಗಾಗಿ ಸರ್ಕಾರವು ಒಂದು ಸಾವಿರ ಕೋಟಿ ರೂಪಾಯಿ ತೊಡಗಿಸಲು ತಯಾರಿದೆ. ಗಾಂಧಿನಗರ ಐಐಟಿಯ ಬಳಿ 400 ಎಕರೆಯಷ್ಟು ವಿಶಾಲವಾದ ಕ್ಯಾಂಪಸ್ ಇದೆ, 1700 ಕೋಟಿ ರೂಪಾಯಿ ವೆಚ್ಚದಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ. ಸುಧೀರ್ ಜೈನ್ ಮತ್ತು ಅವರ ತಂಡ ಮತ್ತು ನಮ್ಮ ಈ ಎಲ್ಲ ಯುವಜನರು ಸೇರಿ ಕಾರ್ಯ ಕೈಗೊಂಡು ಮುಂದೆ ಬನ್ನಿ. ಯಾವುದೇ ದೇಶದಲ್ಲಿ ಅಭಿವೃದ್ಧಿಗಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಕಾಲಕಾಲಕ್ಕೆ ನಿರ್ಮಿಸುವ ಅಗತ್ಯವಿದೆ. ಗುಜರಾತ್ ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳನ್ನು ದೇಶಕ್ಕೆ ನೀಡಿದೆ. ಇಂದಿಗೂ ವಿಶ್ವದಲ್ಲಿ ಎಲ್ಲಿಯೂ ನ್ಯಾಯ ವಿಜ್ಞಾನದ ವಿಶ್ವವಿದ್ಯಾಲಯವಿಲ್ಲ. ಪ್ರಪಂಚದಲ್ಲಿ ಎಲ್ಲೂ ಇಲ್ಲ. ಗುಜರಾತ್ ಒಂದರಲ್ಲಿ ಮಾತ್ರ ಇಂತಹ ಒಂದೇ ಒಂದು ವಿಶ್ವವಿದ್ಯಾಲಯ ಇರುವುದು. ಇಂದಿಗೂ ಅತ್ಯುತ್ತಮ ಶಿಕ್ಷಕರನ್ನು ರೂಪಿಸುವ Indian Institute of Teacher Education IITE ಯಂತಹ ಯಾವುದೇ ವಿಶ್ವವಿದ್ಯಾಲಯವು ಭಾರತದಲ್ಲಿ ಬೇರೆಲ್ಲೂ ಇಲ್ಲ. ಶಿಕ್ಷಕ ತರಬೇತಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ನೀಡುವ, ಅತಿ ಉತ್ತಮರೆನಿಸಿಕೊಂಡ ಶಿಕ್ಷಕರು ಅಲ್ಲಿಂದ ಹೊರಬರುವಂತಹ ಶಿಕ್ಷಣ ಸಂಸ್ಥೆ ಕೇವಲ ಗುಜರಾತ್ ನಲ್ಲಿ ಮಾತ್ರ ಇದೆ. ಗುಜರಾತ್ ಇಂತಹ ವಿಶ್ವಂವಿದ್ಯಾಲಯವನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ. ಮಕ್ಕಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿರುವ ಮೊದಲ ರಾಜ್ಯ ಗುಜರಾತ್. ಇಡೀ ವಿಶ್ವದಲ್ಲೆಲ್ಲೂ ಮಕ್ಕಳ ವಿಶ್ವವಿದ್ಯಾಲಯ ಇಲ್ಲ. ಪ್ರಸ್ತುತ ಅತಿ ಸಣ್ಣ ಕುಟುಂಬದ ದಿಕ್ಕಿನೆಡೆಗೆ ಪ್ರಪಂಚವು ಹೊರಳುತ್ತಿದೆ. ತಂದೆತಾಯಿ ಇಬ್ಬರೂ ತಮ್ಮದೇ ಕಾರ್ಯಭಾರದಲ್ಲಿ ವ್ಯಸ್ತರಾಗಿದ್ದಾರೆ. ಮನೆಯಲ್ಲಿ ಕೆಲಸ ಮಾಡುವವರ ಭರವಸೆಯ ಮೇಲೆ ಇಬ್ಬರೂ ಮಗುವನ್ನು ಬಿಟ್ಟು ಹೊರಗೆ ಹೋಗುತ್ತಾರೆ. ಇಂತಹ ಒಂದು ಸಂಸ್ಥೆಯನ್ನು ಸ್ಥಾಪಿಸುವುದು ಇಂದಿನ ಕಾಲದ ಅಗತ್ಯವಾಗಿದೆ. ನಮ್ಮ ಪುಟ್ಟಪುಟ್ಟ ಮಕ್ಕಳ ಬೆಳವಣಿಗೆ ಸರಿಯಾಗಿರಬೇಕು, ಅವರ ಪೋಷಣೆ ಸರಿಯಾಗಿರಬೇಕು. ಬಾಲ್ಯದಿಂದಲೇ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ರೀತಿಯಲ್ಲಿ ಅವರ ವಿಕಾಸವಾಗಬೇಕು. ಇದಕ್ಕೆ ಸಂಬಂಧಿಸಿದಂತೆ ಈ ಮಕ್ಕಳ ವಿಶ್ವವಿದ್ಯಾಲಯವು ಸಂಶೋಧನೆ ಮಾಡುತ್ತದೆ. ಮಕ್ಕಳ ಆಟಿಕೆಗಳು ಹೇಗಿರಬೇಕು? ಮಕ್ಕಳು ಎಷ್ಟನೇ ತರಗತಿಯಲ್ಲಿರಬೇಕು? ಅವರ ಗೋಡೆಗಳ ಬಣ್ಣ ಹೇಗಿರಬೇಕು? ಮಕ್ಕಳಿಗೆ ಎಂತಹ ಹಾಡುಗಳನ್ನು ಕೇಳಿಸಬೇಕು? ಅವರಿಗೆ ನೀಡುವ ಪೋಷಕಾಂಶಗಳಿಂದ ಕೂಡಿದ ಆಹಾರ ಹೇಗಿರಬೇಕು? ಮಕ್ಕಳನ್ನು ಓದಿಸಲು ಆಧುನಿಕ ತಂತ್ರಜ್ಞಾನ ಹೇಗಿರಬೇಕು? ಆಗ ಮಕ್ಕಳಿಗೆ ಎಲ್ಲವೂ ಸುಲಭವಾಗುತ್ತದೆ. ಈ ಎಲ್ಲ ರೀತಿಯ ಸಂಶೋಧನೆಗಳ ಅಗತ್ಯವಿದೆ.
ಮೊದಲು ಅವಿಭಕ್ತ ಕುಟುಂಬಗಳು ಇರುತ್ತಿದ್ದವು. ಅವರ ಕುಟುಂಬವೇ ಒಂದು ರೀತಿಯಲ್ಲಿ ವಿಶ್ವ ವಿದ್ಯಾಲಯದಂತೆ ಇರುತ್ತಿತ್ತು. ಮಗು ಅಜ್ಜಿಯಿಂದ ಒಂದು ಕಲಿತರೆ, ತಾತನಿಂದ ಮತ್ತೊಂದು ಕಲಿಯುತ್ತಿತ್ತು, ಚಿಕ್ಕಪ್ಪನಿಂದ ಮಗದೊಂದು ಕಲಿಯುತ್ತಿತ್ತು. ಇಂದು ಸಣ್ಣ ಕುಟುಂಬದಲ್ಲಿ ಮಗುವಿಗೆ ಇಂತಹ ಶಿಕ್ಷಣದ ದಾರಿ ಮುಚ್ಚಿಹೋಗಿದೆ. ವಿಶ್ವದ ಮುಂದಿನ ಪೀಳಿಗೆಗಳ ಮಕ್ಕಳನ್ನು ಕುರಿತು ಚಿಂತಿಸಿದಾಗ ಈ ವಿಚಾರ ಮುಂದೆ ಬಂದಿತು, ಮಕ್ಕಳ ವಿಶ್ವಿವಿದ್ಯಾಲಯ ಜನ್ಮ ತಳೆಯಿತು. ಇದೇ ಗುಜರಾತ್ ನೆಲದಲ್ಲಿ ಅದು ಜನ್ಮ ತಳೆಯಿತು. ಅಪರಾಧ ಜಗತ್ತಿನಲ್ಲಿ ಮೂರು ಮಹತ್ವದ ಕ್ಷೇತ್ರಗಳಿವೆ. ಒಂದು ಕಾನೂನು ಬೋಧಿಸುವ ಶಿಕ್ಷಕರು, ಎರಡನೆಯದು ಪೊಲೀಸ್ ಮತ್ತು ಮೂರನೆಯದು ಅಪರಾಧ ಪತ್ತೆ ಹಚ್ಚುವ ಅಪರಾಧ ತಜ್ಞರು. ಗುಜರಾತ್ ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿದೆ. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (National Law University) ಸ್ಥಾಪಿಸಿದೆ. ಇದರಿಂದ ಅತ್ಯುತ್ತಮ ನ್ಯಾಯವಾದಿಗಳು ಹೊರಬರುತ್ತಾರೆ. ಉತ್ತಮ ನ್ಯಾಯಾಧೀಶರನ್ನು ತರಬೇತುಗೊಳಿಸಲಾಗುವುದು. ಇವರೆಲ್ಲ ನ್ಯಾಯಾಂಗವನ್ನು ನಿಭಾಯಿಸುತ್ತಾರೆ.
ಗುಜರಾತ್ ನ ಪೊಲೀಸ್ ಅಕಾಡೆಮಿ ವಿಶ್ವವಿದ್ಯಾಲಯವು ಭಾರತದಲ್ಲಿ ಪೊಲೀಸ್ ತರಬೇತಿ ನೀಡುವ ಒಂದು ಉತ್ತಮ ವಿಶ್ವವಿದ್ಯಾಲಯವಾಗಿದೆ. ಗುಜರಾತ್ ಇಂತಹ ವಿಶ್ವವಿದ್ಯಾಲಯ ಸ್ಥಾಪಿಸಿದ ಎರಡನೆಯ ರಾಜ್ಯವಾಗಿದೆ. ರಕ್ಷಣಾ ಶಕ್ತಿ ಯೂನಿವರ್ಸಿಟಿಯಲ್ಲಿ Uniform forces ಗೆ ಹೋಗಲು ಬಯಸುವವರು ಹತ್ತು, ಹನ್ನೆರಡನೆಯ ತರಗತಿಯ ನಂತರ ಅದಕ್ಕೇ ಸಂಬಂಧಿಸಿದಂತಹ ಶಿಕ್ಷಣವನ್ನು ಪಡೆಯಬಹುದಾಗಿದೆ. ಇಲ್ಲಿ communication deal, crowd management, crowd physiology management ನಂತಹವು ಬರುತ್ತವೆ. ಭಾರತದ ಐಸಿಎಸ್ ತರಬೇತಿಯ ಕುರಿತು ಅವರಿಗೆ ಮಾಹಿತಿ ಇರಬೇಕು. ತರಬೇತಿ ಪಡೆದು ಪೊಲೀಸ್ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಬೇಕು. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಒಂದು ಗುಣಮಟ್ಟದ ಬದಲಾವಣೆ ತರುವಲ್ಲಿ ಗುಜರಾತ್ ಮುಂಚೂಣಿಯಲ್ಲಿದೆ. ಇಂದು ಎಲ್ಲ ರೀತಿಯ ಅಪರಾಧೀ ಘಟನೆಗಳನ್ನು ನೀವು ನೋಡುತ್ತಿರಬಹುದು. ತಂತ್ರಜ್ಞಾನದ ಮೂಲಕ ಅಪರಾಧಿಗಳನ್ನು ಹಿಡಿಯಲಾಗುತ್ತಿದೆ. Forensic Science Universityಯ ತರಬೇತಿಯು ಅದಕ್ಕೆ ನಿಗದಿಪಡಿಸಿದ ಗುಣಮಟ್ಟದ ತರಬೇತಿಗೆ ಅನುಗುಣವಾಗಿ ಇರುತ್ತದೆ. ಸೈಬರ್ ಅಪರಾಧವಾಗಲಿ ಅಥವಾ ಬೇರಾವುದೇ ಅಪರಾಧವಾಗಲಿ ಅದರಿಂದ ಅವರನ್ನು ಪಾರು ಮಾಡಲು ಅಥವಾ ಪತ್ತೆ ಹಚ್ಚಲು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲು Forensic world ಎಲ್ಲಕ್ಕಿಂತ ದೊಡ್ಡ ಪಾತ್ರ ವಹಿಸಲಿದೆ. ಈ ಮೂರನ್ನೂ ಗುಜರಾತ್ ನೆಲದಲ್ಲಿ ಒಟ್ಟಿಗೇ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಬಹು ದೊಡ್ಡ ಕೊಡುಗೆ ನೀಡಲಿದೆ. ಪ್ರಸ್ತುತ ದೇಶವಿದೇಶಗಳ ಜನರು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದು, ವಿಶ್ವವಿದ್ಯಾಲಯಗಳು ಅವರೊಂದಿಗೆ ಕೈಗೂಡಿಸುತ್ತಿವೆ. ಇಂದು ನಾನು ಐಐಟಿಯವರ ಜೊತೆ ಕುಳಿತಿದ್ದೇನೆ. ನಿಮ್ಮ ಸಾಕಷ್ಟು ಸಮಯ ಲ್ಯಾಬ್ ನಲ್ಲಿ ಕಳೆಯುತ್ತದೆ ಎಂದು ನಾನು ಭಾವಿಸುತ್ತೇನೆ. ನೀವು ಏನಾದರೊಂದು ಹೊಸತನ್ನು ಮಾಡುತ್ತಲೇ ಇರುತ್ತೀರಿ. ಆದರೆ ಹೆಚ್ಚಾಗಿ ಪರೀಕ್ಷೆಗೆ ಸಂಬಂಧಿಸಿದ ಆವಿಷ್ಕಾರಗಳು, ಪರೀಕ್ಷೆಗೆ ಸಂಬಂಧಿಸಿದ ಪ್ರಾಜೆಕ್ಟ್ ಗಳಲ್ಲಿ ಮಾತ್ರ ತೊಡಗಿಸಿಕೊಳ್ಳುವುದನ್ನು ನಾನು ಬಯಸುವುದಿಲ್ಲ. ನನ್ನ ದೇಶದ ಯುವಜನತೆ ಇದೇ ಒಂದು ಪರಿಧಿಯಲ್ಲಿ ತಮ್ಮನ್ನು ಬಂಧಿಸಿಕೊಳ್ಳಬಾರದು. ಹೊಸ ಆವಿಷ್ಕಾರಗಳಿಗೆ ಒತ್ತು ಕೊಡುವುದು ಇಂದಿನ ಸಮಯದ ಬೇಡಿಕೆಯಾಗಿದೆ.
ಭಾರತ ಸರ್ಕಾರದ ನೀತಿ ಆಯೋಗದಲ್ಲಿ AIM ಎಂಬ ಹೆಸರಿನ ಸಂಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅಟಲ್ ಇನ್ನೊವೇಟಿವ್ ಮಿಷನ್, AIM ಎಂಬ ಈ ಸಂಸ್ಥೆಯ ಮೂಲಕ ಕೆಲವು ಶಾಲೆಗಳನ್ನು challenging route ಮೂಲಕ ಆಯ್ಕೆ ಮಾಡಿ ಅವುಗಳ ಪ್ರಯೋಗಾಲಯ ಉನ್ನತೀಕರಿಸಲು ಹಣ ನೀಡುತ್ತಿದ್ದೇವೆ. ಐದು, ಏಳು, ಎಂಟು, ಹತ್ತು ಮತ್ತು ಹನ್ನೆರಡನೆಯ ತರಗತಿಯ ಮಕ್ಕಳಿಗೆ ಆವಿಷ್ಕಾರಗಳನ್ನು ಮಾಡಲು ಪ್ರೇರಣೆ ನೀಡಲಾಗುತ್ತಿದೆ. ಭಾರತದ ಭಾಗ್ಯವನ್ನು ಬದಲಿಸಲು ನಮ್ಮ ಬಳಿ ಸಹಜ ಪ್ರತಿಭೆಗಳು ಇವೆ. ನಾವು ಆವಿಷ್ಕಾರದಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ನಮ್ಮ ದೇಶದಲ್ಲಿ ITಯ ಅತಿರಥ ಮಹಾರಥರಿದ್ದಾರೆ. ಆದರೆ ಗೂಗಲ್ ಬೇರೊಂದು ದೇಶದಲ್ಲಿ ಜನ್ಮ ತಳೆಯಿತು. ನಮ್ಮ ದೇಶದಲ್ಲಿ IT ಕ್ಷೇತ್ರದಲ್ಲಿ ತಜ್ಞರಾಗಿರುವ ಯುವಕರಿದ್ದಾರೆ. ಆದರೆ ಫೇಸ್ ಬುಕ್ ಬೇರೆಲ್ಲೋ ಹುಟ್ಟಿತು. ಇದೇ ರೀತಿ ಯೂ ಟ್ಯೂಬ್ ಸಹ ಇನ್ನೆಲ್ಲೋ ಇದೆ. ನಮ್ಮ ದೇಶದ ಯುವಜನತೆಗೆ ಸವಾಲು ನೀಡಲು ಬಯಸುತ್ತೇನೆ. ಬನ್ನಿ, ನಮ್ಮ ವಿಶ್ವಲದ ಭಾಗ್ಯ ಬದಲಿಸಲು, ಭಾರತವನ್ನು ಬದಲಿಸಲು ಆವಿಷ್ಕಾರಗಳ ದಾರಿ ಹಿಡಿಯಿರಿ. ಬುದ್ಧಿ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ದೇಶ ಮತ್ತು ವಿಶ್ವವಕ್ಕೆ ಬಹಳಷ್ಟು ಕೊಟ್ಟು ಸಾಗೋಣ. ಆದರೆ ಕೆಲವೊಮ್ಮೆ ನಮಗೆ ಹೊಸದನ್ನು ಕಂಡು ಹಿಡಿಯುವ ಆಸೆ ಇರುತ್ತದೆ. ಆದರೆ ಒಳ್ಳೆಯ ಆವಿಷ್ಕಾರ ಮಾಡುವ ವಿಧಾನ ಬೇರೆಯದಾಗಿರುತ್ತದೆ. ನಾನು ನಿಮಗೆ ಗೈಡ್ ಮಾಡಲು ಬಯಸುತ್ತೇನೆ. ನನ್ನ ಈ ಮಾತನ್ನು ನೀವು ಗಮನವಿಟ್ಟು ಕೇಳುತ್ತೀರಿ ಎಂಬ ಆಶಾಭಾವನೆ ನನಗಿದೆ. ನಿಮಗೆ ಶೈಕ್ಷಣಿಕ ಜ್ಞಾನವಿದೆ, ಉದಾಹಾರಣೆಗೆ Basic structural engineering ಓದಿರಬಹುದು. ಅದರ ಆಧಾರದ ಮೇಲೆ ಆವಿಷ್ಕಾರ ಮಾಡುವುದು ಒಂದು ವಿಧಾನವಾಗಿದೆ. ಮತ್ತೊಂದು ವಿಧಾನವೆಂದರೆ ನೀವು ನಿಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಗಮನಿಸಿ, ಕಷ್ಟಗಳನ್ನು ನೋಡಿ ನಂತರ ನಾನು ಇದಕ್ಕೆ ಪರಿಹಾರ ನೀಡಬಲ್ಲೆನೆ ಎಂದು ಯೋಚಿಸಿ. ಅವನಂತೂ ಒಬ್ಬ ಬಡಪಾಯಿ, ಕಷ್ಟದಲ್ಲೇ ಜೀವನ ಕಳೆಯುತ್ತಿದ್ದಾನೆ. ನಾನು ಐಐಟಿಯವನು, ಈತನ ಜೀವನದಲ್ಲಿ ಸುಧಾರಣೆ ತರಲು ಏನಾದರೂ ಮಾಡುತ್ತೇನೆ ಎಂದು ಮುಂದಾಗಿ. ಅದೇ ಆವಿಷ್ಕಾರವಾಗುತ್ತದೆ. ಅದು ಎಷ್ಟು ದೊಡ್ಡ ಮಟ್ಟದಲ್ಲಿ ಆಗಬಹುದು ಎಂದರೆ ಒಂದು ದೊಡ್ಡ Business model ಆಗಬಹುದು. ನಮ್ಮ ದೇಶದಲ್ಲಿ ಎಷ್ಟೊಂದು ಸಮಸ್ಯೆಗಳಿವೆ. ಈಗ ಸ್ವಚ್ಛತೆಯ ಅಭಿಯಾನ ನಡೆಯುತ್ತಿದೆ. ಆವಿಷ್ಕಾರದಲ್ಲಿ ತೊಡಗಿರುವ ನನ್ನ ಯುವಜನತೆ waste ಅನ್ನು wealth ಆಗಿ ಪರಿವರ್ತಿಸುವ ಆವಿಷ್ಕಾರದಲ್ಲಿ ಹೊಸ ಹೊಸ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಳ್ಳಬಾರದೇಕೆ?
ಪ್ರಸ್ತುತ ಸೌರಶಕ್ತಿಯ ಮೇಲೆ ಕೆಲಸಗಳು ನಡೆಯುತ್ತಿವೆ. ಇಂದು ಸೌರಶಕ್ತಿ, ಪವನಶಕ್ತಿ, ನವೀಕರಿಸಬಹುದಾದ ಶಕ್ತಿ, ಹವಾಮಾನ ಬದಲಾವಣೆ ಈ ಎಲ್ಲದರಲ್ಲಿ ನಾವು ತೊಡಗಿಕೊಳ್ಳುತ್ತಿದ್ದೇವೆ. ಭಾರತಕ್ಕೆ ಹೊಂದಿಕೊಳ್ಳುವಂತಹ ಪ್ರತಿ ಮನೆಗೂ ಸುಲಭವಾಗಿ ತಲುಪಿಸಬಹುದಾದ ಇಂತಹ ವಸ್ತುಗಳ ಆವಿಷ್ಕಾರವನ್ನು ನಾವು ಮಾಡಬಾರದೇಕೆ? ಭಾರತದಲ್ಲಿ ಅಗಾಧ ಸೌರಶಕ್ತಿ ಲಭ್ಯವಿದೆ. ನಾವು ಸೌರಶಕ್ತಿ ಬಳಕೆಯಿಂದ ಅಡುಗೆಗೆ ತಗಲುವ ಇಂಧನದ ಖರ್ಚಿನಿಂದ ಮುಕ್ತಿಗೊಳಿಸಬಾರದೇಕೆ?
ಸೌರಶಕ್ತಿಯನ್ನು ಬಳಸಿಕೊಂಡು ಮಾಡುವಂತಹ ಅಡುಗೆ ಉಪಕರಣಗಳನ್ನು ನಾವು ತಯಾರಿಸಬಾರದೇಕೆ? ಅಡುಗೆಯನ್ನು ಅದರಲ್ಲೇ ಮಾಡಿದರೆ ಅನಿಲ ಸಂಪರ್ಕ ಪಡೆಯುವ ಹಾಗಿಲ್ಲ, ಅದಕ್ಕಾಗಿ ಒಲೆಯನ್ನು ಉರಿಸುವಂತಿಲ್ಲ. ಛಾವಣಿಯ ಮೇಲೆ ಸ್ವಂತ Solar plant ಹಾಕಿಕೊಂಡು ಎರಡು Solar Panel ಅಳವಡಿಸಿಕೊಳ್ಳಬಹುದು. ಮನೆಗೆ ಬೇಕಾಗುವಷ್ಟು ಅಡುಗೆ ಮಾಡಬಹುದು. ಬಡವರ ಮನೆಯಲ್ಲಿ, ಮಧ್ಯಮ ವರ್ಗದ ಕುಟುಂಬಗಳಿಗೆ, ಅಡುಗೆ ಮನೆಯ ವಿದ್ಯುತ್ ಗೆ ಆಗುವ ಖರ್ಚು ಉಳಿಯುತ್ತದೆಯೋ, ಇಲ್ಲವೋ? ಉಳಿಯುತ್ತದೆ. ಇಂತಹ ಸಣ್ಣ ಸಣ್ಣ ವಿಷಯಗಳನ್ನು ನಾವು ನೋಡುತ್ತಿದ್ದೇವೆ. ಅವುಗಳನ್ನೇ ಆವಿಷ್ಕಾರದ ರೂಪದಲ್ಲಿ ಹಿಡಿದಿಟ್ಟುಕೊಳ್ಳ ಬಾರದೇಕೆ? ನಾವು ಇದಕ್ಕೆಲ್ಲ ದಾರಿ ಹುಡುಕಬಾರದೇಕೆ? ನನಗೆ ನಂಬಿಕೆಯಿದೆ. ಐಐಟಿ ಗಾಂಧಿನಗರವು ಒಂದು ಹೊಸ ಸಂಸ್ಕೃತಿ, ಆವಿಷ್ಕಾರದ ಸಂಸ್ಕೃತಿಯನ್ನು ಹುಟ್ಟು ಹಾಕುತ್ತದೆ.ಆ ಸಂಸ್ಕೃತಿಯು ಅವಶ್ಯಕತೆಗೆ ಅನುಗುಣವಾಗಿ ಇರಬೇಕು. ಜ್ಞಾನಧಾರಿತವಾಗಿರದೆ ಅವಶ್ಯಕತೆ ಆಧಾರಿತವಾದರೆ ಆ ಆವಿಷ್ಕಾರವು ಬಹಳ ಕಾಲ ಉಳಿಯುತ್ತದೆ. ಅದು scalable ಆಗುತ್ತದೆ. ಅದನ್ನು ವಾಣಿಜ್ಯಗೊಳಿಸುವ ಅವಕಾಶವೂ ಸಿಗುತ್ತದೆ.ದೊಡ್ಡ ದೊಡ್ಡ ಕಂಪನಿಗಳು ನಿಮ್ಮ ಆವಿಷ್ಕಾರವನ್ನು ಖರೀದಿಸಲು ಸಹ ಮುಂದೆ ಬರುತ್ತವೆ.ಆದ್ದರಿಂದ ಐಐಟಿ ಈ ದಿಸೆಯಲ್ಲಿ ಕೆಲಸ ಮಾಡಬೇಕು.
ಐಐಟಿಯ ಯುವಜನತೆಗೆ ಇನ್ನೊಂದು ವಿಷಯವನ್ನು ತಿಳಿಸಲು ಬಯಸುತ್ತೇನೆ. ಬಹುಶಃ ಭಾರತದಲ್ಲಿ Create ಎಂಬ ಹೆಸರಿನ ಒಂದು ಸಂಸ್ಥೆಯು ಮೊದಲ ಬಾರಿಗೆ ಗುಜರಾತ್ ನಲ್ಲಿ ಜನ್ಮ ತಾಳಿದೆ. ಕೆಲವೇ ಜನರು ಈ ಹೆಸರನ್ನು ಕೇಳಿರಬಹುದು.ನನ್ನ ಪ್ರಕಾರ ಅದರ ವಯಸ್ಸು ಸುಮಾರು ಮೂರರಿಂದ ನಾಲ್ಕು ವರ್ಷ ಇರಬಹುದು. ಆ ಕಟ್ಟಡದ ಉದ್ಘಾಟನೆಯನ್ನು ನಾನು ಮಾಡಬೇಕಿದೆ.ನನಗೆ ಸಮಯ ನೀಡಲು ಆಗುತ್ತಿಲ್ಲ, ಆದರೆ ನೀಡುತ್ತೇನೆ. Create ರಾಜ್ಯ ಮತ್ತು ದೇಶದ ಆವಿಷ್ಕಾರದಲ್ಲಿ ಆಸಕ್ತಿಯನ್ನು ತೋರಿಸುತ್ತಿದೆ. ಅವರಿಗೆ incubation ಒದಗಿಸುವ ಕಾರ್ಯವನ್ನು ಅದು ಮಾಡುತ್ತಿದೆ. ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯಿದೆ. ಪ್ರಯೋಗಶಾಲೆ ಇದೆ. ನಿಮ್ಮ ideaಗಳಿಗೆ ಸರ್ಕಾರ ಅಲ್ಲಿ ಅವಕಾಶ ನೀಡಲು ಸಿದ್ಧವಿದೆ. ಭಾರತದ ಜೀವನ ಶೈಲಿಯಲ್ಲಿ ಬದಲಾವಣೆ ತಂದು, ಸರಳ ವ್ಯವಸ್ಥೆಗಳನ್ನು ಅರಳಿಸುವಂತಹ ಆವಿಷ್ಕಾರಗಳನ್ನು ನೀವು ಮಾಡಬೇಕು. ವಿಶ್ವದ ಒಳ್ಳೆಯ ಸಂಶೋಧನೆಗಳನ್ನು ಮಾಡುವ ಸಂಸ್ಥೆಗಳ ಜೊತೆ ಸಹಭಾಗಿತ್ವ ಹೊಂದಿರುವ ಭಾರತದ ಏಕೈಕ ಸಂಸ್ಥೆಯಾಗಿದೆ ಈ Create. ನಾನು ಈಗ ಹೇಳುತ್ತಿರುವ ವಿಷಯ ಸಾಮಾನ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವಂತಹ ಸುದ್ದಿಯಲ್ಲ. ಆದರೆ ದೇಶದ ಭವಿಷ್ಯವು ಯುವ ಪೀಳಿಗೆಯ ಕೈಯಲ್ಲಿದೆ.ಅವರಿಗೆ ಇದು ಬಹಳ ಮಹತ್ವಪೂರ್ಣ ವಿಷಯವಾಗುತ್ತದೆ. 2022 ಭಾರತವು ಸ್ವಾತಂತ್ರ್ಯ ಗಳಿಸಿದ 75ನೇ ವರ್ಷವಾಗಿದೆ, ಇನ್ನೂ ಐದು ವರ್ಷ ನಮ್ಮ ಬಳಿ ಇದೆ.ಅದಕ್ಕಾಗಿ ನನ್ನ ಗೆಳೆಯರೇ, ನೀವು ಇದನ್ನು ಮಾಡಬೇಕೆಂದು ಬಯಸುತ್ತೇನೆ.
1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ ಎಂದು ಹೇಳಿದ್ದರು. ನಂತರದ ಐದು ವರ್ಷಗಳಲ್ಲಿ ಇಡೀ ದೇಶವೇ ಒಂದಾಗಿ ನಿಂತಿತ್ತು. ಕೊನೆಗೆ ಆಂಗ್ಲರು ತಮ್ಮ ಗಂಟು ಮೂಟೆ ಕಟ್ಟಿಕೊಂಡು ಹೊರಡಬೇಕಾಯಿತು. ನನ್ನ ದೇಶದ ಜನರೇ, ಇನ್ನು ಮುಂದಿನ ಐದು ವರ್ಷದೊಳಗೆ ದೇಶದಿಂದ ಬಡತನ ತೊಲಗಬೇಕು. ದೇಶದಿಂದ ಜಾತಿವಾದ ತೊಲಗಬೇಕು,ದೇಶದಿಂದ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ನನ್ನ ಹೆಗಲಿಗೆ ಹೆಗಲು ನೀಡಿ ನನ್ನ ದೇಶದ ಗೆಳೆಯರೆಲ್ಲಾ ಒಂದಾಗಿ ಬಂದರೆ ಇವೆಲ್ಲವೂ ಸಾಧ್ಯವಾಗುತ್ತದೆ. ಇದೆಲ್ಲವನ್ನೂ ಮಾಡುತ್ತೇವೆಂಬ ಸಂಕಲ್ಪ ಮಾಡಿ ಮುನ್ನಡೆದಿದ್ದೇವೆ.
ITಯ ಯುವಜನರಿಗೆ ನಾನು ಇನ್ನೊಂದು ಮಾತು ಹೇಳಲು ಇಚ್ಛಿಸುತ್ತೇನೆ. ಘಟಿಕೋತ್ಸವ ನಡೆದಾಗ ಬಹಳಷ್ಟು ಸಲಹೆಗಳನ್ನು ನೀಡುತ್ತಾರೆ, ಸಾಕಷ್ಟು ತಿಳಿಸಿ ಕೊಡುತ್ತಾರೆ. ಇಂತಹ ದೊಡ್ಡ ಭವನಗಳಲ್ಲಿ ನೀವು ಇದ್ದೀರಿ.ದೊಡ್ಡ ಭವನದ ಒಳಗೆ ಶಿಕ್ಷಣವನ್ನು ಪೆಡೆಯುತ್ತಿದ್ದೀರಿ. ನೀವು ಬುದ್ಧಿವಂತರು, ಹಾಗಾಗಿ ಇದೆಲ್ಲಾ ಸಾಧ್ಯವಾಗಿದೆ. ನಿಮ್ಮ ತಂದೆತಾಯಿ ಶ್ರೀಮಂತರಾಗಿದ್ದಾರೆ, ಅವರ ಸ್ಥಿತಿಗತಿಗಳು ಚೆನ್ನಾಗಿವೆ.ಹಾಗಾಗಿ ಅವರು ನಿಮನ್ನೆಲ್ಲಾ ಇಲ್ಲಿಗೆ ಕಳುಹಿಸಿದ್ದಾರೆ, ಹೀಗೆ ಎಲ್ಲವೂ ಸಾಕಾರಗೊಂಡಿದೆ. ನನ್ನ ಯುವ ಮಿತ್ರರೇ, ನೀವು ಇಷ್ಟು ಭವ್ಯ ಕ್ಯಾಂಪಸ್ ನಲ್ಲಿ ಇದ್ದು ಉನ್ನತ ಶಿಕ್ಷಣವನ್ನು ಪಡೆಯುವ ಭಾಗ್ಯ ನಿಮ್ಮದಾಗಿದೆ. ಇದರ ಹಿಂದೆ ಯಾರಾದರೂ ಬಡವರ ಕೊಡುಗೆ ಸಹ ಇದೆ. ಯಾವುದೋ ಬಡವರ ಹಕ್ಕು ನಿಮಗೆ ಸಿಕ್ಕಿದೆ. ನಾಲ್ಕು ನೂರು ಎಕರೆ ಭೂಮಿಯನ್ನು ಸರಕಾರವು ಮಾರಿ ಆ ಹಣವನ್ನು ಹಳ್ಳಿಯ ಪ್ರಾಥಮಿಕ ಶಿಕ್ಷಣಕ್ಕೆ ಉಪಯೋಗಿಸಿದ್ದರೆ ಎಷ್ಟೊಂದು ಶಾಲೆಗಳನ್ನು ತೆರೆಯಬಹುದಿತ್ತು. ಪ್ರಾಥಮಿಕ ಶಿಕ್ಷಣ ಕೇಂದ್ರಗಳನ್ನು ತೆರೆದಿದ್ದರೆ ಎಷ್ಟೊಂದು ಮಂದಿ ಶಿಕ್ಷಣ ಪಡೆಯುತ್ತಿದ್ದರು. ಆದರೆ ದೇಶದ ಉಜ್ವಲ ಭವಿಷ್ಯಕ್ಕಾಗಿ ಈ ನಾಲ್ಕು ನೂರು ಎಕರೆ ಭೂಮಿಯನ್ನು, ದೇಶದ ಭವಿಷ್ಯಕ್ಕಾಗಿ ಸುರಿದಿದ್ದೇವೆ. ಸಮಾಜದ ಯಾವುದೋ ಬಡವ ತನ್ನ ಪಾಲನ್ನು ಬಿಟ್ಟಿರುವುದರಿಂದ ನಮಗೆ ಇದು ದೊರಕಿದೆ. ಈ ಭಾವ ನಿಮ್ಮೊಳಗಿದ್ದರೆ ನೀವು ಐಐಟಿಯವರಾಗಿದ್ದರೂ ನೀವು ಸಮಾಜ ಮುಖಯಾಗಿದ್ದರೆ ಅದರಲ್ಲಿ ಎಂದೂ ಕೊರತೆ ಕಾಡುವುದಿಲ್ಲ. ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಉದ್ದೇಶಗಳು ನನ್ನಲ್ಲಿವೆ. ಅವು ಎಂದೆಂದಿಗೂ ಕಡಿಮೆಯಾಗುವುದಿಲ್ಲ. ನನ್ನ ದೇಶದ ಸಾಮಾನ್ಯ ಜನರಿಗೆ ಏನಾದರೂ ಮಾಡಲೇಬೇಕೆಂದು ನಾನು ಜೀವಿಸುತ್ತೇನೆ. ಕೆಲವನ್ನು ಪಡೆದುಕೊಳ್ಳುತ್ತೇನೆ, ಕೆಲವನ್ನು ನಾನು ಏನೇ ಮಾಡಿದರೂ ನನ್ನ ದೇಶದ ಸಾಮಾನ್ಯ ಜನರ ಒಳಿತಿಗಾಗಿ ಮಾಡುತ್ತೇನೆ ಎಂಬ ಭಾವ ಸದಾ ಇರುತ್ತದೆ. ಇದೇ ಉದ್ದೇಶದಿಂದ ಈ ಹೊಸ ಕಟ್ಟಡವನ್ನು ಲೋಕಕ್ಕೆ ಅರ್ಪಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ನೀವು ಸಹ ನಿಮ್ಮ ಮನಸ್ಸಿನಲ್ಲಿ ಇದೇ ದೃಢ ಸಂಕಲ್ಪ ಮಾಡಿ. ಈ ಒಂದು ಆಶಾಭಾವನೆಯೊಂದಿಗೆ ನಿಮ್ಮೆಲ್ಲರಿಗೂ ಬಹಳ ಶುಭಾಶಯಗಳು. ಬಹಳ ಬಹಳ ಧನ್ಯವಾದಗಳು.
You are IIT-ians, I was a Tea-ian when I was young (I sold tea). On this day, a few years ago, I took oath as CM for the first time. Till then, I had never even been an MLA. I had decided that whatever I will do, I will do to the best of my abilities: PM @narendramodi
— PMO India (@PMOIndia) October 7, 2017
Work is underway to spread digital literacy to every part of India, among all age groups and sections of society: PM @narendramodi
— PMO India (@PMOIndia) October 7, 2017
In this day and age, we cannot afford to have a digital divide: PM @narendramodi
— PMO India (@PMOIndia) October 7, 2017
A Digital India guarantees transparency, effective service delivery and good governance: PM @narendramodi
— PMO India (@PMOIndia) October 7, 2017
Our academics should not be exam driven. The focus should be innovation: PM @narendramodi
— PMO India (@PMOIndia) October 7, 2017