Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಗಾಂಧಿ@150’ ಸ್ಮರಣಾರ್ಥ ರಾಷ್ಟ್ರೀಯ ಸಮಿತಿಯ ಎರಡನೇ ಸಭೆಯನ್ನುದ್ದೇಶಿಸಿ ಪ್ರಧಾನಿಯವರ ಭಾಷಣ


ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಗಾಂಧಿ@150 ರಾಷ್ಟ್ರೀಯ ಸಮಿತಿಯ ಎರಡನೇ ಸಭೆಯನ್ನುದ್ದೇಶಿಸಿ ಪ್ರಧಾನಿಯವರು ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಗೌರವಾನ್ವಿತ ರಾಷ್ಟ್ರಪತಿಯವರು ವಹಿಸಿದ್ದರು. ಗೌರವಾನ್ವಿತ ಉಪ ರಾಷ್ಟ್ರಪತಿ, ಕೇಂದ್ರ ಸಚಿವ ಸಂಪುಟದ ಸದಸ್ಯರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಗಾಂಧಿವಾದಿಗಳು ಮತ್ತು ರಾಷ್ಟ್ರೀಯ ಸಮಿತಿಯ ಇತರ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಸಮಿತಿಯ ಏಕೈಕ ವಿದೇಶಿ ಸದಸ್ಯರಾಗಿರುವ ಪೋರ್ಚುಗಲ್ ಪ್ರಧಾನ ಮಂತ್ರಿ ಶ್ರೀ ಆಂಟೋನಿಯೊ ಕೋಸ್ಟಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಗೌರವಾನ್ವಿತ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ, ಸ್ವತಃ ಪ್ರಧಾನಿಯವರೇ ಮುಂದಾಳತ್ವ ವಹಿಸಿ ಸ್ವಚ್ಛ ಭಾರತ ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ಕೈಗೊಳ್ಳುವ ಉಪಕ್ರಮಗಳ ಮೂಲಕ ಪರಿಸರ ಸಂರಕ್ಷಣೆ ಹಾಗೂ ಮಹಾತ್ಮರ ಬೋಧನೆಗಳನ್ನು ಪ್ರೇರೆಪಿಸುವ ರಾಷ್ಟ್ರಪಿತನ 150ನೇ ಜಯಂತಿಯ ಆಚರಣೆಯನ್ನು ಪ್ರಧಾನ ಮಂತ್ರಿಯವರ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕಾರಿ ಸಮಿತಿಯು ಜನಾಂದೋಲನವಾಗಿ ಪರಿವರ್ತಿಸಿದ್ದಕ್ಕಾಗಿ ಅಭಿನಂದಿಸಿದರು.

ಸಂಸ್ಕೃತಿ ಸಚಿವಾಲಯ ಸಂಗ್ರಹಿಸಿದ ಸ್ಮರಣಾರ್ಥ ಚಟುವಟಿಕೆಗಳ ಪುಸ್ತಕ ಮತ್ತು ವಿದೇಶಾಂಗ ಸಚಿವಾಲಯ ಸಂಗ್ರಹಿಸಿದ ಗಾಂಧೀಜಿ ಕುರಿತ ಸಂಕಲನವನ್ನು ಪ್ರಧಾನಿಯವರು ಬಿಡುಗಡೆ ಮಾಡಿ ರಾಷ್ಟ್ರಪತಿಯವರಿಗೆ ಅರ್ಪಿಸಿದರು. ಸಂಕಲನದಲ್ಲಿ, ವಿಶ್ವದಾದ್ಯಂತದ 126 ವ್ಯಕ್ತಿಗಳು ಗಾಂಧೀಜಿಯವರ ಬೋಧನೆಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಗಾಂಧಿ@150’ ಜಾಗತಿಕ ಆಚರಣೆಯ ಅಂಗವಾಗಿ ಕೈಗೊಳ್ಳಲಾದ ಸ್ಮರಣಾರ್ಥ ಚಟುವಟಿಕೆಗಳನ್ನು ಕುರಿತ ಕಿರುಚಿತ್ರವನ್ನೂ ಸಭೆಯಲ್ಲಿ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ಜನರ ಸಹಭಾಗಿತ್ವಕ್ಕಾಗಿ ಮಹಾತ್ಮ ಗಾಂಧಿಯವರ ವಿಚಾರಗಳನ್ನು ಬಳಸಿಕೊಳ್ಳುವ ಸ್ಮರಣಾರ್ಥ ಕಾರ್ಯಕ್ರಮವನ್ನು ರೂಪಿಸಲು ನೆರವಾದ ಮೊದಲನೇ ಸಭೆಯ ಸದಸ್ಯರ ಸಲಹೆಗಳನ್ನು ಶ್ಲಾಘಿಸಿದರು.

ಇಂದು ಜಗತ್ತು ಗಾಂಧೀಜಿಯನ್ನು ತಿಳಿದುಕೊಳ್ಳಲು ಉತ್ಸುಕವಾಗಿದೆ ಮತ್ತು ಅವರನ್ನು ಸ್ವೀಕರಿಸಲು ಸಿದ್ಧವಾಗಿದೆ. ಆದ್ದರಿಂದ ಮಹಾತ್ಮರ ಮತ್ತು ಅವರ ದೃಷ್ಟಿಯ ನಿರಂತರ ಪ್ರಸ್ತುತತೆಯನ್ನು ಜಗತ್ತಿಗೆ ನೆನಪಿಸುವುದನ್ನು ಮುಂದುವರಿಸುವುದು ಭಾರತದ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಭಾರತದಲ್ಲಿ ಮಾತ್ರವಲ್ಲದೆ ಪೋರ್ಚುಗಲ್‌ನಲ್ಲೂ ಸ್ಮರಣಾರ್ಥ ಚಟುವಟಿಕೆಗಳಲ್ಲಿ ವೈಯಕ್ತಿಕವಾಗಿ ತೊಡಗಿಸಿಕೊಳ್ಳಲು ವರ್ಷವಿಡೀ ಬಿಡುವು ಮಾಡಿಕೊಂಡಿದ್ದಕ್ಕಾಗಿ ಪ್ರಧಾನ ಮಂತ್ರಿಯವರು ಪೋರ್ಚುಗೀಸ್ ಪ್ರಧಾನಿಯವರಿಗೆ ಧನ್ಯವಾದ ಸಲ್ಲಿಸಿದರು.

‘ಗಾಂಧಿ@150’ ಕೇವಲ ಒಂದು ವರ್ಷದ ಕಾರ್ಯಕ್ರಮವಲ್ಲ ಎಂದ ಪ್ರಧಾನಿಯವರು, ಎಲ್ಲಾ ನಾಗರಿಕರು ತಮ್ಮ ಜೀವನದಲ್ಲಿ ಗಾಂಧಿವಾದಿ ಚಿಂತನೆ ಮತ್ತು ದೃಷ್ಟಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಮುಂದಿನ ದಿನಗಳಿಗೂ ಅದನ್ನು ಮುನ್ನಡೆಸಬೇಕು ಎಂದು ತಿಳಿಸಿದರು. ಸರ್ಕಾರ ಕಾಲ ಕಾಲಕ್ಕೆ ಶತಮಾನೋತ್ಸವಗಳನ್ನು ನಡೆಸುತ್ತದೆ. ಆದರೆ ‘ಗಾಂಧಿ@150’ ಸ್ಮರಣೆ ಕೇವಲ ಒಂದು ಸಂದರ್ಭಕ್ಕಿಂತ ಹೆಚ್ಚಿನದಾಗಿದೆ. ಇದೊಂದು ಜನ ಸಾಮಾನ್ಯರ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

‘ದೇಶೀ ಉತ್ಪನ್ನಗಳನ್ನು ಖರೀದಿಸಿ’ಎಂದು ಕೆಂಪು ಕೋಟೆಯಿಂದ ಎಲ್ಲಾ ನಾಗರಿಕರಿಗೆ ನೀಡಿದ ತಮ್ಮ ಹಿಂದಿನ ಸಂದೇಶವನ್ನು ಪ್ರಧಾನಿಯವರು ಪುನರುಚ್ಚರಿಸಿದರು. ಗಾಂಧೀಜಿಯವರ ಈ ಮೂಲ ತತ್ತ್ವವು ಭಾರತದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ದೇಶವು 2022ರಲ್ಲಿ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವಾಗ ಮತ್ತು ನಂತರವೂ ಒಂದು ಜೀವನ ವಿಧಾನವಾಗಿ ಈ ಸಂದೇಶದ ಮೂಲಕ ಬದುಕಬೇಕೆಂದು ಅವರು ಎಲ್ಲಾ ನಾಗರಿಕರನ್ನು ಕೋರಿದರು.

ಇತ್ತೀಚೆಗೆ ನಡೆದ ರಾಜ್ಯಸಭೆಯ 250 ನೇ ಅಧಿವೇಶನದಲ್ಲಿ ಸದಸ್ಯರು ತಮ್ಮ ಸ್ಥಳೀಯ ಭಾಷೆಗಳಲ್ಲಿ ಮಾತನಾಡಲು ಪ್ರೋತ್ಸಾಹ ಮಾಡಿದ್ದು ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿಯವರು ಉಲ್ಲೇಖಿಸಿದರು. ಗಾಂಧೀಜಿಯವರ ಸಂದೇಶವನ್ನು ಜಾಗತಿಕವಾಗಿಸಲು ನಾವು ಕೆಲಸ ಮಾಡುತ್ತಿರುವಾಗಲೂ, ಮಹಾತ್ಮರ ಸಂದೇಶವನ್ನು ಸಮಕಾಲೀನ ರೂಪದಲ್ಲಿ ದೇಶದಾದ್ಯಂತದ ಜನಸಾಮಾನ್ಯರಿಗೆ ಮುಟ್ಟಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ದೇಶದ ಬಗೆಗಿನ ಕರ್ತವ್ಯವನ್ನು ಪ್ರತಿಯೊಬ್ಬರೂ ನಿಷ್ಠೆಯಿಂದ ಪಾಲಿಸುವ ಮೂಲಕ ಮೂಲಭೂತ ಹಕ್ಕುಗಳನ್ನು ತಂತಾನೇ ಪಡೆದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ ಎಂದು ಗಾಂಧೀಜಿ ಹೇಗೆ ನಂಬಿದ್ದರು ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರು. ಪ್ರತಿಯೊಬ್ಬರೂ ನಿಷ್ಠೆಯಿಂದ ಈ ಹಾದಿಯಲ್ಲಿ ನಡೆದು ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿದರೆ, ಭಾರತದ ಕನಸುಗಳು ಈಡೇರುತ್ತವೆ ಎಂದು ಅವರು ಹೇಳಿದರು.