ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಾಂಧಿನಗರದಲ್ಲಿರುವ ಶಾಲೆಗಳ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ವಿದ್ಯಾ ಸಮೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು. ಪ್ರಧಾನ ಮಂತ್ರಿಯವರಿಗೆ ಮೇಲ್ವಿಚಾರಣಾ ಚಟುವಟಿಕೆಗಳನ್ನು ತೋರಿಸಲಾಯಿತು, ವಿಡಿಯೋ ಗೋಡೆಗಳು ಮತ್ತು ಕೇಂದ್ರದ ವಿವಿಧ ಅಂಶಗಳ ನೇರ ಪ್ರದರ್ಶನವನ್ನು ಮಾಡಲಾಯಿತು. ಪ್ರಧಾನಿಯವರಿಗೆ ಧ್ವನಿ-ದೃಶ್ಯ ಪ್ರಸ್ತುತಿ ಮೂಲಕ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಧಾನಮಂತ್ರಿಯವರು ಕೇಂದ್ರದ ಭಾಗೀದಾರರೊಂದಿಗೆ ಸಂವಾದ ನಡೆಸಿದರು. ಅಂಬಾಜಿಯ ಮುಖ್ಯ ಶಿಕ್ಷಕಿ ಶ್ರೀಮತಿ ರಾಜಶ್ರೀ ಪಟೇಲ್ ಸಂವಾದ ನಡೆಸಿದ ಮೊದಲ ವ್ಯಕ್ತಿ. ಹೊಸ ತಂತ್ರಜ್ಞಾನಗಳ ಕುರಿತು ಶಿಕ್ಷಕರ ಆಸಕ್ತಿಯ ಬಗ್ಗೆ ಪ್ರಧಾನಿಯವರು ವಿಚಾರಿಸಿದರು. ದೀಕ್ಷಾ ಪೋರ್ಟಲ್‌ನ ಬಳಕೆಯ ಬಗ್ಗೆಯೂ ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳನ್ನು ಕೇಳಿದರು. ಅನುಸರಣೆ ಹೊರೆ ಹೆಚ್ಚಿದೆಯೇ ಅಥವಾ ಸುಲಭಗೊಳಿಸಲಾಗಿದೆಯೇ ಎಂದು ಪ್ರಧಾನಿ ವಿಚಾರಿಸಿದರು. ಮೋಸ ಮಾಡುವುದು ಕೂಡ ಕಷ್ಟವಾಗುತ್ತಿದೆ ಎಂದು ಪ್ರಧಾನಿಯವರು ಹಾಸ್ಯದ ಧಾಟಿಯಲ್ಲಿ ಹೇಳಿದರು. ಅವರು 7 ನೇ ತರಗತಿ ವಿದ್ಯಾರ್ಥಿಯೊಂದಿಗೆ ಸಂವಾದ ನಡೆಸಿದರು. ಪ್ರಧಾನಿಯವರು ವಿದ್ಯಾರ್ಥಿಗೆ ಚೆನ್ನಾಗಿ ಆಟವಾಡುವಂತೆ ಮತ್ತು ಊಟ ಮಾಡುವಂತೆ ಹೇಳಿದರು. ಪ್ರಧಾನಮಂತ್ರಿಯವರು ಗುಂಪಿನೊಂದಿಗೆ ಅನೌಪಚಾರಿಕವಾಗಿ ಸಂವಾದ ನಡೆಸಿದರು. ಅದೇ ಜಿಲ್ಲೆಯ ಸಿಆರ್‌ಸಿ ಸಂಯೋಜಕರು ಹೊಸ ತಂತ್ರಜ್ಞಾನ ತಂದಿರುವ ಬದಲಾವಣೆಯನ್ನು ವಿವರಿಸಿದರು. ಅವರು ಸಂಯೋಜಕರಿಂದ ಮೇಲ್ವಿಚಾರಣೆ ಮತ್ತು ಪರಿಶೀಲನೆಯ ಪ್ರಕ್ರಿಯೆಯ ಬಗ್ಗೆ ಪ್ರಧಾನಿಯವರಿಗೆ ವಿವರಿಸಿದರು. ಪೌಷ್ಟಿಕಾಂಶದ ಮೇಲ್ವಿಚಾರಣೆಗಾಗಿ ವ್ಯವಸ್ಥೆಯನ್ನು ಬಳಸುವುದು ಶಿಕ್ಷಕರಿಗೆ ಕಾರ್ಯಸಾಧ್ಯವೇ ಮತ್ತು ಸಮತುಲಿತ ಆಹಾರದ ಬಗ್ಗೆ ವಿದ್ಯಾರ್ಥಿಗಳು ಮತ್ತು ಇತರ ಭಾಗೀದಾರರನ್ನು ಸಂವೇದನಾಶೀಲ ಗೊಳಿಸಲು ಏನು ಮಾಡಬಹುದು ಎಂದು ಕೇಳುವ ಮೂಲಕ ಪ್ರಧಾನಿಯವರು ಹೊಸ ವ್ಯವಸ್ಥೆಯ ಸಾಧ್ಯತೆಗಳ ಬಗ್ಗೆ ಗಂಭೀರವಾಗಿ ಪರಿಶೀಲಿಸಿದರು.
ಕೆಲವು ವರ್ಷಗಳ ಹಿಂದೆ ಕೆನಡಾಕ್ಕೆ ಭೇಟಿ ನೀಡಿದ ತಮ್ಮ ವೈಯಕ್ತಿಕ ಅನುಭವವನ್ನು ಪ್ರಧಾನಿಯವರು ವಿವರಿಸಿದರು, ಅಲ್ಲಿ ಅವರು ವಿಜ್ಞಾನ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ಕಿಯೋಸ್ಕ್‌ನಲ್ಲಿ ತಮ್ಮ ಆಹಾರ ಕ್ರಮಕ್ಕಾಗಿ ಚಾರ್ಟ್ ಅನ್ನು ತುಂಬಿದರು. ಅವರ ಸಸ್ಯಾಹಾರಿ ಆಹಾರ ಕ್ರಮದ ಬಗ್ಗೆ ಆ ಯಂತ್ರವು “ನೀವೊಂದು ಪಕ್ಷಿಯೇ” ಎಂದು ಕೇಳಿತಂತೆ!!
ತಂತ್ರಜ್ಞಾನದ ಲಭ್ಯತೆಯು ಇದುವರೆಗೆ ತಿಳಿದಿಲ್ಲದ ಹೊಸ ಆಯಾಮಗಳನ್ನು ತೆರೆಯಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪ್ರಧಾನಿಯವರು ಹೇಳಿದರು, ಆದಾಗ್ಯೂ, ವರ್ಚುವಲ್ ಜಗತ್ತಿಗಾಗಿ ವಾಸ್ತವ ಪ್ರಪಂಚವನ್ನು ನಿರ್ಲಕ್ಷಿಸಬಾರದು ಎಂದು ಪ್ರಧಾನಿ ಎಚ್ಚರಿಸಿದರು.
ಕಚ್‌ನ ಪ್ರಾಥಮಿಕ ಶಾಲೆ ಎಸ್‌ಎಂಸಿ ಸಮಿತಿಯ ರಾಥೋಡ್ ಕಲ್ಪನಾ ಅವರಿಗೆ ಹೊಸ ವ್ಯವಸ್ಥೆಯಿಂದ ಪ್ರಾಥಮಿಕ ಶಿಕ್ಷಕರಿಗೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ ಪ್ರಧಾನ ಮಂತ್ರಿಯವರು ಕೇಳಿದರು. ಹೊಸ ವ್ಯವಸ್ಥೆಯು ಅನುಸರಣೆಯನ್ನು ಸುಧಾರಿಸುತ್ತಿದೆ ಎಂದು ಅವರು ಹೇಳಿದರು. 8 ನೇ ತರಗತಿಯ ವಿದ್ಯಾರ್ಥಿನಿ ಪೂಜಾ ಅವರೊಂದಿಗೆ ಮಾತನಾಡುತ್ತಾ, ಮೆಹ್ಸಾನಾದ ಶಿಕ್ಷಕರು ಸ್ಥಳೀಯ ಕಚ್ ಉಪಭಾಷೆಯಲ್ಲಿ ಕಲಿಸಲು ಸಾಧ್ಯವಾಗದ ಹಳೆಯ ವಿಷಯವೊಂದನ್ನು ಪ್ರಧಾನಿ ನೆನಪಿಸಿಕೊಂಡರು. ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಪ್ರಧಾನಿಯವರಿಗೆ ತಿಳಿಸಲಾಯಿತು. ದುರ್ಬಲ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಬೆಂಬಲದ ಬಗ್ಗೆ ಪ್ರಧಾನಿ ವಿಚಾರಿಸಿದರು. ಕೊರೊನಾ ಅವಧಿಯಲ್ಲಿ ಶಿಕ್ಷಕರು ಜಿ ಶಾಲಾ, ದೀಕ್ಷಾ ಆಪ್ ಇತ್ಯಾದಿಗಳನ್ನು ಹೇಗೆ ಬಳಸುತ್ತಿದ್ದರು ಮತ್ತು ಅಲೆಮಾರಿ ಸಮುದಾಯಗಳಿಗೆ ಸಹ ಶಿಕ್ಷಣವನ್ನು ಹೇಗೆ ಒದಗಿಸಲಾಯಿತು ಎಂಬುದನ್ನು ಶಾಲೆಯ ಮುಖ್ಯ ಶಿಕ್ಷಕರು ತಿಳಿಸಿದರು. ಅನೇಕ ವಿದ್ಯಾರ್ಥಿಗಳು ಹೊಸ ವ್ಯವಸ್ಥೆಗೆ ಅಗತ್ಯವಾದ ಸಾಧನಗಳನ್ನು ಹೊಂದಿದ್ದಾರೆ ಎಂದು ಪ್ರಧಾನಿಯವರಿಗೆ ತಿಳಿಸಲಾಯಿತು. ದೈಹಿಕ ಚಟುವಟಿಕೆಗಳಿಗೆ ಕಡಿಮೆ ಒತ್ತು ನೀಡುತ್ತಿರುವ ಬಗ್ಗೆ ಪ್ರಧಾನಿಯವರು ಕಳವಳ ವ್ಯಕ್ತಪಡಿಸಿದರು. ಇನ್ನು ಮುಂದೆ ಕ್ರೀಡೆಗಳು ಪಠ್ಯೇತರ ಚಟುವಟಿಕೆಗಳಾಗಿರುವುದಿಲ್ಲ, ಅವು ಪಠ್ಯಕ್ರಮದ ಭಾಗವಾಗಿವೆ ಎಂದರು.
ತಾಪಿ ಜಿಲ್ಲೆಯ ದರ್ಶನಾ ಬೆನ್ ಅವರು ತಮ್ಮ ಅನುಭವವನ್ನು ವಿವರಿಸಿದರು ಮತ್ತು ಹೊಸ ವ್ಯವಸ್ಥೆಯಿಂದಾಗಿ ವಿವಿಧ ಮಾನದಂಡಗಳು ಹೇಗೆ ಸುಧಾರಿಸಿವೆ ಎಂದು ಹೇಳಿದರು. ಕೆಲಸದ ಹೊರೆಯೂ ಕಡಿಮೆಯಾಗಿದೆ. ದೀಕ್ಷಾ ಪೋರ್ಟಲ್‌ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದಾರೆ ಎಂದು ಆಕೆ ಹೇಳಿದರು. 10ನೇ ತರಗತಿ ವಿದ್ಯಾರ್ಥಿನಿ ತನ್ವಿ ತಾನು ವೈದ್ಯೆಯಾಗಬೇಕೆಂದು ಬಯಸಿರುವುದಾಗಿ ಹೇಳಿದಳು. ಹಿಂದೆ ದೂರದ ಪ್ರದೇಶಗಳಲ್ಲಿ ವಿಜ್ಞಾನ ವಿಷಯಗಳು ಲಭ್ಯವಿರಲಿಲ್ಲ, ಆದರೆ ತೀವ್ರ ಆಂದೋಲನದ ನಂತರ ಪರಿಸ್ಥಿತಿ ಬದಲಾಗಿದೆ ಮತ್ತು ಈಗ ಪ್ರಯೋಜನಗಳು ಗೋಚರಿಸುತ್ತಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಗುಜರಾತ್ ಯಾವಾಗಲೂ ಹೊಸ ವಿಧಾನಗಳಿಗೆ ತೆರೆದುಕೊಳ್ಳುತ್ತದೆ ಮತ್ತು ನಂತರ ಇಡೀ ದೇಶವು ಅವುಗಳನ್ನು ಅಳವಡಿಸಿಕೊಳ್ಳುತ್ತದೆ ಎಂದು ಪ್ರಧಾನಿ ಹೇಳಿದರು. ಇತರ ರಾಜ್ಯಗಳ ಆಸಕ್ತಿಯ ಬಗ್ಗೆ ಅವರಿಗೆ ತಿಳಿಸಲಾಯಿತು. ಹೆಚ್ಚು ಸಂಪರ್ಕ ಕಡಿತ ಸಂಭವಿಸಬಾರದು ಎಂದು ಪ್ರಧಾನಿ ಕಳಕಳಿ ವ್ಯಕ್ತಪಡಿಸಿದರು. ಯೋಜನೆಯ ಸಂಯೋಜಕರು ಮಾನವ ಸ್ಪರ್ಶವನ್ನು ಜೀವಂತವಾಗಿಡಬೇಕೆಂದು ಅವರು ತಿಳಿಸಿದರು. ಪ್ರಧಾನಿಯಯವರಿಗೆ ‘ರೀಡ್ ಅಲಾಂಗ್ ‘ ಫೀಚರ್ ಮತ್ತು ವಾಟ್ಸಾಪ್ ಆಧಾರಿತ ಪರಿಹಾರ ಕ್ರಮಗಳ ಬಗ್ಗೆ ತಿಳಿಸಲಾಯಿತು. ಹೊಸ ವ್ಯವಸ್ಥೆಯ ಆಧಾರದ ಮೇಲೆ ಆರೋಗ್ಯಕರ ಸ್ಪರ್ಧೆಯ ವಾತಾವರಣವನ್ನು ಕಾಯ್ದುಕೊಳ್ಳುವಂತೆಯೂ ಪ್ರಧಾನಿ ಕರೆ ನೀಡಿದರು.
ಕೇಂದ್ರವು ವಾರ್ಷಿಕವಾಗಿ 500 ಕೋಟಿ ಡೇಟಾ ಸೆಟ್‌ಗಳನ್ನು ಸಂಗ್ರಹಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಒಟ್ಟಾರೆ ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸಲು ಬೃಹತ್ ಡೇಟಾ ವಿಶ್ಲೇಷಣೆ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ಅನ್ನು ಬಳಸಿಕೊಂಡು ಅರ್ಥಪೂರ್ಣವಾಗಿ ವಿಶ್ಲೇಷಿಸುತ್ತದೆ. ಕೇಂದ್ರವು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೈನಂದಿನ ಆನ್‌ಲೈನ್ ಹಾಜರಾತಿಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶದ ಕೇಂದ್ರೀಕೃತ ಸಂಕಲನಾತ್ಮಕ ಮತ್ತು ಆವರ್ತಕ ಮೌಲ್ಯಮಾಪನಗಳನ್ನು ಕೈಗೊಳ್ಳುತ್ತದೆ. ವಿದ್ಯಾ ಸಮೀಕ್ಷಾ ಕೇಂದ್ರವನ್ನು ವಿಶ್ವಬ್ಯಾಂಕ್ ಜಾಗತಿಕ ಅತ್ಯುತ್ತಮ ಅಭ್ಯಾಸವೆಂದು ಪರಿಗಣಿಸಿದೆ. ಇತರ ದೇಶಗಳು ಇಲ್ಲಿಗೆ ಭೇಟಿ ನೀಡುವಂತೆ ಮತ್ತು ಅದರ ಬಗ್ಗೆ ತಿಳಿಯುವಂತೆ ಆಹ್ವಾನ ನೀಡಿದೆ.
***
At the Vidya Samiksha Kendra in Gandhinagar. https://t.co/kN5pSFO1ig
— Narendra Modi (@narendramodi) April 18, 2022
Sharing some glimpses from my visit to the Vidya Samiksha Kendra in Gandhinagar. It is commendable how technology is being leveraged to ensure a more vibrant education sector in Gujarat. This will tremendously benefit the youth of Gujarat. pic.twitter.com/ezRueOdfjq
— Narendra Modi (@narendramodi) April 18, 2022
ગાંધીનગરમાં “વિદ્યા સમીક્ષા કેન્દ્ર”ની મારી મુલાકાત વેળાના કેટલાક દ્રશ્યો શેર કરું છું. ગુજરાતમાં શિક્ષણ ક્ષેત્રને પ્રગતિશીલ બનાવવા માટે ટેક્નોલોજીનો જે રીતે ઉપયોગ કરવામાં આવી રહ્યો છે તે પ્રશંસનીય છે. આનાથી રાજ્યના યુવાનોને ખૂબ લાભ થશે. pic.twitter.com/6HrquKqLgG
— Narendra Modi (@narendramodi) April 18, 2022