1. ಖತಾರ್ ರಾಷ್ಟ್ರದ ಘನತೆವೆತ್ತ ಶೇಖ್ ತಮಿಮ್ ಬಿನ್ ಹಮದ್ ಅಲ್ ಥಾನಿ, ಖತಾರ್ ರಾಷ್ಟ್ರದ ಎಮಿರ್ ಅವರ ಆಹ್ವಾನದ ಮೇರೆಗೆ ಭಾರತದ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2016ರ ಜೂನ್ 4-5ರಂದು ಎರಡು ದಿನಗಳ ಕಾಲ ಖತಾರ್ ರಾಷ್ಟ್ರ ಪ್ರವಾಸ ಕೈಗೊಂಡಿದ್ದರು.
2. ಘನತೆವೆತ್ತ ಎಮಿರ್ ಅವರು ಪ್ರಧಾನಮಂತ್ರಿ ಮೋದಿ ಅವರನ್ನು ಅಮಿರಿ ದಿವಾನ್ ನಲ್ಲಿ ಸ್ವಾಗತಿಸಿದರು ಮತ್ತು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಪರಸ್ಪರರ ಹಿತಕ್ಕೆ ಸಂಬಂಧಿಸಿದ ಬಹುಪಕ್ಷೀಯ ವಿಚಾರಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಸೌಹಾರ್ದಯುತ ಮತ್ತ ಸ್ನೇಹಮಯ ವಾತಾವರಣದಲ್ಲಿ ವಿಸ್ತೃತ ದರ್ಜೆಯ ಮಾತುಕತೆ ನಡೆಯಿತು.
3. ಈ ಭೇಟಿಯ ಕಾಲದಲ್ಲಿ , ಪ್ರಧಾನಮಂತ್ರಿ ಶ್ರೀ ಮೋದಿ ಅವರು, ಘನತೆವೆತ್ತ ಶೇಖ್ ಅಬ್ದುಲ್ಲಾ ಬಿನ್ ನಸ್ಸರ್ ಬಿನ್ ಖಲೀಫಾ ಅಲ್ ಥಾನಿ, ಖತಾರ್ ರಾಷ್ಟ್ರದ ಪ್ರಧಾನಮಂತ್ರಿ ಮತ್ತು ಒಳನಾಡು ಸಚಿವರನ್ನು ಭೇಟಿ ಮಾಡಿದರು.
4. ಅಧಿಕೃತ ಸಭೆಗಳ ವೇಳೆ, ಎರಡೂ ಕಡೆಯವರು ಭಾರತ ಮತ್ತು ಖತಾರ್ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಸ್ಮರಿಸಿದರು ಮತ್ತು ಹಲವು ಪೀಳಿಗೆಗಳಿಂದ ಪರಸ್ಪರರಿಗೆ ಉಪಯುಕ್ತ ಮತ್ತು ಸಾಂಪ್ರದಾಯಿಕವಾಗಿ ಎರಡೂ ದೇಶಗಳ ಜನರ ನಡುವೆ ಉಳಿದುಕೊಂಡಿರುವ ನಿಖಟ ಸಂಪರ್ಕ ಸುದೀರ್ಘ ಸಮಯದಿಂದ ಉತ್ತಮವಾದ್ದನ್ನೇ ಮಾಡಿದೆ.
5. ನಿರಂತರವಾದ ಉನ್ನತ ಮಟ್ಟದ ಸಭೆ ಹಾಗೂ ವಿನಿಮಯದ ಮೂಲಕ ಪುಷ್ಟಿದಾಯಕವಾಗಿ ರುವ ಪ್ರಸಕ್ತ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ಎರಡೂ ಕಡೆಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರು ಖತಾರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಒಪ್ಪಂದ/ ಎಂ.ಓ.ಯು.ಗಳು ಆಖೈರಾದುದನ್ನು ಅವರು ಸ್ವಾಗತಿಸಿದರು. ಈ ಒಪ್ಪಂದಗಳು ಮತ್ತು ಈಗಾಗಲೇ ಇರುವ ಒಪ್ಪಂದಗಳು ಭಾರತ ಮತ್ತು ಖತಾರ್ ನಡುವಿನ ಬಾಂಧವ್ಯದ ಕ್ರೋಡೀಕರಣ ಮತ್ತು ಸಹಕಾರದ ಚೌಕಟ್ಟನ್ನು ಬಲಪಡಿಸಲಿದೆ.
6. ವಾಣಿಜ್ಯ ಮತ್ತು ಹೂಡಿಕೆ, ಇಂಧನ, ರಕ್ಷಣೆ ಮತ್ತು ಮಾನವಶಕ್ತಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ದ್ವಿಪಕ್ಷೀಯ ಸಾಂಸ್ಥಿಕ ವ್ಯವಸ್ಥೆಯನ್ನು ಇಬ್ಬರೂ ನಾಯಕರು ಪ್ರಶಂಸಿಸಿದರು, ಮತ್ತು ಎರಡೂ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಕ್ಷೇತ್ರೀಯ ಜಂಟಿ ಕಾರ್ಯ ಗುಂಪುಗಳು ನಿಯಮಿತವಾಗಿ ಭೇಟಿಯಾಗಬೇಕು ಎಂದು ಪ್ರತಿಪಾದಿಸಿದರು. ಎಲ್ಲ ದ್ವಿಪಕ್ಷೀಯ ವಿಚಾರಗಳು ಅದರಲ್ಲೂ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಬಗ್ಗೆ ನಿಯಮಿತವಾಗಿ ಪರಾಮರ್ಶಿಸಲು ಅಂತರ ಸಚಿವಾಲಯಗಳ ಉನ್ನತ ಮಟ್ಟದ ಜಂಟಿ ಸಮಿತಿಯನ್ನು ರಚಿಸಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು.
7. ಪ್ರಸ್ತುತ ಇರುವ ಉತ್ತಮ ಸನ್ನಿವೇಶವನ್ನು ಪರಿಗಣಿಸಿ, ಇಬ್ಬರೂ ನಾಯಕರು ಪರಸ್ಪರ ಹಿತಾಸಕ್ತಿಯ ವಿಭಿನ್ನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ವಿಸ್ತರಿಸಲು ಮತ್ತು ಮತ್ತಷ್ಟು ಬಲಪಡಿಸಲು ಸಮ್ಮತಿ ಸೂಚಿಸಿದರು. ಉನ್ನತ ಮಟ್ಟದ ರಾಜಕೀಯ ವಿನಿಮಯ, ರಕ್ಷಣೆ ಮತ್ತು ಭದ್ರತೆ ಸಹಕಾರ, ವಾಣಿಜ್ಯ ಮತ್ತು ಆರ್ಥಿಕ ಸಂಬಂಧ ಹಾಗೂ ಜನರಿಂದ ಜನರ ಸಂಪರ್ಕವನ್ನು ಹೆಚ್ಚಿಸಲೂ ಅವರು ಒಪ್ಪಿಗೆ ಸೂಚಿಸಿದರು. ವಿಶ್ವದಲ್ಲಿ ಮತ್ತು ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆಯನ್ನು ಉತ್ತೇಜಿಸಲು ತಮ್ಮ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ಎರಡೂ ದೇಶಗಳ ನಡುವೆ 21ನೇ ಶತಮಾನದ ಬಲವಾದ ಪಾಲುದಾರಿಕೆಯನ್ನು ಕಟ್ಟುವ ಅಗತ್ಯದ ಬಗ್ಗೆ ಅವರು ಪ್ರತಿಪಾದಿಸಿದರು.
8. 2008ರಲ್ಲಿ ಅಂಕಿತ ಹಾಕಲಾದ ರಕ್ಷಣಾ ಸಹಕಾರದ ಒಪ್ಪಂದ ದ್ವಿಪಕ್ಷೀಯ ರಕ್ಷಣ ಬಾಂಧವ್ಯವನ್ನು ಬಲಪಡಿಸಲು ಅಗತ್ಯ ಚೌಕಟ್ಟನ್ನು ಒದಗಿಸುತ್ತಿದೆ ಎಂದು ಪರಿಗಣಿಸಲಾಗಿದೆ, ಇಬ್ಬರೂ ನಾಯಕರು ಈ ಬಾಂಧವ್ಯಕ್ಕೆ ಇನ್ನೂ ಹೆಚ್ಚಿನ ಉತ್ತೇಜನವನ್ನು ನೀಡಲು ಸಮ್ಮತಿಸಿದ್ದಾರೆ. ಇದರಲ್ಲಿ ಕರಾವಳಿ ರಕ್ಷಣೆಯಲ್ಲಿನ ಜಂಟಿ ಅಭ್ಯಾಸ ಮತ್ತು ನೌಕೆ, ವಾಯು ಮತ್ತು ಪದಾತಿ ಪಡೆಗಳ ಹೆಚ್ಚಿನ ತರಬೇತಿಯೂ ಸೇರಿದೆ.
9. ಭಾರತದಲ್ಲಿ 2016ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅನುಕ್ರಮವಾಗಿ ನಡೆದ ಅಂತಾರಾಷ್ಟ್ರೀಯ ಸಮರನೌಕಾ ಪರಾಮರ್ಶೆಯಲ್ಲಿ ಮತ್ತು ಡಿಫೆಕ್ಸ್ಪೋದಲ್ಲಿ ಖತಾರ್ ನ ಪಾಲ್ಗೊಂಡಿದ್ದಕ್ಕೆ ಮತ್ತು ಭಾರತದ ನೌಕಾ ಮತ್ತು ಕರಾವಳಿ ಕಾವಲು ಪಡೆ ಸಂಸ್ಥೆಗಳಿಗೆ ಖತಾರಿ ನಿಯೋಗದ ಭೇಟಿಯ ಹೆಚ್ಚಳಕ್ಕೆ ಭಾರತದ ಕಡೆಯಿಂದ ಅಭಿನಂದನೆ ಸಲ್ಲಿಸಲಾಯಿತು. ಖತಾರ್ ಕಡೆಯಿಂದ ಕೂಡ ಭಾರತಕ್ಕೆ ದೇಶೀಯವಾಗಿ ವಿನ್ಯಾಸಮಾಡಿದ ಮತ್ತು ಮಾರ್ಗದರ್ಶನದಲ್ಲಿ ನಿರ್ಮಿಸಿದ ಕ್ಷಿಪಣಿ ಹಾರಿಸಬಲ್ಲ ಹಡಗಿನೊಂದಿಗೆ ಮಾರ್ಚ್ 2016ರ ಡಿಮ್ಡೆಕ್ಸ್ ನಲ್ಲಿ ಉನ್ನತಮಟ್ಟದ ಪಾಲ್ಗೊಳ್ಳುವಿಕೆಗೆ ಹಾಗೂ ನೌಕಾಪಡೆ ಮತ್ತು ಕರಾವಳಿ ಭದ್ರತಾಪಡೆಯ ಹಡಗುಗಳ ಸದುದ್ದೇಶದ ಆಗಮನಕ್ಕೆ ಧನ್ಯವಾದ ಅರ್ಪಿಸಲಾಯಿತು. ಖತಾರ್ ಸಶಸ್ತ್ರಪಡೆಗಳಿಗೆ ಮತ್ತು ಕರಾವಳಿ ಭದ್ರತಾಪಡೆಗಳಿಗೆ ಭಾರತದಲ್ಲಿ ಮತ್ತು ಖತಾರ್ ನಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ ಏರ್ಪಡಿಸುವ ಭಾರತದ ಪ್ರಸ್ತಾಪಕ್ಕೆ ಖತಾರ್ ಕಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು.
10. ಇಬ್ಬರೂ ನಾಯಕರು ಎರಡೂ ರಾಷ್ಟ್ರಗಳ ಪ್ರಗತಿ ಮತ್ತು ಸುರಕ್ಷತೆಗೆ ಪ್ರಮುಖವಾದ ಗಲ್ಫ್ ಮತ್ತು ಹಿಂದೂಮಹಾಸಾಗರದ ವಲಯದಲ್ಲಿ ಸಾಗರ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಸಹಕಾರಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು.
11. ಇಬ್ಬರೂ ನಾಯಕರು ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ಖಂಡಿಸಿದರು, ವಿಶ್ವದ ಎಲ್ಲ ರಾಷ್ಟ್ರಗಳು ಹಾಗೂ ಸಮಾಜಕ್ಕೆ ಬೆದರಿಕೆ ಒಡ್ಡಿರುವ ಜಾಗತಿಕ ಸಮಸ್ಯೆಯನ್ನು ಮೂಲೋತ್ಪಾಟನೆ ಮಾಡಲು ಒಗ್ಗೂಡಿ ಸಹಕರಿಸುವ ತಮ್ಮ ದೃಢ ನಿಶ್ಚಯವನ್ನು ಅವರು ವ್ಯಕ್ತಪಡಿಸಿದರು. ಭಯೋತ್ಪಾದನೆ ಸಂಘಟನೆಗಳು ಜಾಗತಿಕವಾಗಿ ಮತ್ತು ಪ್ರದೇಶಕ ಮಟ್ಟದಲ್ಲಿ ಹಬ್ಬತ್ತಿರುವ ಮತ್ತು ಗಣನೀಯವಾಗಿ ಹೆಚ್ಚುತ್ತಿರುವ ಭಯೋತ್ಪಾದನೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆ ವಾತಾವರಣ ಮತ್ತು ಸುಸ್ಥಿರ ಅಭಿವೃದ್ಧಿಗೆ ಮಾರಕವಾಗಿರುವುದನ್ನೂ ಅವರು ಉಲ್ಲೇಖಿಸಿದರು.
12. ಎಲ್ಲ ಸ್ವರೂಪದ ಹಿಂಸೆ, ಭಯೋತ್ಪಾದನೆ, ವಿಧ್ವಂಸಕತೆಯನ್ನು ಖಂಡಿಸಿದ ಇಬ್ಬರೂ ನಾಯಕರು, ಇವುಗಳನ್ನು ಮತ್ತು ಇವುಗಳ ಹಿಂದಿನ ಉದ್ದೇಶವನ್ನು ಮತ್ತು ಅವರ ಎಲ್ಲ ಸ್ವರೂಪದ ಹಿಂಸೆಯನ್ನೂ ಯಾವುದೇ ಸನ್ನಿವೇಶದಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು. ಭಯೋತಾಪದನೆ ಯಾವುದೇ ಕಾರಣಕ್ಕೂ ಯಾವುದೇ ಧರ್ಮ, ನಾಗರಿಕತೆ ಅಥವಾ ಸಾಂಪ್ರದಾಯಿಕ ಗುಂಪುಗಳೊಂದಿಗೆ ಸಂಪರ್ಕಹೊಂದಿರಬಾರದು ಎಂದು ಪ್ರತಿಪಾದಿಸಿದರು.
13. ಇಬ್ಬರೂ ನಾಯಕರು ಭಯೋತ್ಪಾದನೆಗೆ ಬೆಂಬಲ ನೀಡುವವರನ್ನು ಮತ್ತು ಅವರಿಗೆ ಪ್ರಾಯೋಜಕತ್ವ ನೀಡುವವರನ್ನು ಪ್ರತ್ಯೇಕಿಸುವ ಅಗತ್ಯವನ್ನು ಒತ್ತಿ ಹೇಳಿದರು. ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುವವರನ್ನು ಮತ್ತು ಅದನ್ನೇ ಒಂದು ನೀತಿಯ ಸಾಧನವಾಗಿ ಬಳಸಿಕೊಳ್ಳುವಂಥ ಎಲ್ಲ ಕಾಯಗಳ ವಿರುದ್ಧ ತುರ್ತಾಗಿ ಹಾಗೂ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕಾದ ಅಗತ್ಯಕ್ಕೆ ಸಮ್ಮತಿ ಸೂಚಿಸಿದರು.
14. ಜಾಗತಿಕ ಸಮಸ್ಯೆಯಾಗಿರುವ ಭಯೋತ್ಪಾದನೆಯನ್ನು ಎದುರಿಸಲು ಸಮಗ್ರ ನಿಲುವಿನ ಅಗತ್ಯವಿದೆ, ಅದರಲ್ಲಿ ಕೇವಲ ಹಿಂಸಾತ್ಮಕ ವಿಧ್ವಂಸಕತೆಯನ್ನು ಮಾತ್ರ ನಿಯಂತ್ರಿಸುವುದಲ್ಲ, ಭಯೋತ್ಪಾದನೆ ಮೊಳಕೆ ಒಡೆಯದಂತೆ ತಡೆಯುವ, ಮತ್ತು ಭಯೋತ್ಪಾದನೆಗೆ ಹಣಕಾಸು ಮೂಲವನ್ನು ಎಲ್ಲಾ ಕಡೆಯಿಂದ ನಿಲ್ಲಿಸುವ, ಭಯೋತ್ಪಾದಕ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವುದನ್ನು ತಡೆಯುವ, ವಿದೇಶಿ ಭಯೋತ್ಪಾದಕ ಹೋರಾಟಗಾರರ ಸಂಚಾರ ತಡೆಯುವ, ಯೋತ್ಪಾದನೆ ಮೂಲಸೌಕರ್ಯ ಕಿತ್ತುಹಾಕುವ, ಮತ್ತು ಇಂಟರ್ನೆಟ್ ಮೂಲಕ ಭಯೋತ್ಪಾದಕ ಪ್ರಚಾರ ಮಾಡುವವರನ್ನು ಎದುರಿಸುವ ಬಗ್ಗೆಯೂ ಸಮ್ಮತಿಸಿದರು.
15. ಎರಡೂ ಕಡೆಯವರು ಭಯೋತ್ಪಾದನೆಗೆ ಸೈಬರ್ ಪ್ರದೇಶದ ಬಳಕೆಯ ತಡೆ, ಸೈಬರ್ ಭದ್ರತೆ, ಆಮೂಲಾಗ್ರ ಮತ್ತು ಸಾಮಾಜಿಕ ಸೌಹಾರ್ದಕ್ಕೆ ಅಡ್ಡಿ ಮಾಡುವುದೂ ಸೇರಿದಂತೆ ಸೈಬರ್ ಸುರಕ್ಷತೆಯ ಸಹಕಾರವನ್ನು ಮತ್ತಷ್ಟು ಪ್ರೋತ್ಸಾಹಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದರು. ಎರಡೂ ದೇಶಗಳ ಧಾರ್ಮಿಕ ವಿದ್ವಾಂಸರು ಮತ್ತು ಬುದ್ಧಿಜೀವಿಗಳ ನಡುವಿನ ಮಾತುಕತೆ ಮತ್ತು ಸಮಾವೇಶ, ವಿಚಾರಗೋಷ್ಠಿಗಳನ್ನು ಏರ್ಪಡಿಸಿ ಶಾಂತಿಯ ಮೌಲ್ಯಗಳು, ಸಹಿಷ್ಣುತೆ, ಸಮಗ್ರತೆ ಮತ್ತು ಕಲ್ಯಾಣಕ್ರಮಗಳು ಮತ್ತು ಎಲ್ಲ ಧರ್ಮಗಳ ಪರಂಪರೆಯ ಅಭಿಪ್ರಾಯಗಳ ವಿನಿಮಯವನ್ನು ಅವರು ಸ್ವಾಗತಿಸಿದರು.
16. ಹಾಲಿ ರಕ್ಷಣಾ ಕ್ಷೇತ್ರದಲ್ಲಿ ಸಾಗಿರುವ ದ್ವಿಪಕ್ಷೀಯ ಸಹಕಾರವನ್ನು ಪ್ರಶಂಸಿಸಿದ ಇಬ್ಬರೂ ನಾಯಕರು ಭಯೋತ್ಪಾದನೆ ನಿಗ್ರಹಕ್ಕೆ, ಕಾರ್ಯಾಚರಣೆ, ಬೇಹುಗಾರಿಕೆಯ ವಿನಿಮಯ, ಉತ್ತಮ ಪದ್ಧತಿಗಳ ಅಭಿವೃದ್ಧಿ ಮತ್ತು ತಂತ್ರಜ್ಞಾನ, ಸಾಮರಥ್ಯ ವರ್ಧನೆ, ಕಾನೂನು ಜಾರಿಯಲ್ಲಿ ಸಹಕಾರ ವರ್ಧನೆ, ಅಕ್ರಮ ಹಣ ರವಾನೆ ತಡೆ, ಮಾದಕದ್ರವ್ಯ ಕಳ್ಳಸಾಗಾಣಿಕೆ ಹಾಗೂ ಬಹುರಾಷ್ಟ್ರೀಯ ಅಪರಾಧ ತಡೆಗೆ ಹೆಚ್ಚಿನ ಸಹಕಾರಕ್ಕೆ ಸಮ್ಮತಿ ಸೂಚಿಸಿದರು. ಇಬ್ಬರೂ ನಾಯಕರು ಅಕ್ರಮ ಹಣ ವರ್ಗಾವಣೆಯ ವಿರುದ್ಧ ಕ್ರಮ ಕೈಗೊಳ್ಳಲೂ ಸಮ್ಮತಿಸಿದರು. ಅಕ್ರಮ ಹಣ ರವಾನೆ, ಸಂಬಂಧಿತ ಅಪರಾಧ ಮತ್ತು ಭಯೋತ್ಪಾದನೆಗೆ ಹಣ ಪೂರೈಕೆಗೆ ಸಂಬಂಧಿಸಿದಂತೆ ಬೇಹುಗಾರಿಕೆ ಮಾಹಿತಿ ವಿನಿಮಯ ಸಹಕಾರಕ್ಕೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವುದನ್ನೂ ಸ್ವಾಗತಿಸಿದರು.
17. ಭಯೋತ್ಪಾದನೆಯನ್ನು ಹತ್ತಿಕ್ಕಲು ಬಲವಾದ ಹಾಗೂ ಸಂಘಟಿತವಾದ ಜಾಗತಿಕ ಸಮುದಾಯದ ಕ್ರಮದ ಅಗತ್ಯವನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು. ಸೂಕ್ತ ಬಹುಪಕ್ಷೀಯ ಸಂಸ್ಥೆಗಳ ಮೂಲಕ ಭಯೋತ್ಪಾದನೆಯನ್ನು ಹತ್ತಿಕ್ಕಲು ಇಬ್ಬರೂ ನಾಯಕುರ ಸಮ್ಮತಿಸಿದರು.
18. ಇಬ್ಬರೂ ನಾಯಕರು ದ್ವಿಪಕ್ಷೀಯ ವಾಣಿಜ್ಯ ಎರಡೂ ದೇಶಗಳ ನಡುವಿನ ಸಂಪರ್ಕದ ಕೊಂಡಿ ಎಂದು ಬಣ್ಣಿಸಿದರು. ಅದ್ಭುತ ವಾಣಿಜ್ಯ ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು, ಎರಡೂ ರಾಷ್ಟ್ರಗಳು ಪರಸ್ಪರ ಉನ್ನತ ವಾಣಿಜ್ಯ ಪಾಲುದಾರರಾಗಿದ್ದಾರೆ ಎಂದರು. ಎರಡೂ ಕಡೆಯವರು ವ್ಯಾಪಾರ ಬುಟ್ಟಿ ವೈವಿಧ್ಯತೆ ಮೂಲಕ ಈ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಒಪ್ಪಿದರು. ಪರಸ್ಪರರ ವಾಣಿಜ್ಯ ಮೇಳ ಮತ್ತು ಪ್ರದರ್ಶನಗಳಲ್ಲಿ ನಿಯಮಿತವಾಗಿ ಭಾಗವಹಿಸುವುದನ್ನು ಉತ್ತೇಜಿಸಲು ಮತ್ತು ವಾಣಿಜ್ಯ ಕ್ರಮಗಳನ್ನು ಉತ್ತೇಜಿಸುವ ಅವಕಾಶ ನೀಡಲು ನಾಯಕರು ಸಮ್ಮತಿಸಿದರು. ಭಾರತೀಯ ಮತ್ತು ಖತಾರಿ ಕಂಪನಿಗಳ ಪರಸ್ಪರರ ಮಾರುಕಟ್ಟೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು ಮತ್ತು ಅಂಥ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಸಮ್ಮತಿಸಿದರು. ವಾಣಿಜ್ಯದಿಂದ ವಾಣಿಜ್ಯ ಸಂಪರ್ಕ ಉತ್ತೇಜನಕ್ಕೆ, ಅವರು ಎರಡು ದೇಶಗಳ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವೀಸಾಗಳನ್ನು ತ್ವರಿತವಾಗಿ ಮಂಜೂರು ಮಾಡುವ ಸೂಕ್ತ ವ್ಯವಸ್ಥೆ ರೂಪಿಸಲು ಒಪ್ಪಿಕೊಂಡರು.
19. ಭಾರತೀಯ ಕಂಪನಿಗಳು ಖತಾರ್ ನಲ್ಲಿ 2022ರಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಮತ್ತು ಖತಾರ್ 2020 ಮುನ್ನೋಟದಡಿ ಅಭಿವೃದ್ಧಿ ಯೋಜನೆಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಖತಾರಿ ಕಡೆಯವರು ಸ್ವಾಗತಿಸಿದರು.
20. ಭಾರತ ಸರ್ಕಾರ ಕೈಗೊಂಡಿರುವ ಪ್ರಮುಖ ಉಪಕ್ರಮಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿ ಮೋದಿ ಅವರು, ರೈಲ್ವೆ, ರಕ್ಷಣೆ ಮತ್ತು ವಿಮೆ ಸೇರಿದಂತೆ ಪ್ರಮುಖ ವಲಯಗಳಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಯನ್ನು ಮತ್ತು ಹಾಲಿ ಇರುವ ನಿಯಮಗಳನ್ನು ಸಡಿಲಗೊಳಿಸಿದ್ದು, ಸುಲಭವಾಗಿ ವಾಣಿಜ್ಯ ನಡೆಸಲು ನಿಯಮಗಳನ್ನು ಆಮೂಲಾಗ್ರವಾಗಿ ಸರಳೀಕರಿಸಲಾಗಿದೆ ಎಂದರು. 100 ಸ್ಟಾರ್ಟ್ ನಗರಗಳು, 50 ನಗರಗಳಲ್ಲಿ ಮೆಟ್ರೋ ಯೋಜನೆಗಳು, 500 ನಗರಗಳಲ್ಲಿ ಆಧುನಿಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಮೂಲಕ ಭಾರತದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ಸೃಷ್ಟಿಸಲು ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರಿಗೂ ಕೈಗೆಟಕುವ ದರದ ಆರೋಗ್ಯ ಸೇವೆ, 2019ರಹೊತ್ತಿಗೆ ಎಲ್ಲರಿಗೂ ಶೌಚಾಲಯ, 2022ರಹೊತ್ತಿಗೆ ಸರ್ವರಿಗೂ ಸೂರು ಯೋಜನೆ ಬಗ್ಗೆ ವಿವರಿಸಿದ ಪ್ರಧಾನಿ ಮೋದಿ ಅವರು ಇದರಲ್ಲಿ ಭಾರತದೊಂದಿಗೆ ಖತಾರ್ ಕೂಡ ಪಾಲುದಾರ ಆಗಬೇಕು ಎಂದು ಆಹ್ವಾನಿಸಿದರು.
21. ಭಾರತದ ಪ್ರಗತಿ ಮತ್ತು ಅಭಿವೃದ್ಧಿಯನ್ನು ತ್ವರಿತಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುನ್ನೋಟವನ್ನು ಪ್ರಶಂಸಿಸಿದ ಘನತೆವೆತ್ತ ಎಮಿರ್, ಭಾರತದ ಅಭಿವೃದ್ಧಿ ಉಪಕ್ರಮದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ಆರ್ಥಿಕ ಬೆಳವಣಿಗೆಗೆ ಧನಾತ್ಮಕ ಚಾಲನೆ ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನವೋದ್ಯಮ ಭಾರತ, ಮೇಕ್ ಇನ್ ಇಂಡಿಯಾ, ಸ್ಮಾರ್ಟ್ ಸಿಟಿ ಮತ್ತು ಕ್ಲೀನ್ ಇಂಡಿಯಾ ಇತ್ಯಾದಿ ಉಪಕ್ರಮಗಳನ್ನು ಭಾರತ ಕೈಗೊಂಡಿರುವ ಬಗ್ಗೆ ಘನತೆವೆತ್ತ ಎಮಿರ್ ಮೆಚ್ಚುಗೆ ವ್ಯಕ್ತಪಡಿಸಿದರು.
22. ಭಾರತದ ಹಾಲಿ ಸಾಮರ್ಥ್ಯ ಮತ್ತು ಹೆಚ್ಚಿನ ಪ್ರಗತಿ ದರವನ್ನು ಗುರುತಿಸಿ, ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗುವ ಮತ್ತು ಖತಾರ್ ನ ಗಣನೀಯವಾದ ಹೂಡಿಕೆ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಇಬ್ಬರೂ ನಾಯಕರು ವಿವಿಧ ಮಾರ್ಗಗಳು ಮತ್ತು ಹೂಡಿಕೆಯಲ್ಲಿ ಖತಾರಿ ಬಂಡವಾಳವನ್ನು ಭಾರತದಲ್ಲಿ ವಿವಿಧ ಆಸ್ತಿ ವರ್ಗಗಳಲ್ಲಿ ಮತ್ತು ಮೂಲಸೌಕರ್ಯ ವಲಯದಲ್ಲಿ ಹೂಡುವ ಬಗ್ಗೆ ಹಾಗೂ ಭಾರತೀಯ ಸಾರ್ವಜನಿಕ ವಲಯದ ಉದ್ದಿಮೆಗಳ ಬಂಡವಾಳ ಹಿಂತೆಗೆತದ ಬಗ್ಗೆಯೂ ಚರ್ಚಿಸಿದರು.
23. ಎರಡೂ ದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿನ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲೂ ಎರಡೂ ಕಡೆಯವರು ಸಮ್ಮತಿಸಿದರು. ಖತಾರ್ ಹೂಡಿಕೆ ಪ್ರಾಧಿಕಾರ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಮತ್ತು ಭಾರತ ಸರ್ಕಾರದ ಹೂಡಿಕೆ ನಿಧಿ ಸ್ಥಾಪನೆಯ ಬಗ್ಗೆಯೂ ಮತ್ತಷ್ಟು ಚರ್ಚೆ ನಡೆಸಿದರು. ಖತಾರ್ ಸಾಂಸ್ಥಿಕ ಹೂಡಿಕೆದಾರರು ರಾಷ್ಟ್ರೀಯ ಮೂಲಸೌಕರ್ಯ ಮತ್ತು ಹೂಡಿಕೆ ನಿಧಿಯಲ್ಲಿ ಪಾಲ್ಗೊಳ್ಳಲು ಚೌಕಟ್ಟು ಒಪ್ಪಂದಕ್ಕೆ ಅಂಕಿತ ಹಾಕಿದ್ದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
24. ಬಂಡವಾಳ ಅವಕಾಶಗಳ ಬಗ್ಗೆ ಕಾಲಕಾಲಕ್ಕೆ ಮತ್ತು ನಿಯಮಿತವಾಗಿ ಮಾಹಿತಿ ವಿನಿಮಯಕ್ಕೆ ಎರಡೂ ಕಡೆಯವರು ಸಮ್ಮತಿಸಿದರು. ಖತಾರ್ ಹೂಡಿಕೆ ಪ್ರಾಧಿಕಾರ ಮತ್ತು ಸಂಬಂಧಿತ ಭಾರತೀಯ ಪ್ರಾಧಿಕಾರಗಳು, ಖಾಸಗಿ ಮತ್ತು ಸಾರ್ವಜನಿಕ ವಲಯದ ಕಂಪನಿಗಳ ನಡುವೆ ನಿಯಮಿತವಾಗಿ ಸಭೆಗಳನ್ನು ಏರ್ಪಡಿಸುವ ಅಗತ್ಯವನ್ನು ಗುರುತಿಸಿದರು.
25. ಎರಡೂ ಕಡೆಯವರು ಇಂಧನ ವಲಯದಲ್ಲಿನ ದ್ವಿಪಕ್ಷೀಯ ವಾಣಿಜ್ಯದ ಬೆಳವಣಿಗೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಭಾರತಕ್ಕೆ ಎಲ್.ಎನ್.ಜಿ ಮತ್ತು ಎಲ್.ಪಿ.ಜಿ.ಯನ್ನು ದೊಡ್ಡ ಪ್ರಮಾಣದಲ್ಲಿ ಖತಾರ್ ಸರಬರಾಜು ಮಾಡುತ್ತದೆ. ಭಾರತ ಇಂಧನ ಭದ್ರತೆಯಲ್ಲಿ ಖತಾರ್ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿತು.
26. ಎರಡೂ ಕಡೆಯವರು ಇಂಧನ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ತರಬೇತಿ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರಕ್ಕೆ ಗಮನ ಹರಿಸಲು ಸಮ್ಮತಿಸಿದರು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಸಹಕಾರ ಮತ್ತು ಪೆಟ್ರೋ ರಾಸಾಯನಿಕ ಸಮುಚ್ಚಯದಲ್ಲಿ ಜಂಟಿ ಪಾಲುದಾರಿಕೆಯ ಉತ್ತೇಜನ ಮತ್ತು ಭಾರತ ಮತ್ತು ಇತರ ರಾಷ್ಟ್ರಗಳಲ್ಲಿ ಜಂಟಿ ಅನ್ವೇಷಣೆ ಸಹಕಾರಕ್ಕೆ ಸಮ್ಮತಿಸಿದರು.
27. ಭಾರತದ ಕಡೆಯಿಂದ ಜಂಟಿಯಾಗಿ ತೈಲ ಪತ್ತೆ ಮತ್ತು ಅನಿಲ ಸಂಪತ್ತಿನ ಅಭಿವೃದ್ಧಿ, ಹೊಸ ಕ್ಷೇತ್ರಗಳ ಮತ್ತು ನೈಸರ್ಗಿಕ ಅನಿಲ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳನ್ನು ಅನ್ವೇಷಿಸಲು ಮತ್ತು ಬಳಸಿಕೊಳ್ಳುವ ಸಲುವಾಗಿ, ಖತಾರ್ ನಲ್ಲಿ ಪರಸ್ಪರ ಹಿತಾಸಕ್ತಿಯ ಅವಕಾಶಗಳನ್ನು ಬಳಸಿಕೊಳ್ಳುವ ಇಂಧನ ಕಂಪನಿಗಳ ಆಸಕ್ತಿಯನ್ನು ಒತ್ತಿ ಹೇಳಲಾಯಿತು.
28. ಭಾರತೀಯ ಕಡೆಯಿಂದ ಖತಾರ್ ಗೆ ಭಾರತದಲ್ಲಿ ಹೊಸ ” ಹೈಡ್ರೋಕಾರ್ಬನ್ ಪರಿಶೋಧನೆ, ಪರವಾನಗಿ ‘ ನೀತಿ ಮತ್ತು ಸಣ್ಣ ಕ್ಷೇತ್ರ ನೀತಿ ಅಡಿಯಲ್ಲಿ ಹೂಡಿಕೆ ಮಾಡಲು, ಪರಿಶೋಧನೆ ನಿಕ್ಷೇಪ ಶೋಧನೆಗೆ ಹಾಗೂ ಉತ್ಪಾದನೆ ಮಾಡಲು ಆಹ್ವಾನ ನೀಡಲಾಯಿತು.
29. ಎರಡನೇ ಹಂತದ ಕಾರ್ಯತಂತ್ರಾತ್ಮಕ ಕಾಪು ದಾಸ್ತಾನು ಅವಶ್ಯಕತೆಯನ್ನು ಭಾರತದಲ್ಲಿ ಸೃಷ್ಟಿಸಲು ಭಾರತದ ಕಡೆಯಿಂದ ಖತಾರ್ ಗೆ ಆಹ್ವಾನ ನೀಡಲಾಯಿತು.
30. ಇಬ್ಬರೂ ನಾಯಕರು ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಮಾರುಕಟ್ಟೆಯೂ ಸೇರಿದಂತೆ
ಹಣಕಾಸು ಸೇವೆಗಳ ವಲಯದಲ್ಲಿನ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ಬಗ್ಗೆಯೂ ಚರ್ಚಿಸಿದರು.ಎರಡೂ ರಾಷ್ಟ್ರಗಳ ಆರ್ಥಿಕ ಸಂಸ್ಥೆಗಳ ನಡುವೆ ಅಂದರೆ ಭದ್ರತೆ ಮತ್ತು ಸೆಬಿ ಮತ್ತು ಸಂಬಂಧಿತ ಕೇಂದ್ರೀಯ ಬ್ಯಾಂಕ್ ಗಳ ನಡುವೆ ಸಹಕಾರ ವಿಸ್ತರಣೆಗೆ ಅವರು ಸಮ್ಮತಿಸಿದರು.
31. ಭಾರತವು ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಚಿಕಿತ್ಸೆ ವ್ಯವಸ್ಥೆ ನೀಡುತ್ತಿರುವುದನ್ನು ಪರಿಗಣಿಸಿ, ಎರಡೂ ಕಡೆಯವರು ಆರೋಗ್ಯ ಸೇವೆ, ಆರೋಗ್ಯ ಸಿಬ್ಬಂದಿಯ ವಿನಿಮಯ, ಆರೋಗ್ಯ ಶಿಕ್ಷಣ ಮತ್ತು ಔಷಧ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರಕ್ಕೆ ಒಪ್ಪಿಗೆ ಸೂಚಿಸಿದರು. ಇಬ್ಬರೂ ನಾಯಕರು ಭಾರತ ಗಣರಾಜ್ಯದ ಸರ್ಕಾರ ಮತ್ತು ಖತಾರ್ ರಾಷ್ಟ್ರದ ಸರ್ಕಾರಗಳ ನಡುವೆ ಆರೋಗ್ಯ ಕ್ಷೇತ್ರದ ದ್ವಿಪಕ್ಷೀಯ ಸಹಕಾರಕ್ಕಾಗಿ ತಿಳಿವಳಿಕೆ ಪತ್ರಕ್ಕೆ ಅಂಕಿತ ಹಾಕಿದ್ದನ್ನು ಸ್ವಾಗತಿಸಿದರು.
32. ಅಂತಾರಾಷ್ಟ್ರೀಯ ಸೌರ ಸಹಯೋಗ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡಿರುವ ನೇತೃತ್ವಕ್ಕೆ ಖತಾರಿ ಕಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು. ವಿಶ್ವಾದ್ಯಂತ ಹೊಸ ಸೌರ ತಂತ್ರಜ್ಞಾನಕ್ಕಾಗಿ ಈ ಸಹಯೋಗದ ಮಹತ್ವನ್ನು ಅವರು ಅಂಗೀಕರಿಸಿದರು.
33. ಅಂತಾರಾಷ್ಟ್ರೀಯ ಯೋಗ ದಿನಕ್ಕೆ ದೊರೆತ ಅಭೂತಪೂರ್ವ ಸ್ಪಂದನೆ, ವಿಶ್ವದ ಸಮತೋಲಿತ, ಸುಸ್ಥಿರ ಮತ್ತು ಆರೋಗ್ಯಪೂರ್ಣ ಭವಿಷ್ಯಕ್ಕಾಗಿ ಜಾಗತಿಕ ಸಮುದಾಯ ಒಟ್ಟಾಗಿ ಬಂದುದರ ಪ್ರತೀಕ ಇದಾಗಿದೆ ಎಂದು ಇಬ್ಬರೂ ನಾಯಕರು ಪ್ರತಿಪಾದಿಸಿದರು.2015ರ ಜೂನ್ 21ರಂದು ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಖತಾರ್ ನೀಡಿದ ಬೆಂಬಲಕ್ಕೆ ಹಾಗೂ ಅದರ ಅಂಗವಾಗಿ ಅಂಚೆ ಚೀಟಿ ಹೊರತರುವ ಮೂಲಕ ಖತಾರ್ ನೀಡಿದ ಪ್ರೋತ್ಸಾಹಕ್ಕೆ ಪ್ರಧಾನಮಂತ್ರಿ ಮೋದಿ ಅವರು ಧನ್ಯವಾದ ಅರ್ಪಿಸಿದರು.
34. ಭಾರತ ಮತ್ತು ಖತಾರ್ ನ ಜನರನ್ನು ಒಗ್ಗುಡಿಸುವಲ್ಲಿ ಸಾಂಸ್ಕೃತಿಕ ವಿನಿಮಯದ ಪಾತ್ರವನ್ನು ಇಬ್ಬರೂ ನಾಯಕರು ಉಲ್ಲೇಖಿಸಿದರು. ಇಬ್ಬರೂ ನಾಯಕರು ದ್ವಿಪಕ್ಷೀಯ ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರೋತ್ಸಾಹ ವಿಸ್ತರಣೆಗೆ ಸಮ್ಮತಿಸಿದರು. ನಿಯಮಿತವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ತಂಡಗಳ ವಿನಿಮಯ ಮತ್ತು ಸಿನಿಮಾ ರಂಗದಲ್ಲಿ ಸಹಯೋಗಕ್ಕೆ ಸಮ್ಮತಿಸಿದರು. 2019ರಲ್ಲಿ ಖತಾರ್ – ಭಾರತ ಸಾಂಸ್ಕೃತಿಕ ವರ್ಷ ಆಚರಿಸಲು ಖತಾರ್ ವಸ್ತುಸಂಗ್ರಹಾಲಯ ನಿರ್ಧರಿಸಿರುವುದನ್ನು ಪ್ರಧಾನಮಂತ್ರಿ ಮೋದಿ ಅವರು ಪ್ರಶಂಸಿಸಿದರು. ಇಬ್ಬರೂ ನಾಯಕರು ಕಸ್ಟಂ ವಿಚಾರಗಳಲ್ಲಿನ ಪರಸ್ಪರ ನೆರವು ಮತ್ತು ಸಹಕಾರಕ್ಕಾಗಿ ಒಪ್ಪಂದಕ್ಕೆ ಅಂಕಿತ ಹಾಕಿರುವುದನ್ನು ಸ್ವಾಗತಿಸಿದರು. ಪ್ರವಾಸೋದ್ಯಮ ಸಹಕಾರದ ಎಂ.ಓ.ಯು., ಯುವ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಖತಾರ್ ರಾಷ್ಟ್ರದ ಸರ್ಕಾರ ಮತ್ತು ಭಾರತ ಗಣರಾಜ್ಯದ ಸರ್ಕಾರಗಳ ನಡುವೆ ಪ್ರಥಮ ಕಾರ್ಯಕಾರಿ ಕಾರ್ಯಕ್ರಮವನ್ನೂ ಸ್ವಾಗತಿಸಿದರು.
35. ಇಬ್ಬರೂ ನಾಯಕರು ಜನರಿಂದ ಜನರ ಸಂಪರ್ಕವು ಭಾರತ ಮತ್ತು ಖತಾರ್ ರಾಷ್ಟ್ರಗಳ ಬಾಂಧವ್ಯದ ಹೃದಯ ಎಂದು ಬಣ್ಣಿಸಿದರು. ಎರಡೂ ಕಡೆಯವರು ಈ ಸಂಬಂಧವನ್ನು ಅನುಸರಣೆಯ ಮುಂದುವರಿಕೆಗೆ ಸಮ್ಮತಿಸಿದರು. ಘನತೆವೆತ್ತ ಎಮಿರ್, ಖತಾರ್ ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ದಿಗೆ ಭಾರತೀಯ ಸಮುದಾಯ ನೀಡಿರುವ ಕೊಡುಗೆ ಮತ್ತು ಪಾತ್ರವನ್ನು ಪ್ರಶಂಸಿಸಿದರು. ಖತಾರಿ ಕಡೆಯಿಂದ ಭಾರತದ ಕಡೆಯವರಿಗೆ ಕಾರ್ಮಿಕ ಕಾಯಿದೆಯಲ್ಲಿನ ಸುಧಾರಣೆ ಕುರಿತಂತೆ ವಿವರಿಸಲಾಯಿತು. ಇದು ಖತಾರ್ ನಲ್ಲಿರುವ ಕೌಶಲ ಮತ್ತು ಕೌಶಲರಹಿತ ಕಾರ್ಮಿಕರ ಹಿತವನ್ನು ರಕ್ಷಿಸುತ್ತದೆ. ಭಾರತೀಯ ಸಮುದಾಯವನ್ನು ಪೋಷಿಸುತ್ತಿರುವುದಕ್ಕೆ ಮತ್ತು ಅವರ ನಿರಂತರ ಕಲ್ಯಾಣ ಮತ್ತು ಸುರಕ್ಷತೆಗೆ ಶ್ರಮಿಸುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಖತಾರಿ ನಾಯಕತ್ವಕ್ಕೆ ಧನ್ಯವಾದ ಹೇಳಿದರು. ಇಬ್ಬರೂ ನಾಯಕರು ಕೌಶಲ ಅಭಿವೃದ್ಧಿ ಮತ್ತು ವಿದ್ಯಾರ್ಹತೆ ಮಾನ್ಯತೀಕರಣ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿದ್ದನ್ನು ಸ್ವಾಗತಿಸಿದರು.
36. ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಭದ್ರತಾ ಪರಿಸ್ಥಿತಿ ಸೇರಿದಂತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಹಾಗೂ ಪರಸ್ಪರ ಹಿತಾಸಕ್ತಿಯ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಿರಿಯಾ, ಇರಾಖ್, ಲಿಬಿಯಾ ಮತ್ತು ಯೆಮನ್ ಗಳಲ್ಲಿನ ಭದ್ರತಾ ಸ್ಥಿತಿಯ ಬಗ್ಗೆ ಅವರು ತಮ್ಮ ಕಳವಳ ವ್ಯಕ್ತಪಡಿಸಿದರು. ರಾಜಕೀಯ ಮಾತುಕತೆ ಮತ್ತು ಚರ್ಚೆಯ ಮೂಲಕ ಈ ಎಲ್ಲ ಸಮಸ್ಯೆಗಳನ್ನೂ ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಮಹತ್ವವನ್ನು ಅವರು ಪುನರುಚ್ಚರಿಸಿದರು.
37. ವಿಶ್ವಸಂಸ್ಥೆಯ ಸುಧಾರಣೆಯ ವಿಚಾರದಲ್ಲಿ ಇಬ್ಬರೂ ನಾಯಕರು ಪರಸ್ಪರ ಸಮರ್ಥ ವ್ಯವಸ್ಥೆಯ ಮಹತ್ವವನ್ನು ಪ್ರತಿಪಾದಿಸಿದರು. ವಿಶ್ವಸಂಸ್ಥೆಯ ಕೇಂದ್ರೀಕೃತವಾದ ಪ್ರಸಕ್ತ ಸನ್ನಿವೇಶದ ವಾಸ್ತವಗಳ ಹಿನ್ನೆಲೆಯಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಲು ಪರಿಣಾಮಕಾರಿ ಬಹುಪಕ್ಷೀಯ ವ್ಯವಸ್ಥೆ ಪ್ರಮುಖ ಅಂಶವಾಗಿದೆ ಎಂದು ಪ್ರತಿಪಾದಿಸಿದರು. ಭದ್ರತಾ ಮಂಡಳಿಯನ್ನು ಹೆಚ್ಚು ಪ್ರತಿನಿಧಿತ್ವ ಮತ್ತು ವಿಶ್ವಾಸಾರ್ಹ ಮತ್ತು ಸಮರ್ಥಗೊಳಿಸಲು ಅದರ ಸದಸ್ಯತ್ವ ವಿಸ್ತರಣೆಯೂ ಸೇರಿದಂತೆ ವಿಶ್ವಸಂಸ್ಥೆಯ ಸುಧಾರಣೆಗಳ ಬಗ್ಗೆ ತುರ್ತಾಗಿ ಗಮನ ಹರಿಸುವ ಅಗತ್ಯವನ್ನು ಒತ್ತಿ ಹೇಳಿದರು.
38. ಘನತೆವೆತ್ತ ಎಮಿರ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಗೆ ನೀಡಿದ ಸ್ವಾಗತಕ್ಕೆ ಮತ್ತು ಆತಿಥ್ಯಕ್ಕೆ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸಿದರು. ಘನತೆವೆತ್ತ ಎಮಿರ್ ಅವರನ್ನು ಪರಸ್ಪರರಿಗೆ ಅನುಕೂಲಕರವಾದ ಸಮಯದಲ್ಲಿ ಭಾರತಕ್ಕೆ ಅಧಿಕೃತ ಭೇಟಿ ನೀಡುವಂತೆ ಆಹ್ವಾನಿಸಿದರು. ಆಹ್ವಾನವನ್ನು ಅವರು ಅಂಗೀಕರಿಸಿದರು.