ಘನತೆವೆತ್ತ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರೇ, ನನ್ನ ಆತ್ಮೀಯ ಬ್ರಿಕ್ಸ್ ಸಹೋದ್ಯೋಗಿಗಳೇ, ಗೌರವಾನ್ವಿತ ನಾಯಕರೇ
ಇಂದು ನಾನು ನಿಮ್ಮೆಲ್ಲರೊಂದಿಗೆ ಇರುವುದಕ್ಕೆ ಸಂತೋಷವಾಗುತ್ತಿದೆ. ನಿಮ್ಮ ದೇಶಗಳು ಭಾರತದೊಂದಿಗೆ ಆಪ್ತ ಮತ್ತು ಮೌಲ್ಯಯುತ ಪಾಲುದಾರಿಕೆ ಹೊಂದಿವೆ. ಸಮಗ್ರ ಸುಸ್ಥಿರ ಅಭಿವೃದ್ಧಿ ಸಾಧಿಸುವ ಹಂಚಿಕೆಯ ಆದ್ಯತೆಗಳನ್ನು ನಿಮ್ಮೊಂದಿಗೆ ನನ್ನ ನಿಲುವುಗಳನ್ನು ಹಂಚಿಕೊಳ್ಳಲು ನಾನು ಹರ್ಷಿಸುತ್ತೇನೆ. ಈ ಮಾತುಕತೆಗೆ ನಮ್ಮೆಲ್ಲರನ್ನೂ ಒಗ್ಗೂಡಿಸಿದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.
ಘನತೆವೆತ್ತರೇ,
ಯು.ಎನ್. 2030 ಕಾರ್ಯಕ್ರಮಪಟ್ಟಿಯನ್ನು ಮತ್ತು ಅದರ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅಳವಡಿಸಿಕೊಂಡ ಎರಡು ವರ್ಷಗಳಿಂದ,ಈ ಗುರಿಸಾಧನೆಗೆ ಕೈಗೊಂಡಿರುವ ಸಹಯೋಗಾತ್ಮಕ ಕ್ರಮಗಳು ಇನ್ನೂ ಬಲವಾಗಿವೆ. ಇತ್ತೀಚೆಗೆ ಜುಲೈನಲ್ಲಿ, ಭಾರತ ತನ್ನ ಪ್ರಥಮ ಎಸ್.ಡಿ.ಜಿ.ಯ ಪ್ರಥಮ ಸ್ವಯಂ ರಾಷ್ಟ್ರೀಯ ಪರಾಮರ್ಶೆಯನ್ನು ಪೂರ್ಣಗೊಳಿಸಿದೆ. ನಮ್ಮ ಅಭಿವೃದ್ಧಿಯ ಕಾರ್ಯಕ್ರಮವು ‘ಸರ್ವರೊಂದಿಗೆ ಸರ್ವರ ವಿಕಾಸ’ ಎಂಬ ದೇಶದಲ್ಲಿದೆ. ನಾವು ಪ್ರತಿಯೊಂದು ಎಸ್.ಡಿ.ಜಿ.ಗಳನ್ನೂ ಒಕ್ಕೂಟ ಮತ್ತು ರಾಜ್ಯಮಟ್ಟಗಳೆರಡರಲ್ಲೂ ನಮ್ಮ ಸ್ವಂತ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮತ್ತು ಯೋಜನೆಗಳಿಗೆ ಹೊಂದಿಸಿದ್ದೇವೆ. ನಮ್ಮ ಸಂಸತ್ತು ಕೂಡ ಎಸ್.ಡಿ.ಜಿಗಳ ಮೇಲೆ ಸಂಸದೀಯ ಚರ್ಚೆಯನ್ನು ನಡೆಸಿದೆ. ನಮ್ಮ ಕಾರ್ಯಕ್ರಮಗಳು ಕಾಲಮಿತಿ ಮಾದರಿಯಲ್ಲಿ ಈ ಆದ್ಯತೆಗಳನ್ನು ಪೂರ್ಣಗೊಳಿಸಲು ಸಜ್ಜಾಗಿವೆ. ನಾನು ಒಂದು ಉದಾಹರಣೆಯನ್ನು ನೀಡಲು ಇಚ್ಛಿಸುತ್ತೇನೆ. ನಮ್ಮ ಮೂರು ಹಂತದ ದೃಷ್ಟಿಕೋನದಲ್ಲಿ ನಾವು ಬ್ಯಾಂಕ್ ಸೌಲಭ್ಯ ಇಲ್ಲದವರಿಗೆ ಬ್ಯಾಂಕ್ ಖಾತೆ ಒದಗಿಸಿದ್ದೇವೆ, ಎಲ್ಲರಿಗೂ ಬಯೋಮೆಟ್ರಿಕ್ ಸಹಿತ ಗುರುತು ಚೀಟಿ ನೀಡಿದ್ದೇವೆ, ಮತ್ತು ನಾವಿನ್ಯಪೂರ್ಣವಾದ ಮೊಬೈಲ್ ಆಡಳಿತ ಪರಿಹಾರವನ್ನೂ ಬಳಕೆ ಮಾಡಿಕೊಂಡಿದ್ದೇವೆ, ಮೊದಲ ಬಾರಿಗೆ 360 ದಶಲಕ್ಷ ಜನರಿಗೆ ನೇರ ಸೌಲಭ್ಯ ವರ್ಗಾವಣೆ ಮಾಡಿದ್ದೇವೆ.
ಗೌರವಾನ್ವಿತರೇ,
ನಾವು, ಬಲವಾದ ಅಂತಾರಾಷ್ಟ್ರೀಯ ಪಾಲುದಾರಿಕೆಯೊಂದಿಗೆ ಇಂತಹ ದೇಶೀಯ ಪ್ರಯತ್ನಕ್ಕೆ ಬೆಂಬಲ ನೀಡುತ್ತಿದ್ದೇವೆ. ಇದಕ್ಕಾಗಿ ನಾವು ನಮ್ಮ ಪಾಲಿನ ಕಾರ್ಯ ಮಾಡಲು ಸಿದ್ಧರಿದ್ದೇವೆ. ನಮ್ಮ ಅಭಿವೃದ್ಧಿಯ ಆಶೋತ್ತರಗಳ ಜೊತೆಗೆ ಸಹ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಪಾಲುದಾರಿಕೆಯ ದೀರ್ಘ ಪರಂಪರೆಯನ್ನು ಭಾರತ ಹೊಂದಿದೆ. ನಾವು ಪ್ರತಿಯೊಂದು ಹೆಜ್ಜೆಯಲ್ಲೂ ದೇಶೀಯ ಸಂಸ್ಥೆಗಳು ಸಾರ್ವಜನಿಕರ ಒಳಿತಿಗಾಗಿ ಅತ್ಯಾಧುನಿಕ ಪರಿಹಾರ ಅಭಿವೃದ್ಧಿಪಡಿಸಲು ನಮ್ಮ ಅನುಭವಗಳನ್ನು ಮತ್ತು ಸಂಪನ್ಮೂಲಗಳನ್ನು ಕ್ಷೇತ್ರಗಳ ವ್ಯಾಪ್ತಿಯೊಳಗೆ ಹಂಚಿಕೊಂಡಿದ್ದೇವೆ. ಈ ವರ್ಷದ ಆರಂಭದಲ್ಲಿ, ನಾವು ಶಿಕ್ಷಣ, ಆರೋಗ್ಯ ಸೇವೆ, ಸಂಪರ್ಕ ಮತ್ತು ವಿಪತ್ತು ನಿರ್ವಹಣೆಗಾಗಿ ಮತ್ತು ಅಭಿವೃದ್ಧಿಯ ಅಗತ್ಯಗಳಿಗಾಗಿ ದಕ್ಷಿಣ ಏಷ್ಯಾ ಉಪಗ್ರಹವನ್ನು ಉಡಾವಣೆ ಮಾಡಿದೆವು. ನಮ್ಮ ಭಾರತದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ, ಭಾರತೀಯ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರ, ಐಟಿಇಸಿ – 161 ಏಷ್ಯಾ, ಆಫ್ರಿಕಾ, ಪೂರ್ವ ಯುರೋಪ್, ಲ್ಯಾಟಿನ್ ಅಮೇರಿಕಾ, ಕೆರೆಬಿಯನ್ ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರಗಳ ಪಾಲುದಾರಿಕೆ ದೇಶಗಳಿಗೆ ತರಬೇತಿ ಮತ್ತು ಕೌಶಲ ಅಭಿವೃದ್ಧಿಯನ್ನು ಒದಗಿಸಿದೆ. ಆಫ್ರಿಕಾ ಒಂದರಲ್ಲೇ, ಒಂದು ದಶಕದಲ್ಲಿ, 25ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಟಿಇಸಿ ವಿದ್ಯಾರ್ಥಿವೇತನದಲ್ಲಿ ಭಾರತದಲ್ಲಿ ತರಬೇತಿ ಪಡೆದಿದ್ದಾರೆ. ಮೂರನೇ ಭಾರತ-ಆಫ್ರಿಕಾ ವೇದಿಕೆಯ ಶೃಂಗ 2015ರಲ್ಲಿ, ಎಲ್ಲ 54 ಆಫ್ರಿಕಾದ ದೇಶಗಳ ಪಾಲ್ಗೊಂಡಿದ್ದಾಗ, ನಾವು ಐಟಿಇಸಿ ವಿದ್ಯಾರ್ಥಿವೇತನವನ್ನು ದುಪ್ಪಟ್ಟು ಮಾಡಲು ಅಂದರೆ 5 ವರ್ಷಗಳ ಅವಧಿಗೆ 50,000 ಮಾಡಲು ನಿರ್ಧರಿಸಿದೆವು. ಆಫ್ರಿಕಾದ ಸೋಲಾರ್ ಮಮಾಸ್ ಗಳಿಗೆ ಭಾರತದಲ್ಲಿ ತರಬೇತಿ ನೀಡಲಾಗಿದ್ದು, ಅವರು ಆಫ್ರಿಕಾ ಖಂಡದ ಸಾವಿರಾರು ಮನೆಗಳಲ್ಲಿ ಜ್ಯೋತಿ ಬೆಳಗಿಸಿದ್ದಾರೆ. ಆಫ್ರಿಕಾದೊಂದಿಗಿನ ನಮ್ಮ ಪ್ರಗತಿಯ ಕಾರ್ಯಕ್ರಮವು ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ವಾರ್ಷಿಕ ಸಭೆಯನ್ನು ಆಫ್ರಿಕಾದ ಹೊರಗೆ ಅಂದರೆ ಮೊದಲ ಬಾರಿಗೆ ಭಾರತದಲ್ಲಿ ಈ ವರ್ಷದ ಆರಂಭದಲ್ಲಿ ನಡೆಸುವಂತೆ ಮಾಡಿತು. ನಮ್ಮ ಅಭಿವೃದ್ಧಿ ಪಾಲುದಾರಿಕೆ ಯೋಜನೆಗಳು ವಿದ್ಯುತ್, ನೀರು, ರಸ್ತೆ, ಆರೋಗ್ಯಸೇವೆ, ಟೆಲಿ ಮೆಡಿಸಿನ್ ಮತ್ತು ಮೂಲ ಮೂಲಸೌಕರ್ಯವನ್ನು ವಿಶ್ವಾದ್ಯಂತದ 12ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಒದಗಿಸುತ್ತಿದೆ. ಇದರ ಜೊತೆಗೆ, ನಮ್ಮ “no strings attached” ಮಾದರಿಯ ಸಹಕಾರವು ನಮ್ಮ ಪಾಲುದಾರ ರಾಷ್ಟ್ರಗಳ ಅಗತ್ಯ ಮತ್ತು ಆದ್ಯತೆಗಳಿಗನುಗುಣವಾಗಿವೆ.
ಘನತೆವೆತ್ತರೇ,
ಇಲ್ಲಿ ಹಾಜರಿರುವ ದೇಶಗಳು ಬಹುತೇಕ ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಹೊಂದಿವೆ. ನಾವು ಏನೇ ಮಾಡಿದರೂ, ಅದು ವಿಶ್ವದ ಸುಸ್ಥಿರತೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಬ್ರಿಕ್ ಬೈ ಬ್ರಿಕ್ (ಇಟ್ಟಿಗೆಗಳಿಂದ) ಬ್ರಿಕ್ಸ್ ಮೂಲಕ ಉತ್ತಮ ವಿಶ್ವ ರೂಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಿನ್ನೆ, ನಾನು ಬ್ರಿಕ್ಸ್, 10 ವರ್ಷಗಳಲ್ಲಿ ಜಾಗತಿಕ ಪರಿವರ್ತನೆಯ ಚಾಲಕನಾಗುತ್ತದೆ, ಇದು ಸುವರ್ಣ ದಶಕವಾಗಲಿದೆ ಎಂದು ತಿಳಿಸಿದ್ದೆ. ಇದನ್ನು ನಮ್ಮ ಜನಪರವಾದ ನಿಲುವು, ರಾಜಕಾರಣ, ಕ್ರಿಯೆಯಿಂದ ಮತ್ತು ಈ ಕೆಳಗೆ ನಮೂದಿಸಲಾಗಿರುವ ಹತ್ತು ಪವಿತ್ರ ಬದ್ಧತೆಗಳಿಂದ ಸಾಧಿಸಬಹುದಾಗಿದೆ:
1.ಕನಿಷ್ಠ ಮೂರು ವಿಷಯಗಳ ಮೇಲೆ : ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಂಘಟಿತ ಮತ್ತು ಸಹಯೋಗದ ಕ್ರಮಗಳಿಂದ ಸುರಕ್ಷಿತ ವಿಶ್ವ ನಿರ್ಮಾಣ;
2. ಹವಾಮಾನ ಬದಲಾವಣೆಯನ್ನು ಎದುರಿಸಲು, ಅಂತಾರಾಷ್ಟ್ರೀಯ ಸೌರ ಸಹಯೋಗದಂತಹ ಉಪಕ್ರಮಗಳ ಮೂಲಕ ಸಂಯೋಜಿತ ಕ್ರಮ ತೆಗೆದುಕೊಳ್ಳುವ ಮೂಲಕ ಹಸಿರು ವಿಶ್ವದ ನಿರ್ಮಾಣ;
3. ದಕ್ಷತೆ, ಆರ್ಥಿಕತೆ ಮತ್ತು ಸಾಮರ್ಥ್ಯ ವರ್ಧನೆಗೆ ಸೂಕ್ತ ತಂತ್ರಜ್ಞಾನಗಳ ವಿನಿಮಯ ಮತ್ತು ನಿಯೋಜನೆ ಮೂಲಕ ಸಕ್ರಿಯಾತ್ಮಕ ವಿಶ್ವದ ನಿರ್ಮಾಣ;
4. ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯ ಮುಖ್ಯವಾಹಿನಿಗೆ ನಮ್ಮ ಜನರನ್ನು ತರುವ ಮೂಲಕ ಎಲ್ಲರನ್ನೂ ಒಳಗೊಂಡ ವಿಶ್ವದ ನಿರ್ಮಾಣ;
5. ನಮ್ಮ ಆರ್ಥಿಕತೆಯ ಹೊರಗೆ ಇರುವ ಡಿಜಿಟಲ್ ಕಂದಕ ತುಂಬುವ ಮೂಲಕ ಡಿಜಿಟಲ್ ವಿಶ್ವದ ನಿರ್ಮಾಣ;
6. ನಮ್ಮ ಲಕ್ಷಾಂತರ ಯುವಕರಿಗೆ ಭವಿಷ್ಯದ ಸಿದ್ಧ ಕೌಶಲ ಒದಗಿಸುವ ಮೂಲಕ ಕೌಶಲ ವಿಶ್ವದ ನಿರ್ಮಾಣ;
7. ರೋಗಗಳ ನಿರ್ಮೂಲನೆ ಮತ್ತು ಎಲ್ಲರಿಗೂ ಕೈಗೆಟಕುವ ದರದ ಆರೋಗ್ಯ ಆರೈಕೆ ಒದಗಿಸಲು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಕಾರ ನೀಡುವ ಮೂಲಕ ಆರೋಗ್ಯಪೂರ್ಣ ವಿಶ್ವದ ನಿರ್ಮಾಣ;
8. ಎಲ್ಲರಿಗೂ ಸಮಾನವಾದ ಅವಕಾಶ ಅದರಲ್ಲೂ ಲಿಂಗ ಸಮಾನತೆಯ ಅವಕಾಶ ಕಲ್ಪಿಸಿ, ಸಮಾನತೆಯ ವಿಶ್ವದ ನಿರ್ಮಾಣ;
9. ಮುಕ್ತವಾಗಿ ವ್ಯಕ್ತಿಗಳು, ಸೇವೆಗಳು ಹಾಗೂ ಸರಕುಗಳ ಸಾಗಾಟಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಂಪರ್ಕಿತ ವಿಶ್ವದ ನಿರ್ಮಾಣ; ಮತ್ತು
10. ಶಾಂತಿಯುತ ಸಹಬಾಳ್ವೆ ಮತ್ತು ಕೇಂದ್ರೀಕೃತವಾಗಿರುವ ಸ್ವಭಾವಗಳು, ಅಭ್ಯಾಸಗಳು, ಮತ್ತು ಪರಂಪರೆಗಳನ್ನು ಉತ್ತೇಜಿಸುವುದರ ಮೂಲಕ ಮತ್ತು ಪ್ರಕೃತಿಯೊಂದಿಗೆ ಸೌಹಾರ್ದಯುತವಾಗಿ ಬಾಳುವ ಮೂಲಕ ಸೌಹಾರ್ದಯುತ ವಿಶ್ವದ ನಿರ್ಮಾಣ.
ಈ ಕಾರ್ಯಕ್ರಮ ಪಟ್ಟಿಯ ಅಂಶಗಳು ಮತ್ತು ಅವುಗಳ ಮೇಲಿನ ಕ್ರಿಯೆಗಳು, ನಮ್ಮ ಜನರ ಕಲ್ಯಾಣದ ಜೊತೆಗೆ ಜಾಗತಿಕ ಸಮುದಾಯದ ಕಲ್ಯಾಣಕ್ಕೂ ನೇರವಾಗಿ ಕೊಡುಗೆ ನೀಡುತ್ತವೆ. ಇದರಲ್ಲಿ, ಭಾರತವು ಬದ್ಧತೆಯ ಪಾಲುದಾರನಾಗಿ ಎಲ್ಲ ಇತರ ರಾಷ್ಟ್ರಗಳ ಪ್ರಯತ್ನಗಳಿಗೆ ಬೆಂಬಲವಾಗಿ ಸದಾ ನಿಲ್ಲುತ್ತದೆ.; ನಾನು ಈ ಪಥದಲ್ಲಿ ಒಗ್ಗೂಡಿ ಸಾಗುವುದನ್ನು ಎದಿರು ನೋಡುತ್ತೇನೆ. ನಾನು ಅಧ್ಯಕ್ಷ ಕ್ಸಿ ಜಿಂಪಿಗ್ ಅವರಿಗೆ 2017ನೇ ವರ್ಷದ ಬ್ರಿಕ್ಸ್ ಅಧ್ಯಕ್ಷತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಮತ್ತು ಈ ಸುಂದರ ನಗರಿ ಕ್ಸಿಯಾಮನ್ ನಲ್ಲಿ ಅವರ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕೆ ಅಭಿನಂದಿಸುತ್ತೇನೆ.ನಾನು ಅಧ್ಯಕ್ಷ ಜುಮಾ ಅವರನ್ನೂ ಸ್ವಾಗತಿಸುತ್ತೇನೆ ಮತ್ತು ಮುಂದಿನ ವರ್ಷ ಜೋಹಾನ್ಸ್ ಬರ್ಗ್ ನಲ್ಲಿ ನಡೆಯಲಿರುವ ಶೃಂಗಕ್ಕೆ ಭಾರತದ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತೇನೆ.
ಧನ್ಯವಾದಗಳು
*****
Addressed the BRICS Emerging Markets and Developing Countries Dialogue. Sharing my speech. https://t.co/0Oed2c4igl
— Narendra Modi (@narendramodi) September 5, 2017
Emphasised on India’s commitment & endeavours towards expanding developmental cooperation with other nations, particularly Africa.
— Narendra Modi (@narendramodi) September 5, 2017