Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿಗಳು

ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿಗಳು


ಜಪಾನ್‌ನ ಟೋಕಿಯೊದಲ್ಲಿ 2022ರ ಮೇ 24ರಂದು ನಡೆದ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್‌ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿಡಾ, ಅಮೆರಿಕಾ ಅಧ್ಯಕ್ಷ ಜೋಸೆಫ್ ಬೈಡನ್ ಹಾಗೂ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಭಾಗವಹಿಸಿದರು. 2021ರ ಮಾರ್ಚ್‌ನಲ್ಲಿ ನಡೆದ ಮೊದಲ ವರ್ಚುವಲ್ ಸಭೆ, 2021ರಲ್ಲಿ ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಶೃಂಗಸಭೆ ಹಾಗೂ 2022ರ ಮಾರ್ಚ್ ವರ್ಚುವಲ್ ಸಂವಾದದ ನಂತರ ನಡೆಯುತ್ತಿರುವ ನಾಯಕರ ನಾಲ್ಕನೇ ಸಂವಾದ ಸಭೆ ಇದಾಗಿದೆ.

ಮುಕ್ತ, ಇಂಡೋ-ಪೆಸಿಫಿಕ್‌ನಲ್ಲಿ ಒಳಗೊಳ್ಳುವಿಕೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ವಿವಾದಗಳ ಶಾಂತಿಯುತ ಪರಿಹಾರದ ತತ್ವಗಳನ್ನು ಎತ್ತಿ ಹಿಡಿಯುವ ತಮ್ಮ  ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಇಂಡೋ-ಪೆಸಿಫಿಕ್‌ನ ಬೆಳವಣಿಗೆಗಳು ಮತ್ತು ಯುರೋಪ್ ಸಂಘರ್ಷಕ್ಕೆ ಸಂಬಂಧಿಸಿದ ತಮ್ಮ ದೃಷ್ಟಿಕೋನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಪ್ರಧಾನಮಂತ್ರಿ ಮೋದಿ ಅವರು ಯುದ್ಧವನ್ನು ನಿಲ್ಲಿಸುವುದು, ಸಂವಾದ ಹಾಗೂ ರಾಜತಾಂತ್ರಿಕತೆ ಪುನರಾರಂಭದ ಅಗತ್ಯ ಕುರಿತು ಭಾರತದ ಸ್ಥಿರ ಮತ್ತು ತತ್ವಬದ್ಧ ನಿಲುವಿನ ಬಗ್ಗೆ ಗಮನ ಸೆಳೆದರು. ಜೊತೆಗೆ, ಚಾಲ್ತಿಯಲ್ಲಿರುವ ಕ್ವಾಡ್ ಸಹಯೋಗ ಮತ್ತು ಭವಿಷ್ಯದ ತಮ್ಮ ದೃಷ್ಟಿಕೋನವನ್ನು ನಾಯಕರು ಹಂಚಿಕೊಂಡರು.

ಭಯೋತ್ಪಾದನೆಯನ್ನು ತಡೆಯುವುದು, ಗಡಿಯಾಚೆಗಿನ ದಾಳಿಗಳು ಸೇರಿದಂತೆ ಭಯೋತ್ಪಾದಕ ದಾಳಿಗಳನ್ನು ಪ್ರಾರಂಭಿಸಲು ಅಥವಾ ಯೋಜಿಸಲು ಬಳಸಬಹುದಾದ ಭಯೋತ್ಪಾದಕ ಗುಂಪುಗಳಿಗೆ ಯಾವುದೇ ರೀತಿಯ ಸಂಪರ್ಕ, ಹಣಕಾಸು ಅಥವಾ ಮಿಲಿಟರಿ ಬೆಂಬಲವನ್ನು ನಿರಾಕರಿಸುವುದರ ಮಹತ್ವವನ್ನು ನಾಯಕರು ಒತ್ತಿ ಹೇಳಿದರು.

ಕೊವಿಡ್–19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಕ್ವಾಡ್ಸ್ ನಡೆಸುತ್ತಿರುವ ಪ್ರಯತ್ನಗಳನ್ನು ಪರಿಶೀಲಿಸಿದ ನಾಯಕರು, ಭಾರತದಲ್ಲಿ ಜೈವಿಕ-ಇ ಸೌಲಭ್ಯದ ವರ್ಧಿತ ಉತ್ಪಾದನಾ ಸಾಮರ್ಥ್ಯವನ್ನು ಸ್ವಾಗತಿಸಿದರು. ಲಸಿಕೆಗಳ ವಿತರಣೆಯನ್ನು ಪ್ರಾರಂಭಿಸಲು ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯೂಎಚ್‌ಒ) ತುರ್ತು ಬಳಕೆಯ ಪಟ್ಟಿಯ ವಿಧಾನ (ಈಯುಎಲ್) ಅನುಮೋದನೆಯ ತ್ವರಿತ ಅನುದಾನಕ್ಕೆ ಕರೆ ನೀಡಿದರು. ಕ್ವಾಡ್ ಲಸಿಕೆ ಪಾಲುದಾರಿಕೆಯಡಿ ಏಪ್ರಿಲ್ 2022ರಲ್ಲಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾಗೆ ಭಾರತದಲ್ಲಿ ತಯಾರಿಸಿದ 525,000 ಡೋಸ್ ಲಸಿಕೆಗಳನ್ನು ಉಡುಗೊರೆಯಾಗಿ ನೀಡಿರುವುದನ್ನು ನಾಯಕರು ಸ್ವಾಗತಿಸಿದರು. ಕಡೆಯ ವ್ಯಕ್ತಿಯವರೆಗಿನ ವಿತರಣಾ ಸವಾಲುಗಳನ್ನು ಪರಿಹರಿಸುವ ಮೂಲಕ, ಸಾಂಕ್ರಾಮಿಕ ನಿರ್ವಹಣೆಗೆ ಸಮಗ್ರ ವಿಧಾನವನ್ನು ಅನುಸರಿಸುವುದನ್ನು ಮುಂದುವರಿಸುವುದು, ಜೀನೋಮಿಕ್ ಕಣ್ಗಾವಲು ಮತ್ತು ಕ್ಲಿನಿಕಲ್ ಪ್ರಯೋಗಗಳಲ್ಲಿ ಸಹಕಾರದ ಮೂಲಕ, ಪ್ರಾದೇಶಿಕ ಆರೋಗ್ಯ ಭದ್ರತೆ ಹೆಚ್ಚಳ ಹಾಗೂ ಜಾಗತಿಕ ಆರೋಗ್ಯ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಒಮ್ಮತ ವ್ಯಕ್ತಪಡಿಸಿದರು.

ಶುದ್ಧ ಇಂಧನ, ಹವಾಮಾನ, ಮಾಲಿನ್ಯರಹಿತ ಸಾಗಾಟ, ಹಸಿರು ಹೈಡ್ರೋಜನ್ ಸೇರಿದಂತೆ ವಿಪತ್ತು ನಿರೋಧಕ ಮೂಲಸೌಕರ್ಯಗಳ ಕಡೆಗೆ ಪ್ರಯತ್ನಗಳನ್ನು ಬಲಪಡಿಸಲು ಕ್ವಾಡ್ ಹವಾಮಾನ ಬದಲಾವಣೆ ಕ್ರಿಯೆ ಮತ್ತು ಮಾಲಿನ್ಯ ತಗ್ಗಿಸುವಿಕೆಯ ಪ್ಯಾಕೇಜ್ (ಕ್ಯೂ–ಸಿಎಚ್‌ಎಎಂಪಿ) ಅನ್ನು ಘೋಷಿಸಲಾಯಿತು. ತಮ್ಮ ಸಿಒಪಿ26 ಬದ್ಧತೆಯೊಂದಿಗೆ ವಲಯದ ದೇಶಗಳಲ್ಲಿ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಗೆ ಸಜ್ಜುಗೊಳಿಸಲು ಸಹಾಯ ಮಾಡಬೇಕಾದ ಮಹತ್ವವನ್ನು ಪುನರುಚ್ಚರಿಸಿದರು. 

ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕೆಲಸಗಳ ಭಾಗವಾಗಿ, ನಿರ್ಣಾಯಕ ತಂತ್ರಜ್ಞಾನ ಪೂರೈಕೆ ಸರಪಳಿಗಳ ಮೇಲಿನ ತತ್ವಗಳ ಕುರಿತು ಕ್ವಾಡ್ ನ ಸಾಮಾನ್ಯ ಹೇಳಿಕೆಗೆ ಚಾಲನೆ ನೀಡಲಾಯಿತು. ನಾಲ್ಕು ದೇಶಗಳು ಇಂಡೋ-ಪೆಸಿಫಿಕ್ ಪ್ರದೇಶದ ನಿರ್ಣಾಯಕ ಸೈಬರ್ ಭದ್ರತಾ ಮೂಲಸೌಕರ್ಯವನ್ನು ಹೆಚ್ಚಿಸಲು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ಸಂಘಟಿಸುತ್ತವೆ. ಜಾಗತಿಕ ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಹೆಚ್ಚಿನ ಕ್ವಾಡ್ ಸಹಯೋಗಕ್ಕೆ ಕರೆ ನೀಡಿದ ಪ್ರಧಾನಮಂತ್ರಿ, ಭಾರತದಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ರಚಿಸಲು  ರಾಷ್ಟ್ರೀಯ ಚೌಕಟ್ಟನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.

ಇಂಡೋ–ಫೆಸಿಪಿಕ್ ಪ್ರದೇಶದಲ್ಲಿನ ವಿಪತ್ತುಗಳಿಗೆ ಹೆಚ್ಚು ಪರಿಣಾಮಕಾರಿ ಮತ್ತು ಸಮಯೋಚಿತ ಪ್ರತಿಕ್ರಿಯೆಗಳನ್ನು ಸಕ್ರಿಯಗೊಳಿಸಲು, ಇಂಡೋ-ಪೆಸಿಫಿಕ್‌ಗಾಗಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದ (ಎಚ್‌ಎಡಿಆರ್) ಮೇಲಿನ ಕ್ವಾಡ್ ಪಾಲುದಾರಿಕೆಯನ್ನು ನಾಯಕರು ಘೋಷಿಸಿದರು.

ಹವಾಮಾನ ವೈಪರೀತ್ಯದ ಘಟನೆಗಳು, ವಿಪತ್ತು ತಡೆಗೆ ಸಿದ್ಧತೆ ಹಾಗೂ ಸಮುದ್ರದ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಪತ್ತೆಹಚ್ಚಲು ಸಹಾಯ ಮಾಡಲು ಕ್ವಾಡ್ ಉಪಗ್ರಹ ಡೇಟಾ ಪೋರ್ಟಲ್ ಮೂಲಕ ಭೂ ವೀಕ್ಷಣಾ ದತ್ತಾಂಶದ ಮೇಲೆ ಪ್ರದೇಶದ ಸಂಪನ್ಮೂಲಗಳನ್ನು ಒದಗಿಸಲು ನಾಯಕರು ಒಪ್ಪಿಕೊಂಡರು. ಒಳಗೊಳ್ಳುವಿಕೆಯ ಅಭಿವೃದ್ಧಿಗಾಗಿ ಬಾಹ್ಯಾಕಾಶ ಆಧರಿತ ದತ್ತಾಂಶ ಮತ್ತು ತಂತ್ರಜ್ಞಾನಗಳನ್ನು ಬಳಸುವಲ್ಲಿ ಅದರ ದೀರ್ಘಾವಧಿಯ ಸಾಮರ್ಥ್ಯಗಳನ್ನು ಹೊಂದಿರುವ ಈ ಪ್ರಯತ್ನದಲ್ಲಿ ಭಾರತವು ಕ್ರಿಯಾಶೀಲ ಪಾತ್ರವನ್ನು ವಹಿಸುತ್ತದೆ.

ಹೊಸ ಇಂಡೋ-ಪೆಸಿಫಿಕ್ ಮಾರಿಟೈಮ್ ಡೊಮೈನ್ ಜಾಗೃತಿ ಉಪಕ್ರಮವನ್ನು ಕ್ವಾಡ್ ನಾಯಕರು ಸ್ವಾಗತಿಸಿದರು. ದೇಶಗಳು ಹೆಚ್ಚಿನ ಲಭ್ಯತೆಯ ವಿಪತ್ತು ಚೇತರಿಕೆ (ಎಚ್‌ಎಡಿಆರ್) ಘಟನೆಗಳಿಗೆ ಪ್ರತಿಕ್ರಿಯಿಸಲು ಮತ್ತು ಅಕ್ರಮ ಮೀನುಗಾರಿಕೆಯನ್ನು ಎದುರಿಸಲು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. 

ಆಸಿಯಾನ್ ದೇಶಗಳ ಏಕತೆ ಮತ್ತು ಕೇಂದ್ರೀಕರಣಕ್ಕೆ ನಾಯಕರು ತಮ್ಮ ಅಚಲವಾದ ಬೆಂಬಲವನ್ನು ಪುನರುಚ್ಚರಿಸಿದರು. ಜೊತೆಗೆ ಈ ಪ್ರದೇಶದ ಪಾಲುದಾರರೊಂದಿಗೆ ಸಹಕಾರವನ್ನು ಬಲಪಡಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.

ಕ್ವಾಡ್ ನ ಧನಾತ್ಮಕ ಮತ್ತು ರಚನಾತ್ಮಕ ಕಾರ್ಯಸೂಚಿಯನ್ನು ತಲುಪಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಇಡೀ ಪ್ರದೇಶಕ್ಕೆ ಆಗುವ ಪ್ರಯೋಜನಗಳನ್ನು ಎತ್ತಿ ತೋರಿಸಿದರು.  ತಮ್ಮ ಸಂವಾದ ಮತ್ತು ಸಮಾಲೋಚನೆಗಳನ್ನು ಇದೇ ರೀತಿ ಮುಂದುವರಿಸಲು ಒಪ್ಪಿದ ನಾಯಕರು, 2023ರಲ್ಲಿ ಆಸ್ಟ್ರೇಲಿಯಾ ಆಯೋಜಿಸುವ ಶೃಂಗಸಭೆಯತ್ತ ತಮ್ಮ ಗಮನ ಹರಿಸಿದರು.

***