ಕೋವಿಡ್-19 ಲಸಿಕೆ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮೂರು ತಂಡಗಳೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ವರ್ಚುವಲ್ ಸಭೆ ನಡೆಸಿದರು. ಈ ತಂಡಗಳು ಪುಣೆಯ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್, ಹೈದರಾಬಾದ್ ನ ಬಯೋಲಾಜಿಕಲ್ ಇ ಲಿಮಿಟೆಡ್ ಮತ್ತು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್ ನ ತಂಡಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆಗಾಗಿ ಈ ಸಂಸ್ಥೆಗಳ ವಿಜ್ಞಾನಿಗಳು ಕೈಗೊಂಡಿರುವ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು. ಲಸಿಕೆ ಅಭಿವೃದ್ಧಿಗೆ ವಿವಿಧ ವೇದಿಕೆಗಳ ಸಾಮರ್ಥ್ಯದ ಬಗ್ಗೆಯೂ ಚರ್ಚಿಸಲಾಯಿತು.
ನಿಯಂತ್ರಕ ಪ್ರಕ್ರಿಯೆಗಳು ಮತ್ತು ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದಂತೆ ಸಂಸ್ಥೆಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ತಿಳಿಸುವಂತೆ ಪ್ರಧಾನಿ ಕೇಳಿದರು. ಲಸಿಕೆ ಮತ್ತು ಅದರ ಪರಿಣಾಮಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ತಿಳಿಸುವಂತೆ ಅವರು ಸಲಹೆ ನೀಡಿದರು. ಲಸಿಕೆಗಳನ್ನು ತಲುಪಿಸುವ ಸಂಬಂಧ ಲಾಜಿಸ್ಟಿಕ್ಸ್, ಸಾರಿಗೆ, ಕೋಲ್ಡ್ ಚೈನ್ ಇತ್ಯಾದಿ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಇಂದು ಚರ್ಚಿಸಲಾದ ಎಲ್ಲಾ ಲಸಿಕೆಗಳು ಪ್ರಯೋಗದ ವಿವಿಧ ಹಂತಗಳಲ್ಲಿವೆ. ಇವುಗಳ ದತ್ತಾಂಶ ಮತ್ತು ಫಲಿತಾಂಶದ ವಿವರಗಳನ್ನು ಮುಂದಿನ ವರ್ಷದ ಆರಂಭದಲ್ಲಿ ನಿರೀಕ್ಷಿಸಲಾಗಿದೆ.
ದೇಶದ ಮತ್ತು ಇಡೀ ಜಗತ್ತಿನ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಈ ಸಂಸ್ಥೆಗಳ ಲಸಿಕೆ ತಯಾರಕರೊಂದಿಗೆ ಸೇರಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಪ್ರಧಾನಿ ಸಲಹೆ ನೀಡಿದರು.
***