Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೋವಿಡ್ -19 ನಿಯಂತ್ರಣ ಮುಂದಿನ ಯೋಜನೆಗಳ ಕುರಿತು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೊರೊನಾ ಮಹಾಮಾರಿಯಿಂದ ಎದುರಾಗಿರುವ ಸಮಸ್ಯೆ ಮತ್ತು ಮುಂದಿನ ಯೋಜನೆಗಳ ಕುರಿತಂತೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಇದು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನಡೆಸಿದ ನಾಲ್ಕನೇ ಇಂಥ ಸಂವಾದವಾಗಿದೆ, ಈ ಹಿಂದೆ ಮಾರ್ಚ್ 20, ಏಪ್ರಿಲ್ 2 ಮತ್ತು ಏಪ್ರಿಲ್ 11ರಂದು ಸಂವಾದ ನಡೆಸಿದ್ದರು.

ಲಾಕ್ ಡೌನ್ ಧನಾತ್ಮಕ ಫಲಶ್ರುತಿ ನೀಡುತ್ತಿದ್ದು, ಕಳೆದ ಒಂದೂವರೆ ತಿಂಗಳುಗಳಲ್ಲಿ ದೇಶ ಸಾವಿರಾರು ಜನರ ಪ್ರಾಣ ಉಳಿಸುವಲ್ಲಿ ಶಕ್ತವಾಗಿದೆ ಎಂದರು. ಭಾರತದ ಜನಸಂಖ್ಯೆ ಹಲವು ರಾಷ್ಟ್ರಗಳ ಒಟ್ಟು ಜನಸಂಖ್ಯೆಗೆ ಸಮನಾಗಿದೆ ಎಂದು ಪ್ರಧಾನಿ ಹೇಳಿದರು. ಹಲವು ರಾಷ್ಟ್ರಗಳ ಸ್ಥಿತಿ ಮತ್ತು ಭಾರತದ ಸ್ಥಿತಿ ಮಾರ್ಚ್ ತಿಂಗಳಲ್ಲೇ ಒಂದೇ ರೀತಿಯಲ್ಲಿತ್ತು. ಆದರೆ, ಸಕಾಲಿಕ ಕ್ರಮಗಳಿಂದಾಗಿ ಭಾರತ ಹಲವು ಜನರನ್ನು ರಕ್ಷಿಸಲು ಶಕ್ತವಾಯಿತು ಎಂದರು. ಈ ವೈರಾಣುವಿನ ಅಪಾಯ ನಮ್ಮ ಊಹೆಗೂ ಮೀರಿದ್ದಾಗಿದ್ದು, ನಿರಂತರ ನಿಗಾ ಪರಮೋಚ್ಛ ಪ್ರಾಮುಖ್ಯವಾಗಿದೆ ಎಂದರು.

ದೇಶ ಈವರೆಗೆ ಎರಡು ಲಾಕ್ ಡೌನ್ ಗಳನ್ನು ನೋಡಿದೆ ಎಂದ ಪ್ರಧಾನಿ, ಕೆಲವು ವಿಚಾರಗಳಲ್ಲಿ ಎರಡೂ ಭಿನ್ನವಾಗಿದ್ದವು, ನಾವು ಈಗ ಮುಂದಿನ ಮಾರ್ಗೋಪಾಯಗಳ ಬಗ್ಗೆ ಚಿಂತಿಸಬೇಕಿದೆ ಎಂದರು. ತಜ್ಞರ ರೀತ್ಯ, ಕೊರೊನಾ ವೈರಾಣುವಿನ ಪರಿಣಾಮ ಮುಂಬರುವ ತಿಂಗಳುಗಳಲ್ಲಿಯೂ ಗೋಚರಿಸಲಿದೆ ಎಂದರು. ಎರಡು ಗಜ ದೂರವಿರಿ ಎಂಬ ಮಂತ್ರವನ್ನು ಪುನರುಚ್ಚರಿಸಿದ ಪ್ರಧಾನಿ, ಮಾಸ್ಕ್ ಗಳು ಮತ್ತು ಮುಖ ಕವಚಗಳು ಮುಂದಿನ ದಿನಗಳಲ್ಲಿ ನಮ್ಮ ಬದುಕಿನ ಭಾಗವಾಗಲಿವೆ ಎಂದರು. ಈ ಸನ್ನಿವೇಶದಲ್ಲಿ ಎಲ್ಲರ ಗುರಿಯೂ ತ್ವರಿತ ಸ್ಪಂದನೆಯಾಗಿರಬೇಕು ಎಂದರು. ಅನೇಕ ಜನರು ತಮಗೆ ಕೆಮ್ಮು ಮತ್ತು ಶೀತ ಅಥವಾ ರೋಗಲಕ್ಷಣಗಳಿದೆಯೇ ಎಂಬುದನ್ನು ಸ್ವಯಂ ಘೋಷಿಸಿಕೊಳ್ಳುತ್ತಿದ್ದಾರೆ, ಇದು ಸ್ವಾಗತಾರ್ಹ ಕ್ರಮ ಎಂದರು.

ನಾವು ಕೋವಿಡ್ 19 ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತಲೇ ಆರ್ಥಿಕತೆಗೂ ಮಹತ್ವ ನೀಡಬೇಕು ಎಂದು ಪ್ರಧಾನಿ ಪ್ರತಿಪಾದಿಸಿದರು. ಎಷ್ಟು ಸಾಧ್ಯವೋ ಅಷ್ಟು ತಂತ್ರಜ್ಞಾನ ಬಳಸಬೇಕು ಎಂದು ಪ್ರತಿಪಾದಿಸಿದ ಅವರು, ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲೂ ಸಮಯ ವಿನಿಯೋಗಿಸುವಂತೆ ತಿಳಿಸಿದರು. ದೇಶ ಕೋವಿಡ್ -19 ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಹೆಚ್ಚು ಜನರು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಬೇಕಾದ ಮಹತ್ವವನ್ನು ಅವರು ಪ್ರತಿಪಾದಿಸಿದರು. “ನಾವು ಧೈರ್ಯವಾಗಿರಬೇಕು ಮತ್ತು ಶ್ರೀಸಾಮಾನ್ಯರ ಬದುಕು ಮುಟ್ಟುವಂಥ ಸುಧಾರಣೆ ತರಬೇಕು” ಎಂದು ಹೇಳಿದರು. ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಮತ್ತು ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸುವ ಮಾರ್ಗಗಳನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಜನರನ್ನು ಸಂಯೋಜಿಸಬಹುದು ಎಂದೂ ಅವರು ಸಲಹೆ ನೀಡಿದರು.

ಕೆಂಪು ವಲಯಗಳಲ್ಲಿ ಅಂದರೆ ಹಾಸ್ಟ್ ಸ್ಪಾಟ್ ಗಳಲ್ಲಿ ರಾಜ್ಯಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಅವರು ಒತ್ತಿ ಹೇಳಿದರು. ರಾಜ್ಯಗಳ ಪ್ರಯತ್ನಗಳು ಕೆಂಪು ವಲಯಗಳನ್ನು ಕಿತ್ತಳೆ ಬಣ್ಣದ ವಲಯಗಳಾಗಿ ಮತ್ತು ನಂತರ ಅದನ್ನು ಹಸಿರು ವಲಯಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿರಬೇಕು ಎಂದರು.

ಕಡಲಾಚೆ ಇರುವ ಭಾರತೀಯರನ್ನು ಮರಳಿ ಕರೆತರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಧಾನಿ, ಅಲ್ಲಿರುವವರು ಅನಾನುಕೂಲಕ್ಕೆ ಒಳಗಾಗಬಾರದು ಮತ್ತು ಅವರ ಕುಟುಂಬದವರೂ ಸಹ ಯಾವುದೇ ಅಪಾಯಕ್ಕೆ ಒಳಗಾಗಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು. ಹವಾಮಾನ ಬದಲಾವಣೆ – ಬೇಸಿಗೆಯ ದಗೆ ಮತ್ತು ಮುಂಗಾರು ಆಗಮನ – ಮತ್ತು ಈ ಋತುಗಳಲ್ಲಿ ಬರಬಹುದಾದ ಕಾಯಿಲೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಕಾರ್ಯತಂತ್ರ ರೂಪಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

ಗರಿಷ್ಠ ಜೀವಗಳನ್ನು ಉಳಿಸಲು ಗರಿಷ್ಠ ಮಟ್ಟದಲ್ಲಿ ಲಾಕ್ ಡೌನ್ ಜಾರಿ ಮಾಡುವಂತೆ ಕೇಂದ್ರ ಗೃಹ ಸಚಿವರು ಪುನರುಚ್ಚರಿಸಿದರು.
ಮುಖ್ಯಮಂತ್ರಿಗಳು ಸಂಕಷ್ಟದ ಸಮಯದಲ್ಲಿ ಪ್ರಧಾನಮಂತ್ರಿಯವರ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ವೈರಾಣು ನಿಗ್ರಹಕ್ಕಾಗಿ ತಾವುಗಳು ಕೈಗೊಂಡಿರುವ ಕ್ರಮಗಳ ಕುರಿತಂತೆ ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಗಡಿಯಲ್ಲಿ ತೀಕ್ಷಣ ಕಣ್ಗಾವಲು ಇಡುವ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುವ ಹಾಗೂ ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಕುರಿತಂತೆಯೂ ಅವರು ಮಾತನಾಡಿದರು. ನಾಯಕರು, ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಪೊಲೀಸ್ ಪಡೆ ಮತ್ತು ವೈದ್ಯಕೀಯ ಸಿಬ್ಬಂದಿಯ ಅಸಾಧಾರಣ ಕಾರ್ಯಕ್ಕಾಗಿ ತಮ್ಮ ಕೃತಜ್ಞತೆ ಅರ್ಪಿಸಿದರು.