ಗೌರವಾನ್ವಿತ ಪ್ರಧಾನ ಮಂತ್ರಿಯವರು ನಾವೆಲ್ ಕೊರೊನಾವೈರಸ್ ( ಕೊವಿಡ್ 19) ನಿಂದಾದ ಪರಿಸ್ಥಿತಿಯನ್ನು ಮತ್ತು ವಿವಿಧ ಸಚಿವಾಲಯಗಳು ಈವರೆಗೆ ಕೈಗೊಂಡ ಕ್ರಮವನ್ನು ಮಾರ್ಚ್ 7, 2020 ರಂದು ಬೆಳಿಗ್ಗೆ 11.30 ಕ್ಕೆ ಪರಿಶೀಲಿಸಿದರು. ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್, ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ, ನೀತಿ ಅಯೋಗದ ಸದಸ್ಯರಾದ ಡಾ.ವಿನೋದ್ ಕೆ ಪಾಲ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಮತ್ತು ಆರೋಗ್ಯ, ಔಷಧ ವಿಭಾಗ, ನಾಗರಿಕ ವಿಮಾನಯಾನ, ವಿದೇಶಾಂಗ ವ್ಯವಹಾರಗಳು, ಆರೋಗ್ಯ ಸಂಶೋಧನೆ, ಗೃಹ, ಹಡಗು, ಎನ್‌ಡಿಎಂಎ ವಿಭಾಗದ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ಕಾರ್ಯದರ್ಶಿ ಯವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಇತರ ಸಹಾಯಕ ಸಚಿವಾಲಯಗಳು ಕೊವೆಡ್ 19 ಕ್ಕೆ ಸಂಬಂಧಿಸಿದಂತೆ ನಡೆಸಿರುವ ಸಿದ್ಧತೆ ಮತ್ತು ಕ್ರಮಗಳ ಬಗ್ಗೆ ಕುರಿತ ವಿವರಗಳನ್ನು ಪ್ರಸ್ತುತ ಪಡಿಸಿದರು. ಪ್ರಸ್ತುತಿಯು ಪ್ರವೇಶ ದ್ವಾರಗಳ ಹಂತದಲ್ಲಿ ಮತ್ತು ಸಮುದಾಯದಲ್ಲಿ ಕಣ್ಗಾವಲಿರಿಸುವುದು , ಪ್ರಯೋಗಾಲಯದ ಸಹಾಯ, ಆಸ್ಪತ್ರೆಗಳ ಸಿದ್ಧತೆ, ಸಾಗಾಣಿಕೆ ಮತ್ತು ಅಪಾಯದ ಮಾಹಿತಿ ವಿನಿಮಯದ ಸಂವಹನಗಳಿಗೆ ಹೆಚ್ಚು ಒತ್ತು ನೀಡಿತು.
ಔಷಧ ವಿಭಾಗದ ಕಾರ್ಯದರ್ಶಿ, ಭಾರತದಲ್ಲಿ ಬಳಸಲು ಸಾಕಷ್ಟು ಔಷಧಿಗಳ ಸಂಗ್ರಹ, ಸಕ್ರಿಯ ಔಷಧೀಯ ಪದಾರ್ಥಗಳು (ಎಪಿಐ) ಮತ್ತು ಇತರ ಸಂಬಂಧಪಟ್ಟ ವಸ್ತುಗಳ ಬಗ್ಗೆ ತಿಳಿಸಿದರು.
ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಗಡಿಗಳಲ್ಲಿ ನಿರಂತರ ಜಾಗರೂಕತೆ, ಶಿಷ್ಟಾಚಾರದ ಪ್ರಕಾರ ಸಮುದಾಯ ಮಟ್ಟದ ಕಣ್ಗಾವಲು ಮತ್ತು ರೋಗಿಗಳನ್ನು ಪ್ರತ್ಯೇಕವಾಗಿ ಇರಿಸಲು ಸಾಕಷ್ಟು ಹಾಸಿಗೆಗಳ ಲಭ್ಯತೆಯನ್ನು ಖಾತರಿಪಡಿಸುವ ವಿಷಯಗಳನ್ನು ಚರ್ಚಿಸಲಾಯಿತು. ಡಾ. ಹರ್ಷ್ ವರ್ಧನ್ ರವರು ಸಮಯೋಚಿತ ಪ್ರತಿಕ್ರಿಯೆಗಾಗಿ ರಾಜ್ಯಗಳೊಂದಿಗೆ ಪರಿಣಾಮಕಾರಿ ಸಮನ್ವಯದ ಅಗತ್ಯವನ್ನು ಒತ್ತಿ ಹೇಳಿದರು. ನೀತಿ ಅಯೋಗದ ಸದಸ್ಯರು ಆಸ್ಪತ್ರೆಗೆ ರೋಗಿಗಳ ಹಠಾತ್ ದಾಖಲಾತಿಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇರಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಪಡೆದ ಮನವಿಯನ್ನು ಎತ್ತಿ ತೋರಿಸಲಾಯಿತು.
ಗೌರವಾನ್ವಿತ ಪ್ರಧಾನ ಮಂತ್ರಿ ಯವರು ಇಲ್ಲಿಯವರೆಗೆ ಕೈಗೊಂಡ ಕಾರ್ಯಗಳಿಗಾಗಿ ಎಲ್ಲಾ ಇಲಾಖೆಗಳನ್ನು ಅಭಿನಂದಿಸುತ್ತಾ, ವಿಕಾಸಗೊಳ್ಳುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ಭಾರತವು ತನ್ನ ಪ್ರತಿಕ್ರಿಯೆಯಲ್ಲಿ ಸಿದ್ಧವಾಗಬೇಕಿದೆ ಎಂದು ಉಲ್ಲೇಖಿಸಿದ್ದಾರೆ. ಎಲ್ಲಾ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ರೋಗದ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳಿಗೆ ಕ್ರಮ ಕೈಗೊಳ್ಳಬೇಕು. ಕೊವಿಡ್ 19ರ ನಿರ್ವಹಣೆಗೆ ವಿಶ್ವದಾದ್ಯಂತ ಮತ್ತು ರಾಜ್ಯಗಳೊಳಗೆ ಕೈಗೊಂಡಿರುವ ಉತ್ತಮ ಕ್ರಮಗಳನ್ನು ಗುರುತಿಸಲು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ತಜ್ಞರ ಅಭಿಪ್ರಾಯದ ದೃಷ್ಟಿಯಿಂದ, ಸಾಮೂಹಿಕವಾಗಿ ಸೇರುವುದರಿಂದ ಸಾಧ್ಯವಾದಷ್ಟು ದೂರವಿರಬೇಕೆಂದು ಜನರಿಗೆ ಸಲಹೆ ನೀಡಬೇಕು ಮತ್ತು ಮಾಡಬೇಕಾದ ಮತ್ತು ಮಾಡಬಾರದವುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು. ಪ್ರತ್ಯೇಕ ಚಿಕಿತ್ಸೆಗಾಗಿ ಸಾಕಷ್ಟು ಸ್ಥಳಗಳನ್ನು ಗುರುತಿಸಲು ಮತ್ತು ರೋಗ ಹರಡಿದರೆ ನಿರ್ಣಾಯಕ ಆರೈಕೆಗಾಗಿ ತಕ್ಷಣದ ಕ್ರಮವನ್ನು ಕೈಗೊಳ್ಳಬೇಕೆಂದು ಅವರು ನಿರ್ದೇಶಿಸಿದರು. ಇರಾನ್ ನಲ್ಲಿರುವ ಭಾರತೀಯರಿಗೆ ತ್ವರಿತ ಆರೋಗ್ಯ ಪರೀಕ್ಷೆ ಮತ್ತು ಇರಾನ್‌ನಿಂದ ಸ್ಥಳಾಂತರಿಸುವ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಈ ಸಾಂಕ್ರಾಮಿಕ ರೋಗವನ್ನು ಸಾರ್ವಜನಿಕ ಆರೋಗ್ಯ ದೃಷ್ಟಿಕೋನದಿಂದ ನಿರ್ವಹಿಸಲು ನಿರ್ಣಾಯಕ , ಮುಂಗಡ , ಸಮರ್ಪಕ ಯೋಜನೆ ಮತ್ತು ಸಮಯೋಚಿತ ಕ್ರಿಯೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
Prime Minister reviews the situation on COVID-19 with concerned Ministries. https://t.co/2TQz3Mnwzx
— PMO India (@PMOIndia) March 7, 2020
via NaMo App pic.twitter.com/JQJioAoiJX