Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೊಯಂಬತ್ತೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ

ಕೊಯಂಬತ್ತೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ


ನೈವೇಲಿಯ 1000 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ಮತ್ತು ಎನ್.ಎಲ್.ಸಿ.ಐ.ಎಲ್ ನ 709 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದರು.

ವಿ.ಒ.ಚಿದಂಬರನಾರ್ ಬಂದರಿನಲ್ಲಿ 5 ಮೆಗಾವ್ಯಾಟ್ ಭೂ ಆಧರಿತ ಗ್ರಿಡ್ ಸಂಪರ್ಕಿತ ಸೌರ ವಿದ್ಯುತ್ ಸ್ಥಾವರದ ವಿನ್ಯಾಸ, ಪೂರೈಕೆ, ಸ್ಥಾಪನೆ ಮತ್ತು ಕಾರ್ಯಾರಂಭ ಹಾಗೂ ಭವಾನಿ ಯೋಜನಾ ವ್ಯವಸ್ಥೆಯ ಕೆಳಹಂತದ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ ಅಡಿಪಾಯ ಹಾಕಿದರು.

ಕೊಯಂಬತ್ತೂರು, ಮಧುರೈ, ಸೇಲಂ, ತಂಜಾವೂರ್, ವೆಲ್ಲೂರು, ತಿರುಚಿರಪಲ್ಲಿ, ತಿರುಪ್ಪುರ್, ತಿರುನೆಲ್ವೇಲಿ ಮತ್ತು ತೂತುಕೂಡಿ ಸೇರಿ 9 ನಗರಗಳಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸಂಯೋಜಿತ ಮತ್ತು ನಿಯಂತ್ರಣ ಕಮಾಂಡ್ ಕೇಂದ್ರಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ವಿ.ಒ. ಚಿದಂಬರನಾರ್ ಬಂದರಿನ ರೈಲ್ವೆ ಮೇಲ್ಸೇತುವೆ [ಆರ್.ಒ.ಬಿ] ಮತ್ತು ಕೊರಂಪಲ್ಲಂ ನ 8 ಮಾರ್ಗದ ಸೇತುವೆ,  ಪ್ರಧಾನಮಂತ್ರಿ ಆವಾಸ್ ಯೋಜನೆ [ನಗರ] ಯೋಜನೆಯಡಿ  ನಿರ್ಮಾಣವಾದ ಮನೆಗಳನ್ನು ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಮಿಳುನಾಡಿನ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಕೊಯಂಬತ್ತೂರು ಕೈಗಾರಿಕೆ ಮತ್ತು ಅನುಶೋಧನೆಯ ನಗರವಾಗಿದೆ. ಇಂದು ಜಾರಿಗೊಳಿಸಲಾದ ಅಭಿವೃದ್ದಿ ಯೋಜನೆಗಳು ಕೊಯಂಬತ್ತೂರು ಮತ್ತು ಸಂಪೂರ್ಣ ತಮಿಳುನಾಡಿಗೆ ಲಾಭವಾಗಲಿದೆ ಎಂದು ಹೇಳಿದರು.

ಭವಾನಿ ಸಾಗರ್ ಆಣೆಕಟ್ಟೆಯ ಆಧುನೀಕರಣದಿಂದ 2 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಈ ಯೋಜನೆಯಿಂದ ತಮಿಳು ನಾಡಿನ ಹಲವು ಜಿಲ್ಲೆಗಳಿಗೆ ನೀರಾವರಿ ಸೌಕರ್ಯ ಲಭಿಸಿದೆ. ಭಾರತದ ಕೈಗಾರಿಕಾ ಅಭಿವೃದ್ಧಿಗೆ ತಮಿಳು ನಾಡು ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಉದ್ಘಾಟಿಸಿದ ಹಲವು ಪ್ರಮುಖ ವಿದ್ಯುತ್ ಯೋಜನೆಗಳಿಂದ ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗಲಿದ್ದು, ಕೈಗಾರಿಕೆಗಳಿಗೆ ನಿರಂತರವಾಗಿ ವಿದ್ಯುತ್ ದೊರೆಯಲಿದೆ. 709 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಯನ್ನು ದೇಶೀಯವಾಗಿ ವಿನ್ಯಾಸಮಾಡಲಾಗಿದ್ದು, ಈ ಯೋಜನೆಗಾಗಿ 3000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚಮಾಡಲಾಗಿದೆ. ಇದೀಗ 1,000 ಮೆಗಾವ್ಯಾಟ್ ಉಷ್ಣವಿದ್ಯುತ್ ಸ್ಥಾವರವನ್ನು 7,800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಇದು ತಮಿಳು ನಾಡಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಇಲ್ಲಿ ಉತ್ಪಾದನೆಯಾಗುವ ಶೇ 65 ಕ್ಕೂ ಹೆಚ್ಚು ವಿದ್ಯುತ್ ಅನ್ನು ತಮಿಳುನಾಡಿಗೆ ನೀಡಲಾಗುವುದು ಎಂದು ಹೇಳಿದರು.

ತುತೂಕೂಡಿಯ ವಿ.ಒ. ಚಿದಂಬರನಾರ್ ಬಂದರಿನಲ್ಲಿ ಜಾರಿಗೊಳಿಸಲಾದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ಅವರು,  ಸಮುದ್ರ ಮಾರ್ಗದ ವ್ಯಾಪಾರ ಮತ್ತು ಬಂದರು ಆಧರಿತ ಅಭಿವೃದ್ದಿಯಲ್ಲಿ ತಮಿಳುನಾಡಿಗೆ ಭವ್ಯ ಇತಿಹಾಸವಿದೆ. ಇಂದು ಪ್ರಾರಂಭಿಸಿದ ಯೋಜನೆಗಳಿಂದ ಬಂದರಿನ ಸರಕು ಸಾಗಣೆ ಬಲವರ್ಧನೆಗೊಳ್ಳಲಿದೆ ಮತ್ತು ಹಸಿರು ಬಂದರು ಚಟುವಟಿಕೆಗೆ ಸಹಕಾರಿಯಾಗಲಿದೆ. ಬಂದರುಗಳ ದಕ್ಷ ನಿರ್ವಹಣೆ ಆತ್ಮನಿರ್ಭರ್ ಭಾರತಕ್ಕೆ ಕೊಡುಗೆ ನೀಡಲಿದೆ.  ಭಾರತ ಜಾಗತಿಕ ವ್ಯವಸ್ಥಾಪನಾ ವಲಯ ಮತ್ತು ವ್ಯಾಪಾರ ಕೇಂದ್ರವಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ವಿಒಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. “ಭಾರತೀಯ ಹಡಗು ಉದ್ಯಮದ ಉಜ್ವಲತೆ ಮತ್ತು ಕಡಲ ಅಭಿವೃದ್ಧಿಯ ಬಗ್ಗೆ ಅವರ ದೃಷ್ಟಿ ನಮಗೆ ಹೆಚ್ಚಿನ ಪ್ರೇರಣೆ ನೀಡುತ್ತದೆ” ಎಂದು ಹೇಳಿದರು.

ವಿಒಸಿ ಬಂದರಿನಲ್ಲಿ 20 ಕೋಟಿ ರೂ ವೆಚ್ಚದಲ್ಲಿ 5 ಮೆಗಾವ್ಯಾಟ್ ನೆಲ ಆಧಾರಿತ ಸೌರ ವಿದ್ಯುತ್ ವಿದ್ಯುತ್ ಸಂಪರ್ಕ ಜಾಲವಾದ ಗ್ರಿಡ್ ಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಇದರ ಜತೆಗೆ 140 ಮೇಲ್ಛಾವಣೆ ಕಿಲೋವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಪ್ರಗತಿಯಲ್ಲಿದೆ. ವಿದ್ಯುತ್ ವಲಯದಲ್ಲಿ ಆತ್ಮ ನಿರ್ಭರತೆಗೆ ಇದು ಉದಾಹರಣೆಯಾಗಲಿದೆ ಎಂದು ಹೇಳಿದರು.  

ಸಾಗರಮಾಲ ಯೋಜನೆ ಮೂಲಕ ಬಂದರು ಆಧಾರಿತ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾರತದ ಬದ್ಧತೆ ಕಾಣಬಹುದಾಗಿದೆ. 2015 – 2035 ರ ಅವಧಿಯಲ್ಲಿ ಸುಮಾರು 575 ಯೋಜನೆಗಳನ್ನು ಆರು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ಹೊಸ ಬಂದರುಗಳ ಆಧುನೀಕರಣ, ಬಂದರುಗಳ ಸಂಪರ್ಕ ಹೆಚ್ಚಾಗಲಿದೆ. ಬಂದರು ಸಂಪರ್ಕಿತ ಕೈಗಾರಿಕೆ ಮತ್ತು ಕರಾವಳಿ ಸಮುದಾಯ ಆಧಾರಿತ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು. 

ಚೆನ್ನೈನಲ್ಲಿ ಶ್ರೀ ಪೆರಂಬೂರು ಬಳಿ ಇರುವ ಮಪ್ಪೆಡು ನಲ್ಲಿ ಬಹು ಮಾದರಿಯ ಲಾಜಿಸ್ಟಿಕ್ ಪಾರ್ಕ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. 8 ಮಾರ್ಗಗಳ ಕೊರಂಪಲ್ಲಂ ಸೇತುವೆ ಮತ್ತು ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು ಸಾಗರಮಾಲ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆಯು ಬಂದರಿಗೆ ಮತ್ತು ಹೊರಗಿನಿಂದ ತಡೆರಹಿತ ಮತ್ತು ದಟ್ಟಣೆ ರಹಿತ ಸಾಗಣೆಗೆ ಅನುಕೂಲವಾಗಲಿದೆ. ಇದು ಸರಕು ಸಾಗಣೆಯ ಸಮಯವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಅಭಿವೃದ್ಧಿಯ ತಿರುಳಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಖಾತ್ರಿಯಾಗುತ್ತಿದೆ. “ಘನತೆಯನ್ನು ಖಾತರಿಪಡಿಸುವ ಒಂದು ಮೂಲ ವಿಧಾನವೆಂದರೆ ಎಲ್ಲರಿಗೂ ಆಶ್ರಯ ನೀಡುವುದಾಗಿದೆ.” ನಮ್ಮ ಜನರ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಲು ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಪ್ರಾರಂಭಿಸಲಾಯಿತು.” ಎಂದು ಹೇಳಿದರು.

ಹಲವಾರು ಪ್ರದೇಶಗಳಲ್ಲಿ ನಿರ್ಮಿಸಲಾದ 4,144 ಮನೆಗಳನ್ನು ಉದ್ಘಾಟಿಸಲು ಮತ್ತು ತಮಿಳುನಾಡಿನಾದ್ಯಂತ ಸಮಗ್ರ ಕಮಾಂಡಿಂಗ್ ಮತ್ತು ನಿಯಂತ್ರಣ ಕೇಂದ್ರಗಳಿಗೆ ಅಡಿಪಾಯ ಹಾಕಲು ಸಂತಸವಾಗುತ್ತಿದೆ. ಈ ವಸತಿ ಯೋಜನೆಗೆ 332 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಏಳು ದಶಕಗಳ ಸ್ವಾತಂತ್ರ್ಯೋತ್ತರ ನಂತರವೂ ವಸತಿ ರಹಿತರಿಗೆ ಸೂರು ಕಲ್ಪಿಸಲು ಸಂತಸವಾಗುತ್ತಿದೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕಮಾಂಡಿಂಗ್ ಮತ್ತು ನಿಯಂತ್ರಣ ಕೇಂದ್ರಗಳು ಈ ನಗರಗಳಿಗೆ ಚತುರ ಮತ್ತು ಸಮಗ್ರ ಐಟಿ ಪರಿಹಾರ ಒದಗಿಸಲಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

***