Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರ ಬಜೆಟ್ 2025-26ರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ

ಕೇಂದ್ರ ಬಜೆಟ್ 2025-26ರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಕೇಂದ್ರ ಬಜೆಟ್ 2025-26ರ ಕುರಿತು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಭಾರತದ ಅಭಿವೃದ್ಧಿಯ ಪಯಣದಲ್ಲಿ ಇಂದು ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಬಜೆಟ್ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಪ್ರತಿಯೊಬ್ಬ ನಾಗರಿಕನ ಕನಸುಗಳನ್ನು ಈಡೇರಿಸುತ್ತದೆ ಎಂದಿದ್ದಾರೆ. ಯುವಜನರಿಗಾಗಿ ಹಲವಾರು ಕ್ಷೇತ್ರಗಳನ್ನು ತೆರೆಯಲಾಗಿದೆ ಮತ್ತು ಸಾಮಾನ್ಯ ನಾಗರಿಕರು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಅಭಿಯಾನವನ್ನು ಮುನ್ನಡೆಸಲಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಈ ಬಜೆಟ್ ಉಳಿತಾಯ, ಹೂಡಿಕೆ, ಬಳಕೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ‘ಜನತೆಯ ಬಜೆಟ್’ಗಾಗಿ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡವನ್ನು ಅವರು ಅಭಿನಂದಿಸಿದರು.

ಸಾಮಾನ್ಯವಾಗಿ, ಬಜೆಟ್ ಗಮನವು ಸರ್ಕಾರದ ಖಜಾನೆಯನ್ನು ಹೇಗೆ ತುಂಬುವುದು ಎಂಬುದರ ಮೇಲೆ ಇರುತ್ತದೆ ಎಂದು ಪ್ರಧಾನಿ ಹೇಳಿದರು. ಆದಾಗ್ಯೂ, ಈ ಬಜೆಟ್ ನಾಗರಿಕರ ಜೇಬುಗಳನ್ನು ಹೇಗೆ ತುಂಬುವುದು, ಅವರ ಉಳಿತಾಯವನ್ನು ಹೆಚ್ಚಿಸುವುದು ಹೇಗೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡುವುದು ಹೇಗೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು. ಬಜೆಟ್ ಗುರಿಗಳಿಗೆ ಅಡಿಪಾಯ ಹಾಕುತ್ತದೆ ಎಂದು ಅವರು ಒತ್ತಿ ಹೇಳಿದರು.

“ಈ ಬಜೆಟ್ ನಲ್ಲಿ ಸುಧಾರಣೆಗಳ ಕಡೆಗೆ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಶ್ರೀ ಮೋದಿ ಹೇಳಿದರು ಮತ್ತು ಪರಮಾಣು ಇಂಧನದಲ್ಲಿ ಖಾಸಗಿ ವಲಯವನ್ನು ಉತ್ತೇಜಿಸುವ ಐತಿಹಾಸಿಕ ನಿರ್ಧಾರವನ್ನು ಎತ್ತಿ ತೋರಿಸಿದರು. ನಾಗರಿಕ ಪರಮಾಣು ಶಕ್ತಿಯು ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದರು. ಬಜೆಟ್ ನಲ್ಲಿ ಎಲ್ಲಾ ಉದ್ಯೋಗ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಮುಂಬರುವ ಸಮಯದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿರುವ ಎರಡು ಪ್ರಮುಖ ಸುಧಾರಣೆಗಳ ಬಗ್ಗೆ ಗಮನಸೆಳೆದ ಶ್ರೀ ಮೋದಿ, ಹಡಗು ನಿರ್ಮಾಣಕ್ಕೆ ಮೂಲಸೌಕರ್ಯ ಸ್ಥಾನಮಾನ ನೀಡುವುದರಿಂದ ಭಾರತದಲ್ಲಿ ದೊಡ್ಡ ಹಡಗುಗಳ ನಿರ್ಮಾಣ ಹೆಚ್ಚುತ್ತದೆ, ಆತ್ಮನಿರ್ಭರ ಭಾರತ ಅಭಿಯಾನವನ್ನು ವೇಗಗೊಳಿಸುತ್ತದೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿ 50 ಪ್ರವಾಸಿ ತಾಣಗಳಲ್ಲಿ ಹೋಟೆಲ್ ಗಳನ್ನು ಸೇರಿಸುವುದರಿಂದ ಪ್ರವಾಸೋದ್ಯಮವನ್ನು ಗಮನಾರ್ಹವಾಗಿ ಉತ್ತೇಜಿಸುತ್ತದೆ, ಆತಿಥ್ಯ ಕ್ಷೇತ್ರಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು. ಇದು ಅತಿದೊಡ್ಡ ಉದ್ಯೋಗ ವಲಯವಾಗಿದೆ. “ವಿಕಾಸ ಭಿ, ವಿರಾಸತ್ ಭಿ” (ಅಭಿವೃದ್ಧಿ ಮತ್ತು ಪರಂಪರೆ) ಮಂತ್ರದೊಂದಿಗೆ ದೇಶ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಜ್ಞಾನ ಭಾರತಂ ಮಿಷನ್ ಪ್ರಾರಂಭಿಸುವ ಮೂಲಕ ಒಂದು ಕೋಟಿ ಹಸ್ತಪ್ರತಿಗಳನ್ನು ಸಂರಕ್ಷಿಸಲು ಬಜೆಟ್ ನಲ್ಲಿ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದರು. ಇದಲ್ಲದೆ, ಭಾರತೀಯ ಜ್ಞಾನ ಸಂಪ್ರದಾಯಗಳಿಂದ ಪ್ರೇರಿತವಾದ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು ರಚಿಸಲಾಗುವುದು.

ರೈತರಿಗಾಗಿ ಬಜೆಟ್ ನಲ್ಲಿ ಮಾಡಿದ ಘೋಷಣೆಗಳು ಕೃಷಿ ಕ್ಷೇತ್ರ ಮತ್ತು ಇಡೀ ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಕ್ರಾಂತಿಗೆ ಅಡಿಪಾಯ ಹಾಕುತ್ತವೆ ಎಂದು ಹೇಳಿದ ಶ್ರೀ ಮೋದಿ, ಪ್ರಧಾನಮಂತ್ರಿ ಧನ್-ಧನ್ಯಾ ಕೃಷಿ ಯೋಜನೆ ಅಡಿಯಲ್ಲಿ 100 ಜಿಲ್ಲೆಗಳಲ್ಲಿ ನೀರಾವರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಡೆಯಲಿದೆ ಎಂದು ಒತ್ತಿ ಹೇಳಿದರು. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸುವುದರಿಂದ ರೈತರಿಗೆ ಹೆಚ್ಚಿನ ನೆರವು ಸಿಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಬಜೆಟ್ ನಲ್ಲಿ 12 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ಎಲ್ಲಾ ಆದಾಯ ಗುಂಪುಗಳಿಗೆ ತೆರಿಗೆ ಕಡಿತ ಮಾಡಲಾಗಿದೆ, ಇದು ಮಧ್ಯಮ ವರ್ಗ ಮತ್ತು ಹೊಸದಾಗಿ ಉದ್ಯೋಗ ಪಡೆದವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.

“ಉದ್ಯಮಿಗಳು, ಎಂಎಸ್ಎಂಇಗಳು ಮತ್ತು ಸಣ್ಣ ಉದ್ಯಮಗಳನ್ನು ಬಲಪಡಿಸಲು, ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಬಜೆಟ್ ಉತ್ಪಾದನೆಯ ಮೇಲೆ 360 ಡಿಗ್ರಿ ಗಮನವನ್ನು ಕೇಂದ್ರೀಕರಿಸಿದೆ” ಎಂದು ಪ್ರಧಾನಿ ಒತ್ತಿ ಹೇಳಿದರು. ಸ್ವಚ್ಛ ತಂತ್ರಜ್ಞಾನ, ಚರ್ಮ, ಪಾದರಕ್ಷೆ ಮತ್ತು ಆಟಿಕೆ ಉದ್ಯಮದಂತಹ ಕ್ಷೇತ್ರಗಳು ರಾಷ್ಟ್ರೀಯ ಉತ್ಪಾದನಾ ಮಿಷನ್ ಅಡಿಯಲ್ಲಿ ವಿಶೇಷ ಬೆಂಬಲವನ್ನು ಪಡೆದಿವೆ ಎಂದು ಅವರು ಒತ್ತಿ ಹೇಳಿದರು. ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಕಾಶಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿ ಸ್ಪಷ್ಟವಾಗಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು.

ರಾಜ್ಯಗಳಲ್ಲಿ ರೋಮಾಂಚಕ ಮತ್ತು ಸ್ಪರ್ಧಾತ್ಮಕ ಹೂಡಿಕೆ ವಾತಾವರಣವನ್ನು ಸೃಷ್ಟಿಸಲು ಬಜೆಟ್ ವಿಶೇಷ ಒತ್ತು ನೀಡಿದೆ ಎಂಬುದರತ್ತ ಗಮನಸೆಳೆದ ಶ್ರೀ ಮೋದಿ, ಎಂಎಸ್ಎಂಇಗಳು ಮತ್ತು ನವೋದ್ಯಮಗಳಿಗೆ (ಸ್ಟಾರ್ಟ್ಅಪ್ಗಳಿಗೆ) ಸಾಲ ಖಾತರಿಯನ್ನು ದ್ವಿಗುಣಗೊಳಿಸುವ ಘೋಷಣೆಯನ್ನು ಎತ್ತಿ ತೋರಿಸಿದರು. ಪ.ಜಾ, ಪ.ಪಂ ಮತ್ತು ಮಹಿಳೆಯರು ಮೊದಲ ಬಾರಿಗೆ ಉದ್ಯಮಿಗಳನ್ನು ಸ್ಥಾಪಿಸಿದಲ್ಲಿ ಆ ಉದ್ಯಮಿಗಳಿಗೆ ಖಾತರಿಯಿಲ್ಲದೆ 2 ಕೋಟಿ ರೂ.ಗಳವರೆಗೆ ಸಾಲ ನೀಡುವ ಯೋಜನೆಯನ್ನು ಪರಿಚಯಿಸಿರುವುದನ್ನು ಅವರು ಉಲ್ಲೇಖಿಸಿದರು. ಗಿಗ್ ಕಾರ್ಮಿಕರಿಗಾಗಿರುವ  ಮಹತ್ವದ ಘೋಷಣೆಯನ್ನು ಅವರು ಒತ್ತಿ ಹೇಳಿದರು, ಮೊದಲ ಬಾರಿಗೆ ಇ-ಶ್ರಮ್ ಪೋರ್ಟಲ್ ನಲ್ಲಿ ಅವರ ನೋಂದಣಿಯೊಂದಿಗೆ, ಇದು ಅವರಿಗೆ ಆರೋಗ್ಯ ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಇದು ಕಾರ್ಮಿಕರ ಘನತೆಗೆ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದರು. ಜನ್ ವಿಶ್ವಾಸ್ 2.0 ರಂತಹ ನಿಯಂತ್ರಕ ಮತ್ತು ಹಣಕಾಸು ಸುಧಾರಣೆಗಳು ಕನಿಷ್ಠ ಸರ್ಕಾರ ಮತ್ತು ವಿಶ್ವಾಸ ಆಧಾರಿತ ಆಡಳಿತದ ಬದ್ಧತೆಯನ್ನು ಬಲಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುವಾಗ  ಪ್ರಧಾನಮಂತ್ರಿಯವರು, ಈ ಬಜೆಟ್ ದೇಶದ ಪ್ರಸ್ತುತ ಅಗತ್ಯಗಳನ್ನು ಪೂರೈಸುವುದಲ್ಲದೆ, ಭವಿಷ್ಯದ ಸಿದ್ಧತೆಗೂ ನೆರವಾಗುತ್ತದೆ ಎಂದರು. ಡೀಪ್ ಟೆಕ್ ಫಂಡ್, ಜಿಯೋಸ್ಪೇಷಿಯಲ್ ಮಿಷನ್ ಮತ್ತು ನ್ಯೂಕ್ಲಿಯರ್ ಎನರ್ಜಿ ಮಿಷನ್ ಸೇರಿದಂತೆ ಸ್ಟಾರ್ಟ್ ಅಪ್ ಗಳಿಗಾಗಿರುವ  ಉಪಕ್ರಮಗಳನ್ನು ಅವರು ಎತ್ತಿ ತೋರಿಸಿದರು. ಈ ಐತಿಹಾಸಿಕ ಬಜೆಟ್ ಗಾಗಿ ಅವರು ಎಲ್ಲ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು.

 

 

*****