Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರ ಬಜೆಟ್ ಕುರಿತು ಪ್ರಧಾನಮಂತ್ರಿ ಹೇಳಿಕೆ

ಕೇಂದ್ರ ಬಜೆಟ್ ಕುರಿತು ಪ್ರಧಾನಮಂತ್ರಿ ಹೇಳಿಕೆ


ಭಾರತದ ಅಭಿವೃದ್ಧಿ ಪಯಣದಲ್ಲಿ ಇಂದು ಒಂದು ಪ್ರಮುಖ ಮೈಲಿಗಲ್ಲು! ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳ ಬಜೆಟ್, ಇದು ಪ್ರತಿಯೊಬ್ಬ ಭಾರತೀಯನ ಕನಸುಗಳನ್ನು ನನಸಾಗಿಸುವ ಬಜೆಟ್. ನಾವು ಯುವ ಸಮುದಾಯಕ್ಕೆ ಅನೇಕ ಕ್ಷೇತ್ರಗಳನ್ನು ತೆರೆದಿದ್ದೇವೆ. ಸಾಮಾನ್ಯ ನಾಗರಿಕರು ಅಭಿವೃದ್ಧಿ ಹೊಂದಿದ ಭಾರತದ ಧ್ಯೇಯವನ್ನು ಮುನ್ನಡೆಸಲಿದ್ದಾರೆ. ಈ ಬಜೆಟ್ ಶಕ್ತಿ ವರ್ಧಕವಾಗಿದೆ. ಈ ಬಜೆಟ್ ಉಳಿತಾಯವನ್ನು ಹೆಚ್ಚಿಸುತ್ತದೆ, ಹೂಡಿಕೆಯನ್ನು ಹೆಚ್ಚಿಸುತ್ತದೆ, ಜತೆಗೆ ಬಳಕೆಯನ್ನು ಸಹ ಹೆಚ್ಚಿಸುತ್ತದೆ ಮತ್ತು ಬೆಳವಣಿಗೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಈ ಜನತಾ ಜನಾರ್ದನ ಬಜೆಟ್, ಜನರ ಬಜೆಟ್‌ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಸಾಮಾನ್ಯವಾಗಿ ಬಜೆಟ್‌ ಅಂದರೆ ಸರ್ಕಾರದ ಖಜಾನೆಯನ್ನು ಹೇಗೆ ತುಂಬುತ್ತದೆ ಎಂಬುದರ ಮೇಲೆ ಗಮನ ಕೇಂದ್ರೀಕೃತವಾಗಿರುತ್ತದೆ. ಆದರೆ ಈ ಬಜೆಟ್ ಅದಕ್ಕೆ ನಿಖರವಾಗಿ ವಿರುದ್ಧವಾಗಿದೆ. ಆದರೆ ಈ ಬಜೆಟ್ ದೇಶದ ನಾಗರಿಕರ ಜೇಬುಗಳನ್ನು ಹೇಗೆ ತುಂಬುತ್ತದೆ, ದೇಶದ ನಾಗರಿಕರ ಉಳಿತಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ದೇಶದ ನಾಗರಿಕರು ಅಭಿವೃದ್ಧಿಯಲ್ಲಿ ಹೇಗೆ ಪಾಲುದಾರರಾಗುತ್ತಾರೆ ಎಂಬುದರ ಮೇಲೆ ಭದ್ರ ಬುನಾದಿ ಹಾಕುತ್ತದೆ.

ಸ್ನೇಹಿತರೆ,

ಈ ಬಜೆಟ್‌ನಲ್ಲಿ ಸುಧಾರಣೆ ತರುವ ದಿಕ್ಕಿನಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪರಮಾಣು ಶಕ್ತಿಯಲ್ಲಿ ಖಾಸಗಿ ವಲಯವನ್ನು ಉತ್ತೇಜಿಸುವ ನಿರ್ಧಾರವು ನಿಜಕ್ಕೂ ಐತಿಹಾಸಿಕವಾಗಿದೆ. ಇದು ಮುಂಬರುವ ದಿನಗಳಲ್ಲಿ ದೇಶದ ಅಭಿವೃದ್ಧಿಯಲ್ಲಿ ನಾಗರಿಕ ಪರಮಾಣು ಶಕ್ತಿಯ ಪ್ರಮುಖ ಕೊಡುಗೆಗಳನ್ನು ಖಚಿತಪಡಿಸುತ್ತದೆ. ಬಜೆಟ್‌ನಲ್ಲಿ ಎಲ್ಲಾ ರೀತಿಯಲ್ಲೂ ಉದ್ಯೋಗ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಆದರೆ ನಾನು ಪ್ರಮುಖ 2 ವಿಷಯಗಳತ್ತ ಗಮನ ಸೆಳೆಯಲು ಬಯಸುತ್ತೇನೆ, ಮುಂಬರುವ ದಿನಗಳಲ್ಲಿ ಬಹುದೊಡ್ಡ ಬದಲಾವಣೆ ತರಲಿರುವ ಆ ಸುಧಾರಣೆಗಳ ಬಗ್ಗೆ ಚರ್ಚಿಸಲು ನಾನು ಬಯಸುತ್ತೇನೆ. ಒಂದು – ಮೂಲಸೌಕರ್ಯ ವಲಯದ ಸ್ಥಿತಿಯಿಂದಾಗಿ, ಭಾರತದಲ್ಲಿ ದೊಡ್ಡ ಹಡಗುಗಳ ನಿರ್ಮಾಣವನ್ನು ಪ್ರೋತ್ಸಾಹಿಸಲಾಗುವುದು, ಆತ್ಮನಿರ್ಭರ ಭಾರತ ಅಭಿಯಾನವು ವೇಗ ಪಡೆಯುತ್ತದೆ ಮತ್ತು ಹಡಗು ನಿರ್ಮಾಣವು ಹೆಚ್ಚಿನ ಉದ್ಯೋಗಗಳನ್ನು ಒದಗಿಸುವ ಬಹುದೊಡ್ಡ ವಲಯ ಎಂಬುದು ನಮಗೆಲ್ಲರಿಗೂ ತಿಳಿದಿದೆ.

ಅದೇ ರೀತಿ, ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಮೊದಲ ಬಾರಿಗೆ, 50 ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿರ್ಮಿಸಲಾಗುವ ಹೋಟೆಲ್‌ಗಳನ್ನು ಮೂಲಸೌಕರ್ಯ ವ್ಯಾಪ್ತಿಗೆ ತರುವ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದು ಅತಿ ದೊಡ್ಡ ಉದ್ಯೋಗ ಕ್ಷೇತ್ರವಾಗಿರುವ ಆತಿಥ್ಯ ವಲಯವನ್ನು ಮತ್ತು ಒಂದು ರೀತಿಯಲ್ಲಿ ಅತಿದೊಡ್ಡ ಉದ್ಯೋಗ ಕ್ಷೇತ್ರವಾಗಿರುವ ಪ್ರವಾಸೋದ್ಯಮವನ್ನು ಎಲ್ಲೆಡೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಉತ್ತೇಜಿಸುತ್ತದೆ. ಇಂದು ದೇಶವು ಅಭಿವೃದ್ಧಿ ಮತ್ತು ಪರಂಪರೆಯ ಮಂತ್ರದೊಂದಿಗೆ ಮುಂದುವರಿಯುತ್ತಿದೆ. ಈ ಬಜೆಟ್‌ನಲ್ಲಿ, ಇದಕ್ಕಾಗಿ ಬಹಳ ಮುಖ್ಯವಾದ ಮತ್ತು ಸಂಕೀರ್ಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 1 ಕೋಟಿ ಹಸ್ತಪ್ರತಿಗಳ ಸಂರಕ್ಷಣೆಗಾಗಿ ಜ್ಞಾನ ಭಾರತ್ ಮಿಷನ್ ಪ್ರಾರಂಭಿಸಲಾಗಿದೆ. ಇದರೊಂದಿಗೆ, ಭಾರತೀಯ ಜ್ಞಾನ ಸಂಪ್ರದಾಯದಿಂದ ಪ್ರೇರಿತವಾದ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು ರಚಿಸಲಾಗುವುದು. ಇದರರ್ಥ ತಂತ್ರಜ್ಞಾನವನ್ನು ಪೂರ್ಣವಾಗಿ ಬಳಸಲಾಗುವುದು ಮತ್ತು ನಮ್ಮ ಸಾಂಪ್ರದಾಯಿಕ ಜ್ಞಾನದಿಂದ ಅಮೃತವನ್ನು ಹೊರತೆಗೆಯುವ ಕೆಲಸವನ್ನು ಸಹ ಮಾಡಲಾಗುವುದು.

ಸ್ನೇಹಿತರೆ,

ಬಜೆಟ್‌ನಲ್ಲಿ ರೈತರಿಗಾಗಿ ಮಾಡಿದ ಘೋಷಣೆಗಳು ಕೃಷಿ ವಲಯ ಮತ್ತು ಇಡೀ ಗ್ರಾಮೀಣ ಆರ್ಥಿಕತೆಯಲ್ಲಿ ಹೊಸ ಕ್ರಾಂತಿಗೆ ಬುನಾದಿ ಹಾಕಲಿವೆ. ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯಡಿ, 100 ಜಿಲ್ಲೆಗಳಲ್ಲಿ ನೀರಾವರಿ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಿರುವುದರಿಂದ ಅವರಿಗೆ ಹೆಚ್ಚಿನ ಸಹಾಯವಾಗುತ್ತದೆ.

ಸ್ನೇಹಿತರೆ,

ಈ ಬಜೆಟ್‌ನಲ್ಲಿ, 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಎಲ್ಲಾ ಆದಾಯ ಗುಂಪುಗಳ ಜನರಿಗೆ ತೆರಿಗೆ ಕಡಿಮೆ ಮಾಡಲಾಗಿದೆ. ನಮ್ಮ ಮಧ್ಯಮ ವರ್ಗ, ಸ್ಥಿರ ಆದಾಯದ ಉದ್ಯೋಗಗಳಲ್ಲಿರುವ ಜನರು, ಅಂತಹ ಮಧ್ಯಮ ವರ್ಗದ ಜನರು ಇದರಿಂದ ಹೆಚ್ಚಿನ ಲಾಭ ಪಡೆಯಲಿದ್ದಾರೆ. ಅದೇ ರೀತಿ, ಹೊಸ ವೃತ್ತಿಗಳನ್ನು ಪ್ರವೇಶಿಸಿದ ಜನರು, ಹೊಸ ಉದ್ಯೋಗಗಳನ್ನು ಪಡೆದ ಜನರು, ಆದಾಯ ತೆರಿಗೆಯಿಂದ ಈ ವಿನಾಯಿತಿಯು ಅವರಿಗೆ ಒಂದು ದೊಡ್ಡ ಅವಕಾಶವಾಗಲಿದೆ.

ಸ್ನೇಹಿತರೆ,

ಈ ಬಜೆಟ್‌ನಲ್ಲಿ ಉತ್ಪಾದನೆ ಅಥವಾ ತಯಾರಿಕೆ ವಲಯದ ಮೇಲೆ ಸಪೂರ್ಣ(360 ಡಿಗ್ರಿ) ಗಮನ ಹರಿಸಲಾಗಿದೆ, ಇದರಿಂದ ಉದ್ಯಮಿಗಳು, ಎಂಎಸ್ಎಂಇಗಳು, ಸಣ್ಣ ಉದ್ಯಮಶೀಲರು ಬಲಗೊಳ್ಳುತ್ತಾರೆ ಮತ್ತು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ರಾಷ್ಟ್ರೀಯ ಉತ್ಪಾದನಾ ಮಿಷನ್‌ನಿಂದ ಸ್ವಚ್ಛ ತಂತ್ರಜ್ಞಾನ(ಕ್ಲೀನ್‌ಟೆಕ್), ಚರ್ಮ, ಪಾದರಕ್ಷೆ, ಆಟಿಕೆ ಉದ್ಯಮದವರೆಗೆ ಸೇರಿ ಅನೇಕ ಕ್ಷೇತ್ರಗಳಿಗೆ ವಿಶೇಷ ಬೆಂಬಲ ನೀಡಲಾಗಿದೆ. ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಕೊಳ್ಳುತ್ತವೆ ಎಂಬ ಗುರಿ ಸ್ಪಷ್ಟವಾಗಿದೆ.

ಸ್ನೇಹಿತರೆ,

ರಾಜ್ಯಗಳಲ್ಲಿ ಹೂಡಿಕೆಗೆ ಸ್ಪರ್ಧಾತ್ಮಕ ಪರಿಸರ ಸೃಷ್ಟಿಸುವತ್ತ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಎಂಎಸ್ಎಂಇಗಳು ಮತ್ತು ನವೋದ್ಯಮಗಳಿಗೆ ಸಾಲ ಖಾತ್ರಿ(ಕ್ರೆಡಿಟ್ ಗ್ಯಾರಂಟಿ) ದ್ವಿಗುಣಗೊಳಿಸುವ ಘೋಷಣೆ ಮಾಡಲಾಗಿದೆ. ಹೊಸ ಉದ್ಯಮಿಗಳಾಗಲು ಬಯಸುವ ದೇಶದ ಎಸ್ಸಿ, ಎಸ್ಟಿ ಮತ್ತು ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ.ವರೆಗೆ ಸಾಲ ನೀಡುವ ಯೋಜನೆಯನ್ನು ಸಹ ತರಲಾಗಿದೆ, ಅದೂ ಯಾವುದೇ ಗ್ಯಾರಂಟಿ ಇಲ್ಲದೆ. ಈ ಬಜೆಟ್‌ನಲ್ಲಿ, ಹೊಸ ಯುಗದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು, ಗಿಗ್(ತಾತ್ಕಾಲಿಕ ಕೆಲಸಗಾರರು ಅಥವಾ ಕಾರ್ಮಿಕರು ಅಥವಾ ಸ್ವತಂತ್ರ ಗುತ್ತಿಗೆದಾರರು) ಕೆಲಸಗಾರರಿಗೆ ದೊಡ್ಡ ಘೋಷಣೆ ಮಾಡಲಾಗಿದೆ. ಮೊದಲ ಬಾರಿಗೆ, ಗಿಗ್ ಕೆಲಸಗಾರರನ್ನು ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗುತ್ತದೆ. ಇದರ ನಂತರ, ಈ ಸಹೋದ್ಯೋಗಿಗಳು ಆರೋಗ್ಯ ರಕ್ಷಣೆ ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಾರೆ. ಈ ಕಾರ್ಮಿಕರ ಘನತೆಯ ಬಗ್ಗೆ ಸರ್ಕಾರ ಹೊಂದಿರುವ “ಶ್ರಮೇವ್ ಜಯತೇ” ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಿಯಂತ್ರಕ ಸಂಸ್ಥೆಗಳ ಸುಧಾರಣೆಗಳಿಂದ ಹಿಡಿದು ಹಣಕಾಸು ಸುಧಾರಣೆಗಳವರೆಗೆ, ಜನ್ ವಿಶ್ವಾಸ್ 2.0ರಂತಹ ಕ್ರಮಗಳು ಕನಿಷ್ಠ ಸರ್ಕಾರ ಮತ್ತು ನಂಬಿಕೆ ಆಧಾರಿತ ಆಡಳಿತದ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತವೆ.

ಸ್ನೇಹಿತರೆ,

ಈ ಬಜೆಟ್ ದೇಶದ ಪ್ರಸ್ತುತ ಅಗತ್ಯಗಳನ್ನು ಗಣನೆಗೆ ತೆಗೆದುಕೊಳ್ಳುವುದಲ್ಲದೆ, ಭವಿಷ್ಯಕ್ಕಾಗಿ ನಮ್ಮನ್ನು ಸಿದ್ಧಪಡಿಸಲು ಸಹ ಸಹಾಯ ಮಾಡುತ್ತದೆ. ಸ್ಟಾರ್ಟಪ್‌ಗಳಿಗೆ ಡೀಪ್ ಟೆಕ್ ಫಂಡ್(ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಗೆ ತೊಡಗಿಸುವ ಸಾಂಸ್ಥಿಕ ಬಂಡವಾಳ ನಿಧಿ), ಜಿಯೋಸ್ಪೇಷಿಯಲ್(ಭೌಗೋಳಿಕ ಪ್ರದೇಶದ ದತ್ತಾಂಶ ಸಂಗ್ರಹ) ಮಿಷನ್ ಮತ್ತು ಪರಮಾಣು ಶಕ್ತಿ(ನ್ಯೂಕ್ಲಿಯರ್ ಎನರ್ಜಿ) ಮಿಷನ್ ಬಜೆಟ್ ನ ಪ್ರಮುಖ ಹೆಜ್ಜೆಗಳಾಗಿವೆ. ಈ ಐತಿಹಾಸಿಕ ಜನರ ಬಜೆಟ್‌ಗಾಗಿ ನಾನು ಮತ್ತೊಮ್ಮೆ ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ, ಮತ್ತೊಮ್ಮೆ ಹಣಕಾಸು ಸಚಿವರನ್ನು ಅಭಿನಂದಿಸುತ್ತೇನೆ. ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****