Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರ ಪ್ರಾಯೋಜಿತ ತ್ವರಿತ ಗತಿ ವಿಶೇಷ ನ್ಯಾಯಾಲಯ ಯೋಜನೆಯನ್ನು ಇನ್ನೂ 2 ವರ್ಷ ಮುಂದುವರಿಸಲು ಸಂಪುಟದ ಅನುಮೋದನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 389 ವಿಶೇಷ ಪೋಕ್ಸೋ ನ್ಯಾಯಾಲಯಗಳನ್ನು ಒಳಗೊಂಡಂತೆ 1023 ತ್ವರಿತ ಗತಿ ವಿಶೇಷ ನ್ಯಾಯಾಲಯಗಳನ್ನು 01.04.2021 ರಿಂದ 31.03.2023 ರವರೆಗೆ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಮುಂದುವರಿಸಲು ಅನುಮೋದನೆ ನೀಡಿದೆ. ಇದಕ್ಕೆ 1572.86 ಕೋಟಿ ರೂ. (971.70 ಕೋಟಿ ರೂ. ಕೇಂದ್ರ ಪಾಲು ಮತ್ತು 601.16 ಕೋಟಿ ರೂ. ರಾಜ್ಯಗಳ ಪಾಲು) ವೆಚ್ಚ ನಿಗದಿಪಡಿಸಲಾಗಿದೆ. ಕೇಂದ್ರದ ಪಾಲನ್ನು ನಿರ್ಭಯಾ ನಿಧಿಯಿಂದ ಒದಗಿಸಲಾಗುವುದು. ಈ ಯೋಜನೆಯನ್ನು 02.10.2019 ರಂದು ಪ್ರಾರಂಭಿಸಲಾಗಿದೆ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರ ಯಾವಾಗಲೂ ಅತ್ಯಂತ ಮಹತ್ವವನ್ನು ನೀಡಿದೆ. ಹೆಣ್ಣು ಮಗುವಿನ ಸಬಲೀಕರಣಕ್ಕಾಗಿ ಸರ್ಕಾರವು ಈಗಾಗಲೇ ‘ಬೇಟಿ ಬಚಾವೋ ಬೇಟಿ ಪಡಾವೋ’ ದಂತಹ ಹಲವು ಕಾರ್ಯಕ್ರಮಗಳನ್ನು ಆರಂಭಿಸಿದೆ. ಹನ್ನೆರಡು ವರ್ಷದೊಳಗಿನ ಅಪ್ರಾಪ್ತ ಬಾಲಕಿಯರು ಮತ್ತು ಹದಿನಾರು ವರ್ಷದೊಳಗಿನ ಮಹಿಳೆಯರ ಮೇಲಿನ ಅತ್ಯಾಚಾರ ಘಟನೆಗಳು ಇಡೀ ರಾಷ್ಟ್ರದ ಆತ್ಮಸಾಕ್ಷಿಯನ್ನು ಕಲಕಿವೆ. ಇಂತಹ ಪ್ರಕರಣಗಳು ಮತ್ತು ಅಪರಾಧಿಗಳ ಸುದೀರ್ಘ ವಿಚಾರಣೆಯನ್ನು ತ್ವರಿತಗೊಳಿಸಲು ಮತ್ತು ಲೈಂಗಿಕ ಅಪರಾಧಗಳ ಸಂತ್ರಸ್ತರಿಗೆ ತಕ್ಷಣದ ಪರಿಹಾರವನ್ನು ಒದಗಿಸಬಲ್ಲ ಮೀಸಲಾದ ನ್ಯಾಯಾಲಯ ವ್ಯವಸ್ಥೆಯನ್ನು ರಚಿಸಬೇಕಾಗಿತ್ತು.

ಹೆಚ್ಚು ಕಠಿಣ ನಿಬಂಧನೆಗಳನ್ನು ತರಲು ಮತ್ತು ಅಂತಹ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿಗಾಗಿ, ಕೇಂದ್ರ ಸರ್ಕಾರವು “ಅಪರಾಧ ಕಾನೂನು (ತಿದ್ದುಪಡಿ) ಕಾಯಿದೆ, 2018” ಅನ್ನು ಜಾರಿಗೊಳಿಸಿತು ಮತ್ತು ಅತ್ಯಾಚಾರದ ಅಪರಾಧಿಗಳಿಗೆ ಮರಣದಂಡನೆ ಸೇರಿದಂತೆ ಕಠಿಣ ಶಿಕ್ಷೆಯನ್ನು ಒದಗಿಸಿತು. ಇದು ತ್ವರಿತ ಗತಿ ಟ್ರ್ಯಾಕ್ ವಿಶೇಷ ನ್ಯಾಯಾಲಯಗಳ (ಎಫ್‌ಟಿಎಸ್‌ಸಿ) ಸ್ಥಾಪನೆಗೆ ಕಾರಣವಾಯಿತು.

ತ್ವರಿತ ಗತಿ ವಿಶೇಷ ನ್ಯಾಯಾಲಯಗಳು ನ್ಯಾಯದ ತ್ವರಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮೀಸಲಾದ ನ್ಯಾಯಾಲಯಗಳಾಗಿವೆ. ಸಾಮಾನ್ಯ ನ್ಯಾಯಾಲಯಗಳಿಗೆ ಹೋಲಿಸಿದರೆ ಇವುಗಳು ಅವರು ಉತ್ತಮ ವಿಲೇವಾರಿ ದರವನ್ನು ಹೊಂದಿವೆ ಮತ್ತು ತ್ವರಿತ ವಿಚಾರಣೆಗಳನ್ನು ನಡೆಸುತ್ತವೆ. ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸುವುದರ ಜೊತೆಗೆ, ಲೈಂಗಿಕ ಅಪರಾಧಿಗಳಿಗೆ ಕಠಿಣ ಚೌಕಟ್ಟನ್ನು ಬಲಪಡಿಸುತ್ತವೆ.

ಪ್ರಸ್ತುತ ಈ ಯೋಜನೆಯು 28 ರಾಜ್ಯಗಳನ್ನು ಒಳಗೊಂಡಿದ್ದು, ಎಲ್ಲಾ 31 ರಾಜ್ಯಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಹಿಂದುಳಿದ ಮತ್ತು ದೂರದ ಪ್ರದೇಶಗಳನ್ನು ಒಳಗೊಂಡಂತೆ ದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಸಮಯೋಚಿತ ನ್ಯಾಯ ಒದಗಿಸುವ ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಪ್ರಯತ್ನಗಳನ್ನು ಇದು ಬೆಂಬಲಿಸುತ್ತಿದೆ. ಯೋಜನೆಯ ನಿರೀಕ್ಷಿತ ಫಲಿತಾಂಶಗಳು ಹೀಗಿವೆ:

• ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಭದ್ರತೆಗೆ ರಾಷ್ಟ್ರದ ಬದ್ಧತೆ.

• ಅತ್ಯಾಚಾರ ಮತ್ತು ಪೋಕ್ಸೊ ಕಾಯಿದೆಯ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು

• ಲೈಂಗಿಕ ಅಪರಾಧಗಳ ಸಂತ್ರಸ್ತರಿಗೆ ತ್ವರಿತ ನ್ಯಾಯವನ್ನು ಒದಗಿಸುವುದು ಮತ್ತು ಲೈಂಗಿಕ ಅಪರಾಧಿಗಳ ಬಗ್ಗೆ ಕಠಿಣವಾಗಿ ನಡೆದುಕೊಳ್ಳುವುದು.

• ಈ ಪ್ರಕರಣಗಳ ತ್ವರಿತ ವಿಚಾರಣೆಯು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಬಾಕಿ ಪ್ರಕರಣದ ಹೊರೆಯನ್ನು ಕಡಿಮೆ ಮಾಡುತ್ತದೆ.

***