ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಕೇಂದ್ರೀಯ ಒಳನಾಡ ಜಲ ಸಾರಿಗೆ ನಿಗಮ ನಿಯಮಿತ(ಸಿಐಡಬ್ಲ್ಯುಟಿಸಿ)ವನ್ನು ವಿಸರ್ಜನೆ ಮಾಡುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. 24.12.2014ರ ಸಂಪುಟದ ನಿರ್ಧಾರದಂತೆ 2015ರಲ್ಲಿ ಸಿಐಡಬ್ಲ್ಯುಟಿಸಿಯಲ್ಲಿ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿ ಮಾಡಲಾಗಿತ್ತು.
ಸಿಐಡಬ್ಲ್ಯುಟಿಸಿ, ಹಿಂದಿನ ರಿವರ್ ಸ್ಟ್ರೀಮ್ ನ್ಯಾವಿಗೇಷನ್ ಕಂಪನಿ ಲಿಮಿಟೆಡ್ ನ ಆಸ್ತಿ ಮತ್ತು ಋಣಗಳನ್ನು ಕೋಲ್ಕತ್ತಾ ಹೈಕೋರ್ಟ್ ಅನುಮೋದಿಸಿದ ಯೋಜನೆಯ ರೀತ್ಯ ಪಡೆದುಕೊಂಡ ಬಳಿಕ ಭಾರತ ಸರ್ಕಾರದಿಂದ ಕಂಪನಿಗಳ ಕಾಯಿದೆ 1956ರ ಅಡಿಯಲ್ಲಿ ಒಂದು ಕಂಪನಿಯಾಗಿ 1967ರ ಫೆಬ್ರವರಿ 22ರಲ್ಲಿ ರೂಪುಗೊಂಡಿತ್ತು, ಅಂತರ್ಗತ ಮಿತಿ ಮತ್ತು ಮೂಲಸೌಕರ್ಯಗಳ ಬಿಕ್ಕಟ್ಟಿನಿಂದಾಗಿ, ಸಿಐಡಬ್ಲ್ಯುಟಿಸಿಯ ಕಾರ್ಯಾಚರಣೆ ಎಂದಿಗೂ ಕಾರ್ಯಸಾಧ್ಯವಾಗಲೇ ಇಲ್ಲ ಮತ್ತು ಕಂಪನಿ ಆರಂಭವಾದ ದಿನದಿಂದಲೂ ನಷ್ಟವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಪ್ರಸ್ತುತ ಕಂಪನಿಯಲ್ಲಿ ಐವರು ಉದ್ಯೋಗಿಗಳು ಮಾತ್ರವೇ ಇದ್ದಾರೆ.
ಸಾಧ್ಯವಾದ ಕಡೆಗಳಲ್ಲಿ ರೋಗಗ್ರಸ್ಥ ಸಿಪಿಎಸ್ ಯುಗಳನ್ನು ಪುನಶ್ಚೇತನಗೊಳಿಸುವ ಅಥವಾ ಅಸಾಧ್ಯವಾದ ಪ್ರಕರಣಗಳಲ್ಲಿ ಅದನ್ನು ಮುಚ್ಚುವ ಕೇಂದ್ರ ಸರ್ಕಾರದ ನಿರ್ಧಾರದಂತೆ, ಅದರ ಸ್ಥಿರ ಮತ್ತು ಚರ ಆಸ್ತಿಗಳನ್ನು ವಿಲೇ ಮಾಡಿದ ಬಳಿಕ ಮಾಡಿದ ತರುವಾಯ ಸಿಐಡಬ್ಲ್ಯುಟಿಸಿ ವಿಸರ್ಜನೆ ಮಾಡಲಾಗುತ್ತಿದೆ. ಇದು ಅದರ ಆಸ್ತಿಯನ್ನು ಜನತೆಯ ಉಪಯೋಗಕ್ಕೆ ಮತ್ತು ಉತ್ತಮವಾಗಿ ಬಳಸಿಕೊಳ್ಳಲು ಮುಕ್ತವಾಗಿಡುತ್ತದೆ. ಇದರ ಬಹು ಸಂಖ್ಯೆಯ ಆಸ್ತಿಯನ್ನು ಭಾರತೀಯ ಒಳನಾಡು ಜಲ ಮಾರ್ಗ ಪ್ರಾಧಿಕಾರವು ಬ್ರಹ್ಮಪುತ್ರ ನದಿಯಲ್ಲಿ (ಎನ್.ಡಬ್ಲ್ಯು -4)ರಲ್ಲಿ ಸೇವೆ ಒದಗಿಸಲು ತೆಗೆದುಕೊಂಡಿದೆ.