ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರೀಯ ಆರೋಗ್ಯ ಸೇವೆ (ಸಿಎಚ್ಎಸ್) ವೈದ್ಯರುಗಳನ್ನು ಹೊರತುಪಡಿಸಿ, ಉಳಿದ ವೈದ್ಯರ ನಿವೃತ್ತಿಯ ವಯಸ್ಸನ್ನು65 ವರ್ಷಗಳಿಗೆ ಈ ಕೆಳಕಂಡ ಮಾದರಿಯಲ್ಲಿ ಏರಿಕೆ ಮಾಡಲು ತನ್ನ ಅನುಮೋದನೆ ನೀಡಿದೆ:
i. ಭಾರತೀಯ ರೈಲ್ವೆಯ ವೈದ್ಯಕೀಯ ಸೇವೆಯಲ್ಲಿರುವ ವೈದ್ಯರ ನಿವೃತ್ತಿಯ ವಯಸ್ಸನ್ನು 65 ವರ್ಷಗಳಿಗೆ ಏರಿಕೆ ಮಾಡಲು ಪೂರ್ವಾನ್ವಯ ಅನುಮೋದನೆ.
ii. ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಐಐಟಿಗಳಲ್ಲಿ (ಸ್ವತಂತ್ರ ಕಾಯಗಳು) ಮತ್ತು ಬಂದರು ಸಚಿವಾಲಯದಡಿಯ ಪ್ರಮುಖ ಬಂದರು ನ್ಯಾಸಗಳಲ್ಲಿ (ಸ್ವತಂತ್ರ ಕಾಯಗಳು) ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವವರ 65 ವರ್ಷಗಳಿಗೆ ಏರಿಕೆ ಮಾಡಲು ಪೂರ್ವಾನ್ವಯ ಅನುಮೋದನೆ.
iii. ಆಯಾ ಸಚಿವಾಲಯ/ ಇಲಾಖೆಗಳ ಅಡಿಯಲ್ಲಿ ಸಂಬಂಧಿತ ಇಲಾಖೆಗಳ ಆಡಳಿತಾತ್ಮಕ ವ್ಯಾಪ್ತಿಯಡಿ ಬರುವ ವೈದ್ಯರುಗಳ ನಿವೃತ್ತಿಯ ವಯಸ್ಸನ್ನು 65ವರ್ಷಗಳಿಗೆ ಹೆಚ್ಚಿಸಲಾಗಿದೆ [ಆಯುಷ್ ಸಚಿವಾಲಯದ (ಆಯುಷ್ ವೈದ್ಯರು), ರಕ್ಷಣಾ ಇಲಾಖೆಯ (ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಯ ಮಹಾ ನಿರ್ದೇಶನಾಲಯದಡಿಯ ನಾಗರಿಕ ವೈದ್ಯರು), ರಕ್ಷಣಾ ಉತ್ಪಾದನೆ ಇಲಾಖೆಯ (ಭಾರತೀಯ ಆರ್ಡನೆನ್ಸ್ ಕಾರ್ಖಾನೆಗಳ ಆರೋಗ್ಯ ಸೇವೆ ವೈದ್ಯಕೀಯ ಅಧಿಕಾರಿಗಳು), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ದಂತ ವೈದ್ಯರು, ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ದಂತ ವೈದ್ಯರು ಮತ್ತು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು].
iv. ಕೇಂದ್ರ ಸಚಿವ ಸಂಪುಟವು ವೈದ್ಯರು 62 ವರ್ಷಗಳವರೆಗೆ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಬಹುದು ಮತ್ತು ಆ ನಂತರ ಅವರ ಸೇವೆಯನ್ನು ಆಡಳಿತಾಕ್ಮಕೇತರ ಸ್ಥಾನಗಳಲ್ಲಿ ನಿಯುಕ್ತಿಗೊಳಿಸಬೇಕು ಎಂಬುದಕ್ಕೂ ತನ್ನ ಅನುಮೋದನೆ ನೀಡಿದೆ
ಈ ನಿರ್ಧಾರವು ಉತ್ತಮವಾಗಿ ರೋಗಿಗಳ ಆರೈಕೆ ಮಾಡಲು, ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಲು, ಆರೋಗ್ಯ ಸೇವೆಗಳನ್ನು ಒದಗಿಸುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಥವಾಗಿ ಜಾರಿಗೊಳಿಸಲು ನೆರವಾಗಲಿದೆ.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ/ಇಲಾಖೆಗಳ 1445 ವೈದ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ.
ಬಹು ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಮತ್ತು ಹಾಲಿ ಸ್ಥಾನಿಕರು ತಮ್ಮ ಹಾಲಿ ಮಂಜೂರಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಕಾರಣ ಈ ನಿರ್ಧಾರದಿಂದ ಹೆಚ್ಚಿನ ಆರ್ಥಿಕ ಹೊರೆ ಆಗುವುದಿಲ್ಲ.
ಹಿನ್ನೆಲೆ :
· ಕೇಂದ್ರೀಯ ಆರೋಗ್ಯ ಸೇವೆಗಳ ವೈದ್ಯರುಗಳ ನಿವೃತ್ತಿಯ ವಯಸ್ಸನ್ನು 2016ರ ಮೇ 31ರಿಂದ ಅನ್ವಯವಾಗುವಂತೆ 65 ವರ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
· ಕೇಂದ್ರ ಸರ್ಕಾರದ ಅನ್ಯ ವೈದ್ಯ ಪದ್ಧತಿಗಳ ವೈದ್ಯರು ಸೇರಿದಂತೆ ಕೇಂದ್ರೀಯ ಆರೋಗ್ಯ ಸೇವೆಗಳೇತರ ವೈದ್ಯರು ವೈದ್ಯರ ಕೊರತೆ ಮತ್ತು ಸಿಎಚ್.ಎಸ್.ಗೆ ಸಮಾನವಾಗಿ ಸೌಲಬ್ಯ ನೀಡಬೇಕು ಎಂಬ ಕಾರಣದಿಂದ ತಮ್ಮ ನಿವೃತ್ತಿಯ ವಯಸ್ಸನ್ನೂ ಹೆಚ್ಚಳ ಮಾಡಲು ಮನವಿ ಮಾಡಿದ್ದರು.