ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೆನ್–ಬೆತ್ವಾ ನದಿಗಳ ಜೋಡಣೆ ಯೋಜನೆಗೆ ಆರ್ಥಿಕ ನೆರವು ಮತ್ತು ಅನುಷ್ಠಾನಕ್ಕೆ ತನ್ನ ಅನುಮೋದನೆ ನೀಡಿದೆ.
ಕೆನ್–ಬೆತ್ವಾ ಸಂಪರ್ಕ ಯೋಜನೆಯ ಒಟ್ಟು ವೆಚ್ಚವನ್ನು 2020-21ರ ಬೆಲೆ ಮಟ್ಟದಲ್ಲಿ 44,605 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ. ಈ ಯೋಜನೆಗೆ 36,290 ಕೋಟಿ ರೂ.ಗಳ ಅನುದಾನ ಮತ್ತು 3,027 ಕೋಟಿ ರೂ.ಗಳ ಸಾಲವನ್ನು ಒಳಗೊಂಡಂತೆ 39,317 ಕೋಟಿ ರೂ.ಗಳ ಕೇಂದ್ರ ಸರ್ಕಾರದ ಬೆಂಬಲಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಈ ಯೋಜನೆಯು ಭಾರತದಲ್ಲಿ ಇನ್ನೂ ಹೆಚ್ಚಿನ ನದಿ ಜೋಡಣೆ ಯೋಜನೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ನಮ್ಮ ಜಾಣ್ಮೆ ಮತ್ತು ದೃಷ್ಟಿಕೋನವನ್ನು ಜಗತ್ತಿಗೆ ಪ್ರದರ್ಶಿಸುತ್ತದೆ.
ಈ ಯೋಜನೆಯು ದೌಧನ್ ಅಣೆಕಟ್ಟು ನಿರ್ಮಾಣ ಮತ್ತು ಎರಡು ನದಿಗಳನ್ನು ಸಂಪರ್ಕಿಸುವ ಕಾಲುವೆ, ಕೆಳ ಓರ್ ಯೋಜನೆ, ಕೋಥಾ ಬ್ಯಾರೇಜ್ ಮತ್ತು ಬೀನಾ ಸಮುಚ್ಛಯ ವಿವಿಧೋದ್ದೇಶ ಯೋಜನೆಯ ಮೂಲಕ ಕೆನ್ ನಿಂದ ಬೆತ್ವಾ ನದಿಗೆ ನೀರನ್ನು ಹರಿಸುವುದನ್ನು ಒಳಗೊಂಡಿರುತ್ತದೆ. ಈ ಯೋಜನೆಯು ವಾರ್ಷಿಕ 10.62 ಲಕ್ಷ ಹೆಕ್ಟೇರ್ ನೀರಾವರಿ, ಸುಮಾರು 62 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಪೂರೈಕೆ ಮಾಡಲಿದ್ದು, 103 ಮೆಗಾವ್ಯಾಟ್ ಜಲವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 8 ವರ್ಷಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯೋಜಿಸಲಾಗಿದೆ.
ಈ ಯೋಜನೆಯಿಂದ ತೀವ್ರ ನೀರಿನ ಅಭಾವದಿಂದ ಬಳಲುತ್ತಿರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಹರಡಿರುವ ಬುಂದೇಲ್ ಖಂಡ್ ಪ್ರದೇಶಕ್ಕೆ ಅಪಾರ ಪ್ರಯೋಜನವಾಗಲಿದೆ. ಈ ಯೋಜನೆಯು ಪನ್ನಾ, ಟಿಕಾಮ್ ಘರ್, ಛತರ್ಪುರ್, ಸಾಗರ್, ದಮೋಹ್, ದತಿಯಾ,ವಿದಿಶಾ, ಶಿವಪುರಿ ಮತ್ತು ಮಧ್ಯಪ್ರದೇಶದ ರೈಸನ್ ಮತ್ತು ಉತ್ತರ ಪ್ರದೇಶದ ಬಾಂಡಾ, ಮಹೋಬಾ, ಝಾನ್ಸಿ ಮತ್ತು ಲಲಿತಪುರ ಜಿಲ್ಲೆಗಳಿಗೆ ಅಪಾರ ಪ್ರಯೋಜನಗಳನ್ನು ಒದಗಿಸುತ್ತದೆ.
ಈ ಯೋಜನೆಯು ಕೃಷಿ ಚಟುವಟಿಕೆಗಳು ಮತ್ತು ಉದ್ಯೋಗ ಸೃಷ್ಟಿ ಹೆಚ್ಚಳದ ಕಾರಣದಿಂದಾಗಿ ಹಿಂದುಳಿದ ಬುಂದೇಲ್ ಖಂಡ್ ಪ್ರದೇಶದಲ್ಲಿ ಸಾಮಾಜಿಕ–ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಈ ಪ್ರದೇಶದಿಂದ ಸಂಕಷ್ಟದ ವಲಸೆಯನ್ನು ತಡೆಯಲೂ ಸಹಾಯ ಮಾಡುತ್ತದೆ.
ಈ ಯೋಜನೆಯು ಪರಿಸರ ನಿರ್ವಹಣೆ ಮತ್ತು ಸುರಕ್ಷತೆಗಳನ್ನು ಸಮಗ್ರವಾಗಿ ಒದಗಿಸುತ್ತದೆ. ಈ ಉದ್ದೇಶಕ್ಕಾಗಿ ಭಾರತೀಯ ವನ್ಯಜೀವಿ ಸಂಸ್ಥೆಯಿಂದ ಸಮಗ್ರ ಭೂರಮೆ ನಿರ್ವಹಣಾ ಯೋಜನೆ ಅಂತಿಮ ಹಂತದಲ್ಲಿದೆ.
ಹಿನ್ನೆಲೆ:
ದೇಶದ ಮೊದಲ ಪ್ರಮುಖ ಕೇಂದ್ರ ಚಾಲಿತ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸಲು 2021ರ ಮಾರ್ಚ್ 22ರಂದು ಕೇಂದ್ರ ಜಲಶಕ್ತಿ ಸಚಿವರು ಮತ್ತು ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ನಡುವೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ನದಿಗಳ ಜೋಡಣೆಯ ಮೂಲಕ, ಹೆಚ್ಚುವರಿ ನೀರಿರುವ ಪ್ರದೇಶಗಳಿಂದ ಬರ ಪೀಡಿತ ಮತ್ತು ನೀರಿನ ಕೊರತೆಯಿರುವ ಪ್ರದೇಶಗಳಿಗೆ ನೀರನ್ನು ಸಾಗಿಸುವ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನವನ್ನು ಜಾರಿಗೆ ತರಲು ಅಂತರ ರಾಜ್ಯ ಸಹಕಾರಕ್ಕೆ ನಾಂದಿ ಹಾಡುತ್ತದೆ.
***