Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಿರ್ಲೊಸ್ಕರ್ ಬ್ರದರ್ಸ್ ಲಿಮಿಟೆಡ್ ನ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನ ಮಂತ್ರಿ


ನವದೆಹಲಿಯಲ್ಲಿ ಆಯೋಜಿಸಲಾದ ಕಿರ್ಲೊಸ್ಕರ್ ಬ್ರದರ್ಸ್ ಲಿಮಿಟೆಡ್ (ಕೆಬಿಎಲ್) ನ ಶತಮಾನೋತ್ಸವ ಆಚರಣೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪಾಲ್ಗೊಂಡು ಕೆಬಿಎಲ್ 100 ವರ್ಷ ಪೂರೈಸಿದ ನೆನಪಿಗೆ ಅಂಚೆ ಚೀಟಿ ಬಿಡುಗಡೆ ಮಾಡಿದರು. ‘ಯಾಂತ್ರಿಕ್ ಕಿ ಯಾತ್ರಾ – ದಿ ಮ್ಯಾನ್ ಹೂ ಮೇಡ್ ಮೆಶಿನ್ಸ್’ ಎಂಬ ಕಿರ್ಲೋಸ್ಕರ್ ಬ್ರದರ್ಸ್ ಸಂಸ್ಥಾಪಕ ದಿವಂಗತ ಶ್ರೀ ಲಕ್ಷ್ಮಣರಾವ್ ಕಿರ್ಲೋಸ್ಕರ್ ಅವರ ಜೀವನ ಚರಿತ್ರೆಯ ಹಿಂದಿ ಆವೃತ್ತಿಯನ್ನು ಪ್ರಧಾನ ಮಂತ್ರಿಗಳು ಬಿಡುಗಡೆ ಮಾಡಿದರು.

ಕಿರ್ಲೊಸ್ಕರ್ ಬ್ರದರ್ಸ್ ಲಿಮಿಟೆಡ್ ಶತಮಾನೋತ್ಸವಕ್ಕೆ ಹಾರೈಸಿದ ಪ್ರಧಾನ ಮಂತ್ರಿಗಳು, ಸವಾಲುಗಳನ್ನು ಎದುರಿಸುವ ಜಾಣ್ಮೆ, ಹೊಸ ಕ್ಷೇತ್ರಗಳಲ್ಲಿ ವಿಕಸನ ಇಂದಿಗೂ ಪ್ರತಿ ಭಾರತೀಯ ಉದ್ಯಮಿಯ ವ್ಯಕ್ತಿತ್ವವಾಗಿದೆ. ದೇಶದ ಅಭಿವೃದ್ಧಿ ಮತ್ತು ತನ್ನ ಸಾಮರ್ಥ್ಯ ಮತ್ತು ಯಶಸ್ಸು ವೃದ್ಧಿಗೆ ಭಾರತೀಯ ಉದ್ಯಮಿಗಳು ಹಾತೊರೆಯುತ್ತಿದ್ದಾರೆ ಎಂದರು.

“ಇಂದು ನಾವು ಹೊಸ ವರ್ಷಕ್ಕೆ ಕಾಲಿಡುವುದರ ಜೊತೆಗೆ ಹೊಸ ದಶಕಕ್ಕೆ ಕಾಲಿಡುತ್ತಿದ್ದೇವೆ. ಈ ದಶಕ ಭಾರತೀಯ ಉದ್ಯಮಿಗಳಿಗೆ ಮೀಸಲು ಎಂದು ಹೇಳುವಲ್ಲಿ ನನಗೆ ಯಾವ ಹಿಂಜರಿಕೆ ಇಲ್ಲ” ಎಂದೂ ಪ್ರಧಾನ ಮಂತ್ರಿಗಳು ಹೇಳಿದರು.

ಭಾರತೀಯರಿಗೆ ಮತ್ತು ಉದ್ಯಮಗಳಿಗೆ ಸರ್ಕಾರ ತಡೆಗೋಡೆಯಾಗಿ ನಿಲ್ಲದೆ ಪಾಲುದಾರನಂತೆ ವರ್ತಿಸಿದಲ್ಲಿ ಮಾತ್ರ ದೇಶದ ಜನತೆಯ ನಿಜವಾದ ಶಕ್ತಿ ಕಾರ್ಯರೂಪಕ್ಕೆ ಬರಲಿದೆ ಎಂದು ಪ್ರಧಾನ ಮಂತ್ರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕೇಂದ್ರೀಕೃತ ಸುಧಾರಣೆ, ಸಮಗ್ರತೆಯೊಂದಿಗೆ ನಿರ್ವಹಣೆ, ತೀವ್ರತೆಯೊಂದಿಗೆ ಪರಿವರ್ತನೆ’ ಎಂಬುದು ಕಳೆದ ಕೆಲ ವರ್ಷಗಳ ನಮ್ಮ ನಿಲುವಾಗಿದೆ. ನಾವು ವೃತ್ತಿಪರ ಮತ್ತು ಕಾರ್ಯಗತಿಯುಕ್ತ ಆಡಳಿತಕ್ಕಾಗಿ ಪ್ರಯತ್ನಿಸಿದ್ದೇವೆ. ಕಳೆದ 5 ವರ್ಷಗಳಿಂದ ದೇಶದಲ್ಲಿ ಸಮಗ್ರತೆಯ ಮತ್ತು ಸಂಪೂರ್ಣ ಪಾರದರ್ಶಕತೆಯಿಂದ ಕೆಲಸ ಮಾಡುವ ವಾತಾವರಣವಿದೆ. ಇದು ದೇಶ ಬೃಹತ್ ಗುರಿಗಳನ್ನು ಹೊಂದುವ ಮತ್ತು ಸಮಯಕ್ಕೆ ಸರಿಯಾಗಿ ಅವುಗಳನ್ನು ಪೂರೈಸಿಕೊಳ್ಳುವ ಆತ್ಮಸ್ಥೈರ್ಯ ನೀಡಿದೆ.

2018- 19 ನೇ ಸಾಲಿನಲ್ಲಿ ಯು ಪಿ ಐ ಮೂಲಕ ಸುಮಾರು 9 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರ ವಹಿವಾಟು ನಡೆದಿತ್ತು. ಈ ಆರ್ಥಿಕ ವರ್ಷದಲ್ಲಿ ಡಿಸೆಂಬರ್ ತಿಂಗಳ ಅಂತ್ಯದವರೆಗೆಯೇ ಯು ಪಿ ಐ ಮೂಲಕ ಸುಮಾರು 15 ಲಕ್ಷ ಕೋಟಿ ರೂಪಾಯಿಗಳ ವಹಿವಾಟು ಮಾಡಲಾಗಿದೆ. ದೇಶ ಡಿಜಿಟಲ್ ವ್ಯವಹಾರವನ್ನು ಎಷ್ಟು ವೇಗವಾಗಿ ಅಳವಡಿಸಿಕೊಳ್ಳುತ್ತಿದೆ ಎಂಬುದನ್ನು ಇದರಿಂದ ನೀವು ಅಂದಾಜಿಸಬಹುದಾಗಿದೆ. ದೇಶಾದ್ಯಂತ 30 ಕೋಟಿಗಿಂತಲೂ ಹೆಚ್ಚು ಎಲ್ ಇ ಡಿ ಬಲ್ಬ್ ಗಳ ವಿತರಣೆಯಾಗಿದೆ ಎಂಬುದು ನಮ್ಮೆಲ್ಲರಿಗೂ ತೃಪ್ತಿ ತರುವ ಸಂಗತಿಯಾಗಿದೆ.” ಎಂದು ಪ್ರಧಾನ ಮಂತ್ರಿ ಅವರು ತಿಳಿಸಿದರು.

“ಮೇಕ್ ಇನ್ ಇಂಡಿಯಾ ಅಭಿಯನದ ಯಶೋಗಾಥೆಗಳು ನಮ್ಮ ಉದ್ಯಮಕ್ಕೆ ಪುಷ್ಠಿ ನೀಡುವಂಥವಾಗಿವೆ. ಭಾರತದ ಪ್ರತಿ ಉದ್ಯಮ ಕ್ಷೇತ್ರದಿಂದಲೂ ನಾನು ಯಶೋಗಾಥೆಗಳನ್ನು ಕೇಳಬಯಸುತ್ತೇನೆ”, ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಿಳಿಸಿದರು.”