Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಶಿ ತಮಿಳು ಸಂಗಮಂ 2023 ಉದ್ಘಾಟಿಸಿದ ಪ್ರಧಾನ ಮಂತ್ರಿ

ಕಾಶಿ ತಮಿಳು ಸಂಗಮಂ 2023 ಉದ್ಘಾಟಿಸಿದ ಪ್ರಧಾನ ಮಂತ್ರಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಲ್ಲಿಂದು ಕಾಶಿ ತಮಿಳು ಸಂಗಮಂ-2023 ಉದ್ಘಾಟಿಸಿದರು. ನಂತರ ಮೋದಿ ಅವರು ಕನ್ಯಾಕುಮಾರಿ-ವಾರಾಣಸಿ ತಮಿಳು ಸಂಗಮಂ ರೈಲಿಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಅವರು ತಿರುಕ್ಕುರಲ್, ಮಣಿಮೇಕಲೈ ಮತ್ತು ಇತರ ಶ್ರೇಷ್ಠ ತಮಿಳು ಸಾಹಿತ್ಯದ ಬಹು ಭಾಷೆ ಮತ್ತು ಬ್ರೈಲ್ ಅನುವಾದಗಳನ್ನು ಲೋಕಾರ್ಪಣೆ ಮಾಡಿದರು. ನಂತರ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಕಾಶಿ ತಮಿಳು ಸಂಗಮಂ ತಮಿಳುನಾಡು ಮತ್ತು ಕಾಶಿ ನಡುವಿನ ಪುರಾತನ ಸಂಬಂಧದ ಕೊಂಡಿಗಳನ್ನು ಆಚರಿಸುವ, ಪುನರುಚ್ಚರಿಸುವ ಮತ್ತು ಮರುಶೋಧಿಸುವ ಗುರಿ ಹೊಂದಿದೆ – ಇವೆರಡು ದೇಶದ ಪ್ರಮುಖ ಮತ್ತು ಪ್ರಾಚೀನ ಕಲಿಕೆಯ ಸ್ಥಾನಗಳನ್ನು ಹೊಂದಿವೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಎಲ್ಲರನ್ನೂ ಕೇವಲ ಅತಿಥಿಗಳೆಂದು ಸ್ವಾಗತಿಸದೆ, ತಮ್ಮ ಕುಟುಂಬದ ಸದಸ್ಯರಂತೆ ಸ್ವಾಗತಿಸಿದರು. ತಮಿಳುನಾಡಿನಿಂದ ಕಾಶಿಗೆ ಆಗಮಿಸುವುದು ಎಂದರೆ ಮಹಾದೇವನ ಒಂದು ನಿವಾಸದಿಂದ ಇನ್ನೊಂದು ಮಧುರೈ ಮೀನಾಕ್ಷಿಯಿಂದ ಕಾಶಿ ವಿಶಾಲಾಕ್ಷಿಗೆ ಪ್ರಯಾಣಿಸುವುದು ಎಂದರ್ಥ. ತಮಿಳುನಾಡು ಮತ್ತು ಕಾಶಿಯ ಜನರ ನಡುವಿನ ಅನನ್ಯ ಪ್ರೀತಿ ಮತ್ತು ಸಂಪರ್ಕವನ್ನು ಎತ್ತಿ ಹಿಡಿದ ಪ್ರಧಾನಿ, ಕಾಶಿಯ ನಾಗರಿಕರ ಆತಿಥ್ಯ ಅಪೂರ್ವವಾಗಿದೆ. ಭಗವಾನ್ ಮಹಾದೇವನ ಆಶೀರ್ವಾದದ ಜತೆಗೆ, ಇಲ್ಲಿ ಭಾಗವಹಿಸುವವರು ಕಾಶಿಯ ಸಂಸ್ಕೃತಿ, ಭಕ್ಷ್ಯಗಳು ಮತ್ತು ನೆನಪುಗಳೊಂದಿಗೆ ತಮಿಳುನಾಡಿಗೆ ಹಿಂತಿರುಗುತ್ತಾರೆ. ಪ್ರಧಾನಿ ಮೋದಿ ಅವರು ತಮ್ಮ ಭಾಷಣದ ನೈಜ-ಸಮಯದ ಭಾಷಾಂತರದಲ್ಲಿ ಮೊದಲ ಬಾರಿಗೆ ತಮಿಳು ಭಾಷೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆಯ ಮೇಲೆ ಬೆಳಕು ಚೆಲ್ಲಿದ ಅವರು, ಭವಿಷ್ಯದ ಕಾರ್ಯಕ್ರಮಗಳಲ್ಲಿ ಅದರ ಬಳಕೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.

ಸುಬ್ರಮಣ್ಯ ಭಾರತಿ ಅವರನ್ನು ಉಲ್ಲೇಖಿಸಿದ ಪ್ರಧಾನಿ, ಕಾಶಿ-ತಮಿಳು ಸಂಗಮದ ಕಂಪನಗಳು ದೇಶ ಮತ್ತು ವಿಶ್ವಾದ್ಯಂತ ಹರಡುತ್ತಿವೆ. ಕಳೆದ ವರ್ಷ ಪ್ರಾರಂಭವಾದಾಗಿನಿಂದ ಮಠಾಧೀಶರು, ವಿದ್ಯಾರ್ಥಿಗಳು, ಕಲಾವಿದರು, ಲೇಖಕರು, ಕುಶಲಕರ್ಮಿಗಳು ಮತ್ತು ವೃತ್ತಿಪರರು ಸೇರಿದಂತೆ ಲಕ್ಷಾಂತರ ಜನರು ಕಾಶಿ ತಮಿಳು ಸಂಗಮಂನ ಭಾಗವಾಗಿದ್ದಾರೆ. ಇದು ಸಂವಾದ ಮತ್ತು ವಿಚಾರ ವಿನಿಮಯಕ್ಕೆ ಪರಿಣಾಮಕಾರಿ ವೇದಿಕೆಯಾಗಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಮದ್ರಾಸ್ ಐಐಟಿ ಜಂಟಿ ಉಪಕ್ರಮ ತೃಪ್ತಿಕರವಾಗಿದೆ. ಮದ್ರಾಸ್ ಐಐಟಿ  ವಾರಾಣಸಿಯ ಸಾವಿರಾರು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತಶಾಸ್ತ್ರದಲ್ಲಿ ವಿದ್ಯಾ ಶಕ್ತಿ ಉಪಕ್ರಮದ ಅಡಿ, ಆನ್‌ಲೈನ್ ಬೆಂಬಲ ನೀಡುತ್ತಿದೆ. ಇತ್ತೀಚಿನ ಬೆಳವಣಿಗೆಗಳು, ಕಾಶಿ ಮತ್ತು ತಮಿಳುನಾಡಿನ ಜನರ ನಡುವಿನ ಭಾವನಾತ್ಮಕ ಮತ್ತು ಸೃಜನಶೀಲ ಬಾಂಧವ್ಯಕ್ಕೆ ಪುರಾವೆಯಾಗಿದೆ ಎಂದು ಪ್ರಧಾನಿ ಹೇಳಿದರು.

“ಕಾಶಿ ತಮಿಳು ಸಂಗಮಂ’ ಏಕ್ ಭಾರತ್, ಶ್ರೇಷ್ಠ ಭಾರತ್ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಿದೆ. ಕಾಶಿ ತೆಲುಗು ಸಂಗಮಂ ಮತ್ತು ಸೌರಾಷ್ಟ್ರ ಕಾಶಿ ಸಂಗಮಂ ಸಂಘಟನೆಯ ಹಿಂದೆ ಈ ಚೈತನ್ಯವಿದೆ. ದೇಶದ ಎಲ್ಲಾ ರಾಜಭವನಗಳಲ್ಲಿ ಇತರ ರಾಜ್ಯೋತ್ಸವದ ದಿನಗಳನ್ನು ಆಚರಿಸುವ ಹೊಸ ಸಂಪ್ರದಾಯದಿಂದ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವವು ಮತ್ತಷ್ಟು ಬಲ ಪಡೆದಿದೆ. ‘ಏಕ್ ಭಾರತ್, ಶ್ರೇಷ್ಠ ಭಾರತ್’ನ ಅದೇ ಮನೋಭಾವ ಪ್ರತಿಬಿಂಬಿಸುವ ಆದಿನಂ ಸಂತರ ಮೇಲ್ವಿಚಾರಣೆಯಲ್ಲಿ ಹೊಸ ಸಂಸತ್ತಿನಲ್ಲಿ ಪವಿತ್ರ ಸೆಂಗೋಲ್ ಸ್ಥಾಪನೆಯನ್ನು ಸ್ಮರಿಸಿದ ಪ್ರಧಾನಿ, “ಏಕ್ ಭಾರತ್, ಶ್ರೇಷ್ಠ ಭಾರತ”ದ ಈ ಚೈತನ್ಯದ ಹರಿವು ಇಂದು ನಮ್ಮ ರಾಷ್ಟ್ರದ ಆತ್ಮವನ್ನು ತುಂಬುತ್ತಿದೆ” ಎಂದರು.

ಭಾರತದ ಪ್ರತಿಯೊಂದು ನೀರು ಗಂಗಾಜಲಾಗಿದೆ, ದೇಶದ ಪ್ರತಿಯೊಂದು ಭೌಗೋಳಿಕ ಸ್ಥಳವು ಕಾಶಿಯಾಗಿದೆ. ರಾಜ ಪರಾಕ್ರಮ ಮಹಾ ಪಾಂಡಿಯನ್ ಸೂಚಿಸಿದಂತೆ, ಭಾರತದ ವೈವಿಧ್ಯತೆಯನ್ನು ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ರೂಪಿಸಲಾಗಿದೆ. ಉತ್ತರ ಭಾರತದಲ್ಲಿನ ನಂಬಿಕೆಯ ಕೇಂದ್ರಗಳು ನಿರಂತರವಾಗಿ ವಿದೇಶಿ ಶಕ್ತಿಗಳ ದಾಳಿಗೆ ಒಳಗಾದ ಸಮಯವನ್ನು ನೆನಪು ಮಾಡಿದ ಪ್ರಧಾನಿ, ತೆಂಕಶಿ ಮತ್ತು ಶಿವಕಾಶಿ ದೇವಾಲಯಗಳ ನಿರ್ಮಾಣದೊಂದಿಗೆ ಕಾಶಿಯ ಪರಂಪರೆಯನ್ನು ಜೀವಂತವಾಗಿಡಲು ರಾಜ ಪರಾಕ್ರಮ್ ಪಾಂಡಿಯನ್ ಅವರ ಪ್ರಯತ್ನ ಶ್ಲಾಘನೀಯ. ಭಾರತದ ವೈವಿಧ್ಯತೆಯ ಕಡೆಗೆ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ ಗಣ್ಯರನ್ನು ಸಹ ಮೋದಿ ಸ್ಮರಿಸಿದರು.

ಇತರ ದೇಶಗಳಲ್ಲಿ, ರಾಷ್ಟ್ರವನ್ನು ರಾಜಕೀಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಆದರೆ ಭಾರತವು ಒಂದು ರಾಷ್ಟ್ರವಾಗಿ ಆಧ್ಯಾತ್ಮಿಕ ನಂಬಿಕೆಗಳಿಂದ ನಿರ್ಮಿಸಲ್ಪಟ್ಟಿದೆ. ಆದಿ ಶಂಕರಾಚಾರ್ಯ ಮತ್ತು ರಾಮಾನುಜಂ ಅವರಂತಹ ಸಾಧು ಸಂತರಿಂದ ಭಾರತ ಸಮೃದ್ಧವಾಗಿದೆ. ಶಿವಾಲಯಗಳಿಗೆ ಆ ದಿನಗಳಲ್ಲೇ ಸಾಧು ಸಂತರು ನಡೆಸಿದ ತೀರ್ಥಯಾತ್ರೆಗಳನ್ನು ಸ್ಮರಿಸಿದರು. “ಈ ಯಾತ್ರೆಗಳಿಂದಾಗಿ, ಭಾರತವು ರಾಷ್ಟ್ರವಾಗಿ ಶಾಶ್ವತ ಮತ್ತು ಅಚಲವಾಗಿ ಉಳಿದಿದೆ” ಎಂದು ಮೋದಿ ಹೇಳಿದರು.

ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯ ಜನರು, ವಿದ್ಯಾರ್ಥಿಗಳು ಮತ್ತು ಯುವಕರು ಕಾಶಿ, ಪ್ರಯಾಗ, ಅಯೋಧ್ಯೆ ಮತ್ತು ಇತರ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾರೆ. ಪ್ರಾಚೀನ ಸಂಪ್ರದಾಯಗಳತ್ತ ದೇಶದ ಯುವಜನರ ಆಸಕ್ತಿಗಳು ನಿಜಕ್ಕೂ ತೃಪ್ತಿದಾಯಕ. “ಮಹಾದೇವನೊಂದಿಗೆ ರಾಮೇಶ್ವರವನ್ನು ಸ್ಥಾಪಿಸಿದ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನವು ದೈವಿಕವಾಗಿದೆ”, ಕಾಶಿ ತಮಿಳು ಸಂಗಮದಲ್ಲಿ ಪಾಲ್ಗೊಳ್ಳುವವರಿಗೆ ಅಯೋಧ್ಯೆಗೆ ಭೇಟಿ ನೀಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಪರಸ್ಪರರ ಸಂಸ್ಕೃತಿ ತಿಳಿದುಕೊಳ್ಳುವುದು ಅಗತ್ಯ, ಇದು ನಂಬಿಕೆಯನ್ನು ಹೆಚ್ಚಿಸುತ್ತದೆ ಮತ್ತು ಬಾಂಧವ್ಯವನ್ನು ಅಭಿವೃದ್ಧಿಪಡಿಸುತ್ತದೆ. ಎರಡು ಮಹಾನ್ ದೇವಾಲಯ ನಗರಗಳಾದ ಕಾಶಿ ಮತ್ತು ಮಧುರೈ ಉದಾಹರಣೆ ನೀಡಿದ ಮೋದಿ, ತಮಿಳು ಸಾಹಿತ್ಯವು ವಗೈ ಮತ್ತು ಗಂಗೈ (ಗಂಗಾ) ಎರಡರ ಬಗ್ಗೆ ಮಾತನಾಡುತ್ತದೆ. “ನಾವು ಈ ಪರಂಪರೆಯ ಬಗ್ಗೆ ತಿಳಿದಾಗ ನಮ್ಮ ಗಾಢವಾದ ಸಂಬಂಧಗಳ ಆಳವನ್ನು ನಾವು ಅನುಭವಿಸುತ್ತೇವೆ” ಎಂದು ಅವರು ಹೇಳಿದರು.

ಕಾಶಿ – ತಮಿಳು ಸಂಗಮವು ಭಾರತದ ಪರಂಪರೆಯನ್ನು ಸಶಕ್ತಗೊಳಿಸುವುದನ್ನು ಮತ್ತು ಏಕ ಭಾರತ ಶ್ರೇಷ್ಠ ಭಾರತವನ್ನು ಬಲಪಡಿಸುತ್ತದೆ. ಕಾಶಿಗೆ ಭೇಟಿ ನೀಡುವವರಿಗೆ ಆಹ್ಲಾದಕರ ವಾಸ್ತವ್ಯ ಸಿಕ್ಕಿದೆ ಎಂಬ ಶಾವಾದ ನನಗಿದೆ. ಖ್ಯಾತ ಗಾಯಕ ಶ್ರೀರಾಮ್ ಅವರು ತಮ್ಮ ಪ್ರದರ್ಶನದಿಂದ ಇಡೀ ಪ್ರೇಕ್ಷಕರನ್ನು ರಂಜಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿ, ಪ್ರಧಾನಿ ಭಾಷಣ ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ರಾಜ್ಯ ಸಚಿವ ಡಾ ಎಲ್ ಮುರುಗನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾಶಿ ತಮಿಳು ಸಂಗಮಂ ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವ ಒಂದು ವಿನೂತನ ಕಾರ್ಯಕ್ರಮವಾಗಿದೆ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವವನ್ನು ಬಲಪಡಿಸುತ್ತದೆ.

 

***