Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಕರ್ಮಯೋಗಿ ಸಪ್ತಾಹ’ – ರಾಷ್ಟ್ರೀಯ ಕಲಿಕಾ ಸಪ್ತಾಹಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ

‘ಕರ್ಮಯೋಗಿ ಸಪ್ತಾಹ’ – ರಾಷ್ಟ್ರೀಯ ಕಲಿಕಾ ಸಪ್ತಾಹಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ‘ಕರ್ಮಯೋಗಿ ಸಪ್ತಾಹ’ – ರಾಷ್ಟ್ರೀಯ ಕಲಿಕಾ ಸಪ್ತಾಹಕ್ಕೆ ಚಾಲನೆ ನೀಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಿಷನ್ ಕರ್ಮಯೋಗಿಯ ಗುರಿ ನಮ್ಮ ದೇಶದ ಅಭಿವೃದ್ಧಿಯ ಪ್ರೇರಕ ಶಕ್ತಿಯಾಗಲಿರುವ ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದಾಗಿದೆ ಎಂದು ಹೇಳಿದರು. ಇದುವರೆಗೆ ಸಾಧಿಸಿದ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ನಾವು ಇದೇ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರೆ, ದೇಶವು ಪ್ರಗತಿ ಹೊಂದುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು. ರಾಷ್ಟ್ರೀಯ ಕಲಿಕಾ ಸಪ್ತಾಹದ ಹೊಸ ಕಲಿಕೆಗಳು ಮತ್ತು ಅನುಭವಗಳು ನಾಗರೀಕರಿಗೆ ಶಕ್ತಿಯನ್ನು ಒದಗಿಸಿ, ಅವರ ಕೆಲಸದ ವ್ಯವಸ್ಥೆಗಳನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಈ ಉತ್ಸಾಹವು 2047ರ ವೇಳೆಗೆ ವಿಕಸಿತ ಭಾರತದ ಗುರಿಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರದ ಮನಸ್ಥಿತಿಯನ್ನು ಬದಲಾಯಿಸಲು ಕೈಗೊಂಡ ಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ಅದರ ಪರಿಣಾಮ ಇಂದು ಜನರ ಮುಂದಿದೆ ಎಂದರು. ಸರ್ಕಾರದಲ್ಲಿ ಕೆಲಸ ಮಾಡುವ ಜನರ ಪ್ರಯತ್ನಗಳು ಮತ್ತು ಮಿಷನ್ ಕರ್ಮಯೋಗಿಯಂತಹ ಕ್ರಮಗಳ ಪರಿಣಾಮದಿಂದ ಮಾತ್ರ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆಯನ್ನು (ಎಐ) ಜಗತ್ತು ಒಂದು ಅವಕಾಶವಾಗಿ ನೋಡುತ್ತಿದೆ, ಆದರೆ ಭಾರತಕ್ಕೆ ಇದು ಸವಾಲು ಮತ್ತು ಅವಕಾಶ ಎರಡನ್ನೂ ಒದಗಿಸಿದೆ ಎಂದು ಪ್ರಧಾನಿಯವರು ಒತ್ತಿ ಹೇಳಿದರು. ಅವರು ಎರಡು ಎಐಗಳ ಬಗ್ಗೆ ಮಾತನಾಡಿದರು, ಒಂದು ಕೃತಕ ಬುದ್ಧಿಮತ್ತೆ ಮತ್ತು ಇನ್ನೊಂದು ಮಹತ್ವಾಕಾಂಕ್ಷೆಯ ಭಾರತ. ಎರಡನ್ನೂ ಸಮತೋಲನಗೊಳಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಮಹತ್ವಾಕಾಂಕ್ಷೆಯ ಭಾರತದ ಪ್ರಗತಿಯನ್ನು ಹೆಚ್ಚಿಸಲು ನಾವು ಕೃತಕ ಬುದ್ಧಿಮತ್ತೆಯನ್ನು ಯಶಸ್ವಿಯಾಗಿ ಬಳಸಿಕೊಂಡರೆ, ಅದು ಪರಿವರ್ತಕ ಬದಲಾವಣೆಗೆ ಕಾರಣವಾಗಬಹುದು ಎಂದು ಹೇಳಿದರು.

ಡಿಜಿಟಲ್ ಕ್ರಾಂತಿ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ನಾಗರಿಕರಿಗೆ ಮಾಹಿತಿ ಸಮಾನತೆಯು ದೊರೆತಿದೆ ಎಂದು ಪ್ರಧಾನಿಯವರು ಹೇಳಿದರು. ಕೃತಕ ಬುದ್ಧಿಮತ್ತೆಯೊಂದಿಗೆ, ಮಾಹಿತಿ ಸಂಸ್ಕರಣೆಯೂ ಸಹ ಅಷ್ಟೇ ಸುಲಭವಾಗುತ್ತಿದ್ದು, ನಾಗರಿಕರಿಗೆ ಮಾಹಿತಿ ನೀಡಲು ಮತ್ತು ಸರ್ಕಾರದ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲು ಕೃತಕ ಬುದ್ಧಿಮತ್ತೆಯು ಅವರನ್ನು ಸಶಕ್ತಗೊಳಿಸುತ್ತಿದೆ. ಆದ್ದರಿಂದ, ನಾಗರಿಕ ಸೇವಕರು ಹೆಚ್ಚುತ್ತಿರುವ ಮಾನದಂಡಗಳನ್ನು ಅನುಸರಿಸಿ ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳೊಂದಿಗೆ ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು. ಈ ವಿಷಯದಲ್ಲಿ ಮಿಷನ್ ಕರ್ಮಯೋಗಿಯು ಸಹಾಯ ಮಾಡಿ ಅವರನ್ನು ಸಶಕ್ತಗೊಳಿಸುತ್ತದೆ ಎಂದು ಅವರು ತಿಳಿಸಿದರು.

ನವೀನ ಚಿಂತನೆ ಮತ್ತು ಪೌರ-ಕೇಂದ್ರಿತ ವಿಧಾನವನ್ನು ಅನುಸರಿಸುವ ಅಗತ್ಯದತ್ತ ಪ್ರಧಾನಿಯವರು ತಮ್ಮ ಒಲವನ್ನು ಪ್ರಕಟಿಸಿದರು. ಹೊಸ ಆಲೋಚನೆಗಳನ್ನು ಪಡೆಯಲು ಸ್ಟಾರ್ಟ್ ಅಪ್ ಗಳು, ಸಂಶೋಧನಾ ಸಂಸ್ಥೆಗಳು ಮತ್ತು ಯುವಕರ ಸಹಾಯವನ್ನು ಪಡೆಯಲು ಅವರು ಸಲಹೆ ನೀಡಿದರು. ಇಲಾಖೆಗಳು ಪ್ರತಿಕ್ರಿಯಾ ಕಾರ್ಯವಿಧಾನಗಳನ್ನು ಪಾಲಿಸಬೇಕು ಎಂದು ಅವರು ಒತ್ತಿ ಹೇಳಿದರು.

ಐಜಿಒಟಿ ವೇದಿಕೆಯನ್ನು ಶ್ಲಾಘಿಸಿದ ಪ್ರಧಾನಿಯವರು, 40 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದು, 1400ಕ್ಕೂ ಹೆಚ್ಚು ಕೋರ್ಸ್ ಗಳು ಈ ವೇದಿಕೆಯಲ್ಲಿ ಲಭ್ಯವಿವೆ, ಮತ್ತು ವಿವಿಧ ಕೋರ್ಸ್ ಗಳನ್ನು ಪೂರ್ಣಗೊಳಿಸಿದ 1.5 ಕೋಟಿಗೂ ಹೆಚ್ಚು ಪ್ರಮಾಣಪತ್ರಗಳನ್ನು ಅಧಿಕಾರಿಗಳು ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದರು.

ನಾಗರಿಕ ಸೇವಾ ತರಬೇತಿ ಸಂಸ್ಥೆಗಳು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಬಲಿಪಶುಗಳಾಗಿವೆ ಎಂದು ಪ್ರಧಾನಿಯವರು ಅಭಿಪ್ರಾಯ ಪಟ್ಟರು. ಈ ತರಬೇತಿ ಸಂಸ್ಥೆಗಳ ನಡುವೆ ಪಾಲುದಾರಿಕೆ ಮತ್ತು ಸಹಯೋಗವನ್ನು ಹೆಚ್ಚಿಸಲು ನಾವು ಪ್ರಯತ್ನಿಸಿದ್ದೇವೆ ಎಂದು ಅವರು ಹೇಳಿದರು. ತರಬೇತಿ ಸಂಸ್ಥೆಗಳು ಪರಸ್ಪರ ಸಂವಹನದ ಸರಿಯಾದ ಮಾರ್ಗಗಳನ್ನು ಸ್ಥಾಪಿಸಿ, ಪರಸ್ಪರ ಕಲಿಕಾ ಕ್ರಮದಿಂದ, ಜಾಗತಿಕ ಉತ್ತಮ ಅಭ್ಯಾಸಗಳನ್ನು ಚರ್ಚಿಸಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಸಂಪೂರ್ಣ ಸರ್ಕಾರದ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಸೆಪ್ಟೆಂಬರ್ 2020ರಲ್ಲಿ, ಜಾಗತಿಕ ದೃಷ್ಟಿಕೋನದಲ್ಲಿ ಭಾರತೀಯ ನೀತಿಗಳಲ್ಲಿ ಬೇರೂರಿರುವ, ಭವಿಷ್ಯಕ್ಕೆ ಬೇಕಾದ ನಾಗರಿಕ ಸೇವೆಯನ್ನು ಕಲ್ಪಿಸಿಕೊಂಡು ಮಿಷನ್ ಕರ್ಮಯೋಗಿಯನ್ನು ಪ್ರಾರಂಭಿಸಲಾಯಿತು. ರಾಷ್ಟ್ರೀಯ ಕಲಿಕಾ ಸಪ್ತಾಹವು ನಾಗರಿಕ ಸೇವಕರಿಗೆ ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ ಅಭಿವೃದ್ಧಿಗೆ ಉತ್ಸಾಹ ಹಾಗೂ ಪ್ರಚೋದನೆಯನ್ನು ನೀಡುವುದಲ್ಲದೆ, “ಒಂದು ಸರ್ಕಾರ”ದ ಸಂದೇಶವನ್ನು ನೀಡುತ್ತದೆ. ಇದು ಪ್ರತಿಯೊಬ್ಬರನ್ನು ರಾಷ್ಟ್ರೀಯ ಗುರಿಯೊಂದಿಗೆ ಹೊಂದಿಸಿ ಆಜೀವ ಕಲಿಕೆಯನ್ನು ಉತ್ತೇಜಿಸುತ್ತದೆ.

 

*****