Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಂದು ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರದ ಹೊಸ ಯೋಜನೆ, ಒಂದು ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲಸೌಕರ್ಯ ನಿಧಿ ಸೌಲಭ್ಯಕ್ಕೆ ಚಾಲನೆ ನೀಡಿದರು.

ಯೋಜನೆಯಡಿ ರೈತರು ಪಿಎಸಿಎಸ್, ಎಫ್ ಪಿಒ, ಕೃಷಿ ಉದ್ಯಮಿಗಳು ಮತ್ತಿತರರಿಗೆ ಬೆಳೆ ಕಟಾವು ನಂತರದ ಕೃಷಿ ಮೂಲಸೌಕರ್ಯ ಹಾಗೂ ಸಮುದಾಯ ಕೃಷಿ ಸ್ವತ್ತುಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲಾಗುವುದು. ಈ ಸೌಕರ್ಯಗಳಿಂದಾಗಿ ರೈತರು ತಾವು ಬೆಳೆದ ಉತ್ಪನ್ನಗಳಿಗೆ ಉತ್ತಮ ಮೌಲ್ಯವನ್ನು ಪಡೆಯಲು ಸಹಕಾರಿಯಾಗುವುದಲ್ಲದೆ ಅವರು ತಮ್ಮ ಉತ್ಪನ್ನಗಳನ್ನು ದಾಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು, ಕೃಷಿ ಉತ್ಪನ್ನ ಹಾಳಾಗುವುದನ್ನು ತಪ್ಪಿಸಬಹುದು ಮತ್ತು ಸಂಸ್ಕರಣೆ ಹೆಚ್ಚಳಕ್ಕೆ ಹಾಗೂ ಮೌಲ್ಯವರ್ಧನೆಗೆ ನೆರವಾಗಲಿದೆ.

ಸಚಿವ ಸಂಪುಟ ಅಧಿಕೃತವಾಗಿ ಯೋಜನೆಗೆ ಅನುಮೋದನೆ ನೀಡಿದ ನಂತರ 30 ದಿನಗಳೊಳಗೆ ಇಂದು ಸುಮಾರು 2,280 ರೈತ ಸೊಸೈಟಿಗಳಿಗೆ ಮೊದಲಿಗೆ 1ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಲಕ್ಷಾಂತರ ರೈತರು, ಎಫ್ ಪಿಒಗಳು, ಸಹಕಾರಿಗಳು, ಪಿಎಸಿಎಸ್ ಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು

ಇದೇ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ಪಿಎಂಕಿಸಾನ್ ಯೋಜನೆಯ 6ನೇ ಕಂತಿನ ಹಣ 17ಸಾವಿರ ಕೋಟಿ ರೂ.ಗಳನ್ನು ಸುಮಾರು 8.5 ಕೋಟಿ ರೈತರಿಗೆ ಬಿಡುಗಡೆ ಮಾಡಿದರು. ಗುಂಡಿ ಒತ್ತುವ ಮೂಲಕ ಅವರು ಆಧಾರ್ ಪರಿಶೀಲಿಸಿದ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಯನ್ನು ಮಾಡಲಾಯಿತು. ಈ ನಗದು ವರ್ಗಾವಣೆಯೊಂದಿಗೆ 2018ರ ಡಿಸೆಂಬರ್ 1 ರಿಂದ ಯೋಜನೆ ಆರಂಭವಾದ ನಂತರ ಈವರೆಗೆ ಸುಮಾರು 10 ಕೋಟಿಗೂ ಅಧಿಕ ರೈತರಿಗೆ ಸುಮಾರು 90ಸಾವಿರ ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದಂತಾಗಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಜೊತೆ ಸಂವಾದ

ಪ್ರಧಾನಮಂತ್ರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳೊಂದಿಗೆ ಹಾಗೂ ಯೋಜನೆಯ ಫಲಾನುಭವಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಪ್ರಧಾನಮಂತ್ರಿಗಳು ಸೊಸೈಟಿಗಳ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿ, ಅವರ ಪ್ರಸಕ್ತ ಕಾರ್ಯಾಚರಣೆಗಳು ಹಾಗೂ ಸಾಲವನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಕುರಿತು ಚರ್ಚಿಸಿದರು. ಸೊಸೈಟಿಗಳು ತಾವು ಗೋದಾಮುಗಳ ನಿರ್ಮಾಣಕ್ಕೆ, ಕೃಷಿ ಉತ್ಪನ್ನಗಳ ವರ್ಗೀಕರಣ ಮತ್ತು ದಾಸ್ತಾನು ಘಟಕಗಳ ನಿರ್ಮಾಣ ಹಾಗೂ ಕೃಷಿಕರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರಕಿಸಿ ಕೊಡಲು ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಪ್ರಧಾನಿ ಅವರಿಗೆ ವಿವರಿಸಿದರು.

ರಾಷ್ಟ್ರವನ್ನುದ್ದೇಶಿಸಿ ಭಾಷಣ

ಪ್ರಧಾನಮಂತ್ರಿ ಅವರು, ಪ್ರಾಥಮಿಕ ಕೃಷಿ ಸಾಲ ಸಂಘಗಳ ಜೊತೆ ಸಂವಾದ ನಡೆಸಿದ ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ, ಹೇಗೆ ರೈತರು ಮತ್ತು ಕೃಷಿ ವಲಯ ಹೇಗೆ ಯೋಜನೆಯ ಲಾಭ ಪಡೆಯುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಅವರು ಈ ಯೋಜನೆ ರೈತರಿಗೆ ಮತ್ತು ಕೃಷಿ ವಲಯಕ್ಕೆ ಆರ್ಥಿಕ ಉತ್ತೇಜನ ನೀಡುವುದಲ್ಲದೆ, ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸಲು ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದರು.

ಭಾರತದಲ್ಲಿ ಕಟಾವು ನಂತರದ ನಿರ್ವಹಣೆ ಪರಿಹಾರಗಳಲ್ಲಿ ಅಂದರೆ ಗೋದಾಮು, ಶೀಥಲೀಕರಣ ಮತ್ತು ಆಹಾರ ಸಂಸ್ಕರಣೆಯಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶವಿದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು, ಸಾವಯವ ಮತ್ತು ಸಂಸ್ಕರಿಸಿದ ಆಹಾರ ವಲಯಗಳಲ್ಲಿ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಲು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು. ಅಲ್ಲದೆ ಈ ಯೋಜನೆ ಕೃಷಿ ವಲಯದಲ್ಲಿ ನವೋದ್ಯಮಗಳ ಸ್ಥಾಪನೆಗೆ ಉತ್ತಮ ಅವಕಾಶಗಳನ್ನು ಒದಗಿಸಿದೆ ಎಂದ ಅವರು, ಲಭ್ಯವಿರುವ ಎಲ್ಲಾ ಪ್ರಯೋಜನಗಳನ್ನು ಬಳಸಿಕೊಂಡು ಕಾರ್ಯಾಚರಣೆಯನ್ನು ವಿಸ್ತರಿಸಲು ಅವಕಾಶವಿದೆ. ಆ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಇರುವ ರೈತರಿಗೆ ಪೂರಕ ವಾತಾವರಣ ಸೃಷ್ಟಿಸಬಹುದಾಗಿದೆ ಎಂದರು.

ಪಿಎಂಕಿಸಾನ್ ಯೋಜನೆ ಅನುಷ್ಠಾನದ ವೇಗದ ಬಗ್ಗೆ ಪ್ರಧಾನಮಂತ್ರಿ ಅವರು ತೃಪ್ತಿ ವ್ಯಕ್ತಪಡಿಸಿದರು. ಅಲ್ಲದೆ ಈ ಯೋಜನೆಯ ವ್ಯಾಪ್ತಿ ಅತಿ ದೊಡ್ಡದಿದೆ. ಇಂದು ಬಿಡುಗಡೆ ಮಾಡಲಾದ ಹಣ ಹಲವು ರಾಷ್ಟ್ರಗಳ ಜನಸಂಖ್ಯೆಗಿಂತ ಹೆಚ್ಚಿನ ಫಲಾನುಭವಿಗಳನ್ನು ತಲುಪಿದೆ ಎಂದು ಹೇಳಿದರು. ಈ ಯೋಜನೆಯ ಅನುಷ್ಠಾನದಲ್ಲಿ ರಾಜ್ಯಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದು ರಾಜ್ಯಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ ಅವರು, ರೈತರ ನೋಂದಣಿಯಿಂದ ಹಿಡಿದು ಅವರಿಗೆ ಹಣ ವಿತರಣೆವರೆಗೆ ರಾಜ್ಯಗಳು ಎಲ್ಲ ಹಂತದಲ್ಲೂ ಸಹಕಾರ ನೀಡುತ್ತಿವೆ ಎಂದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಉಪಸ್ಥಿತರಿದ್ದರು.

ಕೃಷಿ ಮೂಲಸೌಕರ್ಯ ನಿಧಿ

ಕೃಷಿ ಮೂಲಸೌಕರ್ಯ ನಿಧಿ ಇದು ಮಧ್ಯಮ ಹಾಗೂ ದೀರ್ಘಾವಧಿಯ ಸಾಲ ಸೌಲಭ್ಯ ನೀಡುವ ಯೋಜನೆಯಾಗಿದ್ದು, ಕೃಷಿ ಕಟಾವು ನಂತರದ ನಿರ್ವಹಣಾ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಸ್ವತ್ತುಗಳನ್ನು ಸೃಷ್ಟಿಸುವ ಯೋಜನೆಗೆ ಸಾಲ ಖಾತ್ರಿ ಹಾಗೂ ಬಡ್ಡಿ ಸಬ್ಸಿಡಿಯೊಂದಿಗೆ ನೆರವು ನೀಡಲಾಗುವುದು. ಈ ಯೋಜನೆಯ ಅವಧಿ 2020ನೇ ಹಣಕಾಸು ವರ್ಷದಿಂದ 2029ನೇ(10 ವರ್ಷ). ಹಣಕಾಸು ವರ್ಷದವರೆಗೆ ಈ ಯೋಜನೆ ಅಡಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ಖಾತ್ರಿ ಸಹಿತ ಶೇ.3ರ ಬಡ್ಡಿ ಸಬ್ಸಿಡಿಯೊಂದಿಗೆ ಸಿಜಿಟಿಎಂಎಸ್ಇ ಯೋಜನೆ ಅಡಿ 2 ಕೋಟಿ ರೂ.ಗಳ ವರೆಗೆ ಸಾಲ ಸೌಲಭ್ಯ ಒದಗಿಸಲಿವೆ. ರೈತರು, ಪಿಎಸಿಎಸ್, ಮಾರುಕಟ್ಟೆ ಸಹಕಾರ ಸಂಘಗಳು, ಎಫ್ ಪಿಒಗಳು, ಸ್ವಸಹಾಯ ಗುಂಪುಗಳು, ಜಂಟಿ ಹೊಣೆಗಾರಿಕೆ ಗುಂಪುಗಳು, ಬಹು ಉದ್ದೇಶದ ಸಹಕಾರ ಸಂಘಗಳು, ಕೃಷಿ ಉದ್ಯಮಿಗಳು, ನವೋದ್ಯಮಗಳು ಮತ್ತು ಕೇಂದ್ರ/ರಾಜ್ಯ ಸರ್ಕಾರದ ಏಜೆನ್ಸಿಗಳು ಅಥವಾ ಸ್ಥಳೀಯ ಸಂಸ್ಥೆಗಳು ಪ್ರಾಯೋಜಿತ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಗಳು ಫಲಾನುಭವಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

ಪಿಎಂಕಿಸಾನ್

ಪಿಎಂಕಿಸಾನ್ ಯೋಜನೆಯನ್ನು 2018ರ ಡಿಸೆಂಬರ್ ನಲ್ಲಿ ಕೃಷಿ ಭೂಮಿ ಹೊಂದಿರುವ ಎಲ್ಲ ರೈತರಿಗೆ ಆದಾಯ ಬೆಂಬಲದ ನಗದು ಪ್ರಯೋಜನ ಕಲ್ಪಿಸುವ(ಕೆಲವೊಂದು ಮಾನದಂಡಗಳಿಗೆ ಒಳಪಟ್ಟು) ಯೋಜನೆಯನ್ನು ಆರಂಭಿಸಲಾಯಿತು. ಇದು ಕೃಷಿ ಕುಟುಂಬಗಳಿಗೆ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಅಗತ್ಯ ಬೆಂಬಲ ದೊರಕಿಸಿ ಕೊಟ್ಟಿತು. ಈ ಯೋಜನೆ ಅಡಿ ಎಲ್ಲಾ ಅರ್ಹ ಫಲಾನುಭವಿ ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ ತಲಾ 6,000 ರೂ. ನಗದು ಪ್ರಯೋಜನ ನೀಡಲಾಗುತ್ತಿದೆ.

ಕೃಷಿ ವಲಯದಲ್ಲಿ ಹೊಸ ಅರುಣೋದಯ

ಭಾರತ ಸರ್ಕಾರ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಹಲವು ಸರಣಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇವು ಇತ್ತೀಚೆಗೆ ಕೈಗೊಂಡ ಕ್ರಮಗಳಾಗಿವೆ. ಈ ಎಲ್ಲ ಕ್ರಮಗಳು ಒಟ್ಟಾರೆ ಭಾರತದ ಕೃಷಿ ವಲಯದಲ್ಲಿ ಹೊಸ ಅರುಣೋದಯಕ್ಕೆ ಕಾರಣವಾಗಲಿದೆ ಎಂದು  ಹೇಳಲಾಗುತ್ತಿದೆ ಮತ್ತು ಇದು ಭಾರತದ ರೈತರು ಸುಸ್ಥಿರ ಜೀವನೋಪಾಯ ನಡೆಸಲು ನೆರವಾಗಲು ಹಾಗೂ ರೈತರ ಕಲ್ಯಾಣ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂಬುದನ್ನು ತೋರುತ್ತದೆ.